ಆಧುನಿಕ ಕಾಲಚಕ್ರವು ಯಾವ ಮಹತ್ವದ ಸಮಸ್ಯೆಯಲ್ಲಿ ನಡೆಯುತ್ತಿರುವುದೋ, ಪ್ರಪಂಚವೆಲ್ಲವೂ ಯಾವ ಮಹತ್ಕಾರ್ಯಗೌರವದಕಡೆ ದೃಷ್ಟಿಯನ್ನು ಪಸರಿಸಿ ದಿಟ್ಟಿಸಿ ನೋಡುತ್ತಿರುವುದೋ, ಅಂತಹ ಅಸ್ಪೃಶ್ಯಾಂದೋಲನವು ಆಸೇತು ಹಿಮಾಚಲಪರಿಯಂತರ ಹಿಂದೂ ಸಮಾಜದ ವಿಭಿನ್ನಮತೀಯರೆಲ್ಲರನ್ನೂ, ಅಷ್ಟೇಕೆ ಮಾನವಸಮಾಜವನ್ನೇ ದಂಗುಗೊಳಿಸಿರುವುದು. ಅಜ್ಞಾನದಿಂದ ಮನುಜವರ್ಗದಲ್ಲಿ ಅಸ್ಪೃಶ್ಯತೆಯನ್ನು ಗಂಟುಹಾಕಿ ಕೊಂಡು ಅದೊಂದುಬಗೆಯ ಕಳಂಕವನ್ನು ತಂದಿಟ್ಟುಕೊಂಡು ಅದೇ ಮೂಡನಂಬಿಕೆಯಿಂದ ಅದನ್ನೇ ಆಚರಣೆಯಲ್ಲಿ ತಂದುಕೊಂಡು, ಪಾರಂಪರ್ಯವಾಗಿ ಜಾತಿ! ಜಾತಿ! ಈ ಭೂತವನ್ನು ಹಬ್ಬುಗೊಳಿಸಿಕೊಂಡು ಅಸ್ಪೃಶ್ಯ ಅಸ್ಪೃಶ್ಯ ಈ ಮೌಢ್ಯದಿಂದ ಹಾರಿ ಹಾರಿ ಬೀಳುವ ಕೀಳು ತನವನ್ನು ಉತ್ತಮಜನ್ಮಕ್ಕೆ ಅಂಟಿಸಿಕೊಂಡು, ಅದೊಂದು ಅಪಮಾನಕಾರಕ ಕಳಂಕವನ್ನು ಉತ್ತಮಜನ್ಮಕ್ಕೆ ಅಂಟಿಸಿಕೊಂಡು, ಅದೊಂದು ಅಪಮಾನಕಾರಕ ಕಳಂಕವನ್ನು ನಮ್ಮಲ್ಲಿ ಇಟ್ಟುಕೊಂಡು, ನಡೆಯುತ್ತಿದ್ದ ಕಾಲದಲ್ಲಿ ನಮ್ಮ ಅಜ್ಞಾನಾಂಧಕಾರವನ್ನು ಹೋಗಲಾಡಿಸಲ ವತರಿಸಿರುವ ಮಹಾತ್ಮನ ದಿವ್ಯಭಾಸ್ಕರಪ್ರಭೆಯ ಪಸರಿಸಿ, ಈಗಲೀಗ ಸರ‍್ವ ಜನಾಂಗವೂ ಎಚ್ಚತ್ತುಕೊಂಡು ಅಸ್ಪೃಶ್ಯತೆಯ ತಿರುಳೇನೆಂದು ಅರಸುತ್ತಿರುವುದು.

