೨೧. ಅಂತ್ಯಜ ಸಾರ್ವಭೌಮ ಅಂಬೇಡ್ಕರ್

ಅಂಬೇಡ್ಕರ ಅಂತ್ಯಜರ ಸಾರ್ವಭೌಮನೆ ನವಭಾರತ       ||ಪ||

ನಂಬಿಹೆವು ನಿಮ್ಮ ನಾವೆಲ್ಲ
ಬೆಂಬಿಡದೆ ಭೇದ ಹರಿಸೆಲ್ಲ
ಭಾರತಿ ಸಚಿವರ ಧೀರವೀರ ಸುವಿ
ಚಾರಪರನೆ ಸುಗುಣಾನ್ವಿತ ಜೈ                                             ||೧||

ಅಂತ್ಯಜರೊಳಾವತಾರಕನೆ
ನೆರೆಖ್ಯಾತಿ ಜಗದೊಳಾಂತವನೆ
ಶ್ರೀಮಂತ ವಿದ್ಯಾಸಾಗರನೆ ದಯಾಳು
ನಿರಂತರ ಮತದ ಸುಧಾರಕ ಜೈ                                             ||೨||

ನಿನ್ನಿಂದಲೆಮಗೆ ಸನ್ಮಾನ
ಭರದಿಂದ ಬರಲಿ ವರಸ್ಥಾನ
ಸತ್ವಶೂನ್ಯಮತಕಿತ್ತು ಚೇತನ
ಭೃತ್ಯತನವ ಕಿತ್ತೋಡಿಸಿ ನಿಂದಿಹೆ                                           ||೩||

ಹಿಂದೆ ಸನಾತನರಿಂದೆ
ಕುಲಗೋತ್ರ ಕಳಂಕದಿಬೆಂದೆ
ಎದೆಗುಂದದ ಮನದಿಂನಿಂದು ಬಂಧನದಿ
ಮಂದಭಾಗ್ಯಮತ ಕುಂದನಳಿಸು ಜೈ                           ||೪||

ನ್ಯಾಯಶಾಸ್ತ್ರ ವಿಜ್ಞಾನಿ
ಪರಬೌದ್ದದೀಕ್ಷನಿಜಮೌನಿ
ಸಮಾಜ ಬಾಹಿಪರವೀರಸಿಂಹ ನೀಂ
ಧನ್ಯ ಅಂತ್ಯಜಗ್ರಗಣ್ಯ ಭಲೆ ಜೈ                                            ||೫||

ಮತದಿ ಭೇಜವಳಿಸೆ ಜೀ
ವಂತ್ಯ ಹೋರಾಡಿ ದಣಿದೆ ಹಗಲಿರುಳೆನ್ನದೆ
ಅಂತ್ಯಜ ಸಾರ‍್ವಭೌಮ ನೆಂ
ದಾಂತ ಕೀರ್ತಿ ಜಗದಿ ಮೆರೆದ ಧನ್ಯಧನ್ಯ ಬಲೆ                            ||೬||

 

೨೨. ವೀರ ಅಂಬೇಡ್ಕರ್

ಅಂಬೇಡ್ಕರ ವೀರ ಅಂಬೇಡ್ಕರ ಜೈ… ಜೈ…                ||ಪ||
ನಂಬಿರ್ದವಂಭತ್ತು ಕೋಟಿ ಅಂತ್ಯಜರನಗಲಿದ               ||ಅ-ಪ||

ಕುಲಭೇದ ಬೇಗೆಯಿಂ ಬಳಲಿದೆ ಬಾಲ್ಯದಿಂ
ಗೆಲುವಿಂದೆ ಬಾಳದೆ ಬಾಳ್ದೆ ನೀಂ ಕಡೆತನಕ                    ||೧||

ಭಾರತ ಸಚಿವ ನೀನಾಗಿ ಚಾತುರ್ಯದಿಂ
ಮೀರಿ ರಾಜ್ಯಾವಾಳೊ ಮಾದರಿದೋರಿದೆ ಜಗಕೆ
ನೂತನ ರಾಜ್ಯಾಂಗ ರಚಿಸೆ ಭಲೆ
ಖ್ಯಾತಿಯನಾಂತೆ ನೀಂ ಕಲಿಯುಗ ಮನುವೆಂಬೊ                        ||೨||

ಭೇದವಳಿಯದುದ ತಾಳದಲೆ ಮನನೊಂದು
ಬೌದ್ಧ ನೀನಾದೆಯೈ
ದಾರಿದೋರದೆ ಕಡೆ
ದೈವಾಜ್ಞೆ ಭೇದವರಿಸಲು ನೀನವತರಿಸಿ
ಮಾಯದ ಮರಣಕೆ ನೀ ಗುರಿಯಾದೆ ಹಾ                                ||೩||

 

೨೩. ಮತಾಭಿಮಾನ (ಚೇತೋಜನ ಬಾಣ)

ಇಂಬುಗೊಟ್ಟರು ಇವರು ಪರದೇಶಿಯವರಿಂಗೆ
ಅಂಬೇಡ್ಕರರು ಎಂ.ಸಿ. ರಾಜರೆಂಬರುನಿಂದು                 ||ಪ||

