೧. ವಿಷಮುಳ್ಳು

ಎಲ್ಲೆಲ್ಲೂ ವಿಷಮುಳ್ಳುಗಳಲ್ಲಪ್ಪ ಅಯ್ಯಯ್ಯಪ್ಪಾ ಸಾಕಪ್ಪ   ||ಪ||
ಇನ್ನೆಲ್ಲಿ ಹರಿಜನ ಚಲಿಸುವ ಜಾಗಪ್ಪ            ||ಅ-ಪ||

ಊರೊಳು ಹೊರಗು ದಾರಿಗಳೊಳು ಕೆರೆತೊರೆಗಳೆಲ್ಲ ಬರಿಮುಳ್ಳು
ನೀರುಬಾವಿ ಪುರಪಟ್ಟಣದೊಳು ನೆರೆ ದೇವರ ದೇಗುಲದೊಳು ಮುಳ್ಳು      ||೧||

ಮಠಮಾನ್ಯಗಳೊಳು ಕೋಟೆಕೂಟದೊಳು ಪಾಠಶಾಲೆ ನವರಂಗಗಳೊಳ್
ಆಟಪಾಠ ನೆರೆಯೂಟ ಹೋಟಲೊಳ್ ಕೋರ್ಟು ಕಛೇರಿಗಳೊಳು ಮುಳ್ಳು ||೨||

ಗಾಡಿಗಳೊಳು ಹೊಗೆಗಾಡಿಗಳೊಳುಮಿಗೆ ಹಡಗುಗಳೊಳುಮಿಗೆ
ವೇಗದ ಮೋಟರುಗಾಡಿಗಳಲ್ಲಿಯು ತಾಗುತಲಿಹವೀ ವಿಷಮುಳ್ಳು            ||೩||

ಜಾತ್ರೆಗಳೊಳು ವರಯಾತ್ರಾಸ್ಥಳಗಳೊಳು – ಛತ್ರ ಚಾವ್ಡಿ ಮುಹೂರ್ತಗಳೊಳ್
ಮಿತ್ರ ಸಮಾಜ ಪವಿತ್ರಮಧೀವನ ಮಾತೃಭೂಮಿ ವಿಷಮುಳ್ಳುಮಯ         ||೪||

 

೨. ನಾನೆಂತ ಭಾಗ್ಯಹೀನನೊ ಗೊಮಟೇಶ (ಶ್ರವಣಬೆಳಗೊಳದ ಜೈನ ದೇವಾಲಯ ಪ್ರವೇಶಕ್ಕಾಗಿ ರಚಿಸಿ ನೆರವಾದದ್ದು)

ನಾನೆಂತ ಭಾಗ್ಯಹೀನನೊ ಗೊಮಟೇಶ            ||ಪ||
ನೀನೆಂತ ಪಕ್ಷಪಾತಿಯೊ ಹೇ ಭಕ್ತಕೋಶ           ||ಅ-ಪ||

ಹಿಂದು ದೇಶವು ನಾನು ಹಿಂದು ಬಾಂಧವ ನಾನು
ಹಿಂದುಗಳ ಪೆಸರೆ ಗೋವಿಂದದಾಸ ನಾನು
ಎಂದು ಕಾಣೆನು ನಿನ್ನ ಸುಂದರಾಕೃತಿಯನು
ಹಿಂದು ಗೋತ್ರವು ನಾಮ ಮಾತ್ರದೊಳಗೇನು   ||೧||

ಶಿಲೆಯ ಮೂರುತಿಯಂತೆ ಬಾಹುಭುಜಬಲವಂತೆ
ಗೆಲುದೋರುವಂತ ಸುಂದರ ಮೂರ್ತಿಯಂತೆ
ಅಡಿಹೆಡೆಗೆ ಹನ್ನೆರಡು ಆಳು ಪರಿಮಾಣಂತೆ
ನಾ ಭಾಗ್ಯಹೀನನು ನಿನ್ನ ನೋಡದಿರೆ ಚಿಂತೆ      ||೨||

