ನಡುನೀರ ಹಡಗು

ದೇವತಾ ಪ್ರಾರ್ಥನೆ

ವೀರ ಅಂಬೇಡ್ಕರ್ ಗುಣಗಾನ

ಅಂಬೇಡ್ಕರ್ ವಂಭತ್ತುಕೋಟಿ ಜನರೊಡೆಯ ಜೈ ಜೈ      ||ಪ||

ನಂಬಿದೆವು ನಿಮ್ಮನು ನಾವೆಲ್ಲ |
ಬೆಂಬಿಡದೆ ಭೇದವ ಹರಿಸೆಲ್ಲ |
ಭಾರತ ಸಚಿವರ ಧೀರ ವೀರ ಸುವಿ |
ಚಾರ ಪರನೆ ಸುಗಾಣಾನ್ವಿತ ಜೈ        ||ಅ||

ಅಂತ್ಯಜರೊಳಗವತೌರಕನೆ |
ನೆರೆ ಖ್ಯಾತಿ ಜಗದೊಳಾಂತವನೆ |
ಶ್ರೀಮಂತ ವಿದ್ಯಾಸಾಗರನೆ ದಯಾಮಯ |
ಸಂತತ ಮತ ಸುಧಾರಕ ಜೈ – ಜೈ       ||೧||

ಹಿಂದೆ ಘನಾತನ ಜನರಿಂದೆ |
ಮತ ಭೇದ ಕಳಂಕದಿ ಬೆಂದೆ |
ಎದೆಗುಂದದ ಮನದಿಂ ನಿಂದು ಬಂಧನದಿ |
ಮಂದ ಭಾಗ್ಯ ಮತ ಕುಂದನಳಿಸು ಜೈ ಜೈ       ||೨||

ನಿನ್ನಿಂದ ಕುಲಕೆ ಬಲು ಸನ್ಮಾನ |
ಭರದಿಂದ ಬಾರ ಉನ್ನತ ತಾಣ |
ಸತ್ವ ಶೂನ್ಯ ಮತಕಿತ್ತು ಚೇತನವ |
ಭೃತ್ಯತನವ ಕಿತ್ತೋರಿಸೆ ನಿಂದಿಹೆ       ||೩||

ದಣಿನಿರ್ಪೆದೇಹವಂ ಸೊಗಸಾಗಿ |
ಫಣವಿಟ್ಟೆ ಪ್ರಾಣ ನೀನೆಮಗಾಗಿ |
ಸಮಾಜ ಬಾಹಿರರ ವೀರ ಸಿಂಹ ನೀಂ |
ಧನ್ಯ ಅಂತ್ಯಜಾಗ್ರಣ್ಯ ಭಲೆ ಜೈ-ಜೈ   ||೪||

ಭಾರತ ಮಾತಾ ನೀ

ಮಾತೃ ಭಾರತಿ ವರಸೌಭೇದವ, ಹರಸೌ ಹರಿಜನರಂ      ||ಪ||

ನಿನ್ನ ಗರ್ಭದಿಬಂದ ದೌರ್ಭಾಗ್ಯ ಹರಿಜನರನ್ನು
ಸನ್ಮತಿಯಿಂದಲಿ ಉನ್ನತಿಗೆಳೆಯೌ      ||೧||

ನಿನ್ನ ಸೇವೆಗೆ ನಾವು ಅನವರತ ದುಡಿಯುತೆ ಜೀವ
ವನ್ನು ತೆರುತೆ ವೀರತ್ವ ದೋರುವೆವು             ||೨||

ಹಿಂದು ಬಾಂಧವ ರಂದದಿ ನೀನಿಂದು ಕಾಣ್ ನಮ್ಮೆಂದು
ಬಂಧನ ತೊಡೆಂತಾಂ ಖ್ಯಾತಿಯ ಪಡೆಯ         ||೩||

ಒಂದನೆ ಅಂಕ (ಬೈರ ಹಾಡುತ್ತ ಪ್ರವೇಶಿಸುವನು)

ಹಾಡು : ಅತ್ತ ಪೋಗಿರತ್ತ ಪೋಗಿ ಅತ್ತತ್ತ ಸಾಗಿ           ||ಪ||

ಉತ್ತಮರೆ ನೀವೆಲ್ಲ ಅತ್ತತ್ತ ಪೋಗಿ
ಹತ್ತಿರಕೆ ಬರಬೇಡಿ ರತ್ತಪೋಗಿ ಅತ್ತತ್ತ ಸಾಗಿ |
ಉತ್ತಮನು ನಾನಲ್ಲ ಅತ್ತ ಪೋಗಿ ||

ಮಾತು : ಅಯ್ಯೊ ದ್ಯಾವ್ರೆ ! ನಾನು ಮನುಸ್ನಲ್ವಾ. ರಾಜ್ಜೀದ್ಯಾಗೆ ಹೋಗ್ಲಿಕ್ಕೆ ನಮ್ಗೆ ಹಕ್ಕಿಲ್ವ. ಅಗೊ ಅಲ್ಲಿ ಕತ್ತೆ, ಕುದುರೆ, ನಾಯಿ ಹಂದ್ಗಳೆಲ್ಲ ಹೋಗ್ತಾ ಇವೆ ನಾನು ಅವ್ಕಿಂತ ಕಡ್ಮೆ. ಮೇಲ್ಜಾತೋರು ಹಿಂಗೆಲ್ಲ ಮಾಡಿದೋರು ಅಂತ ಕಾಣ್ತದೆ, ಇದೇನನ್ಯಾಯ ಉಗ್ಳ ಎಲ್ಲು ಉಗಿದೆ ಕೊಳೆಕಟ್ಟಿರೊ ಕುಡ್ಕೆ ಉಕ್ಕೊಬೇಕಲ್ಲ. ಅದಿರ್ಲಿ ಶಿವಶಿವ, ನಾವ್ನಡೆದ ಹೆಜ್ಜೆಮ್ಯಾಗೆ ಬ್ಯಾರೆ ಜಾತೋರು ತಿರ್ಗಾಡಿದ್ರೆ ಜಾತ್ಗೆಡ್ತಾರೆ ಅಂತ ನಮ್ಮ ಹೆಜ್ಜೆ ಅಳ್ಸೋಗಾಕೆ ಸೊಂಟ್ಕೆ ಬರ್ಲು ಕಟ್ಟೊಬೇಕಲ್ಲ. ಛೇ, ನಾಯ್ಗಿಂತ ಕಡೆಲ್ಲ ನಮ್ಮ ಬಾಳು. ನಮ್ಮ ಜನ್ಮ ಈ ಲೋಕದಲ್ಲಿರಬಾರ್ದು.

ಹಾಡು : ಅಂತ್ಯಜಂಗೀ ಚಿಂತೆಬಾಳು ಭೇದ ಚಿಂತೆಬಾಳು |
ಅಂತ್ಯವಾಗುವತನಕ ಇಂತಾ ಗೋಳು ||

ಮಾತು : ದೂರ ಹೋಗ್ಬಿಡಿದ್ಯಾವ್ರೆ ನಾನು ಕೀಳ್ಜಾತೋನು, ಬೀದ್ಯಾಗ ಬತ್ತಾ ಇದೀನಿ ನೋಡ್ರಿ. ಉತ್ತಮ ಜಾತ್ಯೋರು ಯಾರಾದ್ರು ಬರ್ತಾ ಇದ್ರೆ ದೂರ ಹೋಗ್ಬಿಡಿ. ಹೇಳ್ಲಿಲ್ಲ ಅಂದಿರ ಸಾರ್ತಾ ಇದೀನಿ ನೋಡಿ, ಆಮ್ಯಾಲೆ ಬೈಬ್ಯಾಡಿ, ಕಲ್ಲಿಂದ ಹೊಡಿಬ್ಯಾಡ್ರಿ. ಇವ್ನವಂಶ ಹಾಳಾಗಿ ಹೋಗ್ಬಿಡ್ಲಿ, ಯುವ್ನ ಮನ್ಗೆ ಬೆಂಕಿಬಿದ್ದು ಬೂದ್ಯಾಗ್ಲಿ ಅಂತ ಸಾಪ ಹಾಕ್ಬೇಡಿ, ಬರ್ತಾ ಇದೀನಿ ದೂರ ಹೋಗ್ಬಿಡಿ.

ರಾಮಭಟ್ಟ : ಸ್ವಾಮಿ, ರಾಜೈಯಂಗಾರೆ ಅಲ್ಲಿ ಮುಂದೆ ಬರೋನು ಯಾರು ಸ್ವಲ್ಪ ನೋಡಿ.

ರಾಜೈಯಂಗಾರ್ : ಸ್ವಾಮಿ, ಭಟ್ಟರೆ ಅವರ ವಂಶ ಇನ್ನು ಹಾಳಾಗಲಿಲ್ಲವಲ್ಲ. ನಮ್ಮ ಅಹ್ನಿಕವಿಧಿಗಳೆಲ್ಲ ವ್ಯರ್ಥವಾದುವಲ್ಲ. ಇವರಿಂದ ನಮಗೆಷ್ಟು ತೊಂದರೆ.

ರಾ.ಭಟ್ಟ : ಓಹೊ ಸ್ವಾಮಿ ಆ ಪಾಪಿ ಅಂತ್ಯಜ ನಮ್ಮ ಕಡೆಯೇ ಬರುತ್ತಿರುವನಲ್ಲ! ದಾರಿಯೆ ಅಪವಿತ್ರವಾಯಿತಲ್ಲ ಈಗೇನು ಮಾಡೋಣ.

ರಾಜೈ : ಭಟ್ಟರೆ ಮತ್ತೇನು ಮಾಡುವ ಹಾಗಿಲ್ಲ ಹಿಂದಕ್ಕೆ ನದಿಗೆ ಹೋಗಿ ಪುನಃ ಸ್ನಾನ ಮಾಡೋಣ.

