೬. ದಲಿತ ದೌರ್ಭಾಗ್ಯ

ಮೀಸಲಾತಿ ವಿಷಮಗಾಳಿ ಬೀಸುತಿದೆ ಗುಜರಾತಿನಿಂದ      ||ಪ||
ಬೀಸುಬಗೆಯಿದು ದಲಿತರೇಳ್ಗೆ ನಾಶಗೈವ ದ್ವೇಷ ಬಲೆಯು         ||ಅ-ಪ||

ಹರಿಜನೋದ್ಧಾರತೆಗೆ ಗಾಂಧಿ ಎರೆದ ಶರೀರವ ತಾನೆಲ್ಲ
ಎರಗುತಿದೆ ವಿಷಮಾರುತ ಮಹಾತ್ಮನ ಜನ್ಮಭೂಮಿಯಿಂದ          ||೧||

ಹಿಂದೂಧರ್ಮ ನಂಬಿ ಕೆಟ್ಟೆವೆಂಬುದೇಕೆ ಎದೆಗುಂದಿಹಿರಿ
ಇಂದು ಕಾಲ ಸಂದಿರುವುದು ಅನ್ಯಮತವ ಸೇರುವುದಕೆ     ||೨||

ಬೇಸತ್ತಂಬೇಡಕರು ಬೌದ್ಧಧರ್ಮ ಸ್ವೀಕರಿಸಲಿಲವೆಂ
ಹೇಸಿದ ಸಿದ್ದಯ್ಯ ಮೊನ್ನೆ ಏಸುಮತವ ಸೇರಲಿಲವೆಂ     ||೩||

ಮೀಸಲಾತಿ ದೂಷಿಸಿರಾಂ ದೂರಿರುವ ವಿಚಾರವರಿತು
ಹೇಸಿಕೆಯಮಗೊಂಡದಲಿಕೆ ನಾಚಿಕೆಯಿಲ್ಲವೇನು ನಿಮಗೆ ||೪||

ಮಠಾದೀಶ ಸುಧಾರಕರಿಂದೆ ರಾಜ್ಯಾಂಗವಿಧಿಮಿಗೆ ಫಲವಿಲ್ಲ
ಹಠಮನದಿಂ ಮುಸಲೀಮರಾದರೆ ಅಸ್ಪೃಶ್ಯತೆ ಬೇಗಳಿವುದು ಸತ್ಯ ||೫||

ಸಾಸಿರ ಶತಮಾನಗಳು ಕಳೆದರಾರದು ಅಸ್ಪೃಶ್ಯತೆ ಚಿತೆ
ಏಸು ಮುಸಲೀಂ ಬೌದ್ಧಮತ ನೀವಾರಿಸೊಂದ ಸೇರಬಾರ            ||೬||

 

೭. ಹರಿಜನ – ನೆರವು*

ರಾಗ-ಕಾಂಬೋಡಿ : ಆದಿತಾಳ (ಯೀಪರಿಯಸೊಬಗಾವದೇವರೊಳುಕಾಣೆ)

ಏಕೆಮ್ಮ ದೂಷಿಪರೀಹಿಂದೂ ಬಾಂಧವರು       ||ಪ||
ಜೋಕೆಯಿಂದಲಿ ನೋಡಿ ಮುಂದುವರಿದವರೇ   ||ಅ-ಪ||

ಹಿಂದೂದೇಶವಲೋರ್ವ ಹಿಂದುವೆಂಬುವ
ಗೊಂದಂಗವಲ್ಲವೆ ನಾವು ಹಿಂದುಬಾಂಧವರೇ
ಹಿಂದುಳಿದಯಮ್ಮಗಳ ಮುಂದುವರಿಸದ ಮೇಲೆ
ಹಿಂದುತಾನಂಗಹೀನನುವಾಗದಿಹನೆ    ||೧||

ಹಿಂದೆ ಮುಸ್ಲಿಂ ಬಾಂಧವರು ದೇಶದೊಳಗಿರ್ದ
ಹಿಂದು ವಿಗ್ರಹಗಳನು ಕೊಂಡೊಯ್ಯಲೂ
ಕುಂದದೆದೆಯಿಂದ ರಾಮಾನುಜರುಡಿಳ್ಳಿಯಿಂ
ತಂದಾಗ ಬಂದವರ ಹಿಂದಕಟ್ಟಿದೆವೂ ||೨||

ಹಿಂದೆ ಮಹಿಶೂರಿನರಮನೆಬೆಂದು ಪೋಪಾಗ
ಹಿಂದು ಬಾಂಧವರೆಲ್ಲ ಹಿಂದೆನಿಂದಿರಲೂ
ಹಿಂದುಳಿದ ನಾವುಗಳು ಮುಂದೆಮುಂದಕೆ ಪೋಗಿ
ಬೆಂದು ಪೋಪರಮನೆಯನಾರಿಸಿದೆವೊ            ||೩||

