೭೧. ಶನಿವಾರದ ನಿಷ್ಠೆ

ದಮ್ಮನಿಂಗಳ ಹರಿಜನರು
ಎಲ್ಲ ದಾಸರ ಮನೆತನದವರು
ಮಾಸಿದ ಸೀರೆಯನೊಗೆಯದೆ ಹರಿದಿನ
ಮೀಸಲಡಿಗೆಯಿಡುವರು

 

೭೨. ಮೊಸಳೆ ಸೇರಿಹುದಂತೆ ಮಡುವಿನೊಳು

ಮೊಸಲೆ ಸೇರಿಹುದಂತೆ ಮಡುವಿನೊಳು
ಗೊರೂರು ಹೊಳೆಯೊಳು
ಹಿಡಿಯೆ ಹೋದರೆ ಜಡಿದು ಬಲೆಯನು
ಹೊಡಿಕಿ ಹೋಗುವುದಂತೆ ಮಡುವಿಗೆ

 

೭೩. ನಿನಗಳುವರೊಬ್ಬರಿಲ್ಲ

ಹೆಣ್ಣಿಗಾಗಿ ಅಳುವರೊ
ಮಣ್ಣಿಗಾಗಿ ಅಳುವರೊ
ಹೊನ್ನಿಗಾಗಿ ಅಳುವರೆಲ್ಲ
ಜಗದ ಜನರೆಲ್ಲಾ ಹರಿ
ನಿನಗಳುವರೊಬ್ಬರಿಲ್ಲ

 

೭೪. ಬಿಂದಿಗೆ ಜಾತ್ರೆ

ಬಂದು ನಿಂದು ನೋಡಿ ಮುಕುಂದೂರು ಬಿಂದಿಗೆಯ
ಮುಂದೆ ಜೋಡಿ ನಂದಿ ಜೋಡಿ ಸಂದಣಿಯ ಕೂಡಿ
ಚಂದವ ನೋಡುವಯಲ್ಲ ಮುಂದೆ ಮುಂದೆ ಓಡಿ

 

೭೫. ಚಿಂತೆಬಂದೊಡನೆ

ಚಿಂತೆಬಂದೊಡನೆ ಶ್ರೀಕಾಂತನ ನೆನೆಯೆ ಮನವೆ
ಚಿಂತೆಯಳಿದು ಮನಶಾಂತಿಯ ತಳೆಯೆ
ಅಂತರಂಗದಿ ಭಕ್ತಿ-ಭಾವವು ಬೆಳೆಯೆ
ಸಂತಸ ಪಡಿಪುದು ಸಂತತ ಮನವ ತನುವ

 

೭೬. ಮುಹೂರ್ತ ಮಂಗಳಗೀತ

ಜಯಮಂಗಳಂ ನಿತ್ಯ ಶುಭಮಂಗಳಂ ||ಪ||

ಮಂಗಳಮದುಮಗನಿಗೆ ಮಂಗಳ ಮಗಳಿಗೆ
ಮಂಗಳವಾಗಲಿ ನೆರೆದಿರುವ ಸಭೆಗೆ     ||೧||

ಹಿತದಿಂದ ಬಾಳಲಿ ಸುತರನ್ನು ಪಡೆಯಲಿ
ಮತಿವಂತರಾಗಿನ್ನು ಬದುಕಲಿ ಧರೆಯೊಳು       ||೨||

ಮಂಗಳ ಮಾದವನಿಗೆ ಮಂಗಳ ಬೂದವಗೆ
ಮಂಗಳವಾಗಲಿ ಗೋವಿಂದಹರಿಗೆ      ||೩||