ಕಲಿಯುಗ ಮನು-ಡಾ.ಅಂಬೇಡ್ಕರ್

ಸಾರುವವ : ಅತ್ತ ಪೋಗಿ ಅತ್ತತ್ತರಾಗಿ ಹತ್ತಿರಬರಬ್ಯಾಡಿರತ್ತಸಾಗಿ ಅತತ್ತ ಪೋಗಿ||ಪ|| ಉತ್ತಮನು ನಾನಲ್ಲ ಅತ್ತಪೋಗಿ ಅತ್ತತ್ತಸಾಗಿ ಮುಟ್ಟಬಾರದವನಾ ಅತ್ತ ಪೋಗಿ ಅತ್ತತ್ತಸಾಗಿ ಮಂದ ಭಾಗ್ಯನಿಂದೆಜಾತಿ ನಾನು ಭಾರತಿಯಳ್ಯಾರೊ ಅಂತ್ಯಜಂಗೀಚಿಂತೆಬಾಳು ಬೇಡ ಚಿಂತೆಬಾಳು ಜೀವ ಅಂತ್ಯನಾಗುವತನಕ ಇಂತಾಗೋಳು ಭೋಳನ್ನದಿರು ಒಳ್ಳೇನೊ ಕೆಟ್ಟೋನೊ ಮುಂದಿದೆ. ದೂರದೂರ ಇನ್ನಾದರೂ ನಾರಾಯಣ ನಾರಾಯಣ.

ಪಾರ್ವತಮ್ಮ : ಅಚ್ಯಮ್ಮನೋರೆ ಬೇಗ ಬೇಗ ಬನ್ನಿ ಆ ಹಾಳು ಹರಿಜನರ‍್ಯಾರಾದರೂ ಬಂದಾರು ಪುನಃ ಸ್ನಾನಕೆ ಹಿಂದಿರುಗ ಬೇಕಾದಿತು. ಅಚ್ಯಮ್ಮನೋರೆ ಆ ಹಾಳು ಹರಿಜನನೆಂದು ಹೆಸರಿಟ್ಟರ‍್ಯಾಕೆ. ಆ ಹೆಸರಿಟ್ಟವರನ್ನು ಗುಂಡಿಟ್ಟು ಕೊಲ್ಲಿ. ಆ ಹಾಲು ಹರಿಜನ ಜಾತಿಯಾವಾಗ ಹಾಳಾಗಿ ಹೋದೀತೊ ಕಾಣೆ. ತಾಳಿತಾಳಿ ಇನ್ನು ಕೆಲವು ವರ್ಷಗಳಲ್ಲೆ ಅವರೆಲ್ಲಾ ಪಾಕಿಸ್ತಾನದವರಾಗುತ್ತಾರೆ. ಇಲ್ಲದಿದ್ದಲ್ಲಿ ಈ ದೇಶವೇ ಕಮ್ಯೂನಿಸ್ಟ್ ಆಗುತ್ತಾರೆ. ಆಗ ಅವರ ಪಾಡು ಕಾಣುತ್ತೆ.

ರಾಜಯ್ಯಂಗಾರ್ರು : ರಾಮಾಜ್ಯೋಯಿಸರೆ ಈ ಹಾಳು ಚಳಿಗಾಗಿ ಈ ದಿನ ತಡವಾಗಿ ಸ್ನಾನಕ್ಕೆ ಬಂದೆನು.

ರಾಮಾ : ನಾನು ಸಹ ಬರುವುದು ಈ ದಿನ ಸ್ವಲ್ಪ ತಡವಾಯಿತು. ಸ್ವಲ್ಪ ಮುಂಜಾನೆ ಬಂದಿದ್ದರೆ ಎಲ್ಲಾ ಮುಗಿಸಿಕೊಂಡು ಮನೆ ಸೇರಬಹುದಾಗಿತ್ತು.

ರಾಜ : ನಿಜನಿಜ ಯಾಕಂದ್ರೆ ಆ ಹಾಳು ಹರಿಜನ ದರ್ಶನ ಸೂರ್ಯೋದಯಕ್ಕಿಂತ ಮುಂಚೆ ಆದರೆ ಆ ಗೀತಾ ವಾಖ್ಯ ನಿಮಗೆ ಗೊತ್ತೆ ಇದೆಯಲ್ಲ.

ರಾಮಾ : ಯಾವುದು? ನಾನು ಮರೆತಿದ್ದೇನೆ. ವಯಸ್ಸು ತೊಂಭತ್ತೇಳು. ಜ್ಞಾಪಕ ಸಾಲದು.

ರಾಜ : ಅಲ್ಲಯ್ಯೊ ನಿಮ್ಮ ದಿನನಿತ್ಯದ ಪಾರಾಯಣ ಕಾಲದಲ್ಲಿ ಹೇಳುವುದೆ.

ರಾಮಾ : ಅದೆ! ‘ಪ್ರಾಥಃಕಾಲೇನ ಅಸ್ಪೃಶ್ಯದರ್ಶನ ಪಾಪಂ ಸ್ಪರ್ಶನಂ ಅಗ್ನಿ ಪ್ರವೇಶಂ’

ರಾಜ : ನಿಜ. ನಡೆಯಿರಿ ಬೇಗ ಮನೆಗೆ ಹೋಗುವ ಆ ಕೆಟ್ಟ ಪಾಪಿಗಳೇನಾದರೂ ಎದುರಾಗಿ ಬಂದರೆ ನಮ್ಮ ಗತಿ ಮುಗಿಯಿತು. ಮತ್ತೆ ನದಿಗೆ ಹೋಗಿ ಸ್ನಾನ ಮಾಡಬೇಕಾದೀತು.

ರಾಮಾ : ನಡೆಯಿರಿ ಬೇಗ, ನಡೆಯಿರಿ ಬೇಗ ಹೋಗುವ. ಆ ಹಾಳು ಹರಿಜನರು ತಿರುಗಾಡಿದ ಹೆಜ್ಜೆ ಮೇಲೆ ನಾವು ಹೆಜ್ಜೆ ಇಟ್ಟರೆ ಗತಿಯೇನು. (ನಾರಾಯಣ… ನಾರಾಯಣ… ಎಂದು ನೀರು ಚೆಲ್ಲಿ ಹೆಜ್ಜೆ ಇಟ್ಟುಕೊಂಡು ಹೋಗುವರು)

ರಾಂಜಿ ಹೆಂಡ್ತಿ : ರಾಂಭಜನೆ ಪೂಜೆ

ಹಾಡು :            ‘ರಾಂಭಗವಾನ್ ಹರಿ ಓಂ ಭಗವಾನ್ ಹರಿ
ಜೈ ಭಗವಾನ್ ಹರಿ ಕೃಷ್ಣಭಗವಾನ್ ಹರಿ’
ಸ್ವಾಮಿ ಎಲ್ಲಾ ಸೈನಿಕ ಹೆಂಡತಿಯರೆಲ್ಲ ನಾಳೆ
ಮುಂಜಾನೆ ವನವಿಹಾರಕ್ಕೆ ಹೋಗುವ ಎಂದು
ನಿಮ್ಮನ್ನು ಕೇಳಿ ಎಂದು ನನಗೆ ಹೇಳಿದ್ದಾರೆ
ನಿಮ್ಮ ಒಪ್ಪಿಗೆ ಹೇಗೆ ಎಂದರು.

ರಾಂಜಿ : ಪ್ರಿಯೆ ಅದಕ್ಕೇನು ಎಲ್ಲರು ಹೋಗಿಬನ್ನಿ (ಎಲ್ಲರೂ ಉಪಹಾರದೊಂದಿಗೆ ವನವಿಹಾರಕ್ಕೆ ಹೋಗುವರು) ಸಂಜೆ ಉಪಹಾರ ಮಾಡಲು ಎಲ್ಲರೂ ನದಿಗಿಳಿದು ಕೈಕಾಲು ತೊಳೆದುಕೊಂಡರು. ತಾನೊಂದೆಡೆ ನದಿಗಿಳಿದು ಕೈಕಾಲು ತೊಳೆದುಕೊಳ್ಳುವಾಗ ನದಿ ತಡಿಯ ಒಂದು ಮಾವಿನ ಮರದಡಿ ಮೂವರು ಸಾಧುಗಳು ಕುಳಿತಿದ್ದರು. ಆ ಪೈಕಿ ಒಬ್ಬ ಹಿರಿಯ ಸಾಧು ರಾಂಜಿ ಪತ್ನಿಯನ್ನೆ ದಿಟ್ಟಿಸಿ ನೋಡಹತ್ತಿದರು. ಆಗ ಅದನ್ನು ನೋಡಿದ ರಾಂಜಿ ಪತ್ನಿ ಆ ಸಾಧುಗಳಿದ್ದಲ್ಲಿಗೆ ಹೋಗಿ ಭಕ್ತಿಯಿಂದ ನಮಸ್ಕರಿಸಿ ಮನೆಗೆ ಬಂದು ‘ಸ್ವಾಮೀಜಿ ನಾನು ವನವಿಹಾರಕ್ಕೆ ಹೋಗಿ ಉಪಹಾರಕ್ಕಾಗಿ ಕೈಕಾಲು ತೊಳೆಯಲು ನದಿಯಲ್ಲಿಳಿದಾಗ ದಡದ ಒಂದು ಮಾವಿನ ಮರದಡಿ ಸಾಧುಗಳು ಕುಳಿತಿದ್ದರು. ಅವರು ದಿಟ್ಟಿಸಿ ನನ್ನನ್ನೆ ನೋಡುತ್ತಿರಲು ನಾನು ಹೋಗಿ ಅವರ ಪಾದಕ್ಕೆ ನಮಸ್ಕರಿಸಿ ಬಂದೆನು ಅವರು ಅಲ್ಲಿಯೆ ಇದ್ದಾರೆ. ನೀವು ಹೋಗಿ ಅವರನ್ನು ಮನೆಗೆ ಕರೆದುಕೊಂಡು ಬನ್ನಿ. ಅವರಿಗೆ ಸ್ನಾನ ಮಾಡಿಸಿ ಪಾದ ಪೂಜೆ ಮಾಡಿ ಫಲಾಹಾರ ಮಾಡಿ ಕಳುಹಿಸೋಣವೆಂದು ಹೇಳಿದರು. ಆಗ ರಾಂಜಿ ಬಂದು ನೋಡಿದಾಗ ಆ ಸಾಧುಗಳು ಅಲ್ಲಿಯೇ ಕುಳಿತಿದ್ದರು. ಚಿಕ್ಕಂದಿನಲ್ಲೆ ಬಾಲಬ್ರಾಹ್ಮಚಾರಿಯಾಗಿ ಸನ್ಯಾಸತ್ವ ಸ್ವೀಕರಿಸಿ ಹೋಗಿದ್ದ ತನ್ನ ‘ಚಿಕ್ಕಪ್ಪನೂ ಆ ಗುಂಪಿನಲ್ಲಿದ್ದ. ತಾನು ನಮಸ್ಕರಿಸಿ ‘ಚಿಕ್ಕಪ್ಪ ಮನೆಗೆ ಬನ್ನಿ’ರೆಂದು ಕರೆದರು. ‘ಅಪ್ಪ ನಾನು ಎಲ್ಲವನ್ನೂ ತ್ಯಾಗಮಾಡಿ ಬಂದವನು’ ಎಂದರು. ಹಾಗು ಬೇಸರ ಪಡುತ್ತಾನೆಂದು ಮನೆಗೆ ಹೋಗಿ ಎಲ್ಲ ಶುಶ್ರೂಷೆ ಪಡೆದು ಮತ್ತೆ ಸಾಧುಗಳ ಸಮೂಹಕ್ಕೆ ಬರಲು ಹೊರಟಾಗ, ರಾಂಜಿ ಪತ್ನಿಯನ್ನು ಕರೆದು ‘ಮಗಳೆ ಇಲ್ಲಿ ಬಾ. ಈ ಕುಂಕುಮವನ್ನು ಹಣೆಗಿಟ್ಟುಕೊ. ಈ ಹಣ್ಣನ್ನು ತಿನ್ನು’ ಎಂದು ಹೇಳಿ ‘ತಾಯಿ ನಿನ್ನ ಹೊಟ್ಟೆಯಲ್ಲಿ ಸುಂದರನೂ ಭೀಮಕಾಯನೂ, ಜಗತ್ ಪ್ರಸಿದ್ಧನೂ ಆದ ಮಗ ಹುಟ್ಟುತ್ತಾನೆಂದು’ ಆಶೀರ್ವಾದಿಸಿ ಬಂದುಬಿಟ್ಟರು. ಆ ಸಾಧುಸಂತಚಿಕ್ಕಪ್ಪ ಹೇಳಿದಂತೆ ಪತ್ನಿ ಗರ್ಭಿಣಿಯಾಗಿ ನವಮಾಸ ತುಂಬಿದ ಕೂಡ್ಲೆ ಸುಂದರನೂ, ಭೀಮಕಾಯನೂ ಆದ ಮಗನು ಆದ ೧೪ನೆ ಮಗನು ಹುಟ್ಟಿದನು. ಶ್ರೀರಾಮಭಕ್ತರಾದ ಪತಿಪತ್ನಿಯರಿಬ್ಬರೂ ಆನಂದದಿಂದ ಭೀಮರಾವ್‌ನೆಂದೇ ನಾಮಕರಣ ಮಾಡಿದರು. ಸಕ್ಪಾಲ್ ರಾಂಜಿ ಮತ್ತು ಭೀಮಾಬಾಯಿ ಇಬ್ಬರೂ ಸುಂದರ, ಮುದ್ದು ಭೀಮನೊಡನೆ ಆನಂದದಿಂದ ಬಾಲಲೀಲೆಯನ್ನು ನೋಡಿಕೊಂಡು ಕಾಲಕಳೆಯುತ್ತಿದ್ದರು. ಐದು ವರ್ಷಗಳು ಕಳೆದ ನಂತರ ಮಗುವನ್ನು ಶಾಲೆಗೆ ಕಳುಹಿಸಿದರು. ಸಕ್ಪಾಲ್ ಸೈನ್ಯದಿಂದ ನಿವೃತ್ತನಾದ. ಅಷ್ಟರಲ್ಲಿ ಇವರಿಗೆ ಒಂದು ದುರಂತ ಒದಗಿತು. ಭೀಮಾಬಾಯಿ ತೀರಿಕೊಂಡಳು. ಭೀಮರಾವ್‌ಜಿಯ ಲಾಲನೆ ಪಾಲನೆಗಳೆಲ್ಲ ಸೋದರತ್ತೆಯ ಮೇಲೆಯೆ ಬಿದ್ದಿತು.(ಮೀರಾಬಾಯಿ)

ಉಪಾಧ್ಯಾಯ ರಾಮ್‌ಜಿ ನುರಿತ ಅನುಭವಶಾಲಿ. ಆತನೆ ಈ ಮಕ್ಕಳ ವ್ಯಾಸಂಗದಲ್ಲಿ ಹೆಚ್ಚು ಆಸಕ್ತಿ ವಹಿಸಿದ. ಮತ್ತು ತನ್ನ ಕುಟುಂಬದವರಿಗೆ ರಾಮಾಯಣ, ಮಹಾಭಾರತ ಕಥೆಗಳನ್ನು ಹೇಳುವುದು, ಬೆಳಿಗ್ಗೆ, ರಾತ್ರಿ ಭಜನೆಗೀತೆಗಳನ್ನು ಹಾಡುತ್ತಿದ್ದ.

ಭೀಮನು ಪ್ರಾಥಮಿಕ ಶಿಕ್ಷಣ ಮುಗಿಸಿ ಹೈಸ್ಕೂಲಿಗೆ ಸೇರಿದನು. ಈತನು ಇತರೆ ಹುಡುಗರೊಂದಿಗೆ ಕೂಡಿಸದೆ ಬೇರೆ ಇವನೊಬ್ಬನನ್ನೇ ಒಂದು ಕಡೆ ಕೂಡಿಸುತ್ತಿದ್ದರು. ಮಧ್ಯಾಹ್ನ ಬಿಡುವಿನ ವೇಳೆಯಲ್ಲಿ ಎಲ್ಲಾ ಹುಡುಗರು ಆಟವಾಡಲು ಹೊರಗಡೆ ಓಡಿದರು. ಭೀಮನಿಗೆ ಬಾಯಾರಿ ನೀರಿನ ಲೋಟ ತೆಗೆದುಕೊಳ್ಳಲು ಹೋದ. ಅಲ್ಲಿದ್ದ ಒಬ್ಬ ‘ಏ! ಅದನ್ನು ಮುಟ್ಟಬೇಡ’ ಎಂದು ಗದರಿಸಿದನು. ಆಗ ತುಂಬಾ ಬಾಯಾರಿಕೆಯಿಂದ ನೊಂದಿದ್ದನು. ಆಗ ಅಲ್ಲಿದ್ದವನು ‘ಆ ಲೋಟವನ್ನು ನೀನು ಮುಟ್ಟಬೇಡ ಬೊಗಸೆಯೊಡ್ಡು, ನಾನು ನೀರು ಹೊಯ್ಯುತ್ತೇನೆ. ನೀನು ಕುಡಿಯೆಂದು ಹೇಳಲು ಭೀಮನು ನೋವಾದ ಮನಸ್ಸಿಂದ ಬೊಗಸೆ ನೀರು ಕುಡಿದನು.

ಕೋರಗಾಂನಲ್ಲಿ ಖಜಾಂಚಿಯಾಗಿದ್ದ ತಂದೆಯನ್ನು ನೋಡಲು ಭೀಮರಾವ್ ಮತ್ತು ಅವನ ಅಣ್ಣ ಹೊರಟರು. ಅವರು ಮಸೂರು ರೈಲು ನಿಲ್ದಾಣದಲ್ಲಿ ಇಳಿದು ತಂದೆಯನ್ನು ಕಾಯತೊಡಗಿದರು. ಆದರೆ ತಂದೆ ಬಾರಲಿಲ್ಲವಾದ್ದರಿಂದ ತಂದೆ ಯಾಕೆ ಬಾರಲಿಲ್ಲವೊ ಕಾಣೆವೆಂದು ನಿರಾಸೆಯಾದರು. ಬಹಳ ಹೊತ್ತು ಕಾಯ್ದ ಬಳಿಕ ಎತ್ತಿನ ಗಾಡಿಯನ್ನು ಸ್ಟೇಷನ್ ಮಾಸ್ಟರ್ ಸಹಾಯದಿಂದ ಗೊತ್ತುಮಾಡಿದರು.

ಎತ್ತಿನಗಾಡಿಯನ್ನು ಹತ್ತಿಕುಳಿತುಕೊಂಡು ಸ್ವಲ್ಪ ದೂರ ಪ್ರಮಾಣ ಬೆಳೆಸಿದ ಮೇಲೆ ಗಾಡಿಯವನು ‘ನೀವು ಯಾರ ಮಕ್ಕಳು, ಎಲ್ಲಿಗೆ ಹೋಗುತ್ತೀರಿ’ ಎಂದು ಕೇಳಿದನು. ‘ನಾವು ರಾಂಜಿ ಸತ್ಪಾಲ್ ಮಕ್ಕಳು. ಅವರನ್ನು ನೋಡಲು ಹೋಗುತ್ತೇವೆ’ ಎಂದರು. ‘ಓಹೊ ನೀವು ರಾಂಜಿ ಸತ್ಪಾಲ್ ಮಕ್ಕಳೊ. ಹಾಗಾದರೆ ನೀವು ಅಸ್ಪೃಶ್ಯರು. ನೀವು ಗಾಡಿಯಿಂದ ಕೆಳಕ್ಕಿಳಿಯರಿ’ ಎಂದನು ಗಾಡಿಯವನು. ‘ಅಪ್ಪಾ ನಮ್ಮನ್ನು ಹೊರದೂಡಬೇಡಿ ದಯತೊರಿಸಿ ಕೋರೆಗಾಂಗೆ ದಾರಿ ತೋರಿಸಿಕೊಡಿ. ಎರಡರಷ್ಟು ಬಾಡಿಗೆ ಕೊಡುತ್ತೇವೆ’ ಎಂದರು. ‘ಎಲೈ ಮಕ್ಕಳೆ ನಿಮ್ಮಿಂದ ನಾನು ಮೈಲಿಗೆಯಾದೆ. ಅಲ್ಲದೆ ನನ್ನ ಅಗಡಿ ಮತ್ತು ಎತ್ತುಗಳು ಹೊಲೆಯಾಗಿ ಬಿಟ್ಟವು’ ‘ನಾವು ಸಹ ಶುಭ್ರವಾದ ಬಟ್ಟೆಗಳನ್ನು ತೊಟ್ಟಿದ್ದೇವೆ. ನಾವು ಮುಟ್ಟಿದ ಮಾತ್ರಕ್ಕೆ ಗಾಡಿ, ಎತ್ತುಗಳು ಹೊಲೆಯಾಗುತ್ತವೆಯೇ’ ಎಂದರು. ಗಾಡಿಯವನ ಮೈಲಿಗೆ ಭೀತಿ, ಹಣದ ಆಸೆಯಿಂದ ತಣ್ಣಗಾಯಿತು. ಪ್ರಯಾಣದ ಉದ್ದಕ್ಕೂ ಭೀಮ ನಡೆದ ಘಟನೆಯ ಬಗ್ಗೆಯೇ ಚಿಂತಿಸಿದ. ಗಾಡಿಯವನು ‘ನೀವೆ ಗಾಡಿ ಹೊಡೆಯಿರಿ. ನಾನು ಹಿಂದ ಬರುತ್ತೇನೆ. ಗಾಡಿ, ಎತ್ತುಗಳನ್ನು ಆಮೇಲೆ ತೊಳೆದರಾಯಿತು’ ಎಂದನು. ಭೀಮ, ‘ನಾವು ಮನಷ್ಯರೆ ಆದರೂ ನಾವು ಮುಟ್ಟಿದರೆ ಪ್ರಾಣಿಗಳಿಗೂ, ನಿರ್ಜೀವ ಗಾಡಿಗೂ ಮೈಲಿಗೆಯೆ? ಏಕೊ, ಹೇಗೊ’ ಎಂದು ಯೋಚಿಸಿದನು. ಭೀಮನು ಸಾತಾರಕ್ಕೆ ಹಿಂದಿರುಗಿದ ಕೆಲವು ದಿನಗಳ ಮೇಲೆ ಅವನು ಶಾಲೆಗೆ ಹೋಗುವಾಗ ಅಂತದೆ ಒಂದು ಘಟನೆ ನಡೆಯಿತು.

‘ನನ್ನ ಗಂಟಲು ಒಣಗುತ್ತಿದೆ. ಆ ಬಾವಿಯಿಂದ ನೀರು ಕುಡಿಯುತ್ತೇನೆ’ ಇದನ್ನು ನೋಡಿ ಅಲ್ಲೊಬ್ಬ ಬೇರೆ ಜಾತಿಯವನು ಈ ಅಸ್ಪೃಸ್ಯ ಆ ಬಾವಿಯಲ್ಲಿ ನೀರು ಕುಡಿದು ನೀರನ್ನು ಅಪವಿತ್ರ ಮಾಡಿದನೆಂದು ಹೇಳಲು. ತಕ್ಷಣವೆ ಬೇರೆಯವರು ಬಂದು ‘ಎಲವೊ ಹುಳುವೆ ನಮಗೆ ಎದುರು ಮಾತನಾಡುವೆಯ’ ಎಂದು ಭೀಮನನ್ನು ಬೈದು, ನಿಂದಿಸಿ ಹೊಡೆಯಲು ಬಂದರು. ಪುಟ್ಟಭೀಮ ಇವರನ್ನು ನೋಡಿ ಭಯದಿಂದ ಗೊಳೊ ಎಂದು ಅತ್ತನು.

ಭೀಮನು ಬೆಳೆದಂತೆಲ್ಲ ಇಂತ ಅಪಮಾನಗಳನ್ನು ಆಗಿಂದಾಗ ಅನುಭವಿಸಬೇಕಾಯಿತು. ಮೀರಾಬಾಯಿ (ಭೀಮನ ಅತ್ತೆ) ‘ಮಗು ಭೀಮ ನಿನ್ನ ತಲೆಗೂದಲು ತುಂಬಾ ಬೆಳೆದಿದೆ. ನಾನೆ ಕತ್ತರಿಸುತ್ತೇನೆ’ ಎಂದಳು. ‘ಅಮ್ಮ ಅದೇಕೆ ನೀನು ನನ್ನ ತಲೆಗೂದಲನ್ನು ಕತ್ತರಿಸುವೆ. ಇತರೆ ಹುಡುಗರಂತೆ ಕ್ಷೌರಿಕನಲ್ಲಿಗೆ ಹೋಗಬಾರದು?’ ಎಂದನು. ಆಗ ಅತ್ತೆ ಮೀರಾಬಾಯಿ ಅತ್ತುಕೊಂಡು ಹೇಳಿದಳು. ‘ಮಗು ಭೀಮ ನಾವು ಮಹಾರರು. ನಾವು ಅಸ್ಪೃಸ್ಯರು. ಆದ್ದರಿಂದ ಕ್ಷೌರಿಕನು ನಿನ್ನನ್ನು ಕ್ಷೌರ ಮಾಡುವುದಿಲ್ಲ ಮಗು’ ಎಂದಳು. ಅದಕ್ಕೆ ಭೀಮನು ‘ಅದು ಹೇಗೆ ಅತ್ತೆ’ ಎಂದು ಕೇಳಿದನು. ಅದಕ್ಕೆ ಅತ್ತೆ ಮೀರಳು. ‘ಎಂದಿನಿಂದಲೂ ಹೀಗೆಯೆ ನಡೆದುಬಂದಿದೆ’ ಎಂದಳು. ಅತ್ತೆಯ ಉತ್ತರದಿಂದ ಭೀಮನಿಗೆ ತೃಪ್ತಿಯಾಗಲಿಲ್ಲ.

ಭೀಮ ಪ್ರೀತಿಯನ್ನು ಬ್ರಾಹ್ಮಣಗುರುಗಳಾದ ಅಂಬೇಡ್ಕರ್ ಅವರಲ್ಲಿ ಮಾತ್ರ ಕಂಡನು. ‘ಭೀಮ ಬೇಷ್ ನಿನ್ನ ಲೆಕ್ಕಗಳೆಲ್ಲವು ಸರಿಯಾಗಿವೆ’ ಎಂದರು. ನನ್ನನ್ನು ಹತ್ತಿರ ಬಾ ಎಂದು ಕರೆಯುವವರು ಇವರೊಬ್ಬರೆ. ಗುರುಗಳು ಊಟದ ವೇಳೆಯಲ್ಲಿ ‘ಭೀಮ ಇಲ್ಲಿ ಬಾ ಊಟ ಮಾಡೋಣ. ಯಾಕೆ ನನ್ನ ಸಹವಾಸ ನಿನಗೆ ಹಿಡಿಸದೆ. ಬಾ ಊಟ ಮಾಡೋಣ’ ಎಂದು ಕರೆದರು. ಒಮ್ಮೆ ಅವರಿಬ್ಬರೂ ಊಟ ಮಾಡುತ್ತಿದ್ದಾಗ ‘ಭೀಮ ನಿನ್ನ ಅಂಬೇವಾಡ್ಕರ್ ಹೆಸರನ್ನು ‘ಅಂಬೇಡ್ಕರ್ ’ ಎಂದು ಬದಲಾಯಿಸಬಹುದೆ’ ಆಗಲಿ ನಿಮ್ಮ ಇಷ್ಟದಂತೆಯೆ ಆಗಲಿ ಎಂದನು ಭೀಮ.

ಒಂದು ದಿನ ರಾತ್ರಿ ಮೂರು ಮಕ್ಕಳನ್ನು ಕರೆದು ಮೀರಾಬಾಯಿ ಮಕ್ಕಳೆ ನಿಮಗೊಬ್ಬಳು ಹೊಸದಾಗಿ ಇನ್ನೊಬ್ಬಳು ತಾಯಿ ಬರುತಾಳೆ! ನಿಮ್ಮ ತಂದೆ ಮರುಮದುವೆ ಮಾಡಿಕೊಳ್ಳುತ್ತಾರೆ’ ಎಂದಳು. ‘ಆಕೆ… ನನ್ನ ತಾಯಿಯ ಆಭರಣ ಧರಿಸಿ! ಇಲ್ಲ ಅದು ಸಾಧ್ಯವಿಲ್ಲ. ನಾನಿಲ್ಲಿ ಇರಲಾರೆ’ ಎಂದನು ಭೀಮ. ‘ನಾನು ಹಾಗಾದರೆ ಮುಂಬಾಯಿಗೆ ಹೋಗಿ ಯಾವುದಾದರು ಒಂದು ಕೆಲ್ಸಕ್ಕೆ ಸೇರಿಕೊಳ್ಳುತ್ತೇನೆ. ಆದರೆ ಪ್ರಯಾಣಕ್ಕೆ ಹಣವೆಲ್ಲಿಂದ ತರಲಿ. ನಮ್ಮತ್ತೆಯ ಸಂಚಿಯಿಂದ ಕದ್ದರಾಯಿತು’ ಎಂದನು. ಭೀಮನು ಮೂರು ರಾತ್ರಿ ಹಣ ಕದಿಯಲು ಪ್ರಯತ್ನಿಸಿದ. ನಂತರ ನಾಲ್ಕನೆಯ ರಾತ್ರಿ ಕದ್ದೆಬಿಟ್ಟನು. ಓಹೋ ಕೊನೆಗೂ ಕದ್ದೆಬಿಟ್ಟೆನು. ಆತುರದಿಂದ ಸಂಚಿಯನ್ನು ತೆಗೆದನು. ಒಂದೇ ಒಂದು ಆಣೆ ಮಾತ್ರ ಅದರಲ್ಲಿದ್ದಿತು. ಇದನ್ನು ನನ್ನ ಬಡ ಅತ್ತೆಯಿಂದ ಕದಿಯುತ್ತಿದ್ದೆನಲ್ಲಾ!! ಎಂದು ನೋಡಿ ಅಲ್ಲಿಯೆ ಚೀಲದಲ್ಲಿರಿಸಿಬಿಟ್ಟನು. ಭೀಮನು ಮತ್ತೆ ಹೋಗಿ ಹಾಸಿಗೆಯಲ್ಲಿ ಮಲಗಿದನು. ‘ದೇವರೆ ನನ್ನ ತಪ್ಪನ್ನು ಕ್ಷಮಿಸು. ಮುಂದೆಂದೂ ನಾನು ಹೀಗೆ ಮಾಡುವುದಿಲ್ಲ. ಚೆನ್ನಾಗಿ ಓದಿ ಮುಂದೆ ಅತ್ತೆಯನ್ನು ಸಂತೋಷದಿಂದ ಇರಿಸುತ್ತೇನೆ?

ಭೀಮ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಉಪಾಧ್ಯಾಯರ ಮೆಚ್ಚುಗೆಗೆ ಪಾತ್ರನಾದ. ಉಪಾಧ್ಯಾಯರು ‘ರಾಂಜಿ ನಿನ್ನ ಮಗ ತುಂಬಾ ಬುದ್ದಿವಂತ. ಇವನು ಇನ್ನೂ ಉತ್ತಮ ವಿದ್ಯಾಭ್ಯಾಸಕ್ಕೆ ತಕ್ಕವ’ ರಾಂಜಿ ಮಕ್ಕಳೊಂದಿಗೆ ಬೊಂಬಾಯಿ ಸೇರಿದ. ಪವೇಲಿನ ಗಿರಣಿಯಲ್ಲಿ ಕೆಲ್ಸಕ್ಕೆ ಸೇರಿದ. ವಠಾರದ ಕೊಠಡಿಯಲ್ಲಿ ಅಡಿಗೆಗೂ, ಮಲಗು, ಓದಲು ಎಲ್ಲಕ್ಕೂ ಆ ಚಿಕ್ಕ ಕೊಠಡಿಯೆ ಗತಿಯಾಯಿತು.

ಸತ್ಯಪಾಲ್ : ಭೀಮ ಈ ಗದ್ದಲದಲ್ಲಿ ಈಗ ಮಲಗು ಬಾ. ಓದಲಾಗದು. ಬೆಳಗಿನ ಜಾವ ಎರಡು ಗಂಟೆಯಲ್ಲಿ ಎಬ್ಬಿಸುತ್ತೇನೆ.

ಭೀಮ ಏಳು. ಈಗ ಓದಿಕೊ ಎಲ್ಲರೂ ಮಲಗಿದಾಗ ಭೀಮ ಓದುತ್ತಿದ್ದ ಮುಂಬಯಿಯಲ್ಲಿ ಒಂದು ದಿನ ಉಪಾಧ್ಯಾಯರು ‘ಭೀಂ! ಹಲಗೆಯ ಮೇಲೆ ಲೆಕ್ಕ ಮಾಡು ಬಾ? ಎಂದು ಕರೆದರು. ಅ ಬೃಹತ್ ನಗರದಲ್ಲೂ ಜಾತೀಯತೆ ಇಲ್ಲದಿರಲಿಲ್ಲ. ಹರಿಜನರ ಭೋಜನ ಕೂಟದಲ್ಲಿ ಸಾರನ್ನು ಬಡಿಸಿ ತುಪ್ಪ ಬಡಿಸಿದುದನ್ನು ಸವರ್ಣೀಯರು ನೋಡಿ, ಹರಿಜನರಿಗೂ ತುಪ್ಪವೇ ಎಂದು ಕಾಲಿನಿಂದ ತುಳಿದು ಹಾಕಿದ್ದು; ಹರಿಜನ ಹೆಣ್ಣುಮಕ್ಕಳು ತಾಮ್ರ, ಹಿತ್ತಾಳೆ ಪಾತ್ರೆ ಹೊತ್ತು ನೀರು ತರಲು ನದಿಗೆ ಹೋಗುವುದನ್ನು ಸವರ್ಣೀಯ ಗಂಡಸರು ನೋಡಿ ಸಹಿಸದೆ ಹರಿಜನರಿಗೂ ಹಿತ್ತಾಳೆ ತಾಮ್ರದ ಪಾತ್ರೆಗಳೆ? ಅವರಿಗೆ ಮಣ್ಣಿನ ಮಡಿಕೆ ಎಂದು ಒಡದು ಹಾಕಿದರು.

‘ಗುರುಗಳೆ ಅವನನ್ನು ತಡೆಯಿರಿ. ಓಹೋ ನಮ್ಮಗತಿ ಕೆಟ್ಟಿತು. ನಮ್ಮ ಊಟದ ಡಬ್ಬಿಗಳು ಹಲಗೆಯ ಹಿಂದಿವೆ ಅವನ್ನು ಮೈಲಿಗೆ ಮಾಡುತ್ತಾನೆ.’

ಇನ್ನೊಂದು ಸಾರಿ ‘ಗುರುಗಳೆ ನನಗೆ ಸಂಸ್ಕೃತ ಕಲಿಯಲು ತುಂಬಾ ಇಷ್ಟ’ ಎಂದನು ಭೀಮ. ‘ಆಗದು ಸಂಸ್ಕೃತ ಅಸ್ಪೃಸ್ಯರಿಗಲ್ಲ. ಬೇಕಾದರೆ ಪಾರಸಿಕಲಿಯಬಹುದು.’

ಈ ಎಲ್ಲಾ ಅಪಮಾನಗಳ ಮಧ್ಯೆಯೂ ಭೀಮ ತುಂಬಾ ಗಂಭೀರವಾಗಿ ಅಭ್ಯಸಿಸಿದ. ಓದಲು ಚರ್ಮಿ ಉದ್ಯಾನವನಕ್ಕೆ ಹೋಗುತ್ತಿದ್ದ. ಅಲ್ಲಿಗೆ ವಿದ್ವಾಂಸರು, ಸಮಾಜ ಸುಧಾರಕರು ಆದ ಕೆಲುಸ್ಕರ್ ಆಗಾಗ ಅಲ್ಲಿಗೆ ಬರುತ್ತಿದ್ದರು. ಗುರುಗಳು ‘ಭೀಮರಾವ್ ನಿನ್ನ ಓದು ಹೇಗೆ ಸಾಗಿದೆ’ ಎಂದು ಕೇಳಲು. ‘ಕಷ್ಟುಪಟ್ಟು ಓದುತ್ತಿದ್ದೇನೆ ಸ್ವಾಮಿ’ ಎಂದನು. ಭೀಮ ತನ್ನ ಜನಾಂಗದಲ್ಲಿ ಮೆಟ್ರಿಕ್ ಮಾಡಿರುವರಲ್ಲಿ ಮೊದಲಿಗ. ಮಹಾರರು ಅವನನ್ನು ಗೌರವಿಸಲು ಒಂದು ಸಭೆ ಏರ್ಪಾಟು ಮಾಡಿದರು. ಅಂದು ಕೆಲುಸ್ಕರ್ ಅಭಿನಂದಿಸಲು ಬಂದು ಕಾಯ್ದಿದ್ದರು. ಖ್ಯಾತ ಸಮಾಜ ಸುಧಾರಕ ಎಸ್.ಕೆ.ಬೋಲೆ ಅಧ್ಯಕ್ಷತೆ ವಹಿಸಿದ್ದರು. ‘ಇಗೊ ನನ್ನ ಕೃತಿ ಬುದ್ಧನ ಜೀವನ ಚರಿತ್ರೆ. ಇದು ನನ್ನ ಹಾರೈಕೆಯ ಗುರುತಾಗಿರಲಿ’ ಸಬೆಯು ಮುಗಿದ ನಂತರ ಕೆಲೂಸ್ಕರ್ ಅವರು ರಾಂಜಿ ಕುರಿತು ‘ನಿನ್ನ ಮಗನ ಮುಂದಿನ ಭವಿಷ್ಯಕ್ಕೆ ಏನು ಮಾಡುತ್ತೀರಿ. ನಿನ್ನ ಮಗ ತುಂಬಾ ಜಾಣ.’ ‘ಕೆಲುಸ್ಕರ್ ಸಾಹೇಬರೆ ಮೊದಲು ಮಗನಿಗೆ ಮದುವೆ ಮಾಡಬೇಕೆಂದಿದ್ದೇನೆ’. ಆ ಕಾಲದಲ್ಲಿ ಬಾಲ್ಯ ವಿವಾಹ ಬಹಳ ಹೆಚ್ಚು. ‘ಆದರೆ ಅವನ ಮುಂದಿನ ಓದು’ ‘ಎಷ್ಟೇ ಖರ್ಚಾಗಲಿ ಅವನನ್ನು ಮುಂದೆ ಓದಿಸುತ್ತೇನೆ. ರಮಾಬಾಯಿಯೊಡನೆ ಭೀಮನ ಮದುವೆಯಾಯಿತು. ರಾಂಜಿ ತನ್ನ ಹಣದ ಬಿಕ್ಕಟ್ಟಿನ ಕಾಲದಲ್ಲೂ ಮಗನ ಓದಿಗೆ ತೊಂದರೆ ಮಾಡಲಿಲ್ಲ. ಆದರೆ ಭೀಮ ಇಂಟರ್ ಆಕ್ಟ್ ಪರೀಕ್ಷೆ ಪಾಸ್ ಮಾಡಿದಾಗ ‘ಅಪ್ಪಾ ನಾನು ಕಾಲೇಜಿನ ಫಿಸ್ ತುಂಬಬೇಕು’ ಅಪ್ಪಾ- ‘ನನ್ನಲ್ಲಿ ಈಗ ಹಣವಿಲ್ಲ.’ ಅಪ್ಪಾ ಹಾಗಾದರೆ ಏನು ಮಾಡಲಿ ಕಾಲೇಜಿನವರು ಎರಡು ಸಾರಿ ಎಚ್ಚರಿಸಿದ್ದಾರೆ. ಫಿಸ್ ಕಟ್ಟದೆ ಮುಂದೆ ಹೋಗುವಂತಿಲ್ಲ. ರಾಂಜಿ ಆ ನಿರಾಶ ಸ್ಥಿತಿಯಲ್ಲಿ ಕೆಲುಸ್ಕರರನ್ನು ನೆನೆದು ಅವರ ಬಳಿ ಹೋದರು. ಅವರು ಕೂಡಲೇ ಅವನಿಗೆ ತಕ್ಕ ವ್ಯವಸ್ಥೆ ಮಾಡಿದರು. ‘ರಾಂಜಿ ಚಿಂತೆಬೇಡ. ಭೀಮನನ್ನು ಬರೋಡ ಮಹಾರಾಜರವರ ಹತ್ತಿರ ಕರೆದುಕೊಂಡು ಹೋಗುತ್ತೇನೆ. ಅವರು ನೆರವು ನೀಡುತ್ತಾರೆ. (೧೯೧೨ರಲ್ಲಿ ಬಿ.ಎ. ಪದವಿ ಪಡೆದ) ಆ ದಿನವೇ! ಅಪ್ಪಾ ಬರೋಡ ಮಹಾರಾಜ ಗಾಯಕವಾಡರು ನನಗೆ ತಿಂಗಳಿಗೆ ೨೫ ರೂ. ವಿದ್ಯಾರ್ಥಿವೇತನ ನೀಡಿದ್ದಾರೆ. ನೀವು ಯೋಚನೆ ಮಾಡಬೇಡಿ. ಅಪ್ಪ – ‘ಮಗನೆ ತುಂಬಾ ಸಂತೋಷ ಕೆಲುಸ್ಕರ್ ರನ್ನು ನಾನೀಗ ಮನಸಾರೆ ಅಭಿನಂಧಿಸುತ್ತೇನೆ’.

ಭೀಮನು ಬರೋಡೆಗೆ ಹೋದ ಹದಿನೈದು ದಿನಗಳಲ್ಲೇ ದುಃಖ ಸಮಾಚಾರ ತಲುಪಿತು. ‘ಬಾ. ನನಗೆ ತುಂಬಾ ಖಾಯಿಲೆ ನೀನು ಬೇಗ ಹೊರಟು ಬಾ.’ ಭೀಮ ಮುಂಬೈಗೆ ಮರಳಿದ ೧೯೧೩ ಫೆಬ್ರವರಿ ೨ ರಂದು ತಂದೆ ಮರಣವಾದರು. ಆಗ ಭೀಮನು ‘ಅಪ್ಪಾ ನಾವು ಇನ್ನು ಅನಾತರು. ನಮಗೆ ಮುಂದೆ ದಾರಿ ತೋರುವವರಾರು’ ರಾಂಜಿ ತನ್ನ ಮಗನ ಭವಿಷ್ಯಕ್ಕೆ ಭದ್ರವಾದ ಬುನಾದಿ ಹಾಕಿದ್ದರು.

