ಪ್ರಾಚೀನ ಋಷಿವಾಣಿಯೊಂದು ‘ಮಾತೃದೇವೋಭವ’, ‘ಪಿತೃದೇವೋಭವ’, ‘ಆಚಾರ್ಯದೇವೋಭವ’, ‘ಅತಿಥಿ ದೇವೋಭವ’ ಎಂದು ಹೇಳಿದೆ. ಮಾನವನಿಗೆ ಮಾತಾಪಿತೃಗಳು ಜನ್ಮದಾತರಾಗಿ ಎಷ್ಟು ಪೂಜ್ಯರೋ ವಿದ್ಯಾದಾತರಾಗಿ ಆಚಾರ್ಯರೂ ಅಷ್ಟೇ ಪೂಜ್ಯರು. ಅಂತಹ ಪ್ರಾಚೀನ ಋಷಿವಾಣಿಗೆ ತಕ್ಕಂತಿದ್ದವರು ಡಾ. ಡಿ.ಎಲ್. ನರಸಿಂಹಾಚಾರ್ಯರು. ಆಚಾರ್ಯರಾಗಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಗಳಿಗೆ ಅವರು ಮಾಡಿದ ಮಹತ್ಕಾರ್ಯಗಳು ಸಾರ್ವತ್ರಿಕವಾಗಿ ಸಾರ್ವಕಾಲಿಕವಾಗಿ ನಿಲ್ಲುವಂತಹವು.

ಡಾ. ಡಿ.ಎಲ್. ನರಸಿಂಹಾಚಾರ್ಯರು ಹುಟ್ಟು ಆಚಾರ್ಯರು. ಅವರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಆಚಾರ್ಯ ಪಟ್ಟವನ್ನು ಕೈಕೊಂಡ ಮೇಲೆ ಕನ್ನಡ ಪ್ರಾಚಾರ್ಯರಾಗಿ ಸಹಸ್ರಾರು ವಿದ್ಯಾರ್ಥಿಗಳಿಗೆ ನಿಷ್ಪಕ್ಷಪಾತವಾಗಿ ವಿದ್ಯಾದಾನ ಮಾಡಿದ್ದಾರೆ. ಅವರ ಪಾಂಡಿತ್ಯಪೂರ್ಣ ಬೋಧನಕ್ಕೆ ಮಾರುಹೋದವರು ಅಸಂಖ್ಯಾತ ಮಂದಿ. ಇಡೀ ಜೀವಮಾನವನ್ನೇ ವಿದ್ಯಾದಾನಕ್ಕಾಗಿ ವಿನಿಯೋಗಿಸಿದ ಡಾ. ಡಿ.ಎಲ್. ನರಸಿಂಹಾಚಾರ್ಯರು ಕನ್ನಡಕ್ಕೆ ಆರಾಧ್ಯಮೂರ್ತಿಯಾಗಿದ್ದಾರೆ, ಆದರ್ಶ ಗುರುವಾಗಿದ್ದಾರೆ.

