ನಾನು ಬೆಂಗಳೂರು ನರಸಿಂಹರಾಜ ಹಾಸ್ಟಲ್‌ನಲ್ಲಿದ್ದಾಗ ಗೋಡೆಯ ಮೇಲೆ ನನ್ನ ಜೀವನ ಚರಿತ್ರೆಯನ್ನು ನಾನೇ ಬರೆಯುತ್ತೇನೆಂದೂ ಮತ್ತು ನಾನು ಎಂದೂ ಸರ್ಕಾರಿ ಸೇವೆಗೆ ಸೇರುವುದಿಲ್ಲವೆಂದು ಬರೆಯುತ್ತಿದ್ದೆನು. ಸರ್ಕಾರಿ ಕೆಲಸಕ್ಕೆ ನಾನು ಸೇರಲೇ ಇಲ್ಲ. ಆದರೆ ನನ್ನ ಜೀವಮಾನ ಚರಿತ್ರೆಯನ್ನು ನಾನೇ ಬರೆಯುವನೆಂಬುದನ್ನು ಮಾತ್ರ ಮರೆತಿದ್ದೆ. ನಾನೇ ಬರೆಯಲು ಅಷ್ಟು ಆತುರನಾಗಿರಲಿಲ್ಲ. ಆದರೆ ೧೯೩೯ನೆ ಇಸವಿ ಕೊನೆಯಲ್ಲಿ, ಆಗ ಮೈಸೂರು ರೈಲ್ವೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದ ನನ್ನ ಪ್ರೇಮ ಮಿತ್ರ ಮ. ಆದಿನಾರಾಯಣಯ್ಯನವರು ಒಂದು ದಿನ ಹಾಸನಕ್ಕೆ ಬಂದು, ಸಂತೋಷದಿಂದ ಮಾತನಾಡುತ್ತಾ ಕುಳಿತಿರುವಾಗ ನನ್ನ ಮುಖವನ್ನು ಒಂದು ಬಾರಿ ಚೆನ್ನಾಗಿ ದಿಟ್ಟಿಸಿ ನೋಡಿ, ನನ್ನ ಕೈ ಹಿಡಿದು ‘ದಾಸರೆ, ನಿಮ್ಮ ಜೀವನ ಚರಿತ್ರೆಯನ್ನು ನೀವೇ ಬರೆಯಬೇಕೆಂದು ಮತ್ತು ಅದನ್ನು ನಾನು ನೋಡಬೇಕೆಂದೂ ಖಂಡಿತವಾಗಿ ಅಪ್ಪಣೆ ಮಾಡಿದರು.’ ನಾನು ಸಂತೋಷದಿಂದ ಒಪ್ಪಿ ನಿಮ್ಮ ಬಯಕೆಯನ್ನು ನೆರವೇರುಸುತ್ತೇನೆಂದು ಒಪ್ಪಿ ೦೧-೦೧-೧೯೪೦ರಲ್ಲೆ ಪ್ರಾರಂಭಿಸಿ ನಾಲ್ಕು ಪಂಕ್ತಿಗಳನ್ನು ಮಾತ್ರ ಬರೆದು ಅನೇಕ ಕಾರ್ಯಭಾರಗಳಿಂದ ಅಷ್ಟಕ್ಕೆ ನಿಲ್ಲಿಸಿದ್ದೆನು. ತಾರೀಖು ೧೩-೦೬-೧೯೪೪ರಲ್ಲಿ ಪುನಃ ಬರೆಯಲು ಪ್ರಾರಂಭಿಸಿ ಇದುತನಕವಿದ್ದ ಎಲ್ಲವನ್ನು ಬರೆದು ಪೂರ್ತಿಮಾಡಿದೆನು. ಹೀಗೆ ನನ್ನ ಜೀವನ ಚರಿತ್ರೆಯನ್ನು ಬರೆಯಬೇಕೆಂದಿದ್ದ ಮಸಕಾದ ಅಭಿಪ್ರಾಯಕ್ಕೆ ಮೆರಗುಕೊಟ್ಟು ಪ್ರೋತ್ಸಾಹಿಸಿದ ನನ್ನ ಪ್ರೇಮ ಮಿತ್ರರಾದ ಮ. ಆದಿನಾರಾಯಣಯ್ಯನವರಿಗೆ ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸುತ್ತೇನೆ ಮತ್ತು ಚಿರಋಣಿ.

೧. ಜನನ

ಮೈಸೂರು ದೇಶದ ಹಾಸನ ಜಿಲ್ಲೆಯಲ್ಲಿ ಚರಿತ್ರ ಪ್ರಸಿದ್ಧವಾದ, ಭರತ ಖಂಡದಲ್ಲಿ ಪ್ರಸಿದ್ಧ ಜೈನರ ಯಾತ್ರಾ ಸ್ಥಳವಾದ, ಶಿಲ್ಪಕಲಾ ಕೌಶಲ್ಯತೆಯಿಂದ ಶೋಭಿಸುವ ಶ್ರವಣಬೆಳಗೊಳದ ದಕ್ಷಿಣ ದಿಕ್ಕಿನಲ್ಲಿ ಸುಮಾರು ಮೂರು ಮೈಲು ದೂರದಲ್ಲಿ ಉತ್ತರ ಮತ್ತು ಪಶ್ಚಿಮದಲ್ಲಿ ಸದಾ ಹರಿಯುತ್ತಿರುವ ತೊರೆಯಿಂದಲೂ(ಹೆಬ್ಬಳ್ಳ, ಸುತ್ತಮುತ್ತಲೂ ತೆಂಗು, ಬಾಳೆ, ಅಡಿಕೆ, ಹಸನಾದ ಹಲಸು, ಮಾವು, ನೇರಳೆಯ ಮರಗಳಿಂದ ಕೂಡಿದ ವನಗಳಿಂದಲೂ, ಪೂರ್ವ ದಿಕ್ಕಿನಲ್ಲಿ ಬಸವೇಶ್ವರ, ಪಶ್ಚಿಮದಲ್ಲಿ ಲಕ್ಷ್ಮೀದೇವಿ, ಉತ್ತರದಲ್ಲಿ ಅಮೃತ ಲಿಂಗೇಶ್ವರ, ದಕ್ಷಿಣದಲ್ಲಿ ಹರಿಹರ ದೇವಿಯ ದೇವಸ್ಥಾನಗಳ ಮಧ್ಯೆ ಎತ್ತರವಾದ ಪ್ರದೇಶದಲ್ಲಿ ಒಂದು ಸಾವಿರ ಜನಸಂಖ್ಯೆಯಿಂದ ಕೂಡಿ ಶೋಭಿಸುತ್ತಿರುವ, ದೊಡ್ಡದಾದ ದಮ್ಮನಿಂಗಳವೆಂಬ ಹಳ್ಳಿಯೇ ನನ್ನ ಜನ್ಮ ಸ್ಥಾನ. ಅಂತ್ಯಜ ಗೋತ್ರದ ದೊಡ್ಡ ಲಕ್ಷ್ಮಪ್ಪನವರ ಜೇಷ್ಠ ಕುಮಾರ ದಾಸಪ್ಪ ಎಂಬುವರೆ ನನಗೆ ಜನ್ಮವಿತ್ತವರು. ಇವರು ಮದ್ಯಸ್ಥಗಾರಿಕೆಯ ದೊಡ್ಡ ಕುಟುಂಬದಲ್ಲಿ ಜನ್ಮವಿತ್ತಿದ ಸಾಮಾನ್ಯ ವ್ಯಕ್ತಿ. ಚರ್ಮದ ವ್ಯಾಪಾರಿಗಳು, ಬಹಳ ಕುಡುಕರು. ಆದರೂ ದೈವಭಕ್ತರು. ಉದಾರ ಭಾವ, ದಯಾಳು. ಹಿಂದೆ ಹೋದವರಿಗೆ ವಸ್ತ್ರ, ದುಡ್ಡು ದಾನ ಕೊಡುವುದು, ಬಡವರ ಬಡತನ ನೋಡಿ ಮನಮರುಗಿ ಅವರಿಗೆ ಸಹಾಯ ಮಾಡುವುದು ಹೀಗಿದ್ದರು. ಒಂದು ದಿನ ಕೃಷ್ಣರಾಜಪೇಟೆಗೆ ಹೋಗಿ ಆಳುಗಳಿಂದ ಚರ್ಮ ತೆಗೆಸಿಕೊಂಡು ಮಂಡಿಗೆ ಹಾಕಿ ಆಳುಗಳನ್ನು ಹಿಂದಕ್ಕೆ ಕಳುಹಿಸಿ ಚೆನ್ನಾಗಿ ಕುಡಿದು ಸಾರಾಯಿ ಶೀಶೆಯೊಂದನ್ನು ಜೇಬಿನಲ್ಲಿಟ್ಟುಕೊಂಡು ಹೊರಟು, ಕತ್ತಲಾಗಲು ದಾರಿ ತಪ್ಪಿ ಕನ್ನೇಶ್ವರ ಗುಡ್ಡವನ್ನು ಬಹಳ ಬಳಸಿ ಕಡೆಗೆ ಅಲ್ಲಿಗೆ ಸ್ವಲ್ಪ ದೂರದಲ್ಲಿ ಕಲ್ಲು, ಬಂಡೆಗಳ ನಡುವೆ ಬೆಳಕು, ಬೆಂಕಿ ಕಾಣುತ್ತಿರಲು ಅದು ಕುರಿಯ ಮಂದೆ ಎಂದು ಹತ್ತಿರಕ್ಕೆ ಹೋಗಿ ನೋಡಲು, ಅದು ಕಳ್ಳಗೊರಮರ ಗುಂಪಾಗಿತ್ತು. ಅವರು ಕದ್ದು ಎರಡು ಹೋತವನ್ನು ತಂದು, ಸೇಂದಿ ಹರವಿಗಳನ್ನು ತಂದು ಮಾಂಸ ಬೇಯಿಸಿ ಕುಡಿದು ತಿನ್ನುತ್ತಿದ್ದರು. ಗೊತ್ತಿಲ್ಲದೆ ಇವರು ಅಲ್ಲಿಗೆ ಹೋಗಲು ಯಾವನೋ ಇಲ್ಲಿಗೆ ತಾನೇ ಬಂದು ನಮ್ಮ ಬಲೆಗೆ ಬಿದ್ದನೆಂದು, ಇವನಲ್ಲಿರುವುದನೆಲ್ಲ ಕಸಿದುಕೊಂಡು ಇವನನ್ನು ಕಡಿದು ಹಾಕಬೇಕೆಂದು, ತಾಯಿ, ಹೆಂಡತಿ ಎಂದು ನಿಕೃಷ್ಟವಾಗಿ ಬೈದು, ಕೈ ಹಿಡಿದು ಎಳೆದುಕೊಂಡು ಹೋಗಿ ತಮ್ಮ ಮಧ್ಯೆ ಕೂಡಿಸಿಕೊಂಡರು. ಬಹಳ ದಿನಗಳ ಹಿಂದೆ ನಮ್ಮೂರು ಪಕ್ಕದ ಕಳ್ಳಿಗುಂಡಿ ಎಂಬ ಸೇಂದಿಯ ವನದಲ್ಲಿ, ಕೈಲೊಂದು ಕಾಸು ಇಲ್ಲದೆ ಬಂದು, ಯಾರು ಕೇಳಿದರು ದುಡ್ಡು ಸಿಕ್ಕದೆ, ಬೇಸಿಗೆಯ ಬಿಸಿಲು ಬೇಗೆಯಲ್ಲಿ ಬಹಳ ದೂರ ನಡೆದುಬಂದು ಬಹಳ ಬಾಯಾರಿಕೆಯಿಂದ ಬಳಲಿದ್ದ ಒಬ್ಬ ಮುದುಕನನ್ನು ಕಂಡು ಕನಿಕರಪಟ್ಟು ಒಂದು ಪಾವಲಿಯನ್ನು ಕೊಟ್ಟು ಸೇಂದಿ ಕುಡಿಸಿದ್ದರು. ಇಂದು ಆ ಮುದುಕನು ಆ ಕಳ್ಳರ ಗುಂಪಿನಲ್ಲಿ ಮಲಗಿಕೊಂಡು ಇವರು ಬೈಯ್ಯುತ್ತಿದ್ದುದ್ದನ್ನು ಕೇಳಿಕೊಂಡು ಕೂಡಲೇ ಎದ್ದು ನಮ್ಮ ತಂದೆಯವರನ್ನು ಹತ್ತಿರಕ್ಕೆ ಕರೆದು ನೀನು ಯಾರಪ್ಪ ಎಂದು ಕೇಳಿದನು. ನಾನು ದಮ್ಮನಿಂಗಳದ ದಾಸಪ್ಪನೆಂದು ಹೇಳಲು ಕೂಡಲೆ ಇವರನ್ನು ಕೈ ಹಿಡಿದು ಪಕ್ಕದಲ್ಲೆ ಕೂಡಿಸಿಕೊಂಡು ‘ಎಲಾ! ಇವನನ್ನು ಯಾರು ಬೈಯ್ಯಬೇಡಿ. ಇವನು ಬಹಳ ಒಳ್ಳೆಯವನು, ದಾನಗಾರ, ಬಹಳ ವರ್ಷಗಳ ಹಿಂದೆ ಒಂದು ಪಾವಲಿ ಕೊಟ್ಟು ಸೇಂದಿ ಕುಡಿಸಿದನು’ ಎಂದು ಹೇಳಿದನು. ಆಗ ಅವರೆಲ್ಲರೂ ಸಂತೋಷಪಟ್ಟು ಇವರಿಗೂ ಚೆನ್ನಾಗಿ ಕುಡಿಸಿ, ತಿನ್ನಿಸಿ ಬೆಳಗಿನಲ್ಲಿ ಕಳುಹಿಸಿಕೊಟ್ಟರಂತೆ. ಇವರಿಗೆ ಸಂಗೀತ ಜ್ಞಾನವಿತ್ತು. ನಾನೇನಾದರೂ ಅತ್ತರೆ ನನ್ನನ್ನು ಎತ್ತಿಕೊಂಡು ಸೊಗಸಾದ ಕಂಠದಿಂದ ಹಳ್ಳಿಯ ಹಾಡುಗಳನ್ನು ಹೇಳುತ್ತಿದ್ದರು. ಶನಿವಾರ ನಾವು ದಾಸಮನೆತನಕ್ಕೆ ಸೇರಿದವರಾದುದರಿಂದ ಹಿರಿಯ ಗಂಡುಮಗನಿಗೆ ದಾಸನೆಂದೆ ಹೆಸರಿಟ್ಟು, ಮನೆದೇವರಾದ ತಿರುಪತಿ ವೆಂಕಟರಮಣ ಸ್ವಾಮಿಗೆ ಶಾಸ್ತ್ರ ರೀತ್ಯ ವಂಶಪದ್ಧತಿಯಂತೆ ಶಂಕು, ಚಕ್ರ ಮುದ್ರೆಯೊತ್ತಿ ದೀಕ್ಷೆ ಆಗಬೇಕಾಗಿತ್ತು. ಜೇಷ್ಠ ಕುಮಾರರಾದ ಇವರಿಗೂ ದೀಕ್ಷೆಯಾಗಿತ್ತು. ಶನಿವಾರ ಎಲ್ಲೆ ಹೊರಗಡೆ ಹೋದರೂ ಸ್ನಾನ ಮಾಡಿ, ಮಡಿಯುಟ್ಟು, ನಾಮವಿಟ್ಟು ಪೂಜೆ ಮಾಡದ ಹೊರತು ಎಷ್ಟು ವೇಳೆಯಾದರೂ ಭೋಜನ ಮಾಡುತ್ತಿರಲಿಲ್ಲ. ಸಂಜೆ ಸೇಂದಿ ಕುಡಿದು ಬರುವಾಗ ನಮ್ಮೂರಿನಲ್ಲಿ ನಮ್ಮ ಬಡವರ, ಅನಾಥರ ಮನೆಗಳಿಗೆ ಹೋಗಿ ಉಪ್ಪು, ಎಣ್ಣೆ ತೆಗೆದುಕೊಳ್ಳಿ, ಬಟ್ಟೆ ತೆಗೆದುಕೊಳ್ಳಿರೆಂದು ದುಡ್ಡು ಕೊಡುತ್ತಿದ್ದರಂತೆ. ಪರನಾರಿ ಸಹೋದರ ಊರಿನಲ್ಲಿ ಯಾರೋ ಒಬ್ಬನು ತನ್ನ ಹೆಂಡತಿಯನ್ನು ಹೊಡೆಯುತ್ತಿರಲು ಆತನನ್ನು ಚೆನ್ನಾಗಿ ಹೊಡೆದು ಹೆಂಡತಿ ಕಷ್ಟವನ್ನು ತಪ್ಪಿಸಿದರಂತೆ. ಬಹಳ ಸಂಪಾದಿಸುತ್ತಿದ್ದರು. ಎಲ್ಲರೂ ತಂದೆಯವರನ್ನು ಹೊಗಳಿ ನನ್ನನ್ನು ನೋಡಿ ಹುಲಿ ಹೊಟ್ಟೆಯಲ್ಲಿ ಎಂದಿಗೂ ಇಲಿ ಹುಟ್ಟಲಾರದೆನ್ನುತ್ತಿದ್ದರು. ಇಂಥವರ ಹೊಟ್ಟೆಯಲ್ಲಿ ಜೇಷ್ಠ ಕುಮಾರನಾಗಿ ೧೯೧೦ರಲ್ಲಿ ಜನ್ಮವೆತ್ತಿದೆನು. ವಂಶಪದ್ಧತಿಯಂತೆ ದಾಸನೆಂದೆ ನಾಮಕರಣ ಮಾಡಿದರು. ನಮ್ಮ ತಾಯಿಗೆ ಜನ್ಮವಿತ್ತವರು ದೊಡ್ಡ ಚಿಕ್ಕಯ್ಯ. ನಮ್ಮ ತಂದೆಗೆ ಜನ್ಮವಿತ್ತವರು ದೊಡ್ಡಲಕ್ಷ್ಮಯ್ಯ.

