ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ಯ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲಿಯೂ ಪಾಂಡಿತ್ಯ ಪ್ರಪೂರ್ಣತೆಯಲ್ಲಿ ಹಿರಿಯ ಸ್ಥಾನವನ್ನು ಗಳಿಸಿದವರು. ಕನ್ನಡ ಭಾಷೆ ಸಾಹಿತ್ಯಗಳ ಬಗೆಗೆ ಅಪಾರ ಜ್ಞಾನವನ್ನು ಗಳಿಸಿದ್ದ ಅವರು ಹಲವಾರು ಶಿಷ್ಯರಿಗೆ ಕನ್ನಡ ಭಾಷಾ ಸಾಹಿತ್ಯವನ್ನು ಬೋಧಿಸಿದವರು. ೧೯೦೫ರಿಂದ ೧೯೭೧ರ ವರೆಗೆ ಬದುಕಿದ್ದ ಇವರು ವಿದ್ಯಾರ್ಥಿ ಜೀವನದಲ್ಲಿ ಹೆಚ್ಚು ಅಂಕಗಳನ್ನು ಪಡೆದು ಹಲವು ಬಹುಮಾನಗಳನ್ನು ಗಳಿಸಿದವರು. ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗಮಾಡಿ ೧೯೨೬ರಲ್ಲಿ ಎಂ.ಎ. ಪದವಿಯಲ್ಲಿ ಪ್ರಥಮದರ್ಜೆ ಪ್ರಥಮ ಸ್ಥಾನ ಪಡೆದವರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪಾಧ್ಯಾಯರು ಹುದ್ದೆಯನ್ನು ಪಡೆಯುವುದಕ್ಕೆ ಮೊದಲು ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧಾಲಯದಲ್ಲಿ, ಎಂದರೆ ಆಗಿನ ಓರಿಯಂಟಲ್ ಲೈಬ್ರರಿಯಲ್ಲಿ ಕನ್ನಡ ಪಂಡಿತರಾಗಿ ಕೆಲಸ ಮಾಡಿದವರು. ಇದರಿಂದ ಅಲ್ಲಿ ಆಗಲೇ ಸಂಗ್ರಹವಾಗಿದ್ದ ಹಾಗೂ ಸಂಗ್ರಹವಾಗುತ್ತಿದ್ದ ಓಲೆಗರಿ ರೂಪದಲ್ಲಿ ದೊರೆತಿದ್ದ ಪ್ರಾಚೀನ ಕೃತಿಗಳ ಬಗೆಗೆ ಒಲವನ್ನು ಬೆಳೆಸಿಕೊಳ್ಳಲು ಸಹಕಾರಿಯಾಯಿತು. ಹಲವಾರು ಗ್ರಂಥಗಳನ್ನು ಕುತುಹೂಲಭರಿತರಾಗಿ ಹಸ್ತಪ್ರತಿಗಳಲ್ಲಿಯೇ ಅಧ್ಯಯನ ಮಾಡಿದರು. ಅಂದು ಅದೇ ಮೊದಲಾಗಿ ಹಲವಾರು ಹಳ್ಳಿಗಳನ್ನು ತಿರುಗಿ, ಪ್ರಸಿದ್ಧ ಪತ್ರಿಕೆಗಳನ್ನು ಹೊರಡಿಸಿ ಹಸ್ತಪ್ರತಿ ಹೊಂದಿದವರನ್ನು ಸಂಪರ್ಕಿಸಿ ಪ್ರಾಚೀನ ಕಾವ್ಯ ತತ್ವ ಗ್ರಂಥಾದಿಗಳು ನರಸಿಂಹಾಚಾರ್ಯ ಅವರನ್ನು ಆಕರ್ಷಿಸಿದರಲ್ಲಿ ಆಶ್ಚರ್ಯವಿಲ್ಲ. ಅವರು ಅಪ್ರಕಟಿತವಾಗಿದ್ದ ಸಕಲವೈದ್ಯನ ಸಂಹಿತಾ ಸಾರಾರ್ಣವದ ಪ್ರಥಮ ಸಂಪುಟವನ್ನು ಕುಮಾರವ್ಯಾಸ ರಚಿತ ಭೀಷ್ಮಪರ್ವವನ್ನು ಕೆಲವು ಹಸ್ತಪ್ರತಿಗಳ ಸಹಾಯದಿಂದ ಪರಿಷ್ಕರಿಸಿದರು. ಹೀಗೆ ಅವರು ಮೊದಲಿಗೆ ಪ್ರಾಚೀನ ಕಾವ್ಯಗಳ, ಕೃತಿಗಳ ಸಂಪರ್ಕ ಹೊಂದಿದುದರಿಂದಲೇ ಅವರು ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರೇರಣೆಯಿತ್ತುವು ಎಂದು ಭಾವಿಸಬಹುದಾಗಿದೆ. ಅನಂತರ ಅಧ್ಯಾಪಕ ವೃತ್ತಿಯನ್ನು ಕೈಗೊಂಡರೂ ಪ್ರಾಚೀನ ಗ್ರಂಥಗಳ ಪರಿಷ್ಕರಣೆಯತ್ತ ಅವರ ಒಲವು ಸದಾ ಜಾಗೃತವಾಗಿರುತ್ತಿದ್ದಿತು.

ಹೀಗೆ ಪ್ರಾಚೀನ ಕನ್ನಡ ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ಅತ್ಯಂತ ಯಶಸ್ಸನ್ನು ಗಳಿಸಿ, ವಿದ್ವತ್ ಪ್ರಪಂಚದಲ್ಲಿ ಹಿರಿಯ ಸ್ಥಾನವನ್ನು ಗಳಿಸಿದ ಡಿ.ಎಲ್. ನರಸಿಂಹಾಚಾರ್ಯ ಅವರು ೧೯೫೧-೫೫ರ ವರೆಗೆ ನನಗೆ ಗುರುಗಳಾಗಿದ್ದು ಅತ್ಯಂತ ಸನಿಹದಿಂದ ಅವರ ಉನ್ನತ ವ್ಯಕ್ತಿತ್ವದ ಪರಿಚಯ ಪಡೆದಿದ್ದೇನೆ. ಅವರ ಪಾಠಪ್ರವಚನಗಳಲ್ಲಿ ಕಂಡುಬರುತ್ತಿದ್ದ ಅನನ್ಯತೆ ನಿರ್ದುಷ್ಟೆ ಎಲ್ಲ ಬೋಧಕ ವೃತ್ತಿಯಲ್ಲಿರುವವರಿಗೆ ಆದರ್ಶವಾಗಿದ್ದಿತು. ಯಾವುದೇ ಕ್ಷಿಷ್ಟ ಪಾಠವನ್ನು ವಿವಿಧ ಮೂಲಗಳಿಂದ ಪರಿಶೀಲಿಸಿ ಪೂರ್ಣವಾಗಿ ತಿಳಿಯ ಹೇಳುತ್ತಿದುದು ಅವರ ಹಿರಿಯತನವಾಗಿದ್ದಿತು. ಇದಕ್ಕಾಗಿ ಅವರು ವಿವಿಧ ಹಸ್ತಪ್ರತಿಗಳಲ್ಲಿ ದೊರೆಯುವ ಪಾಠಭೇದಗಳನ್ನು ಪರಿಶೀಲಿಸಿ ಆ ದಿಸೆಯಲ್ಲಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸುತ್ತಿದ್ದರು. ಸೂಕ್ತ ನಿದರ್ಶನಗಳೊಡನೆ ಮನದಟ್ಟು ಮಾಡಿಕೊಡುತ್ತಿದ್ದರು. ಅವರ ಪಾಠವೆಂದರೆ ಗಂಭೀರತೆಯಿಂದ ಕೂಡಿರುತ್ತಿದ್ದಿತು.

