ಮೊದಲನೆ ಸಲ

ಪಾಂಡಿತ್ಯ ಪ್ರತಿನಿಧಿಯಾಗಿದ್ದ, ಕನ್ನಡ ಆಚಾರ್ಯಪುರುಷ ಶ್ರೀ ಡಿ.ಎಲ್. ನರಸಿಂಹಾಚಾರ್ಯರವರನ್ನು ನಾನು ಮೊತ್ತ ಮೊದಲು ಕಂಡದ್ದು, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷನ್ಮಂದಿರದಲ್ಲಿ. ಭಟ್ಟಾಕಲಂಕರ ಕರ್ಣಾಟಕ ಶಬ್ದಾನುಶಾಸನವೆಂಬ ವ್ಯಾಕರಣ ಕೃತಿಗೆ ಕನ್ನಡದಲ್ಲಿ “ನಲ್ನುಡಿಗನ್ನಡಿ” ಎಂಬ ವ್ಯಾಖ್ಯಾನವನ್ನು ಬರೆದು ನಾನು, ಅದನ್ನು ಪ್ರಕಟಿಸಬೇಕೆಂದು ಪ್ರಾರ್ಥಿಸಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗಕ್ಕೆ ೧೯೪೫ರಲ್ಲಿ ಹಸ್ತಪ್ರತಿಯನ್ನು ಸಲ್ಲಿಸಿದ್ದೆ. ಅನಂತರ ಸುಮಾರು ಎರಡು ವರ್ಷಗಳು ಕಳೆದಿರಬಹುದು ಎಂದು ತೋರುತ್ತೆ. ಶ್ರೀ ಡಿ.ಎಲ್.ಎನ್.ರವರು ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದಲ್ಲಿ ಕನ್ನಡ ನಿಘಂಟಿನ ಮುಖ್ಯ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಆಗ ಕರ್ನಾಟಕ ಶಬ್ದಾನುಶಾಸನದ ಪ್ರಕಟಣೆ ವಿಚಾರ ಏನಾಯಿತೆಂದು ಕೇಳಬೇಕೆಂದು ಚಿಂತಿಸಿ, ಪ್ರಪ್ರಥಮವಾಗಿ ಶ್ರೀಯವರನ್ನು ಕಂಡು ಕೇಳಿದೆ. ಅವರ ಮೊದಲ ಭೇಟಿಯೇ ನನಗೆ ಹರ್ಷವನ್ನು ತಂದಿತು. ಅವರ ಶಾಂತಮಯವಾದ ವದನ, ಆ ವದನದಲ್ಲಿ ಮುಗುಳ್ನಗೆ, ಸಾವಧಾನವಾಗಿ ಮತ್ತು ಸ್ಪಷ್ಟವಾಗಿ ಹೇಳಿದ ಮಾತುಗಳು ನನ್ನನ್ನು ಮಾತ್ರವೇ ಏನು! ಎಲ್ಲರಿಗೂ ಅಪ್ಯಾಯಮಾನವಾಗತಕ್ಕದ್ದೇ ಆಗಿದ್ದುವು. ನನ್ನಿಂದ ಎಲ್ಲಾ ವಿಚಾರಗಳನ್ನೂ ತಿಳಿದನಂತರ ನನ್ನಲ್ಲಿಗೆ ಇನ್ನೂ ನಿಮ್ಮ ಹಸ್ತಪ್ರತಿ ಕಳುಹಿಸಿಲ್ಲ. ಬಂದನಂತರ ಪರಿಶೀಲಿಸಿ ತಿಳಿಸುವೆ ಎಂದರು. ಪ್ರಥಮ ಸಂದರ್ಶನವನ್ನು ಮುಗಿಸಿ ಹೊರ ಬಂದಾಗ ನನ್ನ ಮನಸ್ಸಿನಲ್ಲಿ ಈ ಕೆಳಗಿನ ಪ್ರಾಚೀನ ಕವಿವಾಣಿ ಸ್ಮರಣೆಯಲ್ಲಿ ಸುಳಿದುಹೋಯಿತು.

