ದಿವಂಗತ ಪ್ರೊಫೆಸರ್ ಡಾ. ಡಿ.ಎಲ್. ನರಸಿಂಹಾಚಾರ್ಯರು ಕೆಲವು ವರ್ಷಗಳಿಂದ ಹೃದ್ರೋಗದ ಮೂಲಕ ಅಸ್ವಸ್ಥರಾಗಿದ್ದರು. ಆ ಕಾಲದಲ್ಲಿಯೂ ಸಹ ಅವರ ವಾಙ್ಮಯ ಸೇವೆಯು ನಿರಂತರವಾಗಿ ನಡೆಯುತ್ತಿತ್ತು. ಅವರ ಅನಪೇಕ್ಷಿತ ಮೃತ್ಯುವಿನಿಂದ ಕನ್ನಡ ವಿದ್ಯಾಕ್ಷೇತ್ರದ ಮೇಲೆ ದೊಡ್ಡ ಆಘಾತವಾಗಿದೆ. ಪ್ರಾಚೀನ ಕನ್ನಡ ಅಭ್ಯಾಸಕ್ಕೆ ಆದ ಹಾನಿಯನ್ನು ತುಂಬಿ ತರುವುದು ದುಷ್ಕರವಾಗಿದೆ. ಮರಣಕ್ಕಿಂತ ಕೆಲವು ದಿವಸ ಮುಂಚೆ ‘ಆಲೋಕ’ದಲ್ಲಿಯ ಕನ್ನಡ ನಿಘಂಟಿನ ಚರ್ಚೆಯಲ್ಲಿ ಅವರು ಇಷ್ಟೊಂದು ತನ್ಮಯರಾಗುತ್ತಿದ್ದರಲ್ಲ, ಅವರ ಜೀವನವು ಇಷ್ಟು ಶೀಘ್ರವಾಗಿ ಕೊನೆಗಾಣೀತೆಂದು ಯಾರಿಗೂ ಅನಿಸುತ್ತಿದ್ದಿಲ್ಲ.

ನರಸಿಂಹಾಚಾರ್ಯರು ಮುಖ್ಯತಃ ಶಿಕ್ಷಕರಾಗಿದ್ದರೂ ಸಹ ಅವರ ಜೀವನದ ವೈಶಿಷ್ಟ್ಯವೆಂದರೆ ಸಂಶೋಧನ ಕಾರ್ಯ. ಅವರ ಸ್ಮರಣ ಶಕ್ತಿಯು ವಿಶಾಲವಾಗಿತ್ತು. ಹಿಂದೆ ಓದಿದ ಸಂಗತಿಗಳನ್ನೂ ಸಂದರ್ಭಗಳನ್ನೂ ನೇರವಾಗಿ ಹೇಳುತ್ತಿದ್ದರು. ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಸಂಬಂಧವಾಗಿರುವ ಸಂಸ್ಕೃತ, ಪ್ರಾಕೃತ ಮತ್ತು ತಮಿಳು ಸಾಹಿತ್ಯಗಳಲ್ಲಿಯ ಸಂಶೋಧನೆಗಳ ಕಡೆಗೆ ಅವರು ಯಾವಾಗಲೂ ಗಮನ ಕೊಡುತ್ತಿದ್ದರು. ಈ ಕಾರಣ ಅವರ ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯದ ಅಭ್ಯಾಸಕ್ಕೆ ಒಂದು ವೈಶಿಷ್ಟ್ಯವು ಬರುತ್ತಿತ್ತು. ಈ ಸಂಗತಿಯನ್ನು ನಾವು ಅವರ ‘ಸುಕುಮಾರ ಚರಿತೆ’ಯ ಪ್ರಸ್ತಾವನದಿಂದ ಕಾಣಬಹುದು. ಹಳಗನ್ನಡದ ಜೈನ ಸಾಹಿತ್ಯದಲ್ಲಿ ಅವರಿಗೆ ವಿಶಿಷ್ಟ ಪಾಂಡಿತ್ಯವಿತ್ತು ಮತ್ತು ಬೇರೆ ಬೇರೆ ಭಾಷೆಗಳಲ್ಲಿ ನಡೆಯುತ್ತಿರುವ ಜೈನ ಸಾಹಿತ್ಯದಲ್ಲಿನ ಸಂಶೋಧನೆಗಳನ್ನು ಕಂಡುಹಿಡಿದು ಕನ್ನಡ ಸಾಹಿತ್ಯದಲ್ಲಿನ ಜಟಿಲ ಪ್ರಶ್ನೆಗಳನ್ನೂ ಬಿಡಿಸಲಿಕ್ಕೆ ಅವರು ಒಳ್ಳೆಯ ಪ್ರಯತ್ನವನ್ನು ಮಾಡಿದ್ದಾರೆ. ಅವರ ಶಬ್ದಮಣಿದರ್ಪಣದ ಆವೃತ್ತಿಯನ್ನು ನೋಡಿದರೆ ಕನ್ನಡ ಭಾಷೆಯ ಮೇಲಿನ ಅವರ ಪ್ರಭುತ್ವವು ಸ್ಪಷ್ಟವಾಗಿ ತೋರುತ್ತದೆ.

