ಶ್ರೀಮಾನ್ ಡಿ.ಎಲ್. ನರಸಿಂಹಾಚಾರ್ಯರೂ ನಾನು ಒಬ್ಬರನ್ನೊಬ್ಬರು ಬಾಲ್ಯದಿಂದ ಬಲ್ಲವರು. ಕೆಲಕಾಲ ಜೊತೆಯಲ್ಲಿ ಓದಿದವರು. ಬಹುಕಾಲ ಜೊತೆಯಾಗಿ ದುಡಿದವರು, ವಯಸ್ಸಿನೊಂದಿಗೆ ಸ್ನೇಹವನ್ನೂ ಜೊತೆ ಜೊತೆಗೇ ಬೆಳಸಿಕೊಂಡವರು. ನರಸಿಂಹಾಚಾರ್ಯರಲ್ಲಿ ನನಗಿರುವ ಪ್ರೀತಿಯನ್ನೂ ಮೆಚ್ಚಿಕೆಯನ್ನೂ ಸೂಚಿಸುವುದು ನನಗೆ ಯಾವಾಗಲೂ ಸಂತೋಷದ ವಿಷಯವೇ. ಅದರಲ್ಲೂ, ಇನ್ನೂ ಹಲವರಿಗಿದ್ದಂತೆಯೇ ನಮ್ಮಿಬ್ಬರಿಗೂ ಕೂಡ ಹಿರಿಯ ಕನಸಾಗಿದ್ದ ಕನ್ನಡ ನಾಡಿನ ಏಕೀಕರಣವು ಈಚೆಗೆ ಫಲಿಸಿ, ದೂರದ ಬೀದರ ಪಟ್ಟಣ ರಾಜ್ಯದ ಉತ್ತರದ ಗಡಿಯೊಳಕ್ಕೇ ಬಂದು, ಅಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಪ್ರೊ. ನರಸಿಂಹಾಚಾರ್ಯರ ಅಧ್ಯಕ್ಷತೆಯಲ್ಲಿ ನೆರೆಯಲಿರುವ ಈ ವಿಶೇಷ ಸಂದರ್ಭದಲ್ಲಿ ಈ ಎರಡು ಮಾತನ್ನು ಬರೆಯುವುದು ನನಗೆ ಹೆಚ್ಚಿನ ಸಂತೋಷದ ವಿಷಯ. ಆದರೆ, ಆಪ್ತಮಿತ್ರನನ್ನು ಕುರಿತು ಬರೆಯುವುದರಲ್ಲಿ ಸಂತೋಷದ ಜೊತೆಗೆ ಸಂಕೋಚವೂ ಬೆರೆಯುತ್ತದೆ. ಆತ್ಮೀಯತೆಯ ಬಣ್ಣ ಕವಿದು ಪ್ರಶಂಸೆ ಎಲ್ಲಿ ಹದಮಿರುತ್ತದೊ ಎಂಬ ಭಯದಿಂದ ಉತ್ಸಾಹವನ್ನು ಅದುಮಿಕೊಳ್ಳುವ ಸಂಭವವೂ ಇಲ್ಲಿ ಉಂಟು!