ವಿದ್ಯೆಬುದ್ದಿಗಳನ್ನು ನಿದ್ದೆಯೊಳಗರಿಯೆವು
ಬುದ್ದಿವಂತರು ವಿದ್ಯಬುದ್ದಿಗಲಿಸೆಮಗೆ
ಕ್ಷುದ್ರ ಭಾವವಬಿಟ್ಟು ಬುದ್ದಿವಂತರ ನೋಡಿ
ಸದ್ಭಾವದಿಂದ ಸತ್ಪ್ರಜೆಮಾಡಿರೆಮ್ಮಾ            ||೪||

ಬೇಸಾಯಮಾಡಿ ನಿಮ್ಮಯ ದಾಸರಾಗಿ ನಾವು
ಕಾಸಿಗೊಂದಿನ ನಿಮ್ಮ ಸೇವೆ ಮಾಡುವೆವೂ
ಘಾಸಿಯನುಪಡಿಸಿಕಂಡರೆಯಮ್ಮ ನೀವುಗಳು
ಹೇಸಿಕೆಯಮನದಿಂದ ಹಿಂದೆ ಸಾರುವಿರೀ          ||೫||

ದಿಟ್ಟಮದಕರಿಯನ್ನು ಕಟ್ಟಿ ಪಳಗಿಸಲದುವೆ
ಪಟ್ಟದರಸಿನ ಅಂಬಾರಿ ಹೊರಬಹುದು
ಗಟ್ಟಿಮನದಿಂ ನೀವು ಭ್ರಷ್ಟತೆಯ ತೊಳೆದೆಮ್ಮ
ಇಷ್ಟ ಪ್ರಜೆಗಳ ಮಾಡಿ ಶ್ರೇಷ್ಠತಮರೆನಿಸೀ       ||೬||

ಆವಮಾನವರೆಮ್ಮ ಕಾಯುವಾಲೋಚನೆಯ
ನಾವಕಾಲದೊಳು ಯೋಚಿಸುತಿಪ್ಪರೋ
ಆವ ಭಾರತಿ ಪುತ್ರರೆಮ್ಮನಾದರಿಪರೊ
ಅವರ ಹರಿಗೋವಿಂದ ಸತತ ರಕ್ಷಿಸಲೀ             ||೭||

ಹರಿಜನಕೋಸುಗ ನಿರಶನಾ ವ್ರತವಾ
ಚರಿಸಿದ ಯಿಪ್ಪತ್ತೊಂದು ದಿನಗೋ
ಚರಮಾಡಿದ ಭಾರತ ಭೂಮಿನೆ
ಹರಿಜನರೂ ಹಿಂದುಗಳೆಂದೆ ||೮||

ಸೆರೆಯಾಳು ಹರಿಜನ ಸೇವೆಗೆ
ಭಾರತ ಸರಕಾರವು ತಾನೊಪ್ಪದಿರಲ್
ತೊರೆವೆಂದಶನವ ಹಠಹಿಡಿದನು ಇವ
ಹರಣವನ್ನು ನೀಗುವತನಕ ||೯||

 

. ಹರಿಜನರ ಧೀನ ಪ್ರಾರ್ಥನೆ

ರಾಗ : ಹಿಂದೂಸ್ಥಾನಿ – ತೋಡಿತ್ರಿತಾಳ : (ಕರುಣಿಸು ದಿವ್ಯದೇವ)

ಶಿರಬಾಗಿ ನಮಿಪೆವು ನಿಮ್ಮಾ
ವರಭಾರತೇಯ ರೆಮ್ಮಾ
ನೆರೆಕಷ್ಟ ನೋಡಿಸುಮ್ಮ
ನಿರುತಿರ್ಪುದಾವಧರ್ಮ       ||ಪ||

ಪಾದರಕ್ಷೆ ಗೃಹ ಕೊಯ್ಯುವಿರಿ
ಮುದತೋರದೆಮ್ಮೊಳಿಹಿರಿ
ಹದನೇನ ಮಾಡಿರುವಿರಿ
ಇದನೆಲ್ಲನೀವರಿಯಿರಾ      ||೧||

ಕುಲಗೇಡಿಗಳು ನಾವೆಂದು
ಬಲುಭೇದ ಮಾಳ್ಪಿರೆಂದು
ಕುಲಹೀನ ಶ್ವಾನನಂದ
ದಲಿ ಮುದ್ದುನಾಡೆ ಚೆಂದ   ||೨||

ಸುತರಲ್ಲವೇನು ನಾವು
ಮತಿವಂತರಾಗಿ ನೀವು
ಹಿತಕೋರದಿರ್ಪುದಾವಾ
ಹಿತಮಾದ ನಿಮ್ಮ ಭಾವ     ||೩||

 

. ಪ್ರೇಮ (ಭಾಮಿನಿ ಷಟ್ಪದಿ)

