೧೬. ಪಕ್ಷಪಾತ

ರಾಜ್ಯ ಪರಿಷ್ಕಾರ | ಕರುಹರಿಜನ |
ಗೋಜುಗಳಿಗಿಳೀ | ದಿರುವರೇಂ         ||ಪ||

ಮಾಜಾದೆಲೆಗೋ | ಪಾಲಕೃಷ್ಣ |
ಮಹಾತ್ಮಗಾಂಧಿ | ಯರಲ್ಲದೆ         ||ಅ||

ಮತವನುದ್ಧರಿ | ಸಿದವರೆಮಗತಿ |
ಹಿತಗಳನುತೋ | ರಿರುವರೇಂ ||
ಹಿತರುರಾಮಾ | ನುಜವಿವೇಕಾ |
ರಾಮಕೃಷ್ಣರೆ | ಅಲ್ಲವೆ    ||೧||

ರೀತಿ ನೀತಿಯ | ತಿದ್ದಿ ಇತರರು |
ಪ್ರೀತಿತೋರಿಸ | ದಿರ್ದರು ||
ಓತುಮನಸುತ | ಕ್ಲೇಶತೊಡೆದತಿ |
ಖ್ಯಾತಿಯಾಸಿರ | ದಿರ್ದರು   ||೨||

ದೇಶಹಿತವನು | ಬಯಸದೆಮ್ಮವ |
ರಾಸೆಯನೆಮರೆ | ದಿರ್ದರು ||
ದಾಸ್ಯವೃತ್ತಿಯ | ಲಿರ್ದ್ದರೆಮ್ಮಯ |
ಕ್ಲೇಶ ತೊಲಗಿಸ | ದಿರ್ದರು             ||೩||

ಅರಿಯದೆಮ್ಮೊಳು | ವಂಚನೆಯನಾ |
ಚರಿಸುತೀಗತಿ | ಯಿತ್ತರು ||
ಮರುಗಿ ಕೊರಗುವ | ಪರಿಯಗೈದೀ |
ಧರೆಯೆಸಾಕನಿ | ಸಿರುವರು   ||೪||

ಮಾದರಿ ದೋರುತೆ | ಮಠಪತಿಗಳಿಗೆಲ್ಲ |
ಅದರ ದೋರಿದ | ಹರಿಜನಕೆ            ||ಅ||

ಜೈದ್ವೇವ ದೇವಡಿ | ತನ್ನೆಡೆ ಪೋಗಿಸಿ |
ಭಯಪಡದನ್ಯರ | ಬೆದರಿಕೆಗೆ ||
ದಯಹರಿಜನಪರ | ನಂಬುತೆ ಧರೆಯೊಳು |
ಜಯಜಗದ್ಗುರು ಹೆಸ | ರದು ಸಹಜ             ||೧||

ದೇವಿಯುತ್ಸಾಂಬೆಯ | ದೇವಡಿಗೆಮ್ಮನು |
ಛಾವಿಸಿ ಪೊಗಿಸಿದ | ಬಹುಕಷ್ಟದಿ ||
ಅ ವಿಧನಿಂದೆಗ | ಳೆಲ್ಲವನೆದುರಿಸಿ |
ಕಾವುದರೊಳು ಕಂ | ಕಣಗಟ್ಟಿದ        ||೨||

ಇತ್ತನು ಸಾಸಿರ | ವರಹನ ಹರಿಜನ |
ರುತ್ತಮ ವಿದ್ಯಾನು | ಕೂಲಕತೆ ||
ಉತ್ತುಮತೆಯ ಐದು | ಸುತ್ತಲಿ ಹರಿಜನ |
ಸ್ತುತ್ಯಾರ್ಹನೆನಸಿಹ | ಶಿವಲೋಕಕೆ     ||೩||

ಹರಿಜನರೆಲ್ಲರ | ಕರೆಯುತೆ ಹತ್ತಿರ |
ವರತರ ಬೋಧೆಯ | ನರುಹುತಲಿ ||
ಕರುಣವ ದೋರುತೆ | ಹರಿಜನ ಸಖನೆಂದು |
ಪೊಗಳಿಸಿಕೊಳಿನೀ | ಧರೆಯೊಳಗೆ        ||೪||