ಕೆಲುಸ್ಕರ್ ಬಳಿ ಭೀಮರಾವ್ ಮತ್ತೆ ಹೋದ – ‘ಬರೋಡ ಮಹಾರಾಜರನ್ನು ಕಾಣು ಪುನಃ ಸಂಸ್ಥಾನದ ಕೆಲವು ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳುಹಿಸುತ್ತಾರೆ’ ಎಂದರು. ೧೯೧೩ನೆ ಜುಲೈನಲ್ಲಿ ಭೀಮರಾವ್ ನ್ಯೂಯಾರ್ಕ್ ತಲುಪಿದ. ಎಂತಾ ಮುಕ್ತ ವಾತಾವರಣ. ಯಾವ ಸಾಮಾಜಿಕ ಬಂಧನವು ಇಲ್ಲ. ಅಮೇರಿಕಾದಲ್ಲಿ ಭೀಮರಾವ್ ಸ್ವಾತಂತ್ರ ಮತ್ತು ಸಮಾನತೆಗಳ ಹೊಸ ಅನುಭವ ಪಡೆದ. ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ವ್ಯಾಸಂಗ ಮಾಡುತ್ತಿದ್ದ. ೧೯೧೫ರಲ್ಲಿ ಎಂ.ಎ.ಪದವಿ ಪಡೆದ. ಮರು ವರ್ಷ (೧೯೧೬) ಪಿಎಚ್.ಡಿ.ಪಡೆದ. ಅಮೇರಿಕಾದಲ್ಲಿ ಯೋಜಿತ ಕಾಲಕ್ಕೆ ಮುನ್ನ ವಿದ್ಯಾಭ್ಯಾಸ ಮುಗಿಸಿ ಲಂಡನ್ ಗೆ ಹೊರಟ. ನ್ಯಾಯಶಾಸ್ತ್ರ, ಬಾರ್ ಅಟ್ ಲಾ, ಬ್ಯಾರಿಸ್ಟರ್ ಪದವಿ ಪಡೆದು ಅರ್ಥಶಾಸ್ತ್ರವನ್ನು ಮತ್ತಷ್ಟು ಮುಂದುವರಿಸಿದ. ಅಂಬೇಡ್ಕರ್ ರಿಗೆ ಬರೋಡ ದಿವಾನರಿಂದ ಸ್ವದೇಶಕ್ಕೆ ಹಿಂದಿರುಗುವ ಕರೆಬಂತು. ಬರೋಡ ರೈಲ್ವೆ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಯಾವ ಸರಕಾರಿ ಅಧಿಕಾರಿಗಳು ಬಂದಿರಲಿಲ್ಲ.

ಬರೋಡ (Baroda)

ಅಂಬೇಡ್ಕರ್ ಅವರು ಇಳಿದುಕೊಳ್ಳಲು ವಸತಿಗಾಗಿ ಹೋಟಲಿಂದ ಹೋಟೆಲಿಗೆ ಅಲೆದರು. ಆದರೆ ಎಲ್ಲಾ ಕಡೆಯೂ ನಿರಾಕರಣೆಯೆ. ‘ನೀವು ಹೊಸ ಅಧಿಕಾರಿಗಳಲ್ಲವೆ? ಕ್ಷಮಿಸಿ. ಅಸ್ಪೃಶ್ಯರಿಗೆ ನಮ್ಮಲ್ಲಿ ಸ್ಥಳವಿಲ್ಲ.’ ಕಡೆಗೆ ತಮ್ಮ ಜಾತಿಯನ್ನು ಮರೆಸಿ ಪಾರಶಿ ಎಂದು ಹೇಳಿ ಪಾರಿಸಿ ವಸತಿಯಲ್ಲಿ ಅಜ್ಞಾತವಾಸ ಮಾಡಬೇಕಾಯಿತು. ಮರುದಿನ ಅವರು ಕಛೇರಿ ಪ್ರವೇಶಿಸಿದಾಗ ಜವಾನ ನೆಲಕ್ಕೆ ಹಾಸಿದ ಜಮಖಾನೆಯನ್ನು ಸುತ್ತಿದ. ಯಾಕೆಂದರೆ ಅಸ್ಪೃಶ್ಯ ಅದರ ಮೇಲೆ ತಿರುಗಾಡಿದರೆ ಅದು ಮೈಲಿಗೆಯಾದೀತೆಂದು. ಮೂಲೆಯಲ್ಲಿ ಬಾಬಾರ ಸ್ಥಳ. ಜವಾನ ಕೂಡ ಅವರ ಬಳಿ ಹೋಗದೆ ದೂರದಿಂದಲೆ ಕಾಗದ ಪತ್ರಗಳನ್ನು ಎಸೆಯುತ್ತಿದ್ದ.

ಅಂಬೇಡ್ಕರ್ ರವರ ಪರಿಚಯ ವಸತಿಯ ಪಾರಸಿಕರಿಗೆ ತಿಳಿದಾಗ ‘ಯಾರು ನೀನು?’, ‘ನಾನು ಹಿಂದು’ ‘ಇಲ್ಲ ನೀನು ಅಸ್ಪೃಶ್ಯ ತೊಲಗು.’ ‘ಹೋಗುತ್ತೇನೆ ದಯವಿಟ್ಟು ಸ್ವಲ್ಪ ಕಾಲಾವಕಾಸ ಕೊಡಿ.’ ‘ಒಂದು ಕ್ಷಣವೂ ಇಲ್ಲಿರ ಕೂಡದು. ಈಗಲೆ ಹೊರಡು’ ಅಲ್ಲಿಂದ ಹೊರಬಂದ ಬಾಬಾರಿಗೆ ಆ ನಗರದಲ್ಲಿ ಎಲ್ಲಿಯೂ ಆಸರೆ ಸಿಗಲಿಲ್ಲ. ‘ನನಗೆ ಗೌರವವಿಲ್ಲದ ಸ್ಥಳದಲ್ಲಿ ನಾನೇಕೆ ಇರಬೇಕು.’ ಅಂಬೇಡ್ಕರು ನಿರಾಶರಾಗಿ ಬರೋಡದಿಂದ ಮುಂಬಯಿಗೆ ಬಂದರು. ಅಲ್ಲಿ ಸೇರುವ ವ್ಯವಹಾರದಾರರ ಸಲಹಾ ಸಂಸ್ಥೆಯೊಂದನ್ನು ಪ್ರಾರಂಭಿಸಿದರು. ಆದರೆ, ‘ನೀವು ಅಂಬೇಡ್ಕರರ ಸಲಹೆ ಪಡೆಯುತ್ತೀರಾ? ಹೌದು. ಆತ ತುಂಬ ಪರಿಣಿತ. ಆತ ಅಸ್ಪೃಶ್ಯನೆಂದು ಗೊತ್ತಿಲ್ಲವೇ? ಅಸ್ಪೃಶ್ಯ! ಇನ್ನು ಮುಂದೆ ಆತನಲ್ಲಿಗೆ ಹೋಗಲಾರೆ.’ ಹೀಗಾಗಿ ಅಂಬೇಡ್ಕರ್ ತಮ್ಮ ಸಂಸ್ತೆಯನ್ನು ಮುಚ್ಚಿದರು.

೧೯೧೮ನೆ ನವೆಂಬರ್ ನಲ್ಲಿ ಮುಂಬಯಿನ ಸಿಡನ್ ಹ್ಯಾಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಅವರು ಕಾಲೇಜಿನಲ್ಲೇ ಉತ್ತಮ ಪ್ರಾಧ್ಯಾಪಕರಾದರು. ಹೌದು ಅವರು ಮೇಧಾವಿ ವಿದ್ವಾಂಸರು. ಅವರು ತಮಗೆ ಸಾಕಷ್ಟು ಸಂಪಾದನೆ ಇರಲು ಮಿತವ್ಯಯಿಯಾಗಿದ್ದರು. ಇದಕ್ಕಿಂತಲೂ ಹೆಚ್ಚು ಹಣ ಕೊಡಲಾರೆ. ಲಂಡನ್ನಿಗೆ ವಿದ್ಯಾಭ್ಯಾಸಕ್ಕೆ ಹೋಗಲು ನಾನು ಹಣ ಉಳಿಸಬೇಕು. ‘ಚಿಂತಿಸಬೇಡಿ ಹೇಗೋ ನಿರ್ವಹಿಸುತ್ತೇನೆ’ ಪತಿಯ ವ್ಯಾಸಂಗಕ್ಕೆ ತೊಂದರೆಯಾಗದಂತೆ ರಮಾಬಾಯಿ ನೋಡಿಕೊಳ್ಳುತ್ತಿದ್ದರು. ಪುಟ್ಟ ಯಶವಂತನಿಗೆ ಜ್ವರವೆಂದು ಅವರಿಗೆ ಹೇಳುವುದು ಬೇಡ. ಅವರು ಶಾಂತಿಯಿಂದ ಓದಿಕೊಳ್ಳಲಿ.

