ಕನ್ನಡ ಸಾಹಿತ್ಯ ದಿಗ್ಧಂತಿಗಳೆಂದು ಹೆಸರು ಪಡೆದಿದ್ದ ಶ್ರೀ ಡಿ.ಎಲ್. ನರಸಿಂಹಾಚಾರ್ಯರ ಗುಣಗಾನ ಮಾಡುವಾಗ ಮಹಾಕವಿ ರತ್ನಾಕರವರ್ಣಿಯ ಒಂದು ಪದ್ಯವು ನೆನಪಿಗೆ ಬರುತ್ತದೆ:

“ಶಾಸ್ತ್ರಂ ಬಂದೊಡೆ ಶಾಂತಿ, ಸೈರಣೆ. ನಿರ್ಗನಂ, ನೀತಿ ಮೇಲ್ವಾತು, ಮು
ಕ್ತಿ ಸ್ತ್ರೀಚಿಂತೆ, ನಿಜಾತ್ಮ ಚಿಂತೆ ನಿಲವೇಳ್ಕುಂ ಅಂತಲ್ಲದೆ ಆ ಶಾಸ್ತ್ರದಿಂ
ದುಸ್ತ್ರೀಚಿಂತನೆ, ದುರ್ಮುಖಂ, ಕಲಹಂ ಉದ್ಗರ್ವಂ ಮನಂಗೊಂಡೊಡೆ
ಆ ಶಾಸ್ತ್ರಂ ಶಸ್ತ್ರಮೆ, ಶಾಸ್ತ್ರಿ ಶಸ್ತ್ರಿಕನಲಾ ರತ್ನಾಕರಧೀಶ್ವರಾ”

ಈ ಪದ್ಯದಲ್ಲಿ ವಿದ್ಯಾವಂತರಿಗಿರಬೇಕಾದ ಉದಾತ್ತ ಗುಣಗಳನ್ನು ಕವಿಯು ನಿರೂಪಿಸಿರುತ್ತಾನೆ. ಈ ಗುಣಗಳು ಶ್ರೀಮಾನ್ ನರಸಿಂಹಾಚಾರ್ಯರವರಲ್ಲಿ ನೆಲಸಿದ್ದವು. ಅವರ ಮುಖದಲ್ಲಿ ಶಾಂತಿಯು ತುಂಬಿತುಳುಕುತ್ತಿತ್ತು. ಅವರು ಎಂತಹ ವಿಷಮ ಸನ್ನಿವೇಶದಲ್ಲಿಯೂ ಸೈರಣೆಯನ್ನು ಕಳೆದುಕೊಂಡವರಲ್ಲ. ಅವರು ಕೋಪಮಾಡಿದ ಸನ್ನಿವೇಶಗಳನ್ನು ಅವರ ಒಡನಾಡಿಯಾಗಿದ್ದ ನಾನು ಯಾವಾಗಲೂ ಕಂಡವನಲ್ಲ. ಅವರ ಮುಖವು ಸದಾ ಪ್ರಸನ್ನವಾಗಿರುತ್ತಿತ್ತು. ನಗುಮುಖದ ಗೆಳೆಯರೆಂದು ನಾನು ಅವರನ್ನು ಸಂಬೋಧಿಸುತ್ತಿದ್ದೆ. ನನ್ನನ್ನು ಕಂಡಾಗ ಅವರು “ಧರಣೇಂದ್ರಯ್ಯ, ನಿನ್ನನ್ನು ನೋಡಿದರೆ ಸಂತೋಷವಾಗುತ್ತದೆ” ಎಂದು ಹೇಳಿ ನಗುವಿನ ಹೊನಲಲ್ಲಿ ತೇಲುತ್ತಿದ್ದರು. ಅಂತಹ ಗೆಳೆಯರನ್ನು ಪಡೆಯುವುದು ದುರ್ಲಭ. ಅಷ್ಟು ದೊಡ್ಡ ವಿದ್ವಾಂಸರಾಗಿದ್ದರೂ ಅವರು ಅಹಂಕಾರಿಗಳಾಗಿರಲಿಲ್ಲ. ಪ್ರಾಕೃತ, ಸಂಸ್ಕೃತ, ಕನ್ನಡ, ತೆಲಗು, ತಮಿಳು, ಇಂಗ್ಲಿಷು ಈ ಭಾಷೆಗಳಲ್ಲಿ ಉದ್ಧಾಮ ಪಂಡಿತರಾಗಿದ್ದರು. ಒಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಎ.ಎನ್. ಉಪಾಧ್ಯೆ ಅವರು ಪ್ರಾಕೃತದಲ್ಲಿ “ಜೈನ ಸಾಹಿತ್ಯ” ಎಂಬ ವಿಚಾರವನ್ನು ಕುರಿತು ಮಾತನಾಡಿದರು. ಡಾ. ನರಸಿಂಹಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಅರ್ಧಮಾಗಧಿ ಭಾಷೆಯ ಪ್ರಾಧ್ಯಾಪಕರಾದ ಡಾ. ಉಪಾಧ್ಯೆಯವರು ತಮ್ಮ ಅದ್ಭುತವಾದ ಶೈಲಿಯಲ್ಲಿ ವಿಷಯ ನಿರೂಪಣೆಮಾಡಿ ಹೇಳಬೇಕಾದುದನ್ನೆಲ್ಲಾ ಹೇಳಿ ಮುಗಿಸಿದರು. ನಾನು, ಅಧ್ಯಕ್ಷರು ಹೇಳಬೇಕಾದುದು ಇನ್ನೇನಿದೆ ಎಂದು ಯೋಚನೆ ಮಾಡುತ್ತಿದ್ದಾಗ ಡಾ. ನರಸಿಂಹಾಚಾರ್ಯರು ಅಧ್ಯಕ್ಷ ಪೀಠದಿಂದ ಒಂದು ಅಮೋಘವಾದ ಭಾಷಣವನ್ನು ಮಾಡಿದರು. ಶ್ರೋತೃಗಳು ಮಂತ್ರ ಮುಗ್ಧರಾಗಿ ಕೇಳಿ ಬೆಕ್ಕಸಬೆರಗಾದರು. ನಾನಂತೂ ಆ ಭಾಷಣವನ್ನು ಕೇಳಿ ಹಿಗ್ಗಿ ಆನಂದತುಂದಿಲನಾದೆನು. ಡಾ. ನರಸಿಂಹಾಚಾರ್ಯರ ಅಗಾಧ ಪಾಂಡಿತ್ಯದ ಆಳನೀಳವನ್ನು ಅವರು ಮಾಡುತ್ತಿದ್ದ ಭಾಷಣಗಳಿಂದಲೂ ಅವರು ಬರೆದಿರುವ ಗ್ರಂಥಗಳಿಂದಲೂ ಅವರಿಂದ ಸಂಪಾದೀತವಾದ ಪ್ರಾಚೀನ ಕಾವ್ಯಗಳಿಗೆ ಅವರು ಬರೆದಿರುವ ವಿದ್ವತ್ಪೂರ್ಣವಾದ ಉಪೋದ್ಘಾತಗಳಿಂದಲೂ ಕಾಣಬಹುದು. ಅವರ ಸಂಪಾದಕತ್ವದಲ್ಲಿ ಹೊರಬಂದಿರುವ ಪಂಪ ರಾಮಾಯಣ ಸಂಗ್ರಹಕ್ಕೆ ಅವರು ಬರೆದಿರುವ ಪೀಠಿಕೆ ಒಂದೇ ಸಾಕು. ಅವರ ಪಾಂಡಿತ್ಯ ಪ್ರದರ್ಶನಕ್ಕೆ ಅವರ ಅಪೂರ್ವ ಗ್ರಂಥ “ಗ್ರಂಥ ಸಂವಾದನೆ” ಕನ್ನಡ ಸಾರಸ್ವತ ಲೋಕಕ್ಕೆ ಹೊಸ ಬೆಳಕನ್ನು ಬೀರಿದೆ.