ಆದಿಯು ತತ್ವಮೂ | ಲಾಗವರೋಧಿಸು |
ತಾದಿಮಧ್ಯಾಂತಕ | ನನು ಮೆಚ್ಚಿಸೆ ||
ಭೇದವ ತೊಡೆಯಲು | ಕಾಮತೆ ಕಷ್ಟದಿ |
ಸಾಧಿಸಿದನು ಘನ | ಕಾರ್ಯವನು       ||೫||

 

೧೭. ಮೃತ ಗೋಮಾಂಸದ ಅನರ್ಥ

ಹೇಯದ ಮೃತ ಗೋ | ಮಾಂವ ಭುಜಿಸಲು
ಕಾಯವು ಕೆಡು | ವುದು ಬಲುಬೇಗ ||
ನಾಯಿಯಪರಿ ಕೆಲ | ರಿದ ಭುಜಿಸುತಲೀ
ಕಾಯವ ಬೆಳೆಸುವ | ರಯ್ಯಯ್ಯೋ     ||೧||

ಗೋವಿನದೇಹದಿ | ಬಹುಬಗರೋಗಗ |
ಳಿಹುವದ ತಿನ್ನಲು | ಬಲುಬೇಗ ||
ದೇಹಕೆ ವ್ಯಾಪಿಸಿ | ದೇಹವ ಕೆಡಿಸುತೆ |
ದೇಹಬೇಗ ನೆಲ | ಕುರುಳಿದು            ||೨||

ಶುದ್ಧರಕ್ತವನು | ಕೆಡಿಸುತಲಿದು ಜನ |
ಬುದ್ದಿವಿಕಾಸವ | ಗೊಳ್ಳಿಸದು ||
ಮೊದ್ದು ಮಾಡಿಮಾನುಷ್ಯ | ಶರೀರವ |
ಶುದ್ಧರೀತಿಯೊಳ | ಗಿರಿಸುವುದು       ||೩||

ಹೇರಳ ಕ್ರಿಮಿಗಳು | ಸೇರಿಶರೀರಕೆ |
ಭೂರಿರೋಗ ತಲೆ | ದೋರಿಪವು ||
ಮೀರಿದ ಕಷ್ಟದಿ | ನರಳಿಸುತನುದಿನ |
ಸೇರಿಸುವುವು ಯಮ | ಪಟ್ಟಣಕೆ       ||೪||

ದೇಹದಕಾಂತಿಯ | ನಡಗಿಸಿ ಬಲುಬಲು |
ದೇಹವಿಕಾರವ | ಗೊಳ್ಳಿಪುದು ||
ದೇಹದಬಲವನು | ತಗ್ಗಿಸಿ ಮನುಜನ |
ದೇಹಬೇಗಧರೆ | ಗುರುಳಿಪುದು         ||೫||

 

೧೮. ಸ್ವಾತಂತ್ರಾತಂಕ

ಶ್ರೀಮನ್ ಯಂ. ಚನ್ನರಾಜೇರಸಿನವರ ಅಧ್ಯಕ್ಷತೆಯಲ್ಲಿ ನಡೆದ ಹೊಳೇ ನರಸೀಪುರ ‘‘ಕ್ಯಾಟಲ್ ಷೋ’’ ಕಮಿಟಿಯಲ್ಲಿ ಪಠಿಸಿದೆ.

(ಜಯಮಂಗಳವಾಗಲೀ ಲೋಕಕೆಲ್ಲ)

ರಾಗ – ಕಲ್ಯಾಣಿ – ಆತತಾಳ – ಮಿಶ್ರಛಾಪು

ಎಂತು ಹರಿಜನ | ನಿಲ್ಲುವರೊ ಕಾಣೆ |
ಸ್ವತಂತ್ರ ಪೊಂದಲ | ದೆಂತು ಸೇರುತೆಕಾದುವರೊಕಾಣೆ    ||ಪ||

ಪಂಥಗಾರರೊ | ಳೆಂತು ನಿಲ್ಲುತೆ |
ಪಂಥವನು ತೋ | ರುವಿರೊ ಕಾಣೆವು ||
ಅಂತುನಮ್ಮೊಡ | ಗೂಡದಿರೆ ನಿಮ |
ಗೆಂತುಲಭ್ಯ ಸ್ವ | ತಂತ್ರಪದವಿಯು    ||ಅ||