ಎರಡು ವರ್ಷಗಳ ನಂತರ

ರಮಾ! ನನಗೆ ಕೊಲ್ಲಾಪುರದ ಮಹಾರಾಜರ ನೆರವು ಮತ್ತು ನನ್ನ ಮಿತ್ರ ನವಲ್ ಬಾತೇನನ ಸಾಲ ದೊರೆತಿದೆ. ಈಗ ನಾನು ಲಂಡನ್ನಿಗೆ ಹೊರಡುತ್ತೇನೆ. ಬಾಬಾರು ಅರ್ಥಶಾಸ್ತ್ರದ ಅಧ್ಯಯನ ಮುಂದುವರಿಸಿ ನ್ಯಾಯಶಾಸ್ತ್ರಕ್ಕಾಗಿ ಗ್ರೇಸ್ ಇನ್ ಕಾಲೇಜ್ ಸೇರಿದರು. ಆದರೆ ಎಲ್ಲಾ ಪುಸ್ತಕಗಳನ್ನು ಕೊಳ್ಳಲು ಅವರಲ್ಲಿ ಸಾಕಷ್ಟು ಹಣವಿರಲಿಲ್ಲ. ಬೆಳಗಿನಿಂದ ಸಂಜೆತನಕ ಬ್ರಿಟಿಷ್ ಮ್ಯೂಸಿಯಂ ಗ್ರಂಥಾಲಯದಲ್ಲಿ ಓದಬೇಕು. ಹೋಟೆಲ್ ಊಟಮಾಡಲು ಹಣವಿಲ್ಲದೆ ಒಂದೆರಡು ಬ್ರೆಡ್ ಕೊಂಡು ತಂದು ಗ್ರಂಥಾಲಯದಲ್ಲಿಯೆ ತಿನ್ನುತ್ತಿದ್ದರು. ಒಂದು ದಿನ ಗ್ರಂಥಪಾಲಕರು ನಿಮ್ಮನ್ನು ನೋಡಬೇಕಂತೆ. ಗ್ರಂಥಪಾಲಕರು – ‘ಗ್ರಂಥಾಲಯದಲ್ಲಿ ಆಹಾರ ತಂದು ತಿಂದು ನಿಯಮವನ್ನು ಉಲ್ಲಂಘಿಸಿದ್ದೀರಿ ಇಲ್ಲಿಂದ ಹೊರಡಿ.’ ‘ದಯವಿಟ್ಟು ಈ ಸಾರಿ ಕ್ಷಮಿಸಿ ಮುಂದೆ ಹಾಗೆ ಮಾಡಲಾರೆ.’ ‘ನೀವು ದಿನವೂ ಬೆಳಗಿನಿಂದ ಸಂಜೆವರೆಗೂ ಓದುವುದನ್ನು ನಾನು ನೋಡಿದ್ದೇನೆ. ಊಟಕ್ಕೆ ಬಿಡುವು ಮಾಡುಕೊಳ್ಳಬಾರದೇಕೆ?’ ‘ಸ್ವಾಮಿ ಹೊರಗಿನ ಊಟದ ಖರ್ಚನ್ನು ನಾನು ನಿರ್ವಹಿಸಲಾರೆ. ಉಪಹಾರದ ಸ್ವಲ್ಪ ತಿಂಡಿ ಉಳಿಸಿ ಮಧ್ಯಾಹ್ನ ಅದನ್ನು ತಿನ್ನುತ್ತೇನೆ. ಗ್ರಂಥಪಾಲಕರು ಶಿಸ್ತು ಮತ್ತು ಶ್ರದ್ಧೆಯಿಂದ ಓದುತ್ತಿದ್ದ ಬಾಬಾರ ಬಡಸ್ಥಿತಿಯನ್ನು ತಿಳಿದು ಮನಕರಗಿತು. ‘ಹಾಗೆ ಆಗಲಿ. ಈಸಲ ಮನ್ನಿಸಿದ್ದೇನೆ. ಆದರೆ ಒಂದು ಕರಾರಿಗೆ ನೀವು ಒಪ್ಪಬೇಕು. ಇನ್ನು ಮುಂದೆ ನೀವು ನನ್ನೊಡನೆ ನನ್ನ ಕೊಠಡಿಯಲ್ಲಿಯೇ ಊಟ ಮಾಡಬೇಕು.’ ಡಾ.ಬಾಬಾ ಕೃತಜ್ಞತೆಯಿಂದ ಆ ಆಹ್ವಾನವನ್ನು ಒಪ್ಪಿಕೊಂಡರು.

೧೯೨೩ರಲ್ಲಿ ಬಾಬಾ ಬ್ಯಾರಿಸ್ಟರ್ ಮತ್ತು ಅರ್ಥಶಾಸ್ತ್ರ ವಿದ್ವಾಂಸರಾಗಿ ಭಾರತಕ್ಕೆ ಮರಳಿದರು. ಆದರೆ ‘ನನ್ನ ಪದವಿಗಳಿಂದ ಪ್ರಯೋಜನವಿಲ್ಲ. ಅಸ್ಪೃಶ್ಯತೆ ನನ್ನ ವೃತ್ತಿಗೂ ಅಡ್ಡಿ. ಮೊದಲು ನನ್ನ ಜನಗಳ ಉನ್ನತಿಗೆ ಶ್ರಮಿಸಬೇಕು ಸ್ವಲ್ಪ ಕಾಲದ ನಂತರ ಸಾರ್ವಜನಿಕ ನಿಧಿಯಿಂದ ನಡೆಯುವ ಸಂಸ್ಥೆಗಳು ಅಸ್ಪೃಶ್ಯರಿಗೆ ಪ್ರವೇಶ ನಿರಾಕರಿಸುವಂತಿಲ್ಲ ವೆಂಬ ಸರ್ಕಾರಿ ಮಸೂದೆ ಹೊರಟಿತು. ‘ಇದೆಲ್ಲ ಅಸ್ಪೃಶ್ಯ ಅಂಬೇಡ್ಕರ್ ಕೆಲಸ. ಅವನನ್ನು ನಿಂದಿಸಿ ಪ್ರಯೋಜನವೇನು? ನಮ್ಮವರೇ ಆದ ಎಸ್.ಕೆ.ಬೋಲೆ ಮಸೂದೆ ಜಾರಿಮಾಡಿದ್ದಾರಲ್ಲ?

ಅಂಬೇಡ್ಕರರು ‘ಬಹಿಷ್ಕೃತ ಹಿತಕಾರಿಣಿ ಸಭಾ’ ಎಂಬ ಸಂಘವನ್ನು ಸ್ಥಾಪಿಸಿ ಅದರ ವತಿಯಿಂದ ವಿದ್ಯಾರ್ಥಿ ಗೃಹ, ಶಾಲಾ ಮತ್ತು ಉಚಿತ ವಾಚನಾಲಯಗಳನ್ನು ತೆರೆದರು. ಒಂದು ದಿನ ‘ಮುಂಬೈ ಶಾಸನ ಸಭೆಗೆ ಸದಸ್ಯರಾಗಿ ನೇಮಕವಾದುದಕ್ಕೆ ಶುಭಾಶಯಗಳು. ನೀವು ಒಳ್ಳೆಯ ಉನ್ನತಿಗಾಗಿ ನನ್ನಿಂದಾದ ಸೇವೆಯನ್ನು ಸಲ್ಲಿಸುತ್ತೇನೆ. ೧೯೨೭ನೆ ಮಾರ್ಚ್ ೨೭ರಂದು ‘ಬಾಬಾ ಸಾಹೇಬ್’ ಎಂದು ಪ್ರಸಿದ್ಧರಾದ ಅಂಬೇಡ್ಕರರು ಮಹಾದ್ ನ ದಲಿತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ‘ಈಗ ನಾವು ಮೇಲುಕೀಳೆಂಭ ಭಾವನೆಯನ್ನು ಕಿತ್ತೆಸೆಯಬೇಕು. ಸ್ವಪ್ರಯತ್ನದಿಂದ ಮಾತ್ರ ಮತ್ತು ಆತ್ಮ ಗೌರವಗಳನ್ನು ಪಡೆಯಲು ಸಾಧ್ಯ. ಸ್ವಾತಂತ್ರ್ಯ ಕೇವಲ ಕೊಡುಗೆಯಲ್ಲ. ಅದಕ್ಕಾಗಿ ಹೋರಾಡಬೇಕು. ನಾಲ್ಕು ವರ್ಷಗಳ ಹಿಂದೆಯೇ ಮಹಮದ್ ಪುರಸಭೆ ಕೊಳದಲ್ಲಿನ ನೀರು ಎಲ್ಲರಿಗೂ ಮುಕ್ತವೆಂದು ಸಾರಿತ್ತು. ಇದುವರೆಗೆ ನಮ್ಮವರು ಕೊಳದ ನೀರನ್ನು ಮುಟ್ಟಿಲ್ಲ. ಇಂದು ಆ ಕೆಲ್ಸ ಮಾಡೋಣ.’ ಅಂಬೇಡ್ಕರ್ ತಮ್ಮವರೊಡನೆ ಚೌದರ್ ಕೊಳದ ಬಳಿ ಹೋದರು. ಕೊಳದಿಂದ ನೀರು? ಆ ಧೈರ್ಯ ಬಂದಿತೆ. ಬಾಬಾ ಸಾಹೇಬ್ ಏನು ಮಾಡುತ್ತಾರೆ ನೋಡೋಣ. ‘ಕೊಳದಿಂದ ಅಂಬೇಡ್ಕರು ಬೊಗಸೆಯಲ್ಲಿ ನೀರು ತುಂಬಿಕಂಡು ಕುಡಿದರು. ಹೇಳಿದನ್ನು ಸಾಧಿಸಿದರು. ಅಂಬೇಡ್ಕರರ ದಿಟ್ಟ ಹೆಜ್ಜೆ ಅದ್ಭುತ ಪರಿಣಾಮವನ್ನು ಬೀರಿ ಜನರಲ್ಲಿ ಧೈರ್ಯ ಮೂಡಿಸಿತು. ಸಾವಿರಾರು ಜನ ಕೊಳದ ನೀರು ಕುಡಿದದ್ದು ಚಾರಿತ್ರಿಕ ದಾಖಲೆ. ಇವರೆಲ್ಲ ಚದುರಿದ ಬಳಿಕ ಸವರ್ಣೀಯರೆ ಸಭೆ ಸೇರಿದರು. ‘ನಮ್ಮ ಕೊಳ ಅಪವಿತ್ರವಾಯಿತು. ಅವರಿಗೆ ಸರಿಯಾದ ಪಾಠ ಕಲಿಸಬೇಕು’ ಸವರ್ಣೀಯರು ಕೈಗಳಲ್ಲಿ ಕಲ್ಲುಗಳನ್ನು ಹಿಡಿದು ಸಭಾಮಂಟಪದ ಬಳಿ ಬಂದರು. ಆಹ್ವಾನಿತರಲ್ಲಿ ಕೆಲವರು ಹೊರಟು ಹೋಗಿದ್ದರು. ಇನ್ನೂ ಕೆಲವರು ಹೊರಡಲು ಅನುವಾಗುತ್ತಿದ್ದರು. ‘ಹೊಡೆಯಿರಿ, ಯಾರನ್ನೂ ಬಿಡಬೇಡಿ’ ಅಂಬೇಡ್ಕರಿಗೆ ಆ ಸುದ್ದಿ ತಿಳಿಸಿದಾಗ, ‘ಹಿಂಸೆ ಅತಿಯಾಗಿಬಿಟ್ಟಿದೆ. ನಮಗೆ ಅಪ್ಪಣೆ ಕೊಡಿ ಅವರನ್ನು ಮುಗಿಸಿಬಿಡುತ್ತೇವೆ.’ ‘ಬೇಡ ಹಿಂಸೆತಕ್ಕುದಲ್ಲ. ನಾವು ಕಾನೂನನ್ನು ಮೀರುವುದು ಬೇಡ. ಶಾಂತಿಯಿಂದ ನಡೆಸೋಣ. ‘ತಮ್ಮ ಜನರನ್ನು ನಿಯಂತ್ರಿಸುವುದಾಗಿ ಪೋಲೀಸರಿಗೆ ಮಾತುಕೊಟ್ಟು ಅಂಬೇಡ್ಕರರು ನಡೆಯಲಿದ್ದ ರಕ್ತಪಾತ ತಪ್ಪಿಸಿದರು.

