೩ನೇ ಅಂಕ ಪ್ರಾರಂಭ
(ಧರ್ಮಪುರಿ ಪ್ರೌಢಶಾಲೆಗೆ ರಾಣ ಬಲದೇವ್ ಸಿಂಗ್ ಮಹಾರಾಜರವರ ಭೇಟಿ)

ಹೆಡ್ ಮಾಸ್ಟರ್ : ಎಲ್ಲ ವಿದ್ಯಾರ್ಥಿಗಳು ಬಂದು ನಿಮ್ಮ ನಿಮ್ಮ ಜಾಗದಲ್ಲಿ ಕೂಡಿ. ಈಗ ರಾಘವಚಾರ್ ಈ ನಗರಿಯ ಮಹಾರಾಜರು ಈ ಶಾಲೆಗೆ ಭೇಟಿ ಕೊಡುತ್ತಾರೆ.

ಕೃಷ್ಣಮೂರ್ತಿ : ಸಾರ್, ಭಗಾವನ್ ದಾಸನು ಅವನು ಈ ದಿನವು ಕುಳಿತುಕೊಳ್ಳುವ ಸ್ಥಳದಲ್ಲಿ ಒಬ್ಬನೆ ಒಂಟಿಯಾಗಿ ತಾನೆ ಕುಳಿತುಕೊಳ್ಳಬೇಕೇನು.

ಹೆ.ಮಾ.ರಾ : ಹೌದು. ಯಾವ ಕಾಲಕ್ಕೂ ಅಂತ್ಯಜರು ಬೇರೆಯೇ ಕುಳಿತುಕೊಳ್ಳಬೇಕು. ಸ್ವರ್ಗದಲ್ಲೇನೂ ಅವರಿಗೆ ಜಾಗವಿಲ್ಲ. ನರಕದಲ್ಲೂ ಅವರಿಗೆ ಕಡೆಯ ಜಾಗವೆ. ಅಂತ್ಯಜದರ್ಶನಂ ಪಾಪಂ, ಸ್ಪರ್ಶನಂ ಅಗ್ನಿ ಪ್ರವೇಶಂ ಎಂಬ ತತ್ವ ಮಹಾರಾಜರಿಗೆ ಗೊತ್ತಿಲ್ಲವೆ ಅವರು ಹಿಂದೂಗಳಲ್ಲವೆ.

ಮಹಾರಾಜರು ಮಂತ್ರಿಯೊಡನೆ ಶಾಲಾಪ್ರವೇಶ

ಮಹಾರಾಜ : (ಶಾಲೆಯೊಳಗಡೆ ಬಂದು ನಿಂತುಕೊಂಡು) ಬಾಲಕರ ಸಂಖ್ಯೆ ಎಷ್ಟು.

ಮಂತ್ರಿ : (ಹೆಡ್ಮಾಷ್ಟರ್ ಕಡೆ ತಿರುಗಿ ರಿಜಿಸ್ಟರ್ ನೋಡಿ ಮಹಾರಾಜರೊಂದಿಗೆ) ಪ್ರಭೊ ೨೫೦.

ಮಹಾರಾಜ : ಅಲ್ಲಿ ದೂರದಲ್ಲಿ ಒಬ್ಬನೆ ಕುಳಿತಿರುವ ಬಾಲಕನ್ಯಾರು ಅವನು ವಿದ್ಯಾರ್ಥಿಯೇನು.

ಮಂತ್ರಿ : (ಹೆಡ್ಮಾಸ್ಟರ್ನ್ ಕೇಳಿ) ಮಹಾಸ್ವಾಮಿ ಅವನು ವಿದ್ಯಾರ್ಥಿಯಂತೆ. ಅವನು ಕೀಳು ಜಾತಿಯವನಾದ್ದರಿಂದ ಒಬ್ಬನನ್ನೆ ದೂರದಲ್ಲಿ ಕೂಡಿಸಿದ್ದಾರಂತೆ.

