೧೧. ಊಳಿಗದ ಬಾಳು (ಮೇರೆ ಪೌರಬುಲಾಮುದಿನಮುಜೆ)

ಸೇವೆಮಾಡುವುದೇ ನಮ್ಮ ಬಾಳಹುದೆ
ನೋವಿದಾರಿಗೆ ಪೇಳಲು ತಾಗುವುದೆ   ||ಪ||

ಸೃಷ್ಟಿಸಿಹನೇಂ ಬೊಮ್ಮನೆಮ್ಮ ಗುಲಾಮಚಾಕರಿಗೆನ್ನುತೆ
ಶ್ರೇಷ್ಟಮಾನುಷ ಜನ್ಮವಾಗಿರದೇಕೆ ಸ್ವಾತಂತ್ರೆನ್ನುತೆ
ಕಷ್ಟಕೂಪದೊಳಗೆ ಹೊರಳಾಡುವುದೇ
ಎಷ್ಟು ಕಾಲಕೆ ಈ ಕಷ್ಟ ಹರಿಯುವುದೊ         ||೧||

ಸತ್ತಗೋಶ್ವಾನಗಳ ಹೊರೆಹರಿಹುಟ್ಟಿಸಿಹನೇಯಮ್ಮನು
ಉತ್ತಮರ ಜತೆ ಬೇಡಿರೆನ್ನುತೆ ಕಟ್ಟೆಮಗೆ ಮಾಡಿರುವನೇಂ
ಸಾಕುಗೋಳಿನಬಾಳೆಮಗೇತಕಿದು
ಬೇಕೆ ಕೀಳಿನ ಜನ್ಮವದೇತಕಿದು          ||೨||

ಕುಳದೊಳಾಡಿಕೆ ಶಿವನೆಮ್ಮನು
ಇಳೆಯೊಳಿದನಿನ್ನಾರು ಮಾಡಿದ
ರುಳಿಯರೆನ್ನುತ ಸುಮ್ಮನೆ
ಗೋಳುಗುಡಿಸಲೆಮಗೆ ಜನ್ಮಗೊಟ್ಟಿಹನೆ
ಕೀಳುಮಾಡುವ ಮನವೆಮ್ಮೊಳಿಟ್ಟಿಹನೆ           ||೩||

ಮುಂದೆ ಬರಲೆಮಗಿರುವ
ಕುಂದುಗಳಿನ್ನು ಮನಸಿಗೆ ಬಾರವೆ
ನಿಂದವುಗಳನ್ನು ಪರಿಹರಿಸಬೇ
ಕೆಂದು ಶ್ರುತಿಗಳು ಸಾರವೇ
ಬೇಡಾಯಮಗೆ ಸ್ವರಾಜ್ಯದಿ ಬಾಳ್ವಿಕೆಯು
ಕೂಡೆಮುಗಿಯಲಿನ್ನಿಳೆಯೊಳೆಮ್ಮಿರುವಿಕೆಯು   ||೪||

ದೇಶಭಕ್ತಿಯ ಪಾಶ್ಚಿಮಾತ್ಯರು
ಆಸೆ ತೋರುತಲಿರುವರು
ನೀಸಲಾರೆವು ಆಶಿಪರಪಥ
ಲೇಸೆನುತೆಮಗಿರ್ಪುದು
ದೇಶಬಾಂಧವರೆ ಮೈಮರೆಯದಿರಿ
ಹಾಸ್ಯಮಾತಲ್ಲಿದು ಕಡೆನೋಡುವಿರಿ             ||೫||

 

೧೨* ಅಂತ್ಯಜೇಳ್ಗೆ ಮಂತ್ರ (ಕಂದ)