ಹೀನವೆನಿಸುವ | ಶ್ವಾನಬರೆನರೆ |
ಪ್ರೇಮದಿಂ ಗೃಹ | ದೊಳಗೆ ಕರೆವಿರಿ ||
ಮಾನವರು ನಾವ್ | ಬಳಿಗೆ ಬಂದರೆ |
ಹೀನರೆನುತತಿ | ಹೇಸುತಿಪ್ಪಿರಿ          ||೧||

ಪಾದರಕ್ಷೆಗ | ಳನ್ನೆ ಕರದೊಳು |
ಭೇದಗೈಯ್ಯದೆ | ಸ್ಪರ್ಶಿಪಿರಿನೀ ||
ವಾದಿಕರ್ಣಾಟ | ಕರುಬಂದರೆ |
ಬೈದುದೂಷಿಸಿ | ದೂರನಿಲುವಿರಿ       ||೨||

ಭೇದವೆಣಿಸುತೆ | ಮೋದದೋರದೆ |
ಸೋದರತ್ವದ | ಮರೆದು ಮನದೋ ||
ಳಾದರಿಸದಲೆ | ನೀವ್ಗಳೆಮ್ಮನು |
ಕಾದುಬನ್ನಿ ಸ್ವ | ರಾಜ್ಯಕೆಂದರೆ         ||೩||

ಯಾರನೆಪದಿಂ | ದೀ ಸ್ವರಾಜ್ಯವು |
ಬಾರಲಿಲ್ಲೆಂಬು | ವುದನರಿಯುತೆ ||
ತೋರುತೈಕ್ಯವ | ಸಾರಿಕರೆದರೆ |
ಧೀರರೊಲು ಹೋ | ರಾಡಬಲ್ಲೆವು   ||೪||

 

೧೯. ಹರಿಜನ ಸೇವಾ ಪ್ರವೀಣ

ಆರ್.ಗೋಪಾಲಸ್ವಾಮಿ ಅಯ್ಯರ್ ರವರ ಸೇವೆ

ಭಾಮಿನಿ ಷಟ್ಪದಿ

ಧರೆಗೆ ಪಿರಿದೆನಿಸಿರುವ ಮೈಸೂ
ರರಸ ಕೃಷ್ಣನ ನಾಡೊಳೋರುವ
ವರಕುಲಜ ಗೋಪಾಲಸ್ವಾಮಿಯೆಂಬ ನರವರನು ||
ಕರುಣಮಯಹರಿ ಕರುಣದಿಂದಲಿ
ಹರಿಸು ಹರಿಜನ ಕಷ್ಟವೆನ್ನುತೆ
ಯೊರೆದು ಬೀಳ್ಗೊಟ್ಟಿರುವಪರಿಯಲಿನಿಂದ ಸೇವಿಪನು    ||೧||

ಹರಿಜನರನುದ್ಧರಿಸ ತಾಪರಿ
ಕೊರತೆಗಳ ಪಂಕಿಸುತನಿರುತವು
ನರಪನಾಲ್ಮಡಿ ಕೃಷ್ಣಸರ್ಕಾರಕ್ಕೆ ಗೋಚರಿಸಿ ||
ನೆರವನೀಯುವ ಪರಿಯಗೈಯುತೆ
ಜರಿವಜನವಾಣಿಗಳನೆಣಿಸದೆ
ಬಿರುದಪಡೆದನು ಪಂಚಮರ ಗೋಪಾಲನಿವನೆಂದು        ||೨||

ಎಡಬಿಡದೆ ಸೇವಿಸುತೆ ಹರಿಜನ
ಪಡೆದಶಾಲ್ಜೋದಿಯನು ಅರ್ಹತೆ
ವಡೆಯುತಲಿ ಬಂಗಾರ ಪದಕವ ರಾಜಮನ್ನಣೆಯಿಂ ||
ಮಡದಿಮಕ್ಕಳಮನೆಯ ಮರೆಯುತೆ
ಕಡುತೆರದ ಕಷ್ಟಗಳಕ್ಕಿಸ
ದೊಡಲಿಗನ್ನೋದಕವ ಕಾಲಕೆ ಬಯದೆಲೆದುಡಿವ           ||೩||

