ಇವರ ಪೂರ್ಣ ಹೆಸರು ದೊಡ್ಡಬೆಲೆ ಲಕ್ಷ್ಮಿನರಸಿಂಹಾಚಾರ್ ಎಂದು. ಇವರು ೨೭,೧೦,೧೯೦೬ ರಂದು ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ಮನೆಯ ಸುಸಂಸ್ಕೃತ ವಿದ್ಯಾವಂತ ವಾತವರಣ ಇವರ ವ್ಯಕ್ತಿತ್ವದ ವಿಕಾಸಕ್ಕೆ ಸಹಾಯ ಮಾಡಿತು. ಬೆಂಗಳೂರಿನ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದು, ಮೈಸೂರಿನಲ್ಲಿ ಎಂ.ಎ ತರಗತಿಗೆ ಸೇರಿ ಪದವೀಧರರಾದನಂತರ ಸಂಶೋಧನ ವಿದ್ಯಾರ್ಥಿವೇತನ ಪಡೆದುಕೊಂಡು ವೀರಶೈವ ಸಾಹಿತ್ಯದ ಆರಂಭದ ಕಾಲವನ್ನು ಕುರಿತು ಸಂಶೋಧನೆ ನಡೆಸಿದರು. ಹೀಗೆ ಪ್ರಸಿದ್ದ ವಿದ್ವಾಂಸರಾಗಿ ಕನ್ನಡ ಸಾಹಿತ್ಯ, ಭಾಷೆ, ಗ್ರಂಥಸಂಪಾದನೆ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನ ಸಂಸ್ಥೆಯಲ್ಲಿ ರೆಸಿಡೆಂಟ್ ಕನ್ನಡ ಪಂಡಿತರಾಗಿ ‘ಸಕಲ ವೈದ್ಯ ಸಂಹಿತಾಸಾರ್ಣವ ಮತ್ತು ಕುಮಾರವ್ಯಾಸ ಭಾರತದ ಬೀಷ್ಮ ಪರ್ವ ಎಂಬ ಎರಡು ಪ್ರಾಚೀನ ಗ್ರಂಥಗಳಸಂಪಾದನಾ ಕಾರ್ಯವನ್ನು ನಿರ್ವಹಿಸಿದರು.೧೯೫೪ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ಅದಿಕಾರ ವಹಿಸಿಕೊಂಡರು.

೧೯೫೯-೧೯೬೨ ರ ಅವದಿಯಲ್ಲಿ ಪ್ರಬುದ್ಧ ಕರ್ನಾಟಕದ ಪ್ರಧಾನ ಸಂಪಾದಕರಾಗಿದ್ದರು. ಆ ಪತ್ರಿಕೆಯ ಬೆಳವಣಿಗೆಗೆ ಕೂಡ ಶ್ರಮಿಸಿದರು ಭಾಷೆ, ವ್ಯಾಕರಣ, ನಿಘಂಟು, ಗ್ರಂಥಸಂಪಾಧನೆ, ಛಂಧಸ್ಸು, ಶಾಸನಗಳು, ಪ್ರಾಚೀನ ಸಾಹಿತ್ಯ- ಇವನ್ನು ತಮ್ಮ ಕಾರ್ಯಕ್ಷೇತ್ರದ ವಿಷಯಗಳನ್ನಾಗಿ ಹಿಡಿದು ಆ ವಿಷಯಗಳಲ್ಲಿ ಗಾಡವಾದ ಸಂಶೋಧನೆ ನಡೆಸಿ ಕನ್ನಡವನ್ನು ಬಲಪಡಿಸಿದರು. ಆಚಾರ್ಯರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಂಶೋಧನ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಈ ಲೇಖನಗಳಲ್ಲಿ ಪ್ರಮುಖವಾಗಿ ಕನ್ನಡ ಭಾಷೆ ಸಾಹಿತ್ಯಗಳ ಸಮಸ್ಯೆಗಳನ್ನು ಕಾಣಬಹುದು. ಪ್ರಾಚೀನ ಸಾಹಿತ್ಯ, ಆ ಸಾಹಿತ್ಯದ ವಿಮರ್ಶೆ ಮತ್ತು ಚರಿತ್ರೆ, ಗ್ರಂಥಸಂಪಾದನೆ, ಸಬ್ದಾರ್ಥ ವಿಚಾರ ಇವು ಇವರಿಗೆ ಬಹು ಮೆಚ್ಚಿಗೆಯ ವಿಷಯಗಳು. ಪಂಪರಾಮಾಯಣ ಸಂಗ್ರಹ, ವಡ್ಡಾರಾಧನೆ, ಸಿದ್ದರಾಮಚರಿತೆಯ ಸಂಗ್ರಹ, ಶಬ್ದಮಣಿದರ್ಪಣಂ, ಗೋವಿನ ಹಾಡು- ಮುಂತಾದ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಪ್ರಾಚೀನ ಸಾಹಿತ್ಯದ ಶಬ್ದಾರ್ಥ ವಿಚಾರವನ್ನು ಕುರಿತಂತೆ ‘ಶಬ್ದವಿಹಾರ, ಎಂಬ ಗ್ರಂಥವನ್ನು ರಚಿಸಿದ್ದಾರೆ. ‘ಕನ್ನಡ ಗ್ರಂಥಸಂಪಾದನೆ, ಗ್ರಂಥಸಂಪಾದನಾ ಶಾಸ್ತ್ರವನ್ನೂ, ಗ್ರಂಥ ಸಂಪಾಧನೆಯ ನಾನಾ ಮುಖಗಳನ್ನು ಒಳಗೊಂಡಿರುವ ಒಂದು ಶಾಸ್ತ್ರಗ್ರಂಥ.

ಕನ್ನಡ ಭಾಷಾಸಾಹಿತ್ಯಗಳಿಗೆ ಮುಖ್ಯವಾಗಿ ಸಂಶೋಧನೆ ಸಂಪಾಧನೆಗಳಲ್ಲಿ ಸಲ್ಲಿಸಿದ ಸೇವೆಯಿಂದಾಗಿ ಬಿದರೆಯಲ್ಲಿ ನಡೆದ ೪೧ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ‘ಜ್ಞಾನೋಪಾಸಕ, ಎಂಬ ಅಬಿನಂದನಾ ಗ್ರಂಥವನ್ನು ಇವರಿಗೆ ಅರ್ಪಿಸಲಾಯಿತು. ‘ಉಪಾಯನ, ಎಂಬ ಗ್ರಂಥವನ್ನು ಇವರಿಗೆ ೧೯೬೭ ರಲ್ಲಿ ಅರ್ಪಿಸಲಾಯಿತು. ಮೈಸೂರು ಸರ್ಕಾರ ೧೯೬೭ ರಲ್ಲಿ ರಾಜ್ಯಪ್ರಶಸ್ತಿಯನ್ನೂ, ಮೈಸೂರು ವಿಶ್ವವಿದ್ಯಾನಿಲಯ ೧೯೬೯ ರಲ್ಲಿ ಗೌರವ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿತು