೨೬. ದರಿದ್ರ ನಾರಾಯಣ

ರಾಗ : ತೋಡಿ – ರೂಪಕ
ತಾಳ – ಚತುರಶ್ರಜಾತಿ

ಏಕೆ ನೀನೀ ಫಥಕಿಳಿದೆ | ಖ್ಯಾತನೇ ಮಹಾತ್ಮ
ಮೆರೆಯುತಿರ್ದ ನಿನ್ನ | ಸರ್ವಭಾಗ್ಯದಾನ                                 ||ಪ||

ಮೆರೆದು ದೇಶ ಸೇವೆಗೆ | ತಿರುಕನಂತಿರಲೇಕೆ
ಚರಕದಿಂದ ದಾರ ನೂತು ಪರರಿಗಿತ್ತು
ಬರುವ ಮೌಲ್ಯದಿಂದ ಹೊರೆಯಬೇಕೆ ಉದರ
ಬೆಲೆಯ ಬಾಳ್ವ ವಸ್ತ್ರಮುಳಿದು ಬಂದುಯಿಂತ
ಸುಲಭ ಬೆಲೆಯದುಪ್ಪಟಿಗೊಲಿದುದೇಕೆದಟ್ಟಿಗೆ
ಬ್ಯಾರಿಸ್ಟರ್ ನೀನಾಗಿ ಅರಮನೆಯೊಳು ಪೋಗಿ
ಇರದೆ ನೀಂ ಸುಖಮಾಗಿ ಸೆರೆಯವಾಸಬೇಕೆ
ಕುಲಸುಗೋತ್ರವೆಂಬ ನೆಲೆಯನೆಲ್ಲ ಮರೆದು
ಒಲಿದು ಹರಿಜನರಾ ಸಲಹಲೇಕೆ ನಿಂದೆ

 

೨೭. ಮಾತೃಭಾಗ್ಯ

ರಾಗ : ಶಹನ
ಆದಿತಾಳ : (ನಾಗವೇಣಿಯನಗರಿಗೆ)

ಹಡೆದ ಮಾತೆಯದೇನು
ಧನ್ಯತೆಯನ್ನು ಪಡೆದಳೊ ||ಪ||

ಇವಗೆ ಜನ್ಮವನಿತ್ತ ಜನನಿ ಪಾವನಳಾದಳೇಂ
ಭುವಿಯೊಳಿಂಥ ಸುತನ ಪಡೆದ ಯುವತಿ ಮಾನ್ಯಳುಂ  ||೧||

ಪಾಲು ಬೆಣ್ಣೆಗಳೂಡಿಯಿವಗೆ ಲಾಲಿಪಾಡುತೆ
ಬಾಲಲೀಲೆ ನೋಡಿಯೆಂತು ಕಾಲಕಳೆದಳೊ       ||೨||

ಶ್ರೇಷ್ಠ ದೇಶಸೇವೆಯನ್ನು ಇಷ್ಟದಿಂದಲೀ
ಶಿಷ್ಟತನದಿ ಭೋದಿಸಿವಗೆ ಶ್ರೇಷ್ಠಳಾದಳೇಂ      ||೩||

ಸಲಹಿ ದೇಶ ಸೇವೆಗಿವನ ನಿಲಿಸಲಾರದೇ ಒಲುವಿನಿಂ
ಭಾರತಿಗೆ ದತ್ತು ಸಲಿಸಿಬಿಟ್ಟಳೇಂ       ||೪||

ಭರತ ಖಂಡಕೀ ಸುಪುತ್ರ ರತ್ನದಾನವ
ಕರುಣಿಸೀದವಳ್ಗೀಯಲೆಂತ ರತ್ನದಾನವ         ||೫||

 

೨೮. ಹರಿಜನವರಗುರು

ಯೇನು ಧನ್ಯರೈ
ಹರಿಜನರೇನು ಮಾನ್ಯರೀಧರೆಯೊಳು ||ಪ||

ಹಿಂದಿನಿಂದ ಗುರುವಿಲ್ಲದೆ ಹರಿಜನ ಬಂಧನಗಳಿಗೀಡಾಗಿ
ಬಲುಮಂದ ಭಾಗ್ಯರಿವರಾಗಿ
ಇಂದೀಗುರುವನು
ಪೊಂದಿರುವುದಾ
ನಂದವಲ್ಲವೇಯಮಗತಿ    ||೧||

ಸತ್ಯಸಂದನತಿಶ್ರೇಷ್ಠಭಾರತಿಯ ಜೇಷ್ಠಪುತ್ರಗಾಂಧಿಯನು
ಅತಿಕಷ್ಟ ಜನರ ಬಾಂಧವನಂ
ಇಷ್ಟಗುರುವೆಂದರುಹಲು ಬಲು
ಶ್ರೇಷ್ಠರಲ್ಲವೇ ಭುವಿಯೊಳು          ||೨||

ಮಹಾತ್ಮನೆಂಬ ಬಿರುದನು ಪಡೆದಿಹ
ಮಹಿಗೇಕಗುರುವು ಎನಿಸಿಹನಂಬಲು
ಸಹನೇಯತಳೆದಿರುವವನಂ
ಭಾವಿಸೀಗುರುವೆಂಬುದೆಮ್ಮ ಭಾಗ್ಯವಲ್ಲವೇ ಭುವಿಯೊಳು         ||೩||

