೬. ಕಾಶಿ

ಇಂದು ಗಂಗಾನದಿಯ ತೀರದಲ್ಲಿದೆ. ದೊಡ್ಡ ಪಟ್ಟಣ. ಇಲ್ಲಿ ಎರಡು ರೈಲ್ವೆ ಸ್ಟೇಷನ್. ಒಂದು ದೊಡ್ಡ ಸ್ಟೇಷನ್, ಇನ್ನೊಂದು ಗಂಗಾತೀರದ ರೈಲು ಹೋಗುವ ಕಬ್ಬಿಣದ ಸೇತುವೆಯ ಬಳಿ ಇದೆ. ಗಂಗಾ ಪೂರ್ವತೀರದಲ್ಲಿ ಕಾಶಿಮಹಾರಾಜರ ಅರಮನೆಯಿದೆ. ಪಶ್ಚಿಮದಲ್ಲಿ ಕಾಶಿ ಪಟ್ಟಣವಿದೆ. ಪಶ್ಚಿಮ ತೀರದುದ್ದಕ್ಕೂ ವಿಷ್ಣುಘಾಟ್, ಶಿವಘಾಟ್, ಕಂಚಿಘಾಟ್ ಗಳೆಂದು ಸ್ನಾನಘಟ್ಟಗಳಿವೆ. ಯಾತ್ರಾರ್ಥಿಗಳಲ್ಲಿಗೆ ಬಂದು ಸ್ನಾನ ಮಾಡುತ್ತಾರೆ. ಹರಿಶ್ಚಂದ್ರಘಾಟ್ ಬಳಿ ಸುಮಾರು ಹತ್ತು ಗಜ ಉದ್ದ, ಐದುಗಜ ಅಗಲಕ್ಕೆ, ಹತ್ತು ಅಡಿ ಎತ್ತರದಲ್ಲಿ ನಾಲ್ಕು ಜನಗಳು ಕುಳಿತಿದ್ದರು. ಮೇಲಕ್ಕೆ ಹೋಗಿ ನೋಡಿದೆ. ಅಲ್ಲಿ ಒಂದು ಬಿಳಿ, ಕೆಂಪು ನಾಮವಿಟ್ಟು, ಹೂವಿಟ್ಟು, ಕಾಯಿಹೊಡೆದು ಪೂಜಿಸುತ್ತಿದ್ದರು. ಅಲ್ಲಿದ್ದ ನಾಲ್ಕು ಜನಗಳನ್ನು ಕಿರಿಪ್ರಾಯರೆಂದು ಇಲ್ಲೇಕಿರುವಿರಿ, ಇಲ್ಲಿ ಜನಗಳೇಕೆ ಹೀಗೆ ಪೂಜಿಸುತ್ತಾರೆಂದು ವಿಚಾರಿಸಿದೆನು. ‘ಹಮೇ ದೇಡ್ ಐ’. ನಾವು ಹೊಲೆಯರು. ಈ ಪೂಜೆ ಮಾಡುವ ಬಳಿಯಲ್ಲಿ ಹರಿಶ್ಚಂದ್ರನು ಸ್ಮಶಾನ ಕಾಯುತ್ತಿದ್ದನಂತೆ ಈಗ ನಾವು ಕಾಯುವೆವು. ನಮಗೆ ಸರ್ಕಾರದಿಂದ ತಿಂಗಳಿಗೆ ಎಂಟು ರೂ. ಸಂಬಳ. ಇಲ್ಲಿಗೆ ಸುತ್ತಲ ದೇಶದಿಂದಲೂ ಸುಡಲು ಹೆಣಗಳು ಬರುತ್ತವೆ. ಈ ಘಾಟಿನಲ್ಲಿ ಜಾಗಕೊಂಡು ಹೆಣವನ್ನು ಸುಡುವವರು ನೆಲಕ್ಕೆ ಛಾರ್ಜು ಕೊಡುತ್ತಾರೆ. ಅದನ್ನು ಸರ್ಕಾರಕ್ಕೆ ಕಟ್ಟುತ್ತೇವೆ. ಅಕ್ಕಿ, ಬಟ್ಟೆ ನಾವು ತೆಗೆದುಕೊಳ್ಳುತ್ತೇವೆಂದರು. ಹರಿಶ್ಚಂದ್ರಘಾಟಿನ ಸುತ್ತಲೂ ದೊಡ್ಡ ಸೌದೆ ಅಂಗಡಿಗಳಿವೆ. ಅನೇಕ ಕಡೆಗಳಿಂದ ಹೆಣಗಳು ಇಲ್ಲಿಗೆ ಬರುತ್ತವೆ. ನದಿಯ ನೀರೆರಸಿ ಬೂದಿ ನದಿಯಲ್ಲಿ ಕೊಚ್ಚಿಕೊಂಡು ಹೋಗುವಂತೆ ಮಾಡುತ್ತಾರೆ. ಸ್ನಾನಘಟ್ಟಗಳುದ್ದಕ್ಕೂ ಅಂಗಡಿಗಳಿವೆ. ಸಂಜೆ ಕಾಲದಲ್ಲಿ ದೊಡ್ಡ ದೋಣಿಗಳನ್ನು ಶೃಂಗರಿಸಿಕೊಂಡು ಅದರಲ್ಲಿ ಜನಗಳು ಕುಳಿತು ವಿಹರಿಸಿಕೊಳ್ಳುತ್ತಾರೆ. ಭಜನೆ ಮಾಡುವವರು ಬೇರೆ. ಸುಮಾರು ನಾಲ್ಕು-ಐದು ಮೈಲು ದೂರ ಸ್ನಾನಘಟ್ಟಗಳಿವೆ. ಈ ಮಧ್ಯೆ ಒಂದು ದೊಡ್ಡ ಕೊಳವಿದೆ. ಅಲ್ಲಿಯೂ ಯಾತ್ರಾರ್ಥಿಗಳು ಸ್ನಾನ ಮಾಡುತ್ತಾರೆ. ಈ ಘಟ್ಟಗಳಲ್ಲಿ ಯಾವಾಗಲೂ ಸಾವಿರಗಟ್ಟಲೆ ಜನ ಸದಾ ಇರುತ್ತಾರೆ. ಎಲ್ಲಿ ನೋಡಿದರು ಸ್ನಾನ ಮಾಡುವವರೆ. ‘ಜೈ ಗಂಗಾಜಿ… ಜೈ ಭಗವಾನ್ …’ ಎಂದು ನೀರಿನಲ್ಲಿ ಮುಳುಗುವವರೆ. ದೇವರಿಗೆ ಕೈ ಜೋಡಿಸಿ ಪ್ರಾರ್ಥನೆ ಮಾಡುವವರೆ.

ವಿಶ್ವನಾಥ ದೇವಸ್ಥಾನವು ಅಷ್ಟೇನು ದೊಡ್ಡದಲ್ಲವಾದರೂ ಬಹಳ ಸುಂದರವಾಗಿದೆ. ಮೇಲುಭಾಗದ ಕೆಳಗಡೆ ಸುಂದರವಾದ ಚಿತ್ರಗಳನ್ನು ಚಿತ್ರಿಸಿದ್ದಾರೆ. ವಿಶ್ವನಾಥನ ವಿಗ್ರಹವು ಶಿಲಾಮೂರ್ತಿ. ಇದನ್ನು ಬಿಲ್ವಪತ್ರೆಯಿಂದ ಮುಚ್ಚಿದೆ. ಮುಂಭಾಗದಲ್ಲಿ ಶಿವಲಿಂಗವಿದೆ. ವಿಗ್ರಹಕ್ಕೆ ಬಿಲ್ವಪತ್ರೆಯನ್ನು ಎಸೆದು ಲಿಂಗವನ್ನು ತೊಳೆದು, ಕಾಯಿಯೊಡೆದು ಲಿಂಗದ ಮೇಲೆ ಎಳನೀರು ಸುರಿದು ಪೂಜಿಸುತ್ತಾರೆ. ಲಿಂಗವನ್ನು ತೊಳೆದ ನೀರು, ಎಳನೀರು ದೇವಸ್ಥಾನದ ಹೊರಗೆ ಹೋಗಲು ಬಚ್ಚಲು ಮಾಡಿದ್ದಾರೆ. ಅಲ್ಲಿ ಬೀಳುವ ನೀರೆ ತೀರ್ಥ. ಯಾತ್ರಾರ್ಥಿಕರು ಈ ನೀರಿನೊಳಕ್ಕೆ ಗಂಗಾಜಲವನ್ನು ಬೆರಸಿ ಗಿಂಡಿಯಲ್ಲಿ ತುಂಬಿ ಸೀಲು ಮಾಡಿ ತೆಗೆದುಕೊಂಡು ಹೋಗುವರು. ಇದೇ ಕಾಶಿತೀರ್ಥ. ದೇವಸ್ಥಾನದ ಸುತ್ತಲೂ ವರಾಂಡದಲ್ಲಿ ಸಾಧುಗಳು ಯಾತ್ರಾರ್ಥಿಕರು ಸಂದಣಿ ಸದಾ ತುಂಬಿರುತ್ತದೆ. ದೇವಸ್ಥಾನದಿಂದ ಬೀದಿಯ ಒಂದು ಕಡೆ ಹೂವು, ಬಿಲ್ವಪತ್ರೆಗಳ ಮಾರಾಟ, ಮತ್ತೊಂದು ಕಡೆ ಕಂಚು, ಹಿತ್ತಾಳೆಯ ದೇವರ ವಿಗ್ರಹಗಳು, ತೀರ್ಥದ ಹೂಜಿ, ದೀಪಸ್ತಂಭ, ಗಂಟೆ, ಉದ್ದಾರಣಿ ತಂಬಿಗೆ, ದೀವಿಗೆ ಮೊದಲಾದ ಸಾಮಾನುಗಳ ಮಾರಾಟದ ಅಂಗಡಿಗಳಿವೆ. ಹಿಂದೂ ಕಾಲೇಜು, ನೊಗ್ವ ಕಾಲೇಜು ಎಂದು ಎರಡು ಕಾಲೇಜುಗಳಿವೆ.