ಮುಖಂ ಪ್ರಸನ್ನಂ ವಿಮಲಾಚದೃಷ್ಟಿಃ |
ತಥಾನುರಾಗೋ ಮಧುರಾಚ ವಾಣಿ ||
ಸ್ನೇಹೋಧಿಕಸ್ಸಂಭ್ರಮ ದರ್ಶನಂ ಚ |
ಸದಾನುರಕ್ತಸ್ಯ ಜನಸ್ಯ ಲಕ್ಷಣಂ ||

ಎರಡನೆಯ ಸಲ

ಶ್ರೀಯುತರನ್ನು ಎರಡನೇ ಸಲ ೧೯೬೨ರಲ್ಲಿ ಸಂದರ್ಶಿಸುವ ಅವಕಾಶ ಒದಗಿತೆಂಬ ನೆನಪಿದೆ. ಆಗ ಅವರು ಮೈಸೂರು ರಾಜ್ಯದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಮುಖ್ಯ ಪರೀಕ್ಷಕರಾಗಿದ್ದರು. ಆಗ ನಾನು ಸಹಾಯಕ ಪರೀಕ್ಷಕನಾಗಿದ್ದೆ. ಆ ಸಮಯದಲ್ಲಿ ನಾನು ಒಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆಗೆ ೩೫ ಅಂಕಗಳನ್ನು ಕೊಟ್ಟಿದೆ. ಇದರಿಂದ ಆ ವಿದ್ಯಾರ್ಥಿ ತೇರ್ಗಡೆಯಾಗಿದ್ದ. ಆದರೆ ಉಪಪರೀಕ್ಷಾಧಿಕಾರಿಗಳಾಗಿದ್ದ ಸಜ್ಜನರೊಬ್ಬರು ನಾನು ಕೊಟ್ಟಿದ್ದ ಅಂಕಗಳು ಹೆಚ್ಚೆಂದು ಹೇಳಿ, ಅದರಲ್ಲಿ ಎರಡು ಅಂಕಗಳನ್ನು ಕಳೆದು ೩೩ ಅಂಕಗಳನ್ನು ಮಾಡಿದರು. ಇದರಿಂದ – ಆ ವಿದ್ಯಾರ್ಥಿ ಪರೀಕ್ಷೆಯಲ್ಲಿ ಫೇಲಾಗುವ ಸಂಭವವಾಯಿತು. ಎರಡು ನಂಬರಿನಿಂದ ವಿದ್ಯಾರ್ಥಿಗೆ ಅನನುಕೂಲ ಮಾಡುವುದು ಸರಿಯಲ್ಲ ಎಂದು ನಾನು ಹೇಳಿದ ಮಾತು ಏನೂ ಪ್ರಯೋಜನಕ್ಕೆ ಬರಲಿಲ್ಲ. ಕೊನೆಗೆ ಪರೀಕ್ಷೆಯ ಫಲಿತಾಂಶ ಬರುವ ಕೆಲವು ದಿನಗಳಿಗೆ ಮೊದಲು, “ಆ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ತೆಗೆದುಕೊಂಡು ಬರಬೇಕೆಂದು, ಮುಖ್ಯ ಪರೀಕ್ಷಾಧಿಕಾರಿಗಳಾಗಿದ್ದ ಶ್ರೀ ಡಿ.ಎಲ್.ಎನ್.ರವರಿಂದ ಆದೇಶ ಬಂದಿತು.

