ಶ್ರೀಮಾನ್ ಡಿ.ಎಲ್. ನರಸಿಂಹಾಚಾರ್ಯರಿಗೂ ನನಗೂ ಅನೇಕ ವರುಷ ಪರಿಚಯ. ಅವರನ್ನು ನಾನು ಎಂ.ಎ. ವಿದ್ಯಾರ್ಥಿದೆಸೆಯಿಂದಲೂ ಬಲ್ಲೆ. ಅವರು ನನಗಿಂತ ನಾಲ್ಕು-ಐದು ವರುಷ ಚಿಕ್ಕವರು. ನ್ಯಾಯವಾಗಿ ನನ್ನ ಕಾಲಾನಂತರ ಅವರು ನನ್ನ ಮೇಲೆ ಬರೆಯಬೇಕಾಗಿತ್ತು. ಆದರೆ ಈಗ ಅವರನ್ನು ಕುರಿತು ಬರೆಯುವ ದುದೈರ್ವ ನನಗೆ ಒದಗಿರುವುದು ವಿಧಿಯ ವಿಕಟ ವಿಪರ್ಯಾಸವೇ ಸರಿ.

ನರಸಿಂಹಾಚಾರ್ಯರ ಪರಿಚಯ ನನಗೆ ಮೊದಲು ಆದುದು, ಅವರ ಹಿರಿಯ ಬಂಧುಗಳಾದ ಶ್ರೀಮಾನ್ ಡಿ. ನರಸಿಂಹನ್ ಎಂಬುವರ ಕಾರಣದಿಂದ. ನರಸಿಂಹನ್‌ರು ನನಗೆ ಹೈಸ್ಕೂಲಿನಲ್ಲಿ ಭೂಗೋಳದ ಉಪಾಧ್ಯಾಯರಾಗಿದ್ದರು. ಅವರಿಗೆ ಭೂಗೋಳವೆಂದರೆ ತುಂಬ ಪ್ರೀತಿ. ಆ ಕಾಲದಲ್ಲಿ ಭೂಗೋಳ, ಹೈಸ್ಕೂಲಿನಲ್ಲಿ ಕಡ್ಡಾಯ ವಿಷಯವಾಗಿರಲಿಲ್ಲ. ಆದುದರಿಂದ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಿಸಬೇಕೆಂಬುದು ನರಸಿಂಹನ್ ರವರ ಹಠವಾಗಿತ್ತು. ಈಚೆಗೆ ಅವರು ಅಮೇರಿಕ ಮುಂತಾದೆಡೆಗೆ ಹೋಗಿಬಂದು, ಇಲ್ಲಿ ಭೂಗೋಳವೂ ಕಡ್ಡಾಯವಾಗಿ, ಅವರು “ಪ್ರಪಂಚ ಪರಿಚಯ”ವೆಂಬ ಭೂಗೋಳ ಪುಸ್ತಕವನ್ನೂ ಬರೆದರು. ಡಿ.ಎಲ್. ನರಸಿಂಹಾಚಾರ್ಯರಿಗೆ ಅವರಲ್ಲಿ ತುಂಬ ಪ್ರೀತಿ ಮತ್ತು ಗೌರವ. ಜೊತೆಗೆ ಭೂಗೋಳದ ವಿಷಯದಲ್ಲಿ ಅವರ ಹಠ ಮತ್ತು ಇತರ ಕೆಲವು ಅವರ ವಿಚಿತ್ರ ವಿಲಕ್ಷಣ ಸ್ವಭಾವಗಳು ನಮ್ಮ ತುಂಬ ವಿನೋದಕ್ಕೆ ಪಾತ್ರವಾದ ಅಂಶಗಳಾಗಿದ್ದವು. ನರಸಿಂಹಾಚಾರ್ಯ ಮತ್ತು ನನ್ನ ಪ್ರಾರಂಭದ ಸ್ನೇಹದ ದಿನಗಳಲ್ಲಿ ತಪ್ಪದೆ, ಡಿ.ನರಸಿಂಹನ್‌ರವರ ಭೂಗೋಳ ಜ್ಞಾನ ವಾಗ್‌ಝರಿ, ಬೊಂಬಾಯಿ ಅಮೇರಿಕ ಅನುಭವಗಳು, ಅವರು ವಿದ್ಯಾರ್ಥಿಗಳಿಗೆ ಹಾಕುತ್ತಿದ್ದ ವಿಚಿತ್ರವಾದ ಪ್ರಶ್ನೆಗಳು ಇವು ನಮ್ಮ ಸತತ ವಿನೋದದ ಅಂಶಗಳಾಗಿದ್ದವು. ವ್ಯಾಸಂಗ ಮುಗಿದನಂತರ ಡಿ.ಎಲ್. ನರಸಿಂಹಾಚಾರ್ಯರು ೧೯೩೨ರಲ್ಲಿ ಮಹಾರಾಜ ಕಾಲೇಜಿನಲ್ಲಿ ಬೋಧಕರಾಗಿ ನೇಮಕಗೊಳ್ಳುವ ವೇಳೆಗೆ ನಾನು ನನ್ನ ಮೊದಲನೆಯ ಪುಸ್ತಕವಾದ “ಹಳ್ಳಿಯ ಚಿತ್ರಗಳು” ಎಂಬುದನ್ನು ಪ್ರಕಟಿಸಿದ್ದೆ (೧೯೩೦). ಹೀಗೆ ನಮ್ಮಿಬ್ಬರಿಗೂ ಸಮಾನವಾಗಿದ್ದ ಸಾಹಿತ್ಯಪ್ರೇಮ, ನಮ್ಮ ಸ್ನೇಹ ಬಂಧವನ್ನು ಇನ್ನೂ ಗಾಢವಾಗಿ ಬೆಸೆಯಿತು. ಆ ಕಾಲಕ್ಕೆ ಸ್ವಲ್ಪ ಮುಂಚೆಯೇ ಶ್ರೀಮಾನ್ ಪು.ತಿ. ನರಸಿಂಹಾಚಾರ್ಯರ ಮೂಲಕ ತೀ.ನಂ.ಶ್ರೀ ಮತ್ತು ನಂ. ಶಿವರಾಮಶಾಸ್ತ್ರಿಗಳ ಪರಿಚಯವಾಗಿತ್ತು.

(ಕನ್ನಡದ ಇಬ್ಬರು ಕಲಿಗಳಾದ ತೀ.ನಂ.ಶ್ರೀ ಮತ್ತು ಡಿ.ಎಲ್.ಎನ್. ಇಬ್ಬರೂ ಒಂದೇ ಜಿಲ್ಲೆಯವರು. ಪ್ರಾಯಶಃ ಒಂದೇ ತಾಲ್ಲೂಕಿನವರೂ ಇದ್ದಿರಬಹುದು.)

ಶ್ರೀಮಾನ್ ಡಿ.ಎಲ್. ನರಸಿಂಹಾಚಾರ್ಯರು ತುಂಬ ಸ್ನೇಹಪರರು, ಒಂದು ಸಲ ಅವರೊಂದಿಗೆ ಮೈತ್ರಿ ಏರ್ಪಟ್ಟಿತೆಂದರೆ, ದಿನ ದಿನಕ್ಕೆ ಅವರ ಸೌಜನ್ಯ, ನಿರಹಂಕಾರತ್ವ ಆತ್ಮೀಯತೆ ಇವು ನಮ್ಮಲ್ಲಿ ಆಳವಾದ ಪರಿಣಾಮವನ್ನುಂಟುಮಾಡಿ “ಈ ಬಾಳಿನ ಸೌರಭವೇ ಈ ಬಗೆಯ ಸ್ನೇಹಬಂಧನ” ಎಂಬ ಭಾವವುಂಟಾಗುತ್ತಿದ್ದಿತು. “ನನಗೆ ತುಂಬ ಸ್ನೇಹಿತರಿಲ್ಲ” ಎಂದು ಅವರೇ ಹೇಳುತ್ತಿದ್ದರು. ಸ್ನೇಹಿತರನ್ನು ಅವರು ಹುಡುಕಿಕೊಂಡು ಹೋಗುತ್ತಲೂ ಇರಲಿಲ್ಲ. ಹಾಗಂದ ಮಾತ್ರಕ್ಕೆ ಅವರು ಒಬ್ಬಂಟಿಗರಾಗಿರಲು ಇಚ್ಛಿಸುತ್ತಿದ್ದರೆಂದಲ್ಲ. ಅನವಶ್ಯಕವಾದ ಹಗುರವಾದ “ಸುಖಸಂಕಥಾವಿನೋದಗಳಲ್ಲಿ” ಅವರಿಗೆ ಹೆಚ್ಚು ಶ್ರದ್ಧೆ ಇರಲಿಲ್ಲ. ಆದರೆ ಸರಸತೆ, ರಸಿಕತೆ, ಪ್ರಸಿದ್ಧ ಕಾವ್ಯಗಳ ಶೃಂಗಾರ, ಪ್ರಕೃತಿ, ನವರಸವರ್ಣನೆ, ಶಬ್ದಾಲಂಕಾರ, ಅರ್ಥಾಲಂಕಾರ, ಸ್ವಾರಸ್ಯವಾದ ಚಾಟು ಶ್ಲೋಕಗಳು, ಸರ್ವಜ್ಞ, ಸಂಸ್ಕೃತದ ಚತುರೋಕ್ತಿಗಳು ಇವುಗಳ ಧಾಟಿಯನ್ನು ಅವರು ಹಿಡಿದರೆ; ಅವರು ಕಾವ್ಯದಿಂದ ಕಾವ್ಯಕ್ಕೆ ಭೃಂಗ ಹೂವಿನಿಂದ ಹೂವಿಗೆ ಹಾರಾಡುವಂತೆ ಕಾಲದ ಪರಿವೆಯೇ ಇಲ್ಲದೆ ಸ್ವೇಚ್ಛೆಯಾಗಿ ವಿಹರಿಸುತ್ತ ಕೇಳುವವರನ್ನು ಮುಗ್ಧಗೊಳಿಸುತ್ತಿದ್ದರು.

ಈಗ ಅನೇಕ ವರುಷಗಳ ಕೆಳಗೆ ಬೆಳ್ಳಾರ ಚಿನ್ನದ ಗಣಿಗೆ ಆಗಿನ ಅಲ್ಲಿನ ಮುಖ್ಯಾಧಿಕಾರಿ ಶ್ರೀ ಟಿ.ಪಿ. ಕೃಷ್ಣಾಚಾರ್ ಅವರ ಆಹ್ವಾನದ ಮೇಲೆ ಕೆಲವು ಮಿತ್ರರು ಗಣಿಯನ್ನು ನೋಡಲು ಹೋದೆವು. ಅವರ ಪೈಕಿ, ನನಗೆ ನೆನಪಿರುವ ಮಟ್ಟಿಗೆ ತೀ.ನಂ.ಶ್ರೀ, ಪು.ತಿ.ನ., ಡಿ.ಎಲ್.ಎನ್., ನಂ. ಶಿವರಾಮಶಾಸ್ತ್ರಿ ನಾನು ಮತ್ತಾರಿದ್ದರೂ ಸರಿಯಾಗಿ ನೆನಪಿಲ್ಲ ಇದ್ದೆವು. ಶ್ರೀಮಾನ್ ರಾಧಾಕೃಷ್ಣನ್ ಮತ್ತು ಟಿ.ಪಿ. ಕೃಷ್ಣಾಚಾರ್ಯರು ಅತಿಥಿ ಸತ್ಕಾರದ ವ್ಯವಸ್ಥೆಯನ್ನೆಲ್ಲ ಬಹುಸೊಗಸಾಗಿ ಮಾಡಿದ್ದರು. ಅಚ್ಚುಕಟ್ಟಾಗಿ ರಾತ್ರಿಯ ಭೋಜನವನ್ನು ಹೊಡೆದು ಹಾಸಿಗೆಗಳ ಮೇಲೆ ಹೊರಳಾಡುತ್ತ, ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತಿದ್ದೆವು. ಆರೋಗ್ಯ ಆಹಾರ ದೇಹ ರಕ್ಷಣೆ ಇವುಗಳ ಮಾತು ಬಂದು, ಆಯುರ್ವೇದ, ಅಲೋಪತಿ, ಹೋಮಿಯೋಪತಿ ಯುನಾನಿ ವೈದ್ಯಪದ್ಧತಿಗಳನ್ನೆಲ್ಲ ಚರ್ಚಿಸುತ್ತಿದ್ದೆವು. ಮಾತು ಸ್ವಲ್ಪ ಹಗುರವಾದ ವಿನೋದ ರೀತಿಯಲ್ಲಿ ನಡೆಯುತ್ತಿದ್ದಿತು. ಡಿ.ಎಲ್. ನರಸಿಂಹಾಚಾರ್ಯರು ಇದ್ದಕ್ಕಿದ್ದಂತೆ ಒಂದು ಹಾಸ್ಯ ಪದವನ್ನು ಹಾರಿಸಿಬಿಟ್ಟರು. ಗಾಡಾಂಧಕಾರದಲ್ಲಿ ಮಿಂಚು ಫಳಾರನೆ ಹೊಳೆಯುವಂತೆ, ಸೂರು ಹಾರಿ ಹೋಗುವಂತೆ ನಾವೆಲ್ಲ ನಕ್ಕೆವು. ಡಿ.ಎಲ್. ನರಸಿಂಹಾಚಾರ್ರು. ಯಾವಾಗಲೂ ಗಂಭೀರ ಪ್ರಕೃತಿಯವರು ಅಂತಹ ಚಮತ್ಕಾರದ ಮಾತನ್ನು ಬಗೆಯುವರೆಂದು ನಾವಾರೂ ಭಾವಿಸಿರಲಿಲ್ಲ. ನಮ್ಮ ನಿತ್ಯ ವ್ಯವಹಾರದಲ್ಲಿ, ನಾವು ಕೆಲವು ಗಂಭೀರ ಅರ್ಥದ ಸಂಸ್ಕೃತ ಮಾತುಗಳಿಗೆ, ಯಾವುದೋ ಸಣ್ಣ ಅರ್ಥವನ್ನಿಟ್ಟುಕೊಂಡಿರುತ್ತೇವೆ. ಉದಾಹರಣೆಗೆ ಬ್ರಹ್ಮಚಾರಿಗಳು ಹೋಮವನ್ನು ಮಾಡಿ, ಅಗ್ನಿಯನ್ನು “ನನಗೆ ತೇಜಸ್ಸು ಕೊಡು, ಓಜಸ್ಸು ಕೊಡು, ವರ್ಚಸ್ಸು ಕೊಡು” ಎಂದು ಕೇಳುತ್ತಾನೆ. ಇದನ್ನು “ಮತ್ತೇ ಅಗ್ನೇ” ಎಂಬ ಮಂತ್ರದಿಂದ ಪ್ರಾರಂಭಿಸುತ್ತೇವೆ. ಈಚೆಗೆ ಆ ಮಂತ್ರಕ್ಕೆ “ಕದಿಯುವುದು” ಎಂದು ಅರ್ಥವಾಗಿ “ಅವನು ಕದ್ದ” ಎನ್ನುವುದರ ಪದಗಳಾದ ಸ್ವಾಧ್ಯಾಯ (ವೇದಾಧ್ಯಯನ) ಪ್ರಜಾಪತಿ (ಬ್ರಹ್ಮ, ಸೃಷ್ಟಿಕರ್ತ) ಇವೆಲ್ಲ ಬೇರೆ ಬೇರೆ ವಿನೋದಾರ್ಥದಲ್ಲಿ ಪ್ರಯೋಗಗಳಾಗುತ್ತಿವೆ, ಇರಲಿ. ಆ ರಾತ್ರಿ, ಒಂದು ವೈದ್ಯಪದ್ಧತಿಯ ವಿಷಯವನ್ನು ನಾವಾರೋ ಹೇಳುತ್ತಿರಬೇಕಾದರೆ ಡಿ.ಎಲ್.ಎನ್. ರವರು ಅದಕ್ಕೆ ಪ್ರಾಸಬದ್ಧವಾದ ಒಂದು ಗಂಭೀರವಾದ ಸಂಸ್ಕೃತ ಶಬ್ದವನ್ನೇ ಹೇಳಿದರೂ ಆ ಪ್ರಕರಣದಲ್ಲಿ ಅದು ಚಮತ್ಕಾರಿಕ ವಿನೋದವನ್ನು ಎಬ್ಬಿಸಿತು. ಹೊರಗೆ ಎಷ್ಟೋ ಗಂಭೀರವಾಗಿ ಮುಖಮುದ್ರೆಯಿದ್ದರೂ ಸ್ವಭಾವದಿಂದ ಅವರೂ ವಿನೋದಪ್ರಿಯರು ಎಂಬುದು ಎಲ್ಲರಿಗೂ ಗೊತ್ತಾಗುತ್ತಿದ್ದಿತು. ಅನಂತರ ಮಾತು ಸಾಹಿತ್ಯ, ಕನ್ನಡ ಕಾವ್ಯಗಳ ಕಡೆಗೆ ತಿರುಗಿತು. ತೀ.ನಂ.ಶ್ರೀ ಮತ್ತು ಡಿ.ಎಲ್.ಎನ್ ಇವರಿಬ್ಬರ ನಡುವೆ ಬೇಕಾದಂತೆ ಸರಸ ವಾಗ್ವಾದ ನಡೆಯಿತು. ಮಧ್ಯೆ ಮಧ್ಯೆ ನಾವೂ ಸುಮ್ಮನಿರಬಾರದೆಂದು ಒಂದೊಂದು ಮಾತನ್ನು ಎಸೆಯುತ್ತಿದ್ದರೂ ಚರ್ಚೆ ಪೂರ್ಣವಾಗಿ ಆ ಇಬ್ಬರು ವಿದ್ವಾಂಸರಿಗೇ ಸೀಮಿತವಾಗಿತ್ತು. ಡಿ.ಎಲ್.ಎನ್. ಅವರು ಹತ್ತು ಹನ್ನೆರಡು ಹಳಗನ್ನಡ ಪದ್ಯ, ಗದ್ದಯಗಳನ್ನೇ ಬಾಯಲ್ಲಿ ಹೇಳಿಬಿಡುತ್ತಿದ್ದರು. ಅವರ ಜ್ಞಾಪಕ ಶಕ್ತಿ ಎಂದಿಗೂ ನನಗೆ ಆಶ್ಚಯ್ಯವಾಗಿಯೇ ಇದೆ. ಅದೊಂದು ಅನೌಪಚಾರಿಕ ವಾಗ್ವಾದವಾದರೂ ಎರಡು ದಿಗ್ಗಜಗಳು ಒಂದನ್ನೊಂದು ತಾಕುವಂತೆ, ಎರಡು ಕತ್ತಿವರಸೆ ವೀರರು ಒಬ್ಬರನ್ನೊಬ್ಬರು ತಮ್ಮ ಚೂಪಾದ ವಾಗ್ಬಾಣದಿಂದ ಪರೀಕ್ಷಿಸುವಂತೆ ಇತ್ತು. ಮಧ್ಯೆ ಮಧ್ಯೆ ಕತ್ತಿಗಳ ಘರ್ಷಣೆಯಿಂದ ಹೊರಡುವ ಕೆಂಡದ ಕಿಡಿಗಳಂತೆ ಅನಿರೀಕ್ಷಿತವಾದ ಕಾವ್ಯ ರತ್ನದ ಉದಾಹರಣೆಗಳು ಚಿಮ್ಮುತ್ತಿದ್ದವು. ಅದು ಪರಸ್ಪರ ಮೆಚ್ಚುಕೆ ಮತ್ತು ಪ್ರೇಮದ ವಾಗ್ಯುದ್ಧ. ಅವರಲ್ಲಿ ಯಾರೂ ಹೆಚ್ಚು ಯಾರೂ ಕಡಿಮೆ ಎಂದು ಹೇಳುವುದು ನಮಗಂತೂ ಸಾಧ್ಯವಾಗಲಿಲ್ಲ. ಆದರೆ ಅವರಿಬ್ಬರೂ ನಮಗಿಂತ ಹೆಚ್ಚು ಎಂಬುದಂತೂ ಖಚಿತವಾಯಿತು. ನನಗೆ ಹೊಳೆದುದು “ನರಸಿಂಹಾಚಾರ್ಯರದು ಆಳವಾದ ಪಾಂಡಿತ್ಯ, ಶ್ರೀಕಂಠಯ್ಯನವರದು ಸರ್ವವ್ಯಾಪಿ ವಿಶಾಲ ಪಾಂಡಿತ್ಯ” (ಆ ಮಾತುಗಳಿಗೆ ಏನಾದರೂ ಅರ್ಥವಿರಲಿ) ಕೇಳುವವರಿಗೆ ಅದೇ ಒಂದು ರಸಕವಳ.

ನರಸಿಂಹಾಚಾರ್ಯರ ಸ್ವಭಾವದಲ್ಲಿ ಅತ್ಯಂತ ಪ್ರಾಮುಖ್ಯವಾದ ಅಂಶ, ಹಳಗನ್ನಡ ಕಾವ್ಯಗಳಲ್ಲಿ ಅವರಿಗಿದ್ದ ಅಪಾರವಾದ ನಂಬಿಕೆ, ಪೂಜ್ಯತೆ ಮತ್ತು ಪ್ರೇಮ. ಕಾವ್ಯದ ಸಂಪರ್ಕ ಹೊಂದುವುದೆಂದರೆ, ಅವರಿಗೆ ಪ್ರಿಯನು ಪ್ರೇಯಸಿಯ ಸಹವಾಸವನ್ನು ಹೊಂದಿದಷ್ಟು ಉತ್ಸಾಹವೂ ರೋಮಾಂಚನವೂ ಆಗುತ್ತಿತ್ತು. ಹಸಿವು, ಕಾವ್ಯ, ಸಂಗೀತಗಳ ಆಸೆಯನ್ನೂ ಕೊನೆಗೆ ಸ್ತ್ರೀ ವಿಲಾಸ ಭೋಗಾಪೇಕ್ಷೆಯನ್ನೂ ಸಹ ಅಡಗಿಸಿ ಬಿಡುವುದೆಂದು ಸಂಸ್ಕೃತದಲ್ಲಿ ಒಂದು ಶ್ಲೋಕವುಂಟು. ಅನೇಕ ಸುಭಾಷಿತ ಶ್ಲೋಕಗಳೂ ಗಾದೆಯ ಮಾತುಗಳೂ ಸರ್ವಸಾಮಾನ್ಯರಿಗೆ ಅನ್ವಯಿಸುವ ಲೋಕರೂಢಿಯ ಮಾತುಗಳಾಗಿದ್ದು, ವಿಶೇಷ ಪ್ರಜ್ಞೆಯ ವಿದ್ವಾಂಸರೂ ಕಾರ್ಯದಕ್ಷರೂ ಸತತೋದ್ಯೋಗಿಗಳು ಏಕಾಗ್ರ ಚಿತ್ತರೂ ಆದವರು, ಆ ಮಾತುಗಳು ತಮಗೆ ಅನ್ವಯಿಸದೆಂಬುದನ್ನು ಸ್ಥಾಪಿಸುತ್ತಾರೆ. ನರಸಿಂಹಾಚಾರ್ಯರ ಕಾವ್ಯ ಸಾಹಿತ್ಯದ ಹಸಿವು ಗದ್ಯವಾಗಲೀ, ಹೊಸಗನ್ನಡವಾಗಲೀ, ಹಳಗನ್ನಡವಾಗಲೀ, ಶಾಸನ, ತಾಳೆಗರಿ, ಹಳೆಯ ಕರಡು ಪ್ರತಿಗಳು ಇವುಗಳಲ್ಲಿ ಅವರಿಗಿದ್ದ ಅತ್ಯುತ್ಸಾಹ ಸಂಭ್ರಮ ಅವರ ದೈಹಿಕ ಹಸಿವನ್ನೂ ಅಡಗಿಸಿಬಿಡುವಂತೆ ತೋರುತ್ತಿದ್ದಿತು.

ನರಸಿಂಹಾಚಾರ್ಯರ ಭಾಷಣಗಳನ್ನೂ ಪಾಠಪ್ರವಚನಗಳನ್ನೂ ಅವರ ಅನೇಕ ಶಿಷ್ಯರಂತೆ ಹೆಚ್ಚಾಗಿ ಕೇಳುವ ಯೋಗ ನನಗೆ ಒದಗಿರಲಿಲ್ಲ. ನಮ್ಮ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ೧೯೩೯ನೆಯ ಇಸವಿಯಲ್ಲಿ ಅವರು ಬಂದು ಹಾಸ್ಯ ಎಂಬ ವಿಷಯದ ಮೆಲೆ ಉಪನ್ಯಾಸ ಮಾಡಿದರು. ಆ ಭಾಷಣ ಕೇಳಲು ನಾನು ಹೋಗಿರಲಿಲ್ಲ. ಆದರೆ ಅದೇ ಊರಿನ ನವೋದಯ ಹೈಸ್ಕೂಲು ಅಧ್ಯಾಪಕರೂ ಗ್ರಂಥಕರ್ತರೂ ರಸಿಕರೂ ಆದ ಶ್ರೀ ಸಿ.ಆರ್‌. ಶ್ರೀನಿವಾಸಯ್ಯಂಗಾರ್ಯರು ನನ್ನನ್ನು ಕಂಡಾಗ ಭಾಷಣದ ವಿಷಯ ಪ್ರಸ್ತಾಪಿಸಿ ಹೀಗೆ ಹೇಳಿದರು. ಆ ಭಾಷಣ ಅತ್ಯಂತ ಅದ್ಭುತವಾಗಿತ್ತು. ಹಾಸ್ಯ, ಮನುಷ್ಯನ ಸ್ವಭಾವದಲ್ಲಿ ಹೇಗೆ ಹುಟ್ಟಿಕೊಂಡಿದೆ. ಸಾಹಿತ್ಯದಲ್ಲಿ ಹೇಗೆ ಪ್ರವೇಶಗೊಂಡಿದೆ, ಇಂದಿನವರೆಗೆ ಪ್ರಾಚೀನರು ಹೇಗೆ ಹಾಸ್ಯನಿರೂಪಣೆ ಮಾಡಿದ್ದಾರೆ. ಆಧುನಿಕ ಹಾಸ್ಯ ಪ್ರಕಾರಗಳೇನು? ಎಂಬುದನ್ನೆಲ್ಲ ಡಿ.ಎಲ್‌.ಎನ್‌ ಅತಿ ಸೊಗಸಾಗಿ ವಿವರಿಸಿದರು. ಅಂತಹ ಭಾಷಣ ನಾನು ಕೇಳಿಯೇ ಇಲ್ಲ. ಆಧುನಿಕರಲ್ಲಿ ಮುಖ್ಯವಾಗಿ ನಿಮ್ಮನ್ನೇ ಪ್ರಸ್ತಾಪಿಸಿ, ಇತರರ ಹಾಸ್ಯ ಸಾಹಿತ್ಯದೊಂದಿಗೆ ಹೋಲಿಸಿ ಸಭೆಯನ್ನೆಲ್ಲ ನಗುವಿನಲ್ಲಿ ತೇಲಾಡಿಸಿಬಿಟ್ಟರು. ಅವರೂ ಬಹಳ ವಿನೋದವಾಗಿ ಮಾತನಾಡುತ್ತಾರೆ. ಧ್ವನಿ ಸ್ವಲ್ಪ ಗಡಸು. ಆದರೆ ಜನಪ್ರಿಯವಾದ ಅಶ್ಲೀಲವಲ್ಲದ ಹಾಸ್ಯ ಪ್ರಸಂಗಗಳನ್ನು ರಸಪೂರ್ಣ ಶೈಲಿಯಲ್ಲಿ ಮಾತನಾಡಿದರು. ಆಗ ಮಸ್ತಕಾಭಿಷೇಕದ ಏರ್ಪಾಡಿಗಾಗಿ ಶ್ರೀ ಕೆ.ವಿ. ಅನಂತರಾಮರು ಶ್ರವಣಬೆಳಗೊಳಕ್ಕೆ ಬಂದಿದ್ದರು; ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಭಾಷಣಕ್ಕೆ ಎದ್ದ ಅವರು “ನಾನು ಇಂಗ್ಲೀಷಿನಲ್ಲಿ ಮಾತನಾಡಬೇಕೆಂದು ಮೊದಲು ಯೋಚಿಸಿದ್ದೆ. ಆದರೆ ನರಸಿಂಹಾಚಾರ್ಯರ ವಾಕ್‌ಝರಿಯನ್ನು ಕೇಳಿ, ಕನ್ನಡದಲ್ಲಿಯೇ ಮಾತನಾಡಬೇಕೆನಿಸಿತು” ಎಂದು ಹೇಳಿ ಚೆನ್ನಾಗಿಯೇ ಕನ್ನಡದಲ್ಲಿ ಮಾತನಾಡಿದರು. ತಮಿಳಿನ ಕೆಲವು ವಿನೋದಗಳನ್ನು ಹೇಳಿ, ಅವರೂ ಶ್ರೋತೃಗಳನ್ನು ನಗಿಸಿದರು.

ಶ್ರೀ ಶ್ರೀನಿವಾಸಯ್ಯಂಗಾರ್ಯರು ಹೇಳಿದ ಮತ್ತೊಂದು ಅಂಶ, ನರಸಿಂಹಾಚಾರ್ಯರಿಗೆ ಹೊಸ ಪೀಳಿಗೆಯ ಮತ್ತು ಯುವ ಸಾಹಿತಿಗಳಲ್ಲಿ ಇದ್ದ ಅಭಿಮಾನ, ಆದರ ಮತ್ತು ಅವರಿಗೆ ಪ್ರೋತ್ಸಾಹ ಕೊಡಲು ಅವರಿಗಿದ್ದ ಕಾತರ ಇವನ್ನು ತೋರಿಸುತ್ತದೆ. ಶ್ರೀ ಶ್ರೀನಿವಾಸಯ್ಯಂಗಾರ್ಯರ ಮಾತಿನಲ್ಲಿಯೇ ಮುಂದುವರಿಸಬೇಕಾದರೆ “ಅನಂತರ ನರಸಿಂಹಾಚಾರ್ಯರು, ಪಂಡಿತ ಕೃಷ್ಣ ಅವರ ಮನೆಯಲ್ಲಿ ಮಾತನಾಡುತ್ತಿರುವಾಗ, ಕೃಷ್ಣ, ಕೆಲವು ಕಥೆ ಚಿತ್ರಗಳನ್ನು ಬರೆದಿರುವ ಸಂಗತಿ ತಿಳಿದು ಅವನ್ನು ತೆಗೆಸಿದರು. ಕೃಷ್ಣನಿಗೆ ಸಂಕೋಚ. ಕೊನೆಗೂ ನರಸಿಂಹಾಚಾರ್ಯರು ಕೃಷ್ಣ ಬರೆದಿದ್ದ “ಮುಗುದೆಯರ ಪತ್ರಗಳನ್ನು” ಮೆಚ್ಚಿ, ತೆಗೆದುಕೊಂಡು ಹೋಗಿ ಪ್ರಬುದ್ಧ ಕರ್ನಾಟಕದಲ್ಲಿ ಅಚ್ಚು ಹಾಕಿಸಿದರು. ಕೃಷ್ಣರ ಸಾಹಿತ್ಯ ರಚನೆಗೆ ಅದೇ ಪ್ರೋತ್ಸಾಹವಾಗಿ, ಅನಂತರ ಅವರು “ನನ್ನ ಅಪ್ಸರೆ, ಗೌರಿ ಮದುವೆ” ಮುಂತಾದುವನ್ನು ಬರೆದರು.

ಕನ್ನಡ ಕನ್ನಡ ನಿಘಂಟಿನ ಸಂಪಾದಕರಾಗಿ ನರಸಿಂಹಾಚಾರ್ಯರು ಮೊದಲ ಸಲ ಬೆಂಗಳೂರಿಗೆ ಬಂದಾಗ, ಕನ್ನಡ ಸಾಹಿತ್ಯ ಪರಿಷತ್ತಿನವರು, ಪರಿಷನ್ಮಂದಿರದಲ್ಲಿ ಶ್ರೀ ಮಾಸ್ತಿಯವರ ಅಧ್ಯಕ್ಷತೆಯಲ್ಲಿ ಅವರ ಒಂದು ಉಪನ್ಯಾಸಕ್ಕೆ ಏರ್ಪಾಟು ಮಾಡಿದ್ದರು. ವಿಷಯ ಕನ್ನಡ ಸಾಹಿತ್ಯ ಚರಿತ್ರೆ. ನಾನು ಕೇಳಿದ ಡಿ.ಎಲ್‌.ಎನ್‌ರ ಮೊದಲ ಭಾಷಣ ಅದೆಯೇ. ಅಂದಿನ ಕಾಲದಲ್ಲಿ ಸಾಮಾನ್ಯವಾಗಿಯೇ ಕನ್ನಡದ ಭಾಷೆ ಸಾಹಿತ್ಯಕ್ಕೆ ಸಂಬಂಧಿಸಿದ ಭಾಷಣಗಳಿಗೆ ವಿದ್ಯಾರ್ಥಿಗಳೂ, ಹಿರಿಯರೂ ಹೆಚ್ಚಾಗಿ ಸೇರುತ್ತಿದ್ದರು. ಅದು ಡಿ.ಎಲ್‌.ಎನ್‌ ರವರ ವಯಸ್ಸಿನ ಒಳ್ಳೆ ಉತ್ಸಾಹದ ಕಾಲ. ಭಾಷಣಕಾರರು, ಅಧ್ಯಕ್ಷರು ಇಬ್ಬರೂ ಹೆಸರಾದ ವಿದ್ವಾಂಸರು. ನಾನು ಶ್ರೀಮಾನ್‌ ಪು.ತಿ. ನರಸಿಂಹಾಚಾರ್ಯರೂ ಸಕಾಲದಲ್ಲಿ ಹೋಗಿ ನಮ್ಮ ಸ್ಥಾನದಲ್ಲಿ ಕುಳಿತೆವು. ಭಾಷಣ ಸುಮುಹೂರ್ತದಲ್ಲಿ ಪ್ರಾರಂಭವಾಯಿತು. ಮೊದಮೊದಲು ಡಿ.ಎಲ್‌.ಎನ್‌ರವರು ಸ್ವಲ್ಪ ಮೃದುವಾಗಿ ಸಣ್ಣ ಧ್ವನಿಯಲ್ಲಿ ಪ್ರಾರಂಭಿಸಿದ ಹತ್ತಾರು ವಾಕ್ಯಗಳನ್ನು ಹೇಳುವುದೊಳಗಾಗಿ, ಗಂಟಲನ್ನು ಸರಿ ಮಾಡಿಕೊಂಡು, ಗಂಡು ಧ್ವನಿಯಲ್ಲಿ ಮುಂದುವರಿಸಿದರು. ಆ ಭಾಷಣ, ನನಗೆ ಇಂದಿಗೂ ಚೆನ್ನಾಗಿ ನೆನಪಿದೆ. ಅದು ಕರಪತ್ರದಲ್ಲಿ ಸೂಚಿಸಿದ್ದಂತೆ ಬರಿಯ ಕನ್ನಡ ಸಾಹಿತ್ಯ ಚರಿತ್ರೆ ಮಾತ್ರವೇ ಅಲ್ಲ, ಕನ್ನಡ ಭಾಷೆಯ ಎಲ್ಲ ಹಂತಗಳ ಬೆಳವಣಿಗೆ, ಸಾಹಿತ್ಯ ಒಂದು ಕಾಲದಲ್ಲಿ ಒಂದು ಕಾಲಕ್ಕೆ ಹೇಗೆ ಬೆಳೆಯಿತು, ಕವಿಗಳ ಸ್ವಭಾವ ರಚನಾಕ್ರಮ ಉಂಟಾದ ಮಾರ್ಪಾಡುಗಳಾವುವು? ಒಂದೇ ವಿಷಯ ವಸ್ತುವನ್ನು ಕುರಿತು (ಉದಾಹರಣೆಗೆ-ಚಂದ್ರ) ಕಾಲಕಾಲಕ್ಕೆ ಕವಿಗಳ ಭಾವನೆ ವರ್ಣನಾಕ್ರಮಗಳಲ್ಲಿ ಉಂಟಾದ ಬದಲಾವಣೆಗಳೇನು? ಬೇರೆ ಬೇರೆ ಕವಿಗಳು ಉಪಯೋಗಿಸಿರುವ ಪದಗಳಲ್ಲಿ ಸಾಧುತ್ವವೇನು? ಕನ್ನಡ ಜಾಯಮಾನಕ್ಕೆ ಹೊಂದುವ ಸಂಸ್ಕೃತ ವ್ಯಾಕರಣವೆಷ್ಟು? ಭಾಷೆಯ ಕಟ್ಟುಪಾಡು ನಿಯಮ ಮರ್ಯಾದೆಗಳಾವುವು? ಕನ್ನಡ ಲಿಪಿಯಲ್ಲಿ ಆದಿಯಿಂದ ಇಂದಿನವರೆಗೆ ಆಗಿರುವ ವ್ಯತ್ಯಾಸಗಳಾವುವು? ಇವನ್ನೆಲ್ಲ ಉಪನ್ಯಾಸಕರು ಸುಲಭವಾದ ಸರಳವಾದ ಶೈಲಿಯಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿದರು. ಪದ್ಯಗಳನ್ನು ಉದ್ಧರಿಸುವಾಗ ಇದ್ದಕ್ಕಿದ್ದಂತೆ ಅವರ ನಿಲುವು, ನಾಟಕ ಅಭಿನಯಕಾರನ ಭಂಗಿಯನ್ನು ಅನುಕರಿಸುತ್ತಿತ್ತು. ಆಗ ಅವರು ಹೇಳಿದ ಒಂದೆರಡು ಪದ್ಯಗಳು ಇಂದಿಗೂ ನನ್ನ ಜ್ಞಾಪಕದಲ್ಲಿವೆ (ಪದ್ಯಗಳನ್ನು ಕೇಳಿದ ಮೇಲೆ ಅನಂತರ ಅವರಿಂದಲೇ ಬರೆಸಿಕೊಂಡೆ).