ಯಾತ್ರಾರ್ಥಿಗಳು ಸ್ನಾನ ಮಾಡಿದ ಕೂಡಲೆ ಅಲ್ಲಿ ಕಾಯುತ್ತ ನಿಂತಿರುವ ಪುರೋಹಿತರು ಬಂದು ತಲೆಯ ಮೇಲೆ ಬೆಳ್ಳಿ, ಚಿನ್ನಗಳ ಕಿರೀಟವಿಟ್ಟು ಶಾಸ್ತ್ರವೇನೇನೊ ಮಾಡಿ ಮಂತ್ರ ಪಠಿಸಿ ತೀರ್ಥ ಕುಡಿಸುತ್ತಾರೆ. ನನ್ನ ಬಳಿಗೆ ಒಬ್ಬ ಪುರೋಹಿತನು ಬಂದು ನನ್ನ ಬೆರಳಿಗೆ ದರ್ಭೆಯುಂಗುರವಿಟ್ಟು ಹಣೆಗೆ ತಿರುಮಣಿಯಿಟ್ಟು, ತಲೆಯ ಮೇಲೆ ಬೆಳ್ಳಿ ಕಿರೀಟವಿಟ್ಟು ಮಂತ್ರಪಠಿಸಿ ನನ್ನಿಂದ ದಕ್ಷಿಣೆ ಪಡೆದು ನನ್ನ ಮುಖವನ್ನು ದಿಟ್ಟಿಸಿನೋಡಿ ‘ಮಗು ನೀನು ಸಾಯುವ ತನಕ ಇಂದಿನಿಂದ ನಿನ್ನ ಮೈ ಮೇಲಿನ ನೀರು ಆರದೆ ಇರಲಿ. ಪ್ರತಿ ದಿನ ಸ್ನಾನ ಮಾಡಿದಾಗ ದೇವರ ಸ್ತೋತ್ರ ನಿಲ್ಲದಿರಲಿ’ ಎಂದು ಇವೆರಡು ಮಾತು ಹೇಳಿದನು. ಅಂದಿನಿಂದಲೂ ಸ್ನಾನ, ದೇವರ ಪ್ರಾರ್ಥನೆ ಮಾಡದ ಹೊರತು ಊಟ ಮಾಡೆನು. ಇಲ್ಲಿ ಗಂಗಾನದಿಗೆ ಬಲವಾದ ಕಬ್ಬಿಣದ ಸೇತುವೆ ಕಟ್ಟಿದ್ದಾರೆ. ಇದರ ಬಲಗಡೆ ನದಿಯ ತೀರದಲ್ಲಿ ಒಂದು ದೇವಸ್ಥಾನವಿದೆ. ಇದರಲ್ಲಿ ಹಾಲುಗಲ್ಲಿನ ಸುಂದರವಾದ ಚತುರ್ಭುಜ ವಿಷ್ಣು ವಿಗ್ರಹವಿದೆ. ಕಾಶಿ ಸೇರಿದ ಮಾರನೆ ದಿನವೆ ಯುಗಾದಿಹಬ್ಬ. ನಾವು ಬೆಳಿಗ್ಗೆ ಎದ್ದು ಪಟ್ಟಣವನ್ನೆಲ್ಲಾ ನೋಡಿಕೊಂಡು ಹೊರಟು, ಗಂಗಾ ತೀರಕ್ಕೆ ಬಂದು ಸ್ನಾನ ಮಾಡಿ ದೇವರ ಧ್ಯಾನ ತೀರಿಸಿಕೊಂಡೆದ್ದೆವು. ಆಗ ಅಲ್ಲಿಗೆ ಒಬ್ಬರು ಬಂದು ನಮ್ಮ ವಿಚಾರವನ್ನು ಕೇಳಿ ಕೂಡಲೆ ಜಾಮುನನ್ನು ತರಿಸಿ ಮೊದಲು ಇವನ್ನು ತಿನ್ನಿರೆಂದು ತಿನ್ನಿಸಿ ನಂತರ ಅಡಿಗೆ ಮಾಡಲು ಬೇಕಾದ ಪದಾರ್ಥಗಳೆಲ್ಲವನ್ನೂ ಅಣಿಮಾಡಿಕೊಟ್ಟು ಹೋದರು. ಬೆಂಗಳೂರು ಸೀನಿಯರ್ ಇಂಟರ್ ಮೀಡಿಯೇಟ್ ಕ್ಲಾಸಿನಲ್ಲಿ ಓದುತ್ತಿದ್ದು ಕಡೆಗೆ ಸರ್ಕಾರಿ ಹುದ್ದೆಗೆ ತಿಲಾಂಜಲಿಯಿಟ್ಟು ಸೃಜನಸೇವೆಗೆ ನಡುಕಟ್ಟಿ ನಿಂತು ಮೈಸೂರು ದೇಶದ ಆ.ತಾ.ಅ. ಸಂಘದ ಸೆಕ್ರೇಟರಿಯಾಗಿ ನಾಲ್ಕು ವರುಷಗಳು ಮಾತ್ರ ತ್ಯಾಗಮಯಿಯಂತೆ ದುಡಿದು ಖ್ಯಾತಿಯಾಂತು ಸ್ವರ್ಗಸೋಪಾನವನ್ನೇರಿದ ಮೈಸೂರು ಹರಿಜನ ವೀರ ಶ್ರೀಯುತರಾದ ಮಾದಯ್ಯನೆಂಬ ನನ್ನ ಪ್ರೇಮ ಮಿತ್ರರೊಬ್ಬರಿಗೆ ನನ್ನ ಭಾರತ ಸಂಚಾರ ಕುರಿತು ಪತ್ರ ಒಂದನ್ನು ಬರೆದಿದ್ದೆನು. ನಂತರ ಕಾಶಿಯಿಂದ ನನ್ನ ಸಂಗಡಿಗರು ರೈಲಿನಲ್ಲಿ ಗಯಾಕ್ಕೆ ಹೋದರು. ನಾನು ಬೇಕೆಂದೇ ಗಂಗಾನದಿಗೆ ಕಟ್ಟಿರುವ ರೈಲು ಸೇತುವೆಯ ಮೇಲೆ ಹೊರಟೆನು. ಇದು ಕಬ್ಬಿಣದಿಂದ ಕಟ್ಟಿರುವ ದೊಡ್ಡ ಸೇತುವೆ. ನಾಲ್ಕು ನಿಮಿಷದಲ್ಲಿ ರೈಲು ಆಚೆ ದಡ ಸೇರುವುದು. ಇಲ್ಲಿ ಜನ ಸಂಚಾರಕ್ಕೂ ಅನುಕೂಲವಿದೆ. ಸ್ವಲ್ಪ ದೂರ ಉತ್ತರಕ್ಕೆ ಜನಗಳ ಗಾಡಿ ಸಂಚಾರಕ್ಕೆ ಬೇರೊಂದು ಸೇತುವೆಯಿದೆ. ನಾನು ರೈಲು ಸೇತುವೆಯ ಮೇಲೆ ಹೋದೆನು. ರೈಲಿನಲ್ಲಿ ಪ್ರಯಾಣ ಮಾಡುವವರು ಗಂಗೆಗೆ ದಕ್ಷಿಣೆಯಾಗಿ ಎಸೆದ ರೂಪಾಯಿ, ಪಾವಲಿಗಳು ಕೈಗೆ ಸಿಕ್ಕದಂತೆ ಕೆಳಗಿದ್ದ ಕಬ್ಬಿಣದ ತೊಲೆಗಳ ಮೇಲೆ ಬಿದ್ದಿದ್ದವು. ನಾನು ಅವನ್ನು ತೆಗೆದುಕೊಳ್ಳಲು ಬಹಳ ಪ್ರಯಾಸಪಟ್ಟೆನು. ಆದರೂ ಸಾಧ್ಯವಿಲ್ಲದಾಯಿತು. ಬೇಸಿಗೆಯ ಕಾಲ ಮಧ್ಯಾಹ್ನದ ಕಡುಬಿಸಿಲು. ಕಾಯ್ದ ಕಬ್ಬಿಣದ ಶಾಖವು ನನಗೆ ಗಂಗೆಯನ್ನು ದಾಟಿ ಆಚೆ ಮೂರು ಮೈಲು ಕಾಲು ನಡಿಗೆಯಿಂದ ಹೋದೆನು. ಅಷ್ಟರಲ್ಲೆ ಸಹಿಸಲಾರದ ಚಳಿಜ್ವರ ಬಂದಿತು. ರಸ್ತೆಯ ಪಕ್ಕದಲ್ಲಿ ಅಲ್ಲೊಂದು ಮಾವಿನ ಮರ, ಒಂದು ಕಲ್ಲು ಬಾವಿ, ಅಲ್ಲಿ ನೀರು ಕುಡಿದು ಮರದಡಿ ‘ಓ ದೇವರೆ ನನಗೆ ನೀನಲ್ಲದೆ ಈ ದೂರದೇಶದಲ್ಲಿ ಇನ್ನಾರೂ ಇಲ್ಲ. ನನ್ನ ಕಾಯಿಲೆಯನ್ನು ಬೇಗ ಗುಣಪಡಿಸು ಎಂದು ದೇವರನ್ನು ಧ್ಯಾನಿಸಿ ಮಲಗಿ ನಿದ್ರಿಸಿದೆನು. ಎಚ್ಚರವಾಯಿತು ಎದ್ದು ನೋಡಿದೆನು. ಆಗಲೆ ಸಂಜೆ ನಾಲ್ಕು ಘಂಟೆಯ ಸಮಯ. ಚಳಿಜ್ವರ ಬಿಟ್ಟು ಸ್ವಸ್ಥವಾಗಿದ್ದೆನು. ಆಗ ದೇವರನ್ನು ಕೊಂಡಾಡಿ ಮುಂದೆ ಹೊರಟು ಐದು ಮೈಲು ದೂರದಲ್ಲಿ ರೈಲ್ವೆ ಸ್ಟೇಷನ್ ಇದ್ದ ಒಂದು ದೊಡ್ಡ ಊರನ್ನು ಕತ್ತಲಾಗುವಷ್ಟರಲ್ಲಿ ಸೇರಿ ಅಲ್ಲಿನ ಮಾರ್ಕೆಟ್ಟಿನಲ್ಲಿ ಮಾರುತ್ತಿದ್ದ ಬೆಂದ ಗೆಣಸು ಬೆಲ್ಲವನ್ನು ತಂದು ತಿಂದು ಛತ್ರದ ಒಂದು ಕೊಠಡಿಯಲ್ಲಿ ಒಬ್ಬನೆ ಮಲಗಿ ಚೆನ್ನಾಗಿ ನಿದ್ರಿಸಿ ಬೆಳಗ್ಗೆ ರೈಲಿನಲ್ಲಿ ಗಯೆಯನ್ನು ಸೇರಿದೆನು.

