೪. ಬೋರ್ಡಿಂಗ್ ಹೋಮಿನ ವಿವರ, ನಿಯಮ

ಬೋರ್ಡಿಂಗ್ ವಿದ್ಯಾರ್ಥಿಗಳು ಯಾವಾಗಲೂ ಹೊರಗಡೆ ಹೋಗುತ್ತಿರಲಿಲ್ಲ. ಆಟಪಾಠವೆಲ್ಲವೂ ಒಳಗಡೆಯೆ. ಭಾನುವಾರ ಮಾತ್ರ ಬಟ್ಟೆ ತೊಳೆಯಲು ಕೆರೆಗೆ ಹೋಗಬೇಕಾಗಿತ್ತು. ಶಾಲೆಯು ಮುಗಿದೊಡನೆ ತೋಟದ ಕೆಲಸ ಮಾಡಬೇಕಾಗಿತ್ತು. ಪ್ರತಿದಿನ ಬೆಳಿಗ್ಗೆ ತಣ್ಣೀರು ಸ್ನಾನಮಾಡಬೇಕು. ಬೆಳಗಿನ ಐದು ಗಂಟೆಯಲ್ಲಿ, ಸಂಜೆ ಐದು ಗಂಟೆಯಲ್ಲಿ ತಪ್ಪದೆ ದೇವರ ಪ್ರಾರ್ಥನೆ ಮಾಡಬೇಕಾಗಿತ್ತು. ತಪ್ಪಿದರೆ ಕಠಿಣ ಶಿಕ್ಷೆಗೆ ಗುರಿಯಾಗುವ ಪದ್ಧತಿಯಿತ್ತು. ಬೆಳಗಿನ ಜಾವದಲ್ಲಿ ಪ್ರಾರ್ಥನೆಯಾದ ನಂತರ ಓದಲು ಕೂಡಬೇಕಾಗಿತ್ತು. ನಾನು ಯಾವಾಗಲೂ ಪ್ರಾರ್ಥನಾ ಹಾಲಿನಲ್ಲಿ ಒಂದು ದೊಡ್ಡ ಮೇಲಿನ ಕೆಳಗಡೆ ಮಲಗುತ್ತಿದ್ದೆನು. ಒಂದು ದಿನ ಬೆಳಗಿನ ಜಾವ ಪ್ರಾರ್ಥನಾ ಗಂಟೆ ಬಾರಿಸಿತು.(Prayer Bell) ಕೂಡಲೆ ಎಲ್ಲರೂ ಟೇಬಲಿನ ಸುತ್ತಲೂ ನಿಶಬ್ಧವಾಗಿ ಬಂದು ನಿಂತು ನನ್ನನ್ನು ಎಚ್ಚರ ಮಾಡದೆ ಬೆಳಗ್ಗೆ ಹೊಡೆಸಬೇಕೆಂದು ‘‘ಗೋಪಾಲ ದಯಮಾಡೋ ದೇವರದೇವ’’ ಎಂದು ಹಾಡಲು ಪ್ರಾರಂಭಿಸಿದ ಕೂಡಲೆ ಗಂಟೆ ಬಾರಿಸಿದ್ದು ಕೇಳದೆ ನಿದ್ರಿಸುತ್ತಿದ್ದ ನಾನು ಗಾಬರಿಯಿಂದೆದ್ದು ಬೆತ್ತಲೆ ನಿಂತು ಹಾಡುತ್ತ ನಿಂತಿದ್ದೆನು. ಇದನ್ನು ನೋಡಿ ಇದೋ ಇದೋ ನೋಡಿ ಇಲ್ಲೆ ಗೊಮ್ಮಟೇಶ್ವರ ನಿಂತಿದ್ದಾನೆಂದು ಕೂಗಿ ಎಲ್ಲರೂ ನಕ್ಕರು. ಆಗ ನಿದ್ರೆಗಣ್ಣಿನಿಂದ ನಿಂತಿದ್ದ ನಾನು ಬೇಗ ಕೆಳಗೆ ಕುಳಿತುಕೊಂಡು ಬಟ್ಟೆಯುಟ್ಟು ಪ್ರಾರ್ಥನೆಗೆ ಪುನಃ ನಿಂತೆನು. ಪ್ರತಿನಿತ್ಯವೂ ಕೂಡ ಮೂರು ನಾಮವಿಟ್ಟುಕೊಳ್ಳಲೇಬೇಕು. ದಕ್ಷರಾದ P.L.ನರಸಿಂಹಯ್ಯರೆಂಬುವರೆ ಮುಖ್ಯೋಪಧ್ಯಾಯರು. ಬಹಳ ಬಿಗಿ. ದಯಾಳತ್ವವೇನೂ ವಿದ್ಯಾರ್ಥಿಗಳಿಗೆ ಕಾಣುತ್ತಿರಲಿಲ್ಲ. ವಿದ್ಯೆಗಿಂತ ಅವರಿಗೆ ನಡತೆ ಮುಖ್ಯ. ನಮ್ಮ ಹಿತವನ್ನೇ ಸದಾ ಬಯಸುತ್ತಿದ್ದರು. ಸತ್ಯ ಸಂದತೆ, ದೈವಭಕ್ತಿ, ಪರೋಪಕಾರ್ಯ, ಸಹೋದರ ಭಾವ, ಕಾರ್ಯತತ್ಪರತೆಗಳನ್ನು ಬೋಧಿಸುವುದರಲ್ಲಿ ಇವರನ್ನು ಬಿಟ್ಟರೆ ಬೇರೊಬ್ಬರಿಲ್ಲ. ನನ್ನಲ್ಲಿ ಮಾತ್ರ ಪೂರ್ಣ ನಂಬಿಕೆ ಇಟ್ಟಿದ್ದರು. ಸರ್ಕಾರಿ ಹಣಕಾಸು, ಬಟ್ಟೆಬರೆ, ಇನ್ನೂ ಬೆಲೆಯುಳ್ಳ ಸರ್ಕಾರಿ ಸಾಮಾನುಗಳಿದ್ದ ಆಫಿಸು ರೂಮಿನಲ್ಲಿ ನನ್ನೊಬ್ಬನನ್ನು ಮಾತ್ರ ಮಲಗುವಂತೆ ಮಾಡಿದ್ದರು. ಮುದ್ದುಮಾಗಡಿಶೆಟ್ಟಿ ಎಂಬ ಕನ್ನಡ ಪಂಡಿತರು ನನ್ನನ್ನು ಆಗಾಗ್ಗೆ ನೋಡಿ ‘ಹುಡುಗ ನೀನು ಒಳ್ಳೆಯವನಪ್ಪ. ನೀನು ಭೂಪತಿರಂಗ’ನೆಂದು ಹೊಗಳುತ್ತಿದ್ದರು. ಒಂದು ದಿನ ಹೆಡ್ ಮಾಸ್ಟರು ‘ಒಳ್ಳೆಯವರೆಲ್ಲ ಮೂರು ಹೆಜ್ಜೆ ಮುಂದೆ ಬಂದು ನಿಂತುಕೊಳ್ಳಿರೆಂದು ಹೇಳಿದರು. ಬಹಳ ಮಂದಿ ಹುಡುಗರು ಮುಂದೆ ಹೋಗಿ ನಿಂತರು. ನಾನು ಒಳ್ಳೆಯವನೆಂದು ತಿಳಿದು ಮುಂದೆ ಹೋಗಿ ನಿಂತೆನು. ಹೆಡ್ ಮಾಸ್ಟರು ನನ್ನನ್ನು ನೋಡಿದ ಕೂಡಲೆ ಹೊರಡು ಹಿಂದಕ್ಕೆ. ನೀನು ಮಹಾ ಒಳ್ಳೆಯವನೊ? ನೀನು ಎಂದೂ ಕೋಪವನ್ನು ಬಿಡುತ್ತೀಯೊ ಅಂದು ಒಳ್ಳೆಯವರ ಗುಂಪಿಗೆ ಸೇರಿಸುತ್ತೇನೆಂದು ಹೇಳಲು, ಬಹಳ ನಾಚಿಕೆಯಿಂದಲೂ ಹಿಂತಿರುಗಿದೆನು. ನಾನೇನೊ ಬಹಳ ಒಳ್ಳೆಯವನಾಗಿದ್ದುದು ನಿಜ. ಅಂದಿನಿಂದ ಕೋಪ ಕಡಿಮೆ ಮಾಡುತ್ತಾ ಬಂದೆನು. ಅಣ್ಣಯ್ಯಪ್ಪನೆಂಬುವರು ನನ್ನಲ್ಲಿ ಬಲು ಪ್ರೇಮವಿಟ್ಟಿದ್ದರು. ಆದರೆ ಮೇಲೆ ಬಹಳ ಕಠಿಣ. ದೈವ ಭಕ್ತಿಯನ್ನು ಸಾರವತ್ತಾಗಿ ದಾನ ಮಾಡಿದ ಮಹಾನುಭಾವರಿವರು. ದೇವರ ಕೀರ್ಥನೆ ಹಾಡುವುದನ್ನು, ಸಂಗೀತ ಕಲೆಯನ್ನು ಕೇಳುವಂತೆ ಮಾಡಿದವರು ಇವರೆ. ಇದು ನನ್ನ ಮುಂದಿನ ಜೀವನದಲ್ಲಿ ಕವಿಯೆನ್ನಿಸಿಕೊಳ್ಳಲು ಸಹಾಯಮಾಡಿತು. ಒಂದು ದಿನ ಏನೋ ತಪ್ಪು ಮಾಡಿದೆನೆಂದು ಸರಿಯಾಗಿ ಪರಿಶೀಲಿಸದೆ ಮೂರು ದಿನಗಳು ಬೆಂಚಿನ ಮೇಲೆ ನಿಲ್ಲಬೇಕೆಂದು ಆಜ್ಞೆ ಮಾಡಿದರು. ಬೆಂಚಿನ ಮೇಲೆ ಒಂದೆರಡು ಗಂಟೆ ಕಾಲ ನಿಂತೆನು. ತಪ್ಪಿಲ್ಲದ ಈ ಅಪಮಾನವನ್ನು ಸಹಿಸುವುದು ನನ್ನಿಂದ ದುಸ್ತರವಾಯಿತು. ಅಳುತ್ತಾ ಅಳುತ್ತಾ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದುಬಿಟ್ಟೆನು. ಕುಶ್ರೂಷೆ ನಡೆಸಿದರು. ಅಂದಿನಿಂದ ನಾನು ಪ್ರಾಮಾಣಿಕನೆಂದು ಎಲ್ಲರು ನಂಬಿದರು. ಕ್ರೈಸ್ತ ಮತದ ಉಪಾಧ್ಯಾಯರೊಬ್ಬರು ಏಸು ತತ್ತ್ವಗಳನ್ನು