ಇವರ ಹಿರಿಯ ವಿದ್ವತ್ತಿಗೆ ಕೂಲಂಕುಶ ವಿಮರ್ಶೆಗೆ ಹಿರಿಯ ಸಾಕ್ಷಿಯಾಗಿ ನಿಂತಿರುವುದು ಶಿವಕೋಟ್ಯಾಚಾರ್ಯನ ವಡ್ಡಾರಾಧನೆ. ಇದನ್ನು ಪೂರ್ಣವಾಗಿ ಪರಿಶೀಲಿಸಿ, ಪ್ರಾಚೀನ ಗದ್ಯಗ್ರಂಥ ಎಂದು ಗುರುತಿಸಿ, ಹಲವಾರು ಹಸ್ತಪ್ರತಿಗಳ ಸಹಾಯದಿಂದ ಪರಿಶೋಧಿಸಿದ ಕೀರ್ತಿ ಡಿ.ಎಲ್.ಎನ್. ಅವರದಾಗಿದೆ. ಅದರಲ್ಲಿ ಬರುವ ಪಾಕೃತ ಗಾಹೆಗಳನ್ನು ಹಳಗನ್ನಡ ಗದ್ಯನಿರೂಪಣೆಯನ್ನು ಒಪ್ಪಗೊಳಿಸಿ ಕನ್ನಡ ಗದ್ಯಸಾಹಿತ್ಯಕ್ಕೆ ಒಂದು ಕೊಡುಗೆಯನ್ನಾಗಿ ನೀಡಿದ್ದಾರೆ. ತಮಗೆ ದೊರೆತ ಆರು ಪ್ರತಿಗಳಲ್ಲಿ ಗ್ರಂಥ ಸಂಪಾದನಾ ತತ್ವಕ್ಕನುಸಾರವಾಗಿ ವಿಂಗಡಿಸಿ ಖ ಪ್ರತಿಯೇ ಮೂಲ ಎಂಬುದನ್ನು ಖಚಿತ ಪಡಿಸಿದ್ದಾರೆ. ದೊರೆತ ಹಸ್ತಪ್ರತಿಗಳಲ್ಲಿ ಕಂಡುಬಂದ ಪಾಠಗಳನ್ನನುಸರಿಸಿ ಪ್ರತಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಮೂಲಪಾಠವನ್ನು ಕಂಡುಹಿಡಿಲಯ ಮಾಡಿರುವ ಪ್ರಯತ್ನ ಶ್ಲಾಘನೀಯವಾಗಿದೆ. ಇತರ ಗ್ರಂಥ ಪರಿಷ್ಕರಣಕಾರರಿಗೆ ಮಾದರಿಯಾಗಿದೆ. ಇದರ ಮರುಮುದ್ರಣಗಳು ನಡೆಯುತ್ತಲೇ ಇವೆ. ೧೯೭೦ರಲ್ಲಿ ಹೊರಬಂದ ನಾಲ್ಕನೆಯ ಮುದ್ರಣಕ್ಕೆ ವಿಸ್ತಾರವಾದ ಟಿಪ್ಪಣಿಗಳೂ ಉಪಯುಕ್ತವಾದ ಅನುಬಂಧಗಳೂ ಸೇರಿವೆ. ಪೀಠಿಕೆ ಬಹುಮೌಲಿಕವಾಗಿದೆ.

