೬೬. ಹಳೆಯಬೀಡು ದೇವಾಲಯ

ನೋಡು ಕಲೆಯನಾಡು ಹಳೆಯ
ಬೀಡಿಗಿಳೆಯೊಳೀಡಿರುವುದೆ   ||ಪ||

ನೋಡಿರೀನಲಿದಾಡಿರೀ ಕಲೆ
ರೂಢಿಯೊಳಗತಿ ಜಾಣ್ಮೆತನವ          ||ಅ-ಪ||

ಪುಟ್ಟದಹ ಕೈದಾಳದಲ್ಲಿ
ಪುಟ್ಟಿದರುಡಕಜಕಣ ಚಾರ್ಯರ್
ಸೃಷ್ಟಿಸೀದೇಗುಲಗಳನ್ನು
ದಿಟ್ಟರೆನಿಸಿ ಮೆರೆದರವರು   ||೧||

ರಾಯಬಲ್ಲಾಳೆಂಬ ಭಕ್ತಂ
ದಾಯಗೈಸೀ ದೇಗುಲಗಳ
ಮಾಯಮಾಡೀಧರೆಗೆ ಎರೆದು
ಸಾಯುಜ್ಯವ ಸೇರಿರ್ಪನವನು           ||೨||

ಕೆಳಗೆ ಕರಿಕೇಸರಿಲತೆಯ ಹಯ
ದಾಳಿಲತೆ ಪೌರಾಣುಕದ ಕಥೆ
ಮೇಲೆನೆಗಳಾಳಿಗಳು ಹಂಸ
ಸಾಲುಮೇಲ್ ಸ್ತ್ರೀಪುರುಷ ಭೇದ      ||೩||

ಭಾಗವತ ಭಾರತರಾಮಾಯಣ
ಆಗಮದ ಚಾರಿತ್ರೆಗಳನು
ಬಗೆಸೊಗಸುಬೊಂಬೆಯೊಳುರಚಿಸೀ
ಜಗಕೆ ಬೆಡಗನ್ನಿತ್ತಿರುವರು   ||೪||

ನವರಸಾಲಂಕೃತಬೊಂಬೆ
ಕಡೆದಿಹರು ಬಲು ಸೊಗಸುಕಂಬ
ಭಾವಿಪೆನು ಬೇರಕ್ಷಿಯಿಂದೆ    ||೫||

ಮೂಡಣದ ಬಾಗಿಲುಗಳೆದುರು
ನೋಡೆರಡು ಮಂಟಪದ ಕೆಳಗೆ
ಜೋಡಿಲಿಹ ವೃಷಭಂಗಳನ್ನು
ಮಾಡಿಹರು ಶಿವಲಿಂಗದೆದುರು         ||೬||

ಶಿಲೆಯ ಹೊಯ್‌ಸಳೇಶಲಿಂಗದುವೆ
ನೆಲಸಿಹುದು ಎರಡಾಲಯದೊಳು
ಇಳೆಗಿವರಕಳುಹೆಂದು ಮರಳಿ
ಗಳಗರಳನನಂಭ ಜಿಪತೆರಳಿ   ||೭||

ಶಿಲ್ಪಚಿತ್ರಾಕೃತಿಯ ಭಾವ
ಕಲ್ಪನೆಯೊಳಿಳಿಸಿರುವುದರಿಯೆ
ಅಲ್ಪಪ್ರಾಜ್ಞಂಗರಿಯದೀಜಗ
ಶಿಲ್ಪಿಯೊರ್ವಂಗಲ್ಲದೆಯೆ   ||೮||

 

೬೭. ಅಪವಿತ್ರ ಮಂತ್ರಾಲಯ

ಗುರುರಾಜ ಮಂತ್ರಾಲಯ ಕಳ್ಳಪೂರಿಗಳ ಕುತಂತ್ರಾಲಯ
ಹರಿಜನ ಪ್ರವೇಶಕೆ ಆತಂಕಪಡಿಸುವ ಮಂತ್ರಾಲಯ
ರಾಘವೇಂದ್ರ ಗುರುರಾಜ ಮಠವ ಅಪವಿತ್ರ ಗೈವ
ಕಳ್ಳಪೂಜಾರಿಗಳ ಕುತಂತ್ರಾಲಯ      ||೧||

ಅಸ್ಪೃಶ್ಯತೆ ಅಳಿಸೆ ಬಹಳ ಬಳಲಿದೆ ಗುರುವರ
ಹೊಟ್ಟೆಹೊರಕ ಪೂಜಾರಿಗಳು ಏನು ಗೈದರು ಪೂಜೆ
ದೈವಧ್ಯಾನ ಮಾಡೆ ಮಂತ್ರಾಲಯಮಲ್ಲ
ಹರಿಜನ ಪ್ರವೇಶಕೆ ಕುತಂತ್ರ ಹುಡುಕೊ ಚಿಂತೆಯಾಲಯ    
||೨||

 

೬೮. ಶಿಸ್ತು ಕಲಿತುಕೊ ಮಗುವೆ

ಶಿಸ್ತು ಕಲಿತಕೊ ಮಗುವೆ ಹೊತ್ತನರಿತುಕೊ ನಗುವೆ         ||ಪ||
ಶಿಸ್ತು ಕಲಿಯೆ ಸ್ವರ್ಗ ಅತ್ತಲೈತೆ ಒತ್ತಿಲೈತೆ      ||ಅ-ಪ||

ಬಾಲ್ಯದಿಂದ ಕಲಿಯಲಿದನು ಬಾಳು ಸುಖವಹುದೆಂದು ತಿಳಿ ನೀಂ
ಕಾಲ ವ್ಯರ್ಥ ಗೈಯ್ಯುವವನ ಬಾಳುಗೋಳು ಜಗವೇ ಹಾಳು         ||೧||

ಖ್ಯಾತಿವಂತರೆಲ್ಲ ಜಗದೆ ಅಂತೆಗೈದು ಸೊಗವನಾಂತು
ಸಂತಸದಿಂ ಬಾಳಿಬದುಕಿ ಆಂತರು ಚಿರಕೀರ್ತಿ ಧರೆಯೋಳ್             ||೨||

 

೬೯. ಆಲದಹಳ್ಳಿ ಹರಿಜನ ಕಾಲೋನಿ ಮಂಜೂರಾತಿಗಾಗಿ

ಫಲವತ್ ಭೂಮಿಯು ಜಲಸಮೃದ್ದಿಯು
ಬಲು ಸಹಕಾರಿಗಳ್ ಗ್ರಾಮನಿರ್ಮಾಣಕೆ           ||೧||

ಹತ್ತಿರವೆ ತೊರೆ ಒತ್ತಿಯೋಳ್ ರಸ್ತೆಯು
ಉತ್ತಮ ನೂತನ ಗ್ರಾಮ ನಿರ್ಮಾಣಕೆ             ||೨||

ಇಂದ್ರಗಿರಿಯ ಮೇಲ್ ಸುಂದರ ಗೋಮಟ
ಸಂದರುಶನಮಿಗೆ ಹಗಲಿರುಳೆಮಗೆ      ||೩||

ನಾ ಕಂಡ ಕನಸು ಇಂದು ನನಸಾಯಿತು
ಪರಮಾತ್ಮನಿಗೆ ಮನಸಾಯಿತು         ||೪||

 

೭೦. ಉರಿಮಾರಿಯರ ಪೂಜೆಬ್ಯಾಡಿ

ಉರಿಮಾರಿಯರ ಪೂಜೆಬ್ಯಾಡಿ
ಹರಕೆಯ ಕುರಿಕೋಣಗಳ ಬಲಿಬೇಡಿ
ಆ ಪರಮಾತ್ಮನನು ಪೂಜೆ ಮಾಡಿ
ಏಕ ದೇವರ ಪೂಜೆ ಮಾಡಿ
ಮಿಕ್ಕ ಕಾಡುದೇವರ ಪೂಜೆ ಬೇಡಿ
ಇದ ಮನದೊಳಾಲೋಚಿಸಿ ನೋಡಿ
ದಾಸಜನರ ಸಂಗಕೂಡಿ
ಗೋವಿಂದಾಸ ಜನರ ಸಂಗಕೂಡಿ
ಆ ಕೇಶವನೊಲುಮೆ ಕೊಂಡಾಡಿ