ಚೆನ್ನಾಗಿ ಮನದಟ್ಟಾಗುವಂತೆ ಬೋಧಿಸುತ್ತಿದ್ದರು. ‘ಎಡಗೆನ್ನೆಗೆ ಹೊಡೆದರೆ ಬಲಗೆನ್ನೆಯನ್ನು ತೋರು’ ಎಂದು ಬೈಬಲ್ಲಿನ ತತ್ತ್ವವನ್ನು ಚೆನ್ನಾಗಿ ಮನನ ಮಾಡಿಕೊಂಡಿದ್ದೆನು. ದೇವರ ವಿಚಾರವಾಗಿ ಉಪಾಧ್ಯಾಯರು ಕೊಟ್ಟಿದ್ದ ವಾಕ್ಯ ರಚನೆಯನ್ನು ಬರೆದಿದ್ದುದ್ದನ್ನು ನೋಡಿ ಎಲ್ಲ ಹುಡುಗರನ್ನು ಬಿಟ್ಟು ನನ್ನೊಬ್ಬನಿಗೆ ಮಾತ್ರ ಬಹುಮಾನ ಕೊಟ್ಟರು. ಈ ಬೋರ್ಡಿಂಗ್ ಹೋಮಿನಲ್ಲಿ ಹಾಕಿದ ಭದ್ರವಾದ ತಳಹದಿಯೇ ಮುಂದಿನ ನನ್ನ ಜೀವಮಾನದಲ್ಲಿ ಹೆಚ್ಚು ಪರಿಣಾಮವನ್ನುಂಟುಮಾಡಿತು. ಹೀಗೆ ನಾಲ್ಕು ವರ್ಷಗಳು ವ್ಯಾಸಂಗ ಮಾಡಿ ಪರೀಕ್ಷೆಗೆ ಕುಳಿತೆನು. ಆದರೆ ಆ ವರ್ಷ ತೇರ್ಗಡೆಯಾಗಲಿಲ್ಲ. ಮುಂದಿನ ವರ್ಷ ಅಂದರೆ ಬೇಸಿಗೆ ತೀರಿದ ನಂತರ ಚಿಕ್ಕಮಗಳೂರು ಬೋರ್ಡಿಂಗ್ ಹೋಮಿಗೆ ಹೋಗಿ ಸೇರಿಕೊಂಡೆನು. ಆಗಲೇ ಎಂಟು ದಿನಗಳಾಗಿತ್ತು. ತುಮಕೂರಿನಲ್ಲಿ ನಮಗೆ ಸೆಕರೇಟರಿಯಾಗಿ ಸಿ.ಆರ್.ಮಾಧವರಾವ್ ಬಿ.ಎ.ಬಿ.ಎಲ್. ಅವರು ಆಗತಾನೇ ಚಿಕ್ಕಮಗಳೂರು ವಿದ್ಯಾ ಇಲಾಖೆಯ ರೇಂಜರ್ ಆಗಿ ಬಂದರು. ನಾನೊಂದು ದಿನ ಬೆಳಿಗ್ಗೆ ಪೇಟೆ ಬೀದಿಯಲ್ಲಿ ಸಿಕ್ಕಿದೆನು. ನನ್ನನ್ನು ಕಂಡು ಹತ್ತಿರ ಕರೆದು ಇದೇನು ಇಲ್ಲಿಗೆ ಬಂದಿರುವೆಯಲ್ಲ ಎಂದರು. ಇದ್ದ ವಿಚಾರವನ್ನೆಲ್ಲ ತಿಳಿಸಿದೆನು. ಅದಕ್ಕೆ ಅವರು ಇಲ್ಲಿ ಒಂದು ಕೆಲಸ ಕೊಡುತ್ತೇನೆ, ಓದಲು ಅನುಕೂಲವಾಗುತ್ತೆ ಹೋಗುವೆಯ ಎಂದರು. ಆಗಲೆಂದು ಒಪ್ಪಿದೆನು. ಆಗ ಕೂಡಲೆ ಹಿರೇಮಗಳೂರು A.K.P. ಸ್ಕೂಲಿಗೆ ತಿಂಗಳಿಗೆ ಹದಿನೈದು ರೂಪಾಯಿ ಸಂಬಳದ ಮೇಲೆ ಒಂದು ವರ್ಷ ಬದಲಿ ಉಪಾಧ್ಯಾಯ ವೃತ್ತಿಗೆ ಆರ್ಡರ್ ಕೊಟ್ಟರು. ಅಂದಿನಿಂದ ಒಂದು ವರ್ಷ ಸರಿಯಂತ ಬೆಳಗಿನಲ್ಲಿ ಕಾಸೆ ಪೇಟಧರಿಸಿಕೊಂಡು ಉಪಾಧ್ಯಾಯರಾಗುವುದು, ಮಧ್ಯಾಹ್ನ ಉಡುಗೆಯುಟ್ಟು ತಲೆಗೆ ಟೋಪಿ ಹಾಕಿ ವಿದ್ಯಾರ್ಥಿ ಆಗುವುದು. ಹೀಗಾಗಿ ಆ ವರ್ಷ ಮಿಡ್ಲಸ್ಕೂಲ್ ಪರೀಕ್ಷೆಯನ್ನು ಬರೆದು ಹಾಸನಕ್ಕೆ ಬಂದೆನು. ನಾನು ಪರೀಕ್ಷೆ ಫಲಿತಾಂಶ ತಿಳಿಯದ ಹೊರತು ಊರಿಗೆ ಹೋಗುವುದಿಲ್ಲವೆಂದು, ಅದು ತನಕ ವ್ಯರ್ಥವಾಗಿ ಕಾಲ ಕಳೆಯದೆ ಎರಡು ಮೂರು ಸ್ಥಳಗಳಲ್ಲಿ ನಮ್ಮವರಿಗಾಗಿ ಶಾಲೆಗಳನ್ನೇರ್ಪಡಿಸಿದೆನು. ನಂತರ ೧೯೨೭ ಜುಲೈರಲ್ಲಿ ನಾನು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಫಲಿತಾಂಶ ಗೊತ್ತಾಯಿತು. ಬರುತ್ತಿರುವ ಅಲ್ಪ ಸಂಬಳವನ್ನು ಕೈಯಲ್ಲಿ ಹಿಡಿದು ಕೈಯನ್ನು ಜೋಬಿನಲ್ಲಿಟ್ಟುಕೊಂಡು ಮನೆಗೆ ಬರುತ್ತಿದ್ದೆ. ಇದನ್ನು ಕಂಡು ಬೇಸರವಾಗಿತ್ತು. ದೈವೇಚೆಯು ಬೇರೆಯಾಗಿತ್ತು. ಇಷ್ಟರಲ್ಲೆ ನಮ್ಮ ಚಿಕ್ಕ ತಂದೆಯವರು ನಾನಿಲ್ಲಿರುವುದನ್ನು ತಿಳಿದು ಮಗಳ ಮದುವೆಗೆ ಕರೆಯಲು ಬಂದರು. ಊರಿಗೆ ಹೊರಟು ಲಗ್ನ ತೀರಿಸಿಕೊಂಡು ಬೆಂಗಳೂರಿಗೆ ಹೋಗಿ ಶ್ರೀನರಸಿಂಹರಾಜ ಹೈಸ್ಕೂಲ್ ಹಾಸ್ಟಲ್‌ನ ಬೋರ್ಡರ್ ಆಗಿಯೂ, ಈಗ ಇಂಟರ್ ಕಾಲೇಜ್ ಆಗಿರುವ ಕೊಲಿಜಿಯೆಟ್ ಹೈಸ್ಕೂಲ್ ವಿದ್ಯಾರ್ಥಿಯಾಗಿ ಸೇರಿಕೊಂಡೆನು. ವ್ಯಾಸಂಗವು ಸರಿಯಾಗಿ ನಡೆಯುತ್ತಿದ್ದಿತು. ಶಾಲೆಯು ಮುಗಿದ ಕೂಡಲೆ ಸಾಯಂಕಾಲ ಎಲ್ಲಾ ಹುಡುಗರು ಬಂದು ಪುಸ್ತಕಗಳನ್ನು ಹಾಸ್ಟಲ್‌ಗೆ ಇಟ್ಟು ಪಟ್ಟಣದ ನೋಟವನ್ನು ನೋಡಲು ಪೇಟೆಯೊಳಕ್ಕೆ ಹೋಗಿ ಸಂಚರಿಸಿಕೊಂಡು ಬರುತ್ತಿದ್ದರು. ನಾನು ಪುಸ್ತಕಗಳನ್ನಿಟ್ಟು ಕುಮಾರಪಾರ್ಕಿನ ಹಿಂಭಾಗದ ಮದ್ರಾಸ್ ರೈಲ್ವೆ ಸ್ಟೇಷನ್ ಪಕ್ಕದಲ್ಲಿರುವ ಚಿಕ್ಕ ಚಿಕ್ಕ ಗುಡ್ಡಕಾಡುಗಳ ಕಡೆಗೆ ಹೋಗಿ ಅಲ್ಲೆಲ್ಲ ಅಡ್ಡಾಡಿ ಅಲೆದು ಅಲ್ಲಿರುವ ಮರಗಿಡ ಬಳ್ಳಿಗಳ ನೋಟದಿಂದಲೂ, ತಂಗಾಳಿಯ ಸೊಂಪಿನಿಂದಲೂ ಹಕ್ಕಿಪಕ್ಕಿ ಹಾರಾಟದಿಂದಲೂ ಮನಸ್ಸು ಬೇಸರ ಕಳೆದು ಹಿಂದಿರುಗುತ್ತಿದ್ದೆ. ನಾವಿದ್ದ ಬೋರ್ಡಿಂಗ್ ಹೋಮಿನ ಮೊದಲನೆ ಕಟ್ಟಡವು ಎಲಕ್ಟ್ರಿಕ್ ಸ್ಟೇಷನ್ ಪಕ್ಕದ ಶ್ರೀರಾಮ ಮಂದಿರ. ಇದು ಮ.ರಾಮಚಂದ್ರರಾವ್ ಸಿಂದೆ ಅವರದು. ಮುಂಭಾಗದ ಗೇಟಿನ ಪಕ್ಕದಲ್ಲೊಂದು ಮಾವಿನ ಮರವಿತ್ತು. ಒಂದು ದಿನ ಶನಿವಾರ ಕ್ಲಾಸಿಗೆ ಹೋಗಿ ಬಂದು ಊಟ ಮಾಡಿ ಮಧ್ಯಾಹ್ನ ರಜವಿದ್ದುದರಿಂದ ವಿರಾಮವಾಗಿ ಒಬ್ಬನೇ ಕುಳಿತಿದ್ದಾಗ ಅಕಸ್ಮಾತಾಗಿ ಕಲಿತಾ ಶಕ್ತಿಯು ಮನಸ್ಸಿಗೊಳೆಯಿತು. ಆಗಲೇ ಕುಳಿತು ವಿವಾಹ ಕಾಲದಲ್ಲಿ ವಧುವರರಿಗೆ ಆಶೀರ್ವದಿಸುವ ಮಂಗಳವೊಂದನ್ನು ರಚಿಸಿದೆನು. ಇದೆ ನನ್ನ ಮೊದಲನೆಯ ಕವನ

