೪೧. ಶ್ರೀ.ಕೆ.ಹನುಮಂತಯ್ಯ*

ವಾರ್ಧಕ ಷಟ್ಪದಿ

ಇಂದು ನಮ್ಮಾದಿಕರ್ಣಾಟಕರ ಸಂಘ ನಲ
ವಿಂದೆ ಕಲ್ಪಿಸಲಿರುವ ವಿದ್ಯಾರ್ಥಿನಿಲಯಕ್ಕೆ
ಚಂದದಿಂ ಶಂಕುಸ್ಥಾಪನೆಯ ತಮ್ಮಮೃತ ಹಸ್ತದಿಂ ಬೆಳೆಸವೇಳ್ಕುಂ
ಎಂದು ನಾವರ್ಧಿಸಲ್ ಸಂಪೂರ್ಣಕಾರುಣ್ಯ
ದಿಂದನುಗ್ರಹಿಸಿ ಪರಿಗಣಿಸದಾಯಾಸವನು
ಬಂದ ಮಾನ್ಯರೆ, ಮುಖ್ಯಸಚಿವ ಹನುಮಂತಯ್ಯನವರೇ ಸುಖಾಗಮನವೇಂ?
ದಲಿತರಲಿ ದೀನರಲಿ ನಿಮಗೆರಕವತಿಶಯವು
ತಿಳಿದಿಹೆವು ನಾವಿದನು ಪೊಸವಗೆಯ ಯೋಜನೆಯ
ನಳವಡಿಸಿ ಮಕ್ಕಳಿಗೆ ವೃತ್ತಿಶಿಕ್ಷಣದೊಡನೆ ವಿದ್ಯೆಯಂ ನೆರೆಕಲಿಸಲು
ಲಲಿತಕಲೆಗಳಿಗೆಲ್ಲ ಸತತ ಪ್ರೋತ್ಸಾಹ
ಗಳನೊದವಿಸುತ್ತೆ ಸಂಸ್ಕೃತಿಯ ಬೆಳಬೆಳಗಿಸಲು
ತಳೆದಿಹಿರಿ ಕಂಕಣವಕ್ಕರದೆ ದೃಢಮನದಿಂದೆ ನಾಡಿನೇಳ್ಗೆಯ ಬಯಸುತೆ
ತೆಗದು ಸಾಮಾನ್ಯರಿಗೆ ದೇಶಸೇವಾಕಾರ್ಯ
ಪಗಳಿರುಳು ನಿಸ್ಸ್ವಾರ್ಥ ಬುದ್ದಿಯಿಂಶ್ರಮಿಸೆಯುಂ
ಜಗವಮೆಚ್ಚಿಪುದಾಜನಾರ್ದನವಿಗುಂ ಸಾಧ್ಯವಲ್ಲೆಂಬ ನುಡಿ ಸತ್ಯವು
ಪೊಗಳಿಕೆಗೆ ತೆಗಳಿಕೆಗೆ ಕಿವಿಗುಡದೆ ತಾಳ್ಮೆಯಿಂ
ಪ್ರಗತಿಯನು ರಾಜ್ಯಶಾಸನದೆ ಸಾಧಿಸುತಿಹಿರಿ
ಸೊಗೆಯಿಸಲಿ ನಿಮ್ಮ ಸಮಯಸ್ಫೂರ್ತಿ ಸಚಿವ ಹನುಮಂತಯ್ಯನವರೆ ಸತತಂ
ಪದಪಿನಿಂದಲಹಿಂಸೆಯೆಂಬ ಬತ್ತಿಯ ಹೊಸೆದು
ಸದಮಲಪ್ರೇಮವೆಂಬಾ ಎಣ್ಣೆಯನು ತಳಿದು
ಚದುರಿಂದೆ ಸತ್ಯವೆಂಬಾ ಜ್ಯೋತಿಯನು ಧರ್ಮದಂಕಿತದ ಹಣತೆಯೊಳಗೆ
ಒದವಿಸುತೆ ಬೆಳಗಿಸಿದ ಗಾಂಧೀಮಹಾತ್ಮನಾ
ಸದಯತೆಯ ನತಿಶಯದೆ ತಿಳಿದಾಚರಿಸುವರಲಿ
ಮೊದಲಿಗರೆ ಮೈಸೂರು ಮುಖ್ಯಸಚಿವರೆ, ತಮಗೆ ತಿಳಿಯದುದು ಪೆರತಿರ್ಕುಮೇ
ನೋಡುವುದು ನಮ್ಮೆಲ್ಲರನು ಕೃಪಾದೃಷ್ಟಿಯಿಂ
ನೀಡುವುದು ಸಮಯೋಚಿತದ ಬುದ್ದಿವಾದವಂ
ಮಾಡುವುದು ಸಹಾಯವನು ನಮ್ಮ ಮಂಡಲಿಯ ವಿದ್ಯಾಭಿವೃದ್ದಿಗೈದೆ
ಬೇಡುವೆವು ನಿಮ್ಮನಾವಿಂದಿನ ಮಹೋತ್ಸವವು
ನಾಡೆ ವಿಜಯಪ್ರದವು ತಾನಾಗಲೆಮ್ಮಯಾ
ನಾಡು ಮಳೆಬೆಳೆಗಳಿಂ ತೊಳತೊಳಗಲಾ ಮಹಾದೇವ ನೆಮ್ಮನು ಸಲಹಲಿ