೭. ಗಯೆ

ದೊಡ್ಡಗಯೆ, ಬುದ್ಧಗಯೆ ಎಂದು ಎರಡಿವೆ. ದೊಡ್ಡಗೆಯೆಯು ದೊಡ್ಡ ಪಟ್ಟಣ, ರೈಲಿದೆ. ಯಾತ್ರಾರ್ಥಿಗಳು ಬಂದು ಹೋಗುವ ಸ್ಥಳವಾದುದರಿಂದ ಯಾವಾಗಲೂ ಜನಸಂದಣಿ ಇಲ್ಲಿ ಹೆಚ್ಚು. ಮಿಡ್ಲು ಮತ್ತು ಹೈಸ್ಕೂಲುಗಳಿವೆ. ವಿಷ್ಣುಪಾದವೆಂದು ದೇವಸ್ಥಾನದೊಳಗಡೆ ಒಂದು ಕಲ್ಲಿದೆ. ಅಲ್ಲಿ ಪಿಂಡವನ್ನಿಡಿಸಿದರೆ ಏಳು ಜನ್ಮದ ಹಿರಿಯರಿಗೆ ಸ್ವರ್ಗ ಪ್ರಾಪ್ತಿಯೆಂದು ಹೇಳಿದರು. ರಾತ್ರಿವೇಳೆ ಸೊಳ್ಳೆಗಳ ಕಾಟ ಬಹಳ. ಇಲ್ಲಿಂದ ಆರು ಮೈಲು ದೂರದಲ್ಲಿ ಬುದ್ಧಗಯೆ ಇದೆ. ಇದು ಘೋಣವೆಂಬ ಚಿಕ್ಕ ನದಿಯ ದಡದಲ್ಲಿದೆ. ಬೇಸಿಗೆಯಲ್ಲಿ ನೀರಿರುವುದಿಲ್ಲ. ದಾರಿಯುದ್ದಕ್ಕೂ ಅಲ್ಲಲ್ಲಿ ಚಿಕ್ಕ ಚಿಕ್ಕ ಮನೆಗಳಲ್ಲಿ ಸೇಂದಿಯನ್ನು ಮಾರುತ್ತಿರುತ್ತಾರೆ. ಈಚಲ ಮರಗಳು ಬಹಳ. ಇಲ್ಲಿ ಬುದ್ಧನ ದೊಡ್ಡ ದೇವಸ್ಥಾನವಿದೆ. ಇಲ್ಲಿ ಕುಳಿತು ತಪಸ್ಸು ಮಾಡುವ ಬುದ್ಧದೇವನ ಶಿಲಾಪ್ರತಿಮೆ ಇದೆ. ಇದನ್ನು ಪೂಜಿಸಿ, ಹಣೆಗೆ ಬುಕ್ಕಿಹಿಟ್ಟು ತಿಕ್ಕಿ ದೇವಸ್ಥಾನದ ಮೇಲೆಲ್ಲಾ ಹತ್ತಿ ನೋಡಿದೆನು. ದೇವಸ್ಥಾನದ ಮುಂದೆ ಬಲಭಾಗದಲ್ಲಿ ಒಂದು ಕಲ್ಲಿನ ಮಂಟಪವಿದೆ. ಇಲ್ಲಿ ಕೆಲವರು ಕುಳಿತು ಸಂಗೀತವಾದ್ಯದೊಡನೆ ಭಜನೆ ಮಾಡುತ್ತಿದ್ದರು. ನಾನು ಅಲ್ಲಿಗೆ ಹೋಗಲು ಅವರು ಕರೆದು ನನ್ನನ್ನು ‘ಗೀತೆ ಬೋಲೊ…’ ಎಂದರು. ನಾನು ಒಂದೆರಡು ಗಂಟೆ ಹೊತ್ತು ಕೀರ್ತನೆಗಳನ್ನು ಹಾಡಿದೆನು. ಬಹಳ ಸಂತೋಷಪಟ್ಟರು. ನಂತರ ಹನ್ನೆರಡು ಗಂಟೆಯಾದ ಮೇಲೆ ಕುಡಿಯಲು ಸೇಂದಿಯನ್ನು ತಂದು ನನಗೆ ಕೊಡಲು ಬಂದರು. ನಾನು ಕುಡಿಯುವುದಿಲ್ಲವೆಂದೆನು. ಅಲ್ಲಿದ್ದವರೆಲ್ಲ ಕುಡಿಯಲು ಉಪಕ್ರಮಿಸಿದರು. ನಾನು ಹಿಂದಿರುಗಿ ದೊಡ್ಡಗಯೆಗೆ ಬಂದು ರೈಲಿನಲ್ಲಿ ಷಹಜಾಹಾನ್ ಪುರಕ್ಕೆ ಬಂದು ಅಲ್ಲಿಂದ ಇನ್ನೊಂದು ಚಿಕ್ಕ ರೈಲಿನಲ್ಲಿ ಕುಳಿತು ಕಲ್ಕತ್ತಾ ಪಟ್ಟಣವನ್ನು ಸೇರಿದೆನು.

೮. ಕಲ್ಕತ್ತಾ ಪಟ್ಟಣ

ಕಲ್ಕತ್ತವು ಸಮುದ್ರದ ತೀರದಲ್ಲಿದೆ. ಗಂಗಾ ಬ್ರಹ್ಮಪುತ್ರಗ ನದಿಗಳು ಇಲ್ಲಿ ಒಂದಾಗಿ ಸಮುದ್ರವನ್ನು ಸೇರುತ್ತವೆ. ಇಲ್ಲಿ ಹಡಗು ನಿಲ್ಲುವ ಹಳೆಯ ಬಂದರು ಇದೆ. ಅಂದವಾದ ದೊಡ್ಡ ದೊಡ್ಡ ಸೌಧಗಳಿರುವ ದೊಡ್ಡ ಪಟ್ಟಣ. ಅರಮನೆಗಳ ಪಟ್ಟಣವಿದೆಂದು ಹೆಸರು ನಿಲ್ಲಬೇಕಾದರೆ ಎಂಟು-ಹತ್ತು ಅಂತಸ್ತುಳ್ಳ ಮಹಡಿಗಳಿವೆ. ಮರಾಠಿ ದೇವಸ್ಥಾನವೊಂದು ಬಹಳ ದೊಡ್ಡ, ಸುಂದರವಾದ ಕಟ್ಟಡ. ಇದು ಹ್ಯಾರಿಜನ್ ರೋಡಿನಲ್ಲಿದೆ. ಮುಖ್ಯ ಮುಖ್ಯ ಬೀದಿಗಳನ್ನು ನೋಡಿದೆನು. ಗಂಗಾ ಸಮುದ್ರಕ್ಕೆ ಸೇರುವ ಬಲಿ ಸ್ನಾನ ಮಾಡಿದೆನು. ಇಲ್ಲಿಗೆ ಇಪ್ಪತ್ತೆರಡು ಕಡೆಗಳಿಂದ ರೈಲು ಬರುತ್ತವೆ. ಯಾರೋ ನನ್ನನ್ನು ಕರೆದುಕೊಂಡು ಹೋಗಿ ಬೇಕಾಷ್ಟು ಜಿಲೇಬಿಯನ್ನು ಕೊಡಿಸಿದಳು. ಇಲ್ಲಿಗೆ ಬರುವಷ್ಟರಲ್ಲಿ ಕನ್ನಡ ಭಾಷೆ, ರಾಗಿಯ ಹಿಟ್ಟು, ತೆಂಗಿನಮರ ಇವುಗಳ ಮೇಲೆ ಬಹಳ ಬಯಕೆ ಹತ್ತಿತು. ಇಲ್ಲಿಂದ ಜಗನ್ನಾಥ(ಪೂರಿ)ಕ್ಕೆ ಬಂದೆವು.

೯. ಜಗನ್ನಾಥ

ಜಗನ್ನಾಥವು ಸಮುದ್ರ ತೀರದಲ್ಲಿದೆ. ಅಷ್ಟೇನು ದೊಡ್ಡ ಪಟ್ಟಣವಲ್ಲದಿದ್ದರೂ ಯಾವಾಗಲೂ ಯಾತ್ರಾರ್ಥಿಗಳಿಂದ ಕೂಡಿದ ಪುಣ್ಯ ಕ್ಷೇತ್ರ. ಇಲ್ಲಿ ಜಗನ್ನಾಥ ಸ್ವಾಮಿಯ ದೊಡ್ಡ ದೇವಸ್ಥಾನವಿದೆ. ಯಾತ್ರಾರ್ಥಿಗಳ ಹತ್ತಿರ ಕಾಸು ಕಸಿದುಕೊಳ್ಳುವ ಪುರೋಹಿತರು ಬಹಳ ಮಂದಿ ಇದ್ದಾರೆ. ಒಬ್ಬನು ಬಂದು ಬೆಲ್ಲದ ಅಂಬಲಿಯನ್ನು ನನ್ನ ಬಾಯಿಗೆ ತನ್ನ ಕೈಯಿಂದ ಉಣಿಸಿ, ಅದರಲ್ಲೆ ಸ್ವಲ್ಪ ಮಿಗಿಸಿ ತನ್ನ ಬಾಯಿಗೆ ಹಾಕಿಕೊಂಡು ನನಗೆ ಏನೇನೋ ಶಾಸ್ತ್ರ ಮಾಡಿ ಮಂತ್ರ ಪಠಿಸಿ ನನ್ನಿಂದ ಒಂದು ಬೆಳ್ಳಿಯುಂಗುರ ಮತ್ತು ದುಡ್ಡನ್ನೂ ಸಹ ಕಸಿದುಕೊಂಡನು. ತಿರುಪತಿ, ರಾಮೇಶ್ವರಕ್ಕೆ ಹೋಗುವ ಯಾತ್ರಾರ್ಥಿಕರ ಸಂಖ್ಯೆ ಬಹಳ ಹೆಚ್ಚು. ಸಮುದ್ರದಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿಕೊಂಡು ರೈಲಿನಲ್ಲಿ ಕಟಕ್, ಒರಿಸ್ಸಾ ಮೂಲಕ ಬರಮಪುರಕ್ಕೆ ಬಂದೆವು.

೧೦. ಬರಮಪುರ

ಅಕ್ಕಿ ವ್ಯಾಪಾರದ ದೊಡ್ಡ ಪಟ್ಟಣ. ನಾವು ಇಲ್ಲಿಗೆ ಬಂದ ದಿನ ಶ್ರೀರಾಮನವಮಿ. ಭಕ್ತರು ಏರ್ಪಡಿಸಿದ್ದ ಮಂಟಪಕ್ಕೆ ಸಾಧುಗಳೊಡನೆ ನಾನೂ ಹೋಗಿ ಮಂಟಪ ಶೃಂಗಾರ ಕಾರ್ಯದಲ್ಲಿ ತೊಡಗಿದೆನು. ಹರಿಕಥೆಯಾಯಿತು. ನಾನು ಅನೇಕ ಕೀರ್ಥನೆಗಳನ್ನು ಹಾಡಿದೆನು. ಬೆಳಗಿನ ಜಾವ ನಾಲ್ಕು ಗಂಟೆಯಲ್ಲಿ ಮಂಗಳಾರತಿ ತೀರಿಸಿಕೊಂಡು ರೈಲಿನಲ್ಲಿ ಕೊಲ್ಲೇರು, ಚಿಲಕ, ಪುಲಿಕಾಟ್, ಕೊಲ್ಲಿಗಳ ದಾಟಿ ವೆಲ್ಲೂರು, ಚಿತ್ತೂರು, ವಿಶಾಖ ಪಟ್ಟಣಗಳ ಮೂಲಕ ತಿರುಪತಿಗೆ ಬಂದೆವು.

