೨೧. ಹರಿಜನರೇಳ್ಗೆ ಕರ್ತರು

ರಾಗ – ಹರಿಕಾಂಬೋದಿ – ಝಂಪೆ

ಎಮ್ಮೇಳ್ಗೆಗೆಳಸಿದರು | ನೀವಲ್ಲದಾರು          ||ಪ||
ಎಮ್ಮ ಅಜ್ಞಾನಿಹಿತ | ಪಿತನೊ ಪರದೇಶಿಯರೊ             ||ಅ.ಪ||

ಉತ್ತೇಜನವನಿತ್ತು | ಹೆಚ್ಚಾಗಿ ವಿದ್ಯಾಕ್ಕೆ |
ಮಿತ್ರಮಂಡಲದೊಡನೆ | ಮಿಳಿತ ಮಾಣ್ದವರಾರು          ||೧||

ಹೋರಾಡಿ ರಾಜಕಿಯ | ಸಭೆಗಳಲಿ ತಾರಾಡಿ |
ಧೀರತ್ವದಿಂ ನಿಯಮ | ಗಳ ಮಾಣ್ದವರಾರು   ||೨||

ಸಂಘ ಸಂಮೇಳನವ | ನಡೆಸುತ್ತೆ ನಾಡಿನೊಳು |
ರಂಗದೊಳಗಧ್ಯಕ್ಷ | ರಾಗುತಿರ್ದವರಾರು         ||೩||

ರಾಜು ಗೋಜಗಳೆಲ್ಲ | ಸರಿಪಡಿಸಿ ಸೋಲುತ್ತೆ |
ನೈಜಪಥಗಳನೆಮಗೆ | ಅರಸಿ ತೋರಿದರಾರು    ||೪||

ಹೀನರೋದ್ದಾರಕರು | ಹೀನರೆಂದಾಡಿದರು |
ಮಾನಾಮಾನಗಳ | ತೊರೆದು ನಿಂದಿಹರಾರು     ||೫||

ಮೀರಿದತಿ ಶಕ್ತಿಯಿಂ | ದಲಿ ದುಡಿದು ಹಗಲಿರುಳು |
ಪೂರ್ಣಾಯಸವ ಪೊಂದಿ | ದಣಿದಿರುವರಿನ್ನಾರು           ||೬||

 

೨೨. ಸೃಷ್ಟಿಕರ್ತ (ಯವರು ಗತಿ ಯಟಲಲುನ್ನದೊ)

ಸೃಷ್ಟಿಸಿಲ್ಲವೇನು ಶ್ರೀಹರಿ |
ಹರಿಜನರನುತಾಂ |
ಕಷ್ಟಪಟ್ಟು ಕರುಣದಿಂದಲಿ             ||ಪ||

ಸೃಷ್ಟಿಸಿದ್ದ | ರೆಮ್ಮ ಹರಿಯು |
ಕಷ್ಟಪಡಿಸು | ತಿರುತಜಾತಿ |
ಭಷ್ಟರನ್ನು | ಮಾಡಿ ಬೇರೆ |
ಇಟ್ಟಿರುವು | ದೇಕೆ ಹರಿಯು             ||ಅ||

ಹರಿಜನ ಬೇ | ರ್ಪಡಿಸಿದವನು |
ಹರಿಯೋ ಭಾರ | ತೇರುಗಳೋ |
ಹರಿಯು ಬೇರೆ | ನಿರ್ಮಿಸಿದನೆ |
ಹರಿಜನಗಳ ಗೋತ್ರವೊಂದ ||೧||

ಅರಿಯದಿರುವ | ಹರಿಜನಗಳಿ |
ಗರಿತ ಭಾರ | ತೇಯರೆಲ್ಲ |
ಅರುವ ನರುಹಿ | ಸರಿಪಡಿಸದೆ |
ಇರ್ದರೇಕೆ | ಇಷ್ಟುದಿವಸ    ||೨||

ಇರುವುದೇಕೆ | ಇಷ್ಟುದಿವಸ
ಹರಿಜನಗಳ | ಮೈಯೊಳಂಗ |
ಹರಿಯು ಸೃಷ್ಟಿ | ಸದಿರೆ ಬೇರೆ |
ಪರಿಯೊಳಿರದ | ದೇಕ ಮೇಕೆ             ||೩||