 

೪೨. ತಂಪಿನ ಭಾರತ*

ಇನ್ನಾವ ದೇಶದೊಳಗಿಹುದಿಷ್ಟು ತಂಪು                                  ||ಪ||
ಪ್ರಕೃತಿಯುತಮಾಗಿರ್ಪ ಘನ ತಂಪು                            ||ಅ-ಪ||

ಮೂರು ದಿಕ್ಕುಗಳೊಳಗಪಾರವಾರಿಧಿ ತಂಪು
ಓರ್ವದಿಕ್ಕೊಳು ಹಿಮದ ಪರ್ವತದ ತಂಪು
ಸಾರಿ ಹರಿಯುವ ಸಿಂಧು ಗಂಗಾ ಜಮುನೆಯ ತಂಪು
ಉರುಬೇಸಿಗೆಯೊಳುದಕ ಸಿಮ್ಲದತಿ ತಂಪು
ಕೊಹಿನೂರು ವಜ್ರದತಿಕಾಂತಿಯುತಾ ಘನ ತಂಪು
ಮಹಿದದಿಕದಿಂ ಮೆರವ ತಾಜಮಹಲಿನ ತಂಪು
ದೇಹಿ ಎಂಬರಿಗೆ ಪಾಲ್ಗೊಡುವ ಭಾರತಿ ತಂಪು
ಮಹಾಮಹಿಮಶೋಕನಾಳ್ವಿಕೆಯ ಘನತಂಪು
ತರುಲತೆಯ ಫಲಬಗೆಯ ವನಗಳತಿಹಿತ ತಂಪು
ಪರಿಮಳವ ಬೀರುತಿಹ ಪುಷ್ಪಗಳ ಸೊಂಪು
ತರತರದ ಪಕ್ಷಿಗಳ ಮಧುರಗಾನದ ಇಂಪು
ಹರಿಜನರ ನೆತ್ತಿಯೊಳಗಾರಿಹುದು ಬೊಂಪು

 

೪೩. ಹರಿಜನ ದೇವಾಲಯ ಪ್ರವೇಶ

(ಅಸೆಂಬ್ಲಿಯ ಮಸೂದೆಗೆ ನೆರವಾಗಲು ರಚಿಸಿದ ಕವನ)

ಮಾದರಿಯ ಮೈಸೂರು ಹರಿಜನರೇಳ್ಗೆಯೊಳು
ಮಾದರಿಯದಾಯ್ತು ಯಾವ ನಾಡಿನೊಳಗಿಲ್ಲ
ಆದರೇಂ ಹರಿಜನರ ದೇಗುಲ ಪ್ರವೇಶದೊಳು
ಮಾದರಿಯ ಮೈಸೂರು ತೋರಲಿಲ್ಲವಲ್ಲ
ಅಯ್ಯಯ್ಯಯ್ಯೋ ಬರೋಡ ಕಾಶ್ಮೀರಯಿಂದೂರುಗಳು
ಶೀಲ ತಿರುವಾಂಕೂರು ಮುಂದಾದುವಲ್ಲ
ನನ್ನ ಮೈಸೂರು ಹಿಂದಾಯಿತಲ್ಲ    ||೧||

ಹಿಂದೆಯೇ ಇಂದಲ್ಲ ಹತ್ತು ಶತಮಾನಗಳ
ಭಕ್ತ ರಾಮಾನುಜ ಸಮಾಜ ಸಂತೈಷಿ
ಶಿಲ್ಪಕಲೆಬೀಡು ಮೇಲ್ಕೋಟೆಗಳ ದೇಗುಲದಿ
ಹರಿಜನ ಪ್ರವೇಶವಂಗೈಸಿ
ಪಿರಿದು ಮಾಡುತೆ ನಮ್ಮ ಭಾರತದೊಳ್
ಚಿರಕೀರ್ತಿಯಾಂತೇಮಗೆ ಬಾಧ್ಯತೆಯಗಳಸಿ
ಹರಿಜನರ ನೈಜ ಗುರುದೇವನೆಂದೆನಿಸಿ             ||೨||

 

೪೪. ಮರುಗಿದ ಹೃದಯ

ರಾಗ-ಪೂರ್ವಕಲ್ಯಾಣಿ
ಆದಿತಾಳ : (ಭಕ್ತವಿದ್ಯಾರಣ್ಯರಿಂದ)

ಶ್ರೇಷ್ಠ ಭಾರತೀಯರೆಮ್ಮ
ಕಷ್ಟ ಕಳೆಯಲೀಸುದಿನಕೆ
ಕಟ್ಟಿಕಂಕಣವನು ಕೈಗೆ
ಕಷ್ಟಪಡುವಿರಾ    ||ಪ||

ಇಂದುಯಮ್ಮ ನೋಡಿ ಹೃದಯ
ನೊಂದಿತೇಂ ನಿಮಗೇ
ನಿಂದು ನಿರ್ಬಂಧಗಳಹರಿಸಾ
ನಂದಪಡುವಿರಾ    ||೧||

ನಾಟ್ಯರಂಗದೊಳಗೆ ಓರ್ವ
ನಟನು ಪಾತ್ರ ನಟಿಸದಿರಲು
ನಾಟಕಂ ಕಳೆಗಟ್ಟುತಿಹುದೆ
ನೋಟಕರಿಗತಿ      ||೨||?