ವಿದ್ಯೆಯೇ ನಾಗರೀಕತೆಯಂ
ತಿದ್ದಿ ಮೌಢ್ಯತ್ವಂಗಳ ನೆರೆಹೋಗಾಡಿಸಿ
ಮದ್ಯಪಾನವನೀರೋಧಿಸ
ಶುದ್ಧವಾಕುಚ್ಚರಣೆಯನು ಸಲ್ಲಿಪುದು ವಿದ್ಯೆ ||೧||

ಕಲಿಪುದಾರೋಗ್ಯವಂಮಿಗೆ
ತಿಳಿಪುದು ರಾಜ್ಯಾಡಳಿತಂಗಳೆಲ್ಲವಂಬಲು
ನೆಲಸುವುದು ಧೈರ್ಯಂಗಳನತಿ
ಮೊಳೆಸುವುದು ಶೀಲವಾಚಾರಂಗಳ ವಿದ್ಯೇ       ||೨||

ಎಣಿಸದೆ ಭೇದಂಗಳಂ ಸ್ವ
ಜನಗಳಿಗನುಕೂಲಂಗಳ ಕಲ್ಪಿಸುವುದಲ್ಲದೆ
ಸುಜ್ಞಾನಂಗಳಂ ಭೋದಿಸು
ತಜ್ಞಾನವಂ ತೊಡೆದತಿರಿಂತವ ಬಯಪುದು ವಿದ್ಯೆ            ||೩||

ತೊಡೆದತಿಮತಭೇದವನೀ
ಡಾಡುತೆ ಕ್ರೂರತ್ವದೊಳು ನಡೆಯುತಿಹುದನೆಲ್ಲಂ
ಹೊಡೆದಾಡುತೆ ಬಾಧ್ಯತೆಗಳಿ
ಗೆಡೆಮಾಣ್ಬುದು ಸುಖ ಜೀವನ ಪಥ ಹಿಡಿಯೆ ವಿದ್ಯೆ       ||೪||

ನೆಲೆಪುದು ಸದ್ಗುಣಂಗಳಂ
ಕಲಿಪುದು ನಡೆನುಡಿಬೆರೆವುದರಿಂದಿತರರೊಳ್
ವಲಿಪುದುತ್ತಮರ ಜತೆಸಹ
ಬೆಳೆಪುದು ಸದ್ಭಕ್ತಿಗೌರವವಿಶ್ವಾಸವ ವಿದ್ಯೆ      ||೫||

ವಿದ್ಯೆಯೇ ಹರಿಜನಂಗಳ
ನುದ್ಧಾರಗೈದು ಬೇಗ ಮನುಜರೆಂದೆನಿಪುದಲ್ಲದೆ
ಮಿದ್ದಕಾರ್ಯಂಗಳಿಂದಲಿವ
ರುದ್ಧಾರಕಳೆವುದು ಮತ್ತೊಂದಿಲ್ಲವು ಜಗದೊಳ್
||೬||

 

೧೩. ಆಚಾರ
ರಾಗ : ಕಾಂಬೋಡಿ – ತಾಳ : ಜಂಪೆ

ಆಚಾರವಂತರಿಗೆ ದೊರೆವುದಲ್ಲದೆ ಸಗ್ಗ
ನಾಚಾರವಂತ ಮೋಹನದಾಸಗೆ ದೊರೆವುದೆಂತು            ||ಪ||

ಹರಿಜನಗಳೊಡನಾಟ ಹರಿಜನರಿಗತಿ ಭೇಟಿ
ಹರಿಜನರ ಗೃಹಗಳಲ್ಲಿಯೆ ಇವನಿಗೂಟ ಇಂಥ
ಹರಿಜನರ ಕೂಟಕ್ಕೆ ಸೇರುವ ಮಹಾತ್ಮನನ್ನಾ
ಚಾರವಂತನೆಂದರಿವುದಿನ್ನೆಂತು          ||೧||