೧೧. ತಿರುಪತಿ

ಉತ್ತರ ಇಂಡಿಯಾದಲ್ಲಿ ಕಾಶಿ ಹೇಗೋ, ದಕ್ಷಿಣ ಇಂಡಿಯಾದಲ್ಲಿ ತಿರುಪತಿಯೂ ಪ್ರಸಿದ್ಧವಾದ ವೈಷ್ಣವೊಯಾತ್ರಾ ಸ್ಥಳ. ಯಾತ್ರಾರ್ಥಿಗಳ ಅನುಕೂಲತೆಗಾಗಿ ದೊಡ್ಡ ರೈಲಿದೆ. ಬೆಟ್ಟಕ್ಕೆ ಹತ್ತಿರವಾಗಿ ದಕ್ಷಿಣದಲ್ಲಿ ಗೋವಿಂದರಾಯನ ಪಟ್ಟಣವೆಂಬ ಸಾಧಾರಣವಾದ ಪಟ್ಟಣವಿದೆ. ಯಾವ ನದಿಯೂ ಹರಿಯುವುದಿಲ್ಲ. ಗೋವಿಂದರಾಯ ಸ್ವಾಮಿಯ ದೊಡ್ಡ ದೇವಸ್ಥಾನವಿದೆ. ಮುಂಭಾಗದಲ್ಲಿ ಸಾಧಾರಣವಾದ ಕಲ್ಯಾಣ ಇದೆ. ಹಿಂಭಾಗದಲ್ಲಿ ದೊಡ್ಡ ಛತ್ರವಿದೆ. ಇಲ್ಲಿ ಯಾವಾಗಲೂ ಬ್ರಾಹ್ಮಣ ಸಂತರ್ಪಣೆ ನಡೆಯುವುದು. ಯಾವಾಗಲೂ ಉತ್ಸವಾದಿಗಳು ಇಲ್ಲಿ ನಡೆಯುವುವು. ಉತ್ಸವ ಕಾಲದಲ್ಲಿ ಆನೆ, ಕುದುರೆ, ಒಂಟೆಗಳ ಮೇಲೆ ನಗಾರಿಗಳನ್ನು ಬಡಿಯುತ್ತಾರೆ. ತೊಲಸಿಮಣಿ, ತೀರ್ಥದ ಹೂಜಿ, ದೇವರ ವಿಗ್ರಹಗಳು, ಗಂಟೆ, ಮಂಗಳಾರತಿತಟ್ಟೆ, ದೀಪಸ್ತಂಭ ಮೊದಲಾದ ಹಿತ್ತಾಳೆ, ಕಂಚಿನ ಸಾಮಾನುಗಳು, ಇನ್ನೆಲ್ಲೂ ಇಲ್ಲದ ಚಂದನ ಮರವು ಇಲ್ಲಿಯ ಬೆಟ್ಟದಲ್ಲಿರುವುದರಿಂದ ಕೊಳಲು, ಮುಖವೇಣಿ ಮೊದಲಾದ ಸಾಮಾನುಗಳ ವ್ಯಾಪಾರ ಇಲ್ಲಿ ಹೆಚ್ಚು. ಬೆಟ್ಟವು ಅಷ್ಟೇನು ಎತ್ತರವಿಲ್ಲದಿದ್ದರು ದೇವಸ್ಥಾನವಿರುವಲ್ಲಿಗೆ ಬಳಸಿ ಹೋಗಬೇಕಾದರೆ ಸ್ವಲ್ಪ ಮೇಲ್ಭಾಗದಲ್ಲಿ ಗೂಳಿಗೋಪುರವೆಂದು ದೊಡ್ಡ ಗೋಪುರವಿದೆ. ದೇವಸ್ಥಾನದ ಉಪಯೋಗಕ್ಕಾಗಿ ದನಗಳನ್ನು ಇಲ್ಲಿ ಸಾಕುತ್ತಾರೆ. ಅನೇಕ ಗಿಡಮರಗಳಿಂದ, ಹಕ್ಕಪಕ್ಷಿಗಳಿಂದಲೂ, ಸದಾ ಹೆಚ್ಚು ಸಂಖ್ಯೆಯ ಭಕ್ತಾದಿಗಳಿಂದಲೂ, ಗೋವಿಂದ… ಗೋವಿಂದ… ಎಂಬುವ ಮತ್ತು ಜಾಗಟೆ, ಶಂಖ, ಬಾನಕಿ ಶಬ್ಧಗಳಿಂದಲೂ ಕೂಡಿ ಬೆಟ್ಟವು ಮನೋಹರವಾಗಿದೆ. ಉದ್ದಕ್ಕೂ ಭಿಕ್ಷುಕರು ಬಹಳ ಮಂದಿ ಇದ್ದಾರೆ. ಗೋವಿಂದರಾಯನ ಪಟ್ಟಣದಿಂದ ಬೆಟ್ಟಕ್ಕೆ ವಿದ್ಯುಚಕ್ತಿ ದೀಪವಿಟ್ಟಿದ್ದಾರೆ. ಶ್ರೀ ವೆಂಕಟರಮಣ ಸ್ವಾಮಿದೇವಸ್ಥಾನವು ಬಹಳ ದೊಡ್ಡದು. ಸುತ್ತಲೂ ತೆಂಗಿನಮರಗಳನ್ನು ಬೆಳೆಸಿದ್ದಾರೆ. ಎಡಗಡೆ ಸ್ನಾನಕ್ಕೆ ಅನುಕೂಲವಾದ ಸಾಧಾರಣವಾದ ಕಲ್ಯಾಣಿ ಇದೆ. ಬಲಗಡೆ ಮುಂಭಾಗದಲ್ಲಿ ಭಕ್ತರು ಇಳಿದುಕೊಳ್ಳಲು ದೊಡ್ಡ ಛತ್ರವಿದೆ. ಅಲ್ಲಲ್ಲಿ ಹೂ, ಪೂಜಾ ಸಾಮಗ್ರಿಯ ಅಂಗಡಿಗಳು ಬಹಳ ಇವೆ. ಬೆಟ್ಟದ ಮೇಲೆ ಮೂರು ಮೈಲು ದೂರದಲ್ಲಿ ಪಾಪನಿವೇಷನವೆಂಬ ತೀರ್ಥ ಸ್ಥಾನವಿದೆ. ನಾವು ಅಲ್ಲಿಗೆ ಹೋದ ದಿನ ಏಕಾದಶಿ. ನಮ್ಮಗಳಿಗೆ ಗೆಣಸು, ಪಾನಕವನ್ನು ಕೊಟ್ಟರು. ಬೆಳಿಗ್ಗೆ ಅರಿಶಿನದ ಅನ್ನ ಪಾಯಸ ಕೊಟ್ಟರು. ದೇವರ ದರ್ಶನ ಮಾಡಿ ಮಂಗಳಾರತಿ ತೆಗೆದುಕೊಂಡು ರೈಲ್ವೆ ನಿಲ್ದಾಣಕ್ಕೆ ಬಂದೆವು. ಮುಂದೆ ರಾಮೇಶ್ವರಕ್ಕೆ ಹೋಗಬೇಕೆಂಬ ಆಸೆಯಿತ್ತು. ಆದರೆ ಆಗಲೆ ಬೇಸಿಗೆ ರಜವು ಮುಗಿದು ಸ್ಕೂಲು, ಕಾಲೇಜುಗಳು ಪ್ರಾರಂಭವಾಗುವ ಕಾಲವು ಸಮೀಪಿಸಿದ್ದುದರಿಂದ ನನ್ನ ಸಂಗಡಿಗರನ್ನು ಅಗಲಿ ನಾನೊಬ್ಬನೆ ಬೆಂಗಳೂರಿಗೆ ಬಂದು ಶ್ರೀರಂಗಪಟ್ಟಣಕ್ಕೆ ಬಂದು ನನ್ನ ಜನ್ಮಸ್ಥಾನವಾದ ದಮ್ಮನಿಂಗಳವನ್ನು ತಲುಪಿದೆ. ಇಲ್ಲಿಗೆ ನನ್ನ ಉತ್ತರಭಾರತದ ಸಂಚಾರ ಮತ್ತು ತೀರ್ಥಯಾತ್ರೆಯು ಮುಗಿಯಿತು.

೧೨. ಪುನಃ ವಿದ್ಯಾಭ್ಯಾಸ

ಒಂದೆರಡು ವಾರ ಊರಿನಲ್ಲಿ ವಿಶ್ರಾಂತಿ ಹೊಂದಿ ಪುನಃ ಹೋಗಿ ಹಾಸನಕ್ಕೆ ಹೈಸ್ಕೂಲಿನಲ್ಲಿ ನಾಲ್ಕನೆ ತರಗತಿಗೆ ಸೇರಿಕೊಂಡೆನು. ಸರ್ಕಾರಿ ವೇತನದ ಸಹಾಯದಿಂದ ಎರಡು ವರ್ಷ ವ್ಯಾಸಂಗ ಮಾಡಿ ನಾಲ್ಕು ಮತ್ತು ಐದನೆ ಪಾರಂಗಳಲ್ಲಿ ತೇರ್ಗಡೆ ಹೊಂದಿ ಪುನಃ ಬೆಂಗಳೂರು ಶ್ರೀ ನರಸಿಂಹರಾಜ ಹಾಸ್ಟಲಿನ ಬೋರ್ಡರಾಗಿ S.S.L.C. ಪರೀಕ್ಷೆಗೆ ಓದಲು ಪ್ರಾರಂಭಿಸಿದೆನು. ಕೊನೆಯಲ್ಲಿ ಪರೀಕ್ಷೆಗೆ ಕುಳಿತೆನು. ಆ ವರ್ಷ ಪರೀಕ್ಷೆಯಲ್ಲಿ ತೇರ್ಗಡೆಯಾಗಲಿಲ್ಲ. ಯಾಕೆಂದರೆ ಗಣಿತವು ನನಗೆ ವಿಷ ಮುಳ್ಳಾಗಿತ್ತು. ಇದೇ ನನ್ನ ಮುಂದಿನ ಪ್ರೌಢ ವಿದ್ಯಾವ್ಯಾಸಂಗದ ಕುಡಿಯನ್ನು ಮುರಿದದ್ದು. ಆದಿಕರ್ನಾಟಕದ ಅಭಿವೃದ್ದಿಯಲ್ಲಿ ನಿರತವಾಗಿದ್ದರು ಇದೊಂದು ಭಾಗದಲ್ಲಿ ದಯಾಶೂನ್ಯವಾಗಿರುವ ನಮ್ಮ ಸರ್ಕಾರವು ಈಗಿನಂತೆಯೆ ಒಂದು ಸಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದಲ್ಲಿ ಎಲ್ಲಾ ಸರ್ಕಾರದಿಂದ ಒದಗಿಸುತ್ತಿದ್ದ ಅನುಕೂಲಗಳೆಲ್ಲವೂ ತಪ್ಪಿಹೋಗುತ್ತಿತ್ತು. ಇದಕ್ಕಾಗಿ ನಾನು ವ್ಯಾಸಂಗ ಬಿಟ್ಟು ಹೊರಬೀಳಬೇಕಾಯಿತು. ತಂದೆ-ತಾಯಿಗಳಿಬ್ಬರೂ ಒಂದೇ ದಿನ ಕಳೆದುಕೊಂಡ ನಿರ್ಭಾಗ್ಯನಾದ ನನಗೆ, ನನ್ನ ಹಿತವನ್ನೆಣಿಸದ ಚಿಕ್ಕಪ್ಪಂದಿರಿಂದ ಯಾವ ಸಹಾಯವು ಪುನಃ ವ್ಯಾಸಂಗಕ್ಕೆ ದೊರೆಯಲಿಲ್ಲವಾದ್ದರಿಂದ ವಿಧಿಯಲ್ಲದೆ ವ್ಯಾಸಂಗ ನಿಲ್ಲಿಸಬೇಕಾಯಿತು. ಇದೆ ಕೊರತೆಯಲ್ಲಿ ಶರೀರವು ಕೃಶವಾಯಿತು. ಹೀಗೆಯೆ ಒಂದು ವರ್ಷ ಕಾಲಕಳೆದೆನು. ಸರ್ಕಾರಿ ಕೆಲಸಕ್ಕೆ ಹೋಗಲು ಅನುಕೂಲವಿತ್ತು. ನಾನು ಬೆಂಗಳೂರು ನರಸಿಂಹರಾಜ ಹಾಸ್ಟಲ್ ಗೋಡೆಯ ಮೇಲೆಲ್ಲ ನಾನು ಸರ್ಕಾರಿ ಹುದ್ದೆಗೆ ಸೇರುವುದಿಲ್ಲವೆಂದು ಬರೆಯುತ್ತಿದ್ದೆನು.