ಏನೋ ಮೂವತ್ತಾರು ವರ್ಷಗಳ ಹಿಂದೆ ಮೈಸೂರಿನ ‘ಆಲ್ ಇಂಡಿಯಾ ಓರಿಯಂಟಲ್ ಕಾನ್ಫರೆನ್ಸ್ ಸಮಯದಲ್ಲಿ ನಾನು ಗಳಿಸಿದ ಹಲವು ವಿದ್ಯಾಮಿತ್ರರಲ್ಲಿ ದಿವಂಗತ ನರಸಿಂಹಾಚಾರ್ಯರು ಒಬ್ಬರು. ವಿದ್ವಾಂಸರಿದ್ದರೂ ಅವರು ಅತ್ಯಂತ ವಿನಯಶೀಲರು. ಅಭ್ಯಾಸದಲ್ಲಿ ಮತಭೇದಗಳಾದರೂ ಸಂಶೋಧಕರಲ್ಲಿ ಬೇಕಾದ ಸಹೃದಯ ಮಿತ್ರತ್ವವು ಅವರಲ್ಲಿ ಸುದೈವ ಮನೆ ಮಾಡಿಕೊಂಡಿತ್ತು. ಆ ಕಾಲಕ್ಕೆ ಅವರು ಜೈನ ರಾಮಾಯಣದ ಮೇಲೆ ಒಂದು ನಿಬಂಧವನ್ನು ಬರೆದಿದ್ದರು. ಇವರ ಸಂಬಂಧದ ಚರ್ಚೆ ನಮ್ಮ ಮಿತ್ರತ್ವಕ್ಕೆ ಕಾರಣ. ಜಟಾಸಿಂಹ ನಂದಿ, ಕವಿಪರಮೇಶ್ವರ, ಚಾವುಂಡರಾಯ, ನೇಮಿಚಂದ್ರ ಇತ್ಯಾದಿ ಕವಿಗಳ ಮತ್ತು ಗ್ರಂಥಕರ್ತರ ಸಂಬಂಧವಾಗಿ ನಾನು ಬರೆದ ಲೇಖನಗಳು ಓದಿ ನನಗೆ ಮಹತ್ವಪೂರ್ಣ ಸಂದರ್ಭಗಳನ್ನು ಕೊಟ್ಟರಷ್ಟೇ ಅಲ್ಲ, ಎಷ್ಟೋನನ್ನ ಲೇಖನಗಳನ್ನು ಕನ್ನಡ ವಿದ್ವಾಂಸರಿಗಾಗಿ ಕನ್ನಡದಲ್ಲಿ ಪ್ರಸಿದ್ಧ ಮಾಡಿದರು. ವಡ್ಡಾರಾಧನೆಯ ಮೇಲೆ ಅವರು ಸುಮಾರು ನಲವತ್ತು ವರ್ಷಗಳಿಂದ ಒಂದಿಲ್ಲೊಂದು ಪ್ರಸಂಗದಲ್ಲಿ ಲೇಖನಗಳನ್ನು ಬರೆಯುತ್ತ ಬಂದಿದ್ದಾರೆ. ಈ ಸಂದರ್ಭದಲ್ಲಿ ನಮ್ಮಿಬ್ಬರ ನಡುವೆ ನಡೆದ ಪತ್ರ ವ್ಯವಹಾರವೆಂದರೆ ಅದೊಂದು ಸಾಹಿತ್ಯದ ಸಣ್ಣ ಸಂಪುಟವೇ ಸರಿ. ಮೈಸೂರಿಗೆ ನಾನು ಬಂದಾಗ ಅವರನ್ನು ಕಾಣಲಿಲ್ಲ, ಹೀಗೆ ಎಂದಿಗೂ ಆಗುತ್ತಿರಲಿಲ್ಲ. ನಾನು ಮೈಸೂರು ವಿಶ್ವವಿದ್ಯಾಲಯದಲ್ಲಿ ಬಂದಿದ್ದರಿಂದ ಅವರಿಗೆ ಸಂತೋಷವಾಗಿತ್ತು. ಅದಕ್ಕಿಂತಲೂ ನನಗೆ ಹೆಚ್ಚು ಸಂತೋಷವಾಗಿತ್ತು. ಪ್ರತಿ ಭಾನುವಾರ ಬೆಳಿಗ್ಗೆ ನಾನು ಅವರೆಡೆಗೆ ಹೋಗುತ್ತಿದ್ದೆ. ಅವರು ನನ್ನೆಡೆಗೆ ಅತಿಥಿ ಗೃಹದಲ್ಲಿ ಒಮ್ಮೆ ಬಂದದ್ದನ್ನು ಕಂಡು ನಾನು ಬೆರಗಾದೆ. “ತಾವು ಈ ತರಹ ಶಾರೀರಿಕ ಕಷ್ಟ ತೆಗೆದುಕೊಳ್ಳಬೇಡಿ. ನಾನೇ ತಮ್ಮಲ್ಲಿ ಆಗಾಗ್ಗೆ ಬರುವೆ” ಎಂದು ನಾನು ಭಿನ್ನವಿಸಿದೆ. ಇಂಥ ಸಹೃದಯ ಸಂಶೋಧಕರನ್ನು ಕಳೆದುಕೊಂಡದ್ದರಲ್ಲಿ ನನಗೆ ಅಪಾರ ದುಃಖವೆನಿಸುತ್ತದೆ.

ಪ್ರತ್ಯುತ್ಪನ್ನ ಮತಿಯ ನರಸಿಂಹಾಚಾರ್ಯರ ಒಂದು ಪ್ರಸಂಗವನ್ನು ನಾನು ಮರೆಯಲಾರೆ. ಮೈಸೂರಿನಲ್ಲಿ ಒಂದು ಸಭೆಯ ಅಧ್ಯಕ್ಷರಾಗಿ ನನ್ನ ಪರಿಚಯ ಮಾಡಿಕೊಟ್ಟಿದ್ದರು. “ಉಪಾಧ್ಯೆಯವರ ಹೆಸರಿನ ಆದ್ಯಕ್ಷರಗಳನ್ನು (ಆ.ನೆ.ಉ.), ಅವರು ಆನೆಯಂತೆ ತಮ್ಮ ವಿಷಯದಲ್ಲಿ ಮತ್ತು ಪಾಂಡಿತ್ಯದಲ್ಲಿ ದಿಗ್ಗಜರು”. ಈ ವಾಕ್ಯವನ್ನು ಕೇಳಿ ನಾನು ಕರಗಿ ಹೋದೆ. ಉತ್ತರ ಕೊಡುವಾಗ ನಾನು ಮಾತಾಡಿದ್ದು ಹೀಗೆ. “ಇಲ್ಲಿ ಹಲವು ವಿದ್ವಾಂಸರು ಕೂಡಿದ್ದಾರೆ. ದಯಮಾಡಿ ನನ್ನ ಹೆಸರಿನ ಇಂಗ್ಲಿಷ್ ಅಕ್ಷರಗಳನ್ನು ಎ.ಎನ್.ಯು ನೋಡಿರಿ, ನಾನು ಅಣುಮಾತ್ರವೇ ಸರಿ…..” ನರಸಿಂಹಾಚಾರ್ಯರು ನಕ್ಕು ಬಿಟ್ಟರು.