ಕನ್ನಡ-ಕನ್ನಡ ನಿಘಂಟಿನ ಸಂಪಾದಕ ಮಂಡಲಿಯ ಅಧ್ಯಕ್ಷರಾಗಿ ಅವರು ನಡೆಸುತ್ತಿದ್ದ ಕಾರ್ಯಕಲಾಪಗಳು ಅನಿರ್ವಚನೀಯವಾದ ಅವರ ಪ್ರತಿಭೆ ಮತ್ತು ಪಾಂಡಿತ್ಯಗಳನ್ನು ಹೊರಸೂಸುತ್ತಿದ್ದವು. ಅವರನ್ನು ನಾವು-ಮಂಡಲಿಯ ಸದಸ್ಯರು “ಶಬ್ದಬ್ರಹ್ಮ”ರೆಂದು ಕರೆಯುತ್ತಿದ್ದೆವು. ಅವರ ಗ್ರಂಥಾವಲೋಕನ ಕನ್ನಡದಲ್ಲಿ ಅಚ್ಚಾಗಿರುವ ಮತ್ತು ಓಲೆಗರಿಯಲ್ಲಿ ಬರೆದಿರುವ ಅಲ್ಲದೆ ಕೈಬರಹದಲ್ಲಿರುವ ಎಲ್ಲ ಗ್ರಂಥಗಳ ಆಳವಾದ ಅಧ್ಯಯನ ಇವುಗಳನ್ನು ನೋಡಿದವರಿಗೆ ಅವರ ಅದ್ಭುತವಾದ ಸ್ಮರಣಶಕ್ತಿಯು ಆಶ್ಚರ್ಯವನ್ನು ಉಂಟುಮಾಡುತ್ತಿತ್ತು. ದಿವಂಗತ ಆಚಾರ್ಯ ಬಿ.ಎಂ.ಶ್ರೀಕಂಠಯ್ಯನವರನ್ನು ಬಿಟ್ಟರೆ ಡಾ. ಡಿ.ಎಲ್.ಎನ್. ಅವರೇ ಸಾಹಿತ್ಯಕ್ಷೇತ್ರದಲ್ಲಿ ಅನ್ಯಾದೃಶವಾದ ಕೃಷಿ ಮಾಡಿದ್ದವರೆನ್ನಬಹುದು. ಕನ್ನಡ ವ್ಯಾಕರಣಗಳೆಲ್ಲವೂ ಅವರಿಗೆ ಕರತಲಾಮಲಕವಾಗಿದ್ದವು. ಛಂದಸ್ಸು ಮತ್ತು ಅಲಂಕಾರಗಳು ಅವರ ಬೆರಳುಗಳ ತುದಿಯಲ್ಲಿ ನರ್ತಿಸುತ್ತಿದ್ದವು. ಶಾರದಾ ದೇವಿಯ ವರಪುತ್ರರಾಗಿದ್ದ ಅವರಿಗೆ ಅಹಂಕಾರ-ಮಮಕಾರಗಳ ಸುಳಿವಿರಲಿಲ್ಲ.

ಅವರ ನೈತಿಕ ಜೀವನವು ಆದರ್ಶನೀಯವಾಗಿದ್ದಿತು. ಯಾವಾಗಲೂ ಸಾಹಿತ್ಯೋಪಾಸನೆ, ತತ್ವೋಪಾಸನೆ, ದೇವೋಪಾಸನೆಯಲ್ಲಿ ಮಗ್ನರಾಗಿದ್ದ ಅವರಿಗೆ ಮನಸ್ಸು ಅಲೌಕಿಕ ಆನಂದದಿಂದ ತುಂಬಿದ್ದಿತು. ನನಗೂ, ಅವರಿಗೂ ಇದ್ದ ಸುಮಾರು ನಲವತ್ತು ವರ್ಷಗಳ ಸ್ನೇಹ ಜೀವನದಲ್ಲಿ ಅವರು ಕೋಪಮಾಡಿದ ಸನ್ನಿವೇಶವೇ ನಾನು ಕಾಣೆನು. ಅವರ ಮಾತು ಮೃದುವಾಗಿದ್ದಿತು, ಕಠಿಣ ವಚನಗಳನ್ನು ಅವರು ನುಡಿಯಲೇ ಇಲ್ಲ. ಅವರ ಸಂಶೋಧನೆ, ವಿಮರ್ಶೆ ಈ ಕಾರ್ಯಗಳು ಅವ್ಯಾಹತವಾಗಿ ನರರ್ಗಳವಾಗಿ ನಡದೇ ಇದ್ದವು. ಅವರು ಪರಮಾರ್ಥಕೋವಿದರು. ಪಂಪನ, ನಾಗಚಂದ್ರನ ರತ್ನಾಕರವರ್ಣಿಯ, ಕುಮಾರವ್ಯಾಸನ, ಬಸವಣ್ಣನ, ಮಹಾದೇವಿಯಕ್ಕನ ಭಕ್ತಿಗೀತೆಗಳನ್ನು ಓದಿ ಓದಿ ಸಂತೋಷಪಡುತ್ತಿದ್ದರು. ಅವರ ಭಗವದ್ ಭಕ್ತಿಯು ಲೋಕೋತ್ತರವಾಗಿದ್ದಿತು. ಅವರು ಮಾಡಿದ ಭಾಷಣಗಳಲ್ಲಿ ಅಡಂಬರವಿರಲಿಲ್ಲ. ಪಾಂಡಿತ್ಯ ಪ್ರದರ್ಶನವಿರಲಿಲ್ಲ. ಸಹಜವಾಗಿ ಸರಳವಾಗಿ ಮಾತುಗಳು ಹೊರಡುತ್ತಿದ್ದವು. ಅವರು ಹಾಸ್ಯಪ್ರಿಯರು. ಯಾವುದೋ ಸಂದರ್ಭದಲ್ಲಿ ಅವರು ಭಾಷಣ ಮಾಡಿದಾಗ ನಶ್ಯಹಾಕುವ ಚಟವನ್ನು ಡಾ. ಕೆ.ವಿ. ಪುಟ್ಟಪ್ಪನವರು ಅವರಿಗೆ ಕಲಿಸಿದರೋ ಅಥವಾ ಕುವೆಂಪು ಅವರಿಗೆ ಅವರೇ ಕಲಿಸಿದರೋ ನೆನಪಿಲ್ಲವೆಂದು ಹೇಳಿದಾಗ ಸಭಿಕರು ಗೊಳ್ಳೆಂದು ನಕ್ಕರು. ಅವರು ಪ್ರೊಫೆಸರ್ ಅವರಿಂದ ನಶ್ಯವನ್ನು ಪಡೆದ ಸಂಗತಿಯು ಆಹ್ಲಾದಕರವಾಗಿದ್ದಿತು.

ಹೀಗೆ ಕನ್ನಡ ಸಾರಸ್ವತ ಲೋಕದ ಧ್ರುವನಕ್ಷತ್ರದಂತೆ ಪ್ರಜ್ವಲಿಸುತ್ತಿದ ಡಾ. ಡಿ.ಎಲ್.ಎನ್. ಅವರು ಪ್ರಶಸ್ತಿಗಾಗಲಿ, ಬಿರುದು ಬಾವಲಿಗಳಿಗಾಗಲಿ ಯಾರನ್ನೂ ಯಾಚಿಸಿದವರಲ್ಲ, ಧನವನ್ನು ಬೇಡಿದವರಲ್ಲ. “ಸರಸತಿಯನ್, ಅಬಲೆಯನ್, ಗೋಣ್‌ಮುರಿಗೊಂಡು, ಅರ್ಥಕ್ಕೆ ಕುದಿದು ನೋಯಿಸಿದವರಲ್ಲ. ತಾವು ಎಷ್ಟು ದೊಡ್ಡ ವಿದ್ವಾಂಸರಾದರೂ ‘ಸುಕವೀ ಯಶೋನಿರ್ ಮತ್ಸರನ್’ – ಎಂಬ ಆದಿಪಂಪನ ವಾಣಿಗೆ ಉದಾಹರಣೆಯಾಗಿದ್ದರು. ಅವರು ಲಘು ಸಾಹಿತ್ಯವನ್ನು ಓದಿದವರು ಅಲ್ಲ, ಬರೆದವರು ಅಲ್ಲ. ಕನ್ನಡ ಲೋಕದಲ್ಲಿ ಹೊರಬರುತ್ತಿದ್ದ ಗ್ರಂಥಗಳ ರಾಶಿಯನ್ನು ಅವಲೋಕಿಸಿ, ಸರಿಯಾಗಿ ಬೆಲೆಕಟ್ಟುವ ಜಾಣ್ಮೆ ಅವರಿಗಿದ್ದಿತು. ಜೈನ, ವೀರಶೈವ, ಬ್ರಾಹ್ಮಣ ಧರ್ಮಗಳಲ್ಲಿ ಕಂಡುಬರುವ ಪಾರಿಭಾಷಿಕ ಶಬ್ದಗಳ ಅರ್ಥವನ್ನು ಮನದಟ್ಟು ಮಾಡಿಕೊಂಡು ಕನ್ನಡ ನಿಘಂಟಿಗೆ ಸೂಕ್ತವಾದ ಅರ್ಥಗಳನ್ನು ಕೊಡುತ್ತಿದ್ದರು. ಪ್ರತಿಶಬ್ದಗಳಿಗೆ ಬೇಕಾದ ಪ್ರಯೋಗಗಳು ಅವರ ಬಾಯಿಂದ ತಡೆಬಡೆಯಿಲ್ಲದೆ ಹೊರಹೊಮ್ಮುತ್ತಿದ್ದವು. ಅವರನ್ನು “ಕನ್ನಡಸಾಹಿತ್ಯ ಸರ್ವಜ್ಞ”ರೆಂದು ಕರೆದರೆ ಅತಿಶಯೋಕ್ತಿಯಾಗಲಾರದು. ಕನ್ನಡದಲ್ಲಿರುವ ಶಾಸನಗಳು ಅವರ ಮನೋಮಂದಿರದಲ್ಲಿ ಶಿಲಾ ಶಾಶ್ವತವಾಗಿ ನಿಂತಿದ್ದವು. “Epigraphia Carnataka” ಗ್ರಂಥದ ಎಲ್ಲ ಸಂಪುಟಗಳೂ ಅವರ ಅಧ್ಯಯನಕ್ಕೆ ಒಳಪಟ್ಟಿದ್ದವು. ಒಂದು ಜೀವಮಾನ ಕಾಲದಲ್ಲಿ ಇಷ್ಟೊಂದು ಜ್ಞಾನವನ್ನು ಪಡೆಯುವುದು ದುಸ್ಸಾಧ್ಯವಾದ ವಿಷಯ. ದಿವಾರಾತ್ರಿ ಈ ಅಧ್ಯಯನ ಕಾರ್ಯದಲ್ಲಿಯೇ ಮಗ್ನರಾಗಿದ್ದ ಡಾ. ಡಿ.ಎಲ್.ಎನ್. ಅವರನ್ನು ಜ್ಞಾನಭಂಡಾರಿಗಳೆಂದೂ, ರಸಋಷಿಗಳೆಂದೂ ಕರೆಯುವುದು ಉಚಿತವಾಗಿದೆ. “ಅಧ್ಯಯನಂ ಪರಮಂ ತಪಂ” ಎಂಬ ಋಷಿವಾಣಿಗೆ ಸರಿಯಾಗಿ ಅವರು ಗೃಹಸ್ಥರಾಗಿದ್ದರೂ ತಪಸ್ವಗಳಾಗಿದ್ದರು. ಅವರ ದೀರ್ಘವಾದ ತಪಸ್ಸಿನ ಫಲವೋ ಎಂಬಂತೆ ಅವರ ಲೇಖನಗಳೂ, ಭಾಷಣಗಳೂ ಒಂದು ಸಾವಿರದ ಒಂದುನೂರು ಪುಟಗಳ ಮಹಾಗ್ರಂಥ ರೂಪದಲ್ಲಿ ಹೊರಬರುತ್ತಿರುವುದು ಕನ್ನಡಿಗರ ಭಾಗ್ಯವಾಗಿದೆ. ಆ ಮೇರು ಕೃತಿಯು ಡಾ. ಡಿ.ಎಲ್.ಎನ್. ಅವರ ಅಮರವಾಣಿಯ ಅಮೃತ ಸ್ವರೂಪವಾಗಿ ಅದನ್ನೋದುವ ಕನ್ನಡಿಗರನ್ನು ಅಮರರನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ. ಡಾ. ಡಿ.ಎಲ್.ಎನ್. ಅವರು ಜೀವನ್‌ ಮುಕ್ತರಾಗಿದ್ದರು ಎಂದರೆ ಉತ್ಪೇಕ್ಷೆಯಲ್ಲ. ದೇವಲೋಕದಲ್ಲಿ ಅಮರರಾಗಿರುವ ಕನ್ನಡ ಸಾಹಿತ್ಯ ನಿಧಿ ಯಾವಾಗಲೂ ಕನ್ನಡಿಗರನ್ನು ಆಶೀರ್ವದಿಸಲಿ.

ಸಿರಿಗನ್ನಡಂ ಗೆಲ್ಗೆ, ಹಿರಿಗನ್ನಡಂ ಗೆಲ್ಗೆ, ಕನ್ನಡದ ತಾಯ್ ಗೆಲ್ಗೆ, ಬಾಳ್ಗೆ.

* ಕನ್ನಡನುಡಿ (ಸಂ. ೩೪, ೧೫, ೧೬) ಪು. ೪೦