ಜನಿಸಲಿಲ್ಲ | ವೇತಕೆ ಹರಿ |
ಜನರು ಮೂರು | ಮಾಸಗಳಿಗೆ |
ಜನನವು ನವ | ಮಾಸಕೇಕೆ |
ಚಿನುಮಯ ತಾಂ | ಸೃಷ್ಟಿಸದಿರೆ        ||೪||

 

೨೩. ಬರುಗಾಲ ಯಾತ್ರೆ (ಮನುಜ ಶರೀರವಿದೇನು ಸುಖ)

ರಾಗ – ಅಸಾವೇರಿ – ಅದಿತಾಳ

ನೀತವೆ ನಿನಗಿದು | ಖ್ಯಾತಮಹಾತ್ಮ   ||ಪ||
ಈ ತೆರ ಮಾಳ್ಪುದ | ನೀತಿ ಮಹಾತ್ಮ             ||ಅ||

ಹರಿಜನ ತರುಪಕ್ವ | ಪಣ್ಗಳ ಮೆಲ್ಲದೆ |
ಹರಿಜನ ಯಾತ್ರೆಯ | ಬರಿ ಪದದಿಂ |
ಚರಿಸುತ ದರೆಯತಿ | ತ್ವರಿತದಿ ತೊರೆಯಲೀ |
ಪರಿಸೇವೆ ಗೈಯವು | ದಾವಹಿತ        ||೧||

ಶಕ್ತಿಯ ಸಾಹಸ | ಬಿತ್ತಿ ಸ್ವರಾಜ್ಯಕ |
ಶಕ್ತ ನೀನಾಗಿಹ | ಸಮಯದಲಿ ||
ಶಕ್ತಿಯ ಮೀರುತೆ | ಸೆವೆಯ ಗೈಯುತೆ |
ಮುಕ್ತಿಗಪೇಕ್ಷಿಪು | ದಾವಹಿತ            ||೨||

ಎರೆದು ಶರೀರ | ಸ್ವರಾಜ್ಯಕೆ ಧಾರೆ |
ಸ್ವರಾಜ್ಯವು ಲಭಿಪ | ಸುಸಮಯದಲಿ |
ಇರದೆಯೆ ನೀಂ ಪರಿ | ತೋಷವ ಪಡದೆಲೆ |
ತೆರಳಲು ಅಶಿಪು | ದಾವಹಿತ            ||೩||

ಅರುವತ್ತೊರುಷದ | ಮರುಳಾಟವಾಡದೆ |
ಹರಿಜನ ಯಾತ್ರೆಯ | ಬರಿಪದದಿಂ |
ಚರಿಸದೆ ಸೆರೆ ಯರ | ವಾಡ ದೊಳಿರುತಿನ್ನೀ |
ಧರೆಯೊಳು ಬದುಕಿರ | ಲಾಗಹಿತ       ||೪||

 

೨೪. ತಿರುವಾಂಕೂರು ಮಹಾರಾಜರ ಮಹತ್ಕಾರ್ಯ

ಹರಿಜನರ ದೇವಾಲಯ ಪ್ರವೇಶ

ಭಲಾ ಧನ್ಯ ನೀ ಪದ್ಮನಾಭ | ಶ್ರೀದಾಸ ನಿಜ     ||ಪ||
ತಿರುವಾಂಕೂರು ಶ್ರೀ ರಾಮರಾಜ್ಯ ನಿಜ           ||ಅ.ಪ||

ನವಯುಗ ದಾತ | ಜಯ ಜಗಖ್ಯಾತ |
ಪರಮಪೂತ ಭಾ | ರತಿ ಪ್ರೀತ ||
ಹರಿಜನ ನಿಜ ಸಖ | ಪುರುಷನು ನೀಶಕ |
ಧರ್ಮೋದ್ಧಾರಕ | ಸತ್ಯಸಂಧ ಪ್ರಭೋ           ||೧||