೧೩. ಕವಿಯೆನಿಸಿಕೊಂಡದ್ದು

ವ್ಯಾಸಂಗ ಮುಗಿದನಂತರ ಯಾವ ಸರ್ಕಾರಿ ಕೆಲಸಕ್ಕೂ ಪ್ರಯತ್ನಿಸದೆ ಮನೆಯಲ್ಲೆ ಕಾಲಕಳೆದೆನು. ವರ್ಷವಾದ ನಂತರ ಸುಮ್ಮನೆ ಸೋಮಾರಿಯಾಗಿ ಕಾಲಕಳೆಯಬಾರದೆಂದು ಕವನಬರೆಯಲು ಕೈಹಾಕಿದೆನು. ನನ್ನ ಅನೇಕ ಮಿತ್ರರು, ದೊಡ್ಡ ವಿದ್ಯಾವಂತರು ಮತ್ತು ಸುಪ್ರಸಿದ್ಧ ಕವಿಗಳು ಸಹ ನನ್ನ ಅನೇಕ ಕವನಗಳನ್ನು ನೋಡಿ ‘ನಿಮ್ಮಲ್ಲಿ ನಿಜವಾಗಿಯೂ ಅಪೂರ್ವವಾದ ಕವಿತ್ವದ ಅಂಶವನ್ನು ಭಗವಂತನು ನಿಮಗೆ ಕರುಣಿಸಿದ್ದಾನೆ. ಇದನ್ನು ಚೆನ್ನಾಗಿ ಬೆಳೆಸಿಕೊಳ್ಳಬೇಕು ಮತ್ತು ರಚಿಸಿದ್ದನ್ನು ಹೊರಗೆಡಹಬೇಕೆಂದು ಆಗಾಗ ಹೇಳುತ್ತಿದ್ದರು. ಇವೆಲ್ಲವೂ ಇಂದು ನನ್ನ ಮನಸ್ಸಿಗೆ ಬಂದು ಕವನ ರಚನೆಗೆ ಕೈಹಾಕಿ ಅದನ್ನೆ ಒಂದು ವೃತ್ತಿಯನ್ನಾಗಿ ಮಾಡಿಕೊಂಡೆನು.