೨. ಬಾಲ್ಯ

ಶ್ರವಣಬೆಳಗೊಳದ ಈಶಾನ್ಯಕ್ಕೆ ಸುಮಾರು ಹನ್ನೆರಡು ಮೈಲು ದೂರದಲ್ಲಿ ಹಿರಿಸಾವೆಯ ಹತ್ತಿರ ಜಿನ್ನೇನಹಳ್ಳಿಯೆಂಬ ಒಂದು ದೊಡ್ಡ ಹಳ್ಳಿಯೆ ನಮ್ಮ ತಾಯಿಯ ತವರೂರು. ಇಲ್ಲಿಯೇ ಬಾಲ್ಯವೆಲ್ಲವನ್ನು ಕಳೆದದ್ದು. ಮೂರು ವರ್ಷದ ಮಗುವನ್ನೆ ಇಲ್ಲಿಗೆ ತಂದುಬಿಟ್ಟರು. ದಕ್ಷಿಣ ಭಾಗದಲ್ಲಿ ಅಗಾಧ, ದಟ್ಟವಾದ ತೆಂಗು, ಬಾಳೆ, ಅಡಿಕೆ, ನೇರಳೆ, ಮಾವು, ಸೇಬು, ಕಿತ್ತಳೆ, ಮಾದಳ, ಈಚಲು ಮರಗಳಿಂದಲೂ, ಪಾವಟ, ಕಣುಗಲು, ಮಲ್ಲಿಗೆ, ಸಾವಂತಿಗೆಯಿಂದಲೂ, ಪೂರ್ವಾಭಿಮುಖವಾಗಿ ನಡುವೆ ಹರಿಯುವ ಹಳ್ಳ, ಪಶ್ಚಿಮಕ್ಕೆ ತೋಟ ಕೆರೆ, ಪೂರ್ವಕ್ಕೆ ಮೇಟಿಕೆರೆ, ಈ ಮಧ್ಯ ಮೂರು ಸಾಸಿವೆಯ ಈ ಸುಂದರ ವನವು ಬಗೆಬಗೆಯ ಪಕ್ಷಿಗಳಿಂದ ಕೂಡಿ ನನಗೇನೊ ಸ್ವಾಭಾವಿಕ ನಂದನವನವಾಗಿತ್ತು. ಈ ಮನೋಹರ ವನದಲ್ಲಿ ಬಾಲಕರ ಸಂಗಡ ದನ ಕಾಯುವುದು, ಮರಕೋತಿಯಾಡುವುದು, ಹಳ್ಳದ ದಡದ ಮೇಲೆ ನಿಂತು ಮರಳ ಮೇಲೆ ನೆಗೆಯುವುದು, ನೀರಿನಲ್ಲಿ ಈಜಾಡುವುದು, ಮೀನು ಹಿಡಿಯುವುದು, ಬಗೆಬಗೆಯ ಹೂಗಳಿಂದ ದೇವರು ಮಾಡಿ ಪೂಜೆ ಮಾಡುವುದು, ಮಾವು, ಜೆಂಬುನೇರಳೆ, ಸೇಬು, ಮಾದಳ, ಕಿತ್ತಲೆ, ಈಚಲ ಹಣ್ಣುಗಳನ್ನು ತಿನ್ನುವುದು, ಊಟ ಮಾಡಲು ಮುತ್ತುಗದ ಎಲೆಗಳನ್ನು ಕೊಯ್ಯುವುದು ಇವೇ ಮೊದಲಾದ ಆಟವಾಡುತ್ತಿದ್ದೆನು. ಇದೆ ನನ್ನನ್ನು ಮುಂದೆ ಕವಿಯಾದಾಗ ಸೃಷ್ಟಿ, ಸೌಂದರ್ಯ ವರ್ಣಿಸಲು ಸಹಾಯ ನೀಡಿದುದು. ಇದಲ್ಲದೆ ಜೋಳ ಕಾಯುವಾಗ ಮಣ್ಣಿನ ಗುಡಿಕಟ್ಟಿ ಒಳಗೆ ಕಲ್ಲು ಪೂಜಿಸಿ ಹೋಮ ಮಾಡಿಸಿ ದೇವರೆಂದು ಅಡ್ಡಬೀಳುತ್ತಿದ್ದೆನು. ಪೀಡೆ, ಪಿಶಾಚಿಗಳನ್ನು ಬಿಡಿಸಲು ಅನ್ನ ಶಾಂತಿಮಾಡಿ, ಮಣ್ಣು ಬೊಂಬೆಗಳನ್ನು ಮಾಡಿ ಪೂಜಿಸಿದ್ದರೆ ಅವುಗಳನ್ನು ಹೊತ್ತುತಂದು ದೇವರೆಂದು ಮಕ್ಕಳನ್ನು ಕೂಡಿಕೊಂಡು ಉತ್ಸವ ನಡೆಸುತ್ತಿದ್ದೆನು. ಒಂದು ದಿನ ನಾನು ಹುಡುಗರೊಂದಿಗೆ ಆಡುತ್ತಿರುವಾಗ ಒಂದು ಬಿದಿರುದಡಿಯನ್ನು ಇಬ್ಬರು ಹೊತ್ತುಕೊಂಡು ಅದರ ಮೇಲೆ ನನ್ನನ್ನು ಕುಡಿಸಿ, ಹಣೆಗೆ ನಾಮ ಧರಿಸಿ, ಹೂ ಮುಡಿಸಿ ಎರಡೂ ಕೈಗಳಿಗೂ ಊರಿಕೊಳ್ಳಲು ಎರಡು ದೊಣ್ಣೆಗಳನ್ನು ಕೊಟ್ಟು ಮುಂಭಾಗದಲ್ಲಿ ಆಟದ ತಮಟೆ ಬಡಿಯುವುದು ಕೊಂಬೂದುವುದು ಹೀಗೆ ದೇವರೆಂದು ಮೆರವಣಿಗೆ ಮಾಡಿಕೊಂಡು ಹೋಗುವಾಗ ಕೆಳಕ್ಕೆ ಬಿದ್ದು ಬಿದಿರ ದಡಿ ಆಯಕ್ಕೆ ತಗುಲಿ ಪ್ರಜ್ಞೆ ತಪ್ಪಿ ಬಿದ್ದಿದ್ದೆನು. ನಾನು ಮಾತ್ರ ಹೊತ್ತವನಲ್ಲ. ಹುಡುಗರು ನನ್ನ ಹೊಲಕ್ಕೆ ಯಾಕೆ ದನಗಳನ್ನು ಬಿಟ್ಟೆ ಎಂದು ಜಗಳ ಮಾಡಿಕೊಂಡು ಬಂದಾಗ ನನ್ನನ್ನು ಹುಡುಗರು ಎತ್ತರವಾದ ಕಲ್ಲು ಮೇಲೆ ಕೂಡಿಸಿ ನೀನು ಗೌಡ ಈ ನ್ಯಾಯ ತೀರಿಸು ಎಂದಾಗ ನಾನು ನ್ಯಾಯ ತೀರ್ಪುಕೊಟ್ಟು ಕಳುಹಿಸುತ್ತಿದ್ದೆ. ನಾನು ಮಾತ್ರ ಜಗಳ ಆಡಿಕೊಂಡು ನ್ಯಾಯಕ್ಕೆ ಬರುತ್ತಿರಲಿಲ್ಲ. ಒಬ್ಬ ಹೆಂಗಸನ್ನು ನನಗೆ ಎಷ್ಟು ವರ್ಷವೆಂದು ಕೇಳಿದಾಗ ಮಗು ನಿನಗೆ ಐದು ವರ್ಷ ತುಂಬಿ ಆರು ವರ್ಷ ನಡೆಯುತ್ತಿದೆ ಎಂದು ಹೇಳಿದಾಗ, ಈಗ ನಡೆಯುತ್ತಿ ಎಂದು ಹೇಳುವೆಯಲ್ಲಿ ನಾನು ಆಗಲೆ ನಡೆದಾಡುತ್ತಿದ್ದೆ ಎಂದು ಕೇಳಿದೆನು.

ಅಜ್ಜಿಯೊಬ್ಬಳನ್ನು ನಿನ್ನ ಸೊಂಟ ಈಗೇಕೆ ಗೂನಿದೆ ಎಂದು ಕೇಳಲು ನಿಮ್ಮ ಹಲಸಿನ ಮರದಡಿ ಸೌದೆ ಆಯುವಾಗ ಹಣ್ಣುಬಿದ್ದು ಈಗಾಯಿತೆಂದರು. ಒಂದು ದಿನ ಚಿಕ್ಕಮ್ಮನ ಸಂಗಡ ಹಳ್ಳಕ್ಕೆ ನೀರಿಗೆ ಹೋದಾಗ ನಾನು ದಡದಲ್ಲಿ ಚಿಗುರು ಮುತ್ತುಗದ ಎಲೆಗಳನ್ನು ಕೊಯ್ದು ಅದೇ ನಾರಿನಿಂದ ಕಟ್ಟಿ ತರಲು ಚಿಕ್ಕಮ್ಮನು ಎತ್ತಿ ಮುದ್ದಾಡಿ ಮುಂದೆ ನೀನು ಇನ್ನೆಂಥ ಬುದ್ದಿವಂತನಾಗುವೆಯಪ್ಪ ಎಂದಳು. ಒಂದು ದಿನ ಹಬ್ಬಕ್ಕೆ ನಮ್ಮ ಮುತ್ತಜ್ಜಿಯ ಊರಾದ ಕಾಂತರಾಜಪುರಕ್ಕೆ ಬಂದು ಬೆಳಿಗ್ಗೆ ಹೊಸಮನೆಯನ್ನು ನೆಂಟರು ನೋಡುತ್ತಿದ್ದಾಗ ನಾನು ಹೋಗಿ, ಅಯ್ಯಾ ಮೇಲಿಂದ ಬಿದ್ದ ಸೂರಿನ ನೀರು ಹೊರಗೆಲ್ಲಿ ಹೋಗುವುದೆಂದು ಕೇಳಲು, ಅಯ್ಯನು ಮಗು ನೀನು ಮುಂದೆ ಬಹಳ ಬುದ್ದಿವಂತನಾಗುವೆಯಪ್ಪ ಎಂದು ಎತ್ತಿ ಮುದ್ದಾಡಿದನು. ಚಿಕ್ಕ ಕೈ ತೋಟ ಮಾಡಿ ಹೂ, ತರಕಾರಿ ಗಿಡಗಳನ್ನು ಸಣ್ಣ ಕುಂಬಗಳಿಂದ ಅಡ್ಡೆಯಲ್ಲಿ ನೀರು ತಂದು ಹುಯ್ದು ನೋಡಿ ಆನಂದಿಸುತ್ತಿದ್ದೆನು. ಸಂಜೆ ಸಸಿಗಳನ್ನು ನೆಟ್ಟು ಬೆಳಗಿನಲ್ಲಿ ಕಲಕಲ ಎಂಬುದನ್ನು ನೋಡಿ ಹಿಗ್ಗುತ್ತಿದ್ದೆ. ಬೆಳದಿಂಗಳಲ್ಲಿ ನಡೆಯುವುದೆಂದರೆ ಬಹಳ ಸಂತೋಷ. ದಾನ್ಯ ಒಕ್ಕಲು ಹೆಣೆಯೆತ್ತು ಹೊಡೆಯುವಾಗ ನಕ್ಷತ್ರಗಳನ್ನು ನೋಡಿಕೊಂಡು ಅನಂದಪಡುವುದು. ಹೂ ಗಿಡಗಳನ್ನು ನೆಡುವುದು, ಪಾತಿಕಟ್ಟಿ ನೀರೆರೆಯುವುದು, ಗಿಳಿ, ಪಾರಿವಾಳಗಳನ್ನು ಸಾಕಿ ಅವುಗಳೊಂದಿಗೆ ಆಟವಾಡುವುದು ಇವೇ ನನ್ನ ಆಟ. ಒಂದು ದಿನ ಸಂತೆಗೆ ಹೋಗಿ ಬರುವಾಗ ದಾರಿಯಲ್ಲೊಂದು ಚೆನ್ನಾಗಿ ಬರೆದ ಕಾಗದ ಬಿದ್ದಿತ್ತು. ಅದನ್ನುತಂದು ಕುಳುವಾಡಿಗಳಾದ ನಮ್ಮ ಸೋದರ ಮಾವನವರಿಗೆ ಇದೊ ನಿಮ್ಮನ್ನು ಬರುವುದಕ್ಕೆ ಕೊಡಹೇಳಿ ಶೇಖದಾರರು ಕೊಟ್ಟಿದ್ದಾರೆ ಕೊಳ್ಳಿರೆಂದು ಕೊಟ್ಟೆನು. ಬಾಲ್ಯದಲ್ಲಿ ನಮ್ಮಮ್ಮನೊಬ್ಬಳು ಮೈಸೂರು ಶೆಟ್ಟಿಯೆಂದೆ ಕರೆಯುತ್ತಿದ್ದಳು. ನಮ್ಮ ಸೋದರ ಮಾವಂದಿರು ಬಹಳ ಒಳ್ಳೆಯವರು. ಏನು ಅರಿಯದವರು. ಸಾಧುಗಳು, ದೈವ ಭಕ್ತರು. ನಮ್ಮ ಮನೆ ದೇವರೆ ಅವರ ಮನೆ ದೇವರು. ಅವರೂ ದಾಸ ಧೀಕ್ಷೆಯನ್ನು ಹೊಂದಿದ್ದರು. ನನ್ನನ್ನು ಶನಿವಾರ ಉಪವಾಸವಿರಿಸುವುದು, ಸ್ನಾನ ಮಾಡಿಸುವುದು, ಹಣೆಗೆ ನಾಮ ಧರಿಸುವುದು, ಕಿವಿಗೆ ಹೂ ಮುಡಿಸುವುದು, ದೇವರಿಗೆ ಅಡ್ಡ ಬೀಳಿಸುವುದು, ಪೂಜೆ ಮಾಡಿಸುವುದು, ಹಬ್ಬ ಹರಿದಿನಗಳಲ್ಲಿ ಭಜನೆ ಮಾಡುವುದನ್ನು ಕರೆದುಕೊಂಡು ಹೋಗಿ ನೋಡಿಸುವುದು, ಶಿವರಾತ್ರಿ ಜಾಗರಣೆ ಇರಿಸುವುದು, ಈಶ್ವರ ದೇವಸ್ಥಾನದ ಹತ್ತಿರ ಕರೆದುಕೊಂಡು ಹೋಗಿ ಪುರಾಣ, ಪುಣ್ಯಕಥೆಗಳನ್ನು ಕೇಳಿಸುವುದು -ಹೀಗೆಲ್ಲ ಬಾಲ್ಯದ ಕಾಲ ಕಳೆಯುತ್ತಿದ್ದೆನು. ಇಲ್ಲಿ ರಾಮಾಯಣವನ್ನು ಬಯಲಾಟವಾಡಿದಾಗ ಆಂಜನೇಯನು ಮಾಡುತ್ತಿದ್ದ ಶ್ರೀರಾಮ ಸ್ತೋತ್ರವನ್ನು ಆಗಲೇ ಕಲಿತು ಅದನ್ನೆ ಒಂದು ಮಂತ್ರವಾಗೆಣಿಸಿ ಪ್ರಾರ್ಥನಾ ವೇಳೆಗಳಲ್ಲಿ, ಜೀವಿತ ಕಾಲದಲ್ಲೆಲ್ಲ ಇದನ್ನೇ ಉಪಯೋಗಿಸು ತ್ತಿದ್ದೆನು.

೩. ವಿದ್ಯಾಭ್ಯಾಸ

ನಮ್ಮ ತಂದೆಯವರು ನನಗೆ ವಿದ್ಯಾಭ್ಯಾಸ ಮಾಡಿಸಿ ಕವಿಯೆನಿಸಿ ಮಗನನ್ನು ದೇಶಾಸೇವ ದಾಸನನ್ನಾಗಿಯೂ, ಕೀರ್ತಿವಂತನನ್ನಾಗಿ ಮಾಡಬೇಕೆಂಬುವ ಮಹದೋದ್ದೇಶವೇನೂ ಇರಲಿಲ್ಲ. ಕಿಕ್ಕೇರಿ(ಕೃಷ್ಣರಾಜಪೇಟೆ ತಾಲ್ಲೂಕು)ಯಲ್ಲಿ ಚರ್ಮದ ಮಂಡಿಯ ಲೆಕ್ಕಪತ್ರಗಳನ್ನಿಟ್ಟರೆ ಸಾಕೆಂದು. ಆದರೆ ದೈವೇಚ್ಚೆ ಬೇರೆ ಕೆಲಸಕ್ಕಿತ್ತು. ವಯಸ್ಸಾಗಲೇ ಏಳು ವರ್ಷಗಳು ತುಂಬಿ ಎಂಟರಲ್ಲಿ ಐದಾರು ತಿಂಗಳಾಗಿದ್ದವು. ಒಂದು ದಿನ ದನಗಳಿಗೆ ಹುಲ್ಲು ಕೀಳಲು ಹುಡುಗರೊಂದಿಗೆ ಹೋಗಲು ರೊಟ್ಟಿ, ತುಪ್ಪ, ಬೆಲ್ಲ ತಿಂದು ಕುಡುಗೋಲು ಕೈಯಲ್ಲಿಡಿದು ಸಿದ್ಧನಾಗಿದ್ದೆ. ನಮ್ಮಮ್ಮನ ಕದ್ಧ ನನ್ನ ಮೇಲೆ ಬಿದ್ದಿತು. ‘ಎಲಾ ತಮ್ಮಯ್ಯ ಎಲ್ಲಿಗೆ ಹೋಗುವೆ ಹುಲ್ಲು ಕೀಳಲು ಹೋಗಬೇಡ ಸ್ಕೂಲಿಗೆ ನಡೆ’ ಎಂದಳು. ಕಂಬ ತಬ್ಬಿಕೊಂಡು ಅಳಲು ಸುರುಮಾಡಿದೆ. ಕೈ ಕಾಲು ನಡುಗಿದವು. ಯಾಕೆಂದರೆ ಕೂಲಿ ಮಠದ ಆ ಗುರುಗಳು ಹುಡುಗರಿಗೆ ಹಿಂಸೆ ಕೊಡುವುದನ್ನು ನೋಡಿ ಆ ದಾರಿಯನ್ನೆ ಬಿಟ್ಟೆ. ಹಾಗೂ ನಮ್ಮ ಸೋದರ ಮಾವನವರು ಹೊತ್ತುಕೊಂಡು ಮಠದಲ್ಲಿ ಕೂಡಿಸಿಯೇ ಬಿಟ್ಟರು. ಉಪಾಧ್ಯಾಯರು ಸಾಮಾನ್ಯವಾಗಿ ಓದು ಬರಹ ಬಲ್ಲ ಅದೇ ಊರಿನ ಒಬ್ಬರು ವಿಶ್ವಕರ್ಮ ಬ್ರಾಹ್ಮಣ. ಕೊಂಚ ಸಂಗೀತ ಕಲೆಗಾರರು, ಅವರ ಹೆಸರು ಚೆನ್ನಾಚಾರ್ಯರೆಂದು. ಬಹಳ ಕಠಿಣ. ಆದರೂ ನನ್ನನ್ನು ಬಹಳ ಪ್ರೇಮದಿಂದ ವಿದ್ಯಾವ್ಯಾಸಂಗ ಪ್ರಾರಂಭಿಸುವ ಮುನ್ನ ಸ್ನಾನ ಮಾಡಿ, ಮಡಿಯುಡಿಸಿ ಶಾಸ್ತ್ರೋಕ್ತವಾಗಿ ಶಾರದ ಪೂಜೆ ಮಾಡಿಸಿ, ಗುರುಗಳು ಆಶೀರ್ವದಿಸಿ ವ್ಯಾಸಂಗ ಪ್ರಾರಂಭೋತ್ಸವವನ್ನು ನೆರವೇರಿಸಿ ನಂತರ ಅಭ್ಯಾಸಕ್ಕೆ ಪ್ರಾರಂಭಿಸಿದರು. ಇದೇ ನನ್ನ ವಿದ್ಯಾಭ್ಯಾಸದ ಮೊದಲನೆ ಮೆಟ್ಟಿಲು. ಅಲ್ಲೆಲ್ಲರೂ ಸಹಾ ಸವರ್ಣೀಯ ಬಾಲಕರು. ನಾನೊಬ್ಬ ಅಂತ್ಯಜನು. ಆದರೂ ಮೊದಲೆಲ್ಲ ಅಷ್ಟೊಂದು ಬೇಧ ಮಾಡುತ್ತಿರಲಿಲ್ಲ. ಆದರದಿಂದ ಪಾಠ ಕಲಿಸುತ್ತಿದ್ದರು. ತಪ್ಪಿದ್ದರೆ ಬಹಳ ಹೊಡೆಯುವರು. ಆದರೂ ಅಷ್ಟೆ ಪ್ರೀತಿಸುವರು. ವಿಶೇಷವೆಂದರೆ ತಮ್ಮ ಮನೆಯ ತಿಂಡಿ ಊಟ, ತಮ್ಮ ಸಂಗಡ ಕರೆದುಕೊಂಡು ತಿರುಗುವುದು ಇವರ ವಾಡಿಕೆ. ಇವರು ಕುಡುಕರು. ನನಗೆ ಮಾತ್ರ ಕುಡಿಸುತ್ತಿರಲಿಲ್ಲ. ನಾನೇನೊ ಮೊದಲು ಮಧ್ಯಪಾನ, ಗೋಮಾಂಸ ಬಕ್ಷಣೆ ಮಾಡು\ದ್ದೆನು. ಶಾಲೆಗೆ ಸೇರಿದ ಕೂಡಲೆ ಅವನ್ನೆಲ್ಲ ಬಿಟ್ಟೆನು. ಎಲ್ಲರಿಗಿಂತಲೂ ಹೆಚ್ಚು ಪ್ರೇಮ, ನಂಬಿಕೆಗಳನ್ನು ನನ್ನಲ್ಲಿ ಮಾತ್ರ ಇಟ್ಟಿದ್ದರು. ಕೀಳು ಜಾತಿಯಲ್ಲಿ ಹುಡಗನು ಜನ್ಮವೆತ್ತಿದ್ದರೂ ಚುರುಕಾಗಿದ್ದಾನೆಂದು, ಹೇಳಿದ್ದನ್ನು ಬೇಗ ಗ್ರಹಿಸಿಕೊಳ್ಳುತ್ತಾನೆಂದು, ಕಣ್ಣಿನ ಮಧ್ಯೆ ಕಪ್ಪು ಗುಡ್ಡಗಳು ಬಹಳ ಕಪ್ಪಾಗಿರುವುದರಿಂದಲೂ, ಬಲಗೆನ್ನೆ ನಕ್ಕರೆ ಗುಂಡಿ ಬೀಳುವುದರಿಂದಲೂ ಹುಡುಗನು ಮುಂದೆ ಒಬ್ಬ ಪ್ರಸಿದ್ಧ ಪುರುಷನಾಗುವಂತೆ ಕಾಣುತ್ತಾನೆಂದು ಆಗಾಗ್ಗೆ ಉಪಾಧ್ಯಾಯರು ಹೇಳುತ್ತಿದ್ದರು. ಉಪಾಧ್ಯಾಯರು ಯಕ್ಷಗಾನ ಹಾಡುಗಾರಿಕೆಯವರಾದ್ದರಿಂದ ಯಕ್ಷಗಾನದ ನಳಚರಿತ್ರೆಯನ್ನು ಅಭ್ಯಸಿಸಿ ಸುಶ್ರಾವ್ಯ ಕಂಠದಿಂದ ಹಾಡುವುದನ್ನು ಕೇಳಿ ಸಂತೋಷಪಡುತ್ತಿದ್ದರಲ್ಲದೆ, ಹಬ್ಬ ಜಾತ್ರೆಗಳಲ್ಲಿ ತಮ್ಮ ನೆಂಟರಿಷ್ಟರ ಊರುಗಳಿಗೆ ಕರೆದುಕೊಂಡು ಹೋಗಿ ಓದಿಸುತ್ತಿದ್ದರು. ಶಾಲೆಯಿಂದ ಮನೆಗೆ ಬಂದಾಗ ಪ್ರತಿದಿನ ತಪ್ಪದೆ ಪಠ್ಯಪುಸ್ತಕಗಳಾದ ಗೋವಿನ ಕಥೆ, ಹರಿಭಕ್ತಿಸಾರ, ನಳಚರಿತ್ರೆ ಅಮರ ಇನ್ನು ಕೆಲವು ಕಥೆಗಳನ್ನು ಓದಬೇಕಾಗಿತ್ತು. ನಮ್ಮಯ್ಯನು(ತಾಯಿಯ ತಂದೆ) ರಾತ್ರಿ ವೇಳೆ ಬೆಂಕಿಮುಂದೆ ಕುಳಿತಾಗ ರಾಮಾಯಣ, ಭಾರತದ ಕಥೆಗಳನ್ನು ಹೃದಯಂಗಮವಾಗುವಂತೆ ಹೇಳಿ ಎಳೆಯ ಹೃದಯದ ಮೇಲೆ ಮುದ್ರೆಯೊತ್ತಿದರು. ರಾಮಾಯಣದಲ್ಲಿ ಹೇಳುತ್ತಿದ್ದ ಒಂದು ವಿಚಾರವನ್ನು ಇಲ್ಲಿ ಬರೆಯುತ್ತೇನೆ.