‘‘ಜಯಮಂಗಳಂ | ನಿತ್ಯ ಶುಭಮಂಗಳಂ          ||ಪ||

ಜಯ ಮಂಗಳಂ | ನಿತ್ಯ ಶುಭಮಂಗಳಂ
ಮಂಗಳ ಮಧುಮಗನಿಗೆ | ಮಂಗಳ ಮಧುಮಗಳೀಗೆ
ಮಂಗಳವಾಗಲಿ ನೆರೆದಿರುವ ಸಭೆಗೆ     ||೧||

ಹಿತದಿಂದ ಬಾಳಲಿ ಸುತರನ್ನು ಪಡೆಯಲಿ
ಮತಿವಂತರಾಗಿನ್ನು ಬದುಕಲಿ ಧರೆಯೊಳು       ||೨||

ಮಂಗಳ ಮಾಧವಗೆ | ಮಂಗಳಬೂಧವಗೆ
ಮಂಗಳವಾಗಲಿ | ಗೋವಿಂದ ಹರಿಗೆ   ||೩||

ಇದು ಮೊದಲು. ಈ ಶಕ್ತಿಯಿದ್ದದ್ದು ನನಗೇನೆ ಗೊತ್ತಿಲ್ಲ. ಇಲ್ಲಿಂದ ಆಗಾಗ ನನಗೆ ಹೊಳೆದ ವಿಷಯಗಳ ಮೇಲೆ ಕವನಗಳನ್ನು ರಚಿಸುತ್ತಿದ್ದೆನು. ಆದರೆ ಈ ಕೆಲಸವು ಸಾಮಾನ್ಯವಾಗಿ ಗೋಪ್ಯವಾಗಿ ನಡೆಯುತ್ತಿದ್ದಿತು.

ಶ್ರೀ ದಿವಂಗತ ಶ್ರೀಮಾನ್ ಆರ್ .ಗೋಪಾಲಸ್ವಾಮಿ ಅಯ್ಯರ್‌ರವರು ನಮ್ಮ ನಿಲಯಕ್ಕೆ ಅನೇಕ ಲೋಕ ಪ್ರಸಿದ್ಧರಾದ ಮಹಾನುಭವರುಗಳನ್ನು ಕರೆತಂದು ಆಗಾಗ ಬುದ್ದಿವಾದಗಳನ್ನು ಹೇಳಿಸುತ್ತಿದ್ದರು. ಅವರಲ್ಲಿ ಮಹಾತ್ಮಗಾಂಧಿ, ಮದನಮೋಹನ ಮಾಳವೀಯ, ಸಿ.ಎಫ್.ಆಂಡ್ರ್ಯೂಸ್, ಜೆ.ಕೃಷ್ಣಮೂರ್ತಿ, ಅನಿಬೆಸೆಂಟ್, ಅಲ್ಲಾಡಿ ಕೃಷ್ಣಸ್ವಾಮಿ. ಇನ್ನೂ ಕೆಲವರು ಯುವರಾಜರು ಹಾಸ್ಟಲಿಗೆ ತಮ್ಮ ಅಂಕಿತವನ್ನು ಕೊಟ್ಟಿದುದರಿಂದ ಗುಪ್ತವಾಗಿ ಆಗಾಗ್ಗೆ ಬಂದು ನಮ್ಮಗಳಿಗೆ ಹಿತವನ್ನು ಭೋದಿಸುತ್ತಿದ್ದರು. ಒಂದು ಸಾರಿ ಹಾಸ್ಟಲ್‌ಡೆಯನ್ನು ಶ್ರೀ ಮದ್‌ಮಹಾರಾಜರವರ ಮುಖಂಡತ್ವದಲ್ಲಿ ನಡೆಸಬೇಕಾದಾಗ ಮ.ಆರ್.ಜಗನ್ನಾಥರಾಯರ ಹೇಳಿಕೆಯಂತೆ ದಿವಂಗತ ಕೃಷ್ಣರಾಜ ಒಡೆಯರವರ ವಿಷಯವಾಗಿ ರಚಿಸಿದ ಗೀತೆಯೊಂದನ್ನು ಶ್ರೀಯವರ ಸಮ್ಮುಖದಲ್ಲಿ ಅಭಿನಯಿಸಿ ಹಸ್ತಲಾಘವನ್ನು ಹೊಂದಿದ್ದೆನು. ಅಂದಿನಿಂದ ಸ್ವಲ್ಪ ಸ್ವಲ್ಪವಾಗಿ ಜನಗಳ ಕಣ್ಣು ನನ್ನ ಮೇಲೆ ಬಿದ್ದಿತು. ಹೀಗೆ ವ್ಯಾಸಂಗವು ಮುಂದುವರಿಯುತ್ತಿತ್ತು. ವರ್ಷದ ಕೊನೆಯಲ್ಲಿ ಪರೀಕ್ಷೆ ಇನ್ನೂ ಒಂದು ತಿಂಗಳಿತ್ತು. ಬಹಳ ದಿನಗಳಿಂದಲೂ ಭಾರತ ಭೂಮಿಯ ದೊಡ್ಡ ದೊಡ್ಡ ಸ್ಥಳಗಳನ್ನೂ, ಪುಣ್ಯಕ್ಷೇತ್ರಗಳನ್ನೂ ನೋಡಬೇಕೆಂದು ತುಂಬಾ ಹಠವಿತ್ತು. ಇದಕ್ಕೆ ಅನುಕೂಲ ಒದಗಿರಲಿಲ್ಲ. ಒಂದು ದಿನ ಗಾಳಿ ಸಂಚಾರಕ್ಕಾಗಿ ರೈಲ್ವೆ ಸ್ಟೇಷನ್‌ನಿಗೆ ಬಂದಿದ್ದಾಗ ಒಬ್ಬ ಸಾಧು ದರ್ಶನವಾಯಿತು. ಇವನು ಆಗತಾನೆ ಕಲ್ಕತ್ತಾ ಕಾಲೇಜಿನಿಂದ M.A. (ಆನರ್ಸ್) ಪರೀಕ್ಷೆಗೆ ಕುಳಿತು ಪಾಸ್ ಮಾಡಿಕೊಂಡು ದೇಶಾಟನೆಯನ್ನು ಮಾಡಿ ಅನುಭವವನ್ನೂ ತೀರ್ಥಯಾತ್ರೆಯನ್ನು ಮಾಡಲು ಬಂದಿದ್ದ ತರುಣನು. ಅವನು ಧರಿಸಿದ್ದು ಕಾವಿಯುಡುಪು, ಕೈಯಲ್ಲಿ ಕಮಂಡಲ, ಅದೊಂದು ಬಗೆಯ ದಿವ್ಯ ತೇಜಸ್ಸು. ಇವುಗಳನ್ನು ನೋಡಿ ಅತ್ತಕಡೆ ನನ್ನ ದೃಷ್ಟಿ ಬಿದ್ದಿತು. ಆತನು ನನ್ನ ಕಡೆ ಚೆನ್ನಾಗಿ ದೃಷ್ಟಿಯಿಟ್ಟು ನೋಡಿದನು. ನಾನೂ ಕುತೂಹಲದಿಂದ ನೋಡಹತ್ತಿದೆನು. ಆತನು ಸ್ವಲ್ಪ ಹೊತ್ತಿನ ನಂತರ ಇಂಗ್ಲೀಷಿನಲ್ಲಿ come hear boy ಇಲ್ಲಿ ಬಾ ಮಗು ಎಂದು ಕರೆದನು. ಒಡನೆಯೆ ಹೋಗಿ ಪಕ್ಕದಲ್ಲಿ ಕುಳಿತೆನು. who are you ನೀನು ಯಾರು ಎಂದು ಕೇಳಿದನು. I am a student of Narashimha Raje High school Hostel. ನಾನು ನರಸಿಂಹರಾಜ ಹಾಸ್ಟಲಿನ ಹೈಸ್ಕೂಲ್ ವಿದ್ಯಾರ್ಥಿಯೆಂದೆನು. will you come with me. ನೀನು ನನ್ನೊಡನೆ ಬರುವೆಯಾ. I will you show you all the impartent and holy placesses of India at own cast. ನನ್ನ ಸ್ವಂತ ಖರ್ಚಿನಿಂದ ಭರತಖಂಡದ ದೊಡ್ಡ ದೊಡ್ಡ ಮತ್ತು ಪುಣ್ಯಕ್ಷೇತ್ರಗಳನ್ನು ತೋರಿಸುವೆನು ಎಂದನು. ಚೆನ್ನಾಗಿ ಯೋಚಿಸಿದೆನು. ಇನ್ನಿಂತ ಅನುಕೂಲ ಒದಗದೆಂದು ತಿಳಿದು ಒಂದು ವರ್ಷ ನನ್ನ ವ್ಯಾಸಂಗ ಮುರಿದರು ಸರಿಯೆಂದು ‘‘Yes Shruly I will fallow you. ಓ ಹೌದು ನಿಮ್ಮೊಡನೆ ನಿಜವಾಗಿಯೂ ಬರುವೆನೆಂದು ಹೇಳಿದೆನು. Be Ready. ಸಿದ್ದನಾಗು ಎಂದನು. ನಾನು ಕೂಡಲೆ ಹಾಸ್ಟಲಿಗೆ ಹೋಗಿ, ನಾನು ಹೋಗುವ ಎಲ್ಲಾ ವಿಚಾರಗಳನ್ನೂ ಕಾಗದದಲ್ಲಿ ಬರೆದು ಮೇಲೆಯೆ ಕಾಣುವ ಆಗಿಟ್ಟು ಪುನಃ ಹೋಗಿ ರಾತ್ರಿಯೆ ಸ್ಟೇಷನ್ ನಲ್ಲಿ ಸಾಧು ಸಂಗಡ ಸೇರಿದೆ. ರಾತ್ರಿ ಅಲ್ಲಿಯೇ ಇದ್ದೆವು.

೫. ಉತ್ತರ ಭಾರತ ಸಂಚಾರ ಮತ್ತು ತೀರ್ಥಯಾತ್ರೆ

ಬೆಂಗಳೂರಿನಿಂದ ಬೆಳಗಿನ ಜಾವ ಗುಂತಕಲ್ಲು ರೈಲಿನಲ್ಲಿ ನಾವಿಬ್ಬರು ಕುಳಿತು ಹಿಂದುಪುರ, ಅನಂತಪುರಗಳನ್ನು ನೋಡಿಕೊಂಡು ಸೊಲ್ಲಾಪುರದಲ್ಲಿ ರೈಲಿಳಿದು ನಲವತ್ತು ಮೈಲು ದೂರದಲ್ಲಿರುವ ಪ್ರಸಿದ್ದ ಕ್ಷೇತ್ರವಾದ ಪಂಡರಾಪುರವನ್ನು ಸ್ವಲ್ಪ ದೂರ ಕಾಲುನಡಿಗೆಯಲ್ಲಿ ಹೋಗಿ ನಂತರ ಬಸ್ಸಿನಲ್ಲಿ ಕುಳಿತು ಸೇರಿದೆವು. ನಮ್ಮ ಪುಣ್ಯವಶಾತ್ ವರ್ಷಕೊಮ್ಮೆ ನಡೆಯುತ್ತಿದ್ದ ಏಕಾದಶಿ ಮಹೋತ್ಸವವು ಅಂದು ಪ್ರಾರಂಭವಾಗಿತ್ತು. ಯಾವ ರೈಲಿನಲ್ಲಿ, ಬಸ್ಸಿನಲ್ಲಿ ಎಲ್ಲಿ ನೋಡಿದರೂ ಕೈಯಲ್ಲಿ ಭಕ್ತರು ದಾಳಗಳನ್ನು ಹಿಡಿದು ಹೋಗುವರೆ. ಎತ್ತ ನೋಡಿದರು ಪಾಂಡುರಂಗ ಭಗವಾನ್ ಕೆ ಜೈ ಅನ್ನುವ ಶಬ್ಧಗಳೆ. ಇನ್ನೂ ಸ್ವಲ್ಪ ದೂರವಿದ್ದಾಗಲೆ ಪಾಂಡುರಂಗ ದೇವಸ್ಥಾನದ ಶಿಖರದ ಮೇಲಿದ್ದ ಕಳಸವು ಕಂಡು ಕೂಡಲೆ ಎಲ್ಲರೂ ಪಾಂಡುರಂಗ ಭಗವಾನ್ ಕಿ ಜೈ ಎಂದು ಚೈತ್ಕಾರ ಮಾಡಿದರು. ಬಸ್ಸು ನಿಂತಿತು. ಎಲ್ಲರೂ ಕೆಳಗಿಳಿದು ಭೂಮಿಯ ಮೇಲೆ ಉದ್ದಕ್ಕೆ ಬಿದ್ದು ನಮಸ್ಕರಿಸಿ ನಂತರ ಪಂಡರಾಪುರದ ಪೂರ್ವದಲ್ಲಿ ಪಕ್ಕದಲ್ಲಿಯೇ ಚಂದ್ರಭಾಗಾ ನದಿ ಇರುವ ಸೇತುವೆ ಬಳಿ ಇಳಿದೆವು. ನದಿಯುದ್ದಕ್ಕೂ ಸ್ನಾನಮಾಡುವವರೆ. ಎಲ್ಲಿ ನೋಡಿದರು ಯಾತ್ರಾರ್ಥಿಕರು ಕಾವಿಗಳನ್ನುಟ್ಟು, ಹೆಗಲ, ಮೇಲೆ ದಾಳ, ಕೈಯಲ್ಲಿ ತಾಳ ಬಾರಿಸಿಕೊಂಡು ‘‘ಜೈ ವಿಠೋಬಾರುಕುಮಾಯಿ’’ ಎಂದು ಹಾಡುವವರೆ. ದೇವರ ಮುಂದುಗಡೆ ಬಗೆಬಗೆಯ ಬಣ್ಣದ ಉಡುಪಿನ ಮಹಾರಾಷ್ಟ್ರ ಹೆಂಗಸರು, ಗಂಡಸರನ್ನು ನೋಡಲು ಆನಂದ. ಮುದುಕಿಯರು, ಹುಡುಗಿಯರೆನ್ನದೆ ಎಲ್ಲರೂ ಒಬ್ಬರ ಕೈಯನ್ನು ಒಬ್ಬರು ಹಿಡಿದು ವಿಠಲ್ … ವಿಠಲ್ … ಎಂದು ಕುಣಿಯುವವರೆ. ಬುಕ್ಕಿಹಿಟ್ಟು, ಹೂಮಾಲೆಯ ಅಂಗಡಿಗಳು ಚಂದ್ರಭಾಗಿ ನದಿ ಕಡೆಯಿಂದ ದೇವಸ್ಥಾನ ಮತ್ತು ಸುತ್ತಮುತ್ತಲೂ ಲೆಕ್ಕವಿಲ್ಲ. ಇಡೀ ಫಂಡರಾಪುರವೆ ಹಗಲು-ರಾತ್ರಿಯಲ್ಲಾ ಒಂದು ನಿಮಿಷ ಬಿಡುವಿಲ್ಲದಂತೆ ಜೈ… ಜೈ… ವಿಠೋಬಾ ರುಕ್ಕುಮಾಯಿ ಎಂಬ ಶಬ್ಧದಿಂದ ಕೂಡಿಹೋಗಿತ್ತು. ಎಲ್ಲಾ ಕಡೆಯೂ ಸಾಧುಗಳ ಗುಂಪೆ. ಉತ್ತರ ಭಾರತದಲ್ಲಿ ಅಂದು ಜಾತಿಕಟ್ಟು ಬಲು ಬಿಗಿಯಾಗಿದ್ದರು, ಸಾಧು ಜಾತಿಯವನಾದ ನನಗೆ ಯಾವ ಕಟ್ಟುಪಾಡುಗಳು ಇರಲಿಲ್ಲ. ಮಂಡೆ ಬೋಳಿಸಿಕೊಂಡು ಚಂದ್ರಭಾಗಿಯಲ್ಲಿ ಮಿಂದು ಮಡಿಯುಟ್ಟು ದೇವರ ದರ್ಶನ ಮಾಡಿ ಹಣೆಗೆ ಬುಕ್ಕಿಹಿಟ್ಟು ತೀಡಿ ಹೂಮಾಲೆ ಕೊರಳಿಗೆ ಹಾಕಿ ಪಾದಕ್ಕೆ ನಮಿಸಿ ಹಿಂದಿರುಗಿ ವಿಠೋಬಾ ಗೋರಿಯನ್ನು ಸಂದರ್ಶಿಸಿ ಅಲ್ಲಿಂದ ಹೊರಟು ಪಂಚವಟಿ ನಾಶಿಕವನ್ನು ಸೇರಿದೆವು. ಅಲ್ಲಿ ಗೋದಾವರಿಯಲ್ಲಿ ಮಿಂದು ಶ್ರೀರಾಮ ದೇವರ ದರ್ಶನ ಮಾಡಿ ಜಠಾಯು ಮಾಯಾಮೃಗ ಮರ್ದನ, ಶೂರ್ಪನಖಿ ಮಾನಭಂಗ ಈ ಸ್ಥಳಗಳನ್ನು ನೋಡಿ ಗೋದಾವರಿ ತೀರದಲ್ಲಿನ ಸಪ್ತ ಋಷಿ ಗುಹೆಗಳನ್ನು ನೋಡಿಕೊಂಡು ಮುಂದೆ ಕಲ್ಯಾಣದ ಮಾರ್ಗವಾಗಿ ಬೊಂಬಾಯಿಯನ್ನು ಸೇರಿದೆವು. ಬೊಂಬಾಯಿಯಲ್ಲಿ ನಾಲ್ಕು ಐದು ದಿನಗಳಿದ್ದು ಬಂದರು, ಹಡಗು, ಲಾಲ್ ಕೇಶ್ವರ, ಚಾಪಾಟಿ ಮ್ಯೂಷಿಯಂ, ಬೊಮ್ಮಾದೇವಿ, ಬಾಬಲ್ ನಾಥ, ಮಹಾಲಕ್ಷ್ಮಿ ದೇವಸ್ಥಾನಗಳನ್ನು, ಮುಖ್ಯ ಬೀದಿಗಳನ್ನು ನೋಡಿಕೊಂಡು ಮುಂದೆ ಸೂರತನ್ನು ಸೇರಿದೆವು. ಅಲ್ಲಿ ಒಂದು ರಾತ್ರಿ ಇದ್ದು ಬೆಳಗಿನಲ್ಲಿ ಪಟ್ಟಣವನ್ನು ನೋಡಿ ತಪತಿಯಲ್ಲಿ ಸ್ನಾನಮಾಡಿ ಅಲ್ಲಿಂದ ರೈಲಿನಲ್ಲಿ ನರ್ಮದಾನದಿಯನ್ನು ದಾಟಿ ದಾಕೂರನ್ನು ಸೇರಿದೆವು. ಅಲ್ಲಿಂದ ಗುಜರಾತಿನ ಕೆಲವು ಮುಖ್ಯ ಸ್ಥಳಗಳನ್ನು ನೋಡಿಕೊಂಡು ರಾಜಧಾನಿಯಲ್ಲಿ ಶಿವರಾತ್ರಿಯನ್ನು ಪೂರೈಸಿಕೊಂಡು ಪುನಃ ಠಾಕೂರಿಗೆ ಬಂದು ಅಲ್ಲಿಂದ ಅಹಮದಬಾದ್ ಮಾರ್ಗವಾಗಿ ಮದಿರಾಬಾದನ್ನು ಸೇರಿದೆವು. ಅಲ್ಲಿ ಮಹಾನದಿಯಲ್ಲಿ ಸ್ನಾನ ಮಾಡಿ ಊಟೋಪಚಾರ ಮುಗಿಸಿಕೊಂಡು ಊರಿನ ಕೆಲವು ಮಿಲ್ಲುಗಳನ್ನು ನೋಡಿದೆವು. ಇಲ್ಲಿ ಸ್ಟೇಷನ್ ಗೆ ರೈಲು ಬಂದಾಗ ಗೊರವಂಕ ಪಕ್ಷಿಗಳ ಕೂಗಾಟವನ್ನು ಹೇಳತೀರದು. ಇಲ್ಲಿರುವ ಮಿಲ್ಲುಗಳನ್ನು ಸುಮಾರು ಇನ್ನೂರರವರೆಗು ಎಣಿಸಿದೆನು. ಮುಂದೆ ರಾಜಕೋಟೆಯಲ್ಲಿ ಇಳಿದು ಸ್ನಾನಮಾಡಿ ಊರನ್ನು ನೋಡಿ, ಕಂಬಾಳಿಯ ಜಾನ್ ನಗರದ ಮಾರ್ಗವಾಗಿ ಬೇಡ್ ದ್ವಾರಕ (ಸಮುದ್ರ ತೀರದಲ್ಲಿ)ವನ್ನು ನೋಡಿದೆವು. ಆ ರಾತ್ರಿ ಅಲ್ಲಿದ್ದು ಬೆಳಿಗ್ಗೆ ಎದ್ದು ಸಮುದ್ರದಲ್ಲಿ ಸ್ನಾನಮಾಡಿ, ಶ್ರೀಕೃಷ್ಣ ದರ್ಶನ ಮಾಡಿ ಸಂಜೆ ರೈಲಿನಲ್ಲಿ ಕುಳಿತು ರಾತ್ರಿ ಒಂಭತ್ತು ಗಂಟೆಗೆ ಗೋಮತಿದ್ವಾರಕ (ಸಮುದ್ರ ಮಧ್ಯದಲ್ಲಿ) ರೈಲ್ವೆ ಸ್ಟೇಷನ್ ನಲ್ಲಿ ಇಳಿದೆವು. ಅಲ್ಲಿಂದ ದೋಣಿಯಲ್ಲಿ ಹೋಗಿ ಚಿಕ್ಕ ಹಡಗಿನಲ್ಲಿ ಕುಳಿತು ಹೊರಟೆವು. ಸಮುದ್ರಯಾನವಾದರೂ ಅದೊಂದು ಅಚ್ಚನೆಯ ನೀರೆ. ಆ ಸಾಧು ಗುಂಪಿನಲ್ಲಿ, ಅದರಲ್ಲೂ ನಾನು ಹಾಡುವ ಕೀರ್ತನೆಗಳನ್ನು ಕೇಳಿ ಸಾಧುಗಳೆಲ್ಲರು ನನ್ನನ್ನು ಮೇಲ್ಭಾಗದಲ್ಲಿ ಕೂಡಿಸಿದರು. ನಾನು ಆನಂದವಾಗಿ ಕೀರ್ತನೆಗಳನ್ನು ಹಾಡುತ್ತ ಸಮುದ್ರ ಯಾನದ ಭಯವನ್ನು ಮರೆತನು. ಆ ಸಾಧಗಳಿಗೂ ಮರೆಸಿದೆನು. ನಿದ್ರೆ ಹತ್ತಿಸಲಿಲ್ಲ. ನನ್ನ ಜೀವಮಾನದಲ್ಲಿನ ಸಂತೋಷದ ಕಾಲದಲ್ಲಿ ಅದೂ ಒಂದು. ಬೆಳಗಿನ ಜಾವ ಸುಮಾರು. ಐದು ಗಂಟೆಗೆ ಹಡಗಿನಿಂದಿಳಿದು ದ್ವಾರಕಾ ಪಟ್ಟಣವನ್ನು ಸೇರಿ ಬೆಳಗಾಗುವ ತನಕ ಅಲ್ಲಿ ಮಲಗಿದ್ದು ಛತ್ರದಲ್ಲಿ, ಬೆಳಗಿನಲ್ಲಿ ಸಮುದ್ರಸ್ನಾನ ಮಾಡಿದೆವು. ಸಮುದ್ರ ಸ್ನಾನಮಾಡಿದಡದಲ್ಲಿ ನಿಂತಿದ್ದೆ ತೀರದಲ್ಲೊಂದು ಸಾಧಾರಣವಾದ ಶಂಕು ಮರಳಿನ ಮೇಲೆ ಬಿದ್ದಿತ್ತು. ನಾನು ಇದನ್ನು ನಮ್ಮೂರಿಗೆ ಗುರ್ತಿಗಾಗಿ ತೋರಿಸಲಿಕ್ಕೆ ತೆಗೆದುಕೊಂಡು ಹೋಗಬೇಕೆಂದು ಸಂತೋಷದಿಂದ ಕೈಯಲ್ಲಿಡಿದು ನೋಡುತ್ತಾ ನಿಂತಿದ್ದೆ. ಹಿಂದಿನಿಂದ ಬಂದ ಒಬ್ಬ ಪೋಲೀಸಿನವನು ಕುತ್ತಿಗೆಯ ಮೇಲೊಂದು ಏಟು ಗುದ್ದಿ ಕೈಯಿಂದ ಶಂಕು ಕಿತ್ತುಕೊಂಡು ಹೋದನು. ನಾನು ಹಿಂದಿರುಗಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಹೊರಡಲು ಚಿಕ್ಕ ದೋಣಿಯಲ್ಲಿ ಕುಳಿತೆವು. ಹತ್ತಿರ ನಿಂತಿದ್ದ ಚಿಕ್ಕ ಹಡಗನ್ನು ಈ ದೋಣಿಯಲ್ಲೆ ಕುಳಿತು ಹಿಡಿದುಕೊಳ್ಳಲು ಎಟಕಿಸಿದೆನು. ದೋಣಿ ಹಿಂದಕ್ಕೆ ಸರಿದು ಸಮುದ್ರಕ್ಕೆ ಬಿಟ್ಟುಬಿಟ್ಟೆನು. ಆಗ ಅಲ್ಲಿ ಕುಳಿತಿದ್ದ ಸಾಧು ಹೆಂಗಸರು ತಲೆಗೂದಲು, ಬಟ್ಟೆಗಳನ್ನೂ ಹಿಡಿದು ಮೇಲೆಳೆದು ಹಡಗಿನ ಮೇಲೆ ಹಾಕಿ ಕಿವಿಗೂಡಲು, ಬಟ್ಟೆಗಳನ್ನು ಹಿಡಿದು ಮೇಲೆಳೆದು ಹಡಗಿನ ಮೇಲೆ ಹಾಕಿ ಕಿವಿಯುರುಬಿ ನೀರೆಲ್ಲವರೆಸಿ, ವದ್ದೆ ಬಿಟ್ಟೆಗಳ ನೀರು ಹಿಂಡಿ ಪ್ರಜ್ಞೆ ತಪ್ಪಿ ಬಿದ್ದಿದ್ದ ನನ್ನನ್ನು ಶುಶ್ರೂಷೆ ಮಾಡಿದರು. ಪುನಃ ಬೇಡ್ ದ್ವಾರಕೆಯಲ್ಲಿ ರೈಲಿಳಿದು ಕಾಲುನಡಿಗೆಯಲ್ಲೆ ಸಾಧುಗಳ ಸಂಗಡ ನಾಲ್ಕು ಮೈಲು ದೂರದಲ್ಲಿ ರೈಲೈ ರಸ್ತೆಯ ಪಕ್ಕದಲ್ಲಿದ್ದ ಒಂದು ಸಾಧು ಆಶ್ರಮವನ್ನು ಸೇರಿದೆವು. ಅಲ್ಲಿಂದ ಮಧ್ಯವಯಸ್ಸಿನವನು ಒಂದೇ ಒಂದು ಕೌಪಿನದಾರಿ, ಒಂದು ಅಡ್ಡೆಯನ್ನು ಹೊತ್ತು ಹತ್ತಿರ ಹಳ್ಳಿಗೆಲ್ಲ ಒಂದೊಂದು ದಿನ ಹೋಗಿ ಅವರೆಲ್ಲ ಕೊಟ್ಟ ಆಹಾರ ಸಾಮಗ್ರಿಗಳೆಲ್ಲವನ್ನು ತಂದು ದ್ವಾರಕೆಗೆ ಹೋಗಿ ಬರುವ ಸಾಧುಗಳಿಗೆಲ್ಲ ಆಹಾರ ಪದಾರ್ಥಗಳನ್ನು ಒದಗಿಸಿಕೊಟ್ಟು ಶುಶ್ರೂಷೆ ಮಾಡುವುದೆ ಇವನ ಕೆಲಸ. ಈ ಸಾಧುವು ನಮ್ಮೆಲ್ಲರಿಗೂ ಆಹಾರ ಸಾಮಗ್ರ, ತರಕಾರಿ, ಬೆರಣಿಗಳನ್ನು ಒದಗಿಸಿಕೊಟ್ಟನು. ಸಾಧು ಹೆಂಗಸರು ಆಶ್ರಮದ ವರಾಂಡದಲ್ಲಿ ಅಲ್ಲಲ್ಲಿ ಅಡಿಗೆ ಮಾಡಲು ಉಪಕ್ರಮಿಸಿದರು. ನಮ್ಮಲ್ಲಿದ್ದ ಗೋದಿ ರೊಟ್ಟಿಯನ್ನು ತಿಂದು (ದ್ವಾರಕೆಯಲ್ಲಿ ಮಾಡಿದ್ದು) ನೀರು ಕುಡಿದು ಕುಳಿತು ಕೀರ್ತನೆಗಳನ್ನು ಹಾಡಲು ಪ್ರಾರಂಭಿಸಿದೆನು. ಅಡುಗೆ ಮಾಡುವವರೆಲ್ಲರೂ ಸಹ ಬಂದು ನನ್ನ ಸುತ್ತಲೂ ಗುಂಪಾಗಿ ಕುಳಿತರು. ‘ಬೋಲೊ ಬಾಯ್ … ಬೋಲೊ ಬಾಯ್ …’ ಎಂದು ಎಲ್ಲರೂ ಒತ್ತಾಯಿಸುತ್ತಿದ್ದರು. ಕಳೆದ ರಾತ್ರಿ ಸಮುದ್ರ ಪ್ರಯಾಣದಿಂದ ರಾತ್ರಿಯೆಲ್ಲ ನಿದ್ರೆಗೆಟ್ಟು ನಾನು ಒಂದೆರಡು ಗಂಟೆ ಕಾಲ ನಿರ್ಮಲವಾದ ಬೆಳದಿಂಗಳಲ್ಲಿ ಆಶ್ರಮದ ಪಡಸಾಲೆ ಮೇಲೆ ಮಲಗಿ ಬಿಟ್ಟೆ. ಆ ಸಾಧು ಹೆಂಗಸರೆಲ್ಲರೂ ಹುಡುಕಿಕೊಂಡು ಬಂದು ನನ್ನನ್ನು ಏಳಿಸಿ ನಾನು ಏಳದಿರಲು ಮೇಲೆತ್ತಿ ಕೂಡಿಸಿ ನೀರೊರಸಿ ಎಚ್ಚರಮಾಡಿ ಊಟ ಮಾಡಿಸಿದರು. ಬೆಳಿಗ್ಗೆ ರೈಲಿನಲ್ಲಿ ರಾಜಕೋಟೆಗೆ ಹೋಗಿ ರಾತ್ರಿಯೆಲ್ಲ ರೈಲಿನಲ್ಲಿ ಪ್ರಯಾಣ ಮಾಡಿ ಮೆಸ್ಸಾನ ಪಟ್ಟಣವನ್ನು ಸೇರಿದೆವು. ಆ ದಿನ ಕಾಮದಹನ. ಸೊಗಸಾದ ಬೆಳದಿಂಗಳು. ರಾತ್ರಿ ಎಲ್ಲಿ ನೋಡಿದರೂ ಕೋಲಾಹಲ. ಎಲ್ಲ ಊರುಗಳಲ್ಲೂ ಬೆಂಕಿಯ ಸುತ್ತಲೂ ಕುಣಿಯುವವರೆ. ಬೆಳಿಗ್ಗೆ ಮೆಸ್ಸಾನದ ಒಂದು ಛತ್ರದಲ್ಲಿಳಿದು ಸೇಬುಹಣ್ಣು ತರಲು ಪೇಟೆಯೊಳಕ್ಕೆ ಹೋಗುವಾಗ ಬೀದಿಯ ಇಕ್ಕೆಲದಿಂದಲೂ ಒಂದು ಸದ್ದೂ ಮಾಡದೆ ಕೈಯೊಬ್ಬ, ಕಾಲೊಬ್ಬ ಹಿಡಿದು ಎತ್ತಿಕೊಂಡು ಹೋಗಿ ಆಗ ತಾನೆ ಮಳೆಹೊಯ್ದು ಚರಂಡಿಯಲ್ಲಿ ಹರಿಯುತ್ತಿದ್ದ ನೀರಿಗೆ ನನ್ನನ್ನು ಅದ್ದಿಬಿಟ್ಟುಬಿಟ್ಟರು. ಎಲ್ಲರೂ ನನ್ನನ್ನು ನೋಡಿ ನಗುತ್ತಿದ್ದುದ್ದನ್ನು ನೋಡಿ, ‘ಹೀಗೇಕೆ ಮಾಡಿದರೆಂದು’ ಕೇಳಲು, ‘ನೆನ್ನೆ ಕಾಮನ ಹಬ್ಬ, ಈ ದಿನ ಓಕುಳಿ. ಹೊಸಬರು ಬಂದರೆ ಹೀಗೆಯೆ ಮಾಡುವುದು’ ಎಂದು ಹೇಳಿದರು. ಒಳಗೆ ಹೋಗಿ ಸ್ನಾನಮಾಡಿಕೊಂಡು ಹಿಂದಿರುಗಿ ಬರುವಾಗ ಅಲ್ಲೊಂದು ಮನೆಯಲ್ಲಿ ಹಾಡುತ್ತಿದ್ದಂತೆ ಕೇಳಿಸಿತು. ಹತ್ತಿರ ಹೋಗಿ ನೋಡಿದೆನು. ‘ಬನ್ನಿ…ಬನ್ನಿ…’ ಎಂದು ಕರೆದರು. ಒಳಕ್ಕೆ ಹೋಗಿ ನೋಡುವಲ್ಲಿ ಅಲ್ಲಿದ್ದವರೆಲ್ಲರೂ ಸಾಧುಗಳೆ. ‘ಭಜನ್ ಕರೊ…’ ಎಂದು ಹೇಳಿದರು. ಒಂದು ಗಂಟೆ ಹಾಡಿದೆನು. ನಂತರ ನನಗೆ ಅವರು ಸೊಗಸಾದ ಊಟ ಮಾಡಿಸಿದರು. ಬೆಳಿಗ್ಗೆ ಹೊರಟು ಹಗಲು ರಾತ್ರಿ ಎರಡು ದಿನಗಳು ರೈಲಿನಲ್ಲಿ ಆಗ್ರಾವನ್ನು ರಾತ್ರಿ ಎಂಟು ಗಂಟೆಗೆ ಸೇರಿದೆವು. ಆಗತಾನೆ ಹೊರಡಲು ಸಿದ್ಧವಾಗಿ ಬಸ್ಸಿನಲ್ಲಿ ಕುಳಿತು ಮಧುರೆಯನ್ನು ಸೇರಿದೆವು. ಬೆಳಿಗ್ಗೆ ಹೊರಟು ಯಮುನೆಯಲ್ಲಿ ಸ್ನಾನ ಮಾಡಿ, ದೇವರ ದರ್ಶನ ಮಾಡಿ ಆ ರಾತ್ರಿ ಇಳಿದುಕೊಂಡೆವು. ರಾತ್ರಿ ಶ್ರೀಕೃಷ್ಣನ ಉತ್ಸವವು ಹೊರಟಿತು. ದೇವರ ಮುಂದುಗಡೆ ಒಬ್ಬರ ಮೇಲೊಬ್ಬರು ಕೆಂಪುನಾಮವನ್ನು ಉಗ್ಗುವುದು ಸಣ್ಣ ಜೋಡಿ ಗಂಟೆಗಳನ್ನು ಕೈಯಲ್ಲಿ ಹಿಡಿದು ಕುಣಿಯುತ್ತಿದ್ದರು. ಅಲ್ಲಿಂದ ಬೆಳಿಗ್ಗೆ ಗೋಕುಲಕ್ಕೆ ಹೊರಟೆವು. ಅಲ್ಲಿ ಯಮುನೆಯಲ್ಲಿ ಸ್ನಾನ ಮಾಡಿಕೊಂಡು ದೇವರ ದರ್ಶನ ಮಾಡಿದೆವು. ಬೆಳ್ಳಿಯ ಕೊಳಲು, ಗೋಪಾಲ ವಿಗ್ರಹ, ನಡುವೆ ಎರಡು ಪಕ್ಕಗಳಲ್ಲಿ ಬೆಳ್ಳಿಯ ಗೋವಿನ ವಿಗ್ರಹಗಳು. ಇಲ್ಲಿಂದ ಮಧುರೆಗೆ ಸೇರಿ ದೇವರ ದರ್ಶನ ಮಾಡಿ ಆಗ್ರವನ್ನು ಮುಟ್ಟಿದೆವು. ಆಗ್ರವು ದೊಡ್ಡ ಪಟ್ಟಣ. ಯಮುನೆ ತಡಿಯಲ್ಲಿದೆ. ಬಲಗಡೆ ಸಹಜಾನ್ ಅರಮನೆಯಿದೆ. ಹಾಗೆಯೇ ಒಂದು ಪರ್ಲಾಗ್ ದೂರದಲ್ಲಿ ಯಮುನೆಗೆ ಸೇರಿದ ಹಾಗೆ ತಡಿಯಲ್ಲಿ ಲೋಕ ಪ್ರಸಿದ್ಧವಾದ ಮಮತಾಜ್ ಮಹಲ್ ಗೋರಿ ಇದೆ. ಹಿಂಭಾಗದಲ್ಲಿ ಯಮುನೆ ಇದೆ. ಮುಂಭಾಗದಲ್ಲಿ ಉದ್ದ ಮತ್ತು ಹಗಲವಾದ ಕಲ್ಲು ತೊಟ್ಟಿಯಿದೆ. ಇದು ನೀರಿಂದ ಯಾವಾಗಲೂ ತುಂಬಿದೆ. ಎರಡೂ ಕಡೆ ಎತ್ತರವಾಗಿರುವ ಮರಗಳನ್ನು ಬೆಳೆಸಿದ್ದಾರೆ. ಅವುಗಳ ನೆರಳು ಆ ತೊಟ್ಟಿಯ ನೀರಿನಲ್ಲಿ ಕಾಣುವವು. ನಾಲ್ಕು ದಿಕ್ಕುಗಳಲ್ಲೂ ಹಾಲುಗಲ್ಲಿನ ಎತ್ತರ ಸ್ತಂಭಗಳಿವೆ. ಯಮುನೆಯ ಪಕ್ಕದ ಎಡಭಾಗದ ಸ್ತಂಭದ ಮೇಲು ಭಾಗದಲ್ಲಿ ಗೋವಿಂದದಾಸ್, ಮೈಸೂರು ಮತ್ತು ತಾರೀಖುಗಳನ್ನು ಗುರುತಿಸಿ ನಮ್ಮವರು ಯಾರಾದರೂ ಇಲ್ಲಿಗೆ ಬಂದರೆ ಗುರುತಿಸಿ ಎಂದು ಕೊರೆದಿದ್ದೇನೆ. (ಕಬ್ಬಿಣದ ಮೊಳೆಯಿಂದ) ತಾಜಮಹಲಿನೊಳಕ್ಕೆ ಹೋಗಲು ಬಲಗಾಲನ್ನು ಒಳಗೆ ಇಟ್ಟಿದೆ. ಹೊರಬಾಗಿಲಿನಲ್ಲಿ ಕಾವಲಿದ್ದ ಪರಂಗಿಯವನೊಬ್ಬನು ನನ್ನ ಕೈಯನ್ನು ಬಲವಾಗಿ ಹಿಡಿದು ಹಿಂದಕ್ಕೆಳೆದು ‘I will shoot you begger. \ರುಕನೆ ನಿನ್ನನ್ನು ನಾನು ಬಂದೂಕಿನಿಂದ ಸುಡುವೆನೆಂದು ಕೈಲಿದ್ದ ಬಂದೂಕನ್ನು ಎದೆಗೆ ಗುರಿಮಾಡಿದನು. ನನ್ನಾಟವು ಇಂದಿಗೆ ಮುಗಿಯಿತೆಂದು ನಡುಗುತ್ತ ನಿಂತುಬಿಟ್ಟೆನು. ‘who are you?’ ನೀನು ಯಾರೆಂದನು. ಉಸಿರಿಲ್ಲದ ಧ್ವನಿಯಿಂದ ‘I am a Mysore’ ಎಂದೆನು. ‘O! you come From such a long distance? ಓಹೋ ನೀನು ಬಹಳ ದೂರದಿಂದ ಬಂದಿರುವೆಯೆಂದನು. ‘yes’ ಹೌದು ಎಂದೆನು. ‘come in I will show you every thing’ ಬಾ ನಾನು ನಿನಗೆ ಎಲ್ಲವನ್ನು ತೋರಿಸುವೆನೆಂದು ಕರೆದನು. ಆಗ ಸಂತೋಷದಿಂದ ಒಳಕ್ಕೆ ಹೋಗಿ ನೋಡಿದೆನು. ಈ ಕಟ್ಟಡ ಪೂರ್ಣವಾಗಿ ಅಮೃತಶಿಲೆ ಹಾಲುಗಲ್ಲಿನಿಂದಲೆ ಕಟ್ಟಿದೆ. ಕಟ್ಟಡದ ನಡುವೆ ಭೂಮಟ್ಟದಲ್ಲಿ ಮಮತಾಜ್ ಬೇಗಂಳಗೋರಿ ಇದೆ. ಇದರ ಸುತ್ತಲೂ ಚಚ್ಚೌಕವಾಗಿ ಹಾಲುಗಲ್ಲಿನಿಂದಲೆ ಸುಮಾರು ಆಳು ಪ್ರಮಾಣದಲ್ಲಿ ಹಾಲುಗಲ್ಲು ಕಟಕಟೆ ಇದೆ. ಇದು ಶಿಲ್ಪಕಲಾನಿಪುಣರು ಅಂದವಾಗಿ ಬಿಡಿಸಿ ಕೊರೆದು ಕೆತ್ತಿರುವ ಹೂಬಳ್ಳಿ ಚಿತ್ರಗಳಿಂದ ಕೂಡಿದೆ. ಹೊರಗಡೆ ನೆಲಕ್ಕೆ ಬಣ್ಣಬಣ್ಣದ ಅಮೃತಶಿಲೆ ಕಲ್ಲುಗಳನ್ನೆ ಹೊಂದಿದ ತಾಜಮಹಾಲು. ವಿಶಾಲವಾದ, ಮನೋಹರವಾದ, ಬಗೆಬಗೆಯಾದ ಹಣ್ಣು, ಹೂ ಮರಗಿಡ, ಬಳ್ಳಗಳಿಂದ ಕೂಡಿದ ಒಂದು ಶೃಂಗಾರವಾದ ಉದ್ಯಾನವನದಂತಿದೆ. ಇಲ್ಲಿ ಬೆಳೆದಿರುವ ಗುಲಾಬಿ ಹೂವು ಬಹಳ ದೊಡ್ಡವು. ವಿದ್ಯಾರ್ಥಿಗಳಿಗೆ ಓದಿಕೊಳ್ಳಲು ಇಲ್ಲಿ ಬಹಳ ಸೊಗಸು. ಕವಿಗಳಿಗೆ ನೆಲೆವೀಡು. ಅಲ್ಲಿಂದ ಡೆಲ್ಲಿಗೆ ಹೋದೆವು. ಅಲ್ಲಿ ಸಹಜಹಾನ್ ಚಕ್ರವರ್ತಿಯ ಅರಮನೆ, ಭಾರತದ ಕಛೇರಿ ವೈಸರಾಯ್ ಬಂಗಲೆಗಳನ್ನು ನೋಡಿದೆವು. ಒಂದೆರಡು ದಿನಗಳಿದ್ದು ಮುಖ್ಯಮುಖ್ಯ ಬೀದಿಗಳನ್ನೆಲ್ಲಾ ನೋಡಿದೆವು. ಆ ಪಟ್ಟಣದಲ್ಲಿ ನಾನು ಸಂಚರಿಸುವಾಗ ಇಲ್ಲಿ ಪಾಂಡವರು ಹೆಜ್ಜೆಗಳನ್ನು ಊರಿರಬಹುದೆಂದು ಹೆಜ್ಜೆ ಹೆಜ್ಜೆಗೂ ನೆನೆಪಿಸಿಕೊಳ್ಳುತ್ತಿದ್ದೆನು. ಆಗ ಮೈಗೂದಲೆಲ್ಲ ನೆಟ್ಟಗಾಗುತ್ತಿದ್ದಿತು. ಯಮುನೆಯಲ್ಲಿ ಸ್ನಾನಮಾಡಿಕೊಂಡು ಹಿಂದಿರುಗುವಾಗ ಯಮುನಾ ದಡದಲ್ಲಿ ಮೈಯ್ಯನ್ನೆಲ್ಲಾ ಬೂದಿಮುಚ್ಚಿಕೊಂಡು ಕುಳಿತಿದ್ದ ಸಾಧುವೊಬ್ಬನು ನನ್ನನ್ನು ಕರೆದು ಎರಡು ಲಾಡುಂಡೆಗಳನ್ನು ಕೊಟ್ಟನು. ಇಲ್ಲಿ ಸೊಗಸಾದ ಕಿತ್ತಳೆ, ದಾಳಿಂಬೆ, ಇನ್ನೂ ಅನೇಕ ಬಗೆಯ ಹಣ್ಣಿನ ವ್ಯಾಪಾರ ಹೆಚ್ಚು. ವಿಕ್ಟೋರಿಯ ಪ್ರತಿಮೆ ಇರುವ ಗಡಿಯಾರದ ಟವರ್ ಪಕ್ಕದಲ್ಲಿಳಿದಿದ್ದೆವು. ನೂರವೊಂದು ಮೈಲು ದೂರದಲ್ಲಿರುವ ಕುರುಕ್ಷೇತ್ರವೆಂಬ, ಹಿಂದೆ ಕೌರವರು, ಪಾಂಡವರು ಯುದ್ಧ ಮಾಡಿದ ಭೂಮಿಯನ್ನು ನೋಡಲು ಹೊರಟಿದ್ದೊ. ಬಂದು ಬಹಳ ದಿವಸವಾಯಿತೆಂದು ಹರಿದ್ವಾರಕ್ಕೆ ಬಂದೆವು.

ಹರಿದ್ವಾರವು ಗಂಗಾತೀರದಲ್ಲಿದೆ. ಇಲ್ಲಿ ನೋಡುಗರಿಗೆ ಆನಂದ. ದೊಡ್ಡದೊಡ್ಡ ಮೀನುಗಳಿವೆ. ಅಕ್ಕಿಹಿಟ್ಟನ್ನು ಮುರಿದು ಮುರಿದು ನೀರಿಗೆ ಎಸೆದು ನೋಡುತ್ತಾರೆ. ಗುರುಕುಲಾಶ್ರಮವು ಬಹಳ ದೊಡ್ಡದು. ಹತ್ತಿರದ ಹಿಮಾಚಲಕ್ಕೆ ಪಾಂಡವರೈವರು ದ್ರೌಪದಿಯೊಡನೆ ಹೋಗುವಾಗ ಬಾಯಾರಿಕೆಯಾಗಲು ಭೀಮನು ಗದೆಯಿಂದ ಭೂಮಿಗೆ ಗುದ್ದಲು ನೀರು ಬಂದ ಸ್ಥಳವಿದೆ. ಇಲ್ಲಿ ತುಳಸಿ, ಜಪಮಣಿಗಳ ವ್ಯಾಪಾರ ಹೆಚ್ಚು. ಇಲ್ಲಿಂದ ಹೃಷಿಕೇಶಕ್ಕೆ ಬಂದು ಡೆಹರಾಡೂನಿಗೊಂದು ದೊಡ್ಡ ರೈಲುಗಳಲ್ಲಿ ಹೋದೆವು. ನಾವು ಕಾಲು ನಡಿಗೆಯಲ್ಲೆ ನಡೆದು ಸುಮಾರು ಹನ್ನೆರಡು ಮೈಲು ದೂರ ನಡೆದು ಹಿಮಾಲಯ ತಪ್ಪಲಲ್ಲಿರುವ ಹೃಶಿಕೇಶವನ್ನು ಸೇರಿದೆವು. ಹೃಷಿಕೇಶವು ಸಾಧಾರಣ ಪಟ್ಟಣ. ಯಾತ್ರಾಕ್ಷೇತ್ರ. ಹಿಮಾಲಯದಲ್ಲಿ ಜನಿಸುವ ಗಂಗೆಯ ನೀರೆಲ್ಲ ಒಂದುಗೂಡಿ ಇಲ್ಲಿಂದಲೆ ಹರಿಯುವುದು. ನೀರು ಬಲು ಸೆಳತ. ಬಹಳ ತಂಡಿ. ಗಂಗೆಯಲ್ಲಿ ಮಿಂದು ಶ್ರೀಕೃಷ್ಣ ದರ್ಶನ ಮಾಡಿದೆವು. ಆ ದಿನ ಸಂಸ್ಕೃತ ಕಾಲೇಜಿನಲ್ಲಿ ವಿದ್ವತ್ ಪರೀಕ್ಷೆಯು ನಡೆಯುತ್ತಿತ್ತು. ನಾನು ಕಾಲೇಜು ಕಟ್ಟಡದ ಮೇಲ್ಭಾಗದಲ್ಲಿ ಕುಳಿತು ಉತ್ತರದಲ್ಲಿರುವ ಹಿಮಾಚಲವನ್ನೆ ದಿಟ್ಟಿಸಿ ನೋಡುತ್ತ ಬಹಳ ಹೊತ್ತು ಕುಳಿತಿದ್ದೆನು. ಅದು ಆಗ ಫೆಬ್ರವರಿ ತಿಂಗಳಿನ ಹಿಮವಾದ್ದರಿಂದ ಮಂಜುಗಡ್ಡೆಗಟ್ಟಿ ಗುಡ್ಡಗಳಾಗಿದ್ದುದರಿಂದ ಹಿಮಾಚಲ ಆಕಾಶಕ್ಕೆ ಸೇರಿ ಒಂದಾದಂತೆ ಕಾಣುತ್ತ ನೋಡುವುದಕ್ಕೆ ಅಷ್ಟು ಚೆನ್ನಾಗಿ ಗೋಚರವಾಗುತ್ತಿರಲಿಲ್ಲ. ಪರ್ವತದಲ್ಲಿಯೆ ಇಪ್ಪತ್ತು ಮೈಲಿಗೂ ದೂರದಲ್ಲಿದ್ದ ಧ್ರುವನು ತಪಸ್ಸನ್ನಾಚರಿಸಿದ ಬದರಿನಾಥ, ಕೇದರಿನಾಥಗಳಿಗೆ ಹೋಗಬೇಕೆಂದಿದ್ದೆವು. ಹೃಷಿಕೇಶದಲ್ಲಿರುವ ಬಾಬುಕಾಳಿ ಕಂಬಳಿವಾಲ ಎಂಬುವರು ‘ಅಬ್ ಜಾನೇಕು ನಹಿ ಹೋತಿ. ಏಕ್ ಮೈನ ಇದಲ್ ರಹೆತೊ ರಸ್ತಾ ಕುಲ್ ಹೋತಾ ಹೈ’ ಎಂದರು. ಸಾಧು ಗುಂಪಿನಲ್ಲಿದ್ದ ನಮಗೆ ಸ್ವಾಮಿಯು ದಾರಿಯುದ್ದಕ್ಕೂ ಆಹಾರ ಪದಾರ್ಥಗಳನ್ನು ಕೊಳ್ಳಲು ಬದರಿ, ಕೇದರಗಳಿಗೆ ಹೋಗಲು ಚೀಟಿಯನ್ನು ಕೊಡಬೇಕಾಗಿತ್ತು. ಇದು ಕಾಲವಲ್ಲವೆಂದು ದಾರಿಯು ಮಂಜಿನಗುಡ್ಡಗಳಿಂದ ತುಂಬಿರುವುದರಿಂದ ಈಗ ಹೋಗಲು ಸಾಧ್ಯವಿಲ್ಲವೆಂದು ಇನ್ನು ಒಂದು ತಿಂಗಳು ಇಲ್ಲಿದ್ದು, ಅಷ್ಟರಲ್ಲಿ ಬಿಸಿಲು ಕಾಲ ಬಂದು ಕಾಯ್ದು, ನೀರಾಗಿ, ಮಂಜಿನಗೆಡ್ಡೆಗಳು ಗಂಗಾನದಿಗೆ ಹರಿದು ಒಂದು ರಸ್ತೆಯೆಲ್ಲ ಬಿಡುವಾಗುವುದು. ಆಗ ಹೋಗಲು ಅನುಕೂಲವಾಗುತ್ತದೆಂದು ಹೇಳಿದನು. ಆಗ ಪುನಃ ಹರಿದ್ವಾರಕ್ಕೆ ಬಂದು ರೈಲಿನಲ್ಲಿ ಕಾನ್ಪುರದ ಮಾರ್ಗವಾಗಿ ಲಕ್ನೋವನ್ನು ಸೇರಿದೆವು. ಲಕ್ನೋ ದೊಡ್ಡ ಪಟ್ಟಣ. ಇಲ್ಲಿ ಸಿಡಿದಂಡು ಎಂದು ಸೈನ್ಯವಿದೆ. ಇಲ್ಲಿಗೆ ಸುಮಾರು ಏಳೆಂಟು ಮೈಲಿ ದೂರದಲ್ಲಿ ಶ್ರೀರಾಮನ ರಾಜಧಾನಿಯಾದ ಅಯೋಧ್ಯೆಯಿದೆ. ಅಲ್ಲಿಗೆ ಕಾಲುನಡಿಗೆಯಿಂದಲೇ ಹೋದೆವು. ರೈಲ್ವೇಗೇಟಿನವನೊಬ್ಬನು ಅಯೋಧ್ಯೆಯೊಳಕ್ಕೆ ಹೋಗುವರೆಲ್ಲರು ಅಗಲವಾಗಿ ಹಣೆಗೆ ಮೂರು ನಾಮವಿಟ್ಟುಕೊಳ್ಳಬೇಕು. ಹೆಗಲ ಮೇಲೊಂದು ದೊಣ್ಣೆ ಇರಬೇಕು. ಬಾಯಲ್ಲಿ ರಾಮರಾಮನೆನ್ನುತ್ತಿರಬೇಕು ಇಲ್ಲದಿದ್ದಲ್ಲಿ ಕಪಿಗಳು ತಂಟೆ ಮಾಡುತ್ತವೆಂದು ಹೇಳಿದನು. ನಾವು ಹಾಗೆಯೇ ಮಾಡಿದೆವು. ಅಯೋಧ್ಯೆಯು ಯಾತ್ರಾಕ್ಷೇತ್ರ. ಗಂಗಾನದಿಯ ತೀರದಲ್ಲಿದೆ. ಶ್ರೀರಾಮ ದೇವರ ಅರಮನೆಯಿದೆ. ತುಳಸಿದಾಸರ ಛತ್ರವಿದೆ. ಇಲ್ಲಿ ಸದಾ ಯಾತ್ರಾರ್ಥಿಗಳಿಗೆ ಅನ್ನದಾನ ನಡೆಯುವುದು. ಈ ಬಳಿ ಒಂದು ದೊಡ್ಡ ಕಪಿಯು ಮೊಸರ ಮಾರುವವಳನ್ನು ಹೊತ್ತುಕೊಂಡು ಹೋಗಿ ಮಡಕೆಯನ್ನು ಒಡೆದು ಹಾಕಿತು. ಆಂಜನೇಯನ ದೊಡ್ಡ ದೇವಸ್ಥಾನವಿದೆ. ಇದರ ಸುತ್ತಲೂ ಉದ್ದವಾದ. ದಪ್ಪವಾದ ಹಣೆಯ ಮೇಲೆ ನಾಮವುಳ್ಳ ಕಪಿಗಳು ತುಂಬಿವೆ. ಯಾತ್ರಾರ್ಥಿಗಳು ಇಲ್ಲಿಗೆ ಪೂಜೆಗೆ ಹೋದಾಗ ಒತ್ತಾಸುಪುರಿಗಳನ್ನು ಎರಚಿ ಬರುತ್ತಾರೆ. ನಾವು ಅಲ್ಲಿಗೆ ಹೋದ ದಿನ ಏಕಾದಸಿ. ಆ ದಿನ ಎಲ್ಲರೂ ಉಪವಾಸವೇ. ಹೋಟೆಲು, ಛತ್ರಗಳಲ್ಲಿಯೂ ಊಟ-\ಂಡಿ ದೊರೆಯುವುದಿಲ್ಲ. ನನ್ನಲ್ಲಿ ಗೋದಿರೊಟ್ಟಿಯೊಂದಿತ್ತು. ದೂರ ಹೋಗಿ ಗಂಗಾಸ್ನಾನ ಮಾಡಿ ಆ ರೊಟ್ಟಿ ಮುರಿದು ಒಂದು ತುತ್ತು ಬಾಯಲ್ಲಿಡುವಷ್ಟರಲ್ಲಿ ಮರದ ಮೇಲೆ ಮರೆಯಾಗಿದ್ದ ಕಪಿಯೊಂದು ಛಕ್ಕನೆ ಹಾರಿ ಕೈಯಲ್ಲಿದ್ದ ರೊಟ್ಟಿಯನ್ನು ಕಿತ್ತುಕೊಂಡು ಮರದ ಮೇಲಕ್ಕೆ ಹೋಯಿತು. ಆಗ ಒಂದು ತೋಟಕ್ಕೆ ಹೋಗಿ ಅಳಲೆಕಾಯಿಯಂತಿರುವ ಒಂದು ವಿಧವಾದ ಹಣ್ಣನ್ನು ತಿಂದು ರೈಲ್ವೆ ಸ್ಟೇಷನ್ನಿಗೆ ಬಂದು ರೈಲಿನಲ್ಲಿ ಕುಳಿತು ಜೈಪುರ, ಜೋತ್ ಪುರ, ಉದಯಪುರ, ಪಂಜಾಬಿನಲ್ಲಿ ಜೈನರ ಯಾತ್ರಾಸ್ಥಳವಾದ ಅಬು ಮೂಲಕ ಬಂದು ಸಹಜಾನ್ ಪುರಕ್ಕೆ ಬಂದೆ. ಸಹಜಾನ್ ಪುರದಿಂದ ಮೀಟರ್ ಗೇಜ್ ರೈಲಿನಲ್ಲಿ ಕುಳಿತು ಕಾಶಿಗೆ ರಾತ್ರಿ ಎಂಟು ಗಂಟೆಗೆ ಬಂದು ಹಿಂದೂ ಕಾಲೇಜಿನ ಅಡಿಗೆ ಮನೆಯಲ್ಲಿ ಮಲಗಿಕೊಂಡೆವು.