ಅಂಬೇಡ್ಕರರು ತಮ್ಮ ಹೊಸ ಪತ್ರಿಕೆ ಬಹಿಷ್ಕೃತ ಭಾರತದ ಮೂಲಕ ನಾಶಿಕದ ಕಾಳಾರಾಮ ದೇವಾಲಯದ ಪ್ರವೇಶಕ್ಕೆ ತಮ್ಮ ಜನರನ್ನು ಪ್ರೇರೇಪಿಸಿದರು. ೧೯೩೦ನೆ ಮಾರ್ಚ್ ೩ ರಿಂದ ಅವರ ಅನುಯಾಯಿಗಳು ದೇವಾಲಯದ ಪ್ರವೇಶ ದ್ವಾರದ ಬಳಿ ಸತ್ಯಾಗ್ರಹ ಹೂಡಿದರು. ಸತ್ಯಾಗ್ರಹ ಒಂದು ತಿಂಗಳು ನಡೆಯಿತು. ದೇವಾಲಯದ ವಾರ್ಷಿಕ ರಥೋತ್ಸವ ದಿನ ಬಂದಾಗ ‘ಹಾಗೆ ಆಗಲಿ ಎರಡು ಕಡೆಯ ದೃಢಕಾಯರು ತೇರನ್ನು ಎಳೆಯಲಿ. ಹಾಗಾದರೆ ಸತ್ಯಾಗ್ರಹವನ್ನು ನಿಲ್ಲಿಸುತ್ತೇವೆ.’ ಆದರೆ ಸವರ್ಣೀಯರು ರಥವನ್ನು ವೇಗವಾಗಿ ನೂಕಿ ಅ ಜನರನ್ನು ಮೋಸಗೊಳಿಸಿದರು. ಅಂಬೇಡ್ಕರರ ಅನುಯಾಯಿಗಳ ಸತ್ಯಾಗ್ರಹ ಮುಂದುವರಿದು ದೇವಾಲಯ ಒಂದು ವರ್ಷ ಮುಚ್ಚಲ್ಪಟ್ಟಿತು. ‘ನಮಗೆ ಅವರು ಕಲ್ಲು ತೂರುತ್ತಿದ್ದಾರೆ.’ ‘ತೂರಲಿ ಬಿಡಿ. ನಾವು ಶಾಂತಿಯಿಂದಿರೋಣ.’

ಆ ವೇಳೆಗೆ ಮಹಾತ್ಮಗಾಂಧಿಯವರ ನೇತೃತ್ವದಲ್ಲಿ ಭಾರತದಾದ್ಯಂತ ಸ್ವಾತಂತ್ರ ಸಂಗ್ರಾಮ ಬಿರುಸಾಗಿತ್ತು. ೧೯೩೦ರಲ್ಲಿ ಭಾರತದ ಸಂವಿಧಾನ ರಚನೆಗೆ ಲಂಡನ್ನಿನಲ್ಲಿ ದುಂಡುಮೇಜಿನ ಪರಿಷತ್ತು ಸೇರಿತು. ಆಗ ಅಂಬೇಡ್ಕರು ದಲಿತ ವರ್ಗವನ್ನು ಪ್ರತಿನಿಧಿಸಿದರು.

ಬ್ರಿಟೀಷ್ ಸರ್ಕಾರದ ಸ್ಥಾನದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕೆಂಬ ಬೇಡಿಕೆಯಲ್ಲಿ ಭಾರತದ ಹಿಂದುಳಿದ ವರ್ಗದವರು ಸೇರಿದ್ದಾರೆ. ಈ ನೂರೈವತ್ತು ವರ್ಷ ಬ್ರಿಟಿಷ್ ಆಡಳಿತದಲ್ಲಿ ನಮ್ಮ ಸ್ಥಿತಿ ಹಾಗೆ ಉಳಿದಿದೆ. ಅಂತ ಸರ್ಕಾರದಿಂದ ಯಾರಿಗೆ ತಾನೆ ಪ್ರಯೋಜನವಾದೀತು?

ಸ್ವಲ್ಪ ಕಾಲದ ಬಳಿಕ ಎರಡನೆ ದುಂಡುಮೇಜಿನ ಪರಿಷತ್ತನ್ನು ಕರೆಯಲಾಯ್ತು. ಮೊದಲನೆ ದುಂಡುಮೇಜಿನ ಪರಿಷತ್ತನ್ನು ಬಹಿಷ್ಕರಿಸದ್ದ ಗಾಂಧೀಜಿಯವರು ಕಾಂಗ್ರೆಸ್ ಅನ್ನು ಪ್ರತಿನಿಧಿಸಲು ಒಪ್ಪಿದರು. ಅವರು ಲಂಡನ್ನಿಗೆ ಹೋಗುವ ಮುಂಚೆ ಅವರ ಬೇಡಿಕೆಯಂತೆ ಮುಂಬಯಿಯ ರುಣಿಭವನದಲ್ಲಿ ಭೇಟಿಯಾದರು.

ಮೊದಲನೆ ದುಂಡುಮೇಜಿನ ಪರಿಷತ್ತಿನಲ್ಲಿ ನೀವು ಮಾಡಿದ ಭಾಷಣದ ವರದಿಯಿಂದ ನೀವು ಅಪ್ಪಟ ದೇಶಭಕ್ತರೆಂದು ತಿಳಿದೆ. ಲಂಡನ್ನಿನ ಎರಡನೆ ದುಂಡು ಮೇಜಿನ ಪರಿಷತ್ತಿನಲ್ಲಿ ಭಾರತದ ದಲಿತವರ್ಗಕ್ಕೆ ಪ್ರತ್ಯೇಕ ಚುನಾವಣೆ ಅಧಿಕಾರ ಬೇಕು. ಹಿಂದೂ ಧರ್ಮದಿಂದ ನಮಗೆ ಅಪಮಾನ, ದುಃಖ ಮತ್ತು ಹೀನ ಸ್ಥಿತಿಗಳೇ ಬಂದವು.

ಎರಡನೆ ಅಧಿವೇಶನವೂ ಬಿಕ್ಕಟ್ಟಿನಲ್ಲಿಯೆ ನಡೆಯಿತು. ಆದರೆ ದಲಿತರ ವಾಣಿಯನ್ನು ಜಗತ್ತಿಗೆ ಸಾರಿದ ಅಂಬೇಡ್ಕರರು ಪುರುಷ ಸಿಂಹರೆನಿಸಿದರು. ‘ಅಂಬೇಡ್ಕರರಿಗೆ ಜಯವಾಗಲಿ’ ದಯವಿಟ್ಟು ನನ್ನನ್ನು ದೇವರೆಂದು ಪೂಜಿಸಬೇಡಿ. ಅಂಬೇಡ್ಕರರ ಪತ್ನಿ ತುಂಬಾ ಆಚಾರವಂತೆ. ‘ನಾವು ಫಂಡರಪುರಕ್ಕೆ ಹೋಗುವ. ನನಗೆ ವಿಠಲನನ್ನು ಕಾಣುವ ಆಸೆ.’ ‘ರಮಾಬಾಯಿ ನಮ್ಮನ್ನು ಗುಡಿಯೊಳಗೆ ಬಿಡುವುದಿಲ್ಲ’ ‘ಆದರೇನು ಗುಡಿಯ ಮುಂದೆ ನಿಂತು ನಮ್ಮ ಭಕ್ತಿಯನ್ನು ಸಲ್ಲಿಸೋಣ.’ ‘ಬೇಡ ಅದು ನನಗೆ ಇಷ್ಟವಿಲ್ಲ’ ತಮ್ಮ ಪತ್ನಿಯನ್ನು ಸಂತೈಸಿದರು. ದೇವರ ವಿಗ್ರಹದಿಂದಲು ನಮ್ಮನ್ನು ದೂರ ಇರಿಸಿದ್ದಾರೆ. ಆ ಫಂಡರಾಪುರಕ್ಕೆ ನಾವೇಕೆ ಹೋಗಬೇಕು. ಶೀಲವಂತ ಜೀವನ, ನಿಸ್ವಾರ್ಥ ಸೇವೆ. ತುಳಿಯಲ್ಪಟ್ಟಿರುವ ಮಾನವ ಜನಾಂಗಕ್ಕಾಗಿ ನಿಷ್ಕಳಂಕ ಸೇವೆಗಳಿಂದ ನಾವು ಬೇರೊಂದು ಪಂಡರಾಪುರವನ್ನು ಸೃಷ್ಟಿಸೋಣ. ತಮ್ಮನ್ನು ವಿಮೋಚನೆ ಮಾಡಬಲ್ಲ ಅಂಬೇಡ್ಕರರ ಮನೆ ದಲಿತರೆಲ್ಲರಿಗೂ ನಿಜಕ್ಕೂ ಪಂಡರಾಪುರವೆ ಆಗಿತ್ತು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸರಕಾರ ನಮಗೆ ಪ್ರತ್ಯೇಕ ಚುನಾವಣೆ ಅಧಿಕಾರವನ್ನು ನೀಡಿದೆ. ನಿಮ್ಮ ಪ್ರಯತ್ನದ ಮೊದಲ ಹಂತ ಯಶಸ್ವಿಯಾಯಿತು. ಅಂಬೇಡ್ಕರರು ದೃಢ ನಿಲುವನ್ನು ವ್ಯಕ್ತಪಡಿಸಿದರು. ‘ನನ್ನನ್ನು ಆ ಸ್ತಂಭಕ್ಕೆ ನೇಣು ಹಾಕಿದರು ನನ್ನ ಜನರ ನ್ಯಾಯಬದ್ಧ ಬೇಡಿಕೆಗಳನ್ನು ಅಲ್ಲಗಳೆಯಲಾರೆ. ಜಾತಿ ಆಧಾರದ ಮೇಲೆ ಚುನಾವಣಾ ಅಧಿಕಾರ ಕೊಡುವ ಬಗೆಗೆ ಗಾಂಧೀಜಿಯವರ ವಿರೋಧವಿತ್ತು. ಎರವಾಡ ಜೈಲಿನಲ್ಲಿದ್ದ ಅವರು ಅದನ್ನು ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ ಹೂಡಿದರು. ‘ಡಾ.ಅಂಬೇಡ್ಕರ್ ಗಾಂಧೀಜಿಯವರ ಜೀವ ಉಳಿಸಲು ನಿಮ್ಮೊಬ್ಬರಿಗೆ ಮಾತ್ರ ಸಾಧ್ಯ ಅವರ ಮಾತಿಗೆ ಒಪ್ಪಿ’ ನಂತರ ಅವರು ಎರವಾಡ ಜೈಲಿನಲ್ಲಿ ಗಾಂಧೀಜಿಯವರನ್ನು ಭೇಟಿಯಾದರು. ‘ನಾವೆಲ್ಲ ಒಗ್ಗಟ್ಟಾಗಿರಬೇಕು. ತನ್ನ ಹಿಂದಿನ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಹಿಂದೂ ಧರ್ಮಕ್ಕೆ ಕೊನೆಯ ಅವಕಾಶ ಕೊಡಿ.’ ‘ಯೋಚಿಸಿ ನೋಡುತ್ತೇನೆ. ಆದರೆ ಯಾವ ಪರಿಹಾರವೂ ಸಾಧ್ಯವಾಗಲಿಲ್ಲ. ಕೊನೆಗೆ ದಲಿತವರ್ಗದ ಪ್ರತ್ಯೇಕ ಚುನಾವಣೆ ಅಧಿಕಾರಕ್ಕೆ ಬದಲಾಗಿ ದಲಿತರಿಗೆ ಹೆಚ್ಚು ಪ್ರಾತಿನಿಧ್ಯ ಸಿಗುವಂಥ ಪುನಾ ಕರಾರಿಗೆ ಅಂಬೇಡ್ಕರರು ಸಹಿ ಹಾಕಲು ಒಪ್ಪಿದರು. ಜಾತಿ ಆಧಾರದ ಮೇಲೆ ಜನರ ವಿಂಗಡಣೆ ನಿವಾರಣೆಯಾಯಿತು.