ಎನ್ನ ಜನುಮದ ನಾಡೆ ನಿನ್ನ ಜನುಮದ ಬೀಡು
ಎನ್ನೂರು ಶ್ರವಣಬೆಳಗೊಳ ನಿನ್ನ ನಾಡು
ಎನ್ನ ಹೀನನುಯೆಂದು ಬಿಡರು ನಿನ್ನನು ನೋಡೆ
ಎನ್ನ ಜನುಮದ ನೆಲೆಯನರಿಯೆ ನಾಂ ನೋಡೆ   ||೩||

ದೇಶವಿದೇಶಿಯರು ಜಾತಿವಿಜಾತಿಯರು
ಸತತ ನಿನ್ನಯ ಸಂದರ್ಶನವ ಗೈಯ್ಯುತಿಹರು
ಅತಿಶಯದಿ ನಾ ಪೋಗಿ ನಿನ್ನ ದರುಶನ ಗೈಯೆ
ಪಾದರಕ್ಷೆಗಳ ಬಿಡುವಲ್ಲೆ ನಿಲ್ಲಿಪರು ಬಾಹುಬಲಿ ಭಗವಾನ್        ||೪||

 

೩. ಭಾರತಾಂಬೆಯ ವಂಚನೆ (ಭಕ್ತ ವಿದ್ಯಾರಣ್ಯ)

ಭಾರತಾಂಬೆ ಸರಿಯೆ ನಿನಗೆ
ಕೊರಗಿಸುವುದು | ಹರಿಜನಂಗಳ
ಮರುಕವಿಲ್ಲವೇನೆ ನಿನಗೆ
ಕರುಣ ಶೂನ್ಯಳೇ ||ಪ||

ವಂಚಕೀ ನೀನೆಮ್ಮನೀಪರಿ
ವಂಚಿಸಿದ ಪಾಪ ಫಲಕೆ
ಹೊಂಚುಕಾಯ್ದು ಹೊರಗಿನವರು
ಮಿಂಚಿನಂತೆ ಸಂಚು ಗೈಯ್ದರು         ||೧||

ಒಂದೇಯುದರದಿ ಜನಿಸಿದೆಮ್ಮ
ಕುಂದಿಸಿ ಈ ರೀತಿ ಬಳಲಿಸಿ
ಚಂದದಿಂದೆಮ್ಮಣ್ಣಂದಿರನಾ
ನಂದದಿಂದ ತೂಗುತಿಹುದೂ            ||೨||

ಯೇಕೆ ಮಾತೆಯಮ್ಮ ನೀನು
ಸಾಕಲಾರದೀಪರಿಯೊಳು
ನೂಕಿದೂರ ಊರ ಹೊರಗೆ
ಏಕೆ ಜೋಗುಳವನು ಪಾಡುವೆ           ||೩||

ಇಂದಿರೇ ನಿನಗೇತಕಿಂತ
ದ್ವಂದ್ವ ಬುದ್ದಿಯನ್ನು ಹರಿಗೋ
ವಿಂದ ನಿನಗೆ ಕರುಣಿಸಿದನಿದ
ರಂದವರಿಯೆವೂ ತಾಯೆ      ||೪||


೪. ಇಲ್ಲೆ ಅಲ್ಲ; ಅಲ್ಲು

ಇಲ್ಲೆ ಅಲ್ಲ ಭೇದಬೇಗೆ ಅಲ್ಲು ಇದೆ ಬೇಗೆ ಭೀಕರ        ||ಪ||
ಇಲ್ಲಿಯವರೆ ಅಲ್ಲಿರುವರು ಎಲ್ಲು ಸುಖಮಿಲ್ಲ ಇಲ್ಲ             ||ಅ-ಪ||

ಹರಿಜನಂಗ್ಹರಿನಿವಾಸದಿ ಅಲ್ಲೂ ಆತಂಕ ಕಳಂಕ
ಹೊರಗೆ ದರ್ಶನ ಹರಿಜನಂಗೆ ಒಳಹೋಗಲಾತಂಕ ತ್ರಿಶಂಕ             ||೧||

ಬಲು ಹೋರಾಡಿದಂಬೇಡಕರ ಕಣ್ಮರೆಯಯಾದರಲ್ಲ ಇನ್ನಿಲ್ಲ
ಫಲವೇನಿಲ್ಲವಾಯಿತಲ್ಲ ಭಾರತೀಯರಲ್ಲ ನಾವೆಲ್ಲ   ||೨||

