೩೧. ಸಬರಮತಿ ಆಶ್ರಮ

ರಾಗ : ತೋಡಿ – ತಾಳ
ರೂಪಕ – (ಮೋಸಮಾದುದೆ ರಾಮ)

ನಾಶಮಾದುದೇ ಆಶ್ರಮ
ಮುತ್ತಿಕೊಂಡರೇನು ನಿನಗೆ
ಸುತ್ತಲೂ ಪರರಾಜಭಟರು
ಇತ್ತರೇಂ ನಿರೂಪವನ್ನು
ತತ್ ಕ್ಷಣ ಯರವಾಡದ್ಯಾತ್ರೆಗೆ          ||೧||

ಬೆಲೆಯ ಬಾಳ್ವವಸ್ತುಗಳನು
ಸುಲಿದುಕೊಂಡು ಪೋಗುವಾಗ
ಇಳೆಗೆ ಕಂಬನಿಗಳದೆಂತು
ಇಳಿಯದಿರ್ದವೊ ನಾಂಕಾಣೆ ||೨||

ಎಲ್ಲಿ ನಿನ್ನವರ ಕುಠೀರ
ಎಲ್ಲಿ ಸೇವದಳ ಬಿಡಾರ
ಎಲ್ಲವನ್ನು ಇಳೆಗುರುಳಿಸಿ
ನಿಲ್ಲದೋದರೇಂ ಅಯ್ಯೋ                         ||೩||

ನಾಶಮಾಡಿ ಸಬರಮತಿ
ಆಶ್ರಮವ ರಾಜಭಟರು ರಾಜ
ದ್ವೇಷಿಯೆಂದು ನಿನ್ನನು ಸೆರೆ
ವಾಸಕೊಯ್ದರೇಂ ಮಹಾತ್ಮಂ         ||೪||

ಹರಿಯಿತಿವನ ಋಣವುಯಿಂದು
ತೆರಳುತಾನೆರವಾಡಕೆಂದು
ಮರಗಿಡ ಕಲ್ಲುಗಳು ನಿಂದು
ಸುರಿದುವೆ ಕಣ್ಣೀರನಂದು               ||೫||

 

೩೨. ನಿರ್ದಯ ದೇವ

ರಾಗ : ಮುಖಾರಿ – ಆದಿತಾಳ – (ಯೇಕೆಬಾಲಕನೊಳ್ ನಿರ್ದಯನೀನಾದೆ – ಮನುಜ)

ಏಕೀ ಮಹಾತ್ಮನೋಳ್ | ನಿರ್ದಯ ನೀನಾದೆ ದೇವ         ||ಪ||

ಸಾಕುದೀನರೆಂದು | ನೂಕಿಧರೆಗೀವನ ಶ್ರೀ
ನಾಕ ಪಾಲ ಸಖ ನೀ | ನೇಕೆ ಜೋಕಿನಿಂದಿಹೆ                   ||೧||

ಮಡದಿ ಸುತರಿಗೆಲ್ಲ | ದುಡಿಯಲಾರದಿವ
ನೋಡಲಿಗರ್ಷವಿಲ್ಲದೆ | ಪಡುತಲಿಹನೆಕಷ್ಟವ                         ||೨||

ಪರಮ ಭಾಗ್ಯವೆಲ್ಲ | ವರ ಸ್ವರಾಜ್ಯಕೀಯ್ದು
ಯರವಾಡದೊಳಿರ್ದುದಂದು | ಅರಿಯದಂತಿಹೆ             ||೩||

ಪರಿಕಿಸಲಿವನ | ಕೊರಗಿಸುತಲಿರ್ಪೆಯ
ನರಹರಿಗೋವಿಂದ | ನೆರವಾಗೈ ಮಹಾತ್ಮಗೆ                ||೪||

ನಂಬಿದವರ ಕಾವ | ನೆಂಬಬಿರುದಿಂ ಮೆರೆವ
ಅಂಬುಜಾಕ್ಷಕಾಯ್ಯೆ | ಬೆಂಬಿಡ ದೀಭಕ್ತನ                     ||೫||

 