ಡಿ.ಎಲ್.ಎನ್. ಎಂದರೆ ಪಾಂಡಿತ್ಯ, ಪಾಂಡಿತ್ಯ ಎಂದರೆ ಡಿ.ಎಲ್.ಎನ್. ಎನ್ನುವುದು ಕನ್ನಡ ಬಲ್ಲವರೆಲ್ಲೆಲ್ಲಾ ಈಗ ರೂಢಿಯ ಭಾವನೆಯಾಗಿದೆ. ಪಾಂಡಿತ್ಯದ ಗಳಿಕೆಗಾಗಿ, ಬೆಳವಣಿಗೆಗಾಗಿ, ಏಳಿಗೆಗಾಗಿ ಜೀವಮಾನವನ್ನೇ ತೇಯುತ್ತಿರುವವರು ನರಸಿಂಹಾಚಾರ್ಯರು. ಪಾಂಡಿತ್ಯ ಎನ್ನುವುದು ಕೇವಲ ಸಮಯಸ್ಫೂರ್ತಿಯಿಂದ ಮಿಂಚುವ ವಸ್ತುವಲ್ಲ. ನಿರಂತರವಾದ ವ್ಯಾಸಂಗವೇ ಅದನ್ನು ಸಾಧಿಸುವ ರಾಜಮಾರ್ಗ, ಕಣಕಣವಾಗಿ ವಿಷಯ ಸಂಗ್ರಹ ಮಾಡಿ, ಸಂಶೋಧನೆ ಮಾಡಿ, ತನ್ನ ಕಣಜವನ್ನು ತುಂಬಿಕೊಳ್ಳಬೇಕು. ಈ ತುಣುಕುಗಳು ಎಲ್ಲಿ ದೊರೆಯುತ್ತವೆ? ಯಾವ ನಿಘಂಟಿನಲ್ಲಿ, ಯಾವ ಓಲೆಗರಿಯ ಪ್ರತಿಯಲ್ಲಿ, ಯಾವ ಶಾಸನದಲ್ಲಿ, ಯಾವ ಶಾಸ್ತ್ರಗ್ರಂಥದಲ್ಲಿ, ಯಾವ ಭಾಷೆಯ ಯಾವ ಸಂಶೋಧನ ಪತ್ರಿಕೆಯಲ್ಲಿ, ಯಾವ ಪ್ರದೇಶದ ಮನೆ ಮಾತಿನಲ್ಲಿ? ಎಂದು ಕಣ್ಣು ಕಿವಿಗಳನ್ನು ತೆರೆದುಕೊಂಡೇ ಗಮನವಿಡಬೇಕು. ಒಂದು ಶಬ್ದದ ಮೂಲವನ್ನು ಪರಿಶೋಧಿಸುವುದಕ್ಕಾಗಿ, ಅದರ ಅರ್ಥವನ್ನು ನಿರ್ಣಯಿಸುವುದಕ್ಕಾಗಿ ನರಸಿಂಹಾಚಾರ್ಯರು ಪಟ್ಟಿರುವ ಶ್ರಮವನ್ನು ಅವರೇ ಬಲ್ಲರು. ಫಲ ದೊರೆತಾಗ ಅವರಿಗೆ ಯಾವ ಆನಂದ ದೊರೆಯಿತೆಂಬುದನ್ನು ಅವರ ಮುಖ ನೋಡಿಯೇ ಅರಿಯಬೇಕು; ಆ ಆನಂದದಲ್ಲಿ ನಾವೂ ಭಾಗಿಗಳಾಗಬೇಕು.

ಕೆಲವು ತಿಂಗಳ ಕೆಳಗೆ ಇಂಥ ಒಂದು ಕಗ್ಗಂಟನ್ನು ಅವರು ಬಿಡಿಸಿದ ಸಂದರ್ಭ ನೆನಪಿಗೆ ಬರುತ್ತದೆ. ಒಂದು ಸಂಜೆ ನರಸಿಂಹಾಚಾರ್ಯರು ನಮ್ಮ ಮನೆಗೆ ಬಂದಿದ್ದಾಗ, “ಎಲ್ಲಿ, ಆದಿಪುರಾಣ ತೆಗೆಯಿರಿ” ಎಂದರು.

ಪೊಳವಲರಮರ್ದಿನ ಕಪ್ಪುರ
ವಳುಕಿನ ಕತ್ತುರಿಯ ಕೊಳತದೂರ್ವಾಭರಣಂ
ಗಳ ಪೊಳೆವ ಮಾಣಿಕಂಗಳ
ಬೆಳಗಿದೆ ಸೂಚಿಸಿತು ಭರತನಂತಃಪುರಮಂ (೧೧.೪೩)

