೫೧. ಮತಾಂತರವೊಂದೆ ಮಹಾಮಂತ್ರ

ಮತಾಂತರವೊಂದೇ ಮಹಾಮಂತ್ರ         ||ಪ||
ಅಸ್ಪೃಶ್ಯತೆ ಬೇಗಳಿಸುವ ತಂತ್ರ   ||ಅ-ಪ||

ರಾಮಾಯಣ ಮಹಾಭಾರತ ಸವಿಯುಂಡ
ಪರಮ ಪವಿತ್ರದೀ ಭರತಖಂಡ
ಅಸ್ಪೃಶ್ಯರ ಸುಡೋಜಮದಗ್ನಿ ಕುಂಡ            ||೧||

ದೇವೋಲಿ ಮೀನಾಕ್ಷಿಪುರದೇಮಗೊಂಡ
ಭರತಭೂಮಿ ಅಂತ್ಯಜರ ಜನ್ಮಭೂಮಿಯೇನ್?
ಭರತಮಾತೆ ಅಸ್ಪೃಶ್ಯರ ಪೆತ್ತಮಾತೆಯೇನ್?
ನಾಡಿನಾದ್ಯಾಂತ ಅಂತ್ಯಜರ ಕೊಲೆಗಳೇ
ತಡೆವರಾರಿದನುನಿಂದು ಸುತ್ತು ಬಲೆಗಳೇ         ||೨||

ರಾಮಾನುಜಬಸವಗಾಂಧಿ ವಿಫಲರಾದರು
ಮಠಪತಿಗಳು ಬಹಳ ಶ್ರಮಿಸಿ ನೊಂದು ಸೋತರು
ವಿಧಿವಿಧಾನಬದ್ಧರಿಂದಿರಾಜಿ ಸೋತರು, ಇದಕೆ
ಮತಾಂತರವೇ ಮಹಾಮಂತ್ರ ಅಸ್ಪೃಶ್ಯತೆ ಬೇಗಳಿಪ ತಂತ್ರ           ||೩||

 

೫೨. ಮುಂಗೋಳಿ

ನಿನ್ನಾರು ಎಚ್ಚರಿಸಿದವರು ಪೇಳೆಲೆ ಕೋಳಿ
ಇನ್ನು ಜಗವೆಲ್ಲ ನಿದ್ರಿಸುವ ಸಮಯಲಿ
ರೆಕ್ಕೆಯನ್ನು ಬಡಿಯುತೆ ಪುಕ್ಕವನ್ನೊದರುತ್ತೆ
ಕೊಕ್ಕೊಕೋ ಎಂದು ಕೂಗುತೆಚ್ಚರದಿಂ
ಪಕ್ಕಿರಾಣಿಯೊ ನಿನಗದೇನಕ್ಕರವೊ ಕಾಣೆ
ಲೆಕ್ಕಿಸೆ ನಿದ್ರೆಯನು ಘಕ್ಕೆನೀನೇಳೇ
ಮೂಡುವನು ರವಿಯಿಂದು ಬೇಡಿ ನಿದ್ರೆಯು ಎಂದು
ನಾಡ ಜನರೆಲ್ಲರಿಗು ಅರಿವಾಗಲೆಂದು
ಗೂಡೊಳಗೆ ನೀನಿಂದು ಕೊಡೆ ಏಳಿರಿ ಎಂದು
ಸಡಗರದೊಳೇಳಿಸಲು ನಿನಗೇನು ಕುಂದು
ದೂರ ಸಾರುವೆಯಲ್ಲ ದಾರಿಗರು ನೆಲೆಗಳನ್ನು
ಸೇರಿ ಸುಖವಾಗಿ ನೀವೆಂದೆನುತ ನಿಂದು
ಏರುವುದು ಹೊತ್ತು ಹೊರ ಹೊರಡಿರೆಂದತಿ ಭರದಿ
ಸಾರಿ ಕೊಕ್ಕೊಕೋ ಎಂದು ಕೂಗುವೆಯ ಕೋಳಿ
ಅತ್ತೆ ಮನೆ ಸೊಸೆಯರುಗಳತೀ ನಿದ್ರೆಯಾಸಿಸದೆ
ಮಿತ್ರ ನಿದ್ರೆ ಗೈಯ್ಯಲೆಂದತಿ ಭರದಿ ಕೂಡಿ
ಹೊತ್ತು ಮೂಡದ ಮುನ್ನ ಕಸ ತೊಡೆದು ಕೈತೊಳೆದು
ಸುತ್ತ ರಂಗೋಲೆ ಬಿಡಲೆಂದು ಕೂಗವೆಯಾ
ಸಡಗರದಿಯೇಳಿಸಲುನಿನಗೇನಕುಂದು
ಸೃಷ್ಟಿಕರ್ತನ ಮೆರೆದು ನಿತ್ಯಕರ್ಮವ ತೊರೆದು
ಸೃಷ್ಠಿ ಸೌಂದರ್ಯ ದಿಟ್ಟಿಸದೆ ಕಣ್ದೆರೆದು
ಕಷ್ಠ ಸಂಸಾರದೊಳು ಕಂಗೆಟ್ಟು ಬಳಲಿರುವ
ಶ್ರೇಷ್ಠ ಮಾನವರನೆಚ್ಚರಿಸೆ ಕೂಗುವೆಯಾ

 

೫೩. ಸೂರ್ಯೋದಯ

ಬಾಲೆಯೇಳೆ ಬಾಲರವಿಯ
ಲೀಲೆನೋಡು ನೀಂ            ||ಪ||

ಕಾಳಗತ್ತಲೆಯೊಡನೆ ಜ
ಗಳವಾಡುತಿರುವುದು         ||ಅ-ಪ||

ಹುಡುಕಲು ಆಹಾರ
ಗೂಡುತೊರೆದು ಪಕ್ಷಿಗಳ್
ಗಾಢನಿದ್ರೆಮರೆದು ತ್ವರಿತ
ಓಡುತಿರುವಾದಾ ||೧||

ನಾಡನೆಲ್ಲ ನೋಡಲು ನಲಿ
ದಾಡುತದಿನಪ
ಮೂಡರಕ್ತ ಮಾಡಿ ಗಾಢ
ಮೂಡುತಿರುವುದಾ           ||೨||

ಅಂಗಕೆಲ್ಲಧರಿಸುತೆ
ಭಂಗಾರದೊಡವೆಯ
ತೆಂಗುಬಾಳೆತಾಳಗೆರವಿ
ರಂಗುಬಳಿವುದಾ    ||೩||

ನಾಚಿತಾರೆಸೋಲ
ಸೂಚಿಸುತ್ತ ರವಿಗೆ ತಾಂ
ಗೋಚರಿಸದೆಚ್ಚರಿಸದೆಪೇಚಾಡುತಿರ್ಪುದಾ       ||೪||

ಅಗಲಿದನಿಜಸಖನ
ಆಗಮನಕೆ ಕಮಲವೋ
ಮೊಗದ ಮುಸುಕತೆಗೆದು ಒಗೆದು
ನಗುತನಿಲುವುದಾ ||೫||

ಸಾರಮಧುರಗಾನದಿ
ಹೊರಹೊರಸಾರೆಕೂಗುತ
ಸಾರಿ ಕೋಕಿಲೆಗಳು ಹಗಲ
ಕರೆಯುತಿರುವುದಾ            ||೬||

ಉದಯಿಪ ರವಿ ಎದುರು ನವಿಲು
ಕೆದರಿಗರಿಗಳಾ
ಚದುರತನದಿ ಮಣಿದು ಕುಣಿದು
ಮುದವನೀವುದಾ ||೭||

ಅರಳಿಸಿಸುಮ ಪರಿಮಳವನು
ಬೆರಸಿತ್ತದನಿಲನು
ಸರಸದಿ ರವಿಗೆರಚಿ ಒರಸಿ
ಹರುಷಗೊಳಿಪುದಾ            ||೮||

ಬಿತ್ತಿ ಭುವಿಗೆ ಸೂರತಿ
ಮುತ್ತು ಕಳರವಿಪದಾ
ಕೊತ್ತದಂತೆ ವರುಣನರುಣ
ಗಿತ್ತೊ ಕಾಯ್ವುದಾ           ||೯||

 

೫೪. ಚಂದ್ರೋದಯ

ಗೆಳೆಯ ನೋಡು ಕಳೆಯ ಚಂದ್ರ
ಹೊಳೆದು ಉದಿಪುದಾ         ||ಪ||

ಇಳೆಯೆನೆಲ್ಲ ಬೆಳಕುಮಾಡಿ
ಹೊಳಪು ಗೈಪುದಾ            ||ಅ-ಪ||

ಕತ್ತಲೀಗ ಮೆಲ್ಲಮೆಲ್ಲನೆ
ಯೊತ್ತಿಸರಿವುದಾ
ಸುತ್ತಲಿರ್ದ ಕಲ್ಲುಮುಳ್ಗಳ
ಪಥವುಕಾಂಬುದಾ             ||೧||

ಸ್ವಪ್ರಕಾಶಮಿಲ್ಲದೆಲ್ಲ
ನಕ್ಷತ್ರಂಗಳೂ ಪ್ರ
ಕಾಶಪೊಂದಿ ಚಂದ್ರನಂತೆ ಪ್ರ
ಕಾಶವೀವುದಾ      ||೨||

ಶಶಿಯ ಕಳೆಯ
ಮಸಕು ಮಾಡೆ
ಎಸೆವಗಿರಿಗಳೂ
ಶಶಿಯು ಕಾಂತಿಯ ಬೀರುತೇರಲು
ನಸುನಾಚಿರ್ಪುದಾ  ||೩||

ವೇಗಮಾಗಿ ಹರಿಯುತಿರ್ದ
ನದಿನದಂಗಳೆಲ್ಲವೂ
ಸಾಗುತೇರುವ ಶಶಿಯನೋಡಿ
ನಿದಾನಗೈದವೂ    ||೪||

 

೫೫. ಚಂದ್ರೋದಯ ವರ್ಣನೆ

ಚಂದಿರ ಮೂಡುವ ಚಂದ್ರವ ನೋಡುವ          ||ಪ||
ನಂದದಿ ಓಡಿ ಬಾರೆ ತಂಗಿ | ಚಂದವ ನೋಡುಬಾರೆ ತಂಗಿ ||ಅ-ಪ||

ಮಲ್ಲಿಗೆ ಮೊಗ್ಗು ಮೆಲ್ಲಗರಳುತೆ | ಬೆಳ್ಳಗೆ ಕಾಣುವನಲ್ಲೆ ತಂಗಿ
ಬೆಳ್ಳಗೆ ಕಾಣುತೆ ಪರಿಮಳ ಬೀರುತೆ | ಬೆಳ್ದಿಂಗಳಲ್ಲಾನಂದ ತಂಗಿ   ||೧||

ಚೊಕ್ಕವಾಕಾನಕ್ಷತ್ರ ಬೆಳಗುವ | ವಕ್ಕರದಿಂದಲಿ ನೋಡೆ ತಂಗಿ
ಅಕ್ಕರವಾಗಿದೆ ನಲ್ಲನ ನೋಡಲು | ಗಕ್ಕನೆ ಬಂದಾನೇನೆ ತಂಗಿ       ||೨||

ತಂಗಾಳಿ ಬೀಸಲು ತನುವು ತಂಪಾಗಲು | ಹಂಬಲ ಬಲು ಘನವಲ್ಲೆ ತಂಗಿ
ಹಂಬಲು ಬಲುಘನನಲ್ಲನ ನೋಡಾರು | ತಿಂಗಳ ಮೇಲಾಲ್ಲೆ ತಂಗಿ           ||೩||

ತಂದಿದ್ದರೇನೆ ತಾಯಿದ್ದರೇನೆ ಅಣ್ಣತಮ್ಮಂದಿರು ಎಷ್ಟಿದ್ದರೇನೆ
ಅಣ್ಣತಮ್ಮಂದಿರು ಎಷ್ಟು ಜನಿದ್ದರು ಗಂಡನಿದ್ಹಾಂಗೆ ಆದೀತೇನೆ ತಂಗಿ      ||೪||

ಯಾರಿದ್ದರೇನೆ ಗಂಡನಿಲ್ಲದ ಮೇಲೆ ಚಂದ್ರನ ಬೆಳಕು ಕತ್ತಾಲಲ್ಲೆ
ಚಂದ್ರನ ಬೆಳಕು ಕತ್ತಲು ಎಲೆ ತಂಗಿ ಜಗಸೊಗ ಮಲ್ಲಿಗೆ ಮುಗಿಯತಲ್ಲೆ ತಂಗಿ
||೫||