ದೊಡ್ಡಬೆಲೆ ನರಸಿಂಹಾಚಾರ್ಯರಿಗೆ ಕನ್ನಡ ಸಾಹಿತ್ಯದ ಪ್ರಕಟಿತ, ಅಪ್ರಕಟಿತ ಕೃತಿಗಳೆಲ್ಲಾ ಕರತಲಾಮಲಕವಾಗಿದ್ದುವು. ಯಾವುದೇ ಕಾವ್ಯವನ್ನಾಗಲಿ ಅವರು ಒಮ್ಮೆ ಓದಿದ ಮೇಲೆ ಆ ಕಾವ್ಯದ ಮುಖ್ಯಭಾಗಗಳೆಲ್ಲಾ ಅವರ ಸ್ಮೃತಿಪಟಲದಲ್ಲಿ ನೆಲಸಿಬಿಡುತ್ತಿದ್ದವು. ಹೀಗಾಗಿ ಕನ್ನಡ ಸಾಹಿತ್ಯದ ಪ್ರಾಚೀನ ಅಪ್ರಕಟಿತ ಕೃತಿಗಳ ಬಗೆಗೆ ಅಧಿಕಾರವಾಣಿಯಿಂದ ಮಾತನಾಡುವ ಅರ್ಹತೆಯನ್ನು ಸಂಪಾದಿಸಿಕೊಂಡಿದ್ದರು. ಪ್ರಾಚೀನ ಕವಿವಾಣಿಯೇ ಪಡಿಮೂಡಿದಂತಿತ್ತು. ಶ್ರೀಯುತರು ಅಧಿಕಾರವಾಣಿ. ಕಾವ್ಯಗಳನ್ನಷ್ಟೇ ಅಲ್ಲದೆ ಕರ್ಣಾಟಕಕ್ಕೆ ಸಂಬಂಧಿಸಿದ ಸಹಸ್ರಾರು ಶಾಸನಗಳನ್ನೆಲ್ಲಾ ಚೆನ್ನಾಗಿ ವ್ಯಾಸಂಗ ಮಾಡಿ ಅವುಗಳಲ್ಲಿನ ಮುಖ್ಯವಾದ ಭಾಗಗಳನ್ನೆಲ್ಲಾ ಚೆನ್ನಾಗಿ ವ್ಯಾಸಂಗ ಮಾಡಿ ಅವುಗಳಲ್ಲಿನ ಮುಖ್ಯವಾದ ಭಾಗಗಳನ್ನೆಲ್ಲಾ ಗುರುತು ಮಾಡಿಕೊಂಡಿದ್ದರು. ಶಾಸನಗಳಲ್ಲಿನ ವಿಶಿಷ್ಟ ಶಬ್ದಗಳೆಲ್ಲಾ ಅವರ ಕೋಶದಲ್ಲಿ ಸೇರಿ ಹೋಗಿದ್ದವು.

ಡಾ. ಡಿ.ಎಲ್. ನರಸಿಂಹಾಚಾರ್ಯರು ಜೈನ, ವೀರಶೈವ, ವೈಷ್ಣವ ಸಾಹಿತ್ಯಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ಅವರು ಸಂಪಾದಿಸಿದ ಪ್ರಕಟಿಸಿರುವ ಸಿದ್ಧರಾಮ ಚಾರಿತ್ರ, ಪಂಪರಾಮಾಯಣ ಸಂಗ್ರಹ, ಸುಕುಮಾರ ಚರಿತೆ, ವಡ್ಡಾರಾಧನೆ ಮೊದಲಾದ ಈ ಗ್ರಂಥಗಳಲ್ಲಿ ಬರೆದಿರುವ ವಿಸ್ತಾರವೂ ಪರಿಪೂರ್ಣವೂ ಆದ ಪೀಠಿಕೆಗಳೇ ಇದಕ್ಕೆ ಸಾಕ್ಷಿಯಾಗಿವೆ.

ಕನ್ನಡ ಸಾಹಿತ್ಯದಲ್ಲಿ ‘ಗ್ರಂಥ ಸಂಪಾದನೆ’ಯ ವಿಷಯವಾಗಿ ಯಾವೊಂದು ಗ್ರಂಥವೂ ರಚಿತವಾಗಿರಲಿಲ್ಲ. ಪ್ರಾಚೀನ ಮತ್ತು ಆಧುನಿಕ ಗ್ರಂಥಸಂಪಾದನ ವಿಧಾನವನ್ನು ಅಧಿಕೃತವಾಗಿ, ತುಂಬ ಸಮರ್ಥವಾಗಿ ಡಾ. ನರಸಿಂಹಾಚಾರ್ಯರು ತಮ್ಮ ‘ಕನ್ನಡ ಗ್ರಂಥ ಸಂಪಾದನೆ’ಯಲ್ಲಿ ವಿವರಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಈ ಗ್ರಂಥ ಒಂದು ಅಪೂರ್ವವಾದ ಕೊಡುಗೆ.