ನಾನು ಮೊದಲ ಬಾರಿಗೆ ನೇಮಿಚಂದ್ರನ ‘ನೇಮಿನಾಥ ಪುರಾಣ’ವನ್ನು ಹೊಸದೊಂದು ಹಸ್ತಪ್ರತಿಯ ಸಹಾಯದಿಂದ ಪರಿಷ್ಕರಿಸಿ ಹೊರಟಾಗ ಕೆಲವು ಸಮಸ್ಯೆಗಳು ಎದುರಾದವು. ಆ ಸಮಸ್ಯೆಗಳ ಪರಿಹಾರಕ್ಕಾಗಿ ಡಿ.ಎಲ್.ಎನ್. ಅವರಲ್ಲಿ ಹೋಗುತ್ತಿದ್ದುದ್ದು, ಅವರು ಪದ್ಯಗಳ ಪಠನ ಮಾಡುತ್ತಿದ್ದಂತೆಯೇ ಛಂದಸ್ಸಿನ ದೋಷವೂ ಪಾಠ ಸಮಸ್ಯೆಯೂ ಇರುವುದನ್ನು ಗುರುತಿಸಿ ಹೀಗೆ ಇರಬಹುದು, ಮತ್ತೊಮ್ಮೆ ಹಸ್ತಪ್ರತಿಯನ್ನು ಪರಿಶೀಲಿಸು ಎಂದು ಹೇಳುತ್ತಿದ್ದರು. ಅವರ ಊಹೆ ನಿಜವಾಗಿರುತ್ತಿದ್ದಿತು. ಆದುದರಿಂದಲೇ ನಾನು ಆ ಗ್ರಂಥದ ಪೀಠಿಕೆಯಲ್ಲಿ ಹೆಸರು ನನ್ನದಿದ್ದರೂ ಇದಕ್ಕೆ ಉಸಿರು ತುಂಬಿದವರು ಡಿ.ಎಲ್. ನರಸಿಂಹಾಚಾರ್ಯ ಎಂದು ಕೃತಜ್ಞತೆಯನ್ನು ಸೂಚಿಸಿದ್ದೇನೆ.

ಪ್ರಾಚೀನ ಕನ್ನಡ ಕೃತಿಗಳು ಹಸ್ತಪ್ರತಿಯಲ್ಲುಳಿದು ಹಾಳಾಗಬಾರದೆಂಬ ಕಳಕಳಿ ಅವರಲ್ಲಿ ಮನೆ ಮಾಡಿದುದಕ್ಕೆ ನಾನು ಸಂಪಾದಿಸಿದ ಬಂಧುವರ್ಮನ ಹರಿವಂಶಾಭ್ಯುದಯ ಕಾವ್ಯ ಸಾಕ್ಷಿಯಾಗಿದೆ. ಈ ಕಾವ್ಯವನ್ನು ಹಸ್ತಪ್ರತಿಯ ಮೂಲಕವೇ ಓದಿ ಅದರ ಕಾವ್ಯ ಸೌಂದರ್ಯವನ್ನು ಮನಂಗಡಿದ್ದ ಡಿ.ಎಲ್.ಎನ್. ಅವರು ಆ ಕಾವ್ಯ ಪ್ರಕಟವಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದರು. ಆ ಹಸ್ತಪ್ರತಿಯು ಪ್ರಾಚ್ಯ ಸಂಶೋಧ ನಾಲಯಕ್ಕೆ ನಾಲ್ಕನೆಯ ಪ್ರತಿಯಾಗಿ ಸೇರ್ಪಡೆಗೊಂಡರೂ ಏಕೈಕ ಹಸ್ತಪ್ರತಿ ಉಂಟಾಗಿದ್ದು ಅಶುದ್ಧತೆಯಿಂದ ಕೂಡಿದ್ದುದರಿಂದ ಯಾರೂ ಅದನ್ನು ಪರಿಷ್ಕರಿಸಲು ಮನಸ್ಸು ಮಾಡಿರಲಿಲ್ಲ. ಆದರೆ ನಾನು ಡಿ.ಎಲ್.ಎನ್. ಅವರ ಪ್ರೇರಣೆಯಿಂದ ಅದನ್ನು ಪರಿಷ್ಕರಿಸಿದೆನು. ಅದು ೧೯೭೪ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಾಶಿತವಾಯಿತು. ಹೀಗೆ ಅದೆಷ್ಟೋ ಶಿಷ್ಯರಿಗೆ ಯಾವ ಬೇಸರವೂ ಇಲ್ಲದೇ ಮಾರ್ಗದರ್ಶನ ಮಾಡುತ್ತಿದುದು ಅವರ ಹಿರಿತನದ ಗುರುತಾಗಿದ್ದಿತು.