ರಾಮನು ಯಾರಿಗೆ ಅಂಗಾಲಿನಲ್ಲಿ ಪದ್ಮ, ನಡುನಾಲಿಗೆಯಲ್ಲಿ ಪದ್ಮರೇಖೆಯಾರಿಗಿರುವುದೊ ಅವಳನ್ನೆ ಲಗ್ನವಾಗುತ್ತೇನೆಂದು ಹಠ ಮಾಡಿದ್ದ. ರಾಮನು ತಮ್ಮ ಲಕ್ಷ್ಮಣನೊಂದಿಗೆ ಸೀತಾ ಸ್ವಯಂವರಕ್ಕೆ ಜನಕರಾಜನ ಪಟ್ಟಣಕ್ಕೆ ಹೋದಾಗ ಕುಳಿತುಕೊಂಡರು. ಆಗ ಸೀತೆಯು ಕುಡಿಯಲು ಗಿಂಡಿಯಲ್ಲಿ ನೀರು ಹೊಯ್ಯುತ್ತ ಬಂದಳು. ಆಗ ರಾಮ ಬಾಯಿಗೆ ಬೊಗಸೆಯೊಡ್ಡಿ ನೀರು ಕುಡಿಯುತ್ತಿದ್ದಾಗ ಮೊಳಕೈಯಿಂದ ಹರಿಯುತ್ತಿದ್ದ ನೀರಿಗೆ ಹತ್ತಿರ ಕುಳಿತಿದ್ದ ಲಕ್ಷ್ಮಣನು ಕೈಯೊಡ್ಡಿ ಕುಡಿಯುವುದನ್ನು ಕಂಡು ನಕ್ಕಾಗ ನಡುನಾಲಿಗೆಯ ಕಮಲ ರೇಖೆ ಕಾಣಲು ಆಗ ಎದ್ದು ಹೋಗಿ ಮೀನು ಬಾಣವನ್ನು ಹೊಡೆದನೆಂದು ಹೇಳುತ್ತಿದ್ದನು. ಹತ್ತಿರ ಯಾವ ಹಳ್ಳಿಯಲ್ಲಿ ಬಯಲಾಟವೆಲ್ಲಿ ಆಡಿದರೂ ಹೆಗಲ ಮೇಲೆ ಕೂಡಿಸಿಕೊಂದು ಹೋಗುತ್ತಿದ್ದರು. ಒಂದು ದಿನ ರಾತ್ರಿ ಪಕ್ಕದ ತೋಟಿಗ್ರಾಮಕ್ಕೆ ಕರೆಭಂಟನ ಆಟವನ್ನು ನೋಡಲು ನಮ್ಮ ಚಿಕ್ಕ ಮಾವನ ಹೆಗಲ ಮೇಲೆ ಕುಳಿತು ಮುಂದೆ ಹೋಗುತ್ತಿದ್ದೆನು. ನಮ್ಮ ದೊಡ್ಡ ಮಾವನು ಹಿಂದೆ ಬರುತ್ತೆ ಕರೇಭಂಟನ ಕಥೆಯನ್ನೆ ಹೇಳುತ್ತಿದ್ದನು. ಅಲ್ಲಿ ಹಿಂದೆ ಅನೇಕರು ಬರುತ್ತಿದ್ದರು. ನಾನು ಹೆಗಲ ಮೇಲೆ ಕುಳಿತುಕೊಂಡೆ ಏಕಮನಸ್ಸಿನಿಂದ ಕಥೆಯನ್ನು ಕೇಳುತ್ತಿದ್ದೆನು. ಪುಂಡರೀಕಾಕ್ಷಿಯ ಮನೆಗೆ ಕರೀಭಂಟನೆ ಬಂದಾಗ ಉದ್ದಂಡಿಯು ಊರಿಗೆ ಹೊರಗಿದ್ದ ಸ್ಮಶಾನಕ್ಕೆ ಹೋಗಿ ಕೈಯಲ್ಲಿ ಸಾವಿರ, ಕಾಲಲ್ಲಿ ಸಾವಿರ ಹೆಣಗಳನ್ನು ತೆಗೆದುಕೊಂಡು ಮನೆಗೆ ಬಂದಳು ಎಂದು ಹೇಳುವಷ್ಟರಲ್ಲಿ ನನ್ನನ್ನು ಕೆಳಗಿಳಿಸಿ ತೋಟಿಕೆಯ ನೀರು ದಡದಲ್ಲಿಳಿಸಿ ನಮ್ಮ ಚಿಕ್ಕಮಾವನು ನೀರು ಕುಡಿಯಲಿಕ್ಕೆ ಹೋದನು. ಹಿಂದೆ ಒಂದು ಫರ್ಲಾಗು ದೂರದಲ್ಲಿ ಬರುತ್ತಿದ್ದ ಜನಗಳು ಹತ್ತಿರ ನಮ್ಮ ಮಾವನನ್ನು ಪೈಕಿ ಯಾರೋ ಒಬ್ಬರು ಮುಂದೆ ಹೋಗುವರು ಸ್ವಲ್ಪ ನಿಧಾನಿಸಿ ನಾವು ಬರುತ್ತೇವೆಂದು ಕೂಗಿದರು. ನಾವು ನಿಂತಿದ್ದ ಏರಿ ಹಿಂಭಾಗವೆ ಆ ಊರಿನ ಸ್ಮಶಾನ. ನಾನು ದನ ಕಾಯಲು ಹೋದಾಗ ನನಗೆ ಚೆನ್ನಾಗಿ ಗೊತ್ತಿತ್ತು. ಹಿಂದಿನಿಂದ ಕೂಗಿದ ಶಬ್ಧವು ಯಾವಾಗ ಕೇಳಿಸಿತೊ, ಓಹೋ ಉದ್ದಂಡಿಯು ಈ ಸ್ಮಶಾನಕ್ಕೆ ಹೆಣಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದಾಳೆ. ನನ್ನನ್ನು ತಿನ್ನಲು ಹಿಂದೆ ಬಂದುಬಿಟ್ಟಳೆಂದು ಹೆದರಿ, ಅಬ್ಬರಿಸಿ ನಮ್ಮ ಚಿಕ್ಕಮಾವನನ್ನು ತಬ್ಬಿಕೊಂಡೆನು. ಆಗ ನಮ್ಮ ದೊಡ್ಡಮಾವ ನನ್ನನ್ನು ಸಂತೈಸಿ ಅಪ್ಪಿಕೊಂಡು ಆಟವಾಡೊ ಬಳಿ ಕೂರಿಸಿದರು. ನನಗೆ ಇದೇ ಭಯ. ಆಟ ನೋಡುತ್ತಾ ಕುಳಿತಿದ್ದೆನು. ಉದ್ದಂಡಿಯು ಆರ್ಭಟಿಸಿಕೊಂಡು, ಕೈಯಲ್ಲಿ ಪಂಜು ಹಿಡಿದು ವೇಷಭೂಷಿತವಾಗಿ ಬಂದಳು. ನಮ್ಮ ಮಾವನ ಮರೆಯಲ್ಲಿ ಕುಳಿತು ಭಯದಿಂದ ನಡುಗುತ್ತ ಬಲವಾಗಿ ತಬ್ಬಿಕೊಂಡು ಆವೇಷವು ಹೋಗುವವರೆಗೂ ಕಣ್ಣುಮುಚ್ಚಿ ಹೆಚ್ಚಿಗೆ ಉಸಿರಾಡದೆ ಕುಳಿತಿದ್ದು ಅದು ಹೋದ ನಂತರ ಕಣ್ಣು ಬಿಟ್ಟು ನೋಡಿದೆನು. ಹೀಗೆ ನನ್ನನ್ನು ನಾಲ್ಕೈದು ವರ್ಷಗಳು ಕೂಲಿಯ ಮಠದಲ್ಲಿ ಕೊಳೆಹಾಕಿಬಿಟ್ಟರು. ಉಪಾಧ್ಯಾಯರು ಪ್ರೀತ್ಯಾದರಗಳಿಂದ ವಿದ್ಯೆ ಕಲಿಸಿದಕ್ಕಾಗಿ ತಿಂಗಳ ಸಂಬಳವಲ್ಲದೆ ಒಂದು ಹಸುವನ್ನು ನಮ್ಮ ತಂದೆಯವರು ದಾನವಾಗಿ ಕೊಟ್ಟರು. ದೀಪಾವಳಿ ಹಬ್ಬಕ್ಕೆ ಊರಿಗೆ ಬಂದವನನ್ನು ಪುನಃ ಹಿಂದಿರುಗಿ ವ್ಯಾಸಂಗಕ್ಕೆ ಕಳುಹಿಸಲೇ ಇಲ್ಲ. ಹೀಗೆ ಒಂದು ವರ್ಷ ಊರಿನಲ್ಲೆ ಕಾಲ ಕಳೆದುದಾಯಿತು. ಪುನಃ ಓದಬೇಕೆಂಬುವ ಮನಸ್ಸಾಯಿತು. ಇದೇ ನಮ್ಮೂರು ಶ್ರವಣಬೆಳಗೊಳದಲ್ಲಿ ಒಂದು ಹೊಸ ಗೌರ್ನಮೆಂಟ್ ಪಂಚಮ ಪ್ರೈಮರಿ ಶಾಲೆಯೊಂದು ನಡೆಯುತ್ತಲಿದೆ ಎಂದು ಗೊತ್ತಾಯಿತು. ನನ್ನ ಜೊತೆಗಾರನೊಬ್ಬ, ನಾನೂ ಇಬ್ಬರೂ ಸೇರಿ ಅಲ್ಲಿಗೆ ಹೋಗಿ ಓದಬೇಕೆಂದು ಗುಟ್ಟಾಗಿ ಮಾತನಾಡಿಕೊಂಡೆವು. ಯಾರಿಗೂ ಕಾಣದಂತೆ ಕಳ್ಳತನದಿಂದ ಹೊರಡಲು ಸಿದ್ಧರಾದೆವು. ಒಂದು ದಿನ ರಾತ್ರಿ ಊಟವಾದ ನಂತರ ಬಂದು ಜಗಲಿಯ ಮೇಲೆ ಮಲಗಿಕೊಂಡೆವು. ಚೆನ್ನಾಗಿ ನಿದ್ರಿಸಲಿಲ್ಲ. ಬೆಳಗಿನ ಜಾವ ನಾಲ್ಕು ಗಂಟೆಗೆ ಮುಂಗೋಳಿ ಕೂಗಿತು. ಮುಳುಗುವ ಮೋಡದಿಂದ ಮಸುಕಾದ ಚಂದ್ರ -ತಾರೆಗಳ ಮಬ್ಬಾದ ಬೆಳಕು ಇನ್ನೂ ಜನರ‍್ಯಾರೂ ಎಚ್ಚರವಿಲ್ಲದೆ ಊರೆ ನಿಶಬ್ಧದಿಂದ ಕೂಡಿತ್ತು. ಈ ಸಮಯದಲ್ಲಿ ನಾವಿಬ್ಬರು ಎದ್ದು ಕಾಲು ಸಪ್ಪಳ ಕೇಳಿಸದಂತೆ ಊರ ಹೊರಬಿದ್ದು ಊರಿನ ಎತ್ತರಕ್ಕೆ ಒಂದು ಫರ್ಲಾಗು ದೂರದಲ್ಲಿರುವ ಅಮೃತಲಿಂಗೇಶ್ವರನ ಗುಡಿಯ ಹತ್ತಿರ ಬೆಳಗಾಗುವ ತನಕ ಕಾಲಕಳೆದೆವು. ನಂತರ ಯಾರಾದರು ಬಂದಾರೆಂಬ ಭಯದ ಮೇಲೆ ಹಿಂದಿರುಗಿ ನೋಡುತ್ತಾ ನೋಡುತ್ತ ಶ್ರವಣಬೆಳಗೊಳವನ್ನು ಸೇರಿದೆವು. ಹೊರಡುವಾಗ ಒಂದು ಪುಸ್ತಕದ ಗಂಟು, ನಾಮದ ಚೀಲ, ಒಂದೆರಡು ರೊಟ್ಟಿಯ ಚೂರು ಮಾತ್ರ ನನ್ನಲ್ಲಿದ್ದವು. ಅಲ್ಲಿ ನಮ್ಮವರ ಕೇರಿಯನ್ನು ತಲುಪಿದಾಗ ನನ್ನ ಜೊತೆಗಾರನು ಅದೋ ಅಲ್ಲಿ ಕಾಣುವ ಮನೆಗೆ ನೀನು ಹೋಗು, ನಾನು ಈ ಮನೆಗೆ ಹೋಗುತ್ತೇನೆ ಎಂದು ಹೇಳಲು ಆ ಮನೆಯೊಳಕ್ಕೆ ಹೋದೆನು. ಆಗ ಅಲ್ಲಿ ಊಟಮಾಡುತ್ತ ಕುಳಿತಿದ್ದ ಐವತ್ತು-ಐವತ್ತೈದು ವರ್ಷ ಮುದುಕನೊಬ್ಬನು ನನ್ನನ್ನು ಕಂಡು ಯಾವ ಊರು ಎಂದು ಕೇಳಿದರು. ನಾನು ದಮ್ಮನಿಂಗಳವೆಂದು ಉತ್ತರ ಕೊಟ್ಟೆನು. ಯಾರು ನಿಮ್ಮ ತಂದೆ ಎಂದರು. ದಾಸಪ್ಪನೆಂದೆ. ಕೂಡಲೆ ಬಾ ಎಂದು ಕರೆದು ಕೈಕಾಲುಗಳಿಗೆ ನೀರುಕೊಟ್ಟು ಸಂಗಡವೇ ಕೂಡಿಸಿಕೊಂಡು ಊಟ ಮಾಡಿಸಿದರು. ನಂತರ ಬಂದ ವಿವರವನ್ನು ಕೇಳಿ, ಸಂತೋಷ. ನಮ್ಮ ಮನೆಯಲ್ಲೆ ಊಟ ಮಾಡಿಕೊಂಡು ಓದು ಎಂದು ತಾಕೀತುಮಾಡಿದರು. ಅಂದಿನಿಂದ ಶಾಲೆಗೆ ಸೇರಿ ವ್ಯಾಸಂಗ ಮುಂದುವರಿಸಿದೆ. ಹೀಗೆ ಒಂದೆರಡು ತಿಂಗಳು ಕಳೆದ ನಂತರ ಒಂದು ದಿನ ಪಾಠವನ್ನು ಬಾಯಿಗೆ ಬರುವಂತೆ ಘಟ್ಟಿಮಾಡಿರಲಿಲ್ಲ. ಉಪಾಧ್ಯಾಯರು ಇದಕ್ಕಾಗಿ ನನ್ನನ್ನು, ನನ್ನ ಜೊತೆಗಾರನನ್ನು ಕಿವಿ ಹಿಡಿಸಿದರು. ನನ್ನ ಸ್ನೇಹಿತನು ಸ್ವಲ್ಪ ಹೊತ್ತಾದಮೇಲೆ ಸೊಂಟದ ನೋವನ್ನು ಸಹಿಸಲಾಗದೆ ಕೈಬಿಟ್ಟು ಮೇಲಕ್ಕೆದ್ದು ಹೇಳದೆ ಕೇಳದೆ ಕಾಲಿಗೆ ಬುದ್ದಿ ಹೇಳಿದನು. ಅಲ್ಲಿಗೆ ಅವನ ವ್ಯಾಸಂಗವೂ ಕೊನೆಗೊಂಡಿತು. ನಾನು ಮಾತ್ರ ಎಷ್ಟೇ ಕಷ್ಟವಾದರೂ ಮೇಲಕ್ಕೆ ಏಳಲೇ ಇಲ್ಲ. ಕಡೆಗೆ ಉಪಾಧ್ಯಾಯರೇ ಕಿವಿ ಬಿಡಿಸಿದರು. ಹೀಗೆ ಎರಡು ವರ್ಷಗಳು ಸುಸೂತ್ರವಾಗಿ ವ್ಯಾಸಂಗ ಮುಂದುವರಿಯಿತು. ನಾನಿದ್ದ ಮನೆಯಲ್ಲಿ ಎಲ್ಲರೂ ಪ್ರೀತಯಿಂದ ಕಾಣುತ್ತಿದ್ದರು. ಯಜಮಾನ್ ಜವರಪ್ಪ ಎಂಬುವರು ತಮ್ಮ ಮಗನೆಂದೆ ಭಾವಿಸಿದ್ದರು. ನೀರು ಹೊರುವುದು, ಬೆಟ್ಟಕ್ಕೆ ದನಗಳ ಕಾಯಲು ಹೋಗುವುದು ಮೊದಲಾದ ಎಲ್ಲಾ ಕೆಲಸಗಳನ್ನು ಸಮಯವಿದ್ದಾಗ ಮಾಡುತ್ತಿದ್ದೆ. ಹೆಚ್ಚೇಕೆ ಆ ಊರಿನವರೆಲ್ಲ ನನ್ನನ್ನು ಪ್ರೀತಿಸುತ್ತಿದ್ದರು. ಎರಡು ವರ್ಷಗಳು ಕಳೆದವು. ಅಷ್ಟರಲ್ಲಿ ಭಯಂಕರವಾದ ಬೆಂಕಿ ಕಾಯಿಲೆಯು(Inflewenja) ತಲೆದೋರಿತು. ನಾನು ಯಾಕೊ ಊರಿಗೆ ಹೊರಟೆ. ನಡುದಾರಿಯಲ್ಲೆ ಜ್ವರ ಬಂದಿತು. ಅಷ್ಟರಲ್ಲೆ ಊರಿನಿಂದ ಬರುತ್ತಿದ್ದವರು, ಊರಿನಲ್ಲಿ ಒಂದೆರಡು ದಿನಗಳಲ್ಲಿ ಸತ್ತುಹೋದ ಐದು – ಆರು ಜನಗಳ ಹೆಸರನ್ನು ಹೇಳಿದರು. ಮನೆ ತಲುಪಿ ಹಾಸಿಗೆ ಹಿಡಿದೆನು. ಆದರೆ ಭಗವಂತನ ದಯೆಯಿಂದ ಮೂರು ನಾಲ್ಕು ದಿವಸಗಳಲ್ಲಿ ಪಾರಾದೆನು. ಆದರೇನೂ ನಮ್ಮ ತಂದೆ-ತಾಯಿಗಳಿಬ್ಬರೂ ಈ ಕಾಯಿಲೆ ಹೊಂದಿ ನಾಲ್ಕು ದಿವಸಗಳಲ್ಲೆ ಭಯಂಕರ ಮೃತ್ಯು ಬಾಯಿಗೆ ತುತ್ತಾದರು.