ಯಾವುದೇ ಭಾಷೆಯ ವ್ಯಾಸಂಗಕ್ಕೆ ನಿಘಂಟು ಒಂದು ಅತ್ಯವಶ್ಯಕವಾದ, ಅಪರಿಹಾರ್ಯವಾದ ಅಂಗ. ಕನ್ನಡಕ್ಕೆ ಶಾಸ್ತ್ರೀಯವಾದ ಆಧುನಿಕವಾದ ಸಮಗ್ರ ನಿಘಂಟಿನ ಕೊರತೆ ಹಿಂದಿನಿಂದಲೂ ಇದ್ದ ಅಂಶ ನರಸಿಂಹಾಚಾರ್ಯರಿಗೆ ಮನವರಿಕೆಯಾಗಿತ್ತು. ಈ ಕೊರತೆಯನ್ನು ತುಂಬುವುದಕ್ಕಾಗಿ ಶ್ರೀಯುತರು ತಮ್ಮ ಜೀವಮಾನದ ಅವಧಿಯನ್ನೆಲ್ಲಾ ಸವೆಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಚಾರಿತ್ರಿಕ ವಿವರಣೆಗಳಿಂದ ಕೂಡಿದ, ಭಾಷಾಶಾಸ್ತ್ರ ನಿಯಮಗಳಿಗನುಗುಣವಾದ, ಪ್ರಮಾಣಭೂತವಾದ, ಸಮಗ್ರ ನಿಘಂಟಿಗಾಗಿ ಸುಮಾರು ನಾಲ್ಕು ದಶಕಗಳ ಕಾಲ ಅಹರ್ನಿಶಿ ದುಡಿದ್ದಾರೆ. ಡಾ. ಡಿ.ಎಲ್. ನರಸಿಂಹಾಚಾರ್ಯರು ಸಂಸ್ಕೃತ, ಕನ್ನಡಕ, ಇಂಗ್ಲಿಷ್, ತಮಿಳು, ತೆಲುಗು, ಪ್ರಾಕೃತ ಇದೇ ಮೊದಲಾದ ಭಾಷೆಗಳಲ್ಲಿ ಪ್ರಭುತ್ವ ಸಂಪಾದಿಸಿಕೊಂಡಿದ್ದರಿಂದ ಅವರು ನಿಘಂಟಿನ ಕೆಲಸಕ್ಕೆ ಹೇಳಿಮಾಡಿಸಿದ್ದಂತಿದ್ದರು. ಶ್ರೀಯುತರಲ್ಲಿ ಅಪಾರವಾದ ಭಾಷಾಪಾಂಡಿತ್ಯ ವಿದ್ದುದರಿಂದ ಯಾವೊಂದು ಶಬ್ದದ ಅರ್ಥವನ್ನಾಗಲಿ, ನಿಷ್ಪತ್ತಿಯನ್ನಾಗಲಿ ಸುಗುಮವಾಗಿ, ಸುಲಭವಾಗಿ ಬಿಡಿಸಿ ಹೇಳುತ್ತಿದ್ದರು. ಮತ್ತೊಂದು ವೈಶಿಷ್ಟ್ಯವೆಂದರೆ ಅವರಿಗೆ ಸ್ಮರಣಶಕ್ತಿ ಅದ್ಭುತವಾಗಿತ್ತು. ಯಾವುದಾದರೂ ಒಂದು ಶಬ್ದದ ಪ್ರಯೋಗವನ್ನು ಪರಿಶೀಲಿಸುತ್ತಿದ್ದಾಗ ಆ ಶಬ್ದದ ಬೇರೆ ಬೇರೆ ಕಾವ್ಯಗಳಲ್ಲಿನ ಪ್ರಯೋಗಗಳು ಪುಂಖಾನುಪುಂಖವಾಗಿ ಅವರ ಸ್ಮರಣಶಕ್ತಿಯಿಂದ ತಮ್ಮಷ್ಟಕ್ಕೆ ತಾವೇ ಹೊರಬರುತ್ತಿದ್ದವು. ಇದರಿಂದ ಶಬ್ದಗಳ ಖಚಿತವಾದ ಅರ್ಥಗಳನ್ನು ನಿರ್ಣಯಿಸುವುದು ಅವರಿಗೆ ಸುಲಭಸಾಧ್ಯವಾಗಿತ್ತು. ಇದರ ಜೊತೆಗೆ ಹಲವಾರು ಭಾಷೆಗಳ ಪರಿಚಯವಿದ್ದುದರಿಂದ ಯಾವುದೇ ಶಬ್ದದ ನಿಷ್ಪತ್ತಿಯನ್ನಾಗಲಿ ಕಂಡುಹಿಡಿದು ಆ ಶಬ್ದದ ಸರಿಯಾದ ಅರ್ಥವನ್ನು ಗುರುತಿಸಿ ಬಿಡುತ್ತಿದ್ದರು. ಶ್ರೀಯುತರು ‘ಶಬ್ದವಿಹಾರ’ವನ್ನು ಅವಲೋಕಿಸಿದವರಿಗೆ ಈ ಮೇಲಿನ ಅಂಶಗಳು ಸ್ಪಷ್ಟಪಡುತ್ತವೆ.