ಪೆತ್ತಮಾತೆಯು ಶಿಶುಮಲೀನವೆಂ
ದೆತ್ತಿಮುದ್ದಾಡದಲೆ ಅದ ತಾ
ನತ್ತ ನೂಕುವಳೇನೊ ಕಾಣೆ ಸುಶೀಲರಹಲುನೇರೆ
ಉತ್ತಮರು ಹರಿಜನರ ಕೊಳಕರೆ
ನುತ್ತೆನೀಗಲು ಯತ್ನಿಸದೆ ಅವ
ರೊತ್ತೆಡೆಗೆ ನೂಕುವುದನೀತವೆಯೋಚಿಸದೆಮನದಿ           ||೧||

ಪ್ರೇಮವಿರೆಪರತಪ್ಪು ಮನ್ನಿಪ
ಪ್ರೇಮವಿರೆ ಕಷ್ಟಗಾಳನೆದುರಿಪ
ಪ್ರೇಮಿಕುಲಗೋತ್ರಗಳನೆಣಿಸದೆ ಪೊರೆವಸರ್ವರನು
ಪ್ರೇಮವಿರೆ ಪರಚಿಂತೆಮರೆಸುವ
ಪ್ರೇಮವಿರೆ ಸಂತಪವಸೂಸುವ
ಕ್ಷೇಮ ಚಿಂತನೆಯೊಳು ಸತತವು ಸೂರೆಗೊಡುವ ಮನ      ||೨||

ಪ್ರೀತಿಯಿರೆ ಸನ್ಮಾರ್ಗಕೆಳೆದುಸು
ಜಾತನಾಗಲ ಜಾತನಾಗಲಿ
ಭ್ರಾತೃ ಭಾವದಿಕಾಂಬುವರು ಲೋಕಹಿತೈಷಿಗಳು
ನೀತಿತತ್ವದ ಸಾರವರಿಯುತೆ
ಭೂತದಯ ಪರರಾಗಿ ಧರೆಯೊಳು
ಖ್ಯಾತರಾದರು ಕೆಲಮಹಾತ್ಮರು ನೆಲಸಿ ಚಿರಕೀರ್ತಿ         ||೩||

 

೧೦. ಹರಿಜನರೂ ಹರಿಮಕ್ಕಳೆ? (ಯೌರುಗತಿಯಟಲಲುನದೊ ಈಶ್ವರನ ಕುಡುಕ)

ಸೃಷ್ಟಿಸಿಲ್ಲವೇನು ಶ್ರೀಹರಿ ಅಂತ್ಯಜರತಾಂ
ಕಷ್ಟಪಟ್ಟು ಕರುಣದಿಂದಲೀ            ||ಪ||

ಸೃಷ್ಠಿಸಿದರೆಮ್ಮ ಹರಿಯು
ಕಷ್ಟವಪಡಿಸುತ್ತ ಜಾತಿ
ಭ್ರಷ್ಟರನ್ನು ಮಾಡಿ ಬೇರೆ
ಇಟ್ಟು ಇರುವುದೇಕೆ ಹರಿಯು           ||ಅ-ಪ||

ಹರಿಜನ ಬೇರ್ಪಡಿಸಿದವನು
ಹರಿಯೊ ಭಾರತೀಯನರರೊ
ಹರಿಯುನಿರ್ಮಿಸಿದನೆ ಬೇರೆ
ಹರಿಜನಗಳ ಗೋತ್ರಮೊಂದ             ||೧||

ಅರಿಯದಿರುವ ಹರಿಜನಗಳಿ
ಗರಿತಭಾರತೀಕುವರರು
ಅರಿವನರುಹಿ ಸರಿಪಡಿಸದೆ
ಇರ್ದರೇಕೆ ಇಷ್ಟು ಕಾಲ       ||೨||

ಇರುವುದೇಕೆ ಕೆಂಪುರುದಿರಂ
ಹರಿಜನಗಳ ಮೈಯೊಳಂಗ
ಹರಿಯು ಸೃಷ್ಟಿಸದಿರೆ ಬೇರೆ
ಪರಿಯೊಳಿರದದೇಕೆಮೇಕೆ     ||೩||

ಜನಿಸಲಿಲ್ಲವೇಕೆ ಹರಿ
ಜನಗಳು ಮೂರುಮಾಸಗಳಿಗೆ
ಜನನವು ನವಮಾಸಕೇಕೆ
ಚಿನ್ಮಯತಾಂ ಸೃಷ್ಟಿಸದಿರೆ ||೪||

 

* ತೃತೀಯ ಸಚೀವರಾಗಿದ್ದ ಶ್ರೀಮಾನ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆದ, ಹಾಸನದ ಹರಿಜನ ಕಾನ್ ಫರೆನ್ಸಿಯಲ್ಲಿ ಪಠಿಸಿದ ಕವಿತೆ.