(ಶನಿವಾರ) ಅಲ್ಲಿಗೆ ಪುನಃ ವ್ಯಾಸಂಗ ನಿಲ್ಲಿಸಬೇಕಾಗಿಬಂದಿತು. ಕೊನೆಗೆ ಮನೆಯಲ್ಲಿ ಚಿಕ್ಕಪ್ಪಂದಿರ ಪೋಷಣೆಯಲ್ಲಿ ನಿಂತು ಚಿಕ್ಕ ತಮ್ಮಂದಿರಿಬ್ಬರು, ಹಾಲುಗೂಸು ತಂಗಿಯೊಬ್ಬಳನ್ನು ನೋಡಿಕೊಂಡು ಮನೆಗೆಲಸದಲ್ಲಿ ತೊಡಗಿದೆನು. ಹೀಗೆ ಒಂದು ವರ್ಷ ಕಳೆಯಿತು. ಮುಂದಿನ ನನ್ನ ಎಳೆಯ ಬಳ್ಳಿಯ ಕುಡಿಯು ಮೊಟಕಾಗಿ ವಿಚಾರವೆ ಮರೆತು ಹೋಯಿತು. ಒಂದು ದಿನ ಹೆಬ್ಬಳ್ಳದ ಪಕ್ಕದಲ್ಲಿ ಕುರಿಗಳನ್ನು ಮೇಯಿಸುತ್ತ ನೀರಿನಲ್ಲಿ ಕುರಿಗಳನ್ನು ತೊಳೆಯಲು ಸಿದ್ದನಾಗುತ್ತಿದ್ದೆ. ಅದೇ ದಾರಿಯಲ್ಲಿ ನಮ್ಮ ಸೋದರತ್ತೆ ಗಂಡ ಶಂಭಯ್ಯನು ಬಂದು ‘ಓ…ಹೋ…! ಆಗಲೆ ಓದಿ ಪಾಸು ಮಾಡಿ ಆಯಿತೆ’ ಎಂದು ಹಾಸ್ಯ ಮಾಡಿದನು. ಕೂಡಲೆ ನನ್ನ ಮೈ ಬೆವರಿತು. ಸಹಿಸಲಾಗದ ಸಂಕಟ ಉಂಟಾಯಿತು. ಆತನು ಮುಂದಕ್ಕೆ ಹೋದನಂತರ ಕುರಿಗಳನ್ನು ನೀರಿನಲ್ಲಿ ಈಜು ಹಾಕಿ ಮೇಯಲು ಬಿಟ್ಟು ಒಂದು ಮಾವಿನ ಮರದಡಿ ಕುಳೀತು ಬಹಳ ಹೊತ್ತು ಯೋಚಿಸಿ ಕಡೆಗೆ ಏನಾದರೂ ಆಗಲಿ ಮುಂದೆ ಓದಿಯೇ ಓದಬೇಕೆಂದು ಹಠ ಮಾಡಿದೆನು. ಹಾಗೆಯೆ ಮೂರು ದಿನ ಕಳೆದ ನಂತರ ಉಪಾಧ್ಯಾಯರು ಶ್ರವಣಬೆಳಗೊಳದಿಂದ ನನ್ನನ್ನು ಕರೆಯಲು ಒಬ್ಬ ವಿದ್ಯಾರ್ಥಿಯನ್ನು ಕಳುಹಿಸಿದರು. ಪುನಃ ಅದೇ ಶಾಲೆಗೆ ಸೇರಿ ವ್ಯಾಸಂಗ ಮುಂದುವರಿಸಿದೆನು. ಇಂದು ಪ್ರತಿ ದಿನವೂ ಒಂದು ವರ್ಷದವರೆಗೂ ಮೂರು ಮೈಲಿದೂರ ನಮ್ಮೂರಿನಿಂದಲೇ ಹೋಗಿ ಬರುತ್ತಿದ್ದೆನು. ಸಂಜೆ ಹಿಂದಿರುಗಿ ಬರುವಾಗ ಕಣುಗಲು ಹೂವಿನ ಕಡ್ಡಿಗಳನ್ನು ಕೊಯ್ದು ತಂದು ದೇವರ ಪೂಜೆಗೆ ಹೂವಾಗಲೆಂದು ನಮ್ಮೂರ ನೀರು ಬಾವಿಯ ಹತ್ತಿರ ಹಳ್ಳದ ದಡದುದ್ದಕ್ಕೂ ನೆಡುತ್ತಿದ್ದೆನು. ಮಧ್ಯೆ ಇರುವ ಕೊತ್ತನಗಟ್ಟವೆಂಬ ಊರಿನ ದಕ್ಷಿಣ ದಿಕ್ಕಿನಲ್ಲಿ ಶ್ರವಣಬೆಳಗೊಳದ ಸಂತೆಗೆ ಹೋಗಿಬರುವವರು ಒಬ್ಬರ ಸಹಾಯವಿಲ್ಲದೆ ತಲೆ ಹೊರೆಯನ್ನು ಇಳಿಸಿಕೊಂಡು ನೆತ್ತಿ ಆರಿಸಿಕೊಳ್ಳಲು ಯಾರೊ ಧರ್ಮಾತ್ಮರು ತಲೆಹೊರೆ ಕಲ್ಲನ್ನು ನೆಡಿಸಿದ್ದರು. ಒಂದು ದಿನ ಬೇರೊಬ್ಬರನ್ನು ಇದೇನೆಂದು ಕೇಳಿದೆನು. ಈ ಕಲ್ಲಿನ ಪ್ರಯೋಜನವನ್ನು ಹೇಳಿದರು. ಆ ದಿನದಿಂದ ಹೋಗುವಾಗಲೂ ಆ ಕಲ್ಲನ್ನು ಮುಟ್ಟಿ ನಾನು ದೊಡ್ಡವನಾದಾಗ ಹೀಗೊಂದು ಮಾಡಿಸುತ್ತೇನೆಂದು ಹೋಗುತ್ತಿದ್ದೆನು. ಬರುವಾಗಲೂ ಹೀಗೆಯೆ ಮಾಡುತ್ತಿದ್ದೆನು. ಇದೇ ರೀತಿ ಮುಂದುವರಿಯುತ್ತಿದ್ದಿತು. ಮಹರಾಜವರ್ಧತಿಯು ಮೂರು ದಿನಗಳಿತ್ತು. ವರ್ಧತಿಗೆ ಸಾಮಾನುಗಳನ್ನು ತರಲು ತಮ್ಮೂರಾದ ಹಿರಿಸಾವೆಗೆ ಕರೆದುಕೊಂಡು ಹೊರಟರು. ಉಪಾಧ್ಯಾಯರು ಕಡುಕೋಪಿಗಳು, ದಯಾಹೀನರು, ದಾಕ್ಷಣ್ಯಹೀನರು, ಸಂಕುಚಿತ ಮನಸ್ಸು, ಕೀಳು ಜಾತಿಯವರನ್ನು ಕಂಡರೆ ಬಹಳ ಭೇದ ನಮ್ಮ ಅಭಿವೃದ್ದಿ ಕಂಡರೆ ಬಹಳ ಹೊಟ್ಟೆಕಿಚ್ಚುಪಡುತ್ತಿದ್ದರು. ಸಾಲದುದಕ್ಕೆ ಬಹಳ ಜಂಬಗಾರಿಕೆ. ನಾವು ಕೀಳು ಜನರಾದ್ದರಿಂದ ನಮ್ಮನ್ನು ಬಹಳ ಕೀಳಾಗಿ ಕಾಣುತ್ತಿದ್ದರು. ಇಂಥವರ ಸಂಗಡ ಹೋಗುವಾಗ ಮೂತ್ರ ವಿಸರ್ಜನೆ ಮಾಡುವಂತಾಯಿತು. ನಾಲ್ಕು ಮೈಲು ಕಳೆದ ನಂತರ ಮೂರು ಮೈಲು ದೂರ ತಡೆದು ತಡೆದು ಕಡೆಗೆ ಅಲ್ಲೊಂದು ಭೂಕದರಂಗಸ್ವಾಮಿ ಬೆಟ್ಟ. ಅದರ ಪೂರ್ವಕ್ಕೆ ಎರಡು ಫರ್ಲಾಗು ದೂರದಲ್ಲಿ ಮಹರ್ನೌಮಿ ಮಂಟಪವೆಂಬ ಒಂದು ಕಲ್ಲು ಮಂಟಪವಿದೆ. ಅದು ಇನ್ನೂ ಮೂರು ಫಲಾಂಗು ದೂರದಲ್ಲಿ ಕಾಣುತ್ತಿದ್ದ ಹಾಗೆಯೇ ಅದೋ ಅಲ್ಲಿ ಮುಂದೆ ಕಾಣುವ ಊರಿಗೆ (ಹೆಗಡಿಹಳ್ಳಿ) ಈ ದಿನ ಶ್ರವಣಬೆಳಗೊಳದಿಂದ ಮದುವೆ ಗಂಡು ಹೋಗಿದೆ. ನೀನು ರಾತ್ರಿ ಅಲ್ಲಿದ್ದು ಬೆಳಿಗ್ಗೆ ಎದ್ದು ಹಿರಿಸಾವೆಗೆ ಬಾ ಎಂದು ಹೇಳಿ ಬೇರೆ ದಾರಿ ಹಿಡಿದು ತಮ್ಮೂರಿಗೆ ಹೊರಟರು. ಅವರು ಸ್ವಲ್ಪ ದೂರ ಹೋಗಿ ಕಣ್ಮರೆಯಾದರು. ಬಹಳ ಹೊತ್ತಿನಿಂದಲೂ ತಡೆದಿದ್ದ ಮೂತ್ರ ವಿಸರ್ಜನೆ ಮಾಡಿದೆನು.

ನಂತರ ಹೆಗಡಿಹಳ್ಳಿಯ ದಾರಿ ಹಿಡಿದು ಹೊರಟೆನು. ಸ್ವಲ್ಪ ದೂರದಲ್ಲೆ ಮಂಟಪ ಸಿಕ್ಕಿತು. ಸುತ್ತಲೂ ಮರಮಂಡಿಗಳಿಂದ ಕೂಡಿದ ನಿರ್ಜನ ಪ್ರದೇಶ. ಆಗಲೇ ಸೂರ್ಯನು ಪಶ್ಚಿಮಾಂಬುಧಿಯಲ್ಲಿ ಇನ್ನೇನು ಮುಳುಗುವುದರಲ್ಲಿದ್ದ. ಹುಡುಗರು ದನಗಳೊಂದಿಗೆ ಮನೆ ಸೇರುವುದರಲ್ಲಿದ್ದರು. ಚಂದ್ರನಾಗಲೇ ಪೂರ್ವದಲ್ಲಿ ಒಂದು ಕಾಳು ಪ್ರಮಾಣದಲ್ಲಿ ಮಸುಕಾಗಿ ಕಾಣುತ್ತಿತ್ತು. ಹಕ್ಕಿ-ಪಕ್ಷಿಗಳು ಹೊಟ್ಟೆ ತುಂಬಿಸಿಕೊಂಡು ತಮ್ಮ ಮನೆಗಳಿಗೆ ಗುಟುಕು ತೆಗೆದುಕೊಂಡು ತಮ್ಮ ಊರುಗಳಿಗೆ ಹಾರಿ ಹೋಗುತ್ತಿದ್ದವು. ಸಂಜೆಯ ತಂಗಾಳಿಯು ಮನಸಿಗೆ ಉಲ್ಲಾಸವಾಗುವಂತೆ ಮೆಲ್ಲನೆ ಬೀಸುತ್ತಿತ್ತು. ಅಲ್ಲಿದ್ದ ಮಂಟದೊಳಗಡೆ ಹತ್ತಿ ಕುಳಿತುಕೊಂಡೆನು. ಮಗ್ನನಾಗಿ ಕುಳಿತು ಕಣ್ಣು ಮುಚ್ಚಿ ಭಕ್ತಿಯಿಂದ ದೈವ ಧ್ಯಾನ ಪರವಶನಾಗಿ ಕುಳಿತೆನು. ಹತ್ತು ನಿಮಿಷಗಳ ನಂತರ ಕಣ್ಣುಬಿಟ್ಟು ನೋಡಿದೆನು. ಮುಂದೆ ದೇವರಿರಲಿಲ್ಲ. ಬಯಲಾಕಾಶ ಮಬ್ಬುಗತ್ತಲೆಯಾಗಲೆ ಮುಸುಕುತ್ತಿತ್ತು. ಅಲ್ಲೊಂದು ಇಲ್ಲೊಂದು ತಾರೆಗಳು ಸಾಧಾರಣವಾಗಿ ಮೀನುಗುತ್ತಿದ್ದವು. ಅಯ್ಯೊ ನಾನಿನ್ನು ಚಿಕ್ಕವನೆಂದು ದೇವರು ನನಗೆ ದರ್ಶನಕೊಡಲಿಲ್ಲವೆಂದು ವ್ಯಾಕುಲಪಟ್ಟುಕೊಂಡು ಮುಂದಿನ ಊರನ್ನು ಸೇರಿದೆನು. ಬೆಳಿಗ್ಗೆ ಉಪಾಧ್ಯಾಯರ ಸಂಗಡ ಹಿಂದಿರುಗಿದೆನು. ಇಂದು ದೂರ ಪ್ರದೇಶಕ್ಕೆ ಹೋಗಿ ಬರಬೇಕೆಂಬುವ ಯೋಚನೆ ಹತ್ತಿತು. ಹಗಲಿರುಳು ಇದೇ ಯೋಚನೆಯಾಯಿತು. ಆದರೆ ಸಹಾಯ ಶೂನ್ಯ. ಇಷ್ಟರಲ್ಲೆ ಪ್ರೈಮರಿ ಶಾಲಾ ವ್ಯಾಸಂಗಮುಗಿದು ಮಾಧ್ಯಮಿಕ ಶಾಲಾ ವ್ಯಾಸಂಗ ಮಾಡಲು ಅರ್ಹತೆ ಹೊಂದಿದ್ದೆನು. ಆಗ ಮೈಸೂರಿನಲ್ಲೊಂದು ಪಂಚಮ ಬೋರ್ಡಿಗ್ ಮಿಡ್ಲಸ್ಕೂಲು ಏರ್ಪಾಡಾಗಿ ೭-೮ ವರ್ಷಗಳಾಗಿದ್ದಿತು. ಈಗ ಎರಡು-ಮೂರು ವರ್ಷಗಳಲ್ಲಿ ತುಮಕೂರಿನಲ್ಲೊಂದು ಏರ್ಪಡಿಸಿದೆ ಎಂದು ಅಲ್ಲಿ ಅನ್ನ, ವಸ್ತ್ರ, ಪುಸ್ತಕವೆಲ್ಲ ಉಚಿತವಾಗಿ ಸರ್ಕಾರದವರೆ ಒದಗಿಸಿಕೊಟ್ಟು ವಿದ್ಯದಾನ ಮಾಡುತ್ತಿದ್ದಾರೆ ಎಂಬ ವಿಚಾರ ನನಗೆ ಹೇಗೋ ಗೊತ್ತಾಗಿತ್ತು. ಶಾಲೆ ಏರ್ಪಡಿಸಿದ್ದ ದಂಡಿನಪುಟ್ಟಪ್ಪನೆಂಬುವವರು ಈಗ ಶ್ರೀರಂಗಪಟ್ಟಣದಲ್ಲಿ ಅಡ್ವೊಕೇಟ್ ಆಗಿರುವ ಮ|| ಶ್ರೀರಂಗಚಾರ್ಯರೆಂಬುವರು ಆಗ ಅಲ್ಲಿನ ಮಾಧ್ಯಮಿಕ ಶಾಲಾ ಮುಖ್ಯೋಪಧ್ಯಾಯರಾಗಿದ್ದರು. ಅವರನ್ನು ಹೋಗಿ ನಾನು ಮತ್ತು ಇನ್ನೊಬ್ಬ ಸಹಪಾಟಿ ಇಬ್ಬರೂ ಹೋಗಿ ನೋಡಿ, ತುಮಕೂರಿಗೆ ಹೋಗಿ ವ್ಯಾಸಂಗ ಮಾಡಲು ಸಹಾಯ ಮಾಡಬೇಕೆಂದು ಬೇಡಿದೆವು. ಉದಾರಿಗಳು, ಧರ್ಮಾತ್ಮರು, ಕೀಳು ಜನರ ಸೇವೆ ಜನಾಂಗದ ಸೇವೆ (To Serve the Depressed classes is to serve the Nation) ಎಂಬ ತತ್ತ್ವವನ್ನರಿತವರಾದ ಮುಖ್ಯೋಪಧ್ಯಾಯರು ನಮಗೆ ಪ್ರೋತ್ಸಾಹವಿತ್ತು ಆಶೀರ್ವದಿಸಿ ಶಿಫಾರಸು ಪತ್ರವನ್ನು ಕೊಟ್ಟರು. ಆಗ ಸಂತೋಷದಿಂದ ಹಿಗ್ಗಿ ನನ್ನೂರಿಗೆ ಬಂದು ವಿಚಾರ ಯಾರಿಗೂ ತಿಳಿಸದೆ ಗುಟ್ಟಿನಲ್ಲೆ ಇದ್ದೆನು. ನಮ್ಮ ಚಿಕ್ಕ ತಂದೆ ಕಾಳಪ್ಪನೆಂಬುವವರಿಂದ ಚೆನ್ನರಾಯಪಟ್ಟಣಕ್ಕೆ ಉಪಾಧ್ಯಾಯರೊಡನೆ ಸ್ಕಾಲರ್ ಶಿಪ್ ತರಲು ಹೋಗಬೇಕೆಂದು ಪ್ರಯಾಣದ ಖರ್ಚಿಗಾಗಿ ಒಂದೆರಡು ರೂಪಾಯಿಗಳನ್ನು ಪಡೆದು ಬೆಳಗೊಳಕ್ಕೆ ಬಂದು ಬರಬೇಕಾಗಿದ್ದ ವೇತನದ ಹತ್ತು ರೂಪಾಯಿಗಳಿಗೆ ಲಂಚವಾಗಿ ತೆಗೆದುಕೊಳ್ಳಿರೆಂದು, ಗುರುಕಾಣಿಕೆ ಕೊಳ್ಳಿರೆಂದು ರುಜುಮಾಡಿ ಕೊಟ್ಟು ಆ ನೀಚ ಉಪಾಧ್ಯಾಯರಿಂದ ಅಪ್ಪಣೆ ಚೀಟಿ ಪಡೆದು ಮೂರು ಮೈಲು ದೂರದ ಚಲ್ಯಕ್ಕೆ ಬಂದೆನು. ಆ ರಾತ್ರಿ ಅಲ್ಲೆ ತಂಗಿದ್ದು ಅಲ್ಲಿ ಪ್ರಯಾಣಕ್ಕೆ ತಿಂಡಿ ಮಾಡಿಸಿಕೊಂಡು ಮಾರನೆ ದಿನ ಮಧ್ಯಾಹ್ನ ಎರಡು ಗಂಟೆ ತುಮಕೂರಿಗೆ ಪ್ರಯಾಣ ಬೆಳೆಸಿದೆವು. ನನ್ನ ಸಹಪಾಠಿ, ನಾನು ಇಬ್ಬರೂ ನನ್ನ ಸಂಗಡ ನನ್ನ ಸಹಪಾಠಿಯ ತಂದೆ ಸಹಾಯದಿಂದ ತುಮಕೂರಿಗೆ ಪ್ರಯಾಣ ಬೆಳೆಸಿದೆ. ನಮ್ಮ ಮನೆಯವರಿಗೆ ಈ ವಿಚಾರ ತಿಳಿದು ಯಾರಾದರು ಹಿಂಬಾಲಿಸಿಯರೆಂಬ ಭಯದಿಂದ ಅಡಿಗಡಿಗೆ ದಾರಿಯುದ್ದಕ್ಕೂ ನಿಂತು ಹಿಂತಿರುಗಿ ನೋಡುವುದು, ಮುಂದಕ್ಕೆ ಹೋಗುವುದು. ಹೀಗೆ ಮಾಡಿ ಸಂಜೆ ಏಳು ಗಂಟೆಗೆ ಸುಮಾರು ಹದಿನೈದು ಮೈಲು ದೂರದ ಚುಂಚನಗಿರಿಯ ಪಕ್ಕದಲ್ಲಿದ್ದ ಮಂಚೇನಹಳ್ಳಿ ಎಂಬಲ್ಲಿಗೆ ಹೋಗಿ ತಂಗಿಕೊಂಡೆವು. ಆ ದಿನ ರಾತ್ರಿ ಅಲ್ಲಿದ್ದು ಬೆಳಗಿನ ಜಾವ ಮುಂದೆ ಪ್ರಯಾಣ ಬೆಳೆಸಿದೆವು. ಜೀವ ಜ್ಯೋತಿಗೆ ಬೆಂಬಲವಾಗಿರುವಂತೆ ಭಾಸ್ಕರನು ತನ್ನ ಎಳೆಯ ರಶ್ಮಿಗಳನ್ನು ನಾಡಮೇಲೆಲ್ಲ ಪಸರಿಸಿದವನು. ತಂಗಾಳಿಯು ಮನಸ್ಸಿಗೆ ಹರ್ಷವನ್ನುಂಟು ಮಾಡಿದ್ದಿತು. ಅಲ್ಲೊಂದು ವಿಶಾಲವಾದ ಬೋರೆ ಹಳ್ಳದಿಂದ ಎರಡು ನದಿಗಳು ಮುಂದೆ ಎಡದಿಂದ ಬಲಕ್ಕೆ ಹೋಗುವುದನ್ನು ನೋಡಿ ಸಂಗಡವಿದ್ದವರಿಗೆ ‘ಅದೋ ನೋಡಿ ನದಿ!’ ಎಂದು ತೋರಿದೆನು. ಎಷ್ಟು ನೋಡಿದರೂ ಅವರಿಗೆ ಕಾಣಿಸಲೇ ಇಲ್ಲ. ಇದಲ್ಲದೆ ದಾರಿಯುದ್ದಕ್ಕೂ ಕೆಲವು ಶುಭ ಶಕುನಗಳಾದವು. ಅವೊಂದನ್ನೂ ಅವರು ಅರಿಯರು. ಬೇಸಿಗೆಯು ಇನ್ನೂ ಕಳೆದಿರಲಿಲ್ಲ. ವಸಂತ ಋತುವಿನ ಕೊನೆಯಂಕವಿನ್ನು ಮುಗಿಯದೆ ಪ್ರಯಾಣಿಕರ ಮನಸ್ಸಿಗೆ ಆನಂದವನ್ನುಂಟು ಮಾಡುತ್ತಿತ್ತು. ದಾರಿಯುದ್ದಕ್ಕೂ ಮಾವು, ನೆರಳೆ ಹಣ್ಣುಗಳು ಚೆಲ್ಲಾಡುತ್ತಿದ್ದವು. ದನಕಾಯುವ ಹುಡುಗರು ಆಟವಾಡುತ್ತ, ಮಾವು, ನೆರಳೆ ಹಣ್ಣುಗಳನ್ನು ತಿನ್ನುತ್ತ ಆನಂದವಾಗಿದ್ದರು. ಈ ನೋಟವನ್ನು ನೋಡಿ ನಾನೂ ಹೀಗೆಯೇ ಆಡುತ್ತಿದ್ದೆನೆಂದು ನೆನಪಾಯಿತು. ಆದರೂ ದೂರದ ಪ್ರಯಾಣ ಮಾರ್ಗಾಯಾಸ, ಬಿಸಿಲು-ಬೇಗೆಯಿಂದ ಬಳಲಿ ಸೂರ್ಯನಿನ್ನು ಇದ್ದ ಹಾಗೆಯೇ ನಿಟ್ಟೂರು ಸ್ಟೇಷನ್ ಬಳಿ ರೈಲು ರಸ್ತೆಯನ್ನು ಮುಟ್ಟಿದೆವು. ಆದರೇನು ರೈಲು ಹೋಗಿ ಹತ್ತು ನಿಮಿಷವಾಯಿತೆಂದು ಗೊತ್ತಾಯಿತು. ಪುನಃ ಐದು ಮೈಲಿಗಳನ್ನು ಗುಬ್ಬಿಗೆ ನಡೆಯಬೇಕಾಯಿತು. ಎಂದೂ ಕಾಣದ ನನಗೆ ರೈಲು ಕಂಬಿಗಳನ್ನು ನೋಡಿ ಕಬ್ಬಿಣವನ್ನು ಉದ್ದಕ್ಕೂ ಹೀಗೆಯೇ ಹಾಕಿರುವರೆ ಅದೆನು ಕತ್ತಾಳೆ ಮರದ ಕಾಯಿಗಳಂತಿವೆ. ಎಷ್ಟೊಂದು ತಂತಿ ಬಿಟ್ಟಿದ್ದಾರೆಂದು ನೋಡಿ ಅತ್ಯಾಶ್ಚರ್ಯಪಟ್ಟು ಆಯಾಸವೆಲ್ಲ ಮರೆತೇ ಹೋಯಿತು. ಕತ್ತಲಾಗುವಷ್ಟರಲ್ಲಿ ಗುಬ್ಬಿ ರೈಲ್ವೆ ಸ್ಟೇಷನನ್ನು ತಲುಪಿದೆವು. ಅಲ್ಲಿ ತಿಂಡಿ ತಿಂದು ನೀರು ಕುಡಿದು ಮಲಗಿದೆವು. ಬೆಳಗಿನ ಜಾವದ ತನಕ ಯಾವ ರೈಲು ಬಾರದೆ ಇದ್ದುದರಿಂದಲೂ ಬೇಸಿಗೆ ಬಿಸಿಲಿನ ತಾಪದಿಂದಲೂ, ಮಾರ್ಗಾನೂಸದಿಂದಲೂ ಬಳಲಿದ್ದ ಸಂಗಡಿಗರೇನೊ ನಿದ್ರಿಸಿದರು. ಇನ್ನು ರೈಲು ಹೇಗಿದೆ ಎಂಬುದನ್ನು ಅರಿಯದೆಂದು ನನಗೆ ಮಾತ್ರ ನೋಡಬೇಕೆನ್ನುವ ಕುತೂಹಲದಿಂದ ಸರಿಯಾಗಿ ನಿದ್ರೆ ಹತ್ತಲೇ ಇಲ್ಲ. ಬೆಳಗಿನ ನಾಲ್ಕು ಗಂಟೆ ಆಗಿರಬಹುದು, ಆಗಷ್ಟೆ ಬಲ್ಬ್ ಹತ್ತಿ. ಠಣ್ …ಠಣ್ …ಎಂದು ಭಾರಿಸಿದ ಗಂಟೆ ಶಬ್ಧ ಕೇಳಿಸಿತು. ಕೂಡಲೇ ಎಚ್ಚರವಾಯಿತು. ನನ್ನ ಜೊತೆಗಾರರನನ್ನು ಆಗಲೆ ಕೂಗಿದೆನು. ಎದ್ದು ಕುಳಿತೆವು. ಮುದುಕನಿಗೇನೊ ಕಾಪಿ ತೋಟಗಳಿಗೆ ಹೊಟ್ಟೆ ಪಾಡಿಗಾಗಿ ಹೋಗಿ ರೈಲು ಮೋಟಾರು ಪ್ರಯಾಣ, ದೊಡ್ಡ ಪಟ್ಟಣಗಳ ವಿಚಾರ ಸ್ವಲ್ಪ ಮಟ್ಟಿಗೆ ಗೊತ್ತಾಗಿತ್ತು. ಹುಷಾರು ರೈಲು ಇನ್ನೇನು ಬಂದುಬಿಟ್ಟಿತು. ಬೇಗ ಹತ್ತಿ ಕುಳಿತುಕೊಳ್ಳಬೇಕು. ಇಲ್ಲದಿದ್ದರೆ ಹೊರಟು ಹೋಗಿಬಿಡುತ್ತೆ. ಸಾಮಾನು ಬಟ್ಟೆಬರೆಗಳನ್ನು ಹುಷಾರಾಗಿ ನೋಡಿಕೊಳ್ಳಬೇಕು. ಕಳ್ಳರು ಕದಿಯುತ್ತಾರೆಂದು ಎಚ್ಚರಿಕೆ ಹೇಳಿದರು. ಟಿಕೇಟನ್ನು ತೆಗೆದುಕೊಂಡಾಯಿತು. ಆ ಮುದುಕನು ಬಟ್ಟೆಗಳೆಲ್ಲವನ್ನು ಬೆನ್ನಿಗೆ ಬಿಗಿದು, ಒಂದು ನಿಕ್ಕರೂ, ಒಂದು ಬನಿಯನ್ ಮಾತ್ರ ತೊಟ್ಟುಕೊಂಡು, ಕೈಲೊಂದು ಕೋಲೂರಿಕೊಂಡು ಯುದ್ಧಕ್ಕೆ ಹೋಗುವ ವೀರನಂತೆ ನಿಂತಿದ್ದನು. ನಮ್ಮ ಮುದುಕನು ಅದೋ ರೈಲು ಬಂದಿತು. ಆಗಲೆ ರೈಲು ಶಬ್ಧ ಕೇಳಿಸುತ್ತಿದೆ. ಹುಷಾರು ಎಂದು ಹೇಳಿದನು. ರೈಲು ಎಂಜಿನ್ ದೀಪ ಬೆಳಕು ದೂರದಿಂದಲೇ ಕಂಡಿತು. ನನ್ನ ಮೈ ಬೆವರಿತು. ಕೈಕಾಲು ನಡುಗ ಹತ್ತಿದವು. ಆದರೂ ಧೈರ್ಯದಿಂದ ನಿಂತೆಬಿಟ್ಟೆನು. ರೈಲು ಬಂದು ಸ್ಟೇಷನಲ್ಲಿ ನಿಂತುಬಿಟ್ಟಿತು. ಕೂಡಲೆ ಎಲ್ಲಾ ರೈಲು ಹತ್ತಿದೆವು. ಎಲ್ಲರು ಬೆಂಚು ಮೇಲೆ ಕುಳಿತಿದ್ದರು ನಾನು ಕೆಳಭಾಗದಲ್ಲೆ ಕುಳಿತುಕೊಂಡೆ. ಬೆಂಚಿನ ಮೇಲೆ ಇನ್ನೂ ಖಾಲಿ ಜಾಗವಿತ್ತು. ಅಲ್ಲಿದ್ದವರೆಲ್ಲರು ಮೇಲೆ ಕುಳಿತುಕೊಳ್ಳಲು ಹೇಳಿದರು. ನಾವು ಕೀಳುಜಾತಿಯವರು ಕೆಳಗಡೆಯೆ ಕೂತುಕೊಳ್ಳಬೇಕು. ಮೇಲೆ ಕುಳಿತಿರುವವರೆಲ್ಲ ಮೇಲು ಜಾತಿಯವರು. ನಾವು ಅವರ ಸರಿಸಮ ಕೂಡಬಾರದೆಂದು ಹೆದರಿ ಕೆಳಗಡೆಯೇ ಕುಳಿತುಕೊಂಡೆವು. ರೈಲು ಹೊರಟಿತು. ಅರ್ಧ ಗಂಟೆಯಲ್ಲಿ ತುಮಕೂರು ರೈಲ್ವೆ ಸ್ಟೇಷ್ಟನ್ನಿನಲ್ಲಿ ನಿಂತಿತು. ಅಲ್ಲಿ ನಾವಿಳಿದೆವು. ಹೊಸ ಸ್ಥಳ. ಪರಿಚಯಯಸ್ಥರಾರೂ ಇರಲಿಲ್ಲ. ಇನ್ನೂ ಐದು ಗಂಟೆ ಕತ್ತಲು. ಬೆಳಗಾಗುವ ತನಕ ಅಲ್ಲಿಯೇ ಕಾಲ ಕಳೆದೆವು. ಬೆಳಗಾಗುತ್ತಲೆ ಪಟ್ಟಣದ ಕಡೆ ಹೊರಟೆವು. ಇಂತಹ ಪಟ್ಟಣವನ್ನು ನೋಡಿದುದು ಇದೆ ಮೊದಲನೆಯ ಸಾರಿ ಆದುದರಿಂದ ಆಗ ನನಗಾದ ಆನಂದವನ್ನು ಇಲ್ಲಿ ಬಗೆಯಲಾರೆ. ಅಂದು ದೊಡ್ಡ ಹಬ್ಬ. ದೊಡ್ಡ ದೊಡ್ಡ ಬೀದಿಗಳಲ್ಲಿ ನಡೆದು ಕೆರೆ ಹತ್ತಿರ ಹೊರಟೆವು. ಅಲ್ಲಿ ನಿತ್ಯ ಕರ್ಮಗಳನ್ನು ತೀರಿಸಿಕೊಂಡು, ಕೈಕಾಲು ಮುಖ ತೊಳೆದು ಹಿಂದಿರುಗಿ ಬೋರ್ಡಿಗ್ ಹೋಮನ್ನು ಕೇಳುತ್ತಾ ಕೇಳುತ್ತಾ ಬಂದೆವು ಅಲ್ಲೊಬ್ಬ ಜಾಡು ಮಾಲಿ ಗುಡಿಸುತ್ತ ನಿಂತಿದ್ದನು. ಅಯ್ಯ ಪಂಚಮ ಬೋರ್ಡಿಂಗ್ ಸ್ಕೂಲ್ ಎಲ್ಲಿದೆ’ ಎಂದು ಕೇಳಿದನು ನಮ್ಮ ಮುದುಕ. ‘ಅದೋ ಅಲ್ಲಿ ಕಾಣುತ್ತದೆ. ನಾನೂ ಅಲ್ಲೇ ಕೆಲಸ ಮಾಡುವವನೆ’ ಎಂದು ತೋರಿಸಿದನು. ಬಹಳ ಸುಲಭವಾಗಿ ಸಿಕ್ಕಿದ್ದು ಸಂತೋಷವಾಯಿತು. ಅಲ್ಲಿಗೆ ಹೋಗಿ ಗೇಟಿನಿಂದ ಹೊರಗೆ ನಿಂತುಕೊಂಡೆವು. ಬೆಳಗಿನ ಹೊತ್ತು ಇನ್ನೂ ಹೆಡ್ ಮಾಸ್ಟರ್ ಬಂದಿರಲಿಲ್ಲ. ಹೆಡ್ ಮಾಸ್ಟರರೆ ಅದರ ಮುಖ್ಯಾಧಿಕಾರಿಗಳು.(Secretary) ಗೇಟಿನಿಂದ ಒಳಗೆ ಎದುರಿನಲ್ಲೆ ಮಧ್ಯ ಹಾಲಿನಲ್ಲಿ ದರ್ಜಿ ಕೆಲಸ ಕಲಿಯುವ ಹುಡುಗರು ಬಟ್ಟೆ ಹೊಲಿಯುತ್ತಿದ್ದರು. ಅವರು ಬಂದು ನಮ್ಮನ್ನು ನೋಡಿ ‘ನೀವು ಯಾವೂರು, ಇಲ್ಲೇಕೆ ಬಂದಿರಿ’ ಎಂದು ಕೇಳಿದರು. ವಿಚಾರವನ್ನು ತಿಳಿಸಿದರು. ಇಲ್ಲಿಯೇ ನಿಂತುಕೊಳ್ಳಿ ಅದೋ ಉತ್ತರದ ಆದಿಯಲ್ಲಿ ಈಗ ಹೆಡ್ ಮಾಸ್ಟರ್ ಬರುತ್ತಾರೆ. ಅವರು ನಿಮ್ಮ ಹತ್ತಿರ ಬಂದಾಗ ಕೈ ಮುಗಿಯಿರಿ. ಆನಂತರ ಮುಂದಿನ ವಿಚಾರವನ್ನು ಕೇಳುತ್ತಾರೆಂದು ಹೇಳಿದರು. ಹುಡುಗರೆಲ್ಲರಿಗೂ ಮೂರು ನಾಮ, ಶುಭ್ರ ಬಟ್ಟೆ. ಇವುಗಳನ್ನು ನೋಡಿ ನೀವು ಯಾವ ಮತದವರೆಂದು ಕೇಳಿಬಿಟ್ಟ. ನಾವು ಪಂಚಮರೆಂದು ಹೇಳಿದರು. ಆಶ್ಚರ್ಯವಾಯಿತು. ಸ್ವಲ್ಪ ಹೊತ್ತಿನಲ್ಲೆ ಹೆಡ್ ಮಾಸ್ಟರ್ ಬಂದರು. ಹುಡುಗರು ಬಂದು ‘ಅದೋ ಅಲ್ಲಿ ಬರುವವರೆ ಹೆಡ್ ಮಾಸ್ಟರೆಂದು ತೋರಿಸಿ ಒಳಗೆ ಹೋದರು. ನಮ್ಮ ಸಮೀಪಕ್ಕೆ ಬಂದ ಕೂಡಲೆ, ಮೂವರೂ ಕೈಕಾಲು ನೀಡಿ ಭೂಮಿಯ ಮೇಲೆ ಬಿದ್ದು ಉದ್ದಕ್ಕೂ ನಮಸ್ಕರಿಸಿದೆವು. ನಿಂತುಕೊಂಡು ಮೇಲಕ್ಕೆದ್ದಾಗ ‘ನೀವು ಯಾವ ಊರೆಂದು’ ಕೇಳಿದರು. ಮಾತನಾಡಲು ಬಾಯಿ ಬರದೆ ನಮ್ಮ ಹತ್ತಿರವಿದ್ದ ಶಿಫಾರಸು ಪತ್ರವನ್ನು ಕೊಟ್ಟೆವು. ನೋಡಿಕೊಂಡು ಒಳಗೆ ಕರೆದರು. ಒಳಗೆ ಹೋದ ಕೂಡಲೆ ಹುಡುಗರಿಗೆ ಹೇಳಿ ನಮ್ಮಿಬ್ಬರಿಗೂ ನಾಮ ಹಿಡಿಸಿದರು. ಆಗಲೇ ಹತ್ತೂವರೆ ಆಗಿತ್ತು, ಗಂಟೆ ಭಾರಿಸಿತು. ಕೈಗಾರಿಕೆ ತರಗತಿ ಬಿಟ್ಟಿತು. ಎಲ್ಲರು ಕೈಕಾಲು ತೊಳೆದು ಊಟಕ್ಕೆ ಹೊರಟರು. ನಮ್ಮನ್ನು ಕರೆದುಕೊಂಡು ಹೋಗಿ ಊಟ ಮಾಡಿಸಿದರು. ಶಾಲೆ ಪ್ರಾರಂಭವಾಯಿತು. ಹೆಡ್ ಮಾಸ್ಟರು ನಮ್ಮಿಬ್ಬರನ್ನು ಆಫಿಸ್ ರೂಮಿಗೆ ಕರೆದು ಮೊದಲು ಒಂದು ಪುಸ್ತಕವನ್ನು ಓದಿಸಿದರು. ಉಕ್ತ ಲೇಖನ ಬರೆಸಿದರು. ಕೊನೆಗೆ ಕಳೆಯುವ ಲೆಕ್ಕವೊಂದನ್ನು ಹಾಕಿಸಿದರು. ನಾನು ಸರಿಯಾಗಿ ಮಾಡಿದ್ದೆ. ಆದರೆ ಸ್ಲೇಟು ಅದಲು ಬದಲಾಗಿ ಅವರಿಗೆ ಗೊತ್ತಾಗದೆ ಪುನಃ ಅದೇ ಲೆಕ್ಕವನ್ನು ಕೊಟ್ಟರು. ಎರಡನೆ ಬಾರಿಯೂ ನಾನೇ ಲೆಕ್ಕವನ್ನು ಸರಿಯಾಗಿ ಮಾಡಿದೆ. ಆಗ ಕೂಡಲೆ ನನ್ನ ಹೆಸರನ್ನು ರಿಜಿಸ್ಟರಿಗೆ (೧೯೨೦ನೆಯ ಇಸವಿ ಏಪ್ರಿಲ್ -ಜೂನ್ ಮಧ್ಯಭಾಗದಲ್ಲಿನ ವರ್ಷ) ದಾಖಲು ಮಾಡಿಕೊಂಡರು. ನನ್ನ ಜೊತೆಗಾರನನ್ನು ‘ನೀನು ಮುಂದಿನ ವರ್ಷ ಚೆನ್ನಾಗಿ ಓದಿ ಬಾ. ಸೇರಿಸಿಕೊಳ್ಳುತ್ತೇವೆ’ ಎಂದು ಹಿಂದಕ್ಕೆ ಹೊರಡ ಹೇಳಿದರು. ಅವರು ಕಾಣದ ದೂರದ ದೇಶಕ್ಕೆ ಕರೆದುಕೊಂಡು ಹೋಗಿ ಒಬ್ಬನನ್ನೇ ಬಿಟ್ಟು ಬಂದಿರ? ಎಂದು ನಿಮ್ಮ ಮನೆಯವರು ಆಕ್ಷೇಪಣೆ ಮಾಡುತ್ತಾರೆ. ನೀನು ಇಲ್ಲಿಯೇ ಇರುವೆಯೋ, ಇಲ್ಲ ನಮ್ಮ ಸಂಗಡ ಬರುವೆಯ ಎಂದು ಕರೆದರು. ಇಲ್ಲ ಎಷ್ಟೇ ಕಷ್ಟ ಬಂದರು ಅದನ್ನು ಸಹಿಸಿಕೊಂಡು ಓದುವೆನಲ್ಲದೆ, ಹಿಂದಿರುಗಿ ಬರಲಾರೆನೆಂದು ಧೈರ್ಯವಾಗಿ ಹೇಳಿಬಿಟ್ಟೆನು. ಪಾಪ ಅವರು ಹೊರಟೇ ಬಿಟ್ಟರು. ನಾನು ಅವರನ್ನು ರೈಲಿಗೆ ಕೂಡಿಸಿ ಹೋಮಿಗೆ ಬಂದೆನು. ಹೊಸ ಸ್ಥಳ, ಹೊಸಬರು, ವಿಶೇಷ ತೆಲುಗು ಭಾಷೆ. ಭಾಷೆ ಕನ್ನಡವೇ ಸರಿ, ಆದರೆ ಅದೊಂದು ರೀತಿ. ಇದೆಲ್ಲವನ್ನು ನೋಡಿ ಮನಸ್ಸಿಗೆ ಬಹಳ ವ್ಯಸನವಾಯಿತು. ದಿಕ್ಕು ತೋಚದಂತಾಯಿತು. ಹೆಚ್ಚೇಕೆ ಊರಿಗೆ ಹಿಂದಿರುಗಬೇಕೆಂದು ಸಹ ಮನಸು ಮಾಡಿದೆನು. ಹೆಡ್ ಮಾಸ್ಟರು ಈ ವಿಚಾರವನ್ನು ತಿಳಿದು ನನ್ನನ್ನು ಹತ್ತಿರಕ್ಕೆ ಕರೆದು ಬೆನ್ನು ಸವರಿ ಸಂತೈಸಿ ಅವರು ನಮ್ಮೂರ ಹತ್ತಿರ ಹಳ್ಳಿಯವರಂತೆ ನಟಿಸಿ ಎರಡು-ಮೂರು ದಿನಗಳವರೆಗು ಕೊಬ್ಬರಿ-ಕಲ್ಲುಸಕ್ಕರೆ ಕೊಟ್ಟು ತಮ್ಮಂತೆ ನನ್ನ ಮನಸ್ಸನ್ನು ಸೆಳೆದುಬಿಡಲು ಎಲ್ಲವನ್ನು ಮರೆತು ನೆಲೆಯಾಗಿಯೇ ನಿಂತೆನು. ಕೂಡಲೆ ಪುಸ್ತಕ, ಬಟ್ಟೆಗಳನ್ನು ಕೊಟ್ಟರು. ಪುಷ್ಠಿಕರವಾದ ಊಟ, ಬಂಗಲೆಯ ವಾಸ, ವಿದ್ಯಾರ್ಥಿಗಳ ಕೂಟ ಇವೆಲ್ಲವೂ ನನ್ನ ಮನೋಬೇಸರವನ್ನು ತೊಡೆದು ಸಂತೋಷದಿಂದ ವ್ಯಾಸಂಗದಲ್ಲಿ ತೊಡಗಿಸುವಂತೆ ಮಾಡಿದವು. ಒಂದು ವಾರ ಕಳೆದ ಮೇಲೆ ಊರಿಗೆ ಒಂದು ಕಾಗದ ಬರೆದೆನು. ‘‘\|;ಟಿಞರಿ~ ರೂಪ ಚಿಕ್ಕಪ್ಪನವರಾದ ಹುಚ್ಚಪ್ಪನವರಿಗೆ ನಿಮ್ಮ ಬಾಲಕನ ನಮಸ್ಕಾರ. ನಾನು ಇಲ್ಲಿ ನಿಮ್ಮೆಲ್ಲರ ಆಶೀರ್ವಾದದ ಬಲದಿಂದಲೂ, ಭಗವಂತನ ಕೃಪೆಯಿಂದಲೂ ಕ್ಷೇಮವಾಗಿದ್ದೇನೆ. ನಿಮ್ಮೆಲ್ಲರ ಕ್ಷೇಮಕ್ಕೆ ಬರೆಯಬೇಕು. ನಾನು ಈಗ ತುಮಕೂರಿನಲ್ಲಿ ಪಂಚಮ ಬೋರ್ಡಿಗ್ ಸ್ಕೂಲಿಗೆ ಸೇರಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ಊರಿಂದ ಬರುವಾಗ ನಿಮ್ಮಗಳಾರಿಗೂ ಹೇಳದೆ, ಕೇಳದೆ ಕಳ್ಳತನದಿಂದ ಕದ್ದು ಹೋದೆನೆಂದು ನನ್ನ ಮೇಲೆ ಏನೂ ಕೋಪ ಮಾಡಿಕೊಳ್ಳದೆ, ನಿಮ್ಮ ಬಾಲಕನಾದ ನನ್ನ ತಪ್ಪನ್ನು ಕ್ಷಮಿಸಬೇಕೆಂದು ಬೇಡುತ್ತೇನೆ. ನಾನು ದಸರಾ ರಜಕ್ಕೆ ಊರಿಗೆ ಬರುತ್ತೇನೆ. ಅದೂ ತನಕ ಬರುವುದಿಲ್ಲ.’’

ಇತಿ ನಿಮ್ಮ ಬಾಲಕ
ಡಿ.ಗೋವಿಂದ ದಾಸ್

ಕೂಡಲೆ ನಮ್ಮ ಚಿಕ್ಕ ತಂದೆಯವರಿಂದ ನನಗೆ ಬಂದ ಕಾಗದದ ಅಭಿಪ್ರಾಯ.

‘‘ಚಿರಂಜೀವಿ ಪ್ರಿಯ ಬಾಲಕ ಡಿ.ಗೋವಿಂದದಾಸ್ ನಿಗೆ ನಿಮ್ಮ ಚಿಕ್ಕ ತಂದೆಯ ಪ್ರೇಮಾಶೀರ್ವಾದ. ಇಲ್ಲಿ ಎಲ್ಲ ಕ್ಷೇಮ. ಅಲ್ಲಿ ನಿನ್ನ ಕ್ಷೇಮಕ್ಕೆ ಆಗಾಗ್ಗೆ ಬರೆಯುತ್ತಿರು. ನೀನು ಬರೆದ ಕಾಗದ ತಲುಪಿ ಅಭಿಪ್ರಾಯವೆಲ್ಲ ಗೊತ್ತಾಯಿತು. ನಮಗೆ ಬಹಳ ಸಂತೋಷವಾಯಿತು. ನೀನು ನಮಗೆ ಹೇಳದೆ, ಕೇಳದೆ ಕದ್ದು ಹೋದನೆಂದು ನಮಗೆ ಕೋಪವಿಲ್ಲ. ನೀನು ಮಾತ್ರ ಕಷ್ಟಪಟ್ಟು ಚೆನ್ನಾಗಿ ಓದಿ ಅಭಿವೃದ್ದಿಗೆ ಬಂದು ನಮಗೂ ನಮ್ಮ ವಂಶಕ್ಕೂ ಕೀರ್ತಿ, ಗೌರವವನ್ನು ತರಬೇಕೆಂಬುದೆ ನನ್ನಾಸೆ

ಇತಿ
ನಿಮ್ಮ ಚಿಕ್ಕ ತಂದೆ
ಹುಚ್ಚಪ್ಪ

ಹೀಗೆ ಬರೆದ ಕಾಗದ ನನ್ನ ಮೈಯ್ಯುಬ್ಬಿತು. ಹಿಡಿಸಲಾರದ ಆನಂದವಾಯಿತು. ಚೆನ್ನಾಗಿ ಓದಲೇಬೇಕೆಂದು ಹಟಮಾಡಿದೆ. ಎಲ್ಲ ವಿದ್ಯಾರ್ಥಿಗಳೊಂದಿಗೂ ಸಖ್ಯ ಬೆಳೆಸಿದೆನು. ಹೀಗೆಯೇ ಇಪ್ಪತ್ತು ದಿನಗಳು ಕಳೆದವು. ಇಲ್ಲಿಗೆ ಪ್ಲೇಗು ಉಪದ್ರವವು ತಲೆದೋರಿತು. ಬೋರ್ಡಿಂಗನ್ನು ಮುಚ್ಚಿ ಹದಿನೈದು ದಿನ ರಜಾ ಕೊಟ್ಟು ನಮ್ಮೆಲ್ಲರಿಗೂ ಊರಿಗೆ ಹೋಗಿ ಬರುವ ಎರಡೂ ಕಡೆ ಚಾರ್ಜನ್ನು ಕೊಟ್ಟರು. ಎಲ್ಲರಂತೆ ನಾನು ಊರಿಗೆ ಬರಲು ರೈಲಿಗೆ ಹೊರಟೆನು. ನಾನು ಒಬ್ಬಂಟಿಗನಾಗಿ ಪ್ರಮಾಣ ಮಾಡುವುದರಿಂದ ಶಿ. ಅಣ್ಣಯ್ಯಪ್ಪನವರೆಂಬ ನಮ್ಮ ಉಪಾಧ್ಯಾಯರೊಬ್ಬರನ್ನು ಅರಸೀಕೆರೆಯವರೆಗು ಕಳುಹಿಸಿ ಮುಂದೆ ಮಂದಗೆರೆ ಟಿಕೇಟು ತೆಗೆದು ರೈಲಿಗೆ ಕೂಡಿಸಿ ಬರುವಂತೆ ಹೆಡ್ ಮಾಸ್ಟರ್ ಕಳುಹಿಸಿಕೊಟ್ಟರು. ಅವರು ನನ್ನನ್ನು ಅರಸೀಕೆರೆಯಲ್ಲಿ ರೈಲಿಳಿಸಿ ಮಂದಗೆರೆಗೆ ಟಿಕೇಟು ತೆಗೆದು ಮೈಸೂರಿಗೆ ಹೋಗುವ ರೈಲಿನಲ್ಲಿ ಕೂಡಿಸಿ, ರೈಲಿನಲ್ಲಿ ಮೈಸೂರಿಗೆ ಹೋಗುವ ಒಬ್ಬರು ವಯಸ್ಕ ಬುದ್ದಿವಂತರೊಡನೆ ‘ಈ ಹುಡುಗನನ್ನು ಮಂದಗೆರೆಯಲ್ಲಿಳಿಸಿ ಬಿಡಿರೆಂದು ಹೇಳಿಕಳುಹಿಸಿದರು. ಮಂದಗೆರೆಯಲ್ಲಿ ರೈಲು ಇಳಿದೆನು. ಅಲ್ಲಿ ನಮ್ಮೂರು ಕಡೆ ನೋಡಲು ಗೊಮಟೇಶ್ವರನ ಬೆಟ್ಟ ಕಾಣಿಸಿತು. ಆಗ ನನ್ನ ಮನಸ್ಸು ಆನಂದದಿಂದ ಹಿಗ್ಗಿ ಹೋಯಿತು. ಆದರೆ ಕಳ್ಳತನದಿಂದ ಬಂದಿದ್ದರಿಂದ ನನ್ನ ಮನೆಯವರು ಬಯ್ಯುತ್ತಾರೆ. ಹೇಗೆ ಊರಿಗೆ ಹೋಗುವುದೆಂದು ವ್ಯಸನ ಉಂಟಾಯಿತು. ರೈಲ್ವೆ ಸ್ಟೇಷನ್ ಪಕ್ಕದ ಉತ್ತರದಲ್ಲಿದ್ದ ಹೇಮಾವತಿ ನದಿಯನ್ನು ದಾಟಿ ಈಶಾನ್ಯಕ್ಕೆ ಹತ್ತು ಮೈಲು ದೂರದಲ್ಲಿರುವ ನಮ್ಮೂರಿಗೆ ಕಾಲುನಡಿಗೆಯಿಂದ ಹೋಗಬೇಕಿತ್ತು. ನದಿಯು ಆಗ ಪೂರ್ಣ ಪ್ರವಾಹದಿಂದ ಹರಿಯುತ್ತಿತ್ತು. ದೋಣಿ ಸಂಚಾರಕ್ಕೆ ಅವಕಾಶವಿರಲಿಲ್ಲ. ಇದನ್ನು ನೋಡಿ ನನಗೆ ಮುಂದೇನು ಮಾಡಬೇಕೆಂಬುದು ತೋಚಲಿಲ್ಲ. ನದಿಯ ದಡದಲ್ಲಿ ಸುಮ್ಮನೆ ಯೋಚಿಸುತ್ತ ನಿಂತಿದ್ದೆನು. ನಾನಿದ್ದ ಸ್ಥಳಕ್ಕೆ ಓರ್ವ ಬ್ರಾಹ್ಮಣನು ಬಂದು   ನೀನು ಎಲ್ಲಿಗೆ ಹೋಗಬೇಕೆಂದು ಕೇಳಿದನು. ದಮ್ಮನಿಂಗಳಕ್ಕೆ ಎಂದನು. ಹಾಗಾದರೆ ನನ್ನ ಸಂಗಡ ಬಾ ಎಂದು ಪೂರ್ವಾಭಿಮುಖವಾಗಿ ಸುಮಾರು ಎರಡು ಮೈಲು ದೂರ ನದಿ ದಡದಲ್ಲೆ ಕರೆದುಕೊಂಡು ಹೋದನು. ಹೋಗುವಾಗ ಇವನೆಲ್ಲಿಗೆ ನನ್ನನ್ನು ಕರೆದುಕೊಂಡು ಹೋಗುವನೆಂಬ ಅನುಮಾನ ಹುಟ್ಟಿತು. ಆದರೆ ಅಷ್ಟರಲ್ಲಿಯೆ ದಡದಲ್ಲಿಯೆ ನಿಂತುಕೊಂಡು ಆಚೆ ದಡದಲ್ಲಿದ್ದ ಒಬ್ಬನನ್ನು ಕೂಗಿ ಹರಿಗೋಲು ತೆಗೆದುಕೊಂಡು ಬಾ ಎಂದು ಹೇಳಿದನು. ಅವನು ಕೂಡಲೇ ಹರಿಗೋಲು ತೆಗೆದುಕೊಂಡು ನಾವಿದ್ದೆಡೆಗೆ ಬಂದನು. ನಾವಿಬ್ಬರೂ ಹರಿಗೋಲು ಹತ್ತಿ ಒಳಗಡೆ ಕುಳಿತುಕೊಂಡೆವು. ನೀರು ಮೇಲಿನ ಪ್ರಯಾಣವು ನನಗೆ ಇದೆ ಮೊದಲನೆ ಬಾರಿ ಆದುದರಿಂದ ತುಂಬಾ ಹೆದರಿಕೆಯಾಯಿತು. ಇದನ್ನು ನೋಡಿ ಬ್ರಾಹ್ಮಣನು ಹೆದರಬೇಡ ಧೈರ್ಯವಾಗಿರು. ನೀರು ನೋಡಬೇಡ ತಲೆ ತಿರುಗುವುದು. ಕಣ್ಣುಗಳೆರಡನ್ನು ಭದ್ರವಾಗಿ ಮುಚ್ಚಿಕೊ ಎಂದು ಹೇಳಲು, ಕಣ್ಣುಮುಚ್ಚಿಕೊಂಡು ಕುಳಿತೆನು. ಇಪ್ಪತ್ತು ನಿಮಿಷಗಳಲ್ಲಿ ಹರಿಗೋಲು ದಡವನ್ನು ಸೇರಿತು. ಹರಿಗೋಲಿನ ಅಂಬಿಗನು ಇನ್ನು ಕೆಳಕ್ಕೆ ಇಳಿಯಲೆಂದು ಕಣ್ಣುಬಿಟ್ಟು ನೋಡಿದೆನು ದಡಕಂಡ ತಕ್ಷಣ ಗೆದ್ದೆನೆಂದು ಮಹಾ ಸಂತೋಷವಾಯಿತು. ಹರಿಗೋಲಿನಿಂದಿಳಿದು ನದಿಯಲ್ಲಿ ಸ್ನಾನ ಮಾಡಿ, ಪೂರ್ವ ಪ್ರವಾಹದ ನದಿಯನ್ನು ಸುಸೂತ್ರವಾಗಿ ಆಚೆ ದಡವನ್ನು ಸೇರಿದುದಕ್ಕಾಗಿ ಆ ಸರ್ವಶಕ್ತನಾದ ಭಗವಂತನನ್ನು ಭಕ್ತಿಯಿಂದ ಸ್ತೋತ್ರ ಮಾಡಿ ಊರಿನ ಕಡೆಗೆ ಹೊರಟೆನು. ನಾನು ಹುಟ್ಟಿ, ಬೆಳೆದು ಆಟವಾಡಿದ ಊರು ಹೇಗೆ ಇರಲಿ, ಏನೇ ಆಗಿರಲಿ, ದೊಡ್ಡ ಪಟ್ಟಣವಾಗಿರಲಿ, ಒಂದು ಸಣ್ಣ ಹಳ್ಳಿಯಾಗಿರಲಿ ಇಲ್ಲ ಮೂರು ಮನೆತನಗಳುಳ್ಳ ಕೊಪ್ಪಲಾಗಿರಲಿ ಸ್ಥಳಾಭಿಮಾನ ಪ್ರತಿಯೊಬ್ಬ ಮಾನವನಿಗು ಇದ್ದೇ ಇದೆ. ನನಗೂ ನಮ್ಮೂರನ್ನು ಎಷ್ಟೊತ್ತಿಗೆ ನೋಡುತ್ತೇನೊ ಎಂಬ ಕುತೂಹಲ, ಆಸೆ ಬಹಳವಾಯಿತು. ಹೊರಟೆನು. ಆದರೆ ಊರು ಹತ್ತರವಾದಂತೆಲ್ಲ ನನ್ನಾಸೆ ಕುತೂಹಲಗಳೆರಡು ಹೆಜ್ಜೆಹೆಜ್ಜೆಗೂ ಕಡಿಮೆಯಾಗುತ್ತಿದ್ದವು. ಮನೆಯವರೆಲ್ಲಿ ಬಯ್ಯುತ್ತಾರೊ ಎಂಬ ಭಯವು ಊರು ಸಮೀಪಿಸಿದಂತೆಲ್ಲ ಬಲವಾಯಿತು. ಹಾಗೂ ಈಗೂ ಮನಸ್ಸು ಧೈರ್ಯ ಮಾಡಿಕೊಂಡು ಮನೆಯ ಬಾಗಿಲನ್ನು ಸೇರಿದುದಾಯಿತು. ಇದಕ್ಕೆ ಸರಿಯಾಗಿ ನಮ್ಮಮ್ಮನು ನನ್ನನ್ನು ನೋಡಿದೊಡನೆಯೆ ‘‘ಎಲಾ! ಕಳ್ಳ ಮನೆಯೊಳಕ್ಕೆ ಹೆಜ್ಜೆ ಇಡಬೇಡ. ನೀನು ಬಂದರೆ ಮನೆಯೊಳಕ್ಕೆ ಕೂಡಬೇಡಿರೆಂದು ನಿಮ್ಮ ಚಿಕ್ಕಪ್ಪ ಹೇಳಿದ್ದಾರೆಂದು ತಡೆದಳು.’’ ನಾನು ಹಾಗೆಯೇ ಪಡಸಾಲೆಯ ಮೇಲೆ ಕುಳಿತೆನು. ನನ್ನನ್ನು ನೋಡಲು ಅನೇಕರು, ನಮ್ಮಮ್ಮನನ್ನು ಸಂತೈಸಲು ಮನೆಯೊಳಕ್ಕೆ ಹೋದರು. ಇನ್ನೇನು ರಜೆಯು ಕಳೆಯುವುದರಲ್ಲಿತ್ತು. ಆಗಲೇ ಬೋರ್ಡಿಂಗ್‌ನಿಂದ ಬೇಗ ಬರಬೇಕೆಂದು ಬರೆದಿದ್ದ ಪತ್ರವೊಂದು ಬಂದಿತು. ಹೊರಡಲು ಸಿದ್ಧನಾದೆ. ನನ್ನನ್ನು ಪ್ರೋತ್ಸಾಹಿಸಿ, ಧೈರ್ಯ ಹೇಳಿ ಕಳುಹಿಸುವುದರಲ್ಲಿ ಪ್ರಯಾಣದ ಖರ್ಚಿಗೆ ದುಡ್ಡು ಒದಗಿಸಿಕೊಡುವುದು ಇವೆಲ್ಲದರಲ್ಲೂ ತುಂಬಾ ಸಹಾಯ ನೀಡಿದ ನಮ್ಮ ತಂದೆಯೊಡನೆ ಹುಟ್ಟಿ ಆರನೆ ಕಿರಿಯ ತಂದೆ ಕಾಳಪ್ಪನೆಂಬುವವರನ್ನು ಇಲ್ಲಿ ಮರೆಯಲಾರೆ. ಸರಿ ತುಮಕೂರಿಗೆ ಹೊರಟೆ. ನಮ್ಮಮ್ಮ ಬಂದು ನೀನು ಓದಲು ಹೋಗಬೇಡ. ನೀನು ಓದಿ ಅಮಲ್ದಾರನ ಸಂಗಡ ಕುಳಿತುಕೊಂಡು ಮಾತನಾಡುವೆಯ. ನಿಮ್ಮಪ್ಪ ಸತ್ತಿರುವುದರಿಂದ ಶನಿವಾರ ದೇವರನ್ನು ಪೂಜೆ ಮಾಡುವವರ‍್ಯಾರು, ನನ್ನ ಮನೆಯಲ್ಲಿ ಕುರಿಗಳನ್ನು ಕಾಯುವವರ್ಯಾರು ಹೀಗೆಂದು ತಡೆದರು. ಆದರೂ ಹೊರಟೆನು. ತುಮಕೂರನ್ನು ಸೇರಿ ವ್ಯಾಸಂಗಮಾಡಲನುವಾದೆನು.