ಸಿರಿಯ ವಧುವನ್ನೊರಿಸಿರುವನಿವ
ಮೆರೆಯದೆಲೆ ಸಿರಿಯಿಂದ ಸರಸದಿ
ಸಿರಿಯವಂತರಸಂಗದೊಳು ತಾಂ ಬೆರೆಯದೆಲೆ ಸತತ ||
ಹರಿಜನರ ಸೇವಿಸುವುದೇ ವರ
ಹರಿಯಸೇವೆಯದೆಂದು ಮನದೊಳು
ಗರಿದುಕಂಕಣಕರದಿ ತೊಡರಿಸಿನಿಂದನೀ ಹರಿಜನೋದ್ಧಾರಿ            ||೪||

ರಾಜಕೀಯ ಸಮಾಜಸಭೆಯೊಳು
ಮಾಜದೆಲೆ ಹೋರಾಡುತಲಿ ಬಲು
ಸೋಜಿಗವಗೊಳುವಂತೆ ವಾಗ್ಝರಿಮಳೆಯಗರೆಯುತಲಿ ||
ನೈಜವಿಹಬಾಧ್ಯತೆಯ ಹರಿಜನ.ಕಾರ್ಜಿಸಲು ಧೈರ್ಯದೊಳು ಪಡೆಯುತೆ
ತೇಜಗೊಳಿಸಿದನಂತ್ಯಜರ ನೀನಂತ್ಯಜನ ಬಂಧೂ            ||೫||

ಬೇಸರೀಸದೆ ಧೈರ್ಯದಿಂದಲೆ
ಆಶಿಸದೆ ತಾಂ ಫಲಕೆದಿವಿನಿಸಿ
ಗ್ಹೇಸದೆಲೆ ನೆರೆರಾಜಪಟುಗಳ ಬಾಗಿಲನೆ ಕಾಯ್ದ ||
ಲೇಸುದಪ್ಪಿದ ಜನರ ಪೋಷಿಸಿ
ಘಾಸಿಬಡದೆಲೆ ಶಾಂತಭಾವದಿ
ದಾಸನಿವ ಹರಿಜನರಿಗೆಂಬುವ ನಾಮನೆಲೆಗೈದ   ||೬||

ತಪ್ಪದಿಪ್ಪತ್ತೆರಡು ವರುಷದಿ
ವಪ್ಪದಿಂ ಹರಿಜನರಸೇವಿಸಿ
ಮುಪ್ಪನಾಂತನು ತನುಮನಂಗಳನೆಲ್ಲಮಂದಣಿಸಿ ||
ನಪ್ಪುಮರೆಯುತ ಜನ್ಮಗೋತ್ರದ
ಬಪ್ಪಕೀರ್ತಿಯು ತನಗದೆನ್ನದೆ
ಸರ್ಪಭೂಷಣ ಮೆಚ್ಚುವಾಪರಿ ಸೇವೆ ಸಲ್ಲಿಸಿದ             ||೭||

ಕೆಟ್ಟಡಿಗೆಯಡಲೆಣಿಸಿ ತಾಂಬಲು
ದಿಟ್ಟತನದೊಳು ನಿಂದು ಧೈರ್ಯದಿ
ದುಷ್ಟತೆಯ ಹರಿಜನರೊಳೊರೆಸುತ ಜಾಣತಾನೆನಿಸಿ ||
ನಿಷ್ಠುರದವಾಕ್ಕುಗಳ ಕೇಳ್ದರು
ಇಟ್ಟಪದ ಹಿಂದೆಗೆಯದೆಲೆ ತಾಂ
ಶ್ರೇಷ್ಠನೆನಿಸಿದ ಕಾರ್ಯವನು ಸಾಧಿಸುತ ಕಾರ್ಯದಿತಾಂ    ||೮||

ಆದಿಮೂಲಾಗ್ರವನು ಶೋಧಿಸಿ
ಭೇದ ಭಾವವನೆಲ್ಲ ಛೇದಿಸಿ
ಸೋದರತ್ವವ ಬೆಳಸಿದನು ದಯದಿಂದ ಮನನೊಂದು ||
ಅದರದಿ ಹಗಲಿರುಳು ಹರಿಜನ
ವೇದಪಠಿಸುತ ಪರಮ ಭಗವದ್
ವೇದಪಾರಾಯಣವ ಮರೆದೀಹರಿಜನರಗುರುವು            ||೯||

ಹಿಂದೆ ಗೋಪಾಲೆಂಬಪೆಸರಿಂ
ಭಂದನಂಗಳ ನಿಂದು ತಾಹರಿ
ದಂದದಲಿ ಗೋಕುಲದ ಗೊಲ್ಲರನೆಲ್ಲ ಪ್ರಿಯದಿಂದ ||
ಇಂದು ಗೋಪಾಲೆಂಬನಾಮದಿ
ಚಂದದೀ ಮೈಸೂರು ಸಂಸ್ಥಾ
ನಂದರಾದಂತ್ಯಜನ ಭಂದನನಿಂದು ತೊಡೆಯುತಿಹ         ||೧೦||

 

೨೦. ಸೆರೆಮನೆಯ ಅರಮನೆ

ಎರವಾಡವೋ | ಸೆರೆಮನೆಯೋ |
ವರಗಾಂಧಿಯವ | ರರಮನೆಯೇ        ||ಪ||

ನರವರಕುಲಪ್ರ | ದೀಪ ಸ್ವತಂತ್ರಕೆ |
ತಂತ್ರವಯೋಚಿಪ | ಭವನಮಿದು       ||ಅ||

ಮೋದದಿಂದ ಶಿ | ಶ್ರೂಷೆಗೈಯ್ಯೆ ಸದ |
ಕಾದಿರುವರು ಬಲು | ಸೇವಕರು ||
ಪಾದಕೆನಮಿಸಲು | ಸಾಧು ಅನೇಕರು |
ಕಾದುತಿಹರು ಬಿಡು | ವಿಲ್ಲದೆಲೆ       ||೧||

ಸ್ವದಳವಿಭವದಿ | ಹೆದರದೆ ಬೆದರದೆ |
ಮುದಜಯಘೋಷ | ಗಳೆಬ್ಬಿಸುತೆ ||
ಸದುಪದೇಶಂಗ | ಳನು ಪೊಂದುತೆ |
ಬೋಧಿಸುವರು ಜನ | ರೆಲ್ಲರಿಗೂ     ||೨||

ಅಧಿಕಾರಿಗಳತಿ | ನಮ್ರತೆತೋರುತೆ |
ಮುದಬೀರುತೆ ಹಿತ | ದಿಂದಸದ ||
ಅದುಭುತಧೈರ್ಯೋ | ತ್ಸಾಹವನೋಡುತೆ |
ಬೆದರುತಲಿಹರತಿ | ಮನದಲ್ಲಿ         ||೩||

ಅನವರತವು ಘನ | ಜನಸಂದಣಿ ತಾಂ |
ವಿನಯದಿದರ್ಶನ | ಗೈಯ್ಯುವುದು ||
ಅನುವಿನಿಂದ ಮನ | ಸಂತಸ ಪಡಿಸುತೆ |
ಗುಣನಿಧಿಯನು ಕೊಂ | ಡಾಡುವುದು ||೪||

ನಚ್ಚಿನಮುದ್ರಣ | ತಂತಿ ಟಪಾಲ್ಗಳು |
ವೃತ್ತ ಪತ್ರಗಳ | ಓಡಾಟ ||
ಹೆಚ್ಚು ಸ್ವರಾಜ್ಯದ | ಮೆಚ್ಚಿಗೆ ಪಾತ್ರು |
ನಿತ್ಯವು ಧೈರ್ಯವ | ಬೀರುವರು       ||೫||

ನಭಕೇರುವ ಘನ | ಕೋಲಾಹಲಧ್ವನಿ |
ಶುಭ ಸೂಚಕತ್ವಜ | ಹಾರಾಟ |
ವಿಭವದಿ ರಾಜ್ಯ ಸು | ದಾರಕರೆಲ್ಲರ |
ಸಭೆಗಳು ನೆರೆವುವು | ಧೈರ್ಯದಲಿ      ||೬||