೧೯೩೬-೩೭ರಲ್ಲಿ ಮೈಸೂರಿಗೆ ಉಚ್ಚ ವಿದ್ಯಾಭ್ಯಾಸಕ್ಕಾಗಿ ನಾನು ಪ್ರವೇಶಿಸಿದೆ. ೧೯೪೨ರವರೆಗೆ ಮಹಾರಾಜರ ಕಾಲೇಜಿನ ಮತ್ತು ಕರ್ನಾಟಕ ಸಂಘದ ಆವರಣ ನನಗೆ ಆಶ್ರವನ್ನಿತ್ತಿತ್ತು. ಇಂಟರ್ ಮಿಡಿಯಟ್ ವರ್ಗದಿಂದ ಬಿ.ಎ. ‌ಆನರ್ಸ್ ವರ್ಗದವರೆಗೆ ಶ್ರೀ ಡಿ.ಎಲ್. ನರಸಿಂಹಾಚಾರ್ಯ, ಶ್ರೀ ಟಿ.ಎನ್. ಶ್ರೀಕಂಠಯ್ಯ ಮತ್ತು ಡಾ. ಕೆ.ವಿ. ಪುಟ್ಟಪ್ಪ ಮುಂತಾದ ಮಹಾಚಾರ್ಯರ ನಮ್ರ ಶಿಷ್ಯತ್ವ ನನಗೆ ದೊರಕಿತು.

ಮಹಾರಾಜರ ಕಾಲೇಜಿನ ಮಂಗಳದಂಗಳವೆಂದರೆ ಕರ್ನಾಟಕ ಸಂಘ; ಅದೇ ಅಂದು ಆ ವಿದ್ಯಾಪೀಠದ ಹೃದಯಾಕಾಶವೆನಿಸಿತ್ತೆಂದರೆ ಅತಿಶಯೋಕ್ತಿಯಾಗಲಾರದು. ಆ ಆಕಾಶದ ಸೂರ್ಯ ಚಂದ್ರರೆಂದರೆ, ಸದಾ ಅದರ ಚಟುವಟಿಕೆಗಳಲ್ಲಿ ಅನಲಸರಾಗಿ ಬೆಳಕು ಬೀರುತ್ತಿದ್ದ ಶ್ರೀ ಡಿ.ಎಲ್. ನರಸಿಂಹಾಚಾರ್ಯ ಮತ್ತು ಶ್ರೀ ಟಿ.ಎನ್. ಶ್ರೀಕಂಠಯ್ಯ! ಎಲ್ಲ ಕನ್ನಡ ಕಾರ್ಯಕ್ರಮಗಳಿಗೂ ಸ್ಫೂರ್ತಿದಾಯಕರಾಗಿ ಹಿರಿಯರಾದ ದಿ.ವೆಂಕಣ್ಣಯ್ಯನವರೂ ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳೂ ಅಲ್ಲಿ ಹಿಂದೆ ನಿಂತಿದ್ದುದೂ ಉಲ್ಲೇಖನೀಯ. ಈ ಗುರುಸ್ತೋಮದ ಗುಣಬಲದಿಂದ ಸಂಸ್ಕೃತ ಆಂಗ್ಲ ಉರ್ದು ಇತಿಹಾಸ ಮುಂತಾದ ಇತರ ವಿಷಯಗಳ ಪ್ರಾಚಾರ್ಯರೂ ವಿದ್ಯಾರ್ಥಿಗಳ ಕನ್ನಡ ಚಟುವಟಿಕೆಗಳಲ್ಲಿ ಭಿನ್ನ ಭಿನ್ನ ಸ್ಫೂರ್ತಿಕೇಂದ್ರಗಳಾಗಿ ನಿಲ್ಲುವಂತಾಗಿತ್ತು. ಕನ್ನಡದ ಚಟುವಟಿಕೆಯೆಂದರಂದು ಅದೊಂದು ಕೌಮುದೀ ಮಹೋತ್ಸವ!