ಯಾರು ಹರಿಜನಗಳನು ದೂರ ಹೊಗೆನ್ನು
ವರೊ ಯಾರೆಮ್ಮ ಸ್ಪರ್ಶದರ್ಶನಕೆ ಹಿಂದೆಗೆಯುವರೊ
ಆರಿಗೆಮ್ಮಯನೆರಳು ಬೀಳೆ ಜಗಳಾಡುವರೊ
ಅವರಿಗಲ್ಲದೆ ಇವನಿಗೆಲ್ಲಿಯಾಚಾರ ||೨||

ಧೀನರುದ್ಧಾರವೆ ಮಹಾನುಭವನಾಚಾರ
ದಾನಧರ್ಮಗಳನ್ನು ಮಾಣ್ಬುದುಮಹಾಚಾರ
ಮನವಾಚಕರ್ಮಗಳೊಳೇಕ ಇವನಾಚಾರ
ಜನಮನವನಾಕರ್ಶಿಸುವುದೆಯ್ ಆಚಾರ          ||೩||

ದೇಶಾಭಿಮಾನವೆ ಇವಗೆಮಹದಾಚಾರ
ಆಶಿಸದೆ ಫಲ ದೇಶಸೇವೆಯಾಚಾರ
ದೇಶಾಭಿಮಾನ ಬೋಧಿಪುದೆಸತತಾಚಾರ
ದಾಸತ್ವವನು ದ್ವೇಷಿಸುವುದೆಯಾಚಾರ          ||೪||

ಸತ್ಯ ಸಂದತೆಯಿವಗತಿ ಮುಖ್ಯದಾಚಾರ
ನಿತ್ಯ ಸ್ವಾತಂತ್ರವನು ಬಯಪುದಾಚಾರ
ಜಿತಯಿಂದ್ರಿಯತ್ವದೊಳಗತಿಯಾಚಾರ
ಮಿತ ಭಾಷಿಯಾಗಿರ್ಪುದೊಂದಾಚಾರ ||೫||

ಸೊಗಸಿನೊಳು ಮನವಿಡದೆ ಇಪ್ಪುದೊಂದಾಚಾರ
ನಗುತ ಕಷ್ಟಗಳನ್ನು ಸಹಿಪುದಾಚಾರ
ಮಿಗೆ ನಂಬಿಕೆಗೆ ಪಾತ್ರನಾಗಿರ್ಪುದಾಚಾರ
ಜಗಮೊಂಡನಂತೆ ಹಠಸಾಧನಾಚಾರ   ||೬||

ಭೂತದಯೆಮಯೆಯೆ ಇವ ಪ್ರೀತಿಸುವ ಆಚಾರ
ಶಾಂತಿಸಂತೋಷವತಿ ನಿತ್ಯಾದಾಚಾರ
ಯತಿಯೋಲಹಿಂಸೆಯೊಳು ಮಿತಮಿಲ್ಲದಾಚಾರ
ಅತಿಮೈತ್ರಿಯುತಮಾದ ಭಾವನಾಚಾರ           ||೭||

ಪರಿಶುದ್ಧದಾತ್ಮದಿಂದಿರುವುದಿವನಾಚಾರ
ಪರಕಷ್ಟಗಳನು ಪರಿಹರಿಪುದಾಚಾರ
ವರಶರೀರವನೆ ತೃಣಮೆಂದೆಣಿಪುದಾಚಾರ
ಪೂರ್ವದಾಚಾರ ಪೂರೈಪುದಾಚಾರ   ||೮||

ಹರಿಜನೋದ್ದಾರವೆ ಪರಮದಾಚಾರ
ಸರಿಪಡಿಸುವುದು ರಾಜಧರ್ಮವಾಚಾರ
ತೋರ್ಪುದೆಡಗೆನ್ನೆ ಬಲನೋಯಿಸಿದಾಚಾರ
ಹರಿಯನಿರ್ಮನದಿ ನೆನೆವುದಾಚಾರ     ||೯||

 

