ಡಾ. ಡಿ.ಎಲ್. ನರಸಿಂಹಾಚಾರ್ಯರನ್ನು ಮೊದಲು ನೋಡಿದವರಿಗೆ ಎದ್ದು ಕಾಣುವುದು ಅವರ ವಿನಯ, ಅವರ ಸೌಜನ್ಯ, ಅವರ ಮಿತಭಾಷಿತ್ವ, ಅವರಾಗಿ ಮಾತನಾಡಿಸುವುದು ಕಡಿಮೆ. ಮಾತನಾಡುವುದಾದರೂ ಒಂದೆರಡು ಮಾತುಗಳಲ್ಲಿ ಮುಗಿಸುವರು. ಅಂತೆಯೇ ನೂಲುವುದು ಅವರಿಗಾಗದು. ನುಡಿದರೆ ಎಲ್ಲಿ ಮುತ್ತು ಬಿದ್ದು ಹೋಗುವುದೊ ಎಂಬುದಾಗಿ ಅವರು ಎಣಿಸುತ್ತಿದ್ದರೊ ಏನೊ!

ಹಾಗೆಂದು ಯಾವುದಾದರೂ ಕೆಲಸದ ಮೇಲೆ ಅಥವಾ ಭೆಟ್ಟಿಗಾಗಿ ಅವರ ಮನೆಗೆ ಹೋದರೆ, ಅವರು ಯಾವ ಅಡಂಬರ ಗೊಂದಲಗಳಿಲ್ಲದೆ ನೇರವಾಗಿ ಮುಗುಳ್ನಗೆಯಿಂದ “ಬನ್ನಿ” ಎದುರ್ಗೊಂಡು ಕುಳ್ಳಿರಿಸಿ ಕುಶಲ ಪ್ರಶ್ನೆಗಳನ್ನು ತೂಷ್ಣಿಯಾಗಿ ಕೇಳಿ ಬಂದಂಥ ಕೆಲಸವನ್ನು ವಿಚಾರಿಸುತ್ತಿದ್ದರು. ಯಾವುದೋ ಕೃತಿಯ ವಿಚಾರ, ಪ್ರಯೋಗದ ವಿಚಾರ, ಅರ್ಥದ ವಿಚಾರ, ಪಾಠಾಂತರಗಳ ವಿಚಾರ ಇತ್ಯಾದಿಯನ್ನು ಮುಂದಿಟ್ಟರೆ, ಅದೆಷ್ಟು ಸಮರ್ಪಕವಾಗಿ ಅವರು ವಿವರಣೆಗಳನ್ನು ಕೊಡುತ್ತಿದ್ದರು! ಅವರ ನೆನಪು ಅದ್ಭುತ! ಪ್ರಯೋಗಗಳ ಜ್ಞಾನದಿಂದ ಶಬ್ದಾರ್ಥಗಳ ನಿಷ್ಕೃಷ್ಟಜ್ಞಾನ ಅವರಿಗಿತ್ತು. ಪ್ರಾಯಶಃ ಅವರು ಸಂಪೂರ್ಣವಾಗಿ ಅಭ್ಯಾಸ ಮಾಡದ ಹಳಗನ್ನಡ ಕಾವ್ಯಗ್ರಂಥ ಉಳಿದಿಲ್ಲ ಎಂದರೆ ಅತಿಶಯೋಕ್ತಿಯಾಗದು. ಇನ್ನೂ ಬೆಳಕು ಕಾಣದ ಗರಿಯೋಲೆ ಗ್ರಂಥಗಳನ್ನು ಓರಿಯಂಟಲ್ ಲೈಬ್ರರಿಯಲ್ಲಿ ಅವರು ಮೊದಲಲ್ಲಿ ಕೆಲಸ ಮಾಡುತ್ತಿದ್ದಾಗ ವ್ಯಾಸಂಗ ಮಾಡಿ ಅವುಗಳಲ್ಲಡಗಿದ್ದ ಸಂಪತ್ತನ್ನು ಸೂರೆಗೊಂಡರು. ಬಲಕೊಟ್ಟಿತು. ಗ್ರಂಥಸಂಪಾದನೆಯ ಮರ್ಮವನ್ನು ಸಂಪೂರ್ಣವಾಗಿ ಅರಿತವರಾಗಿದ್ದರು. ಆ ಹೆಸರಿನ ಅವರ ಗ್ರಂಥ ಇದಕ್ಕೆ ಸಾಕ್ಷಿಯಾಗಿದೆ. ತಾವು ಸಂಪಾದಿಸಿದ ವಡ್ಡಾರಾಧನೆ, ಶ.ಮ.ದ ಮೊದಲಾದ ಗ್ರಂಥಗಳಲ್ಲಿಯೂ ಈ ಬಲ್ಲಾಳ್ತನವನ್ನು ಕಾಣಬಹುದು. ಪ್ರಕಾಂಡ ಪಂಡಿತರವರು. ಅವರು ನಿಜವಾಗಿಯೂ ದೊಡ್ಡ ಬೆಲೆಯ ನರಸಿಂಹಾಚಾರ್ಯರು. ಅವರ ಮನೆ ಹೆಸರು ಹಾಗೆ. ಆ ಹೆಸರು ಅವರಿಗೆ ಎಷ್ಟು ಒಪ್ಪಿತವಾಗಿದೆ. ವಿದ್ಯಾವಿನಯ ಸಂಪನ್ನತೆಯ ಪ್ರತೀಕ

ಬರಿಯ ಕನ್ನಡ ನಿಘಂಟು ಪ್ರಯೋಗಗಳ ಅವತಾರ ಅವರಲ್ಲ. ಅವರು ಚರಿತ್ರೆ ವಿಮರ್ಶೆಗಳಲ್ಲಿಯೂ ಸವ್ಯಸಾಚಿಯಾಗಿದ್ದರು. ನಾನು ಕಿಟಲ್‌ಕೋಶದ ಕೆಲಸವನ್ನು ಮಾಡುತ್ತಿದ್ದಾಗ ಅವರು ಆಗಾಗ ನನ್ನೊಡನೆ ಅದರ ಮುನ್ನಡೆಯ ವಿಚಾರವಾಗಿ ಕೇಳುತ್ತಿದ್ದರು. ಕಿಟಲ್‌ರ ಕೋಶದ ವಿಚಾರವಾಗಿ ರೈಸ್‌ಸಾಹೇಬರು ಮಡಿದ ಸುದೀರ್ಘ ವಿಮರ್ಶೆಯನ್ನು ನನ್ನ ದೃಷ್ಟಿಗೆ ತಂದವರು ಅವರು.

ಕನ್ನಡದ ಕಾವ್ಯಾಂಬುಧಿಯಲ್ಲಿ ಅವಗಾಹಿಸಿದ ವೀರರು ನರಸಿಂಹಾಚಾರ್ಯರರು. ಅದೆಷ್ಟೊ ರತ್ನಗಳನ್ನು ಅವರು ಪಡೆದಿರಬೇಕು. ಅವೆಲ್ಲವೂ ಅವರೊಡನೆ ಕಣ್ಮರೆಯಾಗದೆಂಬಂತೆ, ಕೆಲವನ್ನಾದರೂ ನಮಗೆ ಬಿಟ್ಟು ಹೋಗಿರುವುದು ನಮ್ಮ ಭಾಗ್ಯ. ಪಂಪಭಾರತಕ್ಕೆ ಮಹತ್ವದ ವ್ಯಾಖ್ಯಾನವನ್ನು ಬರೆದು ಪೂರಯಿಸಿ ಅವರು ತಮ್ಮ ಕೊನೆಯುಸಿರನ್ನೆಳೆದರು. ಇದೊಂದು ಅನರ್ಘ್ಯರತ್ನವಿರಬೇಕು. ಇನ್ನು ಕೆಲವು ಕಾಲ ಅವರು ಬಾಳಿದ್ದರೆ, ಮತ್ತೆ ನಮಗೆ ಕೆಲವು ರತ್ನಗಳು ಲಭಿಸುತ್ತಿದ್ದುವು. ಆ ಭಾಗ್ಯ ನಮ್ಮದಲ್ಲ.

ಸಾಹಿತ್ಯ ಪರಿಷತ್ತಿನಲ್ಲಿ ಸಿದ್ಧವಾಗುತ್ತಲಿರುವ ಕನ್ನಡ ನಿಘಂಟಿಗೆ ಅವರಿಂದ ಸಂದ ಸೇವೆ ಅವರ್ಣನೀಯ. ನಿಘಂಟು ಅವರ ಜೀವನದ ಉಸಿರಾಗಿತ್ತು. ತಮ್ಮ ಕೊನೆಯ ಕಾಲದಲ್ಲಿ ಒಂದಿಷ್ಟು ಪ್ರಜ್ಞೆಯಿದ್ದಾಗ ಸಮೀಪದಲ್ಲಿದ್ದ ಶ್ರೀರಾಘವಾಚಾರ್ಯರರೊಡನೆ ‘‘ಕೂಱ್‌’ ಶಬ್ದದ ಜ್ಞಾತಿ ಪದಗಳ ವಿಷಯವಾಗಿ ಏನೋ ಕನವರಿಸುತ್ತಿದ್ದರಂತೆ. ಅವರು ನಿಘಂಟುವಿನಲ್ಲಿ ಐಕ್ಯವಾಗಿದ್ದರು.

ಇಂಥ ಘನವ್ಯಕ್ತಿ ಸದಾ ಅಭಿಮಾನ ಮೂರ್ತಿಯಾಗಿ ಬಾಳಿದರು. ತಾನಾಯ್ತು ತನ್ನ ಕೆಲಸವಾಯ್ತು, ತನ್ನ ಸ್ವಂತಕ್ಕಾಗಿ ಅವರು ಯಾರೊಡನೆಯೂ ಹೋಗಿ ಏನನ್ನೂ ಕೇಳಿದವರಲ್ಲ. ಯಾವ ಕಷ್ಟ ಕಾರ್ಪಣ್ಯಗಳೇ ಆಗಲಿ ಮೌನದಿಂದ ಸಹಿಸುವ ಮನೋವೃತ್ತಿ ಅವರದಾಗಿತ್ತು.

ಅವರ ಅನುಪಮ ಪಾಂಡಿತ್ಯ, ಅಧ್ಯಾಪನ, ಭಾಷಾಸೇವೆ, ಸಜ್ಜನಶೀಲ ಸಂಪನ್ನತೆ ಇತ್ಯಾದಿ ಗುಣಗಳನ್ನು ಗಮನಿಸಿಕೊಂಡು ಮೈಸೂರು ವಿಶ್ವವಿದ್ಯಾನಿಲಯವು ಅವರನ್ನು ಡಾಕ್ಟರೇಟ್‌ ಪದವಿಯಿಂದ ಗೌರವಿಸಿದುದು ಅತ್ಯಂತ ಸೂಕ್ತವಾಗಿದೆ. ಡಾ. ನರಸಿಂಹಾಚಾರ್ಯರರು ನಿಜವಾಗಿಯೂ ಕನ್ನಡ ಮಕ್ಕಳಿಗೆ ಓರ್ವ ಆದರ್ಶನ ಮಹಾ ವಿದ್ವಾಂಸರು.

* ಕನ್ನಡನುಡಿ (ಸಂ. ೩೪, ಸಂಚಿಕೆ ೧೫.೧೬) ಪು. ೩೦