ಎಂಬ ಪದ್ಯವನ್ನು ತೋರಿಸಿ, “ಇಲ್ಲಿ ‘ಕೊಳೆತ’ ಎಂದರೆ ಏನು?” ಎಂದರು. ಇದು ಬಹುದಿನಗಳಿಂದ ಕನ್ನಡದ ಉಪಾಧ್ಯಾಯರನ್ನು ಬಾಧಿಸಿರುವ ಪ್ರಶ್ನೆ. ಪ್ರೊ. ಕುಂದಣಗಾರರ ಇತ್ತೀಚಿನ ಪರಿಷ್ಕರಣದಲ್ಲಿ ಕೂಡ “ಕೊಳದ” ಎಂಬುದು ಮೂಲಪಾಠವಾಗಿರಬಹುದೆಂದು ಊಹೆ ಮಾಡಿ ಕೈಬಿಡಲಾಗಿದೆ. ನಾನು ತಲೆಯಲ್ಲಾಡಿಸಿದೆ. “ಅದು ‘ಕೊಳೆತು ಹೋದ’ ಎಂಬುದಂತೂ ಅಲ್ಲ. ಇಲ್ಲಿ ಱೞ ಇರಬೇಕೋ ಹೇಗೆ” ಎಂದೆ. ನರಸಿಂಹಾಚಾರ್ಯರು “ಅದರ ಸರಿಯಾದ ರೂಪ ‘ಕೊೞತ’, ‘ಎಳೆಯ, ಹೊಸ’ ಎಂದು ಅದರ ಅರ್ಥ. ತೆಲುಗಿನ ‘ಕ್ರೋತ್ತ’ವನ್ನು ಜ್ಞಾಪಿಸಿಕೊಳ್ಳಿ” ಎಂದರು. ಅವರ ಮುಖದ ಮೇಲೆ ಉಲ್ಲಾಸದ ಮಿಂಚು ಹೊಳೆಯಿತು. ಅದರ ಬೆಳಕಿನಲ್ಲಿ ನನ್ನ ಬಹುಕಾಲದ ಸಂದೇಹ ಹರಿದುಹೋಯಿತು! ತೆಲುಗಿನ ‘ಕ್ರೊತ್ತ’ (=ಹೊಸ)ದ ಪೂರ್ವರೂಪವೂ ಹಳಗನ್ನಡದಲ್ಲಿ ನಿಂತ ರೂಪವೇ ಒಂದೇ: ‘ಕೊೞತ’, ತೆಲುಗಿನಲ್ಲಿ *ಕೊೞತ > ಕ್ರೊತ್ತ, *ಪ್ರೊೞಲ್ > ಪ್ರೋಲು: ಹೀಗೆ ಧ್ವನಿ ವ್ಯತ್ಯಾಸವಾಗುವುದು ಹಳೆಯ ತೆಲುಗಿನ ಸಾಮಾನ್ಯ ನಿಯಮ ತಮಿಳಿನ ‘ಕುೞನ್ದೈ’ (=ಶಿಶು) ಮೊದಲಾದ ಶಬ್ದಗಳನ್ನು ಇಲ್ಲಿ ಸ್ಮರಿಸಬಹುದು. ಅಂತೂ ಪಂಪನ ಆದಿಪುರಾಣದಲ್ಲಿ ‘ಕೊೞತ ದೂರ್ವಾಭರಣ’ ಎಂದರೆ ‘ಎಳೆಯ ಗರಿಕೆಯ ಆಭರಣ’; ಇದು ಮಾಂಗಲ್ಯ ಸೂಚಕವಾದ ದ್ರವ್ಯ. ಪಂಪನು ಈ ಅಪೂರ್ವದ ಪದವನ್ನು ಉಳಿಸಿಕೊಟ್ಟದ್ದಕ್ಕಾಗಿ ಅವನಿಗೆ ನಾವು ಕೃತಜ್ಞರಾಗಿರಬೇಕು; ದ್ರಾವಿಡಭಾಷಾ ಶಾಸ್ತ್ರ ಜ್ಞಾನದ ಬಲದಿಂದ ಅದರ ಮೂಲವನ್ನು ಬೆಳಗಿ, ಅರ್ಥವನ್ನು ಸ್ಫುಟಿ ಮಾಡಿ ಕೊಟ್ಟಿದ್ದಕ್ಕಾಗಿ ಪಂಪನ ಭಕ್ತರಾದ ನರಸಿಂಹಾಚಾರ್ಯರಿಗೆ ನಾವು ಕೃತಜ್ಞರಾಗಿರಬೇಕು. ಕಾಲಪುರುಷನ ವಿಸ್ಮೃತಿಯ ತೆರೆಮರೆಯಿಂದ ಜ್ಞಾನಕಣಗಳನ್ನು ನರಸಿಂಹಾಚಾರ್ಯರು ಬಯಲಿಗೆ ತರುವುದನ್ನು ನೋಡಿದಾಗ ನನಗೆ ಇಂಗ್ಲಿಷಿನ ಒಂದು ದ್ವಿಪದಿ ಜ್ಞಾಪಕಕ್ಕೆ ಬರುತ್ತದೆ; ಕ್ರಿ.ಶ. ಹದಿನೆಂಟನೆಯ ಶತಮಾನದ ಆದಿಭಾಗದಲ್ಲಿದ್ದ ಹರ್ನ್‌ಎಂಬ ಪ್ರಾಕ್ತನ ಸಂಶೋಧಕನನ್ನು ಕುರಿತ ಪದ್ಯ ಅದು