ಬೆಳಿಗ್ಗೆ ಮುಂಜಾನೆ ಎದ್ದು ನಮ್ಮೂರ ತೊರೆಯಲ್ಲಿ ಸ್ನಾನ ಮಾಡಿ ದೇವರ ಪ್ರಾರ್ಥನೆ ನೆರವೇರಿಸಿ ನಂತರ ಕಣಿಗಲು ಹೂವಿನ ಗಿಡದ ಕೆಳಗೆ ಮರಳು ಗುಡ್ಡೆ ಮಾಡಿ ಅದರ ಮೇಲೊಂದು ಚೌಕ ಹಾಕಿ, ಅದರ ಮೇಲೆ ಮೊಳಕೈಯೂರಿಕೊಂಡು ನನಗೆ ಹೊಳೆದ ಅಭಿಪ್ರಾಯಗಳ ಮೇಲೆ ಅಂದರೆ ಹರಿಜನರ ಕೊರತೆ, ಗಾಂಧೀಜಿಯವರ ವಿಚಾರ, ಪ್ರಕೃತಿ ವರ್ಣನೆ -ಇವುಗಳ ವಿಚಾರವಾಗಿ ಅನೇಕ ಕವನಗಳನ್ನು ರಚಿಸಿದೆನು. ನನ್ನ ಮಿತ್ರರು ಅನೇಕ ವಿದ್ಯಾವಂತರು ಮತ್ತು ಪ್ರಸಿದ್ಧ ಕವಿಗಳ ಒತ್ತಾಯದಿಂದ ಬರೆದ ಕವನಗಳೆಲ್ಲವನ್ನು ಸೇರಿಸಿ ಗ್ರಂಥ ರೂಪದಲ್ಲಿ ಹೊರಗೆಡಹಬೇಕೆಂದು ಮನಸ್ಸಾಯಿತು. ಇವನ್ನು ತಿದ್ದಿ ಮಾಡಿಸಲು ಮೈಸೂರಿಗೆ ಹೊರಟೆನು. ಈಗ ಕಾಲೇಜು ಪ್ರೊಫೆಸರ್ ಆಗಿರುವ ಮ.ಕೆ.ಎಸ್ .ಧರಣೇಂದ್ರಯ್ಯನವರನ್ನು ಬೇಡಿದೆನು. ಆದರೂ ಅವರ ನೆರವು ನನಗೆ ಸಿಕ್ಕಲಿಲ್ಲ. ಹಿಂದಿರುಗಿ ಊರಿಗೆ ಬಂದೆನು. ಅಲ್ಲಿ ಇಲ್ಲಿ ಹೋಗಿ ಬರಲು ಪ್ರಯಾಣದ ಖರ್ಚಿಗೂ ಮತ್ತು ಗ್ರಂಥ ಮುದ್ರಣಕ್ಕೂ ಹಣವೆಲ್ಲಿಂದ ಬರಬೇಕು. ನನ್ನ ಕವನ ತಿದ್ದುವವರಾರು. ದಾವಣಗೆರೆಯ ಒಬ್ಬ ಲಿಂಗಾಯತರು ‘ಅಂತ್ಯಜೋದ್ಧಾರ’ ನಾಟಕ ಬರೆದಿದ್ದಾರೆಂದು ವೃತ್ತ ಪತ್ರಿಕೆಯೊಂದರಲ್ಲಿ ಓದಿದೆನು. ಧೈರ್ಯ ಮನಸ್ಸಿಂದ ಭಗವಂತನ ಮೇಲೆ ಭಾರಹಾಕಿ ಕಾಲು ನಡಿಗೆಯಲ್ಲೇ ಒಂಭತ್ತು ದಿವಸಕ್ಕೆ ದಾವಣಗೆರೆಯನ್ನು ಸೇರಿದೆನು. ಅಲ್ಲಿ ನಾಟಕಕಾರರಾದ ಶ್ರೀಮಾನ್ ಕೋಲಶಾಂತಪ್ಪನವರನ್ನು ಸಂದರ್ಶಿಸಿ ಬಂದ ವಿವರವನ್ನು ತಿಳಿಸಿದೆನು. ಅವರು ನನ್ನನ್ನು ಬಹಳ ಆದರದಿಂದ ಕಂಡು, ಒಂದು ತಿಂಗಳು ತಮ್ಮ ಮನೆಯಲ್ಲೆ ಇಟ್ಟುಕೊಂಡು ನನ್ನ ಕವನಗಳೆಲ್ಲವನ್ನು ತಿದ್ದಿಕೊಟ್ಟರು. ನನ್ನ ವಿಚಾರವನ್ನು ಆ ಊರಿನ ಸರ್ಕಾರಿ ಅಧಿಕಾರಿಗಳಿಗೂ ಮತ್ತು ದೊಡ್ಡಮನುಷ್ಯರಿಗೂ ಪರಿಚಯ ಮಾಡಿಕೊಟ್ಟರು. ಆಗ ಅಲ್ಲಿನ ಹೈಸ್ಕೂಲಿಗೆ ಹೆಡ್ಮಾಸ್ಟರೂ, ಪ್ರಸಿದ್ಧ ಕವಿಗಳು ಆಗಿದ್ದ ಶ್ರೀಯುತ ಎಮ್.ರಾಜಾರಾವ್ M.A ಅವರು ನನ್ನನ್ನು ಆದರದಿಂದ ಮನೆಗೆ ಬರಮಾಡಿಕೊಂಡು ಅಲ್ಲಿ ನನ್ನ ಕವನಗಳನ್ನು ಓದಿಸಿ ಸ್ವಲ್ಪ ಹಣವನ್ನು ಕೊಟ್ಟುದಲ್ಲದೆ, ಆಗ ಚಿಕ್ಕಮಗಳೂರು ಜಿಲ್ಲಾ ಡಿಪ್ಯೂಟಿ ಕಮಿಷನರಾದ ಸುಪ್ರಸಿದ್ಧ ಕವಿಗಳು ಶ್ರೀಮಾನ್ ಮಾಸ್ತಿವೆಂಕಟೇಶ ಅಯ್ಯಂಗಾರ್ ಅವರಿಗೆ ನನಗೆ ಸಹಾಯವಾಗುವಂತೆ ಒಂದು ಶಿಫಾರಸು ಪತ್ರವನ್ನು ಕರುಣಿಸಿದರು. ಇವರ ಬೆಂಬಲವೇ ನಾನು ಮುಂದೆ ಕವಿಯೆಂದು ಖ್ಯಾತಿ ಪಡೆಯಲು ನೆರವಾದುದು. ಅಲ್ಲದೆ ಈ ಊರು ಕ್ಲಬ್ಬಿನಲ್ಲಿ ಅಧಿಕಾರಿಗಳು ವಿದ್ಯಾವಂತರು ಸಭೆಸೇರಿ ನನ್ನ ಕವನಗಳನ್ನು ಕೇಳಿ ‘‘ಹರಿಜನ ತರುಣ ಕವಿ’’ಯೆಂದು ಟೈಟಲು ಕೊಟ್ಟರು. ಮತ್ತು ಎಲ್ಲಾ ಪತ್ರಿಕೆಗಳಲ್ಲೂ ಪ್ರಚುರಪಡಿಸಲ್ಪಟ್ಟಿತು. ಇಲ್ಲಿಂದ ಅಜ್ಜಂಪುರದ ಮಿಡ್ಲಸ್ಕೂಲಿನಲ್ಲಿ ತರೀಕೆರೆ ಕರ್ಣಾಟಕ ಸಂಘದಲ್ಲಿ ಶ್ರೀಮಾದವರಾವ್ S.D.O. ಅಧ್ಯಕ್ಷತೆಯಲ್ಲಿ ಲಕ್ಕುವಳ್ಳಿಯಲ್ಲಿ ಕವನ ಪಠಿಸಿ ಚಿಕ್ಕಮಗಳೂರಿಗೆ ಬಂದೆನು. ಇದೆಲ್ಲವೂ ಆಗಾಗ ಪತ್ರಿಕೆಗಳಲ್ಲಿ ಪ್ರಚುರವಾಗುತ್ತಲೇ ಇತ್ತು. ಅಂದು ಚಿಕ್ಕಮಗಳೂರು ಹೈಸ್ಕೂಲ್ ಹೆಡ್ಮಾಸ್ಟರಾಗಿದ್ದ, ನಮ್ಮ ಹರಿಜನ ಹಿತೈಷಿಗಳಾಗಿದ್ದ ಶ್ರೀಮಾನ್ ಜಿ.ವೀರರಾಘವಚಾರ್ B.A(Hanrs) ಅವರು ಹಿಂದೆ ಬೆಂಗಳೂರಿನಲ್ಲಿ ನನಗೆ ಪ್ರೇಮೋಪಾಧ್ಯಾಯರಾಗಿದ್ದರು. ನನ್ನ ವಿಚಾರವನ್ನು ಕೆಲವು ದಿನಗಳಿಂದ ವೃತ್ತ ಪತ್ರಿಕೆಗಳಲ್ಲಿ ಓದುತ್ತಿದ್ದ ಅವರು ನಾನು ಹೋಗಿ ನೋಡಿದ ಕೂಡಲೆ ‘ಶಹಬಾಸ್ ಮಗುಸಾರ್ಥಕ’ವೆಂದು ಬೆನ್ನು ತಟ್ಟಿದರು. ನನ್ನಲ್ಲಿದ್ದ ಪತ್ರವೊಂದನ್ನು ಕೊಡಲು ಸಂತೋಷದಿಂದ ಕರೆದುಕೊಂಡು ಹೋಗಿ ಶ್ರೀಮಾನ್ ಮಾಸ್ತಿಯವರಿಗೆ ಭೇಟಿ ಮಾಡಿಸಿದರು. ಶ್ರೀಯುತರು ಆದರದಿಂದ ನನ್ನನ್ನು ಕರೆದು ನನ್ನ ಕವನಗಳೆಲ್ಲವನ್ನು ಆಮೂಲಾಗ್ರವಾಗಿ ಕೇಳಿ ಕವನಗಳ ಕಾಪಿಯೊಂದನ್ನು ತೆಗೆದುಕೊಂಡು ಸಾಹಿತ್ಯ ಪರಿಷತ್ತಿನಿಂದ ಮುದ್ರಣಕ್ಕೆ ದ್ರವ್ಯ ಸಹಾಯ ನೀಡಿಸುತ್ತೇನೆಂದು ವಾಗ್ದಾನ ಮಾಡಿದರು. ಶ್ರೀಯುತರು ನಾನು ಕುಳ್ಳಿರಿಸಿ ‘ಏನಾದರೂ ಸರ್ಕಾರಿ ಹುದ್ದಿಗೆ ಸೇರುವೆಯಾ?’ ಎಂದು ಕೇಳಿದರು. ನಾನು ‘ಇಲ್ಲ ನನ್ನ ಜೀವಿತವನ್ನೆಲ್ಲಾ ನನ್ನ ಹಿಂದುಳಿದ ಜನ ಸೇವೆಯಲ್ಲೂ ಮತ್ತು ಭಾಷಾ ಸೇವೆಯಲ್ಲೂ ಕಳೆಯುತ್ತೇನೆಂದು ಹೇಳಿದೆನು. ‘ನಿನಗೆ ಮನೆಯಲ್ಲಿ ತಿನ್ನುವುದಕ್ಕೆ ಇದೆಯೆ?’ ‘ಏನೋ ದೇವರು ಕೊಟ್ಟ ಅಲ್ಪಸ್ವಲ್ಪ ಗಂಜಿ ಇದೆ’ ಎಂದೆನು. ‘ಹಾಗಾದರೆ ಯಾವಾಗಲೂ ನನ್ನ ಸಹಾಯ, ಸಹಾನುಭೂತಿ ನಿನಗಿದೆ’ ಎಂದರು. ಶ್ರೀ ಜಿ.ವೀರರಾಘವಚಾರ್ಯರು ಮತ್ತು ನ್ಯಾಷಿನಲ್ ಹೈಸ್ಕೂಲಿನವರು ನನ್ನನ್ನು ಕರೆದು ಸತ್ಕರಿಸಿದರು. ಇದೆಲ್ಲವೂ ವೃತ್ತಪತ್ರಿಕೆಯಲ್ಲಿ ಪ್ರಚುರವಾಗಿತ್ತು. ಇಷ್ಟರಲ್ಲಿ ಹಾಸನದ ಜಾತ್ರೆಯಲ್ಲಿ ಹರಿಜನ ಕಾನ್‌ಫರೆನ್ಸ್ ನಡೆಯುವುದರಲ್ಲಿತ್ತು. ಇದನ್ನು ತಿಳಿದು ಅಲ್ಲಿನ ಜಿಲ್ಲಾ ಹರಿಜನ ಸಂಘದ ಸೆಕ್ರೇಟರಿಯವರು, ಪ್ರಸಿದ್ಧ ಅಡ್ವೋಕೇಟರು, ಜಿಲ್ಲಾ ಕಾಂಗ್ರೇಸ್ ಮುಖಂಡರೂ, ಹರಿಜನ ದಯಾಳೂ ಆದ ಶ್ರೀಮಾನ್ ಎ.ಜಿ.ರಾಮಚಂದ್ರರಾವ್ B.A., L.L.B.ಯವರನ್ನು ನೋಡಲು ಅವರು ಸಂತೋಷದಿಂದ ಕಂಡು ‘ಸದ್ಯದಲ್ಲಿಯೆ ನಡೆಯಲಿರುವ ಕಾನ್‌ಫರೆನ್ಸ್‌ಗೆ ಶ್ರೀಮಾನ್ ಹರಿಜನರ ಮೊದಲನೆ ಕವಿಗಳಾದ ಶ್ರೀಮಾನ್ ಗೋವಿಂದದಾಸರು ಕಾನ್‌ಫರೆನ್ಸಿಗೆ ಬರುತ್ತಾರೆಂದು ಪತ್ರಿಕೆಯಲ್ಲಿ ಪ್ರಚುರಪಡಿಸಿದರು. ಸರಿ ಮೀಟಿಂಗ್ ಸೇರಿತು. ಜಿಲ್ಲಾ ಮುಖಂಡರಿಗೆಲ್ಲಾ ನನ್ನ ಭಾಷಣ, ಕವನಗಳಿಂದ ಪರಿಚಿತನಾದೆನು. ಎಲ್ಲರ ಕಣ್ಣು ನನ್ನ ಮೇಲೆ ಬಿದ್ದಿತು. ಸಭಿಕರು ನನ್ನನ್ನೆ ಅಧ್ಯಕ್ಷ ಸ್ಥಾನಕ್ಕೆ ಚುನಾಯಿಸಲು, ಆಗ ತಾನೇ ಅಧ್ಯಕ್ಷತೆವಹಿಸಿ ಕಾರ್ಯಕಲಾಪಗಳನ್ನೆಲ್ಲಾ ಸುಸೂತ್ರವಾಗಿ ನೆರವೇರಿಸಿ ಹಿಂದಿರುಗಿದೆ. ಅದೇ ವರ್ಷ ನಡೆದ ಪ್ರಜಾಪ್ರತಿನಿಧಿ ಸಭೆಗೆ ಸದಸ್ಯಸ್ಥಾನಕ್ಕೆ ನಿಲ್ಲಬೇಕಾಗಿತ್ತು. ಆದರೆ ಖಾತೆಯು ನನ್ನ ಹೆಸರಿನಲ್ಲಿಲ್ಲದುದರಿಂದಲೂ, ಕಣ್ಣು ಸ್ವಲ್ಪ ನೋವಾಗಿ ಬೆಂಗಳೂರು ಮಿಂಟೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೊಂದುತ್ತಿದ್ದುದರಿಂದಲೂ ಅವಕಾಶವಿಲ್ಲವಾಗಿ ದೇಶಾದ್ಯಂತ ನನ್ನ ರೀತಿ ಬಹುಮಂದಿ ವ್ಯಸನಪಟ್ಟರು. ಆದರೂ ಹಾಸನದಲ್ಲೆ ಇದ್ದುಕೊಂಡು ಮನಸ್ಸಾರೆ ಹರಿಜನರ ಮೇಲ್ಮೆಗಾಗಿ, ಅನೇಕ ಸಂಸ್ಥೆಗಳಲ್ಲಿ ದುಡಿದು, ಅವರ ಕಷ್ಟ ನಿಷ್ಟುರಗಳನ್ನು ಕವನ ರೂಪದಲ್ಲಿ ಹೊರಗೆಡಹಿ ದೇಶ ಸೇವೆ, ಭಾಷಾ ಸೇವೆಗಳೆರಡರಿಂದ ದೇಶದಲ್ಲಿ ಕೀರ್ತಿ, ಗೌರವಗಳನ್ನು ಗಳಿಸಿದೆನು. ಹೆಚ್ಚೇಕೆ ಡಿಸ್ಟ್ರಿಕ್ಟಿನ ಹರಿಜನರಿಗೆಲ್ಲಾ ಪ್ರೇಮಬಂಧವೂ, ಅಲ್ಲದೆ ಮನೆಮನುಷ್ಯನಾದೆನು. ನಾನು ಯಾವುದಾದರೊಂದು ಊರಿಗೆ ಹೋದರೆ ಎಲ್ಲಾ ಮತದ ಹೆಂಗಸರು ಗಂಡಸರಾದಿಯಾಗಿ ‘ಬಂದಿರಾ?’ ಎಂದು ಮಾತನಾಡಿಸುತ್ತಿದ್ದರು. ದನ ಕುರಿಕಾಯುವ ಹುಡುಗರು ಬೋರೆ ಮೇಲೆ ಕಂಡರೆ ದೂರದಿಂದಲೆ ‘ಗೋವಿಂದಾಸರು ಬಂದ್ರು… ಗೋವಿಂದಾಸರು ಬಂದ್ರು…’ ಎಂದು ಕುಣಿಯುತ್ತ ಸಂತೋಷದಿಂದ ಹಾಡುತ್ತಿದ್ದರು. ಈ ನನ್ನ ಸೇವೆಯಲ್ಲಿ ನನ್ನನ್ನು ಸೇವಿಸುತ್ತಿದ್ದ ಸೂರಪ್ಪನೆಂಬುವವನನ್ನು ಇಲ್ಲಿ ಮರೆಯಲಾರೆ.