ರಾ. ಭಟ್ಟ : ನಡಿಯಿರಿ ಬೇಗ ನಡೆಯಿರಿ (ಶಾಂತಂ ಪಾಪಂ, ಶಾಂತಂ ಪಾಪಂ) ಶ್ಲೋಕಃ ಅಂತ್ಯಜ ದರ್ಶನಂ ಪಾಪಂ, ಸ್ಪರ್ಶನಂ ಅಗ್ನಿ ಪ್ರವೇಶ

ರೆ.ಜಾನ್ (ಪ್ರದೇಶ)

ಹಾಡು :            ಏಸು ಸ್ವಾಮಿ ಭಜಿಸಿರಿ ಪ್ರೀತಿಯಿಂದಲಿ |
ಪ್ರೀತಿಯಿಂದಲಿ ಶುದ್ಧ ಪ್ರೀತಿಯಿಂದಲಿ ||ಪ||
ಮುಕ್ತಿ ಮಾರ್ಗ ದೋರುವವ ನೊಬ್ಬನೆ ಏಸು
ಶಕ್ತಿವಂತೆ ಮುಕ್ತಿವಂತ ನೊಬ್ಬನೆ ಏಸು ||೧||

ಉಪದೇಶ : ಸಹೋದರರೆ, ನೀವೆಲ್ಲರೂ ನಿಜವಾದ ತಂದೆಯ ಮಕ್ಕಳಾಗಬೇಕು. ಅವನು ಎಲ್ಲರನ್ನು ಒಂದೇ ರೀತಿಯಾಗಿ ಪ್ರೀತಿಸುತ್ತಾನೆ. ಆತನು ನಿಮ್ಮೆಲ್ಲರನ್ನು ಸತ್ಯಲೋಕದಿಂದ ಆಶೀರ್ವಾದಿಸುತ್ತಾನೆ. ನೀವು ಅವನನ್ನು ನಂಬಿದರೆ ನಿಮ್ಮನ್ನು ನೇರವಾದ ಸ್ವರ್ಗದಾದಿಯಲ್ಲಿ ನಡೆಸುತ್ತಾನೆ. ನಿಮ್ಮೆಲ್ಲರಿಗು ಜ್ಞಾನದ ಬೆಳಕನ್ನು ತೋರಿಸಿಕೊಡುವ ಪವಿತ್ರ ಕ್ರೈಸ್ತಮತವನ್ನು ಸೇರಿರಿ. ಆ ನಿಜವಾದ ತಂದೆಯೂ, ಮಾರ್ಗದರ್ಶಕನೂ ಆದ ಏಸು ಸ್ವಾಮಿಯ ಭಕ್ತರಾಗಿರಿ.

ಭೈರ : (ಭೈರನ ಪ್ರವೇಶ, ಹಾಡನ್ನು ಹಾಡುತ್ತ ಬೀದಿಯಲ್ಲಿ ಬರುತ್ತಿದ್ದಾನೆ)

ಉಪದೇಶ : ಸಹೋದರನೆ ನಿಲ್ಲು, ಇಲ್ಲಿ ಬಾ ನಿನಗೆ ಈ ಕಷ್ಟವೆಲ್ಲ ಬೇಗ ನಿವಾರಣೆಯಾಗಬೇಕಾದ್ದಲ್ಲಿ ನಮ್ಮ ಕ್ರೈಸ್ತ ಮತಕ್ಕೆ ಸೇರು. ನಮ್ಮ ಗುರುಗಳಿಂದ ದಿಕ್ಷಾನ್ನ ಮಾಡಿಸುತ್ತೇನೆ. ಈಗಲೆ ಬಾ ನಮ್ಮ ದೇವಸ್ಥಾನಕ್ಕೆ ಹೋಗೋಣ. ನಮ್ಮ ಮನೆಗಳಿಗೆ ಸೇರಿಸುತ್ತೇವೆ. ನಮ್ಮ ಪಂಕ್ತಿಯಲ್ಲಿ ಊಟ ಮಾಡಿಸುತ್ತೇವೆ. ನಮ್ಮ ಮಕ್ಕಳನ್ನೇ ಕೊಟ್ಟು ನಿನಗೆ ಲಗ್ನ ಮಾಡುತ್ತೇವೆ. ಏಸು ಸ್ವಾಮಿಯ ಭಕ್ತರಾದ ನಮಗೆ ಯಾವ ಮತೀಯರೇ ಆಗಲಿ ಎಳ್ಳಷ್ಟು ಭೇದವಿಲ್ಲ. ಈಗಲೆ ಹೋಗಿ ನಿನ್ನ ಕುಟುಂಬದವರನ್ನೆಲ್ಲ ಕರೆದು ಬಾ ನಮ್ಮ ದೇವಸ್ಥಾನಕ್ಕೆ ಹೋಗುವ.

ಭೈರ : ಸ್ವಾಮಿ ನೀವು ಹೇಳೋದು ನನಗೆ ಗೊತ್ತಾಯ್ತು. ನಮ್ಮ ವಳ್ಳೆದ್ಕಾಗೆ ನೀವು ಹೇಳ್ತಿದ್ದೀರಿ. ಆದ್ರೆ ಹಿಂದೂ ದೇಶದವನಾಗಿ ಹಿಂದೂ ಕುಲದಲ್ಲಿ ಹುಟ್ಟಿ ಹಿರಿಸ್ಥಾನ ಬಿಟ್ಟು ಕಿರಿಸ್ಥಾನ ನಾಗೋದಕ್ಕೆ ನನ್ನ ಮನ ಒಪ್ಪೊದಿಲ್ಲ. ಇನ್ನು ಕೆಲವು ದಿನ ನೋಡ್ತೇವೆ. ಹಿಂದುಗಳು ಹೀಗೆ ನಮ್ಮ ಕಂಡ್ರೆ ಭೇದ ಮಾಡ್ತಾ ಇದ್ರೆ. ನಿಮ್ಮ ಜಾತ್ಗೆ ಬಂದುಬಿಡ್ತೀವಿ. ಅಂತು ಈ ಜಾತಿ ಭೇದದ ನೋವ ಇನ್ನು ನಾವು ಸಹಿಸಲಾಗೊ.

೩ ಹಾಡು : ಆವನೋವ ಸಹಿಪೆವು ಬಡತನದ ನೋವ ಸಹಿಪೆವು | ಮತಭೇದ ನೋವ ಸಹಿಸೆವು ದರುಪುದು ನೆರೆ ಸಹಿಪುದಿಂದ ದಯಾಮಯ ಪರಿಹರಿಸು ಬೇಗ ||

ಮಸ್ತಾನ್ : ಠೆ ಅಮೀರಾವಿ, ಕೋನ್ ರೆ ಓ ಆದ್ಮಿ ಐ ನಾ ಆತ ಹೈ ರಸ್ತಾಮೆ.

ಅಮೀರಾಪಿ : ಓ ಆದ್ಮಿ ದೇಡ್ ಹೈರೆ ಬೈರ ಅಮಾರ ಗೌವಾಲ.

ಮರ್ಸಾ : ದೇಡ್ ಹೊಯೇ ತೊ ಕ ಯ್ಕು ಐನಾ ಆತಿ ಹೈ ಮಾದರ್ ಜೋದ್ . (ಬೈರನ ಹತ್ತಿರ ಬಂದು ಮಸ್ತಾನ್ ) ರೆ ಬಾಡಕಾ ಐಸ ಕಾಯ್ಕು ಆತ ಹೈರೆ.

ಭೈರ : ಸಾಹೇಬರೆ ಹೀಗೆ ನಾವು ಬರದಿದ್ರೆ ಹಿಂದುಗಳು ಬೀದ್ಲೆ ನಮ್ಮ ಕೂಡೋದಿಲ್ಲ. ನಮ್ಮ ಕಲ್ಲು ದೊಣ್ಣೆಯಿಂದ ಹೊಡೆದು ಬಿಡ್ತಾರೆ. ಅನೇಕರ್ನ ಕೊಂದಾಕ್ಬೆಟ್ಟವ್ರೆ.

ಮರ್ಸ್ತಾ : ಥೂ ತೇರಿ. ನಮ್ಮ ಜಾತ್ಯಾಗೆ ಬಂದು ಬಿಡೊ ಈವಾಗ್ಲೆ ನಮ್ಮನೆವಳ್ಗೆ ಕರ್ಕೊಳುತ್ತೇವೆ. ನಮ್ಜೊತೆ ವಳ್ಗೆ ಐ ತಲ ಕೂಡ್ಸಿಕೊಂಡು ಊಟ ಮಾಡ್ತೆವೆ. ನಮ್ಮಗಳ್ಗೆ ನಿಮ್ಗೆ ಷಾದಿ ಅಂದ್ರೆ ಮದ್ವೆ ಮಾಡ್ತೇವೆ. ಸುವ್ವರ್ ಅಷ್ಟೆ ಅಲ್ಲ, ದೇಕೊ ನಿಮ್ ಜನ್ ಗಳ್ ಐತಲ್ಲ ೯ ಕೋಟಿ ಇದ್ಬಿಟ್ಟಿದ್ದರೆ ಈ ದೇಶದಲ್ಲಿ. ನಮ್ಮ ಮುಸಲ್ಮಾನರು ಐತಲ್ಲ ೯ ಕೋಟಿ ಇದ್ಬಿಟ್ಟಿದ್ದಾರೆ. ಒಟ್ಟು ಅಂದ್ರೆ ಎಷ್ಟು ಗೊತ್ತೇನೊ ಮಾದರ್ ಚೋದ್ ೧೮ ಕೋಟಿ ಆಗ್ಬಿಡ್ತೀವಿ. ಒಟ್ಗೆ ನಾವು ನೀವು ೧೮ ಕೋಟಿ ಸೇರ್ಕೊಂಡಿ ಐತಲ್ಲ ನಿಂತೊಂಡ್ರೆ ಯಾರಿಗೂ ಎನ್ಮಾಡಲಿಕ್ಕು ಹೋತ ನೈ. ಮಾಲುಂ ಮಾದರ್ ಚೋದ್ .