ಕುವಲಯ ದೀರ್ಘನೇತ್ರ ಮಲರುತ್ತಿರೆ
ಮೂಡುವ ಮೀನ್ಗಳಾಕೆಯೊ |
ಪ್ಪುವ ಮುಖಪದ್ಮದೊಳ್ ಮೊಡವಿ ಮೂಡುವ
ವೋಲಿರೆ ಕಾಲಮೆಂಬ ಶಂ |

ಭುವಿನ ಶರೀರದೊಳ್ ಪುದಿನ ಗೌರಿಯ
ರಾಗಮನೊಟ್ಟಕೊಂಡು ಮೂ
ಡುವ ಮೊಲೆಯಂತೆ ಮೂಡಿದುದು
ಮೂಡಣ ದಿಕ್ಕಿನೊಳಿಂದು ಮಂಡಲಂ

ಚಂದ್ರನನ್ನು ಕುರಿತ ವರ್ಣನೆ ಭಾವನೆಗಳ ವಿಷಯದಲ್ಲಿ ಕವಿಗಳ ಮನೋಭಾವ, ಧೋರಣೆ ಕಾಲಕಾಲಕ್ಕೆ ಹೇಗೆ ಬದಲಾಯಿಸಿದೆ ಎಂಬುದನ್ನು ಪ್ರಾಚೀನ ಕವಿಗಳಿಂದ ಹಿಡಿದು ೧೮ನೆಯ ಶತಮಾನದವರೆಗೆ, ಅವರು ವಿಶಿಷ್ಟವಾದ ರೀತಿಯಲ್ಲಿ ಪರಿಶೀಲಿಸಿದರು. ಆ ಮನೋಹರವಾದ ವಿಷಯದ ಮೇಲೆ ಅವರು ಕೊಟ್ಟ ಉದಾಹರಣೆಗಳೇ, ಚಂದ್ರನಿಗೂ ಕವಿಗಳಿಗೂ ಒಂದು ಸುಂದರ ರಮ್ಯ ಶಬ್ದಮಾಲಿಕೆಯಾಗುತ್ತಿತ್ತು.

ಪರೆದಿರೆ ತಿಮಿರ ಕಚಂ ನೆರೆ
ದಿರೆ ಭಗಣಸ್ವೇದ ಜಲಕಣೌಘರಾಗಂ
ಬೊರೆದಿರೆ ಚಕೋರ ನಯನಂ
ಕರಮೆಸೆದಳ್ ನೆರೆದು ರಜನಿ, ರಜನೀಪತಿಯೊಳ್

ಪ್ರಾಚೀನ ಕವಿಗಳ ಭಂಡಾರವನ್ನೇ ಅವರು ತೆರೆದು ಪ್ರೇಕ್ಷಕರ ಎದುರಿಗೆ ಇಟ್ಟು ಬಿಟ್ಟರು. ಸಂಸ್ಕೃತದಲ್ಲಿ ಒಂದು ಶ್ಲೋಕವುಂಟು.

ಪಶ್ಯೇಯ ಮೇಕಸ್ಯ ಕುವೇ: ಕೃತಿಂ ಚೇತ್
ಸಾರಸ್ವತಂ ಕೋಶಮವೈಹಿರಿಕ್ಷಂ
ಅಂತಃ ಪ್ರವಿಶ್ಯಾಯಮವೇಕ್ಷಿತಶ್ಚೇತ್
ಕೋಣೇ ಪ್ರವಿಷ್ಟಾ ಕವಿಕೋಟ ರೇಷಾ

(ಸರಸ್ವತಿಯ ಕೋಶದ ರತ್ನಗಳನ್ನೆಲ್ಲ ಈ ಕವಿಗಳು ತೆಗೆದು ಉಪಯೋಗಿಸಿ ಬಿಟ್ಟಿದ್ದಾರೆ. ಹಾಗಾದರೆ ಸರಸ್ವತೀ ಭಂಡಾರ ಬರಿದಾಗಿರಬೇಕಷ್ಟೇ ಎಂಬುದಾಗಿ ಅಲ್ಲಿ ಹೋಗಿ ನೋಡಿದರೆ ಮೂಲೆ ಮೂಲೆಯಲ್ಲಿಯೂ ಕವಿಗಳು ರಚಿಸಿರುವ ಗ್ರಂಥರತ್ನಗಳೇ ವಿರಾಜಮಾನವಾಗಿದ್ದವು.)

ಡಿ.ಎಲ್. ನರಸಿಂಹಾಚಾರ್ಯರು ಸರ್ವಜ್ಞನ ವಿಷಯಕ್ಕೆ ಬಂದಾಗ ಅವರ ಮುಖಭಾವದಲ್ಲಿಯೇ ಮತ್ತಷ್ಟು ದೃಢತೆ ಒಂದು ವಿಧವಾದ ನಾಟಕೀಯತೆ ಆಶ್ಚರ್ಯ ಉಂಟಾಯಿತು. “ಸರ್ವಜ್ಞನೆಂಬ ಒಂದು ಅದ್ಭುತವಾದ ಶಕ್ತಿ, ಪ್ರಕಟವಾಯಿತು. ಅದೊಂದು ಪ್ರಖರವಾದ ಕಣ್ಣು ಕೊರೈಸುವಂತೆ ಹೊಳೆಯುತ್ತಿರುವ ತೀಕ್ಷ್ಣ ಖಡ್ಗ. ಸರ್ವಜ್ಞ ಒಂದು ಬಗೆಯ ಕಲ್ಕ್ಯವತಾರ. ಅವನು ಯಾರನ್ನೂ ಬಿಡುವುದಿಲ್ಲ. ಜಾತಿಮತ ಕುಲ ಬಣ್ಣ ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ಡಂಭಾಚಾರ ಪಾಷಂಡಿತನ, ಬಾಯಿವೇದಾಂತ, ಉದರ ವೈರಾಗ್ಯ, ಮೂಡನಂಬಿಕೆ, ಅಜ್ಞಾನ ಠಕ್ಕು ಎಲ್ಲವನ್ನೂ ನಿರ್ದಾಕ್ಷಣ್ಯವಾಗಿ ಕತ್ತರಿಸಿ ಸದೆ ಬಡಿಯುತ್ತಿದ್ದಾನೆ. ರಾಜ ಗುರು, ರಾಜಕರ್ಮಚಾರಿ ಪಿಶುಣ ಲೋಭಿ, ಮಾನವನ ದುರಾಸೆ ದುರ್ಬುದ್ಧಿ ಎಲ್ಲವನ್ನೂ ಗುಡಿಸಿ ಸಾರಿಸಿ ಕಂತೆಕಟ್ಟಿ ಕಡಿಲಿನಾಳಕ್ಕೆ ಎಸೆಯುತ್ತಿದ್ದಾನೆ. ಅವನು ಬೋಧಿಸಿದ್ದು ಬರಿಯ ನೀತಿಯಲ್ಲ, ಅದು ಜೀವನಧರ್ಮ. ಅಂದಿನ ಯುಗದ ಮೇಲೆ ಅವನ ಪ್ರಭಾವ ತುಂಬ ಆಯಿತು. ಇಂದಿಗೂ ಅವನ ಪ್ರಭಾವ ಇದ್ದೇ ಇದೆ. ಸರ್ವಜ್ಞನ ಅನುಕರಣೆಯೂ ಸಹ ಎಷ್ಟರಮಟ್ಟಿಗೆ ನಮ್ಮಲ್ಲಿ ಆಗಿದೆ ಎಂದರೆ – ಎಂದು ಹೇಳಿ, ರೈಲನ್ನು ಕುರಿತು ಆಧುನಿಕ ಅಜ್ಞಾತ ಕವಿ ಕಟ್ಟಿರುವ ಬಹು ಸ್ವಾರಸ್ಯವಾದ ತ್ರಿಪದಿಯೊಂದನ್ನು ಹೇಳಿದರು. (ಅದು ತುಂಬ ವಿನೋದವಾದ ಪದ್ಯ ಅದು ಸರ್ವಜ್ಞನ ಬರಿಯ ಅನುಕರಣೆಯಲ್ಲವೆ? ಎಂದು ನಾನು ಆ ತ್ರಿಪದಿಯನ್ನು ಮತ್ತೆ ಅವರನ್ನು ಕೇಳಲಿಲ್ಲ. ಬರೆದುಕೊಳ್ಳಬೇಕಾಗಿತ್ತು ಎಂದು ಈಗ ಅನಿಸುತ್ತಿದೆ) ಕೊನೆಯಲ್ಲಿ ಡಿ.ಎಲ್.ಎನ್.ರವರು ನಿರ್ವೇದದ ಈ ಉದಾಹರಣೆಯ ಸ್ವಾರಸ್ಯವನ್ನು ವಿವರಿಸಿ ಭಾಷಣವನ್ನು ಮುಗಿಸಿದರು.

ನೆರೆವುದಗಲ್ವುದರ್ಕೆ ಜನನಂ ಮರಣಕ್ಕೆ ವಿನೂತನ ಯೌವನಂ
ಜರೆಗೆ ಧನಂದರಿದ್ರತೆಗೆ ನಲ್ಕೆವಿರಾಗಪಥಕ್ಕೆ ಸತ್ಸುಖೋ
ತ್ಕರ ಮಸುಖಕ್ಕೆ ಕಾರಣಮೆಂದರಿದುಂ ಭವಸಿದ್ಧ ಪಂಜರೋ
ದರ ಗತರೇಕೆ ಚಿಂತಿಸುವರೇಕೆ ಪಲಂಬುವರೇಕೆ ನೋವರೋ

ಈ ಭಾಷಣವನ್ನು ಕೇಳಿದವರಿಗೆ, ಕನ್ನಡ ಕವಿ ಬ್ರಹ್ಮರಲ್ಲಿದ್ದ ಗೌರವ ಪ್ರೀತಿ ಹೆಚ್ಚಾಗುತ್ತಿದ್ದವು. ಗೌರವವಿಲ್ಲದಿದ್ದವರಿಗೆ ಗೌರವವುಂಟಾಗುತ್ತಿದ್ದಿತು. ಭಾಷಣ ಸಂಪೂರ್ಣವಾಗಿ ತೃಪ್ತಿಕರವಾಗಿತ್ತು. ಬಿ.ಎಂ.ಶ್ರೀ ಒಬ್ಬರು ಮಾತ್ರ ಹಾಗೆ ಮಾತನಾಡಬಲ್ಲವರಾಗಿದ್ದರು. ನರಸಿಂಹಾಚಾರ್ರು ಓದದೇ ಇರುವ ಕನ್ನಡ ಕಾವ್ಯವೇ ಇಲ್ಲ. ನೋಡದ ಶಾಸನವೇ ಇಲ್ಲ, ಅವರು ಧೂಳು ಕೊಡಹದ ತಾಳೆಗರಿಯೇ ಇಲ್ಲ. ಪ್ರೀತಿಸದ ಕನ್ನಡ ಕವಿಯೇ ಇಲ್ಲ ಎಂಬುದು ವ್ಯಕ್ತವಾಗುತ್ತಿದ್ದಿತು. ನರಸಿಂಹಾಚಾರ್ರು ಕನ್ನಡದಲ್ಲಿ ಅಂತಹ ವಿದ್ವಾಂಸರಾಗಿ ಕನ್ನಡ ಪ್ರತಿ ಮಾತಿನ ಜೀವಜೀವಾಳವನ್ನೂ ಹುಡುಕುವ ಆ ಮನೋಧರ್ಮ ಅವರಿಗೆ ಉಂಟಾಗಿದ್ದುದು ಈ ಕಾವ್ಯಪ್ರೇಮ ಕಾವ್ಯಾನುಭವ ಮತ್ತು ರಸಿಕತೆಯಿಂದಲೇ ಎಂಬುದರಲ್ಲಿ ಸಂದೇಹವಿರಲಿಲ್ಲ. “ಪ್ರತಿಯೊಂದು ಮಾತಿಗೂ ಜೀವವಿದೆ ಅದರ ಕೈಕಾಲು ಮುರಿಯಬಾರದು, ವಿರೂಪ ಗೊಳಿಸಬಾರದು” ಎಂದು ಅವರು ಹೇಳುತ್ತಿದ್ದರು. ಒಬ್ಬ ಮನುಷ್ಯ ವಿಮರ್ಶಕನೂ ಶೋಧಕನೂ ಕವಿಚರಿತ್ರಕಾರನೂ ವ್ಯಾಕರಣ ಛಂದಸ್ಸು ಇವುಗಳ ಅಧ್ಯಯನಕಾರನೂ ವೈಜ್ಞಾನಿಕ ಮನೋಭಾವವುಳ್ಳವನೂ ಆಗಬೇಕಾದರೆ, ಅವನು ಎಲ್ಲಕ್ಕಿಂತ ಮೊದಲಾಗಿ ಸಾಹಿತಿಯೂ ರಸಜ್ಞನೂ ಆಗಿರಬೇಕೆಂಬುದಕ್ಕೆ ಅವರು ಒಳ್ಳೆಯ ಉದಾಹರಣೆಯಾಗಿದ್ದರು.

ಮರುದಿನ ನಾನು ಪು.ತಿ.ನ ಅವರೂ ಡಿ.ಎಲ್.ಎನ್.ರ ಮನೆಗೆ ಊಟಕ್ಕೆ ಹೋದೆವು. (ಆಗ ಅವರು ಶಂಕರಮಠದ ಎದುರು ಮನೆಯಲ್ಲಿದ್ದರು.) ಸುಖಭೋಜನವಾಯಿತು. ಡಿ.ಎಲ್.ಎನ್., ಪು.ತಿ.ನ ಇಬ್ಬರೂ ಬೇರೆ ಬೇರೆ ಕವಿಗಳ ಕಾವ್ಯಗಳ ಮೌಲ್ಯಗಳನ್ನು ಕುರಿತು ಚರ್ಚಿಸುತ್ತಿದ್ದರು. ಕಾವ್ಯರಸ ಎಂದರೇನು ಎಂದೆಲ್ಲ ವಾಗ್ವಾದ. ನಾನೂ ಏನಾದರೂ ಹೇಳಬೇಕೆಂದು “ಕಾವ್ಯರಸ ಮಾಧುರ್ಯಂ ಶಂಕರೋವೇತ್ತಿವಾನವಾ” (ಕಾವ್ಯದ ಸ್ವಾರಸ್ಯ ಶಂಕರನಿಗೆ ತಿಳಿದಿದೆ. ಅಥವಾ ಅವನಿಗೂ ಇಲ್ಲ) ಎಂದು ಹೇಳಿ ನರಸಿಂಹಾಚಾರ್ಯದ್ವಯರನ್ನು ಕಾವ್ಯ ಮಾಧುರ್ಯ ಸ್ವಾರಸ್ಯದ ಬಿಸಿಲುಗುದರೆ ಬೇಟೆಗೆ ಬಿಟ್ಟು ನಿಜವಾದ ಭೋಜನ ರಸಮಾಧುರ್ಯವನ್ನು ತೃಪ್ತಿಯಾಗಿ ಸವಿದಿದ್ದುರಿಂದ, ಆಕರ್ಷಣೀಯವಾದ ಹಗಲು ನಿದ್ರಾದೇವಿಯ ಸೆರಗಿನಲ್ಲಿ ಹುದುಗಿಕೊಂಡೆ.

ಡಿ.ಎಲ್.ಎನ್.ರವರು ಪ್ರಾಚೀನ ಕವಿಗಳನ್ನೂ ಅವರ ಕಾವ್ಯಗಳನ್ನೂ ಪೂರ್ಣ ಮನಸ್ಸಿನಿಂದ ಪ್ರೀತಿಸುತ್ತಿದ್ದುದರಿಂದ, ಅವರಿಗೆ ಆಧುನಿಕ ಕಾವ್ಯಸಾಹಿತ್ಯಗಳ ವಿಷಯದಲ್ಲಿ ತಿರಸ್ಕಾರವಾಗಲೀ ಅಲಕ್ಷ್ಯವಾಗಲಿ ಇದ್ದಿರಬಹುದೆಂದು ಭಾವಿಸಬೇಕಾದ್ದಿಲ್ಲ. ನರಸಿಂಹಾಚಾರ್ಯರ ಸ್ವಭಾವದಲ್ಲಿ ಆ ಅಂಶ ಇರಲಿಲ್ಲ. “ಪ್ರಾಚೀನ ಕವಿಗಳು ವಿಷಯವನ್ನು ಚೆನ್ನಾಗಿ ಅಭ್ಯಾಸ ಮಾಡಿ, ಭಾಷಾಮರ್ಯಾದೆಗೆ ಕಟ್ಟುಬಿದ್ದು ಪ್ರತಿಯೊಂದು ಮಾತನ್ನೂ ಪೂರ್ಣವಾಗಿ ತೂಗಿ ಬಹುಕಾಲ ವ್ಯವಸಾಯ ಮಾಡಿ ಬರೆದಿದ್ದಾರೆ. ಆಧುನಿಕರು ಅಷ್ಟು ಶ್ರಮವನ್ನು ವಹಿಸುವುದಿಲ್ಲ. ಅವರಿಗೆ ಅಷ್ಟು ಸಹನೆ ಸಾವಧಾನಗಳಿಲ್ಲ. ಅನೇಕ ಹೊಸಭಾವನೆಗಳು ಆಧುನಿಕರಿಗೆ ಸ್ಫುರಿಸಿದರೂ ಅದನ್ನು ಆಕರ್ಷಣೀಯವಾದ ರೀತಿಯಲ್ಲಿ ಹೇಳುವ ಶಬ್ದ ಸಂಪತ್ತು ಅವರಿಗೆ ಇಲ್ಲ. ತಾವು ಹೇಳಿದ್ದೇ ಕಾವ್ಯವೆಂಬ ಸ್ವಯಂ ಆಚಾರ್ಯ ಪಟ್ಟ ಅವರದು, ಯಾವುದೇ ವಿಷಯ ಹಳೆಯ ಕವಿ ಬರೆದಿರುವುದಕ್ಕೂ ಹೊಸ ಕವಿ ಬರೆದಿರುವುದಕ್ಕೂ ತೂಗಿ ನೋಡಿ ಅವರಲ್ಲಿ ಹೆಚ್ಚು ಅಚ್ಚುಕಟ್ಟು ಕಾಣುತ್ತೆ. ಇವರಲ್ಲಿ ಅಲಕ್ಷ್ಯ ಕಾಣುತ್ತೆ. ಹೊಸಬರು ಕಾವ್ಯಮೀಮಾಂಸೆ ಕಾವ್ಯತತ್ವ ಇವನ್ನು ಇನ್ನೂ ಆಳವಾಗಿ ಹೆಚ್ಚಾಗಿ ಅಭ್ಯಾಸ ಮಾಡಬೇಕು, ತೀ.ನಂ.ಶ್ರೀ ಬರೆದಿರುವ ಸರ್ವಸಾಮಾನ್ಯರಿಗೂ ಅರ್ಥವಾಗುವ ಕಾವ್ಯಮೀಮಾಂಸೆಯನ್ನೂ ಸಹ ಅನೇಕ ಆಧುನಿಕ ಕವಿಗಳು ಓದಿದ್ದಾರೆಂದು ನನಗೆ ಅನಿಸುವುದಿಲ್ಲ. ಆಧುನಿಕರಲ್ಲಿ ಭಾವನಾ ಶ್ರೀಮಂತಿಕೆ ಇದೆ. ಇವರು ಬರೆಯುತ್ತಿರುವುದು ಇಂದಿನವರಿಗಾಗಿ, ಆದರೆ ಭಾಷೆಯ ಪುರುಳು ವ್ಯಾಕರಣ ಛಂದಸ್ಸಿನ ಕಟ್ಟುಪಾಡು ಯಾವುದೂ ಇಲ್ಲದೆ “ಸ್ವೇಚ್ಛಾಚಾರ”ದಿಂದ, ಸೊಗಸಾದ ಭಾವನೆಗಳನ್ನು ಜನ ಅರ್ಥ ಮಾಡಿಕೊಳ್ಳಲಾರದೆ ಅವು ವ್ಯರ್ಥವಾಗುತ್ತವೆ. ಹಿಂದಲವರು ಪ್ರಯತ್ನಿಸದ ಛಂದಸ್ಸೇ ಇಲ್ಲ. ಅವನ್ನು ಬಿಟ್ಟು, ನಾವು ಹೋಗುವುದೂ ಕಷ್ಟ. ಅವುಗಳಲ್ಲಿಯೇ ಅಲ್ಪಸ್ವಲ್ಪ ಬದಲಾವಣೆ ಮಾಡಿ ನಮ್ಮ ಕಾವ್ಯಕ್ಕೆ ಅಳವಡಿಸಿಕೊಳ್ಳಬಹುದು. ಅತ್ಯುತ್ತಮ ಆಧುನಿಕ ಕನ್ನಡ ಕವಿಗಳು ಹೀಗೆ ಮಾಡುತ್ತಲೇ ಇದ್ದಾರೆ” ಎನ್ನುತ್ತಿದ್ದರು. ಅವರಿಗೆ ಖುಷಿ ಬಂದಾಗ ಹರಿಹರ, ಜನ್ನ, ನೇಮಿಚಂದ್ರ ರನ್ನ ಇವರ ಯಾವುದಾದರೂ ಸ್ವಾರಸ್ಯವಾದ ಪದ್ಯವೃತ್ತವನ್ನು ಹೇಳಿ “ಎಲ್ಲಯ್ಯ ಇಂಥದ್ದು ತೋರಿಸಯ್ಯ ನಿನ್ನ ಆಧುನಿಕರಲ್ಲಿ” ಎನ್ನುವರು. ನಾನು ವಿನೋದದಿಂದ “ನಿಮ್ಮದೆಲ್ಲ ಹಳೆ ಪುರಾಣವೇ ಆಯಿತು. “ಮೊಗಮಂ ತಾವರೆ ಕಣ್ಣನುತ್ಪಲದಳಂ ಧಮ್ಮಿಲ್ಲಮಂ ಸೋಗೆ” ಇವನ್ನೆಲ್ಲ ಇಷ್ಟು ದಿನದಿಂದ ಓದಿದ್ದಾಯಿತು. ಈ ಆಧುನಿಕ ಕವಿ ಈ ಹೊಸಭಾವ ಹೇಳಿದ್ದಾನಲ್ಲ? ಇದನ್ನು ಪ್ರಾಚೀನರು ಹೇಳಿರುವುದು ಜ್ಞಾಪಕವಿದೆಯೆ? ಎನ್ನುವೆ. ಅವರು “ಹೌದು ಇದು ಹೊಸ ಭಾವನೆ. ನಮ್ಮ ಜನಕ್ಕೆ ಬೇಕು. ಇನ್ನೂ ಚೆನ್ನಾಗಿ ಹೇಳಿದರೆ ಚೆನ್ನಾಗಿ ಹಿಡಿಸುತ್ತೆ” ಎನ್ನುವರು. ನಮ್ಮ ಕಾಲದ ಕವಿಗಳ ಶಕ್ತಿಯಲ್ಲಿಯೂ ಅವರಿಗೆ ಪೂರ್ಣವಾದ ನಂಬಿಕೆ ಇತ್ತು.