ನಾನು ಆ ಉತ್ತರ ಪತ್ರಿಕೆಯನ್ನು ತೆಗೆದುಕೊಂಡು ಹೋಗಿ ಅವರಲ್ಲಿಗೆ ಹೋಗುತ್ತಿದ್ದಂತೆಯೇ – “ಕೇವಲ ಎರಡು ಅಂಕಗಳಿಂದ ವಿದ್ಯಾರ್ಥಿಗೆ ತೊಂದರೆ ಮಾಡಿದ್ದೀರಿ. ಪರೀಕ್ಷಕರು ಇಷ್ಟು ಕಠಿನರಾದರೆ ವಿದ್ಯಾರ್ಥಿಗಳ ಗತಿಯೇನು?” ಎಂದು ಸ್ವಲ್ಪ ಬಿರುಸಿನಿಂದಲೇ ಕೇಳಿದರು. ಅವರ ಧ್ವನಿಯಲ್ಲಿ ವಿದ್ಯಾರ್ಥಿಗಳ ವಿಚಾರದಲ್ಲಿನ ಅನುಕಂಪ ಎದ್ದು ತೋರುತ್ತಿತ್ತು. ‘ತಾವೇ ಪರಿಶೀಲಿಸಿ ಸ್ವಾಮಿ’ ಎಂದು ಹೇಳಿ ನಾನು ಉತ್ತರ ಪತ್ರಿಕೆಯನ್ನು ಶ್ರೀಯುತರ ಕೈಗಿತ್ತೆ. ಆಗ ನಾನು ಕೊಟ್ಟಿದ್ದ ೩೫ ಅಂಕಗಳನ್ನೂ, ಅದನ್ನು ೩೩ ಅಂಕಗಳಿಗೆ ಇಳಿಸಿದ್ದ ಉಪಮುಖ್ಯ ಪರೀಕ್ಷಾಧಿಕಾರಿಗಳ ಕಾರ್ಯವೂ ಅವರಿಗೆ ತಿಳಿಯಿತು. ಹಾಗಾದರೆ ಇದು ನಿಮ್ಮಿಂದ ಆದುದಲ್ಲ. ನಾನು ಮಾಡಿದ ಆಕ್ಷೇಪಣೆ ನಿಮಗೆ ಸೇರತಕ್ಕದ್ದಲ್ಲವೆಂದು ತಿಳಿಯಿರಿ ಎಂದು ಮುಗುಳ್ನಗೆಯೊಡನೆ ನುಡಿದರು. ಮತ್ತೆ ಅವರು ತಮ್ಮ ಅಧಿಕಾರದಿಂದ ಎರಡು ಅಂಕಗಳನ್ನಿತ್ತು ಆ ವಿದ್ಯಾರ್ಥಿ ತೇರ್ಗಡೆಯಾಗುವಂತೆ ಮಾಡಿದರು. ಇದು ಅವರ ಹೃದಯ ವೈಶಾಲ್ಯವನ್ನೂ, ಕರ್ತವ್ಯ ನಿಷ್ಠೆಯನ್ನೂ, ಕರ್ತವ್ಯಭ್ರಷ್ಟತೆಯಲ್ಲಿ ಅಸಹನೆಯನ್ನೂ ತೋರಿಸುತ್ತಿತ್ತು.

ಮೂರನೇ ಸಲ

ಮೂರನೇ ಸಲದ ಸಂದರ್ಶನ ಮೈಸೂರಿನ ಸರಸ್ವತೀಪುರಂ ಬಡಾವಣೆಯಲ್ಲಿದ್ದ ಅವರ ಮನೆಯಲ್ಲೇ ಆಯಿತು. ಆ ವೇಳೆಗೆ ‘ಕರ್ಣಾಟಕ ಶಬ್ದಾನುಶಾಸನ’ದ ಹಸ್ತಪ್ರತಿ ವಿಮರ್ಶೆಗಾಗಿ ಅವರ ಕೈ ಸೇರಿತ್ತು. ನನ್ನ ಸಂಗಡ ಮೈಸೂರು ಓರಿಯಂಟಲ್ ರೀಸರ್ಚ್‌ ಇನ್‌ಸ್ಟಿಟ್ಯೂಟಿನ ಜೈನ ಪಂಡಿತರಾಗಿದ್ದ ಶ್ರೀ ಎಂ.ಸಿ. ಪದ್ಮನಾಭಶರ್ಮರವರೂ ಬಂದಿದ್ದರು. ವ್ಯಾವಹಾರಿಕವಾಗಿ ಮಾತುಗಳು ನಡೆದ ನಂತರ ಶಬ್ದಾನುಶಾಸನದ ವಿಚಾರ ಬಂದಿತು. “ನಿಮ್ಮ ಪುಸ್ತಕವನ್ನು ನೋಡುತ್ತಿದ್ದೇನೆ. ಅರ್ಧ ಓದಿ ಮುಗಿಸಿದ್ದೇನೆ. ಇನ್ನೂ ಅರ್ಧ ಬಾಕಿ ಇದೆ. ನಿಮ್ಮ ಶ್ರಮ ವ್ಯರ್ಥವಾಗುವುದಿಲ್ಲ. ಸಾರ್ಥಕವಾಗುತ್ತದೆ” ಎಂದರು. ನಮ್ಮ ಮನಸ್ಸಿಗೆ ಎಷ್ಟೋ ನೆಮ್ಮದಿಯಾಯಿತು. ಏಕೆಂದರೆ ಅದಕ್ಕೆ ವ್ಯಾಖ್ಯಾನವನ್ನಂತೂ ಯಾವುದೋ ಉತ್ಸಾಹದ ಮೇಲೆ ಬರೆದು ಮುಗಿಸಿದ್ದೆ. ಆದರೆ ಅದು ವಿದ್ವಜ್ಜನಗಳಿಂದ ಎಲ್ಲಿ ಅಪಹಾಸಕ್ಕೆ ಈಡಾಗುವುದೋ ಎಂಬ ಭಯವಿತ್ತು. ಆದರೆ ಕನ್ನಡ ಭಾಷೆಗೆ ಆಧಾರಸ್ತಂಭದಂತಿದ್ದ, ವಿದ್ವನ್ಮಣಿ ಶ್ರೀ ಡಿ.ಎಲ್.ಎನ್.ರವರಿಂದ ಒಳ್ಳೆ ಅಭಿಪ್ರಾಯವು ಬಂದುದು ನನಗೆ ಅತೀವ ಆನಂದವಾಗಿತ್ತು.

ಅವರ ಅಭಿಪ್ರಾಯ ಸುಳ್ಳಾಗಲಿಲ್ಲ. ಅವರು ಬೀದರ್ ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ, ತಮ್ಮ ಅಧ್ಯಕ್ಷ ಭಾಷಣದಲ್ಲಿ ನನ್ನ ಕೃತಿಯ ವಿಚಾರವನ್ನು ಪ್ರಸ್ತಾಪಿಸಿದರು. ಅದು ಪ್ರಕಟವಾದ ನಂತರ ೧೯೬೭ರಲ್ಲಿ ಮೈಸೂರು ರಾಜ್ಯ ಸಾಹಿತ್ಯ ಅಕಾಡಮಿಯ ಅದಕ್ಕೆ ಬಹುಮಾನವನ್ನಿತ್ತು ಶ್ರೀ ಡಿ.ಎಲ್.ಎನ್.ರವರ ಮಾತುಗಳನ್ನು ಸಾರ್ಥಕಪಡಿಸಿತು. ಅದು ನನ್ನ ವ್ಯಕ್ತಿತ್ವಕ್ಕೆ ಸಂದಾಯವಾದ ಬಹುಮಾನವಾಗಿರಲಿಲ್ಲ. ಮುನಿಪುಂಗವರಾಗಿದ್ದ ಶ್ರೀಮದ್ಭಟ್ಟಾಕಲಂಕರ ಕನ್ನಡ ನುಡಿಯ ಆದರ್ಶ ಸೇವೆಗೆ ಸಂದ ಬಹುಮಾನವಾಗಿತ್ತು.