ಮಹಾರಾಜ : ಅಯ್ಯೊ ಅಂತ್ಯಜರೆಂದರೆ ಪಾಠಶಾಲೆಯಲ್ಲಿಯೂ ಭಿನ್ನಭೇದವೆ. ಹಿಂದೂ ಸಮಾಜವು ಇಷ್ಟು ಕೀಳಾಗಿ ಭಾವಿಸಿ ಇವರನ್ನು ಹಿಂದಕ್ಕೆ ತುಳಿದು ನಾವು ಮುಂದಾಗಬೇಕು. ಈ ವಿದ್ಯಾರ್ಥಿಯು ಎಷ್ಟು ಸುಂದರನಾಗಿದ್ದಾನೆ. ಎಷ್ಟು ಚೊಕ್ಕಟವಾಗಿದ್ದಾನೆ. ನಮ್ಮ ಅರಸು ಮಕ್ಕಳಂತೆ ಕಾಣುಸ್ತಾನಲ್ಲಾ. ಅದರೂ ಈತನ ಮೇಳೆ ಇಷ್ಟು ನಿರ್ಧಯವೆ. ಹೀಗಾದರೆ ದೇಶೋನ್ನತಿಗೆ ಕುಂದುಂಟಾಗುವುದಿಲ್ಲವೆ. ಇವರೂ ನಮ್ಮ ಸಹೋದರರಲ್ಲವೆ. ಮತಭೇದಂ ಮಹಾಪಾಪಂ ಎಂಬುದನ್ನು ಸಮಾಜದವರು ಮರೆತು, ಮತಭೇದಂ ಮಹಾಪುಣ್ಯಯೆಂಬುದನ್ನು ಮಾತ್ರ ಚೆನ್ನಾಗಿ ಮನಗಂಡಿರುವರು. ಸ್ವರಾಜ್ಯ ಸ್ವಾತಂತ್ರ ಗಳಿಸುವುದಕ್ಕಾಗಿ ಮಹಾತ್ಮ ಗಾಂಧೀಜಿಯವರು, ಕಾಂಗ್ರೆಸ್ಸಿನವರು ಬಹಳ ಕಾಲದಿಂದಲೂ ಹೋರಾಡುತ್ತ, ಭಾರತವನ್ನು ಒಗ್ಗಟ್ಟು ಮಾಡಬೇಕೆಂದಿರುವುದಕ್ಕೆ ಬದಲು ಮುಗ್ಗಟ್ಟಾಗಿ, ಸ್ವಾತಂತ್ರ ತಳಹದಿಗೆ ಧಕ್ಕೆ ಬಂದಂತಾಗುವುದಿಲ್ಲವೆ. ಸಮಾಜ ಸುಧಾರಕರು, ಸ್ವರಾಜ್ಯಭಿಮಾನಿಗಳು ಇದೊಂದನ್ನು ಕೂಲಂಕುಷವಾಗಿ ವಿಮರ್ಶೆ ಮಾಡದೆ, ನಿದ್ರಾಲಸ್ಯದಿಂದ ಮೈಮರೆತಿರುವರೆ. ದೊರೆಯೆ ಸರ್ವಜನ ದೈವವರೆಯೆಂಬ ವಾಕ್ಯದಂತೆ ಅಂತ್ಯಜರ ಈ ತೆರನಾದ ಭೇದ ಭಾವನೆಗಳಿಗಾಗಿ ಪಶ್ಚಾತ್ತಾಪ ಪಡುವುದಲ್ಲದೆ ಇದರ ನಿವಾರಣೆಗಾಗಿ ಸದಾ ಪ್ರಬಲವಾಗಿ ಪ್ರಯತ್ನಿಸಲೇಬೇಕು. ಇಲ್ಲದಿದ್ದಲ್ಲಿ ರಾಜನೀತಿ ಬಾಹಿರನಾಗಿ ನಾಳೆ ದೈವಸಾನ್ನಿಧ್ಯದಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತೆ.

೧೨ ಹಾಡು : ಅಂತ್ಯಜರನು ನಾರಿ ಸಂತಸ ಸೇವಿಸಿ
ಸಂತಸಪಡುವೆನು ಮನದಣೆಯೆ ||ಪ||

ಸಂತತ ಭೇದದ ಚಿಂತೆ ಗೀಡಾಗಿಹ
ಅಂತ್ಯಜಾತಂಕರ ನಳಿಸಲು ನಾಂ ||ಅ||

ಭೇದವು ಜಗಜನ ಸೋದರ ಭಾವಕೆ |
ಸಾಧುವಲ್ಲವೆಂಬುದರುಹೆ ||

ಆದರದಿಂದಲಿ ಸೇವೆಯಗೈಯ್ಯುತೆ |
ಮಾದರಿದೋರುವೆ ಭಾರತಕೆ ||೧||

ಮಾತು : ಎಲೈ ವಿದ್ಯಾರ್ಥಿಯೆ ಇಲ್ಲಿ ಹತ್ತಿರಕ್ಕೆ ಬಾ. ನಿನ್ನ ಹೆಸರೇನು.