ಒಂದು ಸಲ ಶ್ರೀಮಾನ್ ಪು.ತಿ. ನರಸಿಂಹಾಚಾರ್ಯರು ಹರಿಹರನನ್ನೂ ಇನ್ನೂ ಇತರೆ ಪ್ರಾಚೀನ ಕವಿಗಳನ್ನೂ ಓದಿದನಂತರ “ಹರಿಹರನಲ್ಲಿ ಏನು ಭಾವನೆಗಳಯ್ಯಾ ಏನು ವರ್ಣನೆ ಏನು ಭಕ್ತಿ ಆವೇಶ! ಆ ದಿವ್ಯ ತೇಜಸ್ಸಿನೆದುರಿಗೆ ನಮ್ಮ ಬಾಯಿನಲ್ಲಿ ಮಾತೇ ಹೊರಡುವುದಿಲ್ಲ. ಹೇಳಬೇಕಾದುದನ್ನೆಲ್ಲ ಅವನು ಎಲ್ಲ ರೀತಿಯಿಂದಲೂ ಹೇಳಿ ಬಿಟ್ಟಿದ್ದಾನೆ. ನಾನೇನಾದರೂ ಬಹುಶಃ ಮೊದಲು ಹರಿಹರನನ್ನು ಓದಿದ್ದರೆ ಕವಿತೆಯನ್ನೇ ಬರೆಯುತ್ತಿರಲಿಲ್ಲವೇನೋ” ಎಂದರು. ಡಿ.ಎಲ್.ಎನ್. ರವರು “ಹಾಗಾದ ಮೇಲೆ ಅವನು ಓದದ್ದೇ ಒಳ್ಳೆಯದಾಯಿತು. ಅವನು ಪ್ರಾಚ್ಯ ಹರಿಹರ, ಆಧುನಿಕ ಹರಿಹರನೂ ಬೇಕು” ಎಂದರು. ಒಂದು ಸಲ ಪುಟ್ಟಪ್ಪನವರ ವಿಚಾರ ಮಾತನಾಡುತ್ತ “ಆ ಮನುಷ್ಯ ಗಟ್ಟಿಗನಯ್ಯಾ ತನ್ನ ಮಹತ್‌ಗೆ ಅನುಗುಣವಾದ ವಿಷಯವನ್ನೇ ಎತ್ತಿಕೊಂಡು ರಾಮಾಯಣವನ್ನೇ ಬರೆದ. ಶ್ರೀ ರಾಮಚರಿತ್ರೆಯಿಂದ ಅವನ ಕಾವ್ಯಕ್ಕೆ ಸಹ ಒಂದು ಅಪೂರ್ವಶೋಭೆ ಬಂದಿತು. ಅವನ ಕಾವ್ಯದ ಕಲಶವೇ ಆದಾಯಿತು. ರಾಮಾಯಣ ಧ್ಯಾನ ಶ್ಲೋಕದಲ್ಲಿ ಹೇಳಿರುವಂತೆ ಶ್ರೀ ರಾಮನಾಮವೇ ವರಕವಿಗಳ ಮಾತಿಗೆ ವಿಶ್ರಾಮ ಸ್ಥಾನ (ವಿಶ್ರಾಮ ಸ್ಥಾನಮೇಕಂ ಕವಿವರ ವಚಸಾಂ) ಅಂದರೆ ಅದನ್ನು ಹೇಳಿದ ಮೇಲೆ ಮಾತು ತನ್ನ ಕಾರ್ಯವನ್ನು ಸಾಧಿಸಿತು” ಎಂಬ ಧನ್ಯತೆ ಕವಿಗೆ ಉಂಟಾಗುತ್ತದೆ. ನಮ್ಮ ದೇಶದ ಇಂದಿನ ಸಾಮಾಜಿಕ ಪರಿಸರದಲ್ಲಿ ಒಬ್ಬ ಹಳ್ಳಿಯ ವ್ಯವಸಾಯ ಕುಟುಂಬದಲ್ಲಿ ಇಂಥವನು ಜನಿಸುವುದೆಂದರೆ ಅದು ಪರಮಾತ್ಮನ ಕರುಣೆಯೇ ಹೊರತು ಬೇರೆ ಅಲ್ಲ. ವಾಲ್ಮೀಕಿ ರಾಮಾಯಣ ಎಷ್ಟೇ ಸುಲಭವಾಗಿದೆ ಎಂದರೂ ಅದನ್ನು ಎಲ್ಲ ಕನ್ನಡಿಗರೂ ಓದಲಾರರು. ಆದರೆ ಕನ್ನಡ ಕಾವ್ಯ ಎಷ್ಟೇ ಕಷ್ಟವಾದರೂ, ಸಂಸ್ಕೃತದಷ್ಟು ಕಷ್ಟವಲ್ಲ. ರಾಮಾಯಣ ದರ್ಶನವನ್ನು ಕನ್ನಡಿಗರೆಲ್ಲ ತೆಗೆದುಕೊಂಡು ಓದುತ್ತಾರೆ. ಇದೇ ಕನ್ನಡ ನಾಡಿನ ವೇದವಾದರೂ ಆಶ್ಚರ್ಯವಿಲ್ಲ. ಆದರೆ ನಮ್ಮ ಜನದ ಯೋಗ್ಯತೆಗೆ ಗ್ರಂಥದ ಬೆಲೆ ಹೆಚ್ಚು” ಎಂದರು.

ಶಿವಮೊಗ್ಗ ಸಾಹಿತ್ಯ ಸಮ್ಮೇಳನಕ್ಕೆ ಡಿ.ಎಲ್.ಎನ್. ರವರೂ ನಾನು ಒಟ್ಟಿಗೆ ಹೋದೆವು. ಮೈಸೂರಿನಿಂದ ಬಂದ ರೈಲಿನಲ್ಲಿ ನಾನು ಅವರನ್ನು ಹಾಸನದಲ್ಲಿ ಸೇರಿಕೊಂಡೆನು. ಅಧ್ಯಕ್ಷರಾದ ಬೇಂದ್ರೆಯವರ ವಿಷಯಕ್ಕೆ ಸಾಧಾರಣವಾಗಿಯೇ ನಮ್ಮ ಮಾತು ಹರಿಯಿತು. ಹಾಗೆಯೇ ಅವರು ಮಾತನಾಡುತ್ತ “ಬೇಂದ್ರೆಯವರನ್ನು ಹೀಗೆ ಗೌರವಿಸಿದುದು ತುಂಬ ಸೂಕ್ತವಾಗಿದೆ. ಬೇಂದ್ರೆ ಸಾಹಿತ್ಯ ಸಾಮ್ರಾಜ್ಯದ ಜನತಾ ಕವಿ. ನಿಮಗೆ ಒಪ್ಪಿಗೆಯಾದರೆ ಅವರು ಆಧುನಿಕ ಕವಿ ಬಹುಶಃ ಇವರಿಂದ ಕನ್ನಡ ಕವನ, ನಾಡಿನ ಮೂಲೆಮೂಲೆಯಲ್ಲಿ ಪ್ರಚಾರವಾದಷ್ಟು ಮತ್ತಾರಿಂದಲೂ ಆಗಿಲ್ಲ, ಇದು ಬೇಂದ್ರೆಯ ಕವಿತೆ ಎಂಬುದೂ ಸಹ ಗೊತ್ತಿಲ್ಲದೆ ಜನ “ಕುಣಿಯೋಣು ಬಾರ ತುತ್ತಿನ ಚೀಲ, ಮೂವತ್ತಮೂರು ಕೋಟಿ” ಇವುಗಳನ್ನು ಹಾಡುತ್ತಾರೆ. ಬೇಂದ್ರೆ, ಪುಟ್ಟಪ್ಪ, ಪಿ.ಟಿ. ನರಸಿಂಹಾಚಾರ್ಯ ಹೊಸಗನ್ನಡ ಹಳಗನ್ನಡ ಎರಡಕ್ಕೂ ಸೇರಿದವರು. ಸತತ ಪರಿಶ್ರಮದಿಂದ ಇಂಥವರ ಸಂಖ್ಯೆ ಕನ್ನಡನಾಡಿನಲ್ಲಿ ನೂರಾರು ಸಾವಿರಾರು ಬೆಳೆಯುವುದು ಕಷ್ಟವಿಲ್ಲ” ಎಂದರು. ಸಮ್ಮೇಳನವನ್ನು ಶಿವಮೊಗ್ಗ ಕರ್ಣಾಟಕ ಸಂಘದವರು ಏರ್ಪಡಿಸಿದ್ದಂತೆ ನೆನಪು. ಅಧ್ಯಕ್ಷರ ಮೆರವಣಿಗೆಗಾಗಿ ಒಂದು ಹಂಸವಾಹನನ್ನು ಏರ್ಪಡಿಸಿದ್ದರು. ಅಂದರೆ ಮರದಲ್ಲಿ ಒಂದು ಹಂಸಪಕ್ಷಿಯನ್ನೇ ಮಾಡಿ ಅಲಂಕರಿಸಿ ಅದನ್ನು ತೆರೆದ ಮೋಟಾರಿನಲ್ಲಿಟ್ಟು ಅದರ ಮೇಲೆ ಅಧ್ಯಕ್ಷರನ್ನು ಕೂರಿಸಿದ್ದರು. ಮೆರವಣಿಗೆ ನಡೆದುದು ಸಂಜೆ. ನಿರೀಕ್ಷಿಸಿದುದಕ್ಕಿಂತ ಮೆರವಣಿಗೆ ಸಾವಕಾಶವಾಗಿ ಪ್ರಾರಂಭವಾದುದರಿಂದ ದೀಪದ ವ್ಯವಸ್ಥೆ ಸರಿಯಾಗಿರಲಿಲ್ಲ. ಜನತೆ, ಅಪಾರ ಸಂಖ್ಯೆಯಲ್ಲಿ ಸೇರಿತ್ತು. ನಾವೆಲ್ಲ ನಡೆದುಕೊಂಡೇ ಮೆರವಣಿಗೆಯ ಹಿಂದೆ ಹೋಗುತ್ತಿದ್ದೆವು. ಕೆಲವು ಜಾಗದಲ್ಲಿಯಂತೂ ಗಾಡಾಂಧಕಾರವಾಗಿ ಒಬ್ಬರಮುಖ ಒಬ್ಬರಿಗೆ ಕಾಣಿಸದಷ್ಟು ಕಪ್ಪು ಕವಿದಿತ್ತು. ಮೋಟಾರಿನ ದೀಪವೇ ನಮಗೆ ಏಕೈಕ ಕಣ್ಣು ಆಗಿತ್ತು. ಡಿ.ಎಲ್.ಎನ್. ರವರು “ಇಂತಹ ಗಾಡಾಂಧಕಾರದಲ್ಲಿಯೂ ಬೇಂದ್ರೆಯವರದೊಂದೇ ಬೆಳಕು” ಎಂದರು.

ನಾನು ಡಿ.ಎಲ್.ಎನ್ ರವರ ಎರಡು ಭಾಷಣಗಳನ್ನೇ ಕೇಳಿದ್ದು. ಮೊದಲನೆಯದರ ವಿಚಾರ ಈಗಾಗಲೇ ಹೇಳಿದ್ದಾಗಿದೆ. ಎರಡನೆಯದು ಸ್ವಾತಂತ್ರ್ಯಾ ನಂತರದ ಈಚಿನ ಕಾಲದಲ್ಲಿ ಬೆಂಗಳೂರು ಲಾ ಕಾಲೇಜು ಯೂನಿಯನ್‌ನಲ್ಲಿ ಡಿ.ಎಲ್.ಎನ್ ರವರು ಅಂದಿನ ಭಾಷಣಕಾರರೂ, ನಾನು ಅಧ್ಯಕ್ಷನೂ ಆಗಿದ್ದೆವು. ಮೇಧಾವಿಯೂ ಸರಸಿಯೂ ಸಾಹಿತಿಯೂ ಆದ ಒಬ್ಬ ಮನುಷ್ಯ ಹೇಗೆ ಯಾವ ಸಂದರ್ಭಕ್ಕೂ ಅನುಗುಣವಾದ ಮಾತುಗಳನ್ನು ಆಡಬಲ್ಲನೆಂಬುದಕ್ಕೆ ಅಂದು ನರಸಿಂಹಾಚಾರ್ಯರೇ ಸಾಕ್ಷಿಯಾಗಿದ್ದರು. ತಮ್ಮ ಭಾಷಣದಲ್ಲಿ ಅವರು ಪ್ರಾಚೀನ ಕಾಲದಿಂದ ಅಂದರೆ ಚಂದ್ರಗುಪ್ತನ ಕಾಲದಿಂದ, ಭಾರತದಲ್ಲಿ ನ್ಯಾಯ ನಿರ್ವಹಣೆಯ ಕಾರ್ಯದಲ್ಲಿ ಇಂದಿನ ವಕೀಲರು ಮಾಡುವ ನ್ಯಾಯ ನಿರ್ವಹಣೆಯ ಕಾರ್ಯದಲ್ಲಿ, ಇಂದಿನ ವಕೀಲರು ಮಾಡುವ ಕೆಲಸಗಳಿಗೆ ಸಮನಾದ ಕೆಲಸವನ್ನು ಮಾಡುತ್ತಿದ್ದ ಒಂದು ವಿಶಿಷ್ಟವಾದ ವರ್ಗವಿದ್ದಿತೆಂದು ತಿಳಿಸಿ ನ್ಯಾಯವಾದಿಗಳ ಹೊಣೆಗಾರಿಕೆಯನ್ನೂ ಅದರಲ್ಲಿಯೂ ಪ್ರಜಾಪ್ರಭುತ್ವದಲ್ಲಿ ಅವರ ಸ್ಥಾನವನ್ನೂ ಪ್ರಮುಖವಾಗಿ ಪ್ರಸ್ತಾಪಿಸಿದರು. ನ್ಯಾಯವಾದಿಗಳನ್ನು ಕುರಿತ ಅನೇಕ ವಿಶೇಷ ಮತ್ತು ವಿನೋದ ಸಂಗತಿಗಳನ್ನು ಅವರು ನಿರೂಪಿಸಿದರು. ತಪ್ಪಿತಸ್ತನಾದ ಕಕ್ಷಿಗಾರ ವಕೀಲರು “ನಾನು ನನ್ನ ಕಕ್ಷಿಗಾರನಿಗಾಗಿ ನ್ಯಾಯವನ್ನು ಹೊರತು ಮತ್ತೇನನ್ನೂ ಹೆಚ್ಚಿಗೆ ಬೇಡುವುದಿಲ್ಲ” ಎಂದು ನ್ಯಾಯಾಧಿಪತಿಯ ಎದುರು ಅನೇಕ ಗಂಟೆಗಳು ವಾದಿಸಿದ ನಂತರ, ನ್ಯಾಯಾಧಿಪತಿಯು ಅವನಿಗೆ ಶಿಕ್ಷೆಯನ್ನೇ ವಿಧಿಸಿದನು. ವಕೀಲನು ಕಕ್ಷಿಗಾರನಿಗೆ “ನಾನು ಮಾಡುವುದನ್ನೆಲ್ಲ ಮಾಡಿದೆ. ಆದರೆ ನಿನಗೆ ಶಿಕ್ಷೆಯೇ ಆಯಿತು ತುಂಬ ವ್ಯಸನವಾಗಿದೆ” ಎನ್ನಲು ಕಕ್ಷಿಗಾರನು ನಿರ್ವಿಕಾರನಾಗಿ “ನ್ಯಾಯವನ್ನೇ ಕೊಡಿ ನ್ಯಾಯವನ್ನು ಮಾತ್ರವೇ ಕೊಡಿ ಎಂದು ನೀವು ಅಷ್ಟು ಒತ್ತಾಯವಾಗಿ ಹೇಳುತ್ತಿರಬೇಕಾದರೆ ಅವರು ಇನ್ನೇನು ತಾನೇ ಮಾಡಬಲ್ಲರು!” ಎಂದನು. ಇಂತಹ ಸರಸ ಕಥೆಗಳ ಕೊನೆಯಲ್ಲಿ ನರಸಿಂಹಾಚಾರ್ಯರು “ಕಾನೂನು ಪುಸ್ತಕಗಳನ್ನೆಲ್ಲ ವಕೀಲರು ಕನ್ನಡಕ್ಕೆ ತುರ್ಜುಮೆ ಮಾಡಲು ಸಹಾಯ ಮಾಡಬೇಕು. ನ್ಯಾಯಸ್ಥಾನದಲ್ಲಿ ಸೊಗಸಾದ ಕನ್ನಡ ವಾಗ್‌ಝರಿಯಲ್ಲಿ ವಕೀಲರು ವಾದಿಸಬೇಕು. ಬಡವರಿಗೆ ಉಚಿತವಾಗಿ ಸೇವೆ ಮಾಡಬೇಕು” ಎಂದು ಭಾಷಣವನ್ನು ಮುಗಿಸಿದರು. ಅವರ ಭಾಷಣವನ್ನು ಕೇಳಿದವರಾರಿಗೂ ಅವರು ಬರಿಯ ಪ್ರಕಾಂಡ ಪಂಡಿತರು ಮಾತ್ರ, ವೈಯಾಕರಣಿಮಾತ್ರ, ತಾಳೆಗರಿ, ಓಲೆಪುಸ್ತಕ ಧೂಳು ಹೊಡೆದ ಪ್ರಾಚೀನ ಕಡತ, ಕರಡು ಕುರುಬರಟ್ಟುಗಳ ಅನ್ವೇಷಕ ಮಾತ್ರ ಎಂದು ತೋರುತ್ತಿರಲಿಲ್ಲ. ಅವರ ವ್ಯವಹಾರಜ್ಞಾನವೂ ಆಧುನಿಕ ಪ್ರಜ್ಞೆಯೂ ಅನ್ಯಾದೃಶವಾಗಿದ್ದವು.

ಕವಿತೆಗಳನ್ನು ಬರೆಯುವ ಗೀಳು ನರಸಿಂಹಾಚಾರ್ಯರಿಗೆ ಉಂಟಾಗಿದ್ದರೆ ಅವರು ಈ ಯುಗದಲ್ಲಿಯೂ ಕಂದವೃತ್ತಗಳಲ್ಲಿಯೇ ಬರೆಯುತ್ತಿದ್ದರೆಂದು ಹೇಳಬಹುದು. ನನ್ನ ಮಗನಿಗೆ ಬ್ರಹ್ಮೋಪದೇಶವಾದಾಗ ಅವರು ಕಂದಲ್ಲಿಯೇ ಒಂದು ಆಶೀರ್ವಾದವನ್ನು ಬರೆದು ಕಳುಹಿಸಿದ್ದರು.

ಅವರು ಕಂದವನ್ನು ಮಾತ್ರ ಬರೆದಿರುವುದಲ್ಲದೆ ಅದರಲ್ಲಿ ರಳ ಕುಳವನ್ನೂ ಸಹ ಉಪಯೋಗಿಸಿದ್ದಾರೆ. ನನ್ನ ಮಗನ ಹೆಸರು ಸೀತಾರಾಮ. ಹೆಸರಿನಲ್ಲಿಯೇ ಒಂದು ಚಮತ್ಕಾರವನ್ನು ಮಾಡಿದ್ದಾರೆ.

ಸೀತಾರಾಮಂ ನವವಟು
ಸೀತಾರಾಮಂಗೆ ಮಾೞ್ಕಿಶುಭಮಂ ನಲವಿಂ
ದಾತಂ ವರ್ಧಿಕೆ ಮಗನೆನ
ಲೀಲತೆ ಮಗನೆಂದು ಪೊಗಟ್ಟೆ ನೋೞ್ಪವರೆಲ್ಲಂ

ಈಚೆಗೂ ಇನ್ನೊಂದು ಮಂಗಳಮುಹೂರ್ತಕ್ಕೆ ಮತ್ತೊಂದು ಕಂದವನ್ನೇ ಕಳುಹಿಸಿದ್ದರು. ಅಂದರೆ ಅವರ ಪ್ರೀತಿಯೂ ಒಲವೂ ಆ ವಿಧವಾದ ಛಂದಸ್ಸಿಗೇ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಆಧುನಿಕ ಸಾಹಿತ್ಯವೆಲ್ಲ ಆ ಛಂದಸ್ಸಿನಲ್ಲಿ ಇಲ್ಲ ಎಂದು ಅದನ್ನು ತಿರಸ್ಕರಿಸಬೇಕೆಂದು ಅವರು ಎಂದಿಗೂ ತಿಳಿದುಕೊಂಡವರಲ್ಲ. ಆಧುನಿಕರಲ್ಲಿ ಸಹ ಅವರು ಎಲ್ಲ ಒಳ್ಳೆಯ ಗದ್ಯಪದ್ಯಗಳನ್ನೂ ಮನಃಪೂರ್ವಕ ಒಪ್ಪಿದರು. ಕಾರಂತರ ಮರಳಿಮಣ್ಣಿಗೆ, ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ ಇನ್ನೂ ಕೆಲವು ಆಧುನಿಕ ಬಿಡಿ ಕವನಗಳು, ಅವೆಲ್ಲ ಅವರಿಗೆ ಮೆಚ್ಚುಗೆ ಮೆಚ್ಚಿದುದನ್ನು ಬಾಯ್ತುಂಬ ಹೊಗಳುತ್ತಲೂ ಇದ್ದರು. ಅವರು ಎಲ್ಲದರಲ್ಲಿಯೂ ಗುಣಗ್ರಾಹಿ, ಸರಸಿಗಳು ಒಂದು ಸಂದರ್ಭದಲ್ಲಿ ನಾನು ಬರೆದಿದ್ದ ಭಾರತ ಭಾಗ್ಯ ವಿಧಾತ ಮತ್ತು ಊರ್ವಶಿ ಎಂಬ ಎರಡು ಪುಸ್ತಕಗಳನ್ನೂ ನೋಡಬಯಸಿದರು. ಕಳುಹಿಸಿಕೊಟ್ಟೆ ತುಂಬ ಸಂತೋಷಪಟ್ಟರು. ಅವರ ಸ್ವಂತ ಲೇಖನ ಕಾರ್ಯಕ್ಕೆ ಒಂದೆರಡು ಸಲಹೆ ಕೊಟ್ಟಿದ್ದೆ. “ನಿಮ್ಮ ಮಿತ್ರವಾತ್ಸವ ತುಂಬ ದೊಡ್ಡದು. ನಿಮ್ಮಂತಹ ಸನ್ಮಿತ್ರರು ಸಿಕ್ಕುವುದು ತುಂಬ ಕಷ್ಟ. ಸ್ನೇಹ ಸೌಹಾರ್ದಗಳಿಲ್ಲದೆ ಬಾಳಿನಲ್ಲಿ ಮತ್ತೇನು ರುಚಿಯುಂಟು? ನಿಮ್ಮ ಪತ್ರ ನೋಡಿ ನನಗೆ ಹೊಸ ಉತ್ಸಾಹ ಬಂದಿದೆ. ನೀವು ಮಾಡಿರುವ ಮಾಡುತ್ತಿರುವ ಕೆಲಸವನ್ನು ನೋಡಿ ನನಗೆ ಆಶ್ಚರ್ಯ ಮತ್ತು ಮೆಚ್ಚುಕೆ. ದೇವರು ಹೀಗೆಯೇ ನಿಮ್ಮನ್ನು ನಡೆಸಿಕೊಂಡು ಬರಲಿ. ತೀ.ನಂ.ಶ್ರೀ ಮುಂತಾದ ಮಿತ್ರರೆಲ್ಲ ಆರೋಗ್ಯ” ಎಂದು ಬರೆದರು. ೨೧.೧೦.೫೮ರಲ್ಲಿ ಕೆಲವು ದಿನಗಳ ನಂತರ ಊರ್ವಶಿ ಎಂಬ ಕಾದಂಬರಿಯನ್ನು ಓದಿ “ಸೊಗಸಾದ ಕಾದಂಬರಿ. ಪಾತ್ರಗಳ ನಿರೂಪಣೆ ಬೆಳವಣಿಗೆ ಚೆನ್ನಾಗಿದೆ. ಇದರಲ್ಲಿ ಬರುವ ಕನ್ಯಾಕುಮಾರಿ ವರ್ಣನೆ ಶುದ್ಧ ಕಾವ್ಯ” ಎಂದು ಬರೆದರು. ಆದರೆ ಅವರಿಗೆ ಅದು ದುಃಖಾಂತವಾಗಿದ್ದುದು ತುಂಬ ಕೆಡಕಾಗಿ ಕಂಡಿತು. ಅದರಲ್ಲಿಯೂ ಹೆಣ್ಣು ಹೆತ್ತ ಹೃದಯ “ಅಯ್ಯಾ ನೀನು ಶುದ್ಧ ನಿರ್ಘೃಣರಯ್ಯ ಇದನ್ನು ದುಃಖದಲ್ಲಿ ಮುಗಿಸಿಬಿಟ್ಟಿರಿ. ಸಹಿಸುವುದು ಕಷ್ಟ. ಇಬ್ಬರಿಗೂ ಮದುವೆ ಮಾಡಿಸಿಬಿಟ್ಟಿದ್ದರೆ ನಿಮ್ಮ ಗಂಟು ಏನು ಹೋಗುತ್ತಿತ್ತು” ಎಂದು ಬರೆದರು (೫-೧೧-೫೮).

ಅವರ ಪಾಂಡಿತ್ಯವೂ ಶಬ್ದಗಳ ಮೇಲಿನ ಅವರ ಹತೋಟಿಯೂ ಎಲ್ಲರೂ ಬಲ್ಲ ಸಂಗತಿ. ಆ ದೃಷ್ಟಿಯಿಂದ ನೋಡಿದರೆ ಈಗ ಕನ್ನಡದಲ್ಲಿ ಅಂತಹ ಭಾಷಾ ಪಂಡಿತರು ಮತ್ತೊಬ್ಬರಿಲ್ಲವೆಂದು ಹೇಳಬಹುದು. ಭಾಷೆಯ ವಿಷಯದಲ್ಲಿ ಯಾರಿಗೆ ಯಾವ ಸಂಶಯ ಬಂದರೂ ತತ್‌ಕ್ಷಣ ತಮ್ಮ ಜ್ಞಾಪಕಶಕ್ತಿಯಿಂದಲೇ ಅವರು ಅದನ್ನು ಪರಿಹರಿಸುತ್ತಿದ್ದರು. ಅದಕ್ಕಾಗಿ ಗ್ರಂಥಗಳನ್ನು ನೋಡುವುದು ಅವರಿಗೆ ಅವಶ್ಯಕವಿರಲಿಲ್ಲ. ಒಂದುಸಲ ನನ್ನ ಬಂಧುಗಳಾದ ಮೇಲುಕೋಟೆ ಹೈಸ್ಕೂಲ್ ಹೆಡ್ಮಾಸ್ಟರ್ ಅನಂತ ನಾರಾಯಣ ಅಯ್ಯಂಗಾರ್ಯರು “ಕರ್ಣನ ಧ್ವಜವಾವುದು” ಎಂದು ನನ್ನನ್ನು ಕೇಳಿಬಿಟ್ಟರು. ಕುಮಾರವ್ಯಾಸನಲ್ಲಿ ನೋಡಿದರೆ ದೊರಕಬಹುದೇನೋ ಎಂದು ನನಗೆ ಅನ್ನಿಸಿತು. ಆದರೆ ಅದಕ್ಕೂ ಮೈಗಳ್ಳತನ. “ಮೈಗಳ್ಳರನ್ನೆಲ್ಲ ರಕ್ಷಿಸಲು ಅಲ್ಲೊಬ್ಬ ಕುಳಿತಿರುವಾಗ ನಾವ್ಯಾಕೆ ಶ್ರಮಪಡಬೇಕು?” ಎಂದು ಯೋಚಿಸಿ ಶ್ರೀ ಡಿ.ಎಲ್.ಎನ್ ಅವರಿಗೆ ಒಂದು ಕಾಗದ ಬರೆದೆ. ನಾನು ನಿರೀಕ್ಷಿಸಿದಂತೆ ಮರು ಟಪಾಲಿನಲ್ಲಿಯೇ ಪ್ರತ್ಯುತ್ತರ ಬಂತು (೧೬-೪-೫೮). “ಕರ್ಣನ ಧ್ವಜ, ಮದಗಜವೆಂದು ತೋರುತ್ತದೆ. ಗದಾಯುದ್ಧದಲ್ಲಿ ಸಹಜ ತವ ಚಾಲಂಕೃತ ಶರೀರನುಂ ಮದಗಜಲಕ್ಷಣ ಧ್ವಜನುಂ” (ಆಶ್ವಾಸ ೨-೧೦ ಗದ್ಯ) ಎಂದಿದೆ. ಹೀಗೆಯೇ ಪಂಪಭಾರತದಲ್ಲಿ (ಆಶ್ವಾಸ ೧೨-೧೦೯ರ ಗದ್ದಯ “ಮದಗಜ ಕಕ್ಷಧ್ವಜ ವಿರಾಜಿತಮಪ್ಪ ತನ್ನ ಪೊನ್ನ ರಥಮಂ ಮದ್ರರಾಜನೇರಳ್ವೇಳ್ದು” ಎಂದಿದೆ ಹೆಚ್ಚು ವಿಷಯಬೇಕಾದರೆ ಬರೆಯಿರಿ”.

(ಗದಾಯುದ್ಧ ಪಂಕ್ತಿಯನ್ನು ಶ್ರೀ ಡಿ.ಎಲ್.ಎನ್ ರು ಆಶ್ವಾಸ ೨ರಲ್ಲಿ ೧೦ರ ಗದ್ಯ ಎಂದು ಕೊಟ್ಟಿದ್ದಾರೆ. ಅದು ಯಾವ ಮುದ್ರಣವೋ ತಿಳಿಯದು. ಆದರೆ ಕಾವ್ಯಕಲಾನಿಧಿ ಮುದ್ರಣದಲ್ಲಿ ಆಶ್ವಾಸ ೨-೧೫ರ ನಂತರದ ಗದ್ಯವಾಗಿದೆ ಇದು.)

ಹೀಗೆಯೇ ಮತ್ತೊಂದು ಸಲ “ಸಿರಿಮಿಂಡೆಯರ್” ಎಂಬ ಪದಕ್ಕೆ ನನಗೆ ಸರಿಯಾಗಿ ಅರ್ಥವಾಗಲಿಲ್ಲ. ಅದರ ಅರ್ಥವನ್ನು ವಿವರಿಸುವಂತೆ ಅವರಿಗೆ ಬರೆದೆ. ಕೂಡಲೇ ಹೀಗೆ ಉತ್ತರ ಬಂದಿತು. “ಸಿರಿ ಮಿಂಡೆಯರ್” ಎಂಬುದು ಅಶುದ್ಧ, “ಸರಿಮಿಂಡೆಯರ್” ಎಂದಿರಬೇಕು. ಸಱೆಮಿಂಡಿಯೆಂದು ಪ್ರಥಮ ಋತುವಾಗದೆಕೆ” ಎಂದು ನಿಘಂಟಿನಲ್ಲಿದೆ. ಅರ್ಥ ಅದೇ. ಸರಿ ಎಂದರೆ ಕಲ್ಲು, ಬಿಗಿಯಾಗಿರುವುದು ಎಂದು ಲಕ್ಷಣಾರ್ಥ. ಮಿಂಡಿ ಎಂದರೆ ಜೋರಿನ ಮೇಲಿರುವವಳು. ಒಟ್ಟಿಗಿಲ್ಲಿ ಆ ಗುಣಗಳು ಕಾಣುವ ವಯಸ್ಸಿನ ಹೆಣ್ಣು…. ಕನ್ನಡ ಕೋಶಕ್ಕೆ ಸರ್ಕಾರದಿಂದ ಹಣಬರಲಿಲ್ಲ. ಅದರ ಕೆಲಸ ನಿಂತಂತೆಯೇ ಎಂದು ಕಾಣುತ್ತೆ” ಎಂದು ಬರೆದರು (೧೬-೪-೫೮).

ಕೆಲವು ವರುಷಗಳ ಕೆಳಗೆ ನಾನು “ಬಿಂದಿಗಮ್ಮನ ಜಾತ್ರೆ” ಎಂಬ ಒಂದು ಪ್ರಬಂಧವನ್ನು ಬರೆದೆ. ಅದು ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾಯಿತು. ತಾವಾಗಿಯೇ ಅದನ್ನು ಸ್ವತಃ ನೋಡಿ ಡಿ.ಎಲ್.ಎನ್.ರವರು ಹೀಗೆ ಬರೆದರು. “ಪ್ರಬುದ್ಧ ಕರ್ನಾಟಕದಲ್ಲಿ ಬಂದಿರುವ ನಿಮ್ಮ ಬಿಂದಿಗಮ್ಮನ ಜಾತ್ರೆ ಎಂಬ ಲೇಖನವನ್ನು ಓದಿದೆ. ತುಂಬ ಚೆನ್ನಾಗಿದೆ. ಅಂಥ ಲೇಖನವನ್ನು ಓದಿ ಬಹಳ ದಿನಗಳಾದವು. ನನಗಾದ ಸಂತೋಷವನ್ನು ನಾನು ನಿಮಗೆ ತಿಳಿಸುತ್ತಿದ್ದೇನೆ. ಬಿಂದಿಗಮ್ಮನ ಕರಗ ಹೊರುವವನ ದಿವ್ಯಾವೇಶ ಬಹು ಹೃದಯಂಗಮವಾಗಿ ನಿರೂಪಿತವಾಗಿದೆ. ನಿಮ್ಮ ಭಕ್ತಿ ಶ್ರದ್ಧೆಗಳ ಅನುಕಂಪೆ ಆದರಗಳ ಲೇಪನದಿಂದ, ಲೇಖನ ಬಹುರಮ್ಯವಾಗಿದೆ. ನನ್ನ ಧನ್ಯವಾದಗಳು. ಬಿಂದಿಗಮ್ಮನ ಪೂಜೆ, ನಮ್ಮ ನಾಡ ಸಂಸ್ಕೃತಿಯಲ್ಲಿ ಬಹಳ ಹಿಂದಲ ಕಾಲಕ್ಕೆ ಸೇರಿದ್ದೆಂದು ತೋರುತ್ತದೆ. “ಬಿಂದಿಗರ್ಕಳ್” ಎಂದು ಹಳೆಯ ಸಾಹಿತ್ಯದಲ್ಲಿ ೧೨ನೇ ಶತಮಾನದ ಸಾಹಿತ್ಯದಲ್ಲಿ ಸಿಕ್ಕುತ್ತದೆ. ಬಿಂದಿಗ ದೇವತೆಯನ್ನು ಪೂಜಿಸುವವರು ಎಂದು ಇದರಿಂದ ಅರ್ಥವಾಗಬಹುದು. ಈ ದಿಕ್ಕಿನಲ್ಲಿ ಕೊಂಚ ಕೆಲಸ ನಡೆಯಬೇಕಾಗಿದೆ. ವಿರಾಮವಿದ್ದರೆ ಮಾಡಬಹುದು” (೬-೧೦-೧೯೬೨).

ನಿಜವಾದ ಸಂಶೋಧಕರ ಸ್ವಭಾವ ಇದು. ನಾನಾಗಿಯೇ ಅವರಿಗೆ ಲೇಖನ ಕಳುಹಿಸಲಿಲ್ಲ. ತಾವೇ ಅದನ್ನು ನೋಡಿದರು. ನೋಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದರೆ, ನನಗೆ ಅದರಿಂದಲೇ ಎಷ್ಟೋ ಆನಂದವಾಗುತ್ತಿತ್ತು. ನಾನು ಸಂಶೋಧಕನೂ ಅಲ್ಲ, ವಿಮರ್ಶಕನೂ ಅಲ್ಲ. ಆದರೆ ಅವರು ದಾರಿಬಿಟ್ಟು ಬಂದು ಆ ಮಾತಿನ ಪೂರ್ವಾಪರ, ಅದು ಬಹುಶಃ ಯಾವ ಕಾಲದಿಂದ ನಮ್ಮ ಸಾಹಿತ್ಯದಲ್ಲಿ ತುಂಬಿಕೊಂಡಿರಬಹುದು, ಅದರ ವಿಷಯ ಶೋಧನೆ ಹೇಗೆ, ಮುಂತಾದ ಆರರಗಳನ್ನೆಲ್ಲ ತಾವಾಗಿಯೇ ಬರೆದುದನ್ನು ನೋಡಿದರೆ ಇಂತಹ ವಿಷಯಗಳಲ್ಲಿ ಅವರಿಗೆ ಹೇಗೆ ಬುದ್ಧಿ ಸ್ವಾಭಾವಿಕವಾಗಿಯೇ ಪ್ರವರ್ತಿಸಿ ಕುತೂಹಲವನ್ನು ಕೆರಳಿಸಿ ಅವರನ್ನು ಕಾರ್ಯತತ್ಪರರನ್ನಾಗಿ ಮಾಡುತ್ತಿದ್ದಿತು ಎಂಬುದು ಗೊತ್ತಾಗುತ್ತದೆ. ನರಸಿಂಹಾಚಾರ್ಯರ ರಕ್ತಕಣದಲ್ಲೆಲ್ಲ ಸಂಸಾರ ಪ್ರೀತಿ, ದೇಶಪ್ರೀತಿ, ಸಂಸ್ಕೃತಿಪ್ರೀತಿ ಇದ್ದಂತೆ ಕನ್ನಡ ಶಬ್ದಗಳ ಪ್ರೇಮವೂ ಸ್ವಾಭಾವಿಕವಾಗಿ ಮನೆಮಾಡಿಕೊಂಡಿರಬೇಕೆಂದು ತೋರುತ್ತದೆ. ಕನ್ನಡ ಒಂದೇ ಅಲ್ಲ, ಕನ್ನಡ, ತೆಲುಗು, ತಮಿಳು, ಮಲೆಯಾಳ, ಸಂಸ್ಕೃತ ಎಲ್ಲ ಭಾಷೆಗಳೂ ಅವರಿಗೆ ಪ್ರಿಯವಾಗಿದ್ದವು. ವ್ಯವಸಾಯ ವಿಷಯದ ಒಂದು ಮಾತು ಬಂದಾಗ ನಾನು ಅವರೊಂದಿಗೆ “ನೋಡಿ ಈಗ ನಿಘಂಟನ್ನೇನೋ ಮಾಡುತ್ತಿದ್ದೀರಿ. ಆದರೆ ಕನ್ನಡ ನಾಡಿನ ಎಲ್ಲ ಕಸಬಿಗೂ ವ್ಯವಸಾಯ, ನೆಯ್ಗೆ, ಕುಂಬಾರ, ಕಮ್ಮಾರ, ಮೇದರವ, ಗಾಣಿಗ, ಕುರುಬ, ಬಡಗಿ, ಬೆಸ್ತ, ಬೇಡ, ಬೇಟೆಗಾರ ಇವರೆಲ್ಲರ ಬೇರೆ ಬೇರೆ ಕಸಬು. ಆ ಕಸಬಿನ ಬೇರೆ ಬೇರೆ ಅಂಗ ಉಪಕರಣಗಳು ಇವುಗಳನ್ನೆಲ್ಲ ಒಳಗೊಂಡ ನಿಘಂಟುಗಳನ್ನು ಕನ್ನಡದಲ್ಲಿ ರಚಿಸಬೇಕು. ಇಲ್ಲದಿದ್ದರೆ ಆ ಪದಗಳೇ ಹಾಳಾಗುವುದೆಂದು” ಸೂಚಿಸಿದೆ. ಅವರು ಕೂಡಲೇ ತಮ್ಮ ಕೊಠಡಿಯೊಳಕ್ಕೆ ಹೋಗಿ, ಆಂಧ್ರದವರೊಬ್ಬರು ತೆಲುಗಿನಲ್ಲಿ ಪ್ರಕಟಿಸಿರುವ ಒಂದು ನಿಘಂಟನ್ನು ತಂದರು. ಅದು ಕಸಬುಗಳಿಗೆ ಸಂಬಂಧಿಸಿದ ನಿಘಂಟು. ಅದರಲ್ಲಿ ತೆಲುಗಿನಲ್ಲಿ ಮೂಲಪದ, ಅದಕ್ಕೆ ಕನ್ನಡ, ಇಂಗ್ಲಿಷ್, ತೆಲುಗು, ತಮಿಳು, ಮಲೆಯಾಳಿ, ಪರ್ಯಾಯ ಪದಗಳು, ವಿವರಣೆ ಇಷ್ಟೂ ಇದ್ದವು. “ಇದು ಈ ಪ್ರಕಟನೆಯ ಒಂದನೆಯ ಸಂಪುಟ ಮಾತ್ರ, ನೋಡಿ, ಇವರು ಹೀಗೆ ಮಾಡಿದ್ದಾರೆ. ನಾವೂ ಮಾಡಬೇಕು” ಎಂದರು. ನನಗೆ ಅದು ಬಹಳ ಉಪಯುಕ್ತ ಪ್ರಕಟನೆಯಾಗಿ ತೋರಿತು. ಕನ್ನಡದಲ್ಲಿ ಇದುವರೆಗೆ ಪ್ರಕಟವಾಗಿರುವ ಯಾವ ಗ್ರಂಥವನ್ನೂ ಅವರು ನೋಡದೆ ಬಿಟ್ಟಿಲ್ಲವೆಂದರೆ ಅದು ಅತಿಶಯೋಕ್ತಿಯಾಗದು. ಒಂದು ಸಲ ಮಾನಸಗಂಗೋತ್ರಿಯ ಒಂದು ಗೋಷ್ಠಿಯಲ್ಲಿ ಮಾತನಾಡುವ ಸಲುವಾಗಿ, ಗಾದೆಗಳ ಮೇಲೆ ಒಂದು ಲೇಖನವನ್ನು ನಾನು ಬರೆಯಬೇಕಾಗಿತ್ತು. ಕಿಟ್ಟಲ್ ಕೋಶದಲ್ಲಿ ಅನೇಕ ಗಾದೆಗಳಿರುವುದನ್ನು ನಾನು ಗಮನಿಸಿದ್ದೆ. ಶ್ರೀಮಾನ್ ಡಿ.ಎಲ್.ಎನ್‌ರ ಜೊತೆ ಮಾತನಾಡುತ್ತ “ಕಿಟ್ಟಲ್ ನಿಘಂಟನಲ್ಲಿರುವ ಗಾದೆಗಳನ್ನೆಲ್ಲ ಶೇಖರಿಸಿದೆ, ಅದೇ ಒಂದು ಉಪಯುಕ್ತ ಗ್ರಂಥವಾಗುತ್ತೆ” ಎಂದೆ ನರಸಿಂಹಾಚಾರ್ರು ಎದ್ದು ತಮ್ಮ ಕೊಠಡಿಗೆ ಹೋಗಿ ಒಂದು ಪುಸ್ತಕವನ್ನು ತಂದು ಕೊಟ್ಟರು. ಅದು ಕಿಟ್ಟಲ್ ಗ್ರಂಥದ ಗಾದೆಗಳು. ಹೆಸರು “ಲೋಕೋಕ್ತಿ ನಿಧಾನ” ಕಿಟ್ಟಲ್‌ರವರೇ ತಮ್ಮ ಗಾದೆಗಳನ್ನು ಸೇರಿಸಿ ಆಗಲೇ ಪ್ರಕಟಿಸಿದ್ದ ಗ್ರಂಥ ಅದು.

ಪ್ರತಿಭೆ ಇರುವವರು ಮಾತ್ರ, ಪ್ರತಿಭಾವಂತರನ್ನು ಗುರುತಿಸಬಲ್ಲರು. ವಿದ್ವಾಂಸರಿಗೆ ಮಾತ್ರವೇ ಗೊತ್ತು ವಿದ್ವಾಂಸರ ಯೋಗ್ಯತೆ. ಹಾಗೆ ನರಸಿಂಹಾಚಾರ್ಯರು ತಾವೇ ದೊಡ್ಡ ವಿದ್ವಾಂಸರಾದುದರಿಂದ ಇತರ ವಿದ್ವಾಂಸರನ್ನು ಗುರುತಿಸಿ ಗೌರವಿಸುತ್ತಿದ್ದರು. ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಶ್ರೀಮಾನ್ ಡಾಕ್ಟರ್ ನೇಮಿನಾಥ ಉಪಾಧ್ಯೆಯವರ ಆಯ್ಕೆಯಾದಾಗ, ಅವರು ಬಹುಕಾಲದಿಂದ ಮೈಸೂರಿನ ಹೊರಗಡೆ ಇದ್ದವರಾದುದರಿಂದ ಅವರ ಹೆಸರು ಗೊತ್ತಿಲ್ಲದ ಅನೇಕರು, ಅವರು ಯಾರೋ ಸಾಮಾನ್ಯರೆಂದು ತಿಳಿದಿದ್ದರು. ಆ ಸಮ್ಮೇಳನದ ಸ್ವಾಗತ ಸಮಿತಿಯಲ್ಲಿ ನಾನೂ ಉಪಾಧ್ಯಕ್ಷನೆನಿಸಿಕೊಂಡಿದ್ದೆ. ನಾನು ಡಿ.ಎಲ್.ಎನ್‌ರವರನ್ನು ಡಾ. ಉಪಾಧ್ಯೆಯವರ ವಿಷಯ ಕೇಳಿದೆ. “ಅವರು ಮಹಾಗಟ್ಟಿಗರಯ್ಯ, ಇಂಡಿಯಾದಲ್ಲಿರುವ ನಾಲ್ಕಾರು ಪ್ರಾಕೃತ ಪಂಡಿತರಲ್ಲಿ ಇವರು ಅಗ್ರಗಣ್ಯರು. ಪರದೇಶದ ಪರಿಶೋಧಕರಲ್ಲಿಯೂ ಇವರ ಹೆಸರು ತುಂಬ ಪ್ರಸಿದ್ಧವಾಗಿದೆ” ಎಂದರು. ನಾನು “ಹಾಗಾದರೆ ನಮ್ಮವರನೇಕರಿಗೆ ಅವರ ಯೋಗ್ಯತೆ ಕಾರ್ಯ ಸರಿಯಾಗಿ ತಿಳಿಯದೆಲ್ಲ?” ಎಂದೆ. ನರಸಿಂಹಾಚಾರ್ರು “ನಾನು ಅವರ ಮೇಲೆ ಒಂದು ಲೇಖನ ಬರೆಯುತ್ತೇನೆ” ಎಂದರು. ಹಾಗೆಯೇ ಕೂಡಲೇ ಬರೆದರು. ಅದರಲ್ಲಿ ನಿಷ್ಕೃಷ್ಟವಾಗಿ ಉಪಾಧ್ಯೆಯವರ ಸಾಧನೆಗಳನ್ನೂ ಅವರ ಅರ್ಹತೆಯನ್ನೂ ಅವರು ರಚಿಸಿರುವ, ಸಂಪಾದಿಸಿರುವ ಗ್ರಂಥಗಳ ಹೆಸರನ್ನೆಲ್ಲ ಬರೆದರು. ಕುಳಿತು ನಿಲುವಿನಲ್ಲಿ ಅಂಥ ಲೇಖನವನ್ನು ಸಿದ್ಧಮಾಡುವುದು ಅಪೂರ್ವ ಸಾಹಸವೇ ಆಗಿತ್ತು. ಬರವಣಿಗೆಯಲ್ಲಿ ಅವರು ಕೆಲವರಂತೆ ಅತಿ ವೇಗವನ್ನು ಅನುಸರಿಸುತ್ತಿರಲಿಲ್ಲವಾದರೂ ವಾಕ್ಯಗಳನ್ನು ಮನಸ್ಸಿನಲ್ಲಿಯೇ ಜೋಡಿಸಿಕೊಂಡು ಸರಾಗವಾಗಿ ತಪ್ಪಿಲ್ಲದಂತೆ ಬರೆದು ಬಿಡುತ್ತಿದ್ದರು. ತಿದ್ದುವುದು ಮುಂತಾದ್ದು ಹೆಚ್ಚಾಗಿರುತ್ತಿರಲಿಲ್ಲ. ಉಪಾಧ್ಯೆ ಮೇಲೆ ಬರೆದುದು, ಸಾಮಾನ್ಯ ವಿಷಯ ನಿರೂಪಣೆಯ ಲೇಖನ. ಅವರು ಪ್ರೌಢಲೇಖನಗಳನ್ನೂ ಹೀಗೆಯೇ ಬರೆಯುತ್ತಿದ್ದರೆಂದು ನನಗೆ ಗೊತ್ತಾಗಿತ್ತು.

ಶ್ರೀ ಡಿ.ಎಲ್.ಎನ್. ಅವರು ಸಂಸ್ಕೃತವನ್ನು ಚೆನ್ನಾಗಿ ತಿಳಿದವರೂ ಸಂಸ್ಕೃತ ಪ್ರೇಮಿಗಳೂ ಆದರೂ ಸಹ, ಬರಿಯ ಸಂಸ್ಕೃತ ಜ್ಞಾನದಿಂದಲೆ ಕನ್ನಡದ ಸೇವಯೂ ಸಾಧ್ಯವೆಂಬ ಮಾತನ್ನು ಎಂದಿಗೂ ಒಪ್ಪುತ್ತಿರಲಿಲ್ಲ. “ಸಂಸ್ಕೃತಕ್ಕೆ ಅದರ ಸ್ಥಾನ ಉಂಟು. ಸಂಸ್ಕೃತ ನಮಗೆ ಬೇಕು. ಆದರೆ ಕನ್ನಡದ ಕೆಲಸವನ್ನೂ ಸಂಸ್ಕೃತ ತಜ್ಞರೇ ಮಾಡಬಲ್ಲವರೆಂಬುದು ಅಸಾಧ್ಯ. ಕನ್ನಡ ಭಾಷೆಯ ಜಾಯಮಾನವೇ ಬೇರೆ. ಸಂಸ್ಕೃತದಲ್ಲಿ ಸರ್ವಜ್ಞನಾದರೂ, ಕನ್ನಡದಲ್ಲಿ ಅವನಿಗೆ ತಿಳಿಯದೆ ಇರುವ ಅನೇಕ ಭಾಷಾಪ್ರಯೋಗಗಳೂ ಪದಗಳೂ ಅರ್ಥಗಳೂ ಭಾಷಾ ಮರ್ಯಾದೆಯೂ ಉಂಟು. ಅವನು ಎಷ್ಟು ಬೇಕಾದರೂ ಸಂಸ್ಕೃತವನ್ನು ಕಲಿತಿರಲಿ, ಕನ್ನಡಕ್ಕೆ ಬೇಕಾಗುವ ಕನ್ನಡವನ್ನು ಕಲಿತರೆ ಮಾತ್ರ ಅವನು ಕನ್ನಡ ಸೇವಕನಾಗಬಲ್ಲನು” ಎಂಬುದು ಅವರ ಮತವಾಗಿತ್ತು. ಇಂಗ್ಲಿಷನ್ನೂ ನಮ್ಮ ಜನತೆ, ಐಚ್ಛಿಕವಾಗಿ ಕಡ್ಡಾಯವಾಗಿ ಕಲಿಯಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಇದು ಮುಖ್ಯವಾಗಿ ಉದ್ಯೋಗಾವಕಾಶದ ಪ್ರಶ್ನೆ ಎಂದು ಅವರ ನಂಬಿಕೆ. ಚಕ್ರವರ್ತಿ ರಾಜಗೋಪಾಲಾಚಾರ್ಯರು ಪ್ರಾಚೀನ ಕನ್ನಡ, ತಮಿಳು, ಎರಡೂ ಒಂದೇ ಎಂದೂ, ತೆಲುಗು ಲಿಪಿಯೇ ಕನ್ನಡ ಲಿಪಿಗೂ ಮೂಲ ಎಂದೂ, ಇನ್ನೂ ಕನ್ನಡವನ್ನು ಕೀಳು ಮಾಡುವ ಮಾತುಗಳನ್ನು ಹೇಳಿದಾಗ ಶ್ರೀಮಾನ್ ನರಸಿಂಹಾಚಾರ್ಯರು ಕೋಪದಿಂದ ಉರಿದುಬಿದ್ದರು. ಅವರು ಅಷ್ಟು ಸಿಟ್ಟಿಗೆದ್ದುದನ್ನು ನಾನು ಮತ್ತಾವಾಗಲೂ ಕಂಡಿರಲಿಲ್ಲ. ಅವರ ತುಟಿ, ಥರಥರನೆ ನಡುಗುತ್ತಿತ್ತು. “ಹಿಂದೆ ತೆಲುಗು ಲಿಪಿಯಲ್ಲಿಯೇ ಕನ್ನಡ ಗ್ರಂಥಗಳನ್ನು ಅಚ್ಚುಮಾಡುತ್ತಿರಲಿಲ್ಲವೇ?” ಎಂದು ನಾನು ಕೇಳಿದೆ. ನರಸಿಂಹಾಚಾರ್ರು ಕೋಪದಿಂದ ನನ್ನ ಮೇಲೆಯೇ ಹಾಯ್ದು “ಯಾರಯ್ಯಾ ನಿನಗೆ ಹಾಗೆ ಹೇಳಿದವರು? ಆ ತೆಲುಗಿನಂತೆ ಕಾಣುವುದು ಅದೂ ಒಂದು ಕನ್ನಡ ಲಿಪಿಯಯ್ಯ. ತೆಲುಗಿನ ಕೊಟ್ಟುಗಳೂ ಗೀಟುಗಳೂ ಅದಕ್ಕೆ ಇಲ್ಲ” ಎಂದು ಒಳಗೆ ಹೋಗಿ ತೆಲುಗಿನಂತೆ ಕಾಣುವ ಅಕ್ಷರದಲ್ಲಿ ಮುದ್ರಿಸಿದ್ದ ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಶುಕಸಪ್ತತಿ ಕಥೆಗಳನ್ನು ತಂದರು. ನಾನು ಆ ಮೂರು ಪುಸ್ತಕಗಳನ್ನು ಹಿಂದೆಯೇ ನೋಡಿದ್ದೆ. ಆದರೆ ಅದು ತೆಲುಗು ಲಿಪಿ ಎಂದುಕೊಂಡಿದ್ದೆ. ನರಸಿಂಹಾಚಾರ್ಯರು “ಎರಡೂವರೆ ಕೋಟಿ ಕನ್ನಡಿಗರ ಲಿಪಿಯನ್ನು ನಾಶಮಾಡುವ ಅವಶ್ಯಕತೆ ನನಗೆ ತೋರುವುದಿಲ್ಲ” ಎಂದರು. ಅವರು ರಾಜಾಜಿಯ ಮೇಲೆಯೂ ರೇಗಿಬಿಟ್ಟು “ಒಬ್ಬರು ರಾಜಕೀಯದಲ್ಲಿದ್ದ ಮಾತ್ರಕ್ಕೆ ತಮಗೆ ತಿಳಿಯದ ಅಂಶವೇ ಇಲ್ಲವೆಂದು ಭಾವಿಸುತ್ತಾರೆ. ಈ ವಿಷಯದಲ್ಲಿ ರಾಜಾಜಿ ಮಾತನಾಡಬಾರದಿತ್ತು. ತಮಿಳರನ್ನು ತೃಪ್ತಿಪಡಿಸಲು ಅವರು ಹೀಗೆ ಹೇಳಿರಬಹುದು. ಅಂತೂ ಅದು ಕೀಟಲೆ ಮಾತು ಎಂದರು.

ಡಿ.ಎಲ್.ಎನ್ ಪರಂಧಾಮವನ್ನು ಹೊಂದುವುದಕ್ಕೆ ಮೂರು ನಾಲ್ಕು ತಿಂಗಳ ಕೆಳಗೆ ನಾವಿಬ್ಬರೂ ಒಬ್ಬ ಸಮಾನ ಬಂಧುಗಳ ಮೃತ ತಿಥಿಯಲ್ಲಿ ಕೂಡಿದ್ದೆವು. ನಾವು ಮೂರು ಗಂಟೆಗಳ ಕಾಲ ಸಣ್ಣ ಸಣ್ಣ ಸಂಗತಿಗಳು ಗಂಭೀರ ಪ್ರಶ್ನೆಗಳನ್ನೆಲ್ಲ ಕುರಿತು ಮಾತನಾಡುತ್ತಿದ್ದರೂ ಸಂಭಾಷಣೆಯ ಬಹುಭಾಗವನ್ನು ಅವರೇ ತೆಗೆದುಕೊಂಡರು. ಆಗಲೂ ಅವರದು ಹೆಚ್ಚಾಗಿ ಕನ್ನಡ ಸಂಶೋಧನೆ, ಕನ್ನಡದ ಚೇರ್ ನ್ನು ಅಧ್ಯಾಪಕ ಪೀಠ ಇತರ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸುವ ವಿಚಾರ, ಕನ್ನಡದ ಭವಿಷ್ಯ, ಕನ್ನಡ ಸಾಹಿತ್ಯ ಪರಿಷತ್ತು, ನಿಘಂಟಿನ ಕೆಲಸ ಇವುಗಳ ಯೋಜನೆಯೇ ಆಗಿತ್ತು. ವಿಶ್ವವಿದ್ಯಾಲಯದ ಈಗಿನ setup ಚೆನ್ನಾಗಿದೆ. ಕನ್ನಡ ನುಡಿಯ ಸಂರಕ್ಷಣೆಯನ್ನು ಕುರಿತು ಇನ್ನು ನಾವು ಹೆಚ್ಚಾಗಿ ಯೋಚಿಸಬೇಕಾಗಿಲ್ಲ. ಇನ್ನು ಯಾರೂ ಇದರ ಬೆಳವಣಿಗೆಯನ್ನು ತಡೆಯಲಾರರು. ವೈಶಾಲ್ಯಕ್ಕಿಂತ ಆಳವನ್ನು ಹೆಚ್ಚಾಗಿ ಬೆಳೆಸಬೇಕು. ವಿಶ್ವವಿದ್ಯಾಲಯದ ತರುಣ ಪೀಳಿಗೆಗೆ ಈಗ ಉಜ್ವಲ ಅವಕಾಶ. ಯೋಗ್ಯರಿಗೆ ಸರಿಯಾದ ಅವಕಾಶ ಕೊಡಬೇಕು. ವ್ಯಕ್ತಿಯನ್ನು ತೃಪ್ತಿಪಡಿಸಲು ಸತ್ಯವನ್ನು ಬಲಿಕೊಡಬಾರದು. ಶ್ರೀಮಾನ್ ಜಿ. ನಾರಾಯಣರ ನೇತೃತ್ವದಲ್ಲಿ ಸಾಹಿತ್ಯ ಪರಿಷತ್ತಿಗೆ ಒಳ್ಳೆಯ ಸೇವಾವಕಾಶವಿದೆ. ಆತ ತುಂಬ ಸಾಹಸಿ. ಜನಬಲವನ್ನು ಗಳಿಸಬಲ್ಲ. ವಿದ್ಯಾಪಕ್ಷಪಾತಿ” ಎಂದರು. ಕನ್ನಡ ನಿಘಂಟಿನ ಕೆಲಸ ಸಮರ್ಪಕವಾಗಿ ನಡೆಯುತ್ತಿರುವುದನ್ನು ಪ್ರಸ್ತಾಪಿಸಿ ಸಂಪಾದಕ ಬಸವಾರಾಧ್ಯರ ದಕ್ಷತೆಯನ್ನು ಪ್ರಸ್ತಾಪಿಸಿದರು. “ಹೆಮ್ಮಿಗೆ ದೇಶಿಕಾಚಾರ್ರು ಇನ್ನಷ್ಟು ಕಾಲ ಇರಬೇಕಾಗಿತ್ತು. ಅವರಿಗೆ ತಿಳಿಯದ ವಿಷಯಗಳೇ ಇರಲಿಲ್ಲ. ಅನ್ಯಾಯ” ಎಂದರು. “ಡಾ. ಚಿದಾನಂದ ಮೂರ್ತಿ, ಬಿಳಿಗಿರಿ ಇನ್ನೂ ಈ ಪೀಳಿಗೆಯ ಅನೇಕ ವಿದ್ವಾಂಸರಿಂದ ಬಹಳ ಒಳ್ಳೆಯ ಕೆಲಸವಾಗುವ ಭರವಸೆ ನನಗೆ ಇದೆ” ಎಂದರು. “ನಾನು ಕನ್ನಡವನ್ನು ಆರಿಸಿಕೊಂಡ ಕಾಲ, ಸುಮಾರು ೪೫ ವರುಷದ ಹಿಂದೆ. ಆಗ ಕನ್ನಡ ಮಂಕ ಮಂಕಾಗಿ ಮಿನಗುವ ಹಣತೆಯಾಗಿತ್ತು. ಈಗ ಕನ್ನಡ, ನಮ್ಮ ಜನರ, ಉಸಿರು ಕಣ್ಣು ಆಗಿ ನಮ್ಮ ಜನತೆಯ ಬಾಳಿಗೆ ಅಮೃತ ಸೇಚನವಾಗಿ ಮೂಲೆ ಮೂಲೆಯಲ್ಲಿಯೂ ಬೆಳಗುತ್ತಿದೆ. ಇದು ತುಂಬ ಸಮಾಧಾನದ ಸಂಗತಿ. ಸಂಶೋಧನಾ ಕಾರ್ಯ, ಇನ್ನು ತುಂಬ ಚುರುಕಿನಿಂದ ನಡೆಯಬೇಕು” ಎಂದರು.

ಆ ವೇಳೆಗೆ ಅವರ ಅಂಗರಕ್ಷಕರೂ ವೈದ್ಯರೂ ಆದ ಬಂಧುಗಳು ಅಲ್ಲಿಗೆ ಬಂದರು. ನಾನು “ನರಸಿಂಹಾಚಾರ್ಯರಿಗೆ ಇನ್ನು ನಿಮ್ಮ ಔಷಧಿ ಬೇಕಿಲ್ಲ. ಅವರೇ ಡಾಕ್ಟರರಾಗಿದ್ದಾರಲ್ಲ” ಎಂದೆ. ನರಸಿಂಹಾಚಾರ್ಯರು “ನಾನು ಡಾಕ್ಟರ್, ಇದೆಲ್ಲ ನಮ್ಮ ಮಿತ್ರ ಲೀಲೆ. ಮಗುವಿಗೆ ಆಟದ ಸಾಮಾನನ್ನು ಕೊಡುವಂತೆ ನನಗೆ ಇದೊಂದನ್ನು ತಗಲುಹಾಕಿದರು. ಮಗುವಿಗೆ ಸಂತೋಷವಾಗುವಂತೆ ನನಗೂ ಸಂತೋಷವೆ. ಆದರೆ ಔಷಧಿಯ ಮಾತು ಬೇರೆ. ‘ತನ್ನ ವೈದ್ಯ ತನಗೆ ಹಿಡಿಯುವುದಿಲ್ಲ’ ಎಂಬ ಮಾತನ್ನು ಕೇಳಿದ್ದೀರಿ. ಡಾಕ್ಟರ್ ಜೇಮ್ಸ್ ಹೆಚ್ ಕಸಿನ್ಸ್‌ ರ ವಿಷಯದಲ್ಲಿ ಒಂದು ಸಂಗತಿಯುಂಟು. ಕಸಿನ್ಸ್‌ರನ್ನು ಟೋಕಿಯೋ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ನಿಯಮಿಸಿದಾಗ ಅವರು ಪತ್ನೀ ಸಮೇತರಾಗಿ ಅಲ್ಲಿ ಹೋಗಿ ಜನಸಂಖ್ಯೆ ಗದ್ದಲ ಸ್ವಲ್ಪ ಕಡಿಮೆಯಾಗಿದ್ದ ಪಟ್ಟಣದ ಒಂದು ಭಾಗ ಮನೆಯಲ್ಲಿ ವಾಸಿಸತೊಡಗಿದರು. ಅವರ ಬಾಗಿಲಿನಲ್ಲಿ ವಿಶ್ವವಿದ್ಯಾಲಯದವರೇ ಜಪಾನಿ ಲಿಪಿಯಲ್ಲಿ “ಡಾಕ್ಟರ್ ಜೆಣ್ಸ್ ಹೆಚ್ ಕಸಿನ್ಸ್” ಎಂಬ ನಾಮಫಲಕವನ್ನು ಹಾಕಿಸಿದ್ದರಂತೆ. ಒಂದು ಅರ್ಧ ರಾತ್ರಿ ಇದ್ದಕ್ಕಿದ್ದಂತೆ, ನಾಲ್ಕಾರು ಜನ, ಇವರ ಬಾಗಿಲನ್ನು ಧಡಧಡನೆ ತಟ್ಟಿದರು. ಪ್ರೊಫೆಸರ್ರು ಬಾಗಿಲು ತೆಗೆದಾಗ ಅವರೆಲ್ಲ ಒಟ್ಟಿಗೇ ಜಪಾನಿ ಭಾಷೆಯಲ್ಲಿ ಒಂದೇ ಉಸಿರಿಗೆ ಮಾತನಾಡುತ್ತ ಕೈ ಆಡಿಸುತ್ತಿದ್ದರು. ಕೊನೆಯಲ್ಲಿ ಅವರ ಪೈಕಿ, ಇಂಗ್ಲಿಷ್ ಬಲ್ಲ ಒಬ್ಬನಿಂದ “ಬೀದಿಯ ಕೊನೆಯಲ್ಲಿ ಒಬ್ಬ ಹೆಂಗಸನ್ನು ಚೇಳು ಕಡಿದಿದೆಯೆಂದೂ, ಕಸಿನ್ಸ್‌ರು ಡಾಕ್ಟರಾದುದರಿಂದ ಅದಕ್ಕೆ ಔಷಧಿ ಕೊಡಬೇಕೆಂದೂ ಅವರು ಹೇಳುತ್ತಿರುವರೆಂದೂ, ಕಸಿನ್ಸರಿಗೆ ಅರ್ಥವಾಯಿತು. “ಆ ತರಹ ಡಾಕ್ಟರು ನಾನಲ್ಲ” ಎಂದು “ಡಾಕ್ಟರು” ಹೇಳಿದರೂ ಆ ಜನ ಒಪ್ಪಲೇ ಇಲ್ಲ. ಆ ಜನರ ನಂಬಿಕೆಯನ್ನು ಇಲ್ಲವೆನಿಸಲಾರದೆ ಕಸಿನ್ಸರು ತಮ್ಮಲ್ಲಿದ್ದ ಯಾವುದೋ ಮುಲಾಮು, ಅಸಟಿಕ್ ಆಸಿಡ್ ಇವುಗಳನ್ನು ತೆಗೆದುಕೊಂಡು ಹೋಗಿ, ಚಿಕಿತ್ಸೆ ಮಾಡಿ ನಿದ್ರೆ ಗುಳಿಗೆಯೊಂದನ್ನು ನುಂಗಿಸಿದರಂತೆ. ಬೆಳಗಾಗುವ ವೇಳೆಗೆ ಅವಳಿಗೆ ಗುಣವಾಯಿತಂತೆ. ಅನಂತರ ಆ ಜನರು, ಕಸಿನ್ಸ್‌ರು ಅಲ್ಲಿದ್ದ ಕೆಲವು ವರುಷಗಳು ಇವರೇ ವೈದ್ಯರೆಂದು ಅಲ್ಲಿಗೆ ಬರುತ್ತಲೇ ಇದ್ದರಂತೆ”.

ಈ ಕಥೆಯನ್ನು ಹೇಳಿ ನರಸಿಂಹಾಚಾರ್ರು “ಅಂತಹ ಡಾಕ್ಟರು ಅಂತ ನನ್ನನ್ನು ತಿಳಿದುಕೊಂಡುಬಿಟ್ಟರೆ, ನನ್ನ ನಿದ್ರೆಗೇ ಬಂತಲ್ಲಯ್ಯಾ ಕುತ್ತು” ಎಂದು ನಕ್ಕರು.

ಈಗ ಆರು ತಿಂಗಳ ಕೆಳಗೆ, ಗೊರುರು ಹೇಮಾವತಿ ಕನ್ನಡ ಸಂಘದ ಆಹ್ವಾನವನ್ನು ಅಂಗೀಕರಿಸಿ ಶ್ರೀಮಾನ್ ಪು.ತಿ.ನ. ರವರೂ ಪ್ರೊಫೆಸರ್ ಶಂಕರನಾರಾಯಣರಾಯರು, ಗೊರೂರಿಗೆ ಆಗಮಿಸಿದ್ದರು. ತಮ್ಮ ಉಪನ್ಯಾಸದಲ್ಲಿ ಶಂಕರನಾರಾಯಣರಾಯರು, ವಿಜಯನಗರದ ಲಕ್ಷ್ಮೀಧರಾಮಾತ್ಯನಿಗೆ ಸಂಬಂಧಪಟ್ಟ “ಕೆರೆಯಂ ಕಟ್ಟಿಸು ದೇವಾಗಾರಮಂ ಮಾಡಿಸಜ್ಜೆರೆಯೊಳ್ ಸಲ್ಕಿದನಾಥರಂ ಬಿಡಿಸು” ಎಂಬ ಪದ್ಯವನ್ನು ಹೇಳಿದರು. ಅರ್ಥವನ್ನು ವಿವರಿಸುತ್ತ ಸೆರೆಯಲ್ಲಿ ಸಿಕ್ಕಿದ ಅನಾಥರನ್ನು ಬಿಡಿಸು ಎಂದು ಹೇಳಿದಂತೆ ನೆನಪು. ನಾನು “ಸೆರೆಯೊಳ್ ಇರಲಾರದು, “ಜರೆಯೊಳ್” ಎಂದಿರಬಹುದು. ಮುಪ್ಪಿನಲ್ಲಿ ಸಿಕ್ಕಿದವರನ್ನು ಬಿಡಿಸು” ಎಂದೆ. ಅವರು ತನ್ನ ಅರ್ಥವನ್ನು ಒಪ್ಪಲಿಲ್ಲ. ಪ್ರೊಫೆಸರ್ ಮುಗಳಿ ಅವರು ಕಾವ್ಯ ಸಂಚಯವೆಂಬ ಗ್ರಂಥದಲ್ಲಿ ಈ ಪದ್ಯವನ್ನು ಉದ್ಧರಿಸಿದ್ದಾರೆ. ಆ ಪದ್ಯದ ಅರ್ಥದ ಸಂಶಯ ನನಗೆ ಮೊದಲಿನಿಂದಲೂ ಇದ್ದುದರಿಂದ ನಾನು ಅಲ್ಲಿಯೂ ಈ ಪದ್ಯವನ್ನು ನೋಡಿದೆ. ಆಗಲೂ ಅರ್ಥ ಸ್ಪಷ್ಟವಾಗಲಿಲ್ಲ. ಈ ವಿಷಯ ನನ್ನ ಮನಸ್ಸಿನಲ್ಲಿ ಇನ್ನೂ ಕೊರೆಯುತ್ತಲೇ ಇತ್ತು. ಮತ್ತೊಮ್ಮೆ ಸಹ ಶಂಕರ ನಾರಾಯಣರಾಯಂದಿಗೆ ಚರ್ಚಿಸಿದೆ. ಕೊನೆಗೆ ಈ ಕಾಗದ ಅವರಿಂದ ಬಂದಿತು. ಅದು ಕನ್ನಡ ಭಾಷೆಯ ಈ ಪದದ ದೃಷ್ಟಿಯಿಂದ ಕುತೂಹಲಿಗಳಾದವರಿಗೆ ಉಪಯುಕ್ತವಾಗಬಹುದುದಾದರಿಂದ ಕೆಳಗೆ ಕೊಟ್ಟಿದ್ದೇನೆ.

“ಕೆರೆಯಂ ಕಟ್ಟಿಸು ಎಂಬ ಪದ್ಯ……. ಮಾಡಿಸ

“ನೀವು ಜರೆಯೊಳ್ ಮುಪ್ಪಿನಲ್ಲಿ ಸಿಲ್ಕಿದ ಅನಾಥರಂ ಬಿಡಿಸು ಎಂದು ಅರ್ಥ ಮಾಡಿದಂತೆ ನೆನಪು. ಇದು ಸರಿಹೋಗಲಿಲ್ಲವೆಂದು ನನ್ನ ಮನಸ್ಸನ್ನು ಬಾಧಿಸುತ್ತಿತ್ತು. ಶ್ರೀ……ರನ್ನು ಕೇಳಿದೆ. ಅವರು ಅರಿಹೋಳ ಎಂಬ ಪಾಠ ಸೂಚಿಸಿದರು. ಇದೂ ಸರಿ ಹೋಗಲಿಲ್ಲ. ಕಾರಣ ಈ ಪದ್ಯದ ಪ್ರಾಸಸ್ಥಾನದಲ್ಲಿ ಶಕಟರೇಫವಿದೆ. ವಿದ್ವಾಂಸರಾದ ಶ್ರೀ…..ಯವರು ಇದನ್ನು ಬಿಟ್ಟಿರುವುದು ಆಶ್ಚರ್ಯ “ಮಾಡಿಸೈ ಸೆರೆಯೊಳ್” ಇರಬಹುದೇ ಎಂದು ಮನಸ್ಸು ತುಡಿಯಿತು. ಬೆಳಗ್ಗೆ ಶ್ರೀ ಡಿ.ಎಲ್.ಎನ್‌ ರವರನ್ನು ಕಂಡಾಗ ಅದು ಪರಿಹಾರವಾಯಿತು. ಪದ್ಯದ ಪದವಿಭಾಗ ಹೀಗೆ.

ಕೆರೆಯಂ ಕಟ್ಟಿಸು ಭಾವಿಯಂ ಸಮೆಸು ದೇವಾಗಾರಮಂ ಮಾಡಿಸು
ಅಜ್ಜೆರೆಯೊಳ್ ಸಿಲ್ಕಿದನಾಥರಂ ಬಿಡಿಸು……. ಇತ್ಯಾದಿ

ಅಜ್ಜರೆ ಬಂಧನ ಎಂದು ಪರಿಷತ್ತಿನ ನಿಘಂಟಿನಲ್ಲಿ ಕೊಟ್ಟಿದೆ. ಈಗ ಸಿಕ್ಕಿರುವುದು ಇದೊಂದೇ ಪ್ರಯೋಗ ಅದು+ಸೆರೆ ಇಲ್ಲವೆ ಆಫ್+ಸೆಸೆ ಆಳ್+ಸೆರೆ ಆಗಬಹುದು” ಎಂದು ಹೇಳಿದರು. ಇದಕ್ಕೆ ಸಂವಾದಿಯಾದ ಶಬ್ದಗಳು ತೆಲುಗು ತಮಿಳಿನಲ್ಲಿರುವುದನ್ನು ತೋರಿಸಿದರು. ಸದ್ಯಕ್ಕೆ ಈ ವಿವರಣೆಯನ್ನು ಒಪ್ಪಬಹುದೆಂದು ತೋರುತ್ತದೆ. ಕುತೂಹಲಕ್ಕಾಗಿ ತಮಗೆ ಬರೆದಿದ್ದೇನೆ.

ಹೀಗೆ, ಅಂಗಡಿಯಲ್ಲಿ ಕೇಳಿದ ಸಾಮಾನನ್ನು ಎತ್ತಿಕೊಡುವಂತೆ ಸಾಹಿತ್ಯ ಮಳಿಗೆಯಿಂದ ಪದವನ್ನೂ ಪದಾರ್ಥವನ್ನೂ ಎತ್ತಿಕೊಡುವ ಯೋಗ್ಯತೆಯುಳ್ಳವರು ಮತ್ತಾರಾದರೂ ಇದ್ದಾರೆಯೇ? ಇದ್ದರೂ ಹೊತ್ತು ಗೊತ್ತೆನ್ನದೆ ನಿರಹಂಕಾರದಿಂದ, ಕೇಳಿದ್ದೇ ಸಾಕೆಂದು ನಮ್ಮ ಮುಂದೆ ತಮ್ಮ ಸರಕನ್ನೆಲ್ಲ ಹರಡುವ ಸೌಜನ್ಯವೂ ವಿರಾಮವೂ ಮನಃ ಪ್ರಸಾದವೂ ಅವರಿಗೆ ಇರುವುದೆ? ಹೀಗೆ ನೋಡುವಾಗ ನರಸಿಂಹಾಚಾರ್ಯರನ್ನು ಕಳೆದುಕೊಂಡ ನಾವು ತುಂಬಾ ನಿರ್ಭಾಗ್ಯರು.

ನಾನು ಮೈಸೂರಿಗೆ ಹೋದಾಗ, ಅವರನ್ನು ನೋಡದೆ ಹಿಂದಿರುಗಿದರೆ ನನ್ನ ಮೇಲೆ ಅವರ ಪ್ರೇಮಾಗ್ರಹದ ಒಂದು ಅಕ್ಷೇಪಣೆ ಇರುತ್ತಿತ್ತು. ಒಂದು ಸಲ ಈ ವಿಷಯವಾಗಿ ಅವರು ನನ್ನನ್ನು ಮೃದುವಾಗಿ ಅಕ್ಷೇಪಿಸಿದಾಗ ನಾನು “ನನ್ನ ಪ್ರಕಾಶಕರ ಮನೆಯಲ್ಲಿ ಉಳಿದಿದ್ದೆ” ಎಂದು ಹೇಳಿ Your cannot displease your publisher ಎಂದೆ. ಕೂಡಲೇ ಅವರು “You cannot please your publisher” ಎಂದರು. ಅನಂತರ ತಮ್ಮ ಪ್ರಕಾಶಕರ ಮಾತನ್ನಾಡುತ್ತ ನನ್ನ ಮನಸ್ಸಿಗೆ ಈಗ ನನ್ನ ಪ್ರಕಟನೆಗಳ ವಿಷಯದಲ್ಲಿ ನನಗೆ ಸ್ವಲ್ಪ ನೆಮ್ಮದಿಯುಂಟಾಗಿದೆ. ಎಲ್ಲೆಲ್ಲಿಯೂ ಹರಡಿರುವ ನನ್ನ ಈ Spiritual progeny ಆಧ್ಯಾತ್ಮ ಸಂತಾನ ಇದೆಯೆಲ್ಲ. ಇದು ಮುಂದಲ ಜನಾಂಗಕ್ಕೆ ಸಿಕ್ಕದೆ ಅನ್ಯಾಯವಾಗಿ ಬಿಡುತ್ತದಲ್ಲ ಎಂದು ಕೊರಗುತ್ತಿದ್ದೆ. ಅದಕ್ಕೆ ಒಬ್ಬ ಸರಿಯಾದ ಪ್ರಕಾಶಕರು ಸಿಕ್ಕಿ ಮುದ್ರಣ ಕಾರ್ಯ, ಇನ್ನೇನು ಆಗುತ್ತಲೇ ಬಂದಿದೆ. ಮುದ್ರಕರೂ ನಾನು ಇನ್ನೂ ಹೆಚ್ಚು ಶ್ರಮವಹಿಸಿದರೆ ಈ ವೇಳೆಗೆ ಅದು ಹೊರಕ್ಕೆ ಬಂದು ಆಗಿರಬೇಕು. ಆದರೆ ಈಚೆಗೆ ನಾನು ಶುದ್ಧ ಶೊಂಬೇರಿ ಆಗಿದ್ದೇನೆ. ಗ್ರಂಥದ ಆಕಾರವೂ ಸಹ ದೊಡ್ಡದು. ವಡ್ಡಾರಾಧನೆಯನ್ನೂ ಪರಿಷ್ಕರಿಸಿದೆ. ಇನ್ನೊಂದು ಪುಟ ಸೇರಬೇಕಿತ್ತು. ವಿಶ್ವವಿದ್ಯಾಲಯದವರು ಇವನ್ನು ಪಠ್ಯಪುಸ್ತಕವನ್ನಾಗಿ ನಿಯಮಿಸುತ್ತಿರುವುದರಿಂದ ಪ್ರಕಾಶಕರು ಹಾಕಿದ ಹಣ, ಹಿಂದಕ್ಕೆ ಬರುತ್ತೆ. ನನ್ನ ಪ್ರಕಾಶಕರು ನನ್ನಲ್ಲಿ ಚೆನ್ನಾಗಿ ನಡೆದುಕೊಂಡಿದ್ದಾರೆ. ಒಬ್ಬನು, ಪ್ರಾಮಾಣಿಕನಾಗಿದ್ದರೆ, ಅವನ ಯಾವ ತಪ್ಪೂ ನನ್ನ ಕಣ್ಣಿಗೆ ಬೀಳುವುದೇ ಇಲ್ಲ” ಎಂದರು. ಪಂಪಭಾರತ ದೀಪಿಕೆ ಪ್ರಕಟವಾಗುತ್ತಿರುವುದು ಅವರಿಗೆ ತುಂಬ ತೃಪ್ತಿಯ ಸಂಗತಿಯಾಗಿತ್ತು. “ಪಂಪಭಾರತ ನನ್ನ ಅತ್ಯಂತ ಪ್ರೀತಿಯ ಗ್ರಂಥ ಗೆಳೆಯ. ಅದರ ಪ್ರಕಟನೆಗೆ ಏರ್ಪಾಡಾದಾಗ ನನ್ನ ತಲೆಯ ಮೇಲಿನ ಬಹುಕಾಲದ ಹೊರೆ ಇಳಿದಂತೆ ನನಗೆ ಭಾಸವಾಯಿತು. ಅದರ ಮುದ್ರಣದಲ್ಲಿಯೂ ಸ್ವಲ್ಪ ತೊಡಕಾಗಿ ಸಾವಕಾಶವಾಗುತ್ತಿದೆ” ಎಂದರು. ಅವರ ಮನಸ್ಸು ಎಲ್ಲ ರೀತಿಯಲ್ಲಿಯೂ ನೆಮ್ಮದಿಯ ಸ್ಥಿತಿಯಲ್ಲಿದ್ದಂತೆ ನನಗೆ ಭಾಸವಾಯಿತು. ನಾನು ಏನೋ ಒಂದು ವಿನೋದದ ಮಾತನ್ನಾಡಿದೆ. ಗಟ್ಟಿಯಾಗಿ ನಿಸ್ಸಂಕೋಚವಾಗಿ ನಕ್ಕರು. ಇನ್ನು ಒಂದು ದಶಕವಾದರೂ ಕೃತಾಂತನ ಛಾಯೆ, ಇವರ ಕಡೆ ಸೋಕದು ಎಂದು ಕೊಂಡೆ. ವಿಧಿ, ನಮ್ಮ ಬೆನ್ನ ಹಿಂದೆ ನಿಂತು ವಿಕಟ ನಗುವನ್ನು ನಕ್ಕಿರಬೇಕು.

ಡಿ.ಎಲ್.ಎನ್.ರವರಿಗೆ ತಮ್ಮ ಶೋಧನೆಗಳ ವಿಷಯದಲ್ಲಿ ಹೇಗೆ ನಿರ್ಭೀತ ಪ್ರಾಮಾಣಿಕತೆಯೋ ಹಾಗೆಯೇ ವ್ಯವಹಾರದಲ್ಲಿ ಸಹ. ಅವರು ಪಂಪ ಭಾರತಕ್ಕೆ ಅರ್ಥಟಿಪ್ಪಣಿ ಬರೆದಿರುವರಷ್ಟೆ. ಆದರೆ ಅವರು ತಮ್ಮ “ದೀಪಿಕೆ”ಯಲ್ಲಿ ಮೂಲ ಪದ್ಯಗಳನ್ನು ಕೊಟ್ಟಿಲ್ಲ. ಪದ್ಯಗಳ ಸಂಖ್ಯೆಯನ್ನು ನಮೂದಿಸಿ ಅರ್ಥ, ಟಿಪ್ಪಣಿ ಬರೆದಿದ್ದಾರೆ. “ನೀವು ಹೀಗೇಕೆ ಮಾಡಿದಿರಿ? ನಿಮ್ಮ ಗ್ರಂಥದ ಜೊತೆ ಮೂಲ ಪಂಪಭಾರತವನ್ನು ಬೇರೆ ಇಟ್ಟುಕೊಳ್ಳಬೇಕಾಗಿ ಬರುತ್ತದಲ್ಲ. ಮೂಲವನ್ನೂ ಕೊಡಬಾರದಾಗಿತ್ತೇ?” ಎಂದು ಕೇಳಿದೆ. ಅವರು ಮೂಲ ನನ್ನದಲ್ಲ. ನಾನು ಹೇಗೆ ಅದನ್ನು ಉಪಯೋಗಿಸಲಿ ಎಂದರು. ನಾನು ಮೂಲ ಪಂಪನದು. ನಿಮ್ಮದಲ್ಲವೆಂದರೆ ಅರ್ಥವೇನು ಎಂದೆ. ಅವರು ಅದು ಸರ್ಕಾರದವರು ಅಥವಾ ಸಾಹಿತ್ಯ ಪರಿಷತ್ತು ಎಂದರೋ ನೆನಪಿಲ್ಲ. ಪ್ರಕಟಿಸಿರುವ ಪುಸ್ತಕ. ನಾನು ಅದನ್ನು ಉಪಯೋಗಿಸಲು ನನಗೆ ಹಕ್ಕಿಲ್ಲ. ಒಂದು ದೃಷ್ಟಿಯಿಂದ ಅದು ಅವರ Copy right ಎಂದರು. ಇನ್ನೊಂದು ಮಾತ್ರಿಕೆ ಅಥವಾ ಹಸ್ತಪ್ರತಿ ನನಗೆ ಸಿಕ್ಕಿದ್ದರೆ ಹಾಗೆ ಮಾಡಬಹುದಿತ್ತು ಎಂದು ಮಾತನ್ನು ಮುಗಿಸಿದರು.

ಶ್ರೀಮಾನ್ ನರಸಿಂಹಾಚಾರ್ಯರದು ಸಫಲ ಜೀವನ. ಅವರು ಪುಣ್ಯವಂತರು ಎನ್ನಲು ಅಡ್ಡಿ ಇಲ್ಲ. ತಮಗೆ ಪ್ರಿಯವಾದ ವೃತ್ತಿಯನ್ನು ಹಿಡಿದು, ಅದನ್ನು ಏಕಾಗ್ರವಾಗಿ ನಿರ್ವಹಿಸಿ ಸ್ವಸೇವೆ ಸ್ವಾಮಿ ಸೇವೆ ಎರಡನ್ನು ಮಾಡಿ ವೃತ್ತಿಯ ಅತ್ಯುಚ್ಚ ಶಿಖರವನ್ನು ಏರಿದರು. ಮೈಸೂರು ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ಪಡೆದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ತಾವೇ ಪಾಠ ಹೇಳಿದ ವಿಶ್ವವಿದ್ಯಾಲಯದಲ್ಲಿ, ಕನ್ನಡದ ವಿಷಯದಲ್ಲಿ ತಮ್ಮ ಭವಿಷ್ಯದ ಅಶೋತ್ತರಗಳನ್ನೆಲ್ಲ ಕಾರ್ಯಗತ ಮಾಡಬಲ್ಲ ಶಕ್ತಿ, ದಕ್ಷತೆ, ವಿದ್ವತ್ತು, ಕ್ರಿಯಾ ಸಿದ್ಧಿಯನ್ನು ಗಳಿಸಿಕೊಂಡ ವಿಶ್ವವಿದ್ಯಾಲಯದ ಮುಖ್ಯ ಶಿಲ್ಪಿಯಾದ ತಮ್ಮ ಶಿಷ್ಯನ ಹಸ್ತದಿಂದಲೇ, “ಶಿಷ್ಯಾದಿಚ್ಚೇತ್ ಪರಾಜಯಂ ಎಂಬಂತೆ ಡಾಕ್ಟರೇಟ್ ಪಡೆದರು. ಹಿರಿಯ ತಲೆಮಾರಿನ ಇಂಥ ಶ್ರೇಷ್ಠ ವಿದ್ವಾಂಸರ ಸಹವಾಸದಲ್ಲಿ ಸಮಕಾಲೀನವಾಗಿ ಬಾಳಿದ ನಾವೂ ಅದೃಷ್ಟಶಾಲಿಗಳು. ಇವರನ್ನು ಜ್ಞಾಪಿಸಿಕೊಂಡಾಗಲೆಲ್ಲ ನನಗೆ ತಮಿಳುನಾಡು ಸ್ವಾಮಿನಾಥ ಅಯ್ಯರ್ ನೆನೆಪಾಗುತ್ತದೆ.

ಇಂತಹ ಮಹಾನ್ ಜೀವಿತಕ್ಕೆ ನಾವು ಸಲ್ಲಿಸಬಹುದಾದ ಕಾಣಿಕೆ ಏನು? ಬಾಯ ತುಂಬಿ ಹೊಗಳಿ ಪ್ರಶಂಸಿಸಿದರೆ ಸಾಕೆ? ಖಂಡಿತ ಅಲ್ಲ. ಅವರು ಹಾಕಿಕೊಟ್ಟ ಮಾರ್ಗವನ್ನು ಅನುಸರಿಸಬೇಕು. ಅಂಥ ವಿದ್ವಾಂಸರು ಕೆಲಸಮಾಡುವ ವಾತಾವರಣವನ್ನು ಸೃಷ್ಟಿಸಬೇಕು. ಪರಿಶೋಧನೆ ವಿದ್ವತ್ತು ಇವುಗಳ ಪ್ರವೃತ್ತಿಯುಳ್ಳವರು, ಏಕಾಗ್ರತೆ ನಿಷ್ಠೆ ಸತತೋದ್ಯೋಗ ಬಹುಭಾಷಾ ಪಂಡಿತ್ಯ ಸಮತೋಲನ ದೃಷ್ಟಿ ಇವುಗಳನ್ನು ದೊ.ಲ.ನ. ರಂತೆ ಅಭ್ಯಾಸ ಮಾಡಬೇಕು. “ನರಸಿಂಹಾಚಾರ್ಯರ ಅಭಾವವನ್ನು ಇವರು ತುಂಬುತ್ತಾರೆ” ಎನಿಸಿಕೊಳ್ಳುವವರಾಗಬೇಕು. ಅಂಥವರಿಗೆ ಸರ್ವಸಹಾಯವನ್ನು ಜನತೆ, ವಿಶ್ವವಿದ್ಯಾಲಯ, ಸಾಹಿತ್ಯ ಪರಿಷತ್ತು ಸರ್ಕಾರ ಒದಗಿಸಬೇಕು.

ವಿಶ್ವವಿದ್ಯಾಲಯದವರು ನರಸಿಂಹಾಚಾರ್ರ ಸ್ವಂತ ಗ್ರಂಥ ಭಾಂಡಾರ, ಪಾಠಗಳ ಟಿಪ್ಪಣಿ, ಓಲೆಗರಿ, ತಾಳೆಗರಿ ಪ್ರತಿಗಳು ಈ ಬಗೆಯ ಅಮೂಲ್ಯ ಕೃತಿಗಳನ್ನೆಲ್ಲ ತೆಗೆದುಕೊಂಡು ಪ್ರತಿಫಲ ಕೊಟ್ಟು ಅವನ್ನೆಲ್ಲ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜೋಪಾನಗೊಳಿಸುವುದರಿಂದ, ಕನ್ನಡ ಪ್ರೇಮಿಗಳಿಗೂ ಅಧ್ಯಾಪಕರಿಗೂ ಮುಂದಲ ಜನಾಂಗಕ್ಕೂ ಒಂದು ದೊಡ್ಡ ನಿಧಿಯನ್ನು ಕಾಯ್ದಿಟ್ಟಂತಾಗುವದು.

[ಈ ಲೇಖನದಲ್ಲಿ ಅಲ್ಲಲ್ಲಿ ನನ್ನ ವಿಚಾರ ಪ್ರಸ್ತಾಪಕ್ಕೆ ಬಂದಿರುವುದು ಡಿ.ಎಲ್.ಎನ್.ರವರ ಗುಣಶಕ್ತಿಗಳ ದೃಷ್ಟಾಂತಕ್ಕಾಗಿಯೇ ದೊರತು. ನನ್ನ ಆತ್ಮಕಥೆಯ ಪ್ರಸಂಗಕ್ಕಾಗಿ ಅಲ್ಲ. ಲೇಖನಕ್ಕೆ ಹೆಚ್ಚು ನಿಷ್ಕೃತಷ್ಟತೆ ಉಂಟಾಗುವುದಕ್ಕಾಗಿ ಅವರ ಪತ್ರಗಳನ್ನು ಉದ್ಧರಿಸಿದ್ದೇನೆ.]

* ಕನ್ನಡ ನುಡಿ (ಸಂ. ೩೪, ಸಂಚಿಕೆ ೧೫, ೧೬) ಪು. ೩೧