ಭೈರ : ಸಾಹೇಬರೆ, ನಮ್ಮೋರು ಬಲ್ ಕಾಲ್ದಿಂದ ಈ ಹಾಳು ಜಾತಿಭೇದದ ಬೇಗೇಲಿ ಬೆಂದು ನೊಂದು ಸಾಕಾಗಿದ್ದಾರೆ ಇದು ಹೋಗೊದ್ಕಾಗಿ ನಮ್ಮ ಹಕ್ಕುಭಾದ್ಯತ್ತು ಪಡೆಯೋದ್ಕಾಗಿ ಇನ್ನು ಕೆಲ್ವ ದಿನ ಕಷ್ಟು ಪಡ್ತೀವಿ. ಹಾಗೂ ಹೋಗ್ದಿದ್ರೆ ನಿಮ್ಮತ್ಕೆ ಸೇರ್ಬಿಡ್ತೀವಿ. ಈಗ ಮಾತ್ರ ಸೋರೊದಿಲ್ಲ.(ಆತ್ಮಗತ) ಅಯ್ಯೋ ಜಾತ್ಗೆಡೋದೆ. ಕಿರಿಸ್ಥಾನಕ್ಕೆ ಸೇರ್ಕೊಳೋದೆ. ಅವರು ಎಡಗೆನ್ಗೆ ಹೊಡ್ದೆರೆ ಬಲಗೆನ್ನೆ ತೋರೊ ಸಪ್ಪೆಜಾತಿ, ತುರುಕರ ಜಾತ್ಗೆ ಸೇರ್ಬೇಕೆ… ಅಯ್ಯೊ ಅವು ನಡ್ತೆನುಡ್ತೆಯಲ್ಲ ಹಿಂದ್ಗಳ್ಗೆ ಬದ್ಲು. ಈಗ ನಮ್ಮಡ್ತೆಗಿಡ್ತೆನೆಲ್ಲ ಬಿಟ್ಟು ಹೋಗೋದ್ಕೆ ನಮ್ಮನ್ಸು ಒಪ್ಪೊದಿಲ್ ವಲ್ಲ. ಅಯ್ಯೊ ಯಾವ್ಜಾತಾದ್ರೇನು, ಜಾತ್ಬೇದ್ದ ನೋವು ಹೋದ್ರೆ ಸಾಕು. ಶಿವ್ನೆ ನಮ್ಮ ಉದ್ಧಾರ ಮಾಡ್ಬೇಕಂತ ಬಲ್ ಕಾಲ್ದಿಂದ ಬಸ್ವಣ್ಣನೋರು, ಗಾಂದೋರು ಏಟ್ ಕಷ್ಟ ಪಟ್ಟಿದ್ದಾರೊ ಅವರ್ಗೆ ನಾವೇನು ಹೇಳೋದು. ಅಲ್ದೆ ಈ ಬರ್ತ ದೇಶದಲ್ಲಿ ಹುಟ್ಟಿದ ನಮ್ಗೆ ನಾವು ಬ್ಯಾರೆ ಜಾತ್ಗೆ ಹೋಗ್ಬಿಟ್ರೆ ಈ ದೇಶ್ದ ಹಕ್ಕೆ ನಮ್ಗೆ ಇರಕಿಲ್ವಲ್ಲ.

೪. ಹಾಡು : ಭಾರತೇಯರೆ ತೊರೆವಿರಾ ಧೀರ ಅಂತ್ಯಜನರ ||ಪ||
ಉನ್ನತಿಗೆ ತಮತೆತ್ತ ಮಾನ್ಯರು ಮಹಾತ್ಮರಿಂ |
ಗಿನ್ನೇ ನೊರೆಯುವುದು ಯನ್ನವರೆ ಬನ್ನಿರೆನೆ ಪುಣ್ಯಲೋಕದಲಿ |
ಭಾರತ ಭಾದ್ಯತೆಗೆ ದೂರ ಮಾದೊಡಿನ್ನು
ಭಾರತೀಯೆಂಬಬಿಧಾನ ಸೂರೆ ಗೈದೊಡೀದಾರುಣಿಯುಬೇಕೆ ||೧||

ರಾಮಭಟ್ಟ : ಅಯ್ಯೊ ಅಯ್ಯೊ ಆಯಿತು ನನ್ನಗತಿ ಅಪವಿತ್ರನಾದೆ. ನನಗೆ ನರಕ ಪ್ರಾಪ್ತಿಯೆ ಸಿದ್ದ.

ಸುಬ್ಬಮ್ಮ : ಯಾಕೋ ಮಗು ಹೀಗೆ ಮಾತ್ನಾಡಿಯೊ. ಇದೆಂತ ಕನವರಿಕೆ. ಎಚ್ಚರವಾಗೊ. ಏನಪ್ಪ ಸಮಾಚಾರ ಹೇಳೊ.

ರಾ.ಭಟ್ಟ : ಅಮ್ಮಾ ಅಮ್ಮಾ ದೀಪ ಹೊತ್ತಿಸು.

ಸುಬ್ಬಮ್ಮ : (ದೀಪ ಹೊತ್ತಿಸಿ) ಅದೇನು ಹೇಳೊ, ಯಾಕೊ ಇಷ್ಟು ಗಾಬರಿ. ಅದೇಕೊ ಮೈಯಲ್ಲಿ ಬೆವರಿದೆ, ಗಂಟಲೇಕೆ ಕಟ್ಟಿಕೊಂಡಿದೆ. ಏನು ಸಮಾಚಾರ ಹೇಳಪ್ಪಾ.

ರಾ.ಭಟ್ಟ : ಅಮ್ಮ ನಾನು ಸ್ನಾನ ಸಂಧ್ಯಾವಂದನೆ ಅಹ್ನಿಕ-ಕರ್ಮಗಳನ್ನೆಲ್ಲಾ ತೀರಿಸಿಕೊಂಡು ನದಿಯಿಂದ ಬರುತ್ತಿದ್ದೆ. ಆಗ ಒಬ್ಬ ಅಂತ್ಯಜನು ನನ್ನನ್ನು ಮುಟ್ಟಿಸಿಕೊಂಡೇ ಹೋದ ಆಗ ಸ್ವಪ್ನ ಕಂಡಂತಾಗಿ ಗಾಬರಿಪಟ್ಟು ಹೆದರಿ ಕೂಗಿ ಕೊಂಡೆನಮ್ಮಾ.

ಸುಬ್ಬಮ್ಮ : ಅಯ್ಯೊ ಗ್ರಹಚಾರವೆ ಇದೇನೊ ನಮಗೆ ಕಷ್ಟಸಂಭವಿಸುವ ರೀತಿ ಕಾಣುತ್ತೆ. ಇನ್ನು ನಿನ್ನ ಹೆಂಡತಿ ಸತ್ತು ೩ ತಿಂಗಳಾಗಿಲ್ಲ. ಇದಕ್ಕೆ ಕೂಡ್ಲೆ ತಕ್ಕ ಶಾಂತಿ ಮಾಡಿಕೊಳ್ಳಬೇಕು.

ರಾ.ಭಟ್ಟ : ಶಾಂತಿಯೇನು ಈಗಲೆ ಸ್ನಾನಮಾಡಿ ಮಡಿಯುಟ್ಟು ಬೆಳಗಾಗುವತನಕ ಭಗವದ್ಗೀತಾ ಪಾರಾಯಣ ಮಾಡಿಕೊಂಡಿದ್ದು ಮುಂಜಾನೆ ಮತ್ತೆ ಹೊಳೆಗೆ ಹೋಗಿ ಸ್ನಾನ ಮಾಡಿ ಶ್ರೀರಾಮದೇವಸ್ಥಾನಕ್ಕೆ ಹೋಗಿ ದೇವರಿಗೆ ಮಂಗಳಾರತಿ ಮಾಡಿಸಿಕೊಂಡು ತೀರ್ಥ ಪ್ರಸಾದ ತೆಗೆದುಕೊಂಡು ಬಂದರೆ ಸರಿಹೋಗುತ್ತೆ.

ಸುಬ್ಬಮ್ಮ : ಹಾಗಾದರೆ ಏಳು ಈಗ ನೀರು ಕಾಯ್ದಿದೆ ಸ್ನಾನಮಾಡಿ ಮಡಿಯುಡು ಅಷ್ಟರಲ್ಲಿ ಗೀತಾ ಪೂಜೆಗೆ ಅಣಿ ಮಾಡುತ್ತೇನೆ.(ಗೀತಾ ಪೂಜೆ ಮತ್ತು ಪಠಣೆ) ಮಗು ಈಗೇಳು ಬೆಳಗಾಯಿತು ತಡ ಮಾಡಿದರೆ ಪುನಹ ಬೆಳಗಿನಲ್ಲಿ ಅಂತ್ಯಜದರ್ಶನವೇನಾದರೂ ಆದೀತು. ಇನ್ನು ಕತ್ತಲಾದರೂ ಚಿಂತೆಯಿಲ್ಲ ಹೊರಡು ನದಿಗೆ ಹೋಗಿ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ ಬರೋಣ.

(ಮಂಗಳಾರತಿ ಮಾಡಿಸಿ ತೀರ್ಥಪ್ರಸಾದ ತೆಗೆದುಕೊಂಡು ಹಿಂದಿರುಗುವರು)
(ಭೈರನ ಪ್ರವೇಶ)

೫ ಹಾಡು : ನೋಡಿ ನೋಡಿ ಹೇಗಿದೆ ಸೇಂದಿ ಮಜ |
ಕೈಲಾಸವಿರುವುದೆ ನಾಲ್ಕು ಗಜ         ||ಪ||
ನಾನೆ ಕೈಲಾಸದ ರಾಜ ನಿಜ |
ಯಾರೆ ಮಾತಾಡಿದ್ರು ಮಾತ್ತಿನ್ ಸಜ ||ಅ||

ಮಾತು : ನಾನ್ಯಾರು ನನ್ಗೆ ಕೈಲಾಸ ಇಲ್ಲೆ ಕಾಣ್ತದಲ್ಲ. ಈಗ ಗೊತ್ತಾಯ್ತು ನಾನು ಶಿವ್ನೆಯಿರ್ಬೇಕು ಹಾಗಾದ್ರೆ ಕೈಲಾಸ್ಕೆ ಅಧಿಪತಿ ಯಾರು? ಓಹೊ ನಾನೆಯಿರ್ಬೇಕು. ಹೌದು ನಾನೆ ಶಿವ. ಈಗ ನಾನು ದಾರ್ಯಾಗೆ ಹೋಗ್ತಾ ಇದ್ದಿನಲ್ವೆ. ಹೌದು, ನನಗೆ ಮೂರು ಲೋಕಗಳು ಕಾಣ್ತ ಅವಲ್ಲ.