ವರ ರಾಜಾಜ್ಞೆಯ | ತ್ವರಿತದಿ ಕರುಣಿಸಿ |
ತೆರಸಿದೆ ದೇಗುಲ | ಹರಿಜನಕೆ ||
ಧರೆ ಮಾದರಿ ಮಹ | ರಾಜನೆನಿಸಿ |
ಚಿರಕೀರ್ತಿಯಾದಂತೆ | ನೀ ಭೂತದಯಾ ಪ್ರಭೋ           ||೨||

ಕಲಿಯುಗ ರಾಮಗೆ | ಗೆಲುವೀಯಲು ನೀ |
ನೊಲಿದೆ ರಮಾನುಜ | ನವತಾರ ||
ಕುಲ ಹೀನತೆಯಂ | ತ್ಯಜರೊಳಗಳಿಸುತೆ |
ಗೆಲಿದೆ ಮಹತ್ಕಾ | ರ್ಯವನು ಮಹಾ ಪ್ರಭೋ  ||೩||

ದಶ ಶತಮಾನದಿ | ಕ್ಷಿತಿಯವೀರರಾ |
ರೆಸಗದಿರ್ದ ಘನ | ಕಾರ್ಯಮಿದಂ ||
ಎಸಗಲು ಧೈರ್ಯದಿ | ನಿಂದು ಸಾಧಿಸುತೆ |
ಪೆಸರುಗೊಂಡೆ ಭಾ | ರತದ ಧೀರ ಪ್ರಭೋ       ||೪||

ಶೀಲಾಚಾರಂ | ಗಳ ತೌರೂರೊಳು |
ಕಾಲಲೀಲೆಯಾ | ಲೋಚಿಸುತ ||
ಕೀಳೆಂಬುವುದನು | ತಾಳದೆ ತವಕದಿ |
ಧೂಳಿಗೈದು ಮೇಲೆತ್ತಿದೆ ನೀ ಪ್ರಭೋ ||೫||

ಬಂಧನ ತೊಡೆಯುತೆ | ಭವಭಯ ಬಿಡಿಸುತೆ |
ಚಂದದಿ ಪ್ರಜೆಗಳ | ಪಾಲಿಸುವೆ ||
ಸಿಂಧುಶಯನ ಗೋ | ವಿಂದ ಚಿರಾಯುವ |
ನಿಂದೀಯಲಿ ಶುಭ ಸಿರಿಯ | ಮಹಾ ಪ್ರಭೋ ||೬||

 

೨೫. ಮಂಗಳಂ (ಶ್ರೀ ನಾಯಕಂ | ನಿನ್ನಳಾನಂದಮಂ)

ಜೈ ಮಂಗಳಂ | ಸರ್ವ ಬಾಂಧವ |
ಗಾಂಧಿ ಮಹಾತ್ಮಗೆ ನಿತ್ಯ ಜಯತು ಮಂಗಳಂ   ||ಪ||

ಭಾರತಮಾತಪು | ನೀತನಿಗೆ |
ಕಾರುಣಿ ಸತ್ಯ ಪ್ರ | ಭಾತನಿಗೆ ||
ಧೀರತೆಯಿಂದ | ಹೋರಾಡಿ |
ಸ್ವರಾಜ್ಯ ಸ್ವತಂತ್ರವ | ನಾಶಿಪಗೆ      ||೧||

ಸಂತತ ಅಂತ್ಯಜ | ನೋದ್ಧಾರಗೆ ನಿ |
ರಂತರ ಶಾಂತತೆ | ನಿರ್ಧಾರಗೆ ||
ಭ್ರಾಂತನಾಗದೆ | ಸ್ವತಂತ್ರಕ |
ನಂತಸುಮಂತ್ರವ | ಚಿಂತಿಪಗೆ            ||೨||

ಯೋಗಿ ಜನಂಗಳ | ಭೂಷಿತಗೆ |
ಯೋಗ ವೈರಾಗ್ಯಾಭಿ | ಲಾಷಿತಗೆ |
ಭೋಗವ ನೀಗಿ ಸೌ | ಭಾಗ್ಯದ |
ತ್ಯಾಗಿ ಸತ್ಯಾಗ್ರಹ | ಮೂರುತಿಗೆ        ||೩||