ಪೂಜ್ಯ ಶ್ರೀ ಸಿ.ಆರ್. ನರಸಿಂಹಶಾಸ್ತ್ರಿಗಳಂದು ಸಂಸ್ಕೃತ ಪ್ರಾಚಾರ್ಯರಾಗಿದ್ದರು. ಅವರೂ ನರಸಿಂಹ, ಪೂಜ್ಯ ಡಿ.ಎಲ್.ಎನ್. ಅವರೂ ನರಸಿಂಹ, ಅವರಿವರ ವ್ಯಕ್ತಿತ್ವಗಳು ಭಿನ್ನ; ಆದರೆ ಕೆಲವೊಂದು ನರಸಿಂಹ ಲಕ್ಷಣಗಳು ಈ ಇಬ್ಬರಿಗೂ ಈ ಇಬ್ಬರಿಗೂ ಸಾಧಾರಣವಾಗಿದ್ದವು; Oh. Ex actitude, thy other name is Narasimha – ಸಮದೃಷ್ಟಿಯೇ ನಿನ್ನ ಇನ್ನೊಂದು ಹೆಸರು ನರಸಿಂಹ ಎಂದು ಎನ್ನುವಂತಿತ್ತು! ‘ಔಚಿತ್ಯೆಕ-ನಿಕೇತನ; ಕವಿಃ’ ಎಂಬ ಮಾತಿನಂತೆ, ‘ಇಷ್ಟಕ್ಕೆ ಇಷ್ಟೇ ಹದ, ತಕ್ಕದ್ದು’ ಎಂಬ ಭಾವಪು ಅವರ ಮಾತು ಹಾಗೂ ಕೃತಿಗಳಲ್ಲಿ ಎಲ್ಲೆಲ್ಲೂ ಕಂಡುಬರುತ್ತಿತ್ತು.

‘ಶ್ರೀ ರಾಮಕೃಷ್ಣ ಪರಮಹಂಸರು’ ಎಂಬ ಗ್ರಂಥವನ್ನು ಕಲಿಸುವಾಗ ಕನ್ನಡ ನರಸಿಂಹರು ಶೈಲಿಶುಚಿತ್ವದ ದೃಷ್ಟಿಯಿಂದ ಅದರಲ್ಲಿಯ ಪದ ಪ್ರಯೋಗಗಳನ್ನು ನಡುನಡುವೆ ಎತ್ತಿತೋರಿಸುತ್ತಿದ್ದ ದೃಶ್ಯವು ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅವರೇ ಒಮ್ಮೆ ಒಂದು ಭಾಷಣದ ಆರಂಭದಲ್ಲಿ ಹೇಳಿದಂತೆ ಗಳಿಗಳಿಗೆ ಸಭಿಕರು ನಕ್ಕು ಚಪ್ಪಾಳೆ ತಟ್ಟುವಂಥ ಹಾಸ್ಯೋಕ್ತಿಗಳನ್ನಾಡಲು ಅವರಿಗೆ ಬಾರದು. ಆದರೆ ಅವರು ಮಾತಿಗೆ ನಿಂತರೆ ಆದ್ಯಂತವಾಗಿ ಅವರ ಮುಖದಲ್ಲಿ ಮುಗುಳ್ನಗೆ ಮುದ್ರಿತವಾಗಿಯೇ ಇರುವುದು ಸರ್ವವೇದ್ಯ. ವಿದ್ವತ್ತೆಯಲ್ಲಿ ಅವರ ನ್ಯಾಯಾಧೀಶ ಶೈಲಿಯ ವಿಮರ್ಶಕ ಮುಖ ಎದ್ದುಕಾಣುವುದು ಅವರ ಕೃತಿಗಳನ್ನು ಅವಲೋಕಿಸಿದವರಿಗೆ ಶಿಷ್ಯೋಪದೇಶ ಸಂದರ್ಭಗಳೆಲ್ಲವುಗಳಲ್ಲೂ ಅದೇ ಮೇಘನಾದ, ದುಂದುಭಿ ಗಂಭೀರನಿನದ ಮಾತಿಗೆ ಮೇಳವಾಗಿ ಹೊರಹೊಮ್ಮುತ್ತಿತ್ತು. ಗ್ರಂಥದ ಗುಣ-ದೋಷಗಳನ್ನು ಚಿಮಟೆಯಿಂದ ಹೆಕ್ಕಿ ತೆಗೆಯುವಂತೆ ಎತ್ತಿ ಓದುಗರ ಮುಂದಿಟ್ಟು, ಅಷ್ಟಕ್ಕೇ ಆ ಕಾವ್ಯವನ್ನು ಮುಗಿಸಿ, ಮುಂದೆ ಪಾಠ ಹೇಳುತ್ತ ಹೋಗುವ ವಸ್ತುನಿಷ್ಠ ಮಾರ್ಗ (Objective Style)ವನ್ನು ನರಸಿಂಹಾಚಾರ್ಯರಿಂದ ಕಲಿತುಕೊಳ್ಳುವಂತಿತ್ತು. ಆ ಹಿತಮಿತವೂ ಪ್ರತ್ಯಗಾತ್ಮ ಭಾವ ಸೂಚಕವೂ ಆದ ಬೋಧನಕ್ರಮ ಅವರದೇ ಆಗಿ ತೋರುತ್ತಿತ್ತು. ಬಿ.ಎ. ವರ್ಗದಲ್ಲಿ ಅವರು ‘ದುರ್ಗೇಶನಂದಿನಿ’ಯನ್ನು ಕಲಿಸುವಾಗ ಕಾದಂಬರಿ ಪ್ರಪಂಚದ ವಿಶ್ವರೂಪ ದರ್ಶನವನ್ನೇ ಮಾಡಿಸುವಷ್ಟು ಪಾಶ್ಚಾತ್ಯ ಸಾಹಿತ್ಯ ವಿಮರ್ಶಾಜ್ಞಾನದಿಂದ ತರಗತಿಯನ್ನು ತುಂಬಿಬಿಡುತ್ತಿದ್ದರು. ಗ್ರಂಥಕರ್ತನ ಕಲಾವಂತಿಕೆಯ ವಿವೇಚನೆಯಲ್ಲಿ ಅವರು ಅಷ್ಟು ವಿಸ್ತಾರವೂ ಆಳವೂ ಆದ ರಸಮಾನಸಶಾಸ್ತ್ರಜ್ಞಾನದ ಅಂತರ್ವಾಹಿನಿಯನ್ನು ಹರಿಯಿಸುತ್ತಿದ್ದರೂ ಅಲ್ಲಿ ಶುಷ್ಕ ಪಾಂಡಿತ್ಯದ ಒಣಗಡುಬನ್ನು ವಿದ್ಯಾರ್ಥಿಗಳ ನೀರಿಳಿಯದ ಗಂಟಲಲ್ಲಿ ತುರುಕುವ ಪ್ರಯತ್ನವು ಎಳ್ಳಷ್ಟೂ ಇರಲಿಲ್ಲ. ಆಗಲೂ ಅವರು ಮಾತುಗಳು ಪ್ರಸನ್ನ, ಋಜು, ಗಂಭೀರ ಗತಿಯಲ್ಲೇ ಸಾಗುತ್ತಿದ್ದವು. ಅಂಥ ಶೈಕ್ಷಣಿಕ ವ್ಯಕ್ತಿತ್ವದಲ್ಲಿ ಪಾಂಡಿತ್ಯ-ಕವಿತ್ವ ಶಕ್ತಿಗಳೆರಡನ್ನೂ ಕೂಡಿಸಿ ಎರಕ ಹೊಯ್ದು ಮಾಡಿದ ಹೊಸ ಪಾಕದ ಅಚ್ಚೊಂದನ್ನು ಕಾಣಬಹುದಾಗಿತ್ತು, ಲೋಕಭಾವ-ಶಾಸ್ತ್ರ ನಿಷ್ಠುರತೆಗಳ ಸಮನ್ವಯದಲ್ಲಿ ಮೂಡುತ್ತಿತ್ತು. ಅವರು ‘ಕವಿ’ಗಳೆಂದು ಪ್ರಸಿದ್ಧರಾಗಿಲ್ಲ ಆ ಶಕ್ತಿಯು ಅವರ ಸಾಹಿತ್ಯಕವಾದ ಶೈಲಿಯ ತಿಳಿತನ, ಅಚ್ಚುಕಟ್ಟುತನ ಮತ್ತು ಮನಂಬುಗುವ ಮಾರ್ಮಿಕ ಧ್ವನಿಗಳಲ್ಲಿ ಪ್ರಕಟವಾಗಿದೆ. ಕವಿಪಂಡಿತರಿಗೂ ಪಂಡಿತಕವಿಗಳಿಗೂ ಇರುವ ಭೇದವನ್ನಿಲ್ಲಿ ಚೆನ್ನಾಗಿ ಮನಗಾಣಬಹುದು.