ಸುಬ್ಬಮ್ಮ : ಯಾರೊ ಅಲ್ಲಿ ಬರ್ತಾ ಇರೋದು; ದೂರ ಹೋಗೊ ಒಳ್ಳೇನೊ ಕೆಟ್ಟೋನೊ ನೀನು.

ಭೈರ : ಯಾರಂಗನ್ನೋದು. ಯಾರಮ್ನೋಕೆ ಬರೋದು. ನಾನೊಳ್ಳೇನೊ ಕೆಟ್ಟೋನೊ ಅಂತಿಯಲ್ಲ. ಒಳ್ಳೇನಲ್ದೆ ಹುಳ್ತಿದ್ದೇನೇನು. ನಿನ್ಗೆ ಕಣ್ಣು ಕಾಣಕಿಲ್ವ ಯಿಂಗಿ ಹೋಗಿದ್ದಾವ. ಮೈಮ್ಯಾಲೆ ಗ್ಯಾನಿಲ್ದೆ ಮಾತಾಡ್ತ ಇದ್ದೀಯಾ, ಇಲ್ನೋಡು ಕೈಲಿ.

ಸುಬ್ಬಮ್ಮ : ಅಯ್ಯಯ್ಯೊ ಆಯ್ತು ನನ್ನಗತಿ ಇವನು ಅಂತ್ಯಜ ಕುಡಿದು ಬಿಟ್ಟಿದ್ದಾನೆ. ಮೈಮ್ಯಾಲೆ ಬೀಳ್ತಾನೆ. ದೊಣ್ಣೇ ತೋರ್ತಾನೆ. ಇಲ್ಲಿ ಯಾರೂ ಇಲ್ಲವಲ್ಲ ನಾನು ಇಲ್ಲಿಂದ ನದಿ ಕಡೆ ಹಿಂದಕೆ ಓಡಿದರೆ ಒಳ್ಳೆದಲ್ವೆ. ಹಾಗೆ ಮಾಡ್ತೀನಿ

(ನೀರು ಹೊತ್ತಿದ್ದ ಪಾತ್ರೆಗಳನ್ನೆಲ್ಲಾ ಕೆಡವಿ ನದಿಕಡೆ ಓಡುವಳು)

ಭೈರ : ಬಂದೆ ಬಂದೆ ನಿಲ್ಲು, ಓಹೊ ಓಡೇ ಬಿಟ್ಲು. ಈಗ ಇಳಿದ್ ಬಿಟ್ಟು ಈಚಲ್ ಮರದವ್ವ. ಇಲ್ಲಿ ಯಾರು ಇಲ್ಲ. ನಾನೊಬ್ನೆ ಓಹೊ ಏಸೊಂದವೆ ಬಿಂದ್ಗೆ ತಂಬ್ಗೆ ತಪ್ಲೆ. ಇವೆಲ್ಲ ನನಗೆ ಇನ್ಯಾರ್ಗೆ. ನಮ್ಮ ನೋಳ್ಗೆ ಅವಳು ಇನ್ಮಾಲೆ ಅಮ್ನೊರಾಗ್ಬಿಡತಾಳೆ ನಾನೊ? ಐಸೊರಾಗ್ಬಿಡತೀನಿ. (ಪಾತ್ರೆಗಳನೆಲ್ಲಾ ಹೊತ್ತುಕೊಂಡು ಮನೆಗೆ ಬರ್ತಾನೆ)

ಸಿದ್ದಿ : ನಾನು ಇವ್ನ ಕೂಡ್ದಾಗಲಿಂದ ಒಪ್ಪತ್ತು ಹೊಟ್ತುಂಬ ಉಣ್ಣಲಿಲ್ಲ. ಹರಿದ ಚಿಂದಿ ಬಟ್ಟೆ ಉಟ್ಕೊಂಡು ಹಗಲು ರಾತ್ರಿ ಶಿವ್ನೆ ಅಂದ್ಕೊಂಡು ಬಡ್ತನದಲ್ಲಿ ಬಾಳ್ಬೆ ಕಾಯ್ತಲ್ಲ. ಹಾಳ್ಮೂರು ಮಕ್ಕಳು ಬೇರೆ. ಅವನ್ಗೆ ಇವ್ಕೆ ಎಲ್ಲಿಂದ ಹೊಂದಿಸ್ಲಿ. ಹೊಟ್ಟೆನೇ ಕಟ್ಟಿಕಟ್ಟಿ ಸಾಕಾಯ್ತು. ಈ ಬಡತನದ ಬೇಗೇಲಿ ಇನ್ನೆಷ್ಟು ದಿನ ಬೆಯ್ಲಿ. ಗಂಡ ಅಂದ್ರೆ ಕಳ್ತನದಿಂದ ತಂದದ್ನೆಲ್ಲಾ ಮಾರಿಕುಡಿದು ಸಂಜೆ ಮನ್ಗೆಬಂದು ಮಲ್ಗಿಬಿಡ್ತಾನೆ. ಮಕ್ಕಳು ಉಂಡ್ವೆ ಉಟ್ಟಿ ಅನ್ನೋ ಸೊಲ್ಲೆ ಇಲ್ಲ. ಮಕ್ಕಳು ಹಸಿದು ಸಾಯ್ತಾವೆ. ಇದ್ಯಾಕೆ ಹೀಗ್ಮಾಡ್ತಿ ಅಂದ್ರೆ ಆಯ್ತು ನನ್ನ ಮೈಮೂಳೆ ಒಂದು ನೆಟ್ಗಿಲ್ಲ. ಆಗ್ಲಿ ಭಗವಂತ ನಿನ್ಗೆ ಇನ್ನು ನನ್ಮೇಲೆ ದಯೆ ಬರ್ಲಿಲ್ವ.

ಕಂದ :   ಬಡತನದ ಬಾಳಿಂದ ಬೆಂದರು |
ಒಡೆಯನು ಕುಡಿದು ಕುಡಿದು ಮಡದಿಮಕ್ಕಳೆನ್ನಾ |
ಕಡೆಗಾನಿಸುತೆನ್ನ ಜನ್ಮವ |
ಬಿಡದೆ ನಿನ್ನಡಿ ಸೇರಿಸಿಕೊ ಪರಮಾತ್ಮಾ ||

೬ ಹಾಡು : ಭಗವಂತನೆ ದಯದೋರೊ |ಪ|
ಹಗರಣ ಸಹಿಸೆನು ಜಗಜೀವನದಿ ||ಅ||
ಸಹಿಸೆನು ಬಡತನ ಬೇಗೆಯಲನುದಿನ
ದಹಿಪುದು ಒಡೆಯನು ಕುಡುಕನು ನೋಡಿದು ||

೭ ಹಾಡು : ಬಂದಿವ್ನಿ ನೋಡ್ಬಾರೆ ತಂದಿವ್ನಿ ಬೇಗ್ಬಾರೆ |
ಬಿಂದೀಗೆ ತಂಬೀಗೆ ತಪ್ಲೇಗಳ್ ತಂದಿವ್ನಿ |
ಮಣ್ ಮಡ್ಕೆ ಮಣ್ಮಡ್ಕೆ ಅಂತಿದೆ ದಿನ್ ದಿನ್ ವು
ಇನ್ಮ್ಯಾಲೆ ಯಾಕ್ಚೈತಿ ಯನ್ನಂತೆಯಾತಾರೆ ||

ಮಾತು : ಲೇ ಮನೆವಳ್ಗೆ ಯಾರೆ ಇರೋರು ತೆಗ್ಯೆ ಬಾಗ್ಲುಬೇಗ ಬಾರೆ ನೋಡು (ಮೀಸೆ ತಿರುವುತ) ಮನೇಲಿ ಬಿಂದ್ಗಿಲ್ಲ, ತಂಬ್ಗಿಲ್ಲ ತಪ್ಲಿಲ್ಲ ಅಂತ ದಿನಾ ಬೈತಿದ್ದೆಲ್ಲ ಈಗ್ನೋಡು ಬಾ ಏಸೊಂದ ತಂದಿವ್ನಿ.

ಸಿದ್ದಿ : ಅಯ್ಯೊ ದೇವ್ರೆ ಇವ್ನೆಲ್ಲ ಎಲ್ಲಿ ತಂದ್ರಿ. ಹಳೇವು ಕದ್ದೇನಾದ್ರು ತಂದಿರಾ?

ಭೈರ : ಇಲ್ಲ ಬರ್ತಿದ್ದೆ ದಾರ್ಯಾಗೆ ಬೋಳತಿ ಹಾರ್ವಮ್ಮ ಇವ್ರಲ್ಲಿ ನೀರ ಹೊತ್ಕೊಂಡು ಬರ್ತಾ ದೂರ ಹೋಗೊ ಮುಂಡೇದೆ ಒಳ್ಳೇನೊ ಕೆಟ್ಟೋನು ನೀನು ಅಂದ್ಲು, ಯಲಾ! ನಮ್ಮ ತಾಯಿ ತಲೆ ನಿನ್ನ ತಲೆ ಹಂಗೆ ಬೋಳಿಲ್ಲ. ನನ್ನ ಮುಂಡೆ ಮಗ್ನೆ ಅಂದೇ ಇಲ್ಲಿ ನೋಡು ಅಂತ ದೊಣಿ ತೋರ್ದೆ. ಅವಳು ಇವ್ನೆಲ್ಲಾ ಬಿಸಾಡಿ ಹಿಂದ್ಕೋಟ. ನಾನು ಅವ್ನೆಲ್ಲಾ ಹೊತ್ಕೊಂಡು ಮುಂದ್ಕೋಟ. ನೋಡು ನಾನು ಯಂತಾ ಭೈರ ಬೊಂಬಾಯಿಭೈರ.

ಸಿದ್ದಿ : ಛೆ ಇನ್ನಷ್ಟು ಬಡತನದಿಂದ ಬೆಂದರು ಕುಡುಕನಾದ ನಿನ್ನಿಂದ ಈ ರೀತಿಯಾಗಿ ತರಿಸಿಕೊಂಡು ನಾನು ನನ್ನ ಮಕ್ಕಳು ಜೀವಿಸಲಾರೆವು ಇದ್ದ ಸ್ಥಳಕ್ಕೆ ಮೊದಲು ತೆಗೆದುಕೊಂಡು ಬೀಸಾಡಿ ಬನ್ನಿ. ಇಲ್ಲದಿದ್ದರೆ ಮನೆಯೊಳಕ್ಕೆ ಸೇರಿಸುವುದಿಲ್ಲ.