ಇಂದು ನಿಮ್ಮಾ ಹೃದಯದಿಗೋ
ವಿಂದಮರುಕ ಉದಯಿಸಿದನೆ
ಮುಂದೆಯಮ್ಮನಿಂದು ಕಾಯುವ
ಮನವನೀಯಲೀ   ||೩||

 

೪೫. ಮತಭೇದದ ಮೂಲ

(ಎಂತು ಶೋಭಿಪರು ದಂಪತಿಗಳಿವರು)

ಮತಭೇದದ ಮೂಲ
ಯೆಂತುಸೇರಿಪದು | ಇಂಥವರ ಹತ್ತಿರಕೆಂತು ಸೇರಿಪದು               ||ಪ||

ಸಂತಸವು ಮನಕೆಂತು ಬರುವುದು |
ಇಂಥ ನೀತಿಯೋಳ್ ನಡೆಯುತಿರ್ದೊಡೆ
ಹೆಣವ ತಿಂದತಿರಕ್ತಸುರಿಸುತೆ
ಅಣಕದಿಂದಲಿ ಓಡಿ ಬರುತಿಹ
ಶುನಕವನು ಹತ್ತಿರಕೆ ಸೇರಿಪ
ಮನವದಾರಿಗೆ ಅನುವಗೊಳಿಪುದು     ||೧||

ಸತ್ತಗೋಮಾಂಸವನು ಬುಜಿಸುತ
ಹತ್ತಿರಕೆಬಹ ಜನಗಳೆಲ್ಲರ
ಅತ್ತಲಾಗಿಯೆ ಹೋಗಿರೆನ್ನದೆ
ಹತ್ತಿರಕೆ ಸೇರಿಪರೆ ಉತ್ತಮರ್          ||೨||

ಮದ್ಯಕುಡಿಯುತೆ ಬುದ್ದಿಗೆಟ್ಟ
ಅಶುದ್ಧವಾಕ್ಕುಗಳಾಡುತಿರುತಲಿ
ಬಿದ್ದುಬೀದಿಗಳೊಳಗೆ ಹೊರಳುತ
ಲಿದ್ದರತಿಮತಭೇದ ವೆಣಿಸದೆ           ||೩||

ಕೊಳೆಯ ವಸ್ತ್ರಗಳೊಗೆಯದೆಲೆ
ಮೈ ತೊಳೆಯದೆಲೆ ನೆರೆನಾರುತಿರುವೀ
ಕೊಳಕರನು ಹತ್ತಿರಕೆ ಸೇರಿಪಮನಸು
ಮೊಳೆವುದೇಂ ಭೇದವೆಣಿಸದೆ             ||೪||

ನಿಷ್ಠೆಯಿಂದಲಿ ಜಪತಪಂಗಳ
ನುಷ್ಠೆಗೈಯುತಲಿರುವವರು ಈ
ದುಷ್ಟ್ಯತೆಯನೋಡೆಂತು ಸೇರಿಸ
ಲಿಷ್ಟಪಡುವರೆ ಶೀಲಮಾಣದೆ          ||೫||

 

* ಮೈಸೂರು ಸಂಸ್ಥಾನದ ಮುಖ್ಯ ಸಚಿವರಾದ ಮಾನ್ಯ ಶ್ರೀ ಕೆ.ಹನಮಂತಯ್ಯ, ಬಿ.ಎ, ಎಲ್.ಎಲ್.ಬಿ., ಅವರು ನಂಜನಗೂಡು ತಾಲ್ಲೂಕು ಆದಿಕರ್ನಾಟಕ ಸಂಘದ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನ ಮಹೋತ್ಸವವನ್ನು ೧೪-೦೨-೧೯೫೫ನೆಯ ಸೋಮವಾರ ತಮ್ಮ ಅಮೃತ ಹಸ್ತದಿಂದ ನೆರವೇರಿಸಿದ ಸಂದರ್ಭದಲ್ಲಿ ಡಿ.ಗೋವಿಂದದಾಸ್ ಅವರು ಸವಿನಯವಾಗಿ (ಪಠಿತವಾದ) ಪಠಿಸಿದ ‘ಮಂಗಳ ಪದ್ಯಮಾಲಿಕೆ’.

* ಸಾಹಿತ್ಯದ ನನ್ನ ದ್ವಿತೀಯ ಗುರುವರ್ಯರಾದ ದಿ.ಬಿ.ಎಂ.ಶ್ರೀ. ಅವರಿಂದ ಶಹಬಾಸ್ ಗಿರಿ ಪಡೆದ ಕವನ.