ಡಾ. ಡಿ.ಎಲ್. ನರಸಿಂಹಾಚಾರ್ಯರು ನಿಗರ್ವಿಗಳು, ಅತ್ಯಂತ ಸರಳ ಸ್ವಭಾವದವರು, ಶಿಷ್ಯವಾತ್ಸಲ್ಯ ಪ್ರಪೂರ್ಣರು, ಸಂಪನ್ನರು, ಸಂಭಾವಿತರು ಸಂಸ್ಕೃತರು. “ವಿದ್ಯಾ ದದಾತಿ ವಿನಯಂ | ವಿನಯಾದ್ಯಾತಿ ಪಾತ್ರ ತಾಂ | ಪಾತ್ರತ್ದಾದ್ಧನ ಮಾಪ್ನೋತಿ | ಧನಾದ್ಧರ್ಮಂ ತತಸ್ಸುಖಂ|” ಎಂಬ ಆರ್ಯೋಕ್ತಿಯುಂಟಷ್ಟೆ. ಅದರಂತೆ ವಿದ್ಯೆಗೆ ವಿನಯವೇ ಭೂಷಣ. ವಿದ್ಯೆ ವಿನಯಗಳೆರೆಡೂ ಒಬ್ಬರಲ್ಲೇ ಸಮಾವೇಶಗೊಂಡಿರುವುದು ತುಂಬಾ ಅಪೂರ್ವ. ಆದರೆ ಡಾ. ಡಿ.ಎಲ್. ನರಸಿಂಹಾಚಾರ್ಯರು ಇದಕ್ಕೆ ಅಪವಾದದಂತಿದ್ದರು. ಶ್ರೀಯುತರ ಅಪಾರವಾದ ಪಾಂಡಿತ್ಯವನ್ನು ಮನಗಂಡ ನಾಡಿನ ಜನತೆ ‘ವಿಖ್ಯಾತ ವಿದ್ವನ್ಮಣಿ’, ‘ಪ್ರಕಾಂಡ ಪಂಡಿತ’, ‘ಸಾರಸ್ವತ ದಿಗ್ಗಜ’, ‘ಕನ್ನಡದ ಪಾಣಿನಿ’, ‘ಜಂಗಮ ವಿಶ್ವಕೋಶ’, ‘ಶಬ್ದಬ್ರಹ್ಮ’ – ಈ ರೀತಿ ಸಂಬೋಧಿಸಿ ಶ್ರೀಯುತರಿಗೆ ತನ್ನ ಗೌರವವನ್ನು ಸಲ್ಲಿಸಿದೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಸಂವರ್ಧನೆಗಾಗಿ ತಮ್ಮ ಜೀವಿತವನ್ನೇ ಮುಡಿಪಾಗಿಟ್ಟು ದುಡಿದು ಕರ್ಮಯೋಗಿ ಡಾ. ಡಿ.ಎಲ್. ನರಸಿಂಹಾಚಾರ್ಯರ ಹೆಸರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಶಾಶ್ವತವಾಗಿ ನಿಲ್ಲುವಂತಹುದಾಗಿದೆ. ಅವರ ಶಿಷ್ಯಕೂಟದಲ್ಲಿ ಒಬ್ಬನಾಗಿದ್ದುದು ನನ್ನ ಭಾಗ್ಯ ವಿಶೇಷ. ಇಂತಹ ಪ್ರಾತಃಸ್ಮರಣೀಯರಾದ ಆಚಾರ್ಯರಿಗೆ ನನ್ನ ಅನಂತ ಪ್ರಣಾಮಗಳು.

* ಕನ್ನಡನುಡಿ (ಸಂ. ೩೪, ಸಂ.೧೫, ೧೬) ಪು. ೪೬