ಇತಿಹಾಸ, ಪ್ರಾಚ್ಯವಸ್ತುಶೋಧ, ಕಲೆ, ನಾಗರಿಕತೆ ಮುಂತಾದ ಇತರ ವಿಷಯಗಳ ಜ್ಞಾನಭಾರವೂ ಕೂಡಿದ್ದರಿಂದ ಪ್ರಾಚಾರ್ಯರ ಭೌತಿಕ ವ್ಯಕ್ತಿತ್ವವು ಸ್ವಲ್ಪ ಬಾಗಿ ನಡೆಯುವ ಅಭ್ಯಾಸವುಳ್ಳದ್ದಾಗಿದೆ. ಆದರೆ ನಿಜವಾಗಿಯೂ ಪ್ರಾಜ್ಞನಾದವನ ಮಾತು ಯಾವಾಗಲೂ ಸರಳ ಎಂಬಂತೆ ಅವರ ಹೃದಯವು ಅತ್ಯಂತ ಸರಳವಾದುದು. ಕ್ರೋಧ ಶೋಕಗಳು ವ್ಯಕ್ತಿತ್ವದ ದೌರ್ಬಲ್ಯವನ್ನು ಎಷ್ಟೋ ವೇಳೆ ಸೂಚಿಸುವುವಲ್ಲವೆ? ಅಂಥ ದೌರ್ಬಲ್ಯ ಸೂಚಕ ಭಾವಗಳು ಅವರ ಹತ್ತಿರ ಸುಳಿಯಲಾರವು. ಅವರಿಗೆ ಕ್ರೋಧವಿದ್ದರೆ ಅದು ಕಾರ್ಯ ಬಲಸಂಪನ್ನವಾದುದೂ ದುಷ್ಟಶಕ್ತಿ ನಿಗ್ರಹಪರವೂ ಆಗಿದೆ. ಈ ಧುರಂಧರತೆಯಲ್ಲಿ ಅವರೊಂದು ಸಿಂಹ ಸತ್ಯಸಂಸ್ಥಾಪನೆಯಲ್ಲಿ ಪ್ರತಿವಾದಿ ಭಯಂಕರ.

ನರಸಿಂಹಾಚಾರ್ಯರದೊಂದು ವಿಚಾರಪರ ಜೀವನ. ವಿವೇಚನಾಶೀಲನ ಸಂಯಮವೇ ಅವರ ವ್ಯಕ್ತಿತ್ವದ ರಸಸ್ಥಾನ. ಒಮ್ಮೆ ಬುದ್ಧನು ತನ್ನ ಶಿಷ್ಯರಿಗೆಂದನಂತೆ ‘When you meet, two things are fit for you, instructive conversation or holy silence’ –ನೀವು ಪರಸ್ಪರ ಭೆಟ್ಟಿಯಾದಾಗ ತಿಳುವಳಿಕೆ ಹೆಚ್ಚುವಂತಹ ಸಂಭಾಷಣೆಯಲ್ಲಿ ತೊಡಗಬೇಕು ಇಲ್ಲವೆ ಪವಿತ್ರವಾದ ಮೌನವನ್ನು ಅವಲಂಬಿಸಬೇಕು. ಪ್ರಾಚಾರ್ಯರ ವೈಯಕ್ತಿಕ ಸಂಪರ್ಕದಲ್ಲಿ ಮೇಲಿನ ಲಕ್ಷಣವೇ ನನಗೆ ಯಾವಾಗಲೂ ಕಂಡುಬಂದದ್ದು. ಕೆಲವೇಳೆ ತಿರುಗಾಡುತ್ತ ತಾಸುಗಟ್ಟಲೆ ಅವರು ಶಿಲ್ಪ-ಕಲೆ-ರಸ-ಚಿತ್ರಾದಿಗಳ ಐತಿಹಾಸಿಕ ವಿಚಾರ ವಿಕಾಸವನ್ನು ವಿವರಿಸಿದ್ದುಂಟು; ಉದಾಹರಣೆಗಳನ್ನು ಬೊಟ್ಟುಮಾಡಿ ತೋರಿಸಿದ್ದುಂಟು; ಓದಬೇಕಾದ ಅಮೂಲ್ಯ ಗ್ರಂಥಗಳನ್ನು ಸೂಚಿಸಿದ್ದುಂಟು. ನಾಗರಿಕತೆಗಳ ವಿಹಂಗಮಾವಲೋಕನ ಮಾಡಿದ ಅವರ ವಸ್ತುಕೋಶ ಸಮೃದ್ಧವಾದ ಮನವು ನಿದರ್ಶನಗಳಿಗಾಗಿ ಎಂದೂ ತಡವರಿಸಿದ್ದಿಲ್ಲ. ಯಾವುದಾದರೊಂದು ಸೂಕ್ಷ್ಮವಿವರವು ನೆನಪಾಗದಾಗ ಅದನ್ನು ನೋಡಿಯೇ ಹೇಳುತ್ತೇವೆ ಎಂಬ ದಾರಿಯನ್ನಲ್ಲದೆ ಅಂದಾಜಿನಿಂದ ಕಲ್ಲೊಗೆಯುವ ಹುಂಬು ಧೈರ್ಯದ ಮಾರ್ಗವನ್ನು ಎಂದೂ ಅವರು ಹಿಡಿದವರಲ್ಲ. ಈ ಬಗೆಯ ಚೌಕಾಸಿನ ಜ್ಞಾನಮಾರ್ಗ ಕ್ರಮೇಣವು ಅವರ ಸ್ವಭಾವವೇ ಆಗಿಬಿಟ್ಟಿದೆಯೆನ್ನಬಹುದು. ‘ತುಲಾಮೇ ಸರ್ವಭೂತೇಷು ಸಮಾತಿಷ್ಠತಿ ಚಾಜಲೇ’ –ಎಲೈ ಜಾಜಲಿಯೇ, ನನ್ನ ತಕ್ಕಡಿಯು ಎಲ್ಲರಿಗೂ ಒಂದೇ ಸಮವಾಗಿರುತ್ತದೆ ಎಂದ ತುಲಾಧಾರನ ಮನೋಧರ್ಮವು ಅವರಿಗೆ ಮೈಯುಂಡುಹೋಗಿದೆ. ಅಂಥ ತಕ್ಕಡಿಯ ನೆಟ್ಟಗೆ ನಿಂತ ಮುಳ್ಳೇನೋ ಎಂಬಂತೆ ಅವರ ಪೇಟದ ಕತ್ತರಿಯನ್ನು ಸಮವಾಗಿ ವಿಭಾಗಿಸುವಂತೆ ಹಣೆಯ ಮೇಲೆ ಒಂದೇ ಒಂದಾದ ಕೆಂಪು ನಾಮ ಎದ್ದು ಕಾಣುತ್ತದೆ!

ಜೀವನದ ಸಮಸ್ಯೆಗಳನ್ನು ನ್ಯಾಯವೀರತೆಯಿಂದ ಬಗೆಹರಿಸಿಕೊಂಡು ಹೋಗುವ ಸ್ವಾಭಿಮಾನ ಸಾಹಸಿಕತೆ ಕೌಶಲಗಳಿಗೂ ನರಸಿಂಹಾಚಾರ್ಯರಲ್ಲಿ ಕೊರತೆಯಿಲ್ಲ. ಭವಿಷ್ಯ ಜೀವನದಲ್ಲಿ ತಾನು ಹೇಗೆ ಬಾಳಬೇಕೆಂಬುದರ ಸೂಚನೆಯನ್ನು ಮುಖಮುದ್ರೆ, ವಾಕ್‌ಶೈಲಿ, ವರ್ತನೆಗಳ ಮೂಲಕ ಸತತವಾಗಿ ವಿದ್ಯಾರ್ಥಿಗೆ ಕೊಡಬಲ್ಲ ಧೀರಗಂಭೀರ-ಉದಾರ ನಿಲುಮೆಯುಳ್ಳ ಅವರ ವ್ಯಕ್ತಿತ್ವ ಶಿಷ್ಯಲೋಕಕ್ಕೆ ಚಿರಸ್ಮರಣೀಯವಾಗಿದೆ. ಶಿಷ್ಯವಾತ್ಸಲ್ಯದಲ್ಲಿ ಅವರು ಮಿತ್ರವಾತ್ಸಲ್ಯದಲ್ಲಿ ಹೇಗೋ ಹಾಗೇ ಕೆಲವೇಳೆ ವಿದ್ಯಾರ್ಥಿಗಳ ಚಿಕ್ಕಪುಟ್ಟ ನ್ಯೂನತೆಗಳನ್ನು ಮರೆಯುವವರಾದರೆ, ಮತ್ತೆ ಕೆಲವೇಳೆ ಅಂಥವನ್ನೂ ಬಿಡದೆ ನಗುನಗುತ್ತ ಎತ್ತಿಹೇಳಿ ದುರಸ್ತು ಮಾಡಿಕೊಳ್ಳುವಂತೆ ವರ್ತಿಸುವ ಆಚರಣೀಯ ಆಚಾರವು ಅವರ ಅಚಾರ್ಯತ್ವದ ಹೆಗ್ಗುರುತಾಗಿದೆ. ತಂದೆತನದ ಬಿಗುವೂ ತಾಯ್ತನದ ನಗುವೂ ಎರಕಹೊಯ್ದಂತಿರುವ ವ್ಯಕ್ತಿತ್ವವೇ ಆಚಾರ್ಯನ ಆದರ್ಶವ್ಯಕ್ತಿತ್ವವಲ್ಲವೇ

ತನ್ನ ಪಾಲಿಗೆ ಬಂದ ಕರ್ತವ್ಯವನ್ನು ಚಾಚೂ ತಪ್ಪದಂತೆ ಸಮರ್ಥವಾಗಿ ನೆರವೇರಿಸುವ ಗೀತಾಪ್ರಿಯ ನೇತೃಗಳ ಅಭಾವವು ಅತ್ಯಂತ ಗಣ್ಯವಾಗಿ ಹೆಜ್ಜೆ ಹೆಜ್ಜೆಗೂ ನವಭಾರತಕ್ಕೆ ಎದುರಾಗುತ್ತಿರುವ ಇಂದಿನ ಇತಿಹಾಸದ ಅವಧಿಯಲ್ಲಿ ನರಸಿಂಹಾಚಾರ್ಯರ ವ್ಯಕ್ತಿತ್ವದ ಪ್ರಭಾವಿ ಸಂಪರ್ಕವು ಯಾರಿಗಾದರೂ ಉನ್ನತಿಕಾರಕವಾಗದಿರದು. ‘Duty is the end and aim of the highest life – ಕರ್ತವ್ಯವೆಂಬುದು ಅತ್ಯುನ್ನತ ಜೀವನದ ಸಿದ್ಧಿ, ಗುರಿ ಎಂಬ ಮಾತು ಅವರ ನೆನಪಿನ ಜೊತೆಗೇ ಹೊರಡುವುದು. ಈ ದೃಷ್ಟಿಯಿಂದ ನೋಡಿದರೆ ಅವರು ತಿರುಗಾಡುವ ಚೊಕ್ಕಗನ್ನಡಮಾತೇ ಆಗಿ ತೋರುತ್ತಾರೆ. ಮನಸ್ಸು ಜ್ಯಾಮಿತೀಯ (Spuare-cut) ಗತಿಯನ್ನು ಹಿಡಿಯಲಾರಂಭಿಸಿದಾಗ ಮನುಷ್ಯನ ಬುದ್ಧಿಯ ಶಾಸ್ತ್ರೀಯ, ಸಾಹಿತ್ಯಕ, ಶೈಕ್ಷಣಿಕ ಮತ್ತು ವ್ಯಾವಹಾರಿಕ ಮುಂತಾದ ಯಾವ ಕ್ಷೇತ್ರದಲ್ಲಿ ಕಾಲಿಟ್ಟಾಗಲೂ ಆಯಾ ಚಟುವಟಿಕೆಗಳಲ್ಲಿ ತನ್ನ ಹರಳ (Cristal Form) ರೂಪವನ್ನು ಮುದ್ರಿಸದೆ ಇರಲಾರದು. ಅತಿಗೆ ಹೋಗದೆ, ಮಿತಿಗೆ ಕಡಿಮೆಯಾಗದೆ ತನ್ನ (ಯಥಾಶಕ್ತಿ ನ್ಯಾಯದಂತೆ) ಹದಿನಾರಕ್ಕೆ ಹದಿನಾರಣೆಯಾಗಬೇಕೆಂಬ ನೀತಿಯನ್ನದು ಅನುಸರಿಸಲು ಹಚ್ಚದೆ ಉಳಿಯಲಾರದು. ಈ ಅನ್ಯೂನ ಅನತಿರಿಕ್ತ ದೃಷ್ಟಿಯ ಕರ್ತವ್ಯೋನ್ಮುಖ ಪ್ರವೃತ್ತಿಯ ಸರಿಯಾದ ಸಂಸ್ಕೃರಣದ ಫಲ.

ನರತ್ವವಿರುವುದು ದಯಾಧರ್ಮದಲ್ಲಿ; ಸಿಂಹತ್ವವಿರುವುದು ಸ್ವಾಭಿಮಾನದಲ್ಲಿ, ಪೌರುಷದಲ್ಲಿ, ಕಾರ್ಯಧುರಂಧರತೆಯಲ್ಲಿ, ನರ ಗಟ್ಟಿಯಿಲ್ಲದ (Guts ಇಲ್ಲದ) ನರನು ನರನಲ್ಲ; ಲಾಂಗೂಲಚಾಲನವೃತ್ತಿಯಿಂದ ಉದರಭರಣ ಮಾಡಿಕೊಂಬುದು ಸಿಂಹವಲ್ಲ. ಜೊತೆಗೆ ವಿಚಾರವನ್ನು ಆಚಾರದಲ್ಲಿ ತಾರದೆ, ಕೇವಲ ಪರೋಪದೇಶಕ್ಕಾಗಿ ಅದನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ವಿದ್ವಾಂಸರೆಂದೆನಿಸಿಕೊಳ್ಳದ ಅವರ ಆಚಾರ್ಯತ್ವವೂ ಅನ್ವಯರ್ಥವಾಗಿದೆ. ಶ್ರೀ ಶಂಕರಾಚಾರ್ಯರು ‘ಅರ್ಥಮನರ್ಥಂ ಭಾವಯನಿತ್ಯಂ’ ಎಂದುದರ ಅರ್ಥವೇ ಬೇರೆ; ಆದರೆ ಅಪ್ಪ ಇಟ್ಟ ಹೆಸರಿಗೆ ಕಡುವೈರಿಯಂತೆ ನಡೆದುಕೊಳ್ಳುವ ವೀರರಲ್ಲಿ ಪದಾರ್ಥವೂ ಅನರ್ಥವಾದುದುಂಟು.

ಪ್ರಸ್ತುತ ಪ್ರಸಂಗದಲ್ಲಿ ಮಾತ್ರ ಪದಾರ್ಥವು ಸಾರ್ಥಕವಾಗಿದೆ. ಕೇವಲ ಜಡಪುಸ್ತಕಗಳ ಸಂಖ್ಯೆಯನ್ನು ಬೆಳೆಸಿದ ಸಾಹಿತಿಗಳಿಗಿಂತ ಕೆಲವೊಮ್ಮೆ ಚೈತನ್ಯಸಂಪನ್ನರಾದ ಕೆಲ ಶಿಷ್ಯರನ್ನಾದರೂ ನಿರ್ಮಿಸಿಕೊಟ್ಟು ದೇಶದ ಸಂಸ್ಕೃತಿಸಂವರ್ಧನೆಗೆ ಕಾರಣರಾದ ಮಹೋಪಾಧ್ಯಾಯರು ಹೆಚ್ಚಿನ ಸಾಹಿತಿಗಳೆನ್ನಬಹುದು. ಆದುದರಿಂದ ಜಡ-ಜೀವತ್ ಪುಸ್ತಕಗಳೆರೆಡರಲ್ಲೂ ಉತ್ತಮವಾದುದನ್ನು ರೂಪಿಸಿದ ನರಸಿಂಹಾಚಾರ್ಯರ ವ್ಯಕ್ತಿತ್ವದ ಆತ್ಮರೂಪದಲ್ಲಿರುವ ಚಾರಿತ್ರವು ಅವಿಸ್ಮರಣೀಯವಲ್ಲವೆ?

* ಜ್ಞಾನೋಪಾಸಕ, ಪು. ೬೧