೩೬. ಮೈಸೂರು ಮಹಾರಾಜರ ಮಹೋಪಕಾರ

ರಾಗ : ಬೇಹನ್ :
ಆದಿತಾಳ : (ಹರಿಹರಿ ಮಾಧವ ಕರುಣಾನಯನ)

ಪೊರೆಹರಿ ಮೈಸೂರ ವರಕೃಷ್ಣರಾಜರ
ಹರಿಜನರರೇಳ್ಗೆಗೆ ತಂದ ಭೂವರರ        ||ಪ||

ವಿದ್ಯಾದಾನವ ಕರುಣಿಸಿಯಮ್ಮನು
ಬುದ್ದಿವಂತರ ತಾಮಾಡಲುದ್ದೇಶಿಸಿ
ಬದ್ಧ ಕಂಕಣವನು ಧರಿಸುತನಿಂದ      ||೧||

ರಾಜಕೀಯೋದ್ಯೋಗಕೆಯಮ್ಮನು
ಮಾಜದೆ ಸೇರಿಸುವಪ್ಪಣಿಗೈದು
ಈ ಜಗದೋಳ್ನೆ ಶೋಭಿಸದೊರೆಯ    ||೨||

ಸಾರ್ವಜನಿಕ ಸ್ಥಾನಗಳಿಗೆಮ್ಮವರನು
ಸೇರಿಸಬೇಕೆಂದಪ್ಪಣೆಗೈದು
ಕರುಣದಿಂದಾಳುವವರ ರಾಜೇಂದ್ರರ ||೩||

ಭೂಮಿಯನುಚಿತದಿ ಕರುಣಿಸಿ ಹರಿಜನ
ಕ್ಷಾಮದಭಾದೆಯ ತೊಲಗಿಸಿ ಸತತ
ಪ್ರೇಮವ ತೋರಿದ ನಾಲ್ವಡಿ ಕೃಷ್ಣನ             ||೪||

ಪೊಸವಿದ್ಯಾನಿಲಯಗಳನು ನಿರ್ಮಿಸಿ
ಆಶನವಸನಗಳನುಚಿತದಿಂದೀಯುತೆ
ಪೊಸಜೀವದ ಖಳೆಯಿತ್ತಯೀದೊರೆಯ  ||೫||

 

೩೭. ಆರ್.ಗೋಪಾಲಸ್ವಾಮಿಯವರ ನಿಧನದ ಗೀತೆ

ಹರಿಜನ ಗುರುವರ ಹಾರಿದೆಯಾ ಹರಿಪಾದವನೀಂ ಸೇರಿದೆಯಾ      ||ಪ||
ಮರೆಮಾಚುತೆ ಕಣ್ಮರೆಯಾದೆಯಾ ನೆರೆಶೋಕಗೈವ ಪರಿಮಾಡಿದೆಯಾ        ||ಪ||

ಇನ್ನಾರೆಮ್ಮನು ಕರೆಯುವರು ಬನ್ನಿರಿಲ್ಲೆಂದೊರಲುವರು
ಬಾರದಿರೆಮ್ಮನು ಬೈಯುವರು ಬಂದರೆ ಚಂದದಿಮನ್ನಿಪರು         ||೧||

ತಬ್ಬಲಿಯೆಮ್ಮನು ಮಾಡಿದೆಯಾ ಕಡೆನೋಟವ ನಮ್ಮ ನೋಡಿದೆಯಾ
ಆರು ಅರಿಯದಂತೋಡಿದೆಯಾ ಹರಿಗೋವಿಂದನ ಕೂಡಿದೆಯಾ     ||೨||

ಅಯ್ಯನೆಂಬೊ ಸೊಲ್ಲಳಿಯಿತಲ್ಲ ಮಂದಭಾಗ್ಯರು ನಾವೆಲ್ಲ
ಯಿಂದು ತಂದೆಯಗಲಿದೆವಲ್ಲ ಮುಂದೆ ನಮ್ಮ ಪರಿಹರಿಬಲ್ಲ       ||೩||

 

೩೮. ಆರ್.ಗೋಪಾಲಸ್ವಾಮಿ ಅಯ್ಯರ್

ಎಲ್ಲು ಕಾಣೋದಿಲ್ಲವಲ್ಲ ನಮ್ಮಯ್ಯ ಎಲ್ಲು ಇಲ್ಲ ||ಪ||

ಮನೆಯೋಳ್ ಮಂಚದೊಳಿಲ್ಲ ನಮ್ಮಯ್ಯ ವರರಾಜದರ್ಬಾರೊಳಿಲ್ಲ ನಮ್ಮಯ್ಯ
ಮೈಸೂರ್ ರಾಜ್ಯದೊಳಿಲ್ಲ ನಮ್ಮಯ್ಯ ಇನ್ನೆಲ್ಲಿರುವ ಕಾಣೆ ನಮ್ಮಯ್ಯ ||೧||