ಪ್ರಳಯವಾದರಿಳೆಯಳಿಯದು ನಮಗೆ ಬೇರೆ ಸ್ಥಾನ ಬೇಕು
ಚಳುವಳಿ ವಿಧಾನ ಕ್ರಾಂತಿ ನಿಷ್ಪಲ ಮತಾಂತರಮೊಂದೆದಾರಿ          ||೩||

ಹಿಂದೂಧರ್ಮ ನಂಬಿ ಕೆಟ್ಟೆವೆಂದೇಕೆ ಚಿಂತಿಸುತಿಹಿರಿ ಬಿಡಿರಿ
ಬಂಧುವೆಲ್ಲ ಬರುವರೆಂದು ಕಾದಿಹ ಬಾಗಿಲೊಳೆ ಹೊಸಲೊಳೆ       ||೪||

ಬಲು ಆಲೋಚಿಸಿದಂಬೇಡಕರು ಬೌದ್ಧನಾಗಲಿಲ್ಲವೆ ಜಾಣ
ಗೆಲುವಿಂದೆಲ್ಲ ಹೊರಟು ನಡೆಯಿರಿ ಸುಮ್ಮನೇತಕಿಹಿರಿ ನಡೆಯಿರಿ   ||೫||

 

೫. ಹರಿಜನರೂ ಭಾರತೇಯರೂ

ಹೀನ ಜನರ ವರಹರಿಜನೆಂದ ಗಾಂಧಿ ಮಹಾತ್ಮನ           ||ಪ||
ಮನುಮಗ ಗೋಡಸೆಯು ಕೊಂದ ಆ ಪಾಪಾತ್ಮನ         ||ಅ-ಪ||

ನಾವು ಸೇರೊ ಸ್ವರ್ಗಕೆ ಹೀನಜರು ಬರುವುದೇಂ
ಭುವಿಯ ಬಾಳೆಬೇಡ ಹಿಂದು ಧರ್ಮಕೆ ಧಿಕ್ಕಾರ ||೧||

ನಮ್ಮ ಜನನ ನವಮಾಸಕಾದರೆ ಆರು ಸಾಕು ಅಂತ್ಯಜರಿಂಗೆ
ನಮಗೆ ಸುಲಭದ ಮರಣವಾದರೆ ಭೀಕರಮರಣವಗೆ       ||೨||

ಭಾರತಬಾಧ್ಯತೆ ನಮಗಲ್ಲದೆ ಅಸ್ಪೃಶ್ಯರಿಗಿಹುದೇನು
ಸೇರಲೇಳು ಪಾಕಿ – ಅರಬ್ಬೀಸ್ಥಾನಕೆ ಇಲ್ಲೇನು             ||೩||

ಊರದೂರ ಯಮದಿಕ್ಕಿನೊಳಿಪ್ಪ ಚಂಡಾಲರನಿಂದು
ಊರೊಳು ಜನತಾಮನೆ ನಿರ್ಮಿಸಿ ಮುಟ್ಟದವರ ಸೇರಿಪುದೇನು     ||೪||

ವೇದಾಧ್ಯಯನ ಗೀತಪರಾಯಣ ಪಂಚಮಪಾತಕಿಗೆಲ್ಲುಂಟು
ಇದು ನವಭಾರತ ನಿರ್ಮಾಪರಿಂದೆಮಗೆ ಹರಗೋವಿಷಕುಂಟೆ          ||೫||

ಮನುಧರ್ಮ ಸವರ್ಣಿಗಲ್ಲದೆ ಅವರ್ಣಿಯರಿಗೆಲ್ಲುಂಟು
ಮಣ್ಣುಪಾಲು ಅಸ್ಪೃಶ್ಯರಿಂದೆಲ್ಲ ಚಂದ್ರಲೋಕವೆಮಗುಂಟು      ||೬||

ರಾಮರಾಜ್ಯ ನಮದಾದರೆ ರಾವಣರಾಜ್ಯಂತ್ಯಜಗಿರಲಿ
ಹೋಮದಿಬೆಂದು ಪುನರ್ ಜನ್ಮಿಸಿ ಹಿಂದುವಾಗಿ ಬರಲಿ    ||೭||