ಲಭಿಸುವ ಸ್ವತಂತ್ರಕ್ಕೆ ಅಭಿಮಾನವಿಡದಿವರು
ಸ್ವಭುವಿಬಲುಜನ ಪಡಿಪ ಕಷ್ಟಮನದೊಳು ತಳೆದು       ||೧||

ಹಡೆದ ಭಾರತಿಪರರಿಗೊಡತಿಯಾದರು ಲಕ್ಷ್ಯ
ವಿಡದೆ ನಿಂದಿಪರೆಂದು ಹಿಡಿದು ಹಠಮನದೊಳಗೆ                        ||೨||

ದೇಶಾಭಿಮಾನ ಶೂನ್ಯತೆಯಿಂದ ದೇಶಿಯರು
ಘಾಶಿಪಡಿಪರುಯೆಂದು ಬೇಸರದಿ ಮನನೊಂದು ಮೋಸಹೋಗದೆ ನಿಂದು ||೩||

ದೇಶಮಾತೆಯ ಮೇಲೆ ಆಸೆ ಇಡದಂತ್ಯಜರ
ಕ್ಲೇಶತೊಲಗಿಸಲು ಇವರಾಸರೆಯನೀಯಲು                ||೪||

ನೊಂದು ಮತಭೇದದಿಂ ಹಿಂದೂಗೋತ್ರದೊಳಿರ್ದು
ಹಿಂದೂವೆನಿಸುತೆ ಸಾಯುವುದಿಲ್ಲೆಂದು
ತಾನಂದು ನರಧೀರ ವರಮನೆಯೋ ?

 

೨೪. ವಿಧಿನಿಂದೆ

ಕ್ರೂರ ವಿಧಿಯೆ ಕಣ್ಮರೆ ಮಾಡಿದೆ                                           ||ಪ||
ಧೀರ ಅಂಬೇಡ್ಕರ ಧರೆಯಿಂ                                                 ||ಅ-ಪ||

ವೀರಶೂರನ ಅಂತ್ಯಜವತಾರನ
ಗುರಿಮಾಡಿದೆಯ ಮಾಯಾ ಮರಣಕೆ ಹಾ                                ||೧||

ಸುಂದರ ರೂಪನ ಭಯಭೀಮ ಕಾಯನ
ಅಂದಗೆಡಿಸಿ ಕರಕೊಂಡೊಯ್ದೆ ಹಾ                             ||೨||

ಮರಳಿ ಇಳೆಗೆ ಜನ್ಮತಾಳುತೆ ಬರುವ
ಪರಿಮಾಡೈ ಪರಮಾತ್ಮ ತ್ವರೆ                                             ||೩||

 

೨೫. ಸುಂದರ ವ್ಯಕ್ತಿ (ಏನು ವಿನೋದವಿನರ್ಥನ ಗಾನ)

ಸುಂದರ ಸೊಗಸಿನವನೆ ಮಹರಾಯ
ವಿಸ್ತಾರ ಹಣೆ ತಲೆ ಗಡಿಗೆ ಮೂಗುದ್ದ
ವಸ್ತಾದಿ ನೆತ್ತಿಯೊಳಿಹ ಜುಟ್ಟುದ್ದ
ಹಲ್ಲಿಲ್ಲ ಮೂರಿವಗೆ ಬೆನ್ನುಗೂನು ನಾಂ
ಕೊಳ್ಳುಯೆಂದರೆ ಯೇಳು ಕಾಸಿಗು ಒಲ್ಲೆ
ಖಂಡಮಾಂಸಗಳಿಲ್ಲ ಮೈಯೊಳೊಂದಿಷ್ಟು
ಗುಂಡಿಯ ಹೆಣದ ಮೈಯೊಳಗಿರುವಷ್ಟು
ಕಣ್ಣು-ಕಿವಿಗಳೊಂದು ಬೊಗಸೆಯಗಲ
ಚೆನ್ನಾಗಿ ನೋಡಿದರೆಮಗತಿದಿಗಿಲು
ಸೊಂಟಕಟ್ಟಿಹ ಮೂರು ಚೋಟುದ್ದದಟ್ಟಿ
ಯೆಂಟುಮೊಳವಿಂದೆ ಮೈಗೆ ಹೊದಿಯುವದುಪಟಿ
ಹಿಡಿಯಲೊಳ್ಳೆಯದೊಂದು ಕೋಲಿಲ್ಲದವಗೆ
ಹಿಡಿದಿಹ ಬಿದುರಿನ ಕೋಲ ಕೈಯೊಳಗೆ
ಎಲ್ಲ ಮೆಟ್ಟುವ ಪಾದರಕ್ಷೆಗಳಿಡನು
ಕೀಳು ಬೆಲೆಬಾಳೊ ಮರಪಾದರಕ್ಷೆ ಮೆಟ್ಟಿಹನು
ಉಡಿದಾರಕಿವಗಡಿಯಾರ ಕಟ್ಟಿ ನೋಡೆ
ಸುಡುಗಾಡ ಸಿದ್ದನಂತಿವನು ಕಾಣುವನು