“Quoth Time to Thomas Hearne
Whatever I forgot you learn”

ಪಾಂಡಿತ್ಯವೆಂದರೆ ಕೇವಲ ವಿಷಯರಾಶಿಯ ಸಂಗ್ರಹವಲ್ಲ. ಆ ರಾಶಿ ಬೇಕೇ ಬೇಕು. ಆದರೆ ಅಷ್ಟೇ ಸಾಲದು. ಆ ವಿವಿಧ ವಿಷಯಗಳಲ್ಲಿ ಮರೆಯಾಗಿರುವ ಸಂಬಂಧಗಳನ್ನು ಊಹಿಸಿ ಗ್ರಹಿಸಿ, ಎಳೆಗಳ ತೊಡಕುಗಳನ್ನು ಬಿಡಿಸಿ ಕೂಡಿಸಿ, ತತ್ತ್ವವನ್ನು ಬೆಳಗುವ ಸಂಯೋಜಕ ಪ್ರತಿಭೆಯೂ ಜೊತೆಗೆ ಅವಶ್ಯಕವಾಗಿ ಬೇಕು. ಇದು ನರಸಿಂಹಾಚಾರ್ಯರಲ್ಲಿ ಹೇಗೆ ಕೆಲಸ ಮಾಡುತ್ತಿರುತ್ತದೆ ಎಂಬುದನ್ನು ನಾವು ಹಲವು ಸಂದರ್ಭಗಳಲ್ಲಿ ಮನಗಂಡು ಬೆರಗಾಗಿದ್ದೇನೆ. ಹಳಗನ್ನಡ ಭಾಷೆ ಸಾಹಿತ್ಯಗಳ ವಿಷಯಕ್ಕಂತೂ ಹಲವರು ಹೇಳಿರುವಂತೆ, ನಾನೂ ಬಲ್ಲಂತೆ ಅವರೊಂದು “ಜಂಗಮ ಬೃಹತ್ಕೋಶ”. ಅವರಿಗೂ ಹರಿಯದಿರುವ ಪ್ರಶ್ನೆಗಳು ಇಲ್ಲವೆಂದಲ್ಲ. ಆದರೆ ಹಳಗನ್ನಡದಲ್ಲಿ ಅವರಿಗಿಂತಲೂ ನಿಷ್ಣಾತರಾದ ವಿದ್ವಾಂಸರನ್ನು ಸದ್ಯದಲ್ಲಿ ಕಾಣುವುದು ಅಶಕ್ಯವೆಂದೇ ನನ್ನ ಭಾವನೆ.