ನರಸಿಂಹಾಚಾರ್ಯರಿಗೆ ನಮ್ಮಿಂದ ಸ್ತುತಿಯೂ ಬೇಕಾಗಿಲ್ಲ. ಸಮ್ಮಾನವೂ ಅವರಿಗೆ ಇಷ್ಟವಿಲ್ಲ. ಅವರ ಸಂಶೋಧನ ಕಾರ್ಯವು ಇವೆಲ್ಲವುಗಳನ್ನು ಮೀರಿ ನಿಂತಿದೆ. ಅವರ ಶಿಷ್ಯ ವರ್ಗವು ಬಹಳೇ ದೊಡ್ಡದು. ಅವರ ಮಿತ್ರ ಪರಿವಾರವೂ ಸಹ ವಿಶಾಲವಾಗಿದೆ. ಕನ್ನಡ ಭಾಷೆ ಕನ್ನಡ ಸಾಹಿತ್ಯದ ಸೇವೆ ಇವೆರಡೂ ಅವರ ವ್ಯಸನಗಳಾಗಿದ್ದವು. ಅವರ ವ್ಯಾಸಂಗದ ಲಾಭವು ಕನ್ನಡ ನಿಘಂಟುವಿಗೆ ಇನ್ನು ಮುಂದೆ ದೊರೆಯುವಂತಿಲ್ಲ. ಈ ಕಾರ್ಯವನ್ನು ಅಷ್ಟೇ ಪ್ರಗಲ್ಭತೆಯಿಂದ ಮುಂದುವರಿಸಬೇಕು. ಇದು ಎಲ್ಲರ ಅಪೇಕ್ಷೆ ಇದರಲ್ಲಿ ಸಹೃದಯ ವಿದ್ವಾಂಸರ ಸಹಯೋಗವು ಅತ್ಯಂತ ಅವಶ್ಯ.

ನರಸಿಂಹಾಚಾರ್ಯರಿಗೆ ನಾವು ಯೋಗ್ಯ ಸಮ್ಮಾನವನ್ನೀಯುವುದಾದರೆ, ಅವರು ನಮಗೆ ಕೊಟ್ಟ ಸಾಧನೆಗಳನ್ನು ನಾವು ಯೋಗ್ಯವಾಗಿ ಉಪಯೋಗಿಸಬೇಕು ಮತ್ತು ಅವರು ಮಾಡಿ ಬಿಟ್ಟಿರುವಂಥ ಕಾರ್ಯವನ್ನು ಮುಂದುವರಿಸಬೇಕು. ಭಾರತೀಯ ಯಾವ ಭಾಷೆಯಲ್ಲಿಯೂ ಸುಲಭವಾಗಿ ದೊರೆಯದಂತಿರುವ ಅಮೂಲ್ಯವಾದ ಗ್ರಂಥವನ್ನು ಕನ್ನಡ ವಿದ್ವಾಂಸರಿಗೆ ನರಸಿಂಹಾಚಾರ್ಯರು ಕೊಟ್ಟಿದ್ದಾರೆ. ಅದರ ಹೆಸರು ಕನ್ನಡ ಗ್ರಂಥ ಸಂಪಾದನೆ. ಇದೊಂದು ಸಾಧನೆ. ಕಿಟ್ಟಲ್, ರೈಸ್ ಮೊದಲಾದವರು ನಮಗೆ ನೀಡಿದ ಮೌಲಿಕ ಸಾಧನೆಗಳಷ್ಟೇ ಮಹತ್ವದ್ದು. ಸಂಸ್ಕೃತ ಕಾವ್ಯಗಳಿಗೆ ಸರಿಗಟ್ಟುವಂಥ ಕಾವ್ಯಗಳು ಹಳಗನ್ನಡದಲ್ಲೂ ಉಪಲಬ್ಧವಿವೆ ಮತ್ತು ಸುದೈವದಿಂದ ಅವುಗಳ ಹಸ್ತಲಿಖಿತಗಳೂ ದೊರೆಯುತ್ತವೆ. ಎಷ್ಟೋ ಗ್ರಂಥಗಳು ಮುದ್ರಿತವಾಗಿದ್ದರೂ, ಕೆಲವೆಡೆಯಲ್ಲಿ ಪಾಠಾಂತರಗಳನ್ನು ಹಾಕಿದ್ದರೂ, ಇವುಗಳ ಸಂಶೋಧನೆಯು ಆಗ ಬೇಕಾದಷ್ಟು ಯೋಗ್ಯ ರೀತಿಯಿಂದ ಆಗಿದೆ ಎಂದು ಹೇಳಲಾಗದು. ನರಸಿಂಹಾಚಾರ್ಯರು ಈ ಗ್ರಂಥ ಸಂಪಾದನಾ ಕಲೆಯಲ್ಲಿ ನಿಪುಣರು. ಅವರ ಹಳಗನ್ನಡದ ಭಾಷೆಯ ಅಭ್ಯಾಸ ಆಳವಾದುದು. ಬೇರೆ ಬೇರೆ ಕಾವ್ಯಗಳನ್ನು ಓದಿ ಅವರು ಅನುಭವ ಪಡೆದವರು. ಗ್ರಂಥ ಸಂಪಾದನೆಯಲ್ಲಿ ಮೌಲಿಕ ತತ್ತ್ವಗಳನ್ನು ಅವರು ತಿಳಿದು ಕನ್ನಡ ಕಾವ್ಯಗಳಲ್ಲಿ ಅವನ್ನೆಲ್ಲಾ ಹೇಗೆ ಉಪಯೋಗಿಸಬೇಕು ಎಂಬ ಮಾತನ್ನು ಸೋದಾಹರಣವಾಗಿ ತಮ್ಮ ಈ ಗ್ರಂಥದಲ್ಲಿ ತಿಳಿಸಿ ಹೇಳಿದ್ದಾರೆ. ನರಸಿಂಹಾಚಾರ್ಯರ ಈ ಗ್ರಂಥವನ್ನು ಅಭ್ಯಸಿಸಿ ಅವರು ತೋರಿಸಿದ ದಾರಿಯನ್ನು ತಿಳಿದುಕೊಂಡು ಪ್ರಾಚೀನ ಕನ್ನಡ ಕಾವ್ಯಗಳ ಸಂಪಾದನೆಯಾದರೆ ಅದೊಂದು ಕನ್ನಡ ಸಾಹಿತ್ಯಕ್ಕೆ ಗೌರವ, ಭಾರತೀಯ ಸಾಹಿತ್ಯಕ್ಕೆ ಹೆಮ್ಮೆಯ ಮಾತು. ಈ ಕಾರ್ಯವನ್ನು ನಾವು ಮುಂದುವರಿಸಿದರೆ ನರಸಿಂಹಾಚಾರ್ಯರ ಕೃತಜ್ಞತೆಯಿಂದ ಸ್ವಲ್ಪಮಟ್ಟಿಗೆ ನಮ್ಮ ಬಿಡುಗಡೆಯಾದೀತು.

ಪಂಪಭಾರತ ಅಥವಾ ವಿಕ್ರಮಾರ್ಜುನ ವಿಜಯದ ಮಹತ್ವನ್ನು ಕನ್ನಡಿಗರಿಗೆ ಹೇಳಬೇಕಾಗಿಲ್ಲ. ಅದರ ಸ್ತುತಿ ಎಷ್ಟೋ ಜನರು ಮಾಡಬಹುದು. ಆದರೆ ಅದರ ಅರ್ಥವನ್ನು ನೇರವಾಗಿ ಹೇಳುವ ಕನ್ನಡ ವಿದ್ವಾಂಸರ ಸಂಖ್ಯೆ ಕಡಿಮೆ. ಅವರಲ್ಲಿ ಹಿರಿಯರು ನರಸಿಂಹಾಚಾರ್ಯರು. ಭಾರತೀಯ ಜ್ಞಾನಪೀಠದಿಂದ ಪ್ರಕಾಶಿತವಾಗಬೇಕಿದ್ದ ಪಂಪಭಾರತ ಆವೃತ್ತಿಯನ್ನು ಅವರೇ ಸಿದ್ಧಪಡಿಸುವವರಿದ್ದರು. ಹೃದ್ರೋಗದ ಮೂಲಕ ಮತ್ತು ಕನ್ನಡ ನಿಘಂಟಿನ ಕಾರ್ಯಭಾರದ ಮೂಲಕ ಈ ಕಾರ್ಯವನ್ನು ಅವರು ಬದಿಗಿಡಬೇಕಾಯಿತು. ಆದರೂ ಒಳ್ಳೆಯ ಪ್ರಯಾಸದಿಂದ ‘ಪಂಪಭಾರತ ಪೀಠಿಕೆ’ ಎಂಬ ತಮ್ಮ ಹೊತ್ತಗೆಯನ್ನು ಮುಗಿಸಿದ್ದಾರೆ. ಅದು ಪಂಪನ ಮಾರ್ಗವನ್ನೂ, ಪಂಪನಲ್ಲಿಯ ಅರ್ಥವೈವಿಧ್ಯವನ್ನೂ ತಿಳಿಯಲು ಮತ್ತು ಕಂಡುಹಿಡಿಯಲು ಪಂಡಿತರಿಗೆ ದೊರೆತ ಒಂದು ದೀವಿಗೆಯೇ ಸರಿ. ಈ ದೀವಿಗೆಯ ಸಹಾಯದಿಂದ ಇಡೀ ಪಂಪಭಾರತದ ಅನುವಾದವನ್ನು ಕನ್ನಡದಲ್ಲಿ ಮಾಡಬೇಕು, ಮುಂದೆ ಹಿಂದಿಯಲ್ಲಿಯೂ ಮಾಡಬೇಕು ಅಂದರೆ ನಾವು ನಮ್ಮ ದೇಶದ ಕವಿಗಳ ಕೂಡ ಜನಸಾಮಾನ್ಯರ ಹೃದಯದಲ್ಲಿ ಪಂಪನ ಹಿರಿಮೆಯನ್ನು ಸ್ಥಾಪಿಸಿದಂತಾಗುತ್ತದೆ ಮತ್ತು ನರಸಿಂಹಾಚಾರ್ಯರು ಆರಂಭಿಸಿದ ಕಾರ್ಯವನ್ನು ಮುಂದುವರಿಸಿದಂತಾಗುತ್ತದೆ.

ಮೇಲೆ ಹೇಳಿದಂತೆ ಸುಮಾರು ಮೂವತ್ತು ನಲವತ್ತು ವರ್ಷಗಳಲ್ಲಿ ನರಸಿಂಹಾಚಾರ್ಯರು ಬೇರೆ ಬೇರೆ ಸಂದರ್ಭಗಳಲ್ಲಿ ವಡ್ಡಾರಾಧನೆಯ ಮೇಲೆ ಸಂಶೋಧಕ ಪೂರಕವಾದ ಕಾರ್ಯವನ್ನು ಮಾಡಿದ್ದಾರೆ. ನಿಜವಾಗಿ ವಡ್ಡಾರಾಧನೆಗೆ ಕನ್ನಡದಲ್ಲಿ ಜೀವನವನ್ನು ಕೊಟ್ಟ ಶ್ರೇಯವು ಅವರದೇ. ವಡ್ಡಾರಾಧನೆಯ ಅಭ್ಯಾಸಕ್ಕೆ ಬೇಕಾದ ಹಲವಾರು ಸಂಗತಿಗಳನ್ನು, ಸಾಧನೆಗಳನ್ನು