ಭಗವಾನ್‌ದಾಸ್ : ಪ್ರಭು ನಮಸ್ತೆ.

ಮಹಾರಾಜ : (ಎಷ್ಟು ನಮ್ರತೆಯಿಂದ, ಮೃದು ಧ್ವನಿಯಿಂದ ನಮಸ್ತೆ ಎನ್ನುತ್ತಾನೆ) ನಿನ್ನ ಹೆಸರೇನು.

ಭಗವಾನ್‌ದಾಸ್ : ಮಹಾಸ್ವಾಮಿ ನನ್ನ ಹೆಸರು ಭಗವಾನ್ ದಾಸನೆಂದು.

ಮಹಾರಾಜ : ಅದೇಕೆ ಅಷ್ಟು ದೂರದಲ್ಲಿ ನೀನೊಬ್ಬನೆ ಕುಳಿತಿರುವೆ.

ಭಗವಾನ್‌ದಾಸ್ : ಪ್ರಭೋ ಹಿಂದು ದೇಶದಲ್ಲಿ ಹಿಂದುವೆನಿಸಿ ಹಿಂದೂ ಸಮಾಜದಿಂದಲೆ ಬಹಿಷ್ಕೃತನಾದ ನನಗೆ ಹಿಂದೂ ವಿದ್ಯಾರ್ಥಿಗಳೊಡನೆ ಕುಳಿತುಕೊಳ್ಳಲು ಸಮಾನತೆಯಿಲ್ಲ.

ಮಹಾರಾಜ : (ತಲೆ ಮೇಲೆ ಕೈಯಿಟ್ಟು ಸವರಿ) ಭಗವಾನ್ ಈ ಬಗೆಯ ನಿಮ್ಮ ಕಷ್ಟ ನಿವರಣೆಯು ಹಿಂದೂ ಸಮಾಜದವರಿಂದಲೆ ಬೇಗ ಬೇಗ ಸಾಗುವುದು. ಕಾಲಚಕ್ರವು ಭರದಿಂದ ತಿರುಗುವುದು. ನೀನು ಇದರ ಚಿಂತೆ ಬಿಟ್ಟು ಚೆನ್ನಾಗಿ ಓದಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಲು ಯತ್ನಿಸು. ಈ ದಿನದಿಂದ ತಿಂಗಳೊಂದಕ್ಕೆ ೨೫ ರೂಪಾಯಿಗಳ ವೇತನ ಕೊಡುತ್ತೇನೆ. ಮುಂದಿನ ಕಾಲೇಜು ವ್ಯಾಸಂಗಕ್ಕೆ ೪ ಸಹಸ್ರ ರೂಪಾಯಿಗಳನ್ನೂ ಹೊರದೇಶಕ್ಕೆ ಹೋಗಿ ವ್ಯಾಸಂಗ ಮಾಡಲು ೫೦ ಸಹಸ್ರ ರೂಪಾಯಿಗಳನ್ನು ನಿನಗಾಗಿ ಮೀಸಲಾಗಿಟ್ಟಿದೆ. ಕಷ್ಟುಪಟ್ಟು ವ್ಯಾಸಂಗ ಮಾಡಿ ಉತ್ತೀರ್ಣನಾಗಿ ಹಿಂದಿರುಗಿ ಬಂದಾಗ ನಿನ್ನವರ ಮುಂದಾಳಾಗಿ ನಿಂತು ಅವರ ಉದ್ಧಾರ ಕಾರ್ಯಗಳಿಗಾಗಿ ಕೊನೆಯತನಕ ದುಡಿದು ಶರೀರ ತ್ಯಾಗ ಮಾಡು. ಇಂತ ಕಾರ್ಯಗಳಿಗೆ ಯಾರು ನಿಲ್ಲುವರೊ ಅವರಿಗೆ ಕಷ್ಟಗಳು ಹಿಂದೆಯೆ ಅಲೆಗಳಂತೆ ಒರಗುತ್ತವೆ. ಎದೆಗೆಡದೆ ಹಠದಿಂದ ಸಾಧಿಸು. ಆಗಾಗ ನನ್ನನ್ನು ಭೇಟಿ ಮಾಡು.