ಡಿ.ಎಲ್.ಎನ್. ಅವರು ಸಂಶೋಧನಾತ್ಮಕವಾಗಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬರೆದ ಅನೇಕ ಲೇಖನಗಳು ಕಿರಿಯ ಹಿರಿಯ ಎಲ್ಲ ಸಂಶೋಧಕರಿಗೆ ದಾರಿದೀಪವಾಗಿವೆ. ಇವೆಲ್ಲವೂ ವಿವಿಧ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಅವರ ಬಗೆಗೆ ಅಪಾರ ಗೌರವವನ್ನು ಉಂಟು ಮಾಡಿದವು. ಇವೆಲ್ಲವೂ ಈಗ ‘ಪೀಠಿಕೆಗಳು ಮತ್ತು ಲೇಖನಗಳು’ ಎಂಬ ಗ್ರಂಥದಲ್ಲಿ ಮೂರ್ತಗೊಂಡಿವೆ. ಇವರು ಪರಿಷ್ಕರಿಸಿ ಪ್ರಕಟವಾಗಿರುವ ‘ವಡ್ಡಾರಾಧನೆ’ ಶಬ್ದಮಣಿದರ್ಪಣಗಳು ಮತ್ತು ಕೆಲವು ವಿದ್ವಾಂಸರಿಂದ ಪರಿಷ್ಕಾರಗೊಂಡು ಪ್ರಕಟವಾಗಿದ್ದರೂ ಡಿ.ಎಲ್.ಎನ್. ಅವರ ಆವೃತ್ತಿಗಳೇ ಇಂದಿಗೂ ಸಾಮಾನ್ಯ ಅಭ್ಯಾಸಿಗಳಿಗಲ್ಲದೆ ವಿದ್ಯಾರ್ಥಿವೃಂದಕ್ಕೆ ಹಾಗೂ ಹಿರಿಯರಿಗೆ ಮೆಚ್ಚುಗೆಯಾಗಿಯೇ ಉಳಿದಿವೆ. ಆದಿಕವಿ ಪಂಪನ ‘ವಿಕ್ರಮಾರ್ಜುನ ವಿಜಯ’ವನ್ನು ತಲಸ್ಪರ್ಶಿಯಾಗಿ ಅಭ್ಯಾಸಮಾಡಿ ರಚಿಸಿರುವ ಪಂಪಭಾರತದೀಪಿಕೆ ಎಂಬುದು ಅವರ ಅಪಾರ ಪಾಂಡಿತ್ಯಕ್ಕೆ ನಿಕಷಬುದ್ಧಿಗೆ ಒರೆಗಲ್ಲಾಗಿ ಕಂಡುಬರುತ್ತದೆ. ಈ ಟೀಕೆಯ ಬಗೆಗೆ ಅರಿಕೆಯಲ್ಲಿ ಸಾಕಷ್ಟು ವಿಸ್ತಾರವಾಗಿ ಪ್ರತಿಪದಾರ್ಥ ಸಹಿತವಾಗಿ ಈ ಟೀಕೆ ಲಿಖಿತವಾಗಿದೆ. ವ್ಯಾಕರಣ, ಛಂದಸ್ಸು, ಪೂರ್ವಕಥಾವೃತ್ತಾಂತ, ಶಬ್ದಾರ್ಥ ನಿರ್ಣಯ, ಆಕರ ಗ್ರಂಥಗಳು ಮುಮತಾದ ಅನೇಕ ವಿಷಯಗಳು ಈ ಟೀಕೆಯಲ್ಲಿ ನಿರೂಪಿತವಾಗಿವೆ.

“ಹಲವೆಡೆಗಳಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ. ನನ್ನದೇ ಸರಿಯೆಂಬ ಹಠವೇನೂ ಇಲ್ಲ. ಜಿಜ್ಞಾಸುವಿನ ದೃಷ್ಟಿಯಿಂದ ಕೆಲವಂಶಗಳನ್ನು ಚರ್ಚಿಸಿದೆ. ನನಗೆ ಸಂದೇಹವೆಂದು ತೋರಿದೆಡೆಗಳಲ್ಲಿ ಪ್ರಶ್ನೆ ಚಿಹ್ನೆಯನ್ನು ಧಾರಳವಾಗಿ ಬಳಸಿದ್ದೇನೆ. ತಿಳಿಯದ ಅಂಶಗಳಿಗೂ ಇದೇ ಚಿಹ್ನೆಯನ್ನು ಅಲ್ಲಲ್ಲಿ ಹಾಕಿದೆ. ಈ ಪ್ರಶ್ನೆ ಚಿಹ್ನೆಗಳನ್ನು ತೆಗೆದುಹಾಕುವ ಕೆಲಸ ಮುಂದಿನ ವಿದ್ವಾಂಸರಿಗೆ ಸೇರಿದುದಾಗಿದೆ” ಎಂದು ಹೇಳುವ ಅವರ ಮಾತುಗಳಲ್ಲಿ ತನ್ನ ಮಾತೇ ಸರಿಯೆಂಬ ಅಹಮಿಕೆಯಿಲ್ಲ; ವಿನೀತಭಾವದ ಆರ್ದ್ರತೆಯಿದೆ. ಗ್ರಂಥ ಪರಿಷ್ಕರಣದ ಕೈಪಿಡಿ ಎಂದೇ ಪ್ರಸಿದ್ಧವಾಗಿರುವ ಅವರ ಕನ್ನಡ ಗ್ರಂಥಸಂಪಾದನೆ. ಗ್ರಂಥವು ಪ್ರಾಚೀನ ಗ್ರಂಥಸಂಪಾದಕರಿಗೆ ಒಂದು ಅಪೂರ್ವ ಕೊಡುಗೆಯಾಗಿದೆ. ಅದರಲ್ಲಿ ನಿರ್ದಿಷ್ಟಸೂತ್ರಗಳಿವೆ ಅನುಸರಿಸಬೇಕಾದ ಮಾರ್ಗೋಪಾಯಗಳಿವೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಯಾರೊಬ್ಬರು ಇದನ್ನು ಪರಿಗಣಿಸದಿರುವುದು ಸಾಧ್ಯವೇ ಇಲ್ಲ ಎಂಬಂತಹ ಧೀಮಂತಿಕೆಯಿಂದ ಕೂಡಿದೆ. ಸೋಪಜ್ಞತೆಯ ಕುರುಹಾಗಿದೆ. ಮುಂದೆ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತ್ತು ಕೆಲವರಿಂದ ಗ್ರಂಥರಚನೆಯಾಗಿದ್ದರೂ ಅವೆಲ್ಲವೂ ಈ ಮೂಲಗ್ರಂಥಕ್ಕೆ ಋಣಿಗಳಾಗಿಯೇ ಉಳಿದಿರುವುದು ನಿಚ್ಚಳವಾಗಿದೆ.