೧೪. ಆಶ್ರಮವಾಸ

ಆರು ವರ್ಷಗಳು ಹಾಸನವನ್ನೇ ವಾಸಸ್ಥಾನವಾಗಿ ಮಾಡಿಕೊಂಡು ಹರಿಜನಸೇವೆಯನ್ನು ಅನೇಕ ವಿಧದಲ್ಲಿ ಸಲ್ಲಿಸಿದುದಾಯಿತು. ಇಂದು ಒಂದು ಹರಿಜನ ತಂದೆ ತಾಯಿಗಳಿಲ್ಲದ ಮಕ್ಕಳಿಗೋಸ್ಕರ ಒಂದು ಆಶ್ರಮ(orfanage) ಮಾಡಬೇಕೆಂದು ಮನಸ್ಸು ಮಾಡಿದೆನು. ಬಹಳ ದಿನಗಳಿಂದಲೂ ಸರಿಯಾದ ಸ್ಥಳವನ್ನು ಹುಡುಕಿದೆನು. ಬಹಳ ದಿನಗಳಿಂದಲೂ ಸರಿಯಾದ ಸ್ಥಳವನ್ನು ಹುಡುಕಿದೆನು. ಕಡೆಕಡೆಗೆ ಎಲ್ಲಾ ಅನುಕೂಲಗಳು ಅಂದರೆ ಬಹು ಸಮೀಪದಲ್ಲಿ ನದಿ, ಕೆರೆ, ತೊರೆ, ನಾಲೆ, ಹೈವೆರೋಡ್, ರೈಲ್ವೆ ಸ್ಟೇಷನ್, ಪೋಸ್ಟಾಫಿಸ್ ಪ್ರೈಮರಿ ಮತ್ತು ಮಿಡ್ಲಸ್ಕೂಲ್, ಸಂತೆ, ಯಾತ್ರಾಸ್ಥಳವೆನಿಸಿದ್ದ ಜಾಲ ಮತ್ತು ಅನೇಕ ಗಿಡಮರ ಬಳ್ಳಿಗಳಿಂದಲೂ, ನವಿಲು ಮತ್ತು ಅನೇಕ ಹಕ್ಕಿಪಕ್ಷಿಗಳಿಂದ ಕೂಡಿ ಸರ್ವರಿಗೂ ಆನಂದವನ್ನುಂಟುಮಾಡುವ ಕಲಿಗಳಿಗೆ ನೆಲೆಬೀಡಾಗಿ ಭಕ್ತರಿಗೆ ಭಕ್ತಿರಸವನ್ನುಡಿಸುವ ಮಾವಿನಕೆರೆ, ಶ್ರೀರಂಗನಾಥಸ್ವಾಮಿಯ ಬೆಟ್ಟದ ಪಶ್ಚಿಮದ ತಪ್ಪಲು, ಸುತ್ತಲೂ ಸಣ್ಣಪುಟ್ಟ ಬಿಡುವಿಲ್ಲದ ಗುಡ್ಡ, ನಡುವೆ ವಿಶಾಲವಾದ ನೆಲ, ಒಂದು ಆಲದಮರ. ಇಲ್ಲಿ ಈಗ ಶ್ರೀಮನ್ ಮಹರಾಜರವರ ಆಪ್ತಕಾರ್ಯದರ್ಶಿಗಳಾಗಿರುವ, ಆಗ ಜಿಲ್ಲಾ ಡೆಪ್ಯುಟಿಕಮಿಷನರಾಗಿದ್ದ ಶ್ರೀಮಾನ್ ಟಿ.ರಾಮಯ್ಯ M.A ಅವರಿಗೆ ಆಶ್ರಮ ಸ್ಥಾಪನೆ, ಉದ್ದೇಶಗಳನ್ನು ವಿವರಿಸಲು ಸಂತೋಷದಿಂದ ತಾವೇ ಅಲ್ಲಿಗೆ ಬಂದು ಸ್ಥಳದಲ್ಲಿ ನಿಂತು ನೋಡಿ ಆರಿಸುವಿಕೆಗಾಗಿ ಆನಂದಿಸಿ ಎರಡು ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಟ್ಟರು. ೧೯೪೦ರಲ್ಲಿ ಆಶ್ರಮದ ಪ್ರಾರಂಭೋತ್ಸವವನ್ನು ನೆರವೇರಿಸಿ ಸೊಗಸಾಗಿರುವಂತೆ ಒಂದು ಹುಲ್ಲಿನ ಆಶ್ರಮವೊಂದನ್ನು ಕಟ್ಟಿಸಿದುದಾಯಿತು. ಒಂದು ವರ್ಷಪರಿಯಂತ ನಾನು ನನ್ನ ಪತ್ನಿ ಇಬ್ಬರು ಮಾತ್ರ ಆ ನಿರ್ಜನ ಪ್ರದೇಶದಲ್ಲಿ ಆನಂದವಾಗಿ ವಾಸಮಾಡಿಕೊಂಡು, ಇಬ್ಬರೂ ಆಗಾಗ ಅಲ್ಲಲ್ಲಿ ಹೋಗಿ ಸೇವಾಕಾರ್ಯ ನಡೆಸಿಕೊಂಡು ಆಶ್ರಮವಾಸಿಗಳಾಗಿದ್ದೆವು.

೧೫. ಆಶ್ರಮದ ನಿಯಮ

ಬೆಳಿಗ್ಗೆನೆ ಎದ್ದು ಬಂದವರೊಡನೆ ಪಕ್ಕದ ತೊರೆಯಲ್ಲಿ ಸ್ನಾನಮಾಡಿ ತಿರುಮಣಿ ಧರಿಸಿ, ಬೆಟ್ಟಕ್ಕೆ ಹತ್ತಿ ನಡುವೆ ಇದ್ದ ಒಂದು ಭಾರಿ ಬಂಡೆಯ ಮುಂಭಾಗದಲ್ಲಿ (ಪೂರ್ವಕ್ಕೆ) ತೊಳಸಿಗಿಡ ಸುತ್ತಲೂ ನಡುವೆ ಕುಳಿತು ಇಪ್ಪತ್ತು ನಿಮಿಷ ದೇವರ ಪ್ರಾರ್ಥನೆ ನಡೆಸುವುದು. ನಂತರ ಇಳಿದು ಆಶ್ರಮಕ್ಕೆ ಬಂದು ಕೆಲಸಕಾರ್ಯಗಳನ್ನು ಮಾಡುವುದು. ಹನ್ನೊಂದು ಗಂಟೆಗೆ ಊಟ. ಮಧ್ಯಾಹ್ನ ಆಶ್ರಮದ ಕೆಲಸ ಮತ್ತು ಬಂದವರನ್ನು ವಿಚಾರಿಸಿ ಜಮೀನು ಬಾವಿ, ಶಾಲೆಗಳಿಗೆ ತಕ್ಕ ಏರ್ಪಾಡು ನಡೆಸುವುದು. ಎಲ್ಲಿಯಾದರೂ ಹೋಗಬೇಕಾದರೆ ಹೊರಡುವುದು. ಸಂಜೆ ತೋಟದ ಕೆಲಸ. ಸಂಜೆ ಆರು ಗಂಟೆಗೆ ಎಲ್ಲರೂ ಕೈ ಕಾಲುಮುಖ ತೊಳೆದು ಬೆಟ್ಟದ ಮೇಲಕ್ಕೆ (ಪ್ರಾರ್ಥನ ಸ್ಥಳಕ್ಕೆ) ಹೋಗಿ ಪ್ರಾರ್ಥನೆ ನಡೆಸಿಕೊಂಡು ಬರುವುದು. ನಂತರ ಸಂಜೆಯಾದ ಮೇಲೆ ಓದುವುದು, ಬರವಣಿಗೆ, ನಿದ್ರೆ.

ಹೀಗೆ ಒಂದು ಆಶ್ರಮದಲ್ಲಿದ್ದುಕೊಂಡು ಮುಂದಿನ ಬೇಸಿಗೆ ಕಾಲ ಮುಗಿದ ಕೂಡಲೆ ಹತ್ತು ಮಕ್ಕಳನ್ನು ಸೇರಿಸಿಕೊಂಡು ಸುಗ್ಗಿಯ ಕಾಲದಲ್ಲಿ ದಿನಸಿ ಮತ್ತು ದ್ರವ್ಯ ಶೇಖರಿಸಿ ಆಶ್ರಮವನ್ನು ಆರಂಭಿಸಬೇಕೆಂದು ಎಲ್ಲವನ್ನು ಅಣಿಮಾಡಿಕೊಂಡಿದ್ದೆನು. ಹೆಂಗಸರನ್ನು ಪಕ್ಕದ ಊರಿನಲ್ಲಿ ಬಿಟ್ಟು ಸೆಂಟ್ರಲ್ ಡಿಸ್ಟ್ರಿಕ್ಟ್ ಕ್ಲಾಸ್ ಮೀಟಿಂಗಿಗಾಗಿ ಬೆಂಗಳೂರಿಗೆ ಹೊರಟು ಹೋದೆನು. ಹರಿಜನರೇಳ್ಗೆ ಮಾಡುತ್ತಿದ್ದ ಏರ್ಪಾಟುಗಳನ್ನು ನೋಡಿ ಸಹಿಸದ ಆ ಗ್ರಾಮದ ಕೆಲವು ದುಷ್ಟರು ನಾವಿಬ್ಬರು ಒಳಗೆ ಮಲಗಿ ನಿದ್ರಿಸುತ್ತಾರೆಂದು ಭಾವಿಸಿ ನಡುರಾತ್ರಿಯಲ್ಲಿ ಗುಂಪುಕೂಡಿಕೊಂಡು ಸದ್ದಿಲ್ಲದಂತೆ ಬಂದು ಆಶ್ರಮಕ್ಕೆ ಬೆಂಕಿ ಹಾಕಿ ಭಸ್ಮಮಾಡಿಬಿಟ್ಟರು. ಆ ದಿನ ಸಂಜೆ ಏಳು ಗಂಟೆಯಲ್ಲಿ ಆಶ್ರಮವನ್ನು ಬಿಟ್ಟೆವು. ದಯಾಮಯನಾದ ಭಗವಂತನು ಸಹಾಯಕ್ಕೆ ಹೊರತು ಮತ್ತಾರಿಲ್ಲದ ಆ ನಿರ್ಜನ ಪ್ರದೇಶದಿಂದ ನಮ್ಮನ್ನು ಮುಂಚೆಯೆ ಹೊರಗೆಡಹಿ ಭಯಂಕರ ಮೃತ್ಯುವಿನ ಬಾಯಿಂದ ಪಾರುಗಾಣಿಸಿದನು.

ಆ ನಿರ್ಜನ ಪ್ರದೇಶದಲ್ಲಿ ಎರಡು ವರ್ಷದಿಂದ ಒಬ್ಬನೇ ಅದರಲ್ಲೂ ಗರ್ಭಿಣಿ ಹೆಂಡತಿಯೊಂದಿಗೆ ಆಶ್ರಮದ ಏರ್ಪಾಡಿಗೋಸುಗ ಹಗಲಿರುಳು. ಕಷ್ಟ ಸಹಿಷ್ಣುತೆಯಿಂದ ದುಡಿದದ್ದು ನಿರರ್ಥಕವಾಯಿತು. ನನ್ನ ಮಹೋನ್ನತ ಆಸೆಗಳೆಲ್ಲವು ಮುರಿದು ಬಿದ್ದವು. ಆಗಲೆ ಎಲ್ಲಾ ಕಡೆಯಿಂದಲೂ ಜನರೂ, ಹರಿಜನ ಹಿತೈಷಿಗಳು ಬಂದು ನೋಡಿ ಆನಂದಪಟ್ಟು ಹೊಗುತ್ತಿದ್ದರು. ತಬ್ಬಲಿ ಮಕ್ಕಳನ್ನು ಸಾಕುವ ಆಶ್ರಮವಲ್ಲದೆ ಹರಿಜನರ ಕಷ್ಟ ನಿವಾರಿಸಿ ಅನುಕೂಲತೆಗಳನ್ನೊದಗಿಸಿಕೊಡುವ ಒಂದು ಕಛೇರಿಯೂ ಆಗಲಿತ್ತು. ಆದರೆ ದೈವೇಚೆಯು ಬೇರೆಯಿತ್ತು. ಬೆಂಗಳೂರಿನಿಂದ ಮೀಟಿಂಗ್ ಮುಗಿಸಿಕೊಂಡು ಊರಿಗೆ ಹಿಂದಿರುಗಿ ಬಂದು ಆಶ್ರಮಕ್ಕೆ ಹೋಗಬೇಕೆಂದು ರೈಲಿಗೆ ಇನ್ನೇನು ಹೊರಟಿದ್ದೆ. ಅಷ್ಟರಲ್ಲೆ ಸೇವಕರ ಸೇವೆ ಮಾಡುತ್ತಿದ್ದ ತಪ್ಪಿನಿಂದ ಆಶ್ರಮವನ್ನು ಸುಟ್ಟ ವಿಚಾರ ಗೊತ್ತಾಯಿತು. ಕೂಡಲೆ ಒಂದೆ ಸಾರಿ ಇದ್ದಕ್ಕಿದ್ದ ಹಾಗೆಯೆ ಸಾವಿರ ಸಿಡಿಲು ಬಡಿದಂತಾಯಿತು. ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದುಬಿಟ್ಟೆನು. ಒಂದು ಗಂಟೆಯಾದ ನಂತರ ಚೇತರಿಸಿಕೊಂಡು ವಿಚಾರವನ್ನು ಕೇಳಿದುದಾಯಿತೆಂದು ಹೊರಡಲಿದ್ದೆ. ಆದರೆ ಅನೇಕರು ಪುನಃ ಅಲ್ಲಿಗೆ ಹೋಗಬೇಡವೆಂದು ತಡೆದರು. ನಂತರ ಅದೇ ವ್ಯಥೆಯಲ್ಲಿ ಮೂರು ತಿಂಗಳು ಹಾಸಿಗೆ ಹಿಡಿದೆನು.

ಊರಿಗೆ ಹಿಂದಿರುಗಿದಾಗ ಆಗಲೆ ಹೆಂಡತಿಯು ಎಂಟು ತಿಂಗಳು ಗರ್ಭಧರಿಸಿದ್ದಳು. ಎರಡು ವರ್ಷದ ಹಿಂದೆ ಮೊದಲನೆಯ ಗಂಡುಮಗು ಜನಿಸಿದ ಒಂದು ತಿಂಗಳಿಗೇನೆ ಮೃತಪಟ್ಟಿತು. ಆಗ ಬೆಂಗಳೂರಿನಲ್ಲೆ ಇದ್ದೆ. ಸತ್ತ ಸಮಾಚಾರ ನಂತರ ಗೊತ್ತಾಯಿತು. ಈ ಪುತ್ರ ಶೋಕವನ್ನು ಸಹಿಸದೆ ಮೂರು ತಿಂಗಳು ಹಾಸಿಗೆ ಹಿಡಿದಿದ್ದೆ. ನಾವು ಬೆಟ್ಟದ ಮೇಲಕ್ಕೆ ಪ್ರಾರ್ಥನೆಗೆ ಹೋಗಿ ಕುಳಿತಾಗ ‘ಓ… ಭಗವಾನ್ ನನ್ನ ಮೊದಲನೆ ಪುತ್ರನನ್ನು ನಾನು ನೋಡುವುದಕ್ಕೆ ಮುಂಚೆಯೆ ಕಣ್ಮರೆ ಮಾಡಿರುವೆ. ಈ ಸಾರಿ ನಿನ್ನ ನಿಜಭಕ್ತನಾಗುವ, ದೇಶಸೇವಕನಾಗುವ, ಪೂರ್ವ ವಿದ್ಯಾವಂತನಾಗುವ, ಜ್ಞಾನವಂತನಾಗುವ, ಕೀರ್ತಿಶಾಲಿಯಾಗುವ, ಭುಜಬಲಾಢ್ಯನಾಗಿರುವ, ತೇಜೋವಂತನಾದ ಪುತ್ರನನ್ನೇ ಕರುಣಿಸೆಂದೂ, ಪುತ್ರನು ಜನಿಸಿದರೆ ನಿನ್ನ ನಾಮಾಂಕಿತವನ್ನೇ ಇಡುತ್ತೇನೆಂದು. ಅನನ್ಯ ಭಕ್ತಿಯಿಂದ ಪ್ರಾರ್ಥಿಸುತ್ತಿದ್ದೆ. ಅದೇ ರೀತಿ ತಾ. ೨೪-೮-೧೯೪೨ರ ಬೆಳಗಿನ ಜಾವ ಐದು ಗಂಟೆ. ಇನ್ನೂ ಸ್ವಲ್ಪ ಹೊತ್ತಿನಲ್ಲಿ ಬಾಲಭಾಸ್ಕರನು ತನ್ನ ಎಳೆಯ ಕಿರಣಗಳನ್ನು ಪ್ರಪಂಚಕ್ಕೆಲ್ಲಾ ಪಸರಿಸಿ ಕತ್ತಲೋಡಿಸಿ ಕವಿದಿದ್ದ ಕತ್ತಲಲ್ಲಿ ತಮ್ಮ ತಮ್ಮ ನಿವಾಸಗಳಲ್ಲಿ ಜೀವಜಂತುಗಳೆಲ್ಲ ಅಡಗಿ ಎಂದಿಗೆ ರವಿರಶ್ಮಿ ಕಂಡೆವು ಎಂದು ನಿಮಿಷನಿಮಿಷಕ್ಕೂ ತಲೆ ಎತ್ತಿ, ಕಣ್ಣರಳಿಸಿ ಮೂಡಣ ದಿಕ್ಕನ್ನೆ ನೋಡುತ್ತಿರುವ ಕಾಲದಲ್ಲಿ ಪುತ್ರೋಸ್ಥವವಾಯಿತು. ಹೊರಗೆ ಪಡಸಾಲೆಯಲ್ಲಿ ಮಲಗಿದ್ದ ನನಗೆ ನೆರಮನೆಯ ನಾರಿಯರು ಸಡಗರದಿಂದಾಡಿಕೊಂಡು ಮಾತನಾಡುತ್ತಿದ್ದದ್ದು ಕೇಳಿ ತಂಗಿಯೊಬ್ಬಳನ್ನು ಕರೆದು ಏನಿದು ಗಲಭೆಯೆನ್ನಲು ಅತ್ತಿಗೆ ಹೆತ್ತಳೆಂದಳು. ಮಗುವೆಂತಾದ್ದು ಎನ್ನಲು ಗಂಡುಕೂಸು ಎಂದಳು. ಆಗಲೆ ದಯಾಮಯನು ಭಕ್ತರ ಇಷ್ಟ ಪರಿಪಾಲಿಸುವನಾದ ಭಗವಂತನನ್ನು ಆನಂದದಿಂದ ಕೂಗಿಕೊಂಡೆ. ಕಣ್ಮುಚ್ಚಿ ಅನನ್ಯ ಭಕ್ತಿಯಿಂದ ಪ್ರಾರ್ಥಿಸಿ ಕೊಂಡಾಡಿದೆನು. ಪದ್ಧತಿಯಂತೆ ಮೂರುದಿವಸಕ್ಕೆ ಯಾವ ಪುರೋಹಿತರನ್ನು ಕೇಳದೆ, ನಾನು ಹೆಸರು ಹಿಡಿದು ಹೊಟ್ಟೆಯಲ್ಲಿಯೇ ಕೂಗುತ್ತಿದ್ದಂತೆಯೆ ಭಗವಾನ್ ದಾಸನೆಂದೇ ನಾಮಕರಣ ಮಾಡಿದೆವು. ಭಗವಾನದಾಸರು ವಿಶಾಲವಾದ ಕಣ್ಣು ಹಣೆ, ಎದೆ, ನೀಳವಾದ ಕೈ ಕಾಲುಗಳಿಂದ ಕೂಡಿ ಭುಜಬಲಾಢ್ಯನೂ ತೇಜೋವಂತನಾಗಿಯೇ ಇದ್ದನು. ನಾನು ಪರಮಾತ್ಮನಲ್ಲಿಟ್ಟಿದ್ದ ನಂಬಿಕೆ ಮತ್ತು ಭಕ್ತಿಗಳೆರಡು ಇನ್ನೂ ಇಮ್ಮಡಿಯಾದವು.

ಇನ್ನು ಹಾಸನ, ಬೆಂಗಳೂರು, ಮೈಸೂರು ಮತ್ತು ಇನ್ನೂ ಕೆಲವು ಸ್ಥಳಗಳಿಗೆ ಹರಿಜನ ಸೇವಾಕಾರ್ಯಕ್ಕಾಗಿ ಹೊರಟರೆ ಹದಿನೈದು-ಇಪ್ಪತ್ತು ದಿವಸಗಳಿರುವುದೇ ಹೆಚ್ಚು. ನಮ್ಮ ಭಗವಾನ್ ದಾಸನನ್ನು ಬಿಟ್ಟು ಬಹಳ ದಿನ ಇರಲು ಆಗುತ್ತಿರಲಿಲ್ಲ. ಹೀಗೆಯೇ ಸಾಮಾನ್ಯವಾಗಿ ಊರಿನಲ್ಲೆ ಹೆಚ್ಚಾಗಿ ವಾಸಿಸುತ್ತಾ, ಮನೆಕೆಲಸ ಕಾರ್ಯಗಳನ್ನು ತಮ್ಮಂದಿರಿಂದ ಮಾಡಿಸಿಕೊಂಡು, ನಾನೂ ನೆರವಾಗಿ ಕಾಲಕಳೆಯುತ್ತಿದ್ದೆನು.

೧೬. ಭಗವಾನ್ ದಾಸನ ಬಾಲ್ಯ

ಭಗವಾನ್ ದಾಸನಿಗೆ ಐದಾರು ತಿಂಗಳು ಕಳೆದ ಕೂಡಲೆ ಬೆಳಗಿನಲ್ಲಿ, ಸಂಜೆಯಲ್ಲಿ ತೊರೆ, ಬಯಲು, ತೋಟ, ಬೋರೆಗಳಿಗೆ ಎತ್ತಿಕೊಂಡು ಗಾಳಿಸಂಚಾರಕ್ಕಾಗಿ ಹೋಗುತ್ತಿದ್ದೆನು. ಹೂವನ್ನು ತೋರಿಸುವುದು, ಹಕ್ಕಿಗಳನ್ನು ತೋರಿಸುವುದು, ಹಣ್ಣುಗಳನ್ನು ಕೊಡುವುದು ಹೀಗೆ ಮಾಡುತ್ತಿದ್ದೆನು. ಇನ್ನು ಪ್ರಪಂಚ ಜ್ಞಾನೋದಯವಾಯಿತು ಇಂದು ಯಾವ ಪ್ರಾಣಿಯನ್ನೇ ನೋಡಲಿ…