೧೪. ಹರಿಜನರಿಗೆ ಹರಿದರ್ಶನ

ರಾಗ : ಶಂಕರಾಭರಣ – ಛಾಪು – (ಸಾಹಿ ಶ್ರೀರಾಮ)

ಹರಿಯೆ ಹರಿಜನಗಳಿಗೆಂದು
ಇರಿಸುವೆ ದೇಗುಲದೋಳ್
ತೋರುವೆ ದರುಷನವನೆಂದು            ||ಪ||

ಪರಮಕರುಣ ಚರಣನಳಿನ
ವರಿಯದೆ ಹರಿಜನಗಳಮನ
ಕೊರಗುವರನವರತವು ಘನ ಪಾ
ಮರರೆಂದೆನುವರು ಜನ ದೇವಹರೀ    ||ಅ-ಪ||

ದೇವದೇಗುಲ ಪ್ರವೇಶಕನುಮತಿಯ
ನ್ನೀವಮನವೀಯ್ಯೆಸವರ್ಣಜರಿಗೆ
ಕಾಯ್ಯೆ ನಿಜಸೇವರನು ದೇವದಯಾ   ||೧||

ಚಂದ್ರಚೂಡನಂದನಿಗೆ ಚಿದಂಬರದೊಳ್
ಗಂದುಬಂದು ಕಂದನಕಷ್ಟಗಳನೀಗಿ
ಪೊಂದಿಸಿದೆ ಪದಾರವಿಂದಹರಾ         ||೨||

ಸಿಂಧು ಶಯನನಂದದಿಂದ
ಬಂದು ದೇಗುಲದೊಳು ನಿಂದು
ಚಂದದಿದರುಶನವ ಗೈವಂ
ತೆಂದುಕರುಣಿಸುವೆ ಕೃಪೇಂದ್ರನಂದವಂದ್ಯಾ      ||೩||

ತರಳರಲ್ಲವೇಂ ಹರಿಜನ
ವರಕುಲವಲ್ಲವೆ ಭುವಿಯೊಳು
ಮರುಕದೋರದಿರುವೆ
ವರಸನಾತನಿಯರೊಳಿಂದು ಹರಿಯೆನಿಂದು        ||೪||

 

೧೫. ಮತದಭಿವೃದ್ದಿ

ಇರುವರೊ ಕಾಣೆ ಈ ಊರೆಜಮಾನರು ಅಯ್ಯೊ            ||ಪ||
ಇರುವುದಾದರೆ ಗೋವಧೆಯೂರೊಳುಳಿವುದೆ    ||ಅ-ಪ||

ನ್ಯಾಯ ವಿಮರ್ಶೆಗೆ ಮುಂದಾಗಿ ಪೋಪರು
ಗೋವಧೆ ಗೈವಾಗ ಹಿಂದೆಯೇನಿಲ್ವರು           ||೧||

ಹೊಡೆದಾಡುವರು ಯಜಮಾನ್ಯದವೀಳ್ಯಕೆ
ಕಡಿವುದ ನಿಲಿಸರು ಗೋವ್ಗಳನೂರೊಳು          ||೨||

ನೀತಿಯ ನರುಹಿಗೋಮಾತೆಯನುಳುಹಿಪು
ನೀತರಾಗದೆ ಇಹುದೇತಕೀಗಣ್ಯರೂ    ||೩||

ಮತದಭಿವೃದ್ದಿಗೆ ಮನಗೊಡಲೊಲ್ಲರು
ಹಿತವನು ಬಯಸರು ಪಶುಗಳ ಮೇಲ್ಮೆಗೆ         ||೪||

ಇಂದಿರೆರಮಣ ಗೋವಿಂದ ನೀ ಮಾನ್ಯರಿ
ಗೆಂದಿಗೆ ಮತಿಯನು ಕರುಣಿಪನೊಕಾಣೆ            ||೫||

 

* ಅಸೆಂಬ್ಲಿ ಹಾಲಿನಲ್ಲಿ ಹೇಳಿದ್ದು