೧೯೫೧ರಲ್ಲಿ ತಿರುವಳ್ಳೂರು ಶ್ರೀನಿವಾಸಾಚಾರ್ಯ ಅವರೊಡನೆ ಸಂಪಾದಿಸಿರುವ ಪಂಪರಾಮಾಯಣ ಸಂಗ್ರಹ, ೧೯೫೪ರಲ್ಲಿ ತ.ಸು. ಶಾಮರಾಯರೊಡನೆ ಪರಿಷ್ಕರಿಸುವ ಶಾಂತಿನಾಥನ ಸುಕುಮಾರ ಚರಿತೆ ಗ್ರಂಥಗಳಲ್ಲಿ ಗ್ರಂಥ ಸಂಪಾದನಾತತ್ವಗಳ ಅನುಸರಣೆಯಿದೆ. ಜೈನ ಸಾಹಿತ್ಯದಲ್ಲಿ ಪ್ರಸಿದ್ಧವಾದ ವಿರಕ್ತಸಾಹಿತ್ಯ ಕೃತಿಯಾದ ೧೧ನೇ ಶತಮಾನದಲ್ಲಿ ಶಾಂತಿನಾಥನಿಂದ ರಚಿತವಾದ ಸುಕುಮಾರ ಚರಿತೆಯನ್ನು ಬಹಳ ಅಚ್ಚುಕಟ್ಟಾಗಿ ಸಂಪಾದಿಸಿದ್ದಾರೆ. ದೊರೆತ ಎರಡು ಪ್ರತಿಗಳಲ್ಲಿ ಹೆಚ್ಚು ಶುದ್ಧವಾಗಿರುವ ಒಂದು ಕ ಓಲೆಪ್ರತಿಯ ಆಧಾರದಿಂದಲೇ ಆದಷ್ಟೂ ಪಾಠಗಳನ್ನು ಕವಿಯ ಮೂಲಕ್ಕೆ ತಂದಿರುವುದು ಒಂದು ಸಾಹಸವಾಗಿದೆ. ೮೬ ಪುಟಗಳ ಸುದೀರ್ಘ ಪೀಠಿಕೆಯಲ್ಲಿ ಕವಿ ಕಾವ್ಯಗಳ ಬಗೆಗೆ ಮಾಡಿರುವ ವಿಮರ್ಶೆ ಅದರ ವಿದ್ವತ್ತಿಗೆ, ವಿಮರ್ಶನಾ ವಿಚಕ್ಷಣತೆಗೆ ಸಾಕ್ಷಿಯಾಗಿದೆ.

ಡಿ.ಎಲ್.ಎನ್‌. ಅವರ ಪದನಿಷ್ಪತ್ತಿ ವ್ಯುತ್ಪತ್ತಿಗಳ ಕುರುಹಾಗಿಯೇ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಿದ್ಧಗೊಳ್ಳುತ್ತಿದ್ದ ಮಹತ್ತರ ಯೋಜನೆಯ ಕನ್ನಡ ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ನೇಮಕಗೊಂಡು ಆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಂಶೋಧನೆ ಮತ್ತು ಸಂಪಾದನಾ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯಿಂದ ಪಾಂಡಿತ್ಯ ಪೂರ್ಣವಾಗಿ ದುಡಿದುದರಿಂದ ಕನ್ನಡ ಜನತೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ೧೯೬೦ರಲ್ಲಿ ಆರಿಸಿ ಗೌರವಿಸಿತು. ಇವರ ವಿಶೇಷ ವಿದ್ವತ್ತಿನ ಮನ್ನಣೆಯ ಗುರುತಾಗಿ ೧೯೬೭ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಕೊಡಮಾಡಿದ ಗೌರವ ಡಿ.ಲಿಟ್. ಪದವಿಯೂ ನಾಡಿನ ಹೆಮ್ಮೆಯ ಸಂಕೇತವಾಗಿದೆ. ನಿವೃತ್ತರಾದ ಮೇಲೆ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದಿಂದ ಸಂಶೋಧಕ ಪ್ರಾಧ್ಯಾಪಕರಾಗಿ ಆಯ್ಕೆಗೊಂಡ ನರಸಿಂಹಾಚಾರ್ಯ ಅವರು ಉತ್ಕೃಷ್ಟ ಕೃತಿ ರಚನೆ ಮಾಡಿದರು.

ಡಿ.ಎಲ್.ಎನ್. ಅಥವಾ ದೊ.ಲ. ನರಸಿಂಹಾಚಾರ್ಯ ಅವರು ಕನ್ನಡ ವಿದ್ವತ್ ಪ್ರಪಂಚದಲ್ಲಿ ಅಚ್ಚಳಿಯದ ಹೆಸರು ಗಳಿಸಿದ್ದಾರೆ. ಅವರ ಧೀಮಂತ ವ್ಯಕ್ತಿತ್ವದಿಂದ ಕನ್ನಡದ ಅನೇಕ ವಿದ್ವಾಂಸರು ಪ್ರೇರಣೆ ಪಡೆದಿದ್ದಾರೆ. ಅವರು ನಾಡನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾಗಿದೆ.