೫೬. ವಸಂತವರ್ಣನೆ

ಓಡಿ ಬನ್ನಿರೀ ವಸಂತರಾಜ ಸಾರುತಿಹನು
ನೋಡ ಬನ್ನಿರಿ     ||ಪ||

ಓಡಿರಿ ಬಿಡಾರವಿಲ್ಲೆ ಮಾಡಿರೆಂದು ಬೇಡಿರೆಲ್ಲ
ಕಾಡುನಾಡನೆಲ್ಲ ತೊರೆತೊರೆದೋಡಿ ಬೇಗ ಓಡಿಹೋಗುತಿಹನು
ಚಂಡಮಾರುತಾನುತಾಪ
ಚಂಡಜಗಜಲಗಾರನುಭೂ
ಮಂಡಲದೊಳಿರ್ಪ ಕಸತೊಡೆ
ಕೊಂಡು ಚೊಕ್ಕಟಗೈಯುತಿಹನು      ||೧||

ಕದ್ದುಸದ್ದುಮಾಡದೆ ಹುದು
ಗಿದ್ದ ಕೋಗಿಲೆಯರಿಂದು
ಎದ್ದು ಬಂದು ರಾಜನೆಡೆ
ಸನ್ಮೋದಸ್ವರ ಸಂಗೀತಗೈವುವು       ||೨||

ಪಕ್ವಪರಿಪಣ್ಣುಂಡು ಪಲವು
ಪಕ್ಕಿವೃಂದ ಪ್ರತಾಪವನ್ನು
ಸೊಕ್ಕಿಹೊಗಳುವ ಭಟ್ಟರೋಲು
ಉಕ್ಕಿಹೊಗಳುವರೀವಸಂತನ            ||೩||

ಹಳೆಯ ಹಳದಿ ಬಣ್ಣವೆಲ್ಲ
ಮುಳಿದು ಹಸಿರು ಸೀರೆ ಧರಿಸಿ
ಗೆಲುವಿನಿಂತರು ನಾರಿಯರೆಲ್ಲ
ವಲಿದುವಸಂತಗೆ ಬಾಗಿನಮಿಪರು       ||೪||

ಮಾತನಾಡಿ ಪ್ರೀತಿಯಿಂದ
ತ್ಯಾತುರದಿನ ಜರೀಯಲು ಸವಿ
ಮಾತು ಗಿಳಿ ಅತಿ ಪ್ರೀತಿಯಿಂ
ರುತು ನಾಥನಂಕಾಯ್ದಿರ್ಪವೀಗ        ||೫||

ಕನ್ನೆವೃಕ್ಷನಾರಿಯರೆಲ್ಲ
ಹಣ್ಣುಮಿಡಿಪೂಮಾಲೆಪಿಡಿದು
ಚನ್ನನೀವಸಂತ ನೀಗೆ
ಮನ್ನಣೆಯ ಮಾಡುತಿಹರು             ||೬||

ಹೀರಿಪೂಮಧೂಸೂರೆಗೈದ
ಪಾರದುಂಬಿ ಕೊಂಬು ತಮಟೆ
ಭೇರಿಬಾರಿಸುತ್ತ ದೊರೆಗೆ
ಸರದಾರಿತೋರುತಿಹುದು    ||೭||

ದೀವಟಿಗೆ ವೆತ್ತೆಲ್ಲಕರದಿಂ
ಮಾವರಳಿತರುನಾರಿಯರೆಲ್ಲ
ದೇವರಾಜಬರ್ಪನೆಂದು
ಕಾಯ್ವುತೆಲ್ಲ ನಿಂದಿರುವರು           ||೮||

ದೇವಲೋಕದಿಂವಸಂತ
ಭೂಮಿಗಿಳಿವನೆಂದು ಪಿಕಗ
ಳಾವಭಾವದಿಂದ ನೃತ್ಯ
ಗೈವರೀಗ ನೋಡಬನ್ನಿ      ||೯||

 

೫೭. ಬೀಸುಬಲೆ

ಮತ್ಸ್ಯಗಳಿರಬಲುಯಚ್ಚರದಿಂದಿರಿ
ಬೆಸ್ತನು ಬರುವನು ಪಿಡಿಯೆ
ಮಸ್ತಕಮರೆಸಿಕೊಂಡಿರೆ ನಿಮಗೀವಿಧ
ದುಸ್ತರ ಮುಂದೆಯೊದಗದು            ||೧||

ಎಸೆಯುವ ತಿನ್ನಲು ತಿಂಡಿಗಳನು ಕೂಡೆ
ಬೀಸುವ ಮೋಸದಿ ಬಲೆಯ
ಆಸೆಯಿಂದಲಿ ನಿಜವಾಸವ ತೊರೆದರೆ
ಲೇಸುದಪ್ಪುವಿರಿಗೆಳೆಯರಾ       
||೨||

ದಾಳೆಯಮೀಂಗಳು ಬೆದರಿಪವೆನ್ನುತೆ
ತಾಳದೆ ಕಷ್ಟತವಕದಿಂ
ಜಾಲವನರಿಯದೆ ಲೀಲೆಯಿಂ ಪೋದರೆ
ಕಾಲನಾಲಯದಿ ಬಾಳುವಿರೀ            ||೩||

ಹಿರಿದಾದ ಮೀನುಗಳರಿದಿರುತಿಹವಿದ
ಜರಿಯದೆ ಬಲೆಯನ್ನು ಹರಿದು
ಸೆರೆಯಿಂದ ಬಿಡಿಸುದುರಿತವಹರಿಸುತೆ
ಪೊರೆವುವು ತ್ವರಿತದಿ ನಿಮ್ಮಾ           ||೪||

 

೫೮. ತಂಗಿನಾನೇನೆಂದನೆ

ತಂಗಿ ನಾನೇನಂದೆನೆ | ತಂಗ್ಯಮ್ಮ ನಿನ್ನ ನಾನೇನಂದನೆ      ||ಪ||
ಒಂದಿನ ನಿನ್ನ ನಾನೊಂದು ಮಾತಾಡಿಲ್ಲ         ||ಅ-ಪ||

ಅತ್ತಿಗೆ ನಾದುನಿ ಅತಿಯಾಗಿ ಪ್ರೀತಿ
ಮಾಡುತ್ತಿರಲಿಲ್ಲವೆ ಹೆತ್ತವರಂದದಿ
ಊರು ಓರಿಗೆಗಾತಿಯೊಡನಾಟವನುಬಿಟ್ಟು
ತೇರು ಹಬ್ಬವಬಿಟ್ಟು ದೂರ ಹೋಗುವೆಯಲ್ಲೆ           ||೧||

ಹುಟ್ಟಿದ ಮನೆಬಿಟ್ಟು ಕರೆಯುವ ಹಸುಬಿಟ್ಟು
ಅಳುವ ತಮ್ಮಯ್ಯನ ಕೈಲಿ ಹಣ್ಣನು ಕೊಟ್ಟು
ಒಡಹುಟ್ಟಿ ಒಡನಾಡಿ ಒಡನೆ ಊಟಮಾಡಿ
ಸಡಗರದಿಂದ ಗಂಡನೊಡನೆ ಓಡುವೆಯಲ್ಲೆ        
||೨||

 

೫೯. ಗವಿರಂಗಪ್ಪನ ಜಾತ್ರೆ

ಗವಿಯ ರಂಗಪ್ಪನ ಜಾತ್ರೆಗೆ ಹೋಗಿ ನೋಡಿ
ವರವ ಬಾಗಿ ಬೇಡಿ
ಕರುಣದಿಂದ ಕಾಯುವ ದೇವಗೆ ಹರಕೆ ಮಾಡಿ
ದೇವಗೆ ಹರಕೆ ಮಾಡಿ         ||ಪ||

ಸಂಕರಾತ್ರಿ ಹಬ್ಬದಲ್ಲಿ ಅಲ್ಲಿ ಜಾತ್ರೆ
ನಾಡಕಿಂಕರರು ಸಂತಸದಿ ಕೂಡೊಯಾತ್ರೆ
ಆಗ ಬಿಂಕದಿಂದ ಗೋವುಗಳ ಸಿಂಗಾರ ಕೀರ್ತಿ      ||೧||

ಬುತ್ತಿ ಅಳಿದು ತುತ್ತನುಣ್ಣುವ ಚಂದನೋಡಿ
ಗವಿ ಸುತ್ತಮುತ್ತಾ ಸುತ್ತುವ ಗೋವುಗಳಂದ ನೋಡಿ
ಆಗ ಹಾಲನುಣ್ಣುವ ಬಾಲಗೋವುಗಳಂಬ ನೋಡಿ        ||೨||

ಕೊಂಬು ತಮಟೆ ಮೋರಿ ಬೇರೆ ನಾದವೇನು
ಗೋವಿಗಂದ ಚಂದರಂಗು ಮೈಗೆ ಬಳಿವುದೇನು
ಹೂವ್ವು ಮಾಲೆಯಿಂದ ಗೋವುಗಳ ಸಿಂಗಾರವೇನು        ||೩||

ಹಣ್ಣುಕಾಯಿ ಸೂರೆ ಮೇರೆ ಬಿಡುವುದಂದ
ಅಲ್ಲಿ ಕರ್ಪೂರ ಉರಿಯುವುದ ನೋಡಚಂದ
ಅಲ್ಲಿ ಗೋವಿಂದ ಎಂಬ ದಾಸರ ಕೂಗು ಚಂದ ||೪||