 

೨೯. ಕುರುಬನ ಕೈಕೋಲು

ಕೋಲು ಕೋಲು ಕೋಲೆ ಹೆಗ್ಗಡೆ ಕೈಯ ಕೋಲು ಕೋಲು ಕೋಲೆ ||ಪ||

ಗಂಧದ ಕೋಲಲ್ಲ ಚಂದನಮರವಲ್ಲ
ಸುಂದರವೆಂಬುದು ಮೊದಲಿಲ್ಲ ಕೋಲಿಗೆ        ||೧||

ಬಣ್ಣವ ಬಳಿದಿಲ್ಲನುಣ್ಣಗುತಾನಿಲ್ಲ
ಕಣ್ಣಿಗಂತಾಗಿ ನಾಣ್ಯದ ಕೋಲಲ್ಲ    ||೨||

ಹೊಡೆದಾಡೆ ದಡಿಯಲ್ಲ ಕಡುಗವುತಾನಲ್ಲ
ಹಿಡಿದು ಹೋಗಲು ಗಾಳಿ ಸಂಚಾರಕಲ್ಲ          ||೩||

ಮುಂದೆಡೆ ಕಟ್ಟಿಲ್ಲ ಹಿಂದೆ ಕೈ ಪಿಡಿಯಿಲ್ಲ
ಚಂದಾಗಿ ಊರುವ ಬಂಧುರಕೋಲು ||೪||

ಭಾರತ ಊರಿನ ಕುರಿಯ ಕಾಯಲುಯದೆ
ಗೂರಿನಿಲ್ಲುವವಧೀರ ಕುರುಬನ ಕೋಲು        ||೫||

ಹೊರಗಿಂದ ಬಂದಿವನ ಕುರಿಗಳಿಗೆರಗುವ
ನರಿ ತೋಳಗಳನೆಲ್ಲ ಬೆದರಿಸ ಕೋಲು            ||೬||

ಭೇದಂಗಳನು ದೂರಿಕರಿಸುತ ಹರಿಜನ
ವಾರಮನುದ್ಧರಿಸುವ ಬಿದಿರು ಕೋಲೆ            ||೭||

ಹರಿಜನಯಾತ್ರೆಯ ಬರಿಗಾಲಿಂಚರಿಪಾಗ
ಕರದೊಳು ಪಿಡಿದಿದ ಹೊರಡುವ ಕೋಲು        ||೮||

 

೩೦. ಲೋಕಮಾನ್ಯ

ಧನ್ಯಧನ್ಯ ಮಹಾತ್ಮ | ಮೋಹನ ನೀ ಲೋಕದಲಿ          ||ಪ||

ಧನ್ಯನೀತಲೋಕದೋಳ್ | ಮಾನ್ಯ ಸರ್ವ
ಮನುಜರೋಳ್ | ಗಣ್ಯನೆನಿಸಿಕೊಂಡುಮೆರೆವ
ಪುಣ್ಯಲೋಕ ಸಾಧಕನು      ||ಅ.ಪ||

ದೇಶಸೇವೆಗೋಸುಗ
ದಾಸನಾಗಿ ಸೊಂಟಗಟ್ಟಿ
ಘಾಸಿಪಡೆದು ದೇಶಾಭಿ
ಲಾಶೆಯನ್ನು ಭೋದಿಸಿದ    ||೧||

ಸತ್ಯಸಂದನೀತನು
ನಿತ್ಯಶೀಲವಂತನು
ಸತ್ವಗುಣದಿಸರ್ವದಿಂದ
ಸ್ತುತ್ಯನೆನಿಸಿಕೊಂಡು ಮೆರೆದ            ||೨||

ಬಿಟ್ಟ ಸರ್ವ ಭಾಗ್ಯವ
ನುಟ್ಟ ಮೋಟುದಟ್ಟಿಯ
ಶ್ರೇಷ್ಠ ದೇಶಸೇವೆಗೈಯೆ
ಕಟ್ಟಿದ ಕಂಕಣವನು ಕೈಗೆ    ||೩||

ಹಿಂದೂ ಮುಸಲ್ಮಾನರನ್ನು ತಾ
ನೊಂದುಗೂಡಲೋಸುಗ
ಹಿಂದೆ ಇಪ್ಪತ್ತೊಂದು ದಿನ
ಬಂಧಿಸಿದಾಹಾರವನು         ||೪||

ಇಂದು ಹರಿಜನಂಗಳಿತರ
ರೊಂದುಗೂಡಲೋಸುಗ
ಬಂಧಿಸಿದಾಹಾರವನು
ನಿಂದು ಇಪ್ಪತ್ತೊಂದು ದಿನ ||೫||

ಭಾರತೇಯ ಪುತ್ರನುಸು
ಧೀರ ದೇಶಭಕ್ತನಿವ
ಶೂರರೆನಿಸಿರುವರನುಬಲು
ಗಾರುಗೊಳಿಸಿನಿಂತನಿವನು    ||೬||

ಹರಿಜನೋದ್ಧಾರನ
ಕರುಣಮಯಕಾರನ
ನಿರುತಹರಿಗೋವಿಂದ
ಕರುಣದೋರಿಸಲಿಷ್ಟ         ||೭||