ನಾಲ್ಕನೇ ಸಲ

ಇದು ಕೊನೆಯ ಸಂದರ್ಶನ. ಅನಿರೀಕ್ಷಿತವಾಗಿ ಮೈಸೂರು ದೇವರಾಜ ಮಾರ್ಕೆಟ್ ಬಳಿಯಿರುವ ಸಿಟಿ ಬಸ್ ನಿಲ್ದಾಣದಲ್ಲಿ ನಡೆದುದು. ಸುಮಾರು ಎರಡು ವರ್ಷ ಅಥವಾ ಮೂರು ವರ್ಷಗಳಾಗಿರಬಹುದೆಂದು ತೋರುತ್ತದೆ. ನಾನು ಬೆಂಗಳೂರಿನಿಂದ ಮೈಸೂರಿಗೆ ಹೋಗಿ ಬಸ್ ನಿಲ್ದಾಣದಲ್ಲಿಳಿದೆ. ಅದರ ಬಳಿಯಲ್ಲೇ ಇರುವ ಸಿಟಿ ಬಸ್ ನಿಲ್ದಾಣದ ಬೆಂಚಿನ ಬಳಿ ಯಾರೊಂದಿಗೆ ಮಾತನಾಡುತ್ತ ಕುಳಿತಿದ್ದ ಶ್ರೀಯುತರು ಕಣ್ಣಿಗೆ ಬಿದ್ದರು. ಕೂಡಲೇ ಹೋಗಿ ವಂದಿಸಿದೆ. ಆ ಸಮಯಕ್ಕೇ ಅವರ ಆರೋಗ್ಯ ಕೆಟ್ಟಿದ್ದಿತೆಂದು ಮುಖಭಾವದಿಂದ ತಿಳಿಯಬಹುದಾಗಿತ್ತು. ಆ ವೇಳೆಗೆ ನಾನು ಕೇಶಿರಾಜರ ಶಬ್ದಮಣಿ ದರ್ಪಣಕ್ಕೂ “ನಲುಡಿಗನ್ನಡಿ” ಎಂದು ಹೆಸರಿನ ವ್ಯಾಖ್ಯಾನವನ್ನು ಬರೆಯತೊಡಗಿದ್ದೆ. ಆ ವಿಚಾರವನ್ನು ಅವರಲ್ಲಿ ನಿವೇದಿಸಿದೆ. ಆಗ ಅವರು “ಹೇಗೆ ಬರೆಯುತ್ತಿರುವಿರಿ”? ಎಂದು ಪ್ರಶ್ನಿಸಿ ಅದಕ್ಕೆ ಕೆಲವು ಅಮೂಲ್ಯ ಸಲಹೆಗಳನ್ನು ನೀಡಿದರು. ಹಳೆಗನ್ನಡದ ಎಲ್ಲಾ ವೈಯ್ಯಾಕರಣರ ಅಭಿಪ್ರಾಯವನ್ನೂ ಚರ್ಚಿಸಿ, ತುಲನಾತ್ಮಕ ಅಧ್ಯಯನದ ದೃಷ್ಟಿಯಿಂದ ಬರೆಯಿತು. ಅದು ಹೆಚ್ಚು ಉಪಯುಕ್ತವಾಗುತ್ತದೆ ಎಂದು ಹೇಳಿದರು. ಅದೇ ಅವರೊಂದಿಗಿನ ಕೊನೆಯ ಸಂದರ್ಶನವಾಯಿತು.

ಇಂದು ಅವರು ನೀಡಿದ ಮಾರ್ಗದಲ್ಲೇ ಶಬ್ದಮಣಿದರ್ಪಣದ ವ್ಯಾಖ್ಯಾನವನ್ನು ಬರೆದು ಮುಗಿಸಿದ್ದೇನೆ. ಆದರೆ ಮಹಾ ವಿದ್ವನ್ಮಣಿಗಳಾಗಿದ್ದ ಶ್ರೀ ಡಿ.ಎಲ್.ಎನ್. ರವರಂತಹ ಪವಿತ್ರ ವಿದ್ವಾಂಸರಿಂದ ಅದರ ವಿಮರ್ಶಾತ್ಮಕ ಅಭಿಪ್ರಾಯವನ್ನು ತಿಳಿಯುವ ಸೌಭಾಗ್ಯವನ್ನು ಕಳೆದುಕೊಂಡಿದ್ದೇನೆ ಎಂದು ತಿಳಿಸಲು ವ್ಯಥೆಯಾಗುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತು ಈ ಶ್ರೇಷ್ಠ ವಿದ್ವಾಂಸರ ಬಗ್ಗೆ ಒಂದೆರಡು ಮಾತುಗಳನ್ನು ಬರೆಯಲು ನನಗೆ ಅವಕಾಶ ನೀಡಿದುದಕ್ಕಾಗಿ, ಪರಿಷತ್ತಿನ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಉಳಿದ ಅಧಿಕಾರ ವರ್ಗದವರಿಗೆ ಕೃತಜ್ಞನಾಗಿದ್ದೇನೆ.

* ಕನ್ನಡನುಡಿ (ಸಂ. ೩೪, ಸಂ.೧೫, ೧೬) ಪು. ೨೮