ವಿಮರ್ಶಕರೂ, ವಿಚಾರಕರ್ತರೂ ಈ ಬಗ್ಗೆ ಲೇಖನಗಳನ್ನೂ ಭಾಷಣಗಳನ್ನೂ, ಕೃತಿಗಳನ್ನೂ, ಪ್ರಚುರಪಡಿಸುತ್ತಿರುವರು. ಇಂಥಾ ಸುಸಂಧಿಯಲ್ಲಿ ಅಸ್ಪೃಶ್ಯ (ಹರಿಜನ) ರಲ್ಲಿಯೇ ಜನ್ಮಿಸಿ ಅವರ ಶೀಲಸ್ವಭಾವಗಳನ್ನರಿತು ನುರಿತ ಶ್ರೀ ಡಿ.ಗೋವಿಂದದಾಸ್ ಎಂಬುವರು ಹಾಸನದ ಡಿಸ್ಟ್ರಿಕ್ಟ್‌ಬೋರ್ಡ್ ಸದಸ್ಯರೂ ಹರಿಜನಪ್ರಚಾರಕರೂ ಆಗಿ ಹೊರಹೊರಟು ಅವನ ಸ್ವಂತ ಅನುಭವಜನ್ಯವಾದ ವಿಷಯಗಳನ್ನು ತಿಳಿಗನ್ನಡದ ಹಾಡಿನ ರೂಪದಲ್ಲಿ ಹರಿಜನಾಭ್ಯುದಯ ಎಂಬ ಹೆಸರಿನಿಂದ ರಚಿಸಿ ಆ ಕೃತಿಗಳ ಹಸ್ತಪ್ರತಿಯನ್ನು ನನ್ನಲ್ಲಿ ಓದಿ ತೋರಿಸಿದರು. ಆ ಕೃತಿಗಳೆಲ್ಲವೂ ಅತ್ಯಂತ ಹೃದಯಂಗಮವೂ, ಕನಿಕರಯುತವೂ ಸರ್ವಸಮ್ಮತವೂ ಆಗಿ ನಿಜವಾಗಿ, ಹರಿಜನಾಭ್ಯುದಯ ಹೇರುತಗಳಾಗಿರು ವುವು. ನಾನು ನನಗೆ ತಿಳಿದ ಮಟ್ಟಿಗೆ ಸವರಣಮಾಡಿ ಅವರ ಕೋರಿಕೆಯ ಮೇರೆಗೆ ನನ್ನ ಅಭಿಪ್ರಾಯವನ್ನು ಈ ಮೂಲಕ ಹೊರಗೆಡಹಿರುತ್ತೇನೆ.

ಹರಿಜನರ ಅಭ್ಯುದಯದಲ್ಲಿ ಯಾವ ಲೀಲಾ ವಿಭೂತಿಯು ಸಬಾನುಭೂತಿಯಿಂದ ಆತ್ಮಯಜ್ಞಮಾಡಲುಜ್ದುಗಿಸಿ, ನಿರಶನವ್ರತ ದೀಕ್ಷಾಬದ್ಧವಾಗಿ ಲೋಕಲೋಕವನ್ನು ತಲ್ಲಣಗೊಳಿಸಿತೋ ಆ ಪರಮ ಅವತಾರ ಮೂರ್ತಿಯ ಲೀಲಾಜಾಲಗಳು ಈ ಕೃತಿಗಳಲ್ಲಿ ಶೋಭಿಸುತ್ತಾ ಅದರೊಂದಿಗೆ, ಹರಿಜನರ ನಡೆನುಡಿಗಳು ಆಚಾರ ವ್ಯವಹಾರಗಳು ವಿಷದೀಕರಿಸಲ್ಪಟ್ಟು ಮಹಾಜನರ ಅವಗಾಹನೆಗೆ ತರಲ್ಪಟ್ಟು ಎಲ್ಲರ ದಯೆಯನ್ನೂ ಯಾಚಿಸಿ, ಸಮಸ್ತ ಮಾನವರನ್ನೂ ಸಮಾನರೆಂದು ತಿಳಿದು ದೇವರು ಸೃಷ್ಟಿಸಿರುವನೆಂದು ಸುವ್ಯಕ್ತವಾಗಿರುವುದು.

ಶ್ರೀ ಡಿ.ಗೋವಿಂದ ದಾಸರು ಈ ಕೃತಿಗಳನ್ನು ರಚಿಸಿ ಹರಿಜನರಿಗೆ ಮಾತ್ರವಲ್ಲ, ಇಡೀ ಮಾನವ ಪ್ರಪಂಚಕ್ಕೇನೇ ಅದರಲ್ಲೂ ಕರ್ಣಾಟಕ ಜನರಿಗೆ ಮಹದುಪಕಾರ ಮಾಡಿರುವರು. ಈ ಕೃತಿಗಳನ್ನು ಸರ್ವರೂ ಅದರದಿಂದ ಪಠಿಸಿ ಅವರ ಉತ್ತರೋತ್ತರ ಸಾರ್ವಜನಿಕ ಕಾರ್ಯಕಲಾಪಗಳಿಗೆ ಉತ್ತೇಜನ ಕೊಡಬೇಕಾಗಿ ಅತಿ ನಮ್ರತೆಯಿಂದ ಪ್ರಾರ್ಥಿಸುವ,

ಹರಿಜನಾಭ್ಯುದಯಕಾಂಕ್ಷಿ
ಬಿ.ಭೀಮರಾಜು
ಕರ್ಣಾಟಕಾಂಧ್ರಕವಿ, ಹರಿಕಥಾ ವಿದ್ವಾನ್
ತಿಪಟೂರು, ಮಾಧ್ಯಮಿಕ ಶಾಲೆ
ತಾ.೧೫.೮.೧೯೩೬