ಚಿನ್ನಬೆಳ್ಳಿ ಹೊನ್ನು ನಾಮಗಂಧವೇನು
ಚಿಣ್ಣರು ಹಣ್ಣುಕಾಯಿ ಮಾಗಲು ನುಗ್ಗುವುದೇನು
ಅಲ್ಲಿ ಮುಗಿಲುಮುಟ್ಟದೂಳು ಕಣ್ಣಿಗೆ ಕಾಣದೇನು      ||೫||

ಮಜ್ಜಿಗೆ ಪಾನಕದರವಟ್ಟಿಗೇನು
ತಣ್ಣ ಬಟ್ಟೆನುಟ್ಟು ಹಲ್ಲು ಉಯ್ಯುವ ಭಕ್ತರೇನು
ಸಣ್ಣ ಹಾಲುಗೂಸು ತೊಟ್ಟಿಲೊತ್ತ ತಾಯಿರೇನು          ||೬||

ಗೊಲ್ಲಗೌಡ ಗೋವಕಾದ ಜಾಗವೇನು
ಹುಲ್ಲುಮೇಯುತ್ತಿದ್ದ ಗೋವಹೊಡೆದರಣ್ಯವೇನು
ಗೋವು ನಿಲ್ಲುತ್ತಿದ್ದ ದೊಡ್ಡಿಯಲ್ಲಿದ್ದಿತೇನು            ||೭||

ಪುಣ್ಯಕೋಟಿ ಬಂದು ನಿಂದ ಜಾಗವೇನು
ಅಣ್ಣ ಹೆಬ್ಬುಲಿದ್ದವಾಸಗವಿದೇನು
ಅಲ್ಲಿ ಚೆನ್ನಕೃಷ್ಣಸ್ವಾಮಿ ಹುಲಿಯಕೊಂದನೇನು         ||೮||

 

೬೦. ಮೈಸೂರು ಸರ್ಕಾರದ ಘನತೆ (ಲಾವಣಿ ಮಟ್ಟು)

ಘನವನು ಪೊಂದಿಹ ಶ್ರೀಮಾನ್ ಕೃಷ್ಣನ
ಘನತೆಯ ಮೈಸೂರ್ ಸರ್ಕಾರಯಮ್ಮ
ತನುವಿಗೆ ಜೀವದ ಕಳೆಯನುಗಟ್ಟಿಸಿ
ಮನುಜರೆಂದೆನಿಸಿದ ಸರ್ಕಾರ             ||೧||

ಅಂಧರಂತ್ಯಜನ ಕನುವಿಂದಲಿಕಣ್ಣುಗ
ಳಿಂದಿತ್ತೀ ಸರ್ಕಾರ
ಬಂಧನ ಹರಿಸಂದೊಲವಿಂದೆಮಗಾ
ನಂದವಬೀರಿದ ಸರ್ಕಾರ       ||೨||

ಆದಿಯಿಂದಲಿಹ ಭೇದಗಳನು ಬಲು
ಮೋದದಿ ತೊಡೆದ ಸರ್ಕಾರ
ಯಾದವಕುಲ ಪ್ರದೀಪನು ಆಳುವ
ಮಾದರಿ ಮೈಸೂರು ಸರ್ಕಾರ           ||೩||

ಲೆಕ್ಕಿಸದೆಮ್ಮಯ ಮಕ್ಕಳ ವಿದ್ಯಕೆ
ಲಕ್ಕಧನವನಿತ್ತ ಸರ್ಕಾರ
ಈ ಕ್ಷಿತಿಯಲಿ ಧರ್ಮಾಳ್ವಿಕೆಯೆಂಬುತೆ
ಲೆಕ್ಕಕೆ ಸೇರಿದ ಸರ್ಕಾರ        ||೪||

ಧೀನೋದ್ಧಾರಕೆ ಬದ್ದಗಂಕಣವ
ಪಾಣಿಗೆ ಬಿಗಿದಿಹ ಸರ್ಕಾರ
ದಾನಮಾಡಿ ಭೂಮಿಗಳನು ನಮ
ಗನ್ನದಾನವಮಾಡಿದ ಸರ್ಕಾರ          ||೫||

ಸತ್ಯಸಂದ ಹರಿಭಕ್ತನುತಾಂ ನೆರೆ
ಸತ್ಯದಿಂದಾಳುವ ಸರ್ಕಾರ
ಸುತ್ತಣ ದೇಶದಿ ಪ್ರಖ್ಯಾತಿಯ ಪಡೆ
ದುತ್ತಮ ಮೈಸೂರು ಸರ್ಕಾರ          ||೬||

ಧರೆಯೊಳು ನರವರ ದೊರೆ ಕೃಷ್ಣೇಂದ್ರನು
ಮೆರೆಯುತೆ ಬಾಳಲಿ ಬಹಳದಿನ
ಹರಿಗೋವಿಂದನು ಕರುಣದಿಂದೀಯಲಿ
ರಾಜಿಸಿರಾಜ್ಯವನಾಳ್ವವರ   ||೭||