ನರಸಿಂಹಾಚಾರ್ಯರ ಪಾಂಡಿತ್ಯಕ್ಕೆ ಅವರ ಜ್ಞಾಪಕಶಕ್ತಿಯ ಬೆಂಬಲ ಅತ್ಯಧಿಕ. ಚಿಕ್ಕಂದಿನಲ್ಲಿ ಪ್ರಖರವಾಗಿದ್ದ ತಮ್ಮ ಸ್ಮೃತಿಶಕ್ತಿ ಈಗ ಕುಗ್ಗಿದೆಯೆಂದು ಅವರು ಒಮ್ಮೊಮ್ಮೆ ಕೊರಗುವುದುಂಟು. ಆದರೆ ಇದೆಲ್ಲ ಶ್ರೀಮಂತನು ಕೊಂಚ ಹಣವನ್ನು ಕಳೆದುಕೊಂಡು ಕೊರಗಾಡುವಂತೆ; ಈ ವಿಷಯದಲ್ಲಿ ಅವರಿಗೆ ನಾನು ಹೆಚ್ಚು ಸಹಾನುಭೂತಿಯನ್ನು ತೋರಿಸಲಾರೆ. ಈ ವಯಸ್ಸಿನಲ್ಲಿ ಕೂಡ ಅವರಿಗೆ ವಿಸ್ತಾರವಾದ ಟಿಪ್ಪಣಿಗಳು, ಸೂಚೀ ಪಟ್ಟಕೆಗಳು ಮೊದಲಾದ ಆಧುನಿಕ ವಿದ್ವತ್ತಿನ ಪರಿಕರಗಳು ಅವಶ್ಯವೆನಿಸಿಲ್ಲ. ಕಂಬಚ್ಚಿನಲ್ಲಿ ಚಿನ್ನದ ತಂತಿಯನ್ನು ಎಳೆದ ಹಾಗೆ ಅವರ ಬಾಯಿಂದ ಹಳಗನ್ನಡದ ಪದ್ಯಮಾಲೆ ಈಗಲೂ ಸರಾಗವಾಗಿ ಹರಿದು ಬರುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ಯಾವುದೋ ಒಂದು ಸಂಶೋಧನ ಪತ್ರಿಕೆಯಲ್ಲಿ ಅವರು ಒಮ್ಮೆ ಓದಿದ್ದ ಒಂದು ಲೇಖನದೊಳಗಿನ ವಿಷಯ ರೇಡಿಯೋವಿನಲ್ಲಿ ಮುಳ್ಳನ್ನು ಗೊತ್ತಾದ ಸ್ಥಾನಕ್ಕೆ ಜರುಗಿಸಿದ ಕೂಡಲೆ ಸಂಗೀತದ ಧ್ವನಿ ಎದ್ದು ಬರುವಂತೆ ಅವರ ಕಣ್ಣ ಮುಂದೆ ಎದ್ದು ನಿಲ್ಲುತ್ತದೆ.

ಜೀವನದಲ್ಲಿ ಪ್ರೇಮ ಎಷ್ಟು ದೊಡ್ಡದೋ ಸ್ನೇಹವೂ ಅಷ್ಟೆ ದೊಡ್ಡದು. ಪ್ರೇಮಕ್ಕೆ ಏಕವ್ಯಕ್ತಿನಿ ಷ್ಠೆಯ ನಿಯಮವುಂಟು. ಸ್ನೇಹಕ್ಕಾದರೆ ಆ ಪರಿಮಿತಿಯೂ ಇಲ್ಲ. ನರಸಿಂಹಾಚಾರ್ಯರಂಥ ದೊಡ್ಡ ಮನಸ್ಸಿನ ಪ್ರಿಯಮಿತ್ರರನ್ನು ಪಡೆದಿರುವುದು ನನ್ನ ಭಾಗ್ಯ ವಿಶೇಷ. ವಿದ್ವತ್ತಿನ ವಿಷಯವಾಗಿ ಅವರೂ ನಾನು ಹಲವು ಸಲ ಬಿರುಸಾಗಿಯೇ ಚರ್ಚೆ ಮಾಡಿದ್ದೇವೆ; ಕಾಡಾದಿದ್ದೇವೆ ಕೂಡ! ಎಷ್ಟೋ ವಿಚಾರಗಳಲ್ಲಿ ಅಭಿಪ್ರಾಯ ಭೇದಗಳನ್ನು ಜೋಕೆಯಿಂದ ಉಳಿಸಿಕೊಂಡು ಬಂದಿದ್ದೇವೆ. ಆದರೆ ಇದೊಂದು ಸ್ನೇಹದ ನಿರ್ಮಲತೆಯನ್ನು ಕದಡಿಲ್ಲ. ಹಾಗೆ ನೋಡಿದರೆ, ಕಾಲಚಕ್ರ ಉರುಳಿದಂತೆಲ್ಲ ಸಂಕೋಚದ ತೆರೆಗಳು ಸರಿದು, ಮನಸ್ಸುಗಳು ಬಲು ಹತ್ತಿರಕ್ಕೆ ಬಂದಿವೆ. ನರಸಿಂಹಾಚಾರ್ಯರಂಥ ಮಿತ್ರರನ್ನು ನೆನೆದಾಗ, “ಕೇನಾಮೃತಮಿದಂ ಸೃಷ್ಟಂ ಮಿತ್ರಮಿತ್ಯಕ್ಷರದ್ವಯಂ” ಎಂದು ಚಿಕ್ಕಂದಿನಿಂದ ಓದಿದ ಸುಭಾಷಿತ ಪಂಕ್ತಿ ನೆನಪಾಗುತ್ತದೆ.

*ಜ್ಞಾನೋಪಾಸಕ, ಮುನ್ನುಡಿ