ಅಂಬೇಡ್ಕರರು ರಾಜಕಾರಣದಲ್ಲಿ ಎಷ್ಟೇ ಕ್ರಿಯಾಶೀಲರಾಗಿದ್ದರು ವಿದ್ವಾಂಸರಾಗಿ ಉಳಿದರು. ಐವತ್ತು ಸಾವಿರಕ್ಕಿಂತ ಹೆಚ್ಚು ಪುಸ್ತಕಗಳನ್ನು ಕೂಡಿಸಿ ದಾದರಿನ ತಮ್ಮ ರಾಜಗೃಹವನ್ನು ಬೃಹತ್ ಗ್ರಂಥಾಲಯವನ್ನಾಗಿ ಮಾಡಿದರು. ೧೯೩೫ರ ಮೇನಲ್ಲಿ ಅವರು ಪ್ರೀತಿಯ ಪತ್ನಿ ರಮಾಬಾಯಿಯ ಮರಣದ ಅಪಘಾತ ಒದಗಿತು. ಈ ಮಧ್ಯೆ ಪುನಾ ಕರಾರು ಜಾರಿಗೆ ಬಾರದೆ ಅಂಬೇಡ್ಕರರು ಅಸಂತುಷ್ಟರಾಗಿದ್ದರು. ಯಪೋಲದಲ್ಲಿ ನಡೆದ ದಲಿತರ ಸಭೆಯನ್ನುದ್ದೇಶಿಸಿ ‘ನಾವು ನಮ್ಮ ದಿನನಿತ್ಯದ ಅಗತ್ಯದ ಹಕ್ಕುಗಳನ್ನು ಪಡೆಯಲಾಗಿಲ್ಲ. ನಾನು ಹಿಂದುವಾಗಿ ಹುಟ್ಟಿದಂತು ನಿಜ. ಆದರೆ ಹಿಂದುವಾಗಿ ಮಾತ್ರ ಸಾಯಲಾರೆ.’ ಮಹಾರ್ ಜನಾಂಗದ ಸಭೆಯನ್ನುದ್ದೇಶಿಸಿ : ‘ನಮ್ಮನ್ನು ಮನುಷ್ಯರೆಂದು ಗುರುತಿಸದ, ಅಜ್ಞಾನಿಗಳನ್ನು ಅಜ್ಞಾನಿಗಳಾಗಿಯೆ, ದಲಿತರನ್ನು ದಲಿತರನ್ನಾಗಿಯೇ ಇರಲು ಒತ್ತಾಯಿಸುವ ಧರ್ಮ ಧರ್ಮವೇ ಅಲ್ಲ ಅದೊಂದು ಮಾರಕ.’

೧೯೩೫ರ ಸರಕಾರದ ಮಸೂದೆಯಂತೆ ಪ್ರಥಮ ಚುನಾವಣೆಗಳು ಪ್ರಾರಂಭವಾದವು. ಅಂಬೇಡ್ಕರ್ ಮತ್ತೂ ಇನ್ನು ಹದಿನಾಲ್ಕು ಮಂದಿ ಸ್ವಾತಂತ್ರ ಕಾರ್ಮಿಕ ಪಕ್ಷದವರು ಮುಂಬಯಿ ಶಾಸನ ಸಭೆಗೆ ಆರಿಸಿಬಂದರು. ೧೯೩೯ರಲ್ಲಿ ಎರಡನೆ ಮಹಾಯುದ್ಧ ಆರಂಭವಾಯಿತು. ಕಾಂಗ್ರೆಸ್ ಮಂತ್ರಿಗಳು ರಾಜೀನಾಮೆ ನೀಡಿದರು. ೧೯೪೨ ಜುಲೈನಲ್ಲಿ ವೈಸ್ ರಾಯ್ ತನ್ನ ಕಾರ್ಯನಿರ್ವಾಹಕ ಮಂತ್ರಿಮಂಡಲದಲ್ಲಿ ಅಂಬೇಡ್ಕರರನ್ನು ಕಾರ್ಮಿಕ ಸಚಿವರನ್ನಾಗಿ ನೇಮಿಸಿಕೊಂಡರು.

ಸಂವಿಧಾನ ಕರಡು ಸಿದ್ಧಪಡಿಸುವಾಗಿನ ಬಿಡುವಿಲ್ಲದ ದುಡಿಮೆಯ ಸಲುವಾಗಿ ಅವರ ಆರೋಗ್ಯ ಕೆಟ್ಟಿತು. ಮುಂಬಯಿ ಚಿಕಿತ್ಸಾಲಯದಲ್ಲಿ ಡಾ. ಶಾರದಾಬಾಯಿ ಎಂಬ ವೈದ್ಯೆಯ ಪರಿಚಯವಾಯಿತು. ಆಕೆಯನ್ನು ೧೯೪೮ರಲ್ಲಿ ವಿವಾಹವಾದರು. ೧೯೪೮ ನವಂಬರ್ ೪ರಲ್ಲಿ ಡಾ. ಅಂಬೇಡ್ಕರರು ಭಾರತ ಸಂವಿಧಾನದ ಕರಡು ಪ್ರತಿಯನ್ನು ವಿಧಾನಸಭೆಗೆ ಒಪ್ಪಿಸಿದರು. ‘ಸಾಮಾಜಿಕ ಜೀವನದಲ್ಲಿ ಒಡಕು ಮತ್ತು ಪರಸ್ಪರ ದ್ವೇಷಾಸೂಯೆಗಳಿಗೆ ಕಾರಣವಾಗಿರುವ ಜಾತಿಯನ್ನು ನಿವಾರಿಸಿ ಎಲ್ಲರೂ ಭಾರತೀಯರಾಗಲಿ’ ಎಂದು ಕೋರುತ್ತೇನೆ.’’ ೧೯೪೯ ನವಂಬರ್ ೨೬ರಂದು ವಿದಾಯಕ ಸಭೆ ಭಾರತದ ಪ್ರಜೆಗಳ ಹೆಸರಿನಲ್ಲಿ ಸಂವಿಧಾನವನ್ನು ಅಂಗೀಕರಿಸಿತು.

ಸಿಲೋನಲ್ಲಿ ನಡೆದ ಬೌದ್ಧ ಸಮ್ಮೇಳನಕ್ಕೆ ಡಾ.ಅಂಬೇಡ್ಕರನನ್ನು ಆಹ್ವಾನಿಸಲಾಯಿತು. ಅಲ್ಲಿಂದ ಹಿಂದಿರುಗಿದ ನಂತರ ಮುಂಬಯಿಯ ಬೌದ್ಧ ದೇವಾಲಯದಲ್ಲಿ ಮಾತಾನಾಡಿದರು. ‘ಜನತೆ ತಮ್ಮ ಕಷ್ಟ ಪರಿಹಾರಕ್ಕೆ ಬೌದ್ಧಧರ್ಮವನ್ನು ಸ್ವೀಕರಿಸಬೇಕು. ಉಳಿದ ನನ್ನ ಜೀವಮಾನವನ್ನು ಭಾರತದಲ್ಲಿ ಭೌದ್ಧ ಧರ್ಮವನ್ನು ಹರಡಲು ಮೀಸಲಿಡುತ್ತೇನೆ.’

ಡಾ. ಅಂಬೇಡ್ಕರ್ ಅವರು ಮುಂದಿನ ಎಂಟು ವರ್ಷಗಳಲ್ಲಿ ಸಮಾಜದ ದುಷ್ಟ ಪದ್ಧತಿಗಳ ಮತ್ತು ಮೂಢನಂಬಿಕೆಗಳ ವಿರುದ್ಧ ನಿರಂತರ ಹೋರಾಡಿದರು. ೧೯೫೬ ಅಕ್ಟೋಬರ್ ೧೪ರಂದು ಅವರು ನಾಗಪುರದಲ್ಲಿ ಭೌದ್ಧ ಧರ್ಮ ಸ್ವೀಕರಿಸಿದರು. ಆನಂತರ ಸುಮಾರು ಮೂರು ಲಕ್ಷ ಅನುಯಾಯಿಗಳಿಗೆ ಬೌದ್ಧಧರ್ಮದ ದೀಕ್ಷೆ ನೀಡಿದರು. ೧೯೫೬ ಡಿಸೆಂಬರ್ ೬ ರಂದು ದೆಹಲಿಯ ತಮ್ಮ ನಿವಾಸದಲ್ಲಿ ಡಾ.ಅಂಬೇಡ್ಕರರು ತಮ್ಮ ಕೊನೆಯುಸಿರೆಳೆದರು. ಮರುದಿನ ಅವರ ಕಳೆಬರವನ್ನು ಬೊಂಬಾಯಿಗೆ ಸಾಗಿಸಲಾಯಿತು. ಬೌದ್ಧ ಧರ್ಮದ ರೀತಿ ಅವರಿಗೆ ಸಂಸ್ಕಾರ ಮಾಡಲಾಯಿತು. ಕ್ರೌರ್ಯಕ್ಕೆ ತುತ್ತಾಗಿದ್ದ, ಭಾರತ ಮಕ್ಕಳಿಗಾಗಿ ವೀರೋಚಿತವಾಗಿ ಹೋರಾಡಿದ ಆ ಮಾತೆಯ ಶ್ರೇಷ್ಠ ಪುತ್ರ.