ಭೈರ : ಬ್ಯಾಡ ಬ್ಯಾಡ ಆಮ್ಯಾಲೆ ನಾನು ಹ್ಯಾಂಗೆ ಹೊಟ್ಟೆ ಹೋರಿಲಿ ಈಗ್ಲೆ ಬೀಸಾಡಿ ಬರ್ತೀನಿ.(ಪಾತ್ರೆ ಬೀಸಾಡಿ ಬರ್ತಾನೆ)

೧ನೆ ಅಂಕ ಮುಕ್ತಾಯ

 

೨ನೇ ಅಂಕ ಪ್ರಾರಂಭ
(ಧರ್ಮಪುರಿಯಲ್ಲಿ ಅಂತ್ಯಜರ ರಾಮೋತ್ಸವವು ಉತ್ತಮರ ಬೀದಿಗೆ ಬರುತ್ತಾರೆ)

ಭಗವಾನ್‌ದಾಸ್ : ಹೊರಡಿ ಎಲ್ಲರೂ ರಾಮಭಜನೆ ಮಾಡುತ್ತ ಉತ್ತಮರ ಬೀದಿಯಲ್ಲೇ ಹೋಗೋಣ.

ಭೈರ : ಯಾರಾದರೂ ಬಂದು ತಡೆದರೆ?

ಭಗವಾನ್‌ದಾಸ್ : ಯಾಕೆ ಅಡ್ಡಿ ಮಾಡುತ್ತಾರೆ. ನಾವು ಯಾರಿಗೆ ಏನು ತೊಂದರೆ ಮಾಡುತ್ತೇವೆ? ಹಾಗೇನಾದರೂ ತಡೆದರೆ ಪೋಲಿಸರಿಗೆ ತಿಳಿಸೋಣ. ಯಾರೂ ಹೆದರಿಕೊಳ್ಳಬೇಡಿ. ಇನ್ನೆಷ್ಟು ಕಾಲ ಹೆದರಿಕೊಂಡೆ ಬಾಳುವುದು.

ಹಾಡು :            ರಘುಪತಿ ರಾಘವ ರಾಜಾರಾಮ
ಪತಿತ ಪಾವನ ಸೀತಾರಾಮ

ಬೋರೆಗೌಡ : ಯಾರೊ ಅಲ್ಲೆ ನಿಲ್ಲಿ. ಯಾರ ಭಯವೂ ಇಲ್ಲದೆ ನಮ್ಮ ಬೀದಿಯಲ್ಲೆ ಬರೋದಕ್ಕೆ ಯಾರಪ್ಪನ ಮನೇದು. ಆಗಲೆ ಎಷ್ಟರ ಮಟ್ಟಿಗೆ ಆದಿರಿ. ಕಣ್ಣಿಗೆ ಹುಬ್ಬು ಮೇಲು ಅಂತ ಯಾಕಾಯ್ತು. ನಿಮಗೆ ರಾಮೋತ್ಸವ ಬೇಕೊ; ರಾಮೋತ್ಸವ ಅದು ನಮ್ಮ ಬೀದೀಲಿ ಈ ದಿನ. ನಾಳೆ ನಮ್ಮ ಮನೆಯೊಳಕ್ಕೆ ನಾಡಿದ್ದು ನಮ್ಮ ಹೆಣ್ಣಿಗೂ ಬರುತ್ತೀರಿ. ಹೀಗಾದ್ರೆ ನಮ್ಮ ಗತಿ. ನಿಮ್ಮನ್ನು ಮುಂದಕ್ಕೆ ಬಿಡುವುದಿಲ್ಲ. ಏನು? ಕೆಳಗೆ ಹರಿಯುವ ನೀರು ಕೆಳಗೆ ಹರಿಯಬೇಕು ಮೇಲೆ ಹರಿಯುವ ನೀರು ಮೇಲೆ ಹರಿಯಬೇಕು.

ಭಗವಾನ್‌ದಾಸ್ : ಯಾಕೆ ತಡೆಯುವಿರಿ. ಎಲ್ಲರಿಗೂ ಒಬ್ಬನೆ ರಾಮನಲ್ಲವೆ. ರಾಜಬೀದಿಯಲ್ಲಿ ರಾಮೋತ್ಸವ ಹೋದರೆ ನಿಮಗೇನು ತೊಂದರೆ. ಅಪಮಾನ ನಿಮಗೇಕೆ ಇಷ್ಟು, ಕೋಪ ತಾಪ. ನಮ್ಮವರು ನಿಮ್ಮ ಊಳಿಗದಾಳಾಗಿ ನೀವು ಹೇಳಿದ ಒಳ್ಳೆಯ ಮತ್ತು ಹೀನ ಕೆಲ್ಸಗಳನ್ನೆಲ್ಲಾ ಮಾಡುವುದಿಲ್ಲವೆ.ನಮ್ಮದು ಹಿಂದು ದೇಶವಲ್ಲವೆ. ನಾವು ನಿಮ್ಮಂತೆ ಹಿಂದುಗಳಲ್ಲವೆ.

ಹಾಡು :            ಹಿಂದುಗಳು ನಾವಲ್ಲವೆ ಹಿಂದು ಧರ್ಮ ಎಮಗಿಲವೆ |
ಬಂಧುಗಳೆ ರಾಮಕೃಷ್ಣಾಂಕಿತವು ನಮಗಿಲವೆ ||ಪ||

ನೀವು ಪೂಜಿಸ ದೈವ ನಾವು ಪೂಜಿಸದಿಹವೆ |
ದೇವ ನೀ ಜಗಬಾಳ ಮಾಡಿಹನೆಯಮಗೆ ||ಅ||

ಮಾತು: ಸಹೋದರರೆ ನೀವೆಲ್ಲರೂ ಹಿಂದಕ್ಕೆ ಹೋಗದೆ ಧೈರ್ಯವಾಗಿ ಇಲ್ಲಿಯೆ ನಿಂತುಕೊಂಡಿರಿ. ನಮ್ಮ ಹಕ್ಕು ಬಾಧ್ಯತೆಗಳಿಗಳಿಸಲಿಕ್ಕಾಗಿ ಏನು ಕಷ್ಟು ಬಂದರೂ ಎದುರಿಸಲೆಬೇಕು. ಹೇಡಿಗಳಂತೆ, ಗುಲಾಮರಂತೆ ಹಿಂದಕ್ಕೆ ಹೋಗಕೂಡದು. ಆ ಕಾಲ ಹೋಯಿತು. ಈಗ ನಾನು ಹೋಗಿ ಪೋಲೀಸ್ ಅಧಿಕಾರಿಗಳನ್ನ ಕರೆದುಕೊಂಡು ಬರುತ್ತೇನೆ.

ಭಜನಾ ಮಂಡಲಿ : ಹೊರಡಿ, ಹೊರಡಿ, ಏನೆ ಆಗಲಿ ನಾವು ಹಿಂದಕ್ಕೆ ಹೋಗುವುದಿಲ್ಲ. ರಾಮೋತ್ಸವ ಬೀದಿಯಲ್ಲಿ ಹೋಗ ಕೂಡದಂತೆ ನಾವು ಇವರ ಮನೆಯಲ್ಲಿ ಸತ್ತ ದನಗಳನ್ನು ಹೊತ್ತುಕೊಂಡು, ಸತ್ತನಾಯಿಗಳನ್ನು ಎಳೆದುಂಡು ಇವರ ಬೀದಿಯಲ್ಲೆ ಹೋಗಬಹುದು. ರಾಮೋತ್ಸವ ಇವರ ಬೀದಿಯಲ್ಲಿ ಹೋದರೆ ಮಾತ್ರ ಅಪಮಾನ ಹೊರಡಿ, ತಡಮಾಡಬೇಡಿ.

ಭಗವಾನ್‌ದಾಸ್ : ಸ್ವಾಮಿ, ಸ್ವಾಮಿ, ಇನ್ ಸ್ಪೆಕ್ಟರ್ ಸಾಹೇಬರೆ,

ಇ.ರಾಮನಾಥ : (ಸ್ಪಪ್ನ) ಏಳು ಧರ್ಮಪುರಿಯಲ್ಲಿ ಅಂತ್ಯಜರು ಏರ್ಪಡಿಸಿರುವ ನನ್ನ ಉತ್ಸವಕ್ಕೆ ಉತ್ತಮರು ಅಡ್ಡಿಮಾಡಿದ್ದಾರೆ. ನನ್ನ ಕಾರ್ಯನೆರವೇರುವಂತೆ ಬೇಗ ಹೋಗಿ ರಕ್ಷಣೆ ನೀಡಿ(ಶ್ರೀರಾಮಚಂದ್ರನ ಸಂದರ್ಶನ. ಅಂತ್ಯಜರು ನನ್ನ ಉತ್ಸವ ಹಿಂದುಗಳಿಂದ ಅಡ್ಡಿ(ಎಚ್ಚೆತ್ತು) ಅಯ್ಯೋ ಪೂರ್ಣ ಅರ್ಥವಾಗಲಿಲ್ಲವಲ್ಲಾ ಆ ನನ್ನ ಸ್ವಾಮಿ(ನಿದ್ರೆ)

ಭಗವಾನ್ ದಾಸ್ : ಸ್ವಾಮಿ, ಸ್ವಾಮಿ

ಪೊ.ಇನ್ ಸ್ಪೆಕ್ಟರ್ : ಯಾರೊ ಅದು, ಏನದು (ಎಚ್ಚೆತ್ತು)

ಭಗವಾನ್‌ದಾಸ್ : ನಾನೊಬ್ಬ ಅಂತ್ಯಜ ನನ್ನ ಹೆಸರು ಭಗವಾನ್ ದಾಸ್ ಎಂದು.

ಪೊ.ಇನ್ ಸ್ಪೇಕ್ಟರ್ : ಏನು ಕೀಳು ಜಾತಿಯವನೆ, ಭಗವಾನ್ ದಾಸ್ ನೆಂದೊ ಹೆಸರು. ಓಹೊ; ಮನೆಯ ಪಕ್ಕದಲ್ಲೆ ನಿಂತಿದ್ದೀಯೆ ಎರಡಕ್ಷರ ಬರುತ್ತೆಂದು ಕಾಣುತ್ತೆ, ದೂರಹೋಗಿ ಮಾತನಾಡು. ಶ್ರೀರಾಮ ಸ್ವಪ್ನದಲ್ಲಿ ಹೇಳಿದ್ದು ಇವರ ವಿಚಾರವೇ ಇರಬೇಕು. ರಾಮಚಂದ್ರ ಪಾಪ ಮಾಡಿದೆ ಇತ್ತ ತಿರುಗಿ ಏನು ವಿಚಾರ ಹೇಳು.

ಭಗವಾನ್‌ದಾಸ್ : ಸ್ವಾಮಿ ಧರ್ಮಪುರಿಯಲ್ಲಿ ನಾವು ರಾಮೋತ್ಸವ ಏರ್ಪಡಿಸಿ ಉತ್ಸವ ಉತ್ತಮರ ಬೀದಿ ಹೋಗುವಾಗ ಇಲ್ಲಿ ಉತ್ಸವ ಹೋಗಕೂಡದೆಂದು ತಡೆದಿದ್ದಾರೆ.

ಪೊ.ಇನ್ ಸ್ಪೆಕ್ಟರ್ : ಆಗಲಿ ಈಗಲೆ ಬರುತ್ತೇನೆ ನೀನು ಮುಂದೆ ಹೊರಡು.

ಭಗವಾನ್‌ದಾಸ್ : ಪರಮಾತ್ಮ! ಇಲ್ಲಿಯೂ ಜಾತಿಕಳಂಕವೆ! ಇದು ಎಂದಿಗೆ ಅಳಿಸಿ ಹೋಗುವುದು? ದೇವ ನೀನು ಕಾಲಯುಗ ಧರ್ಮಗಳನ್ನುನುಸರಿಸಿ ಮಾನವ ಕೋಟೆಯ ಧರ್ಮಾ ಧರ್ಮನ್ನರಿತು ನಡೆಯುವುದಕ್ಕಾಗಿ. ಆಗಾಗ ಅಲ್ಲಲ್ಲಿ ಅವತಾರವೆತ್ತಿ ಜಗತ್ತನು ಪರಿಪಾಲಿಸುತ್ತಿರುವೆ. ಆದರೆ ಈ ನಮ್ಮ ಜಾತಿ ಭೇದವು ಅಳಿಯುವಂತೆ ಮಾಡಲಿಲ್ಲವೇಕೆ. ನಿನಗೆ ಇದು ಅಘಾಧವಾದ ಕಾರ್ಯವೆ ದೇವ, ನಿನಗೂ ನಮ್ಮ ಮೇಲೆ ನಿರ್ದಯವೆ. ನಾವು ನಿನ್ನ ಮಕ್ಕಳಲ್ಲವೆ. ಸೃಷ್ಟಿಕರ್ತನೆ ನಿನ್ನ ಸೃಷ್ಟಿಯಲ್ಲಿ ನಮ್ಮನ್ನು ಕುಲಗೋತ್ರಗಳನ್ನೆಣಿಸಿ ಸೃಷ್ಟಿಸಿದೆಯಾ ಅಲ್ಲಿ ರಾಮೋತ್ಸವ ತಡೆದು ನಮಗೆ ಅಪಮಾನ —– ನಿಮ್ಮ ಕಷ್ಟ ಪರಿಹಾರವಾಗುತ್ತೆಂದು ಬಂದರೆ ಇಲ್ಲಿ ಈ ಅಪಮಾನ ಇನ್ನು ಈ ಅಪಮಾನ ಇನ್ನು ಈ ಪ್ರಪಂಚದಲ್ಲಿ ಬಾಳುವ ಬಗೆ ಹೇಗೆ.

೯ ಹಾಡು : ಹರಿಜನ ಬಾಳುವ ಬಗೆ ಹೇಗೆ ದೇವ |
ಧರೆಯೊಳು ಭೇದದ ಬೇಗೆಯೊನುದಿನ ||ಪ||

ಶ್ರೇಷ್ಠಿಯೊಳಗು ಕುಲಗೋತ್ರ ನೀನೆಣಿಸುತೆ |
ಶ್ರೇಷ್ಠಿಸಿರುವೆಯೇಂ ಪಕ್ಷಪಾತದಿಂ ||
(ಪೊ.ಇನ್‌ಸ್ಪೆಕ್ಟರ್ ಧರ್ಮಪುರಿಗೆ ಬಂದು ತಡೆದ ಬಳಿ ವಿಚಾರಣೆ)

ರಾಮ : ಅಬೈಯ್ಯಾ ನೀವೆಲ್ಲರೂ ಇಲ್ಲಿ ಬನ್ನಿ. ರಾಮೋತ್ಸವವನ್ನು ಯಾಕೆ ತಡೆದಿದ್ದೀರಿ.

ಬೋರೆಗೌಡ : ಸ್ವಾಮಿ ಅವರು ಕೀಳು ಜಾತಿಯವರಾಗಿ ರಾಮೋತ್ಸವ ಮಾಡುವುದೆ? ಉತ್ಸವವನ್ನು ಇವರು ನಮ್ಮ ಬೀದಿಯಲ್ಲಿ ತರುವುದೆ. ಉತ್ತಮರ ಬೀದಿಯಲ್ಲಿ? ನಾವು ಸತ್ತಂತಾಗಲಿಲ್ಲವೆ. ನಾವು ಮಾಡುವ ರಾಮೋತ್ಸವವನ್ನು ಈ ಪಾಪಿಗಳು ಮಾಡಿದರೆ ಇವರ ವಂಶವನ್ನು ಶ್ರೀರಾಮ ಹಾಳು ಮಾಡುವುದಿಲ್ಲವೆ. ಇದಕ್ಕಾಗಿ ತಡೆದವು ಸ್ವಾಮಿ.

ಇನ್‌ಸ್ಪೆಕ್ಟರ್ : ಅಯ್ಯ ನೋಡಿ ಅವರು ಹಿಂದೂಗಳೆ ಅಲ್ಲವೇ. ಸರ್ವರಿಗೂ ಒಬ್ಬನೇ ರಾಮನಲ್ಲವೆ. ಅವರಿಗೊಬ್ಬ ರಾಮನಿರುವನೆ. ಕಾರಣಾಂತರದಿಂದ ಸಮಾಜವು ಇವರನ್ನು ಬೇರ್ಪಡಿಸಿತ್ತು. ಈಗ ಅವೆಲ್ಲ ಅಳಿಸಿ ಹೋಗುತ್ತಿದೆ. ಸಮಾಜ ಮತ್ತು ಸರ್ಕಾರಗಳೆರಡೂ ಹರಿಜನೋದ್ಧಾರಕ್ಕಾಗಿ ಶ್ರಮಿಸುತ್ತಿವೆ. ಅಲ್ಲದೆ ದೈವಸೃಷ್ಟಿಯಲ್ಲಿ ಸರ್ವರೂ ಒಂದೆ ಎಂದು ವೇದಶಾಸ್ತ್ರಗಳು ಸಾರುವಾಗ ಮಿತ್ರರೆ ನಾವು ಭೇದವೆಣಿಸಬಾರದು. ನೀವು ಈಗ ಉತ್ಸವವನ್ನು ತಡೆಯಬೇಡಿ. ತಡೆದರೆ ಸರ್ಕಾರದ ಕಾನೂನಿನಂತೆ ನಿಮ್ಮನ್ನೆಲ್ಲಾ ಜೈಲಿಗೆ ಕಳುಹಿಸಬೇಕಾಗುತ್ತೆ. ಈಗ ರಾಮೋತ್ಸವ ಹೊರಡಲಿ.

ಸ್ವಾಮಿ, ಈಗ ಚೆನ್ನಾಯಿತು. ನೀವು ನಮ್ಮ ರಕ್ಷಕರಲ್ಲವೆ ನಮಗಾದ ಅಪಮಾನ ನಿಮಗಲ್ಲವೆ. ಇವರು ಉತ್ತಮರಾಗಿ ಸ್ವರ್ಗಕ್ಕೆ ಹೋಗುವವರಾದರೆ ನೀವು ನಾವು ನರಕಕ್ಕೆ ಹೋಗಬೇಕಾಗುವುದಿಲ್ಲ. ನೀವು ಇವರನ್ನು ಜೈಲಿಗೆ ಕಳುಹಿಸುತ್ತಾರೆಂದು ನಂಬಿದ್ದರೆ ನೀವು ನಮ್ಮನ್ನೇ ಜೈಲಿಗೆ ಕಳುಹಿಸಬೇಕಾಗುತ್ತೆಂದು ಹೇಳುತ್ತಿದ್ದೀರಿ. ಈಗ ಚೆನ್ನಾಯಿತು. ಈ ಲೋಕವೇ ಹಾಳಾಗಲಿ ಬಿಡಿ.

ಭಗವಾನ್ ನಾನು ಹೊರಡಲೆ

ಭಗವಾನ್‌ದಾಸ್ : ಸ್ವಾಮಿ, ತೊಂದರೆ ಸಂಭವಿಸಿದ್ದ ಶ್ರೀ ರಾಮಕಾರ್ಯಕ್ಕೆ ತಮ್ಮ ಸಹಾಯ ದೊರಕಿ ಬಹಳ ಅನುಕೂಲವಾಯಿತು. ತಮ್ಮನ್ನು ಶ್ರೀರಾಮನು ಸದಾ ಕಾಪಾಡಲಿ. ದಯಮಾಡಿಸಿ.

(ರಾಮೋತ್ಸವ ಮುಂದೆ ಸಾಗುವುದು)

೧೦ ಹಾಡು : (ಎಲ್ಲರು) ಸರ್ವ ಮಂಗಳ ರಾಮಸೀತ ರಾಮ ರಾಮ |
ಸರ್ವವಿನುತ ಶಾಂತಿದಾತ ರಾಮ ರಾಮ ||೧||

ಜಾತಿ ಗೋತ್ರವೆಣಿಸೆ ನೀನು ರಾಮ ರಾಮ
ನೀತಿ ನೀತಿ ಎಣಿಪೆ ನೀ ಶ್ರೀ ರಾಮರಾಮ ||೨||

ಸರ್ವಜನಕೆ ಪ್ರೇಮನಾಮವೊಂದೆ ರಾಮ |
ಸರ್ವಜಗಪುನೀತ ನಾಮ ವೊಂದೆ ರಾಮ ||೩||

ಮಾತು : ಈಗ ದೇವರನ್ನು ನದಿಯಲ್ಲಿ ಸಂಪೋಕ್ಷಣೆ ಪೂಜೆಗಳನ್ನು ಮಾಡಿ ನದಿ ಮಾವಿನ ತೋಪಿನಲ್ಲಿ ಹಾಕಿರುವ ಚಪ್ಪರದಲ್ಲಿಡಿ, ನಂತರ ಯಲ್ಲರನ್ನು ಊಟಕ್ಕೆ ಕೂಡಿಸೋಣ.

ಭಕ್ತಮಂಡಲಿ : ಹಾಗೆ ಆಗಲಿ ನಡೆಯಿರಿ ಚಪ್ಪರಕ್ಕೆ

ಭಗವಾನ್‌ದಾಸ್ : ಈಗ ಎಲ್ಲರು ನದಿಯಲ್ಲಿ ಕೈಕಾಲು ತೊಳೆದುಕೊಂಡು ಇಲ್ಲಿರುವ ಮಾವಿನ ತೋಪಿನಲ್ಲಿ ಕುಳಿತುಕೊಳ್ಳೀ ಇಲ್ಲಿಯೆ ಊಟಕ್ಕೆ ಏರ್ಪಟಿಸಿದ್ದೇವೆ. ಎಲ್ಲಿ ಅಡಿಗೆಯವರು ಎಲೆ ಹಾಕಿ ಅನ್ನಸಾರುಬಡಿಸಿ, ತುಪ್ಪವನ್ನು ತಂದು ಬಿಡಿಸಿ.(ಅಷ್ಟರಲ್ಲೇ)

ಬೋರೆಗೌಡ : ಶಿವಲಿಂಗಪ್ಪ ಈ ಊರಿನ ಅಂತ್ಯಜರು ಬೇಡವೆಂದರು ಪೋಲಿಸ್ ನವರನ್ನು ಕರೆತಂದು ಊರಿನ ನಡುವೆಯಲ್ಲಿ ರಾಮೋತ್ಸವ ತೆಗೆದುಕೊಂಡು ಹೋದರಲ್ಲಾ ನಮ್ಮೂರಿಗಿರಲಿ ಹಿಂದು ದೇಶದ ಹಿಂದುಗಳೆಲ್ಲಾ ಸತ್ತಂತಾಯಿತಲ್ಲವೆ.

ಶಿವಲಿಂಗಪ್ಪ : ಬೋರೆಗೌಡ ನಮ್ಮವರ ಗುಂಪು ಕಟ್ಟಿಕೊಂಡು ನದಿಹತ್ತಿರ ಕೈ ಹೋಗಿ ಮರೆಯಲ್ಲಿದ್ದು ಹೆಚ್ಚು ಕೆಲ್ಸವೇನಾದರೂ ನಡೆಸಿದರೆ ತೊಂದರೆ ಕೊಡೋಣ ನಡೆಯಿರಿ.

(ತುಪ್ಪ ಹಾಕುವುದನ್ನು ಮರೆಯಲ್ಲಿ ನೋಡಿ)

ಬೋರೆಗೌಡ : ಎಲ್ಲಾ ಪಾಪಿಗಳ ನಿಲ್ಲಿಸಿ ನಿಲ್ಲಿಸಿ ನಮ್ಮಂತೆ ನೀವು ತುಪ್ಪ ತಿನ್ನುತ್ತೀರಾ ನಾವು ಉಪಯೋಗಿಸುವುದನ್ನು ನೀವು ಉಪಯೋಗಿಸುತ್ತೀರಾ ತುಪ್ಪ ನಿಮಗಲ್ಲ. ನಮಗೆ ಉತ್ತಮ ಕುಲದವರಿಗೆ. ಬನ್ನಿ ಬನ್ನಿ ಊಟವನ್ನೆಲ್ಲಾ ತುಳಿದ ಹಾಕಿ. ಹೀಗೆಯೆ ಬಿಟ್ಟರೆ ಆಯಿತು ನಮ್ಮಗತಿ (ಅನ್ನವನೆಲ್ಲಾ ತುಳಿದು ಹಾಕುವರು)

ಭಗವಾನ್ ದಾಸ್ : ಬನ್ನಿ ಬನ್ನಿ ನಮ್ಮವರೆಲ್ಲ ಬನ್ನಿ ಹೇಡಿಗಳಂತೆ ಹಿಂದೆ ನಿಲ್ಲಬೇಡಿ. ಇದೇನನ್ಯಾಯ ನಮ್ಮವರು ತುಪ್ಪವನ್ನೂ ಉಪಯೋಗಿಸಬಾರದಂತೆ ಪ್ರಾಣದ ಆಸೆ ಬಿಟ್ಟು ನುಗ್ಗಿ ಅವರನ್ನು ಹಿಡಿದುಕೊಳ್ಳಿ. ಇಂತಾ ಅನ್ಯಾಯವನ್ನೆಲ್ಲಾ ನೋಡಿ ಸಹಿಸಿಕೊಂಡು ಹೇಡಿಗಳಂತೆ ಕುಳಿತಿರುವುದಕ್ಕಿಂತ ಹೋರಾಡಿ ಸಾಯುವುದು ಮೇಲು. ನಮ್ಮದು ಹಿಂದೂ ದೇಶದಂತೆ ನಾವು ಹಿಂದುಗಳಂತೆ. ನಮ್ಮಲ್ಲಿ ಧನಬಲವಿಲ್ಲ ಜನಬಲವಿಲ್ಲ ಮಾನಸಿಕ ಬಲವಿಲ್ಲವೆಂದು ತಿಳಿದುಕೊಳ್ಳಬೇಡಿ. ಹೊರಡಿ ನುಗ್ಗಿ.

(ಅಂತ್ಯಜರೆಲ್ಲ ಆವೇಶದಿಂದ ನುಗ್ಗಿದರು. ಸವರ್ಣಿಗಳು ಓಡಿದರು)

ಭವಾನಿ : ಸಿದ್ದಮ್ಮ ಹೊಳೆಗೆ ಹೋಗಿ ನೀರು ತರುವ ಬರುತ್ತೀಯಾ

ಸಿದ್ದಮ್ಮ : ತಾಯಿ ಭವಾನಿ ನಡೆ ಹೋಗುವ ನೀನು ಶಾಲೆಗೆ ಹೋಗಲು ಹೊತ್ತಾಗಲಿಲ್ಲವೆ.

ಭವಾನಿ : ಅದಕ್ಕಾಗಿ ಬೇಗ ಹೋಗಿ ನೀರು ತಂದು ಊಟ ಮಾಡಿ ಸ್ಕೂಲಿಗೆ ಹೋಗಬೇಕು ನಡೆ ಹೋಗೋಣ.

ಶಿವಲಿಂಗಪ್ಪ : ಬೋರೆಗೌಡ ಅವರ್ಯಾರು ಅಲ್ಲಿ ಬರುವವರು ಗೊತ್ತೆ

ಬೋರೆಗೌಡ : ಓಹೊ! ಅವರು. ಸರಿಸರಿ ಗೊತ್ತಾಯಿತು. ನೋಡು ಶಿವಲಿಂಗಪ್ಪ ಅವರು ಕೀಳು ಜಾತಿಯವರಂತೆ ಕಂಡಾರೇನು. ದೂರದಲ್ಲಿ ನೋಡಿದರೆ ನಮ್ಮ ಹೆಂಗಸರಂತೆ ಕಾಣುತ್ತಾರೆ. ಹೆಜ್ಜೆ ಸೋಕುವಂತೆ ಸೀರೆ ಮೈತುಂಬ ರವಿಕೆ ಅವರಿಗೆ ಒಡವೆ ಬೇರೆ. ನೋಡು ನಮ್ಮ ಹೆಂಗಸರಿಗೂ ಇವರಿಗೂ ಏನೂ ವ್ಯತ್ಯಾಸವೆ ಕಾಣಿಸುವುದಿಲ್ಲವಲ್ಲಾ. ಹೀಗಾದರೆ ಇನ್ನು ಕೆಲವಾರು ವರ್ಷಗಳಲ್ಲಿ ಅವರು ನಮ್ಮ ಸರಿಸಮರಾಗುತ್ತಾರೆ. ಆಮ್ಯಾಲೆ ಆಯಿತು. ನಮ್ಮಗತಿ. ಅದಿರಲಿ ಅವರು ತಲೆ ಮೇಲೆ ಹೊತ್ತಿರುವುದೇನು ಗೊತ್ತೆ.

ಶಿವಲಿಂಗಪ್ಪ : ತಾಮ್ರ, ಹಿತ್ತಾಳೆ ಬಿಂದಿಗೆಗಳು

ಬೋರೆಗೌಡ : ನಮ್ಮಂತೆ ಅವರು ಆ ಬಿಂದಿಗೆಗಳಲ್ಲಿ ನೀರು ಹೊರುವುದು ನಿಮಗೆ ಸಮ್ಮತವೆ.

ಶಿವಲಿಂಗಪ್ಪ : ಅದು ಸರಿಯಲ್ಲ ತಪ್ಪು. ನಾನು ಅದನ್ನು ಒಪ್ಪುವುದಿಲ್ಲ. ಭಗವಂತನೂ ಒಪ್ಪುವುದಿಲ್ಲ. ಹಾಗಾದರೆ ಅವರು ನಾವೂ ಒಂದೆ ಸಮನಾದಂತೆ ಆಗುತ್ತೆ. ಇದನ್ನೆಲ್ಲಾ ತಪ್ಪಿಸದೆ ಸಮಾಜವು ನೋಡಿಕೊಂಡು ಸುಮ್ಮನಿದ್ದರೆ ನಮ್ಮ ಹಿಂದೂಧರ್ಮ ರೀತಿ ನೀತಿಗಳೆಲ್ಲಾ ಧಕ್ಕೆ ತಗಲಿ ಹಿಂದೂ ದೇಶವೆ ಹಾಳಾಗಿ ಬಿಡುತ್ತೆ. ಮಣ್ಣು ಗಡಿಗೆಗಳಲ್ಲಿ ನೀರು ತರಲು ಅದಕ್ಕೆ ನಮ್ಮ ಅಭ್ಯಂತರವೇ ಇಲ್ಲ.

ಬೋರೆಗೌಡ : ನಿಜ ಈಗೇನು ಮಾಡಲಿ ಅವರಿಬ್ಬರನ್ನು ಕಡಿದು ಹಾಕಿದ ನಮ್ಮನ್ನು ಕೇಳುವವರ‍್ಯಾರು. ಸರ್ಕಾರದಲ್ಲಿರುವವರು ನಮ್ಮವರೆ. ಇಲ್ಲ ಬಿಂದಿಗೆ ಕಿತ್ತು ಒಡೆದು ಹಾಕಲೆ.

ಶಿವಲಿಂಗಪ್ಪ : ಕೇಳುವವರ್ಯಾರು ಅಂತ್ಯಜೋದ್ಧಾರಕಂ ನರಕಂ ನಾಶನಂ ಸ್ವರ್ಗ ಸಾಧನಂ ಯೆಂಬುದು ನಿನಗೆ ಗೊತ್ತಿಲ್ಲವೆ.

ಬೋರೆಗೌಡ : ಎಲಾ ಮುಂಡೆಯರ ಬಿಂದಿಗೆಯಲ್ಲಿ ನೀರು ಹೊರಲು ಯಾರಪ್ಪನ ಮನೇದು ಬಿಂದಿಗೆ ನಿಮಗಲ್ಲ. ನಮಗೆ ನೀವು ಯಾವಾಗಲು ಮಣ್ಣಿನ ಗಡಿಗೆಗಳಲ್ಲಿ ನೀರು ಹೊರಬೇಕು.

ಸಿದ್ದಮ್ಮ : ಯಾಕ್ರಪ್ಪಾ ನಿಮ್ಮಂತೆ ನಾವು ಮನುಸ್ರಲ್ವ ನಿಮೈಲಿರೊ ಅಂತ ನಮೈಲಿರೋದಿಲ್ವ ರಕ್ತ. ನಿಮ್ಮ ಹೆಂಗಸರಂತೆ ವಂಭತ್ತು ತಿಂಗಳಿಗೆ ಹಡೀದೆ ಆರೇ ತಿಂಗಳಿಗೆ ಹಡೀತೀವೇನು ನಾವು. ನೀವು ನೀವು ಹ್ಯಂಗೆ ಸಾಯ್ತಿರೊ ಹಾಂಗೆ ಸಾಯ್ದೆ ಕೀಳ್ಜಾತಿರೊರಂತ ಬ್ಯಾರೆ ತರದ ಸಾವೇನು ನಮ್ಮದು.

ಬೋರೆಗೌಡ : ಎಲಾ ನೀಚ ಜಾತಿ ಮುಂಡೆಯರ ನಮ್ಮ ಮುಂದ ಅದರಲ್ಲು ನೀವು ಮಾತಾಡುವಂತಾದಿರಾ(ಬಿಂದಿಗ ಕಿತ್ತು ಕಲ್ಲಿಗೆ ಬಡಿದು ಬಿಸಾಡುವನು)

ಭವಾನಿ : ಅಯ್ಯೊ ಈ ಅನ್ಯಾಯವನ್ನು ಕೇಳುವವರು ಇಲ್ಲವಲ್ಲ. ನಾವು ಹಿತ್ತಾಳೆ ತಾಮ್ರದ ಬಿಂದಿಗೆಗಳಲ್ಲಿ ನೀರು ಹೊತ್ತರೆ ಇವರಿಗಾಗುವ ಅವಮಾನವೇನು. ನಾವು ಒಳ್ಳೆಯ ಬಟ್ಟೆ ಬರೆಗಳನ್ನು ಧರಿಸಿದರೆ ಇವರಿಗಾಗುವ ನಷ್ಟವೇನು. ನಾವು ವಾಹನಗಳ ಮೇಲೆ ಸಂಚರಿಸಿದರೆ ಸಂಕಟಪಡುತ್ತಾರಲ್ಲ. ಯಾಕೆ ಜಮೀನು ಮಾಡಿಕೊಳ್ಳಲು ಪ್ರಯತ್ನಿಸಿದರೆ ಒಂದಕ್ಕೆ ಹತ್ತರಷ್ಟು ಬೆಲೆ ಹೆಚ್ಚಿಸಿ ನಮಗೆ ಸಿಕ್ಕದಂತೆ ಮಾಡುತ್ತಾರಲ್ಲ. ಇವ್ರರಿಗೆ ನಮ್ಮ ಮೇಲೆ ಇಷ್ಟು ಆಕ್ರೋಷ ನಾವು ಇವರಂತೆ ಬಾಳಿಬದುಕಿದರೇನು. ಇವರಿಗೇನು ಕಷ್ಟನಷ್ಟ. ಅಪಮಾನ ಕೋಪತಾಪ. ದೇವರೊಬ್ಬನಿಗೆ ನಮ್ಮನ್ನು ಈ ರೀತಿಯ ಕಷ್ಟಗಳಿಂದ ಪಾರು ಮಾಡಬೇಕಲ್ಲದೆ ಮತ್ಯಾರಿಂದಲೂ ಆಗಲಾರದು. ಇದರ ನಿವಾರಣೆಗಾಗಿಯೆ ಭಗವಂತನು ಈ ನಮ್ಮ ನಾಡಿನಲ್ಲಿ ಯಾರನ್ನಾದರೂ ಅವತಾರ ಪುರುಷರು ಜನ್ಮವೆತ್ತುವಂತೆ ಮಾಡಿದರೆ ಆಗಲಾದರೂ ಬೇಗ ಈ ಜಾತಿಭೇದವೂ ನಿರ್ಮೂಲವಾಗುವುದೇನೊ

೧೧ ಹಾಡು : (ದೇವಿ ತುಳಸಿ ಜಯ)
ಅವತಾರಿಸ ಬಾರದೆ ದೇವೇಶ ||ಪ||

ಅಂತ್ಯಭೇದ ಭಾರತದಿ ನಿವಾರಿಸಿ ||ಅ||
ದಯಾಮಯನೆ ನಿರ್ದಯದೋರದೆ |

ಭಯ ಜಾತಿ ವಿಷಮಯವಾರಿಸೆ ||೧||

ಸಿದ್ದಮ್ಮ : ತಾಯಿ ಭವಾನಿ ಚಿಂತಿಸಬೇಡ, ಬಾ ಹೋಗುವ, ನಾವು ಹುಟ್ಟಿರೋದು ಜಾತಿಭೇದದಿಂದ ಸಂಕಟಪಡೋದಕ್ಕೆ ಸಂಕಟಪಡುವ ಭಗವಂತ ಇದ್ನೆಲ್ಲಾ ನೋಡ್ಕೊಂಡು ಇನ್ನೆಷ್ಟು ದಿನ ಸುಮ್ಮನಿದ್ದಾನು.

ಭವಾನಿ : ಸಿದ್ದಮ್ಮ ನಮ್ಮ ಗಂಡಸರಿಗಿಂತ ತೊಂದರೆಗಳನ್ನೆದಿರಿಸಲು ಬರುವುದಿಲ್ಲ ನಮ್ಮ ಹೆಂಗಸರೇ ಧೀರೆಯರೆಂದು ನನ್ನ ಭಾವನೆ. ಹೀಗೆ ಸುಮ್ಮನಿದ್ದರೆ ಭಾರತದಲ್ಲಿ ನಮ್ಮವರ ಗತಿಯೇನು. ನಮ್ಮ ಮುಖಂಡರು ಈ ಜಾತಿಭೇದದ ನಿವಾರಣೆ, ನಮ್ಮ ಮೂಲಭೂತ ಹಕ್ಕುಬಾಧ್ಯತೆಗಳ ವಿಚಾರವಾಗಿ ಭಾರತದ ಹಿಂದೂ ಮುಖಂಡರೊಡನೆ ರಾಜಕೀಯ ಪಟುಗಳೊಡನೆ ಸಮಾಜಸುಧಾರಕರೊಡನೆ ಕಲೆತು ಮಾತುಕತೆ ನಡೆಸಿ ಫಲಕಾರಿಯಾಗದಿದ್ದಲ್ಲಿ ಸಂಘಸಂಸ್ಥೆಗಳನ್ನು ಕಟ್ಟಿ ಸಭೆ ಸೇರಿಸಿ ದುಡಿದು ಕಡೆಗೂ ನಮ್ಮ ಕಷ್ಟ ಹರಿಯದಿದ್ದಲ್ಲಿ ಹೆಂಗಸರು ಗಂಡಸರನ್ನೆ ಸೇರಿಸಿಕೊಂಡು ಭಾರತಾದ್ಯಂತ ಚಳುವಳಿ ಹೂಡಿ ಹೋರಾಟ ನಡೆಸದೆ ಇದನ್ನೆಲ್ಲ ನೋಡಿಕೊಂಡು ಸ್ವಾರ್ಥಸಾಧಕರಾಗಿ ಹೇಡಿಗಳಂತೆ ಕೈಕಟ್ಟಿಕೊಂಡು ಕುಳೀತಿರುವವರಲ್ಲಾ. ನಮ್ಮಷ್ಟೆ ವಂಭತ್ತು ಕೋಟಿ ಜನ ಬಲವಿರುವ ಮುಸ್ಲೀಮ ಬಂಧುಗಳು ನಾಲ್ಕರಷ್ಟಿರುವ ಹಿಂದೂಗಳೊಡನೆ ಹತ್ತಾರು ವರ್ಷಗಳು ಒಂದೇ ಸಮನೆ ವೀರತ್ವದಿಂದ ಹೋರಾಡಿ ರಕ್ತ ಹರಿಸಿ ಹಾ! ನನ್ನ ಪವಿತ್ರ ಭಾರತವನ್ನೇ ಒಡೆದು ಹಿಬ್ಬಾಗ ಮಾಡಿ ಪಾಕಿಸ್ತಾನವೆಂಬ ಪಾಲು ಸೆಳೆದುಕೊಂಡರಲ್ಲಾ! ಛೆ, ಛೆ, ಭಾರತದೇಶದ ನಮ್ಮ ಜಾತಿಯ ಮುಖಂಡರಿಗೆ ಧಿಕ್ಕಾರ ಧಿಕ್ಕಾರವಿರಲಿ.