ಏನು ಕೇಳದೆಲ್ಲಿ ಪೋದ ನಮ್ಮಯ್ಯ ಕರುನಾಳು ನಾಳೆ ಬರುವನೆ ನಮ್ಮಯ್ಯ
ಪಾಲುಪತ್ರ ಕೊಡದೆಯೆ ನಮ್ಮಯ್ಯ ಈ ಗೋಳು ಮಾಡಲೆಲ್ಲಿ ಪೋದೊನಮ್ಮಯ್ಯ ||೨||

ಇರುವನೆಲ್ಲಿ ನೋಡಿ ನೋಡಿ ನಮ್ಮಯ್ಯ ಪರಂಧಾಮದೊಳು ಕುಳಿತಿಹೊನಮ್ಮಯ್ಯ
ಕರೆದರ‍್ಯಾಕೊಬಾರಲೊಲ್ಲ ನಮ್ಮಯ್ಯ ಅಲ್ಲಿ ಹರಿಯ ಪಾದಪೂಜೆ ಮಾಳ್ಪೊ ನಮ್ಮಯ್ಯೊ||೩||

 

೩೯. ದಿವಾನ್ ಸರ್ ಮಿರ್ಜಾಸಾಹೇಬ್

ಇರಬೇಕಿರಬೇಕಿಂತವ ದೇಶದಲಿ
ಸರ್ ಮಿರ್ಜಾರಂತ ದಿಟ್ಟ ದಿವಾನರು                          ||ಪ||

ಕಲೆಯನು ದೇಶದಿ ನೆಲೆಸಿ
ಶೃಂಗಾರ ಕಿರೀಟವ ಧರಿಸಿ
ಜನದಾಸೆಗಳನು ಬಲು ಸಲಿಸಿ ತಾಂ
ದೇಶಕೆ ದೇಹವದಣಿಸಿ

 

೪೦. ನಿರಂಜನರಾಜರಸರ ಗುಣಗಾನ

ಧರೆಗಧಿಕ ಮಾದರಿಯ ಮೈಸೂ
ರರಸ ಶ್ರೀ ಜಯಚಾಮರಾಜಗೆ          ||ಪ||
ನೆರವನೀವ ಸುಪದವಿಗೇರುತೆ ಮರೆದನತಿ ಬೇಗ ||ಅ-ಪ||

ಪರಮಹರುಷದಿ ಕಾರ್ಯಸಾಧಿಸಿ
ಕರುಣಮಯನಿವನೆಂದು ಜನರೊಳು
ಕಿರಿಯ ಪೆಸರಾಂತನು ನಿರಂಜನರಾಜ ಅರಸನಿವ ||೧||

ಶಾಂತಿಯುತನಿವ ಸರ್ವಜನಹಿತ
ವಾಂತು ದೇಶೋನ್ನತಿಗೆ ಬಲು ವಿ
ಶ್ರಾಂತಿಯಿಲ್ಲದೆ ದುಡಿದ ಅಹರ್ನಿಶಿ ಯಾಂತು ಖ್ಯಾತಿಯನು         ||೨||

ಆಂತು ಭೂತ ದಯಾಪರತೆ ಶ್ರೀಮಂತನಿವಸಾಧಾರಿ ಎನಿಸುತೆ
ನಿಂತು ಸಂತಸದಿಂದನಾಳುವ ಜಿಲ್ಲೆ ಜನಗಳನು ||೩||

ದಿಟ್ಟ ಕಾರ್ಯಾಧ್ಯಕ್ಷನಿವ ಸಂ
ತುಷ್ಟ ನೆರೆವರ ರಾಜಕಾರ್ಯ ದೊ
ಳಿಷ್ಟನಿರುತ ವಿಚಾರಪರ ಮೇಧಾವಿಯತಿಚತುರ            ||೪||

ಶ್ರೇಷ್ಠನ್ಯಾಯ ವಿಮರ್ಶಕನು ಪರಿ
ಶಿಷ್ಟ ಜನಮನ ಸೆಳೆವುದರೊಳತಿ
ಕಷ್ಟವೆಣಿಸನು ಸ್ವಾಮಿ ಕಾರ್ಯಧುರೀಣನತಿ ಜಾಣ        ||೫||

ಮಂಗಳವ ವರಮಾತೃಭೂಮಿಗೆ
ಮಂಗಳವ ಮೈಸೂರು ದೇಶಕೆ
ಮಂಗಳವ ಜಯಚಾಮರಾಜಗೆ ರಾಜಮನೆತನಕೆ             ||೬||

ಮಂಗಳವ ಕವಿಕುಲಕೆ ಜಯಜಯ
ಮಂಗಳವ ಈ ಸಭೆಯ ಜನರಿಗೆ
ಮಂಗಳವನು ನಿರಂಜನಗೆ ಗೋವಿಂದ ಕೊಡಲಿ ಸದಾ ||೭||