ಅವರು ತಮ್ಮ ನಾಲ್ಕನೆಯ ಮುದ್ರಣದಲ್ಲಿ ಕೊಟ್ಟಿದ್ದಾರೆ. ಇದೆಲ್ಲ ವಡ್ಡಾರಾಧನೆಯ ಅಭ್ಯಾಸದ ಆರಂಭ. ಇಷ್ಟರಿಂದ ವಡ್ಡಾರಾಧೆಯ ಅಭ್ಯಾಸವು ಮುಗಿದು ಹೋಯಿತೆಂದು ನಾವು ತಿಳಿಯಕೂಡದು. ನರಸಿಂಹಾಚಾರ್ಯರಂತೂ ತಿಳಿದಿದ್ದಿಲ್ಲ. ಈ ಗ್ರಂಥದ ಸಂಬಂಧವಾಗಿ ಇನ್ನು ಎಷ್ಟೋ ಜಟಿಲ ಪ್ರಶ್ನೆಗಳು ನಮ್ಮ ಮುಂದಿವೆ. ಅವುಗಳನ್ನು ಸಪ್ರಮಾಣ ಅಭ್ಯಾಸದಿಂದ ಬಿಡಿಸುವುದು ಮುಂದಿನ ಕಾರ್ಯ ಈ ಗ್ರಂಥದ ಉದ್ದೇಶವೇನು? ಈ ಗ್ರಂಥದ ಮೂಲವೆಲ್ಲಿ? ಈ ಗ್ರಂಥ ಕರ್ತೃ ಯಾರು? ಇದರಲ್ಲಿ ಉತ್ತಮವಾದ ಕನ್ನಡ ಶ್ಲೋಕಗಳ ಆಕರವೇನು? ಈ ಗ್ರಂಥದಲ್ಲಿಯ ಬೇರೆ ಬೇರೆ ಸಂದರ್ಭಗಳ ಮತ್ತು ಪಾರಿಭಾಷಿಕ ಶಬ್ದಗಳ ಅರ್ಥವೇನು? ಇತ್ಯಾದಿ ಅನೇಕ ಪ್ರಶ್ನೆಗಳಿಗೆ ನಮಗೆ ಉತ್ತರವು ದೊರೆಯಬೇಕಾಗಿದೆ. ಈ ತರಹ ಅಭ್ಯಾಸವು ಮುಂದುವರಿಬೇಕಾಗಿದೆ. ಸಂಸ್ಕೃತ, ಪ್ರಾಕೃತ ಸಾಹಿತ್ಯಗಳಿಂದ ಈ ಅಭ್ಯಾಸಕ್ಕೆ ಸಾಧನಗಳನ್ನು ದೊರಕಿಸಬೇಕಾಗಿದೆ. ಕನ್ನಡ ಭಾಷೆಯಲ್ಲಿ ಇದೊಂದು ದೊಡ್ಡದು. ಇದರ ಶೈಲಿಯು ಅತ್ಯಂತ ಹೃದಯಂಗಮವಾಗಿದೆ. ಅದು ಪ್ರವಾಹಬದ್ದವಾಗಿಯೂ, ರಸಪೂರ್ಣವಾಗಿಯೂ ಹರಿಯುತ್ತದೆ. ಕಥೆಯ ಸಾರಾಂಶವನ್ನು ಬರೆದರೆ ಕಾರ್ಯಭಾರವಾಗದು. ಇದರ ಶಬ್ದಾನುವಾದವನ್ನು ಹೊಸಗನ್ನಡದಲ್ಲಿ ಮಾಡಿದರೆ ಜಟಿಲ ಸಂದರ್ಭಗಳು ದೂರವಾಗಬಹುದು ಮತ್ತು ಹೊಸಗನ್ನಡ ಸಾಹಿತ್ಯವು ಒಂದು ರೀತಿ ಸಮೃದ್ಧವಾಗುವುದು. ನರಸಿಂಹಾಚಾರ್ಯರು ಆರಂಭಿಸಿದ ಕಾರ್ಯವನ್ನು ನಾವು ಮುಂದುವರಿಸಿದರೆ ಅದೇ ಅವರ ಸಂಮಾನ, ಅದೇ ಅವರ ಸಾಹಿತ್ಯ ಸೇವೆಗೆ ನಮನ ಮತ್ತು ಅದರಿಂದಲೇ ಅವರಿಗೆ ಶಾಂತಿ.

* ಕನ್ನಡನುಡಿ (ಸಂ. ೩೪ ಸಂ. ೧೫, ೧೬) ಪು. ೧