೩೩. ಮಹಾತ್ಮಗಾಂಧಿ ಮರೆಯಾದೆಯ ನೀಂ

ಮಹಾತ್ಮಗಾಂಧಿ ಮರೆಯಾದೆಯ ನೀಂ
ಸ್ವರಾಜ್ಯಗಳಿಸೆಮಗೆ           ||ಪ||

ಸ್ವರಾಜ್ಯಗಳಿಸಲು ಹೋರಾಡಿ ಹಗಲಿರುಳು
ಗೆಲಿದೆ ಭಾರತವ ಬಾಪು ಭಲೆ            ||೧||

ದುಡಿದು ಹಗಲಿರುಳು ಪಡೆದ ಸ್ವರಾಜ್ಯವ
ಕಡುಗಲಿ ಗಾಂಧಿ ನೀಂ ಧನ್ಯ ಭಲೆ       ||೨||

ಸತ್ಯಶೋಧಿಸಿ ನಿತ್ಯವ ನೀಂ ಜಗ
ಸ್ತುತ್ಯನಾದೆಯ ಹಠಯೋಗಿ             ||೩||

ಸತ್ಯಾಹಿಂಸೆ ತತ್ವಮಹತ್ವದಿ
ಗೆಲಿದೆ ಮಹಾತ್ಕಾರ್ಯವ ತ್ಯಾಗಿ?     ||೪||

ಸೆರೆವಾಸ ಉಪವಾಸದಿಂದಲಿ
ಸುಖ ಸಂತೋಷಗಳನು ತೊರೆದೆ        ||೫||

ಭಾರತದೊಳು ಯುಗಪುರುಷನೆನಿಸುತೆ
ಮಾನವರೊಳು ಅವತರಿಸಿದೆ             ||೬||

ಹರಿಜನಗಳನುದ್ದಾರಿಸಲೋಸುಗ
ಎರೆದೆ ಶರೀರವ ನೀ ಭೂಮಿಗೆ           ||೭||

ಪರಿಪರಿತೆರದೊಳು ಸನಾತರೊಳು
ಹೋರಾಡಿದ ಹರಿಜನ ನಿಜಪ್ರೇಮಿ     ||೮||

 

೩೪. ಮಹಾತ್ಮ ಮಹಾನುಭಾವರಿಗೆಲ್ಲಿ ಸುಲಭದ ಮರಣುಂಟೆ

(ಮಹಾತ್ಮಗಾಂಧಿ ಮರಣವಾರ್ತೆ ಕೇಳಿದ ಮರುಗಳಿಗೆ ಬರೆದದ್ದು)

ಮಹಾತ್ಮ ಮಹಾನುಭಾವರಿಗೆಲ್ಲಿ ಸುಲಭದ ಮರಣುಂಟೆ ಅಯ್ಯೋ                ||ಪ||
ಆಹಾ ಅದೇಕೆ ದುಃಖಪಡುವುದು ಸ್ವರ್ಗದಿ ಸುಖಮುಂಟು             ||ಅ-ಪ||

ಮಹಮ್ಮದ್ ಗುರು ತಾ ಮರಣವಾದನು ಕಲ್ಲಿನೇಟಿನಿಂದೆ ಅಯ್ಯೋ
ದಯಾನಂದ ಸರಸ್ವತಿ ತಾಂ ಮಡಿದ ವೀಷಪಾನಿಯದಿಂದೆ
ಮಹಾಶಯ ಲಿಂಕನು ತಾಂ ಮಡಿದ ಗುಂಡಿನೇಟಿನಿಂದೆ
ಅಂತೆಯೆ ಮಹಾತ್ಮಗಾಂಧಿ ಮಡಿದನು ಶೋಕಪಡುವುದೇಕೆ
ಅಯ್ಯಯ್ಯೋ ದುಃಖಪಡುವುದೇಕೆ ಬಿಡಿಯದು ದೈವಲೀಲೆ ಏಕೆ

 

೩೫. ಪ್ರಕೃತಿ ನಿಂದೆ

(ಗಾಂಧಿ ತೀರಿಕೊಂಡ ಮರುಮುಂಜಾನೆ ಪ್ರಕೃತಿ ನೋಡಿ ಬರೆದದ್ದು)

ಪಾಪಪುಣ್ಯ ಯವನರಿಯದ ಸೂರ್ಯನೆ ನೀನೇಕುದಯಿಸಿದೆ ಅಯ್ಯೊ
ಮಂದ ಬುದ್ದಿಯ ಚಂದಿರನೆಯಿಂದೇಕುದಯಿಸಿದೆ ಅಯ್ಯೊ
ಹಕ್ಕಿ ಪಕ್ಷಿಗಳೆ ಲೆಕ್ಕಿಸದೀದಿನ ದುಕ್ಕಿಸದೇ ಇರಿ ಅಯ್ಯೊ ದುಃಖಿಸದೆ ಹಿರಿ
ಕಾಡು ಮೃಗಗಳೆ ತರುಮರಗಿಡಂಗಳೆ ಗೋಳಿಡದೆ ಹಿರಿ ಅಯ್ಯೊ
ಜಮುನೆ ಗಂಗೆಯರೆ ಸುಮ್ಮನಿರದೆ ನೀವದೇಕೆ ಹರಿಯುವಿರಿ ಅಯ್ಯೊ
ಮಾರುತನರೆಕ್ಷಣ – ನಿಂತು ನೀರಾಡದೆ ಅದೇಕೆ ಚಲಿಸುವೆಯೊ ಅಯ್ಯೋ
ಹರಿಜನರೇ ನಮ್ಮ ಗುರು ಪ್ರಹಾರಿಸಹರುಶದೊಳಿಹಿದೇನು ಅಯ್ಯೋ
ಹರಿಜನ ಹಡಗನು ಸೇರಿಸದೆ ತಡಿ ನಡುನೀರೊಳು ಕೈಬಿಟ್ಟನೀ ದಿನ