ಭಗವಾನ್‌ದಾಸ್ : ಪ್ರಭುವೆ ಈ ಚಿಕ್ಕಂದಿನಲ್ಲೆ ಅಸ್ಪೃಶ್ಯನಾದ ನನಗೆ ರಾಜ ಸಂದರ್ಶನ ವಿತ್ತು ತಮ್ಮ ಅಮೃತ ಹಸ್ತದಿಂದ ನನ್ನನ್ನು ಸ್ಪರ್ಶಿಸಲು ನಾನು ಪುನೀತನಾದೆ. ನನ್ನ ಮುಂದಿನ ವಿದ್ಯಾರ್ಜನೆಗಾಗಿ ಧಾರಾಳವಾದ ದ್ರವ್ಯ ದಯಪಾಲಿಸಿದ್ದೀರಿ. ನಾನು ಧನ್ಯ. ತಮ್ಮ ಸಂಪೂರ್ಣ ಕೃಪೆ ಸದಾ ನನ್ನ ಮೇಲಿರಲೆಂದು ದಿವ್ಯ ಸನ್ನಿಧಾನದಲ್ಲಿ ನನ್ನ ಧೀನ ಪ್ರಾರ್ಥನೆ.

ಭಗವಾನ್‌ದಾಸ್ : …….. ಅಂತ್ಯಜರೆನ್ನುವುದಕ್ಕೆ ಬದಲು ಹರಿಜನರೆಂಬ ಪವಿತ್ರನಾಮಾಂಕಿತ ವಿಟ್ಟು ಕಾಂಗ್ರೆಸ್ಸಿನವರು ಹರಿಜನೋದ್ಧಾರ ಕೈಗೊಳ್ಳುವ ಸಲುವಾಗಿ ಭಾರತಾದ್ಯಂತ ಹರಿಜನ ಮಹಾಸಭೆಗಳನ್ನು ಏರ್ಪಡಿಸಬೇಕೆಂದು ಎರವಾಡ ಜೈಲಿನಿಂದ ಮಹಾತ್ಮಗಾಂಧಿಯವರು ನಿರೂಪ ಹೊರಡಿಸಿರುವ ಪ್ರಕಾರ ನಾಳೆ ೯ನೇ ತಾರೀಖು ಭಾನುವಾರ ಮಧ್ಯಾಹ್ನ ೩ ಗಂಟೆಗೆ ಇದೇ ಧರ್ಮಪುರದ ಟೌನ್ ಹಾಲಿನಲ್ಲಿ ಕಾಂಗ್ರೆಸ್ ಫ್ರೆಸಿಡೆಂಟ್ ಶ್ರೀಗುರುದೇವಕಾಂಡನ್ ಅವರ ಅಧ್ಯಕ್ಷತೆಯಲ್ಲಿ ಹರಿಜನ ಮಹಾಸಭೆ ಏರ್ಪಡಿಸಿದೆ. ಸರ್ವರೂ ದಯಮಾಡಿಸಬೇಕಾಗಿ ಪ್ರಾರ್ಥನೆ. (ಹಸ್ತ ಪತ್ರಿಕೆಗಳ ಹಂಚಿಕೆ)

ಹರಿಜನ ಮಹಾಸಭೆ

(ಅಧ್ಯಕ್ಷರ ಬರುವಿಕೆ, ಜೈಕಾರ, ಕರತಾಡನ)

ದೇವತಾ ಪ್ರಾರ್ಥನೆ

ಕಾಂಡನ್ : ಮಹಾಶಯರೆ ಈಗ ಕಾಂಗ್ರೆಸ್ ಮುಖಂಡರಾದ ಸುಂದರರಾಮ್ ಸುರೇಶ್ ರವರು ಭಾಷಣ ಮಾಡುತ್ತಾರೆ.

ಬಾಬುರಾಮ್ ಸುರೇಶ್ : ಮಾನ್ಯ ಅಧ್ಯಕ್ಷರೆ, ಸಹೋದರ ಸಹೋದರಿಯರೆ, ಭಾರತೀ ಇತಿಹಾಸದಲ್ಲಿ ಇದು ಅಪೂರ್ವವಾದ ಸುದಿನ. ಮಹಾತ್ಮಗಾಂಧಿಯವರು ಅಂತ್ಯಜರಿಗೆ ಹರಿಜನರೆಂಬ ನಾಮಾಂಕಿತವಿಟ್ಟು ಕಾಂಗ್ರೆಸ್ಸಿನವರು ಇವರ ಉದ್ಧಾರ ಕಾರ್ಯ ಕೈಗೊಳ್ಳುವಸಲುವಾಗಿ ಭಾರತಾದ್ಯಂತ ಹರಿಜನ ಮಹಾಸಭೆಗಳನ್ನು ಏರ್ಪಡಿಸಬೇಕೆಂದು ಎರವಾಡ ಜೈಲಿನಿಂದ ಒಂದು ನಿರೂಪ ಹೊರಡಿಸಿರುವ ಪ್ರಕಾರ ಈ ಮಹಾಸಭೆಯನ್ನು ಏರ್ಪಡಿಸಿದ್ದೇವೆ.

ಮಹಾಶಯರೆ ಭಾರತ ಸ್ವಾತಂತ್ರ ಸಾಧಕನಾದ ಮಹಾತ್ಮಗಾಂಧಿಯವರಿಗೆ ಲಂಡನ್ನಿನಲ್ಲಿ ನಡೆದ ಎರಡನೆಯ ಚಕ್ರಗೋಷ್ಠಿಯಲ್ಲಿ ಡಾ. ಅಂಬೇಡ್ಕರವರು ಬೆಂಬಲ ನೀಡದೆ ಹಿಂದಿರುಗಿದುದಕ್ಕಾಗಿ ಒಂಭತ್ತು ಕೋಟಿ ಅಂತ್ಯಜರು ಹಿಂದುಗಳಿಂದ ಬೇರ್ಪಟ್ಟು ಅನ್ಯ ಮತಾನುವರ್ಶಿಗಳಾಗಿ ಅಷ್ಟೇ ಜನಬಲವಿರುವ ಮುಸಲೀಮರೊಂದಿಗೆ ಸೇರಿಕೊಂಡರೆ ಹಿಂದೂ ಬೆಂಬಲ ಕಡಿಮೆಯಾಗಿ ಸ್ವರಾಜ್ಯ ಸಾಧನೆಯು ಸಾರ್ಥಕವಾಗಲಾರದೆಂದು ಹೆದರಿ ಅವರು ಪ್ರತ್ಯೇಕವಾಗಲು ಅವಕಾಶ ಕೊಡದೆ ಅವರ ಮತಭೇದ ಕಳಂಕವನ್ನು ನಿರ್ಮೂಲ ಮಾಡಿ ಅವರ ಹಕ್ಕು ಬಾಧ್ಯತೆಗಳನ್ನು ಗಳಿಸಿಕೊಡಲು ತನ್ನ ಪ್ರಾಣವನ್ನೆ ಪಣವಾಗಿಟ್ಟು ಹಗಲಿರುಳು ದುಡಿಯುತ್ತಿದ್ದಾರೆ. ಅವರ ಅನುಯಾಯಿಗಳಾದ ನೀವೂ ಸಹ ಇವರುದ್ಧಾರಕ್ಕಾಗಿ ಮನಸ್ಸಾಕ್ಷಿಯಾಗಿ ದುಡಿದು ಇದುವರೆಗೂ ಇವರಿಗೆ ಮಾಡಿದ ಅನ್ಯಾಯಕ್ಕಾಗಿ ಪಶ್ಚಾತ್ತಾಪ ಹೊಂದಿ ಇದರ ನಿವಾರಣೆಗಾಗಿ ಶ್ರಮಿಸುತ್ತೇವೆ.

ಸರ್ಕಾರದವರು ಇವರ ವಿದ್ಯಾಭಿವೃದ್ದಿಗಾಗಿ ಹೆಚ್ಚು ಸಹಾಯ ನೀಡಬೇಕು ಯಾಕಂದರೆ ಹರಿಜನಗೋತ್ರದಲ್ಲಿಯೆ ಜನಿಸಿದ ಕವಿ ಗೋವಿಂದಾಸರು ಸ್ವಾನುಭವದಿಂದ ಬರೆದಿರುವ

ಕಂದ : ವಿದ್ಯೆ ಹರಿಜನಂಗಳ | ನುದ್ದಾರ್ ಗೈದು ಮನುಜರೆಂದಿನೆಪುದಲ್ಲದೆ
ಮಿದ್ದ ಕಾರ್ಯಂಗಳಿಂದಲಿವರುದ್ದಾರ ಕೇಳುವುದು ಮತ್ತೊಂದಿಲ್ಲ ಜಗದೊಳ್

ಎಂಬುದು ಅಕ್ಷರಸಃ ನಿಜವಾಗಿದೆ. ಇನ್ನು ಸಾಮಾಜಿಕ ವಿಚಾರದಲ್ಲಿ ದೇಶ ಮುಖಂಡರು, ಸಮಾಜಸುಧಾರಕರೂ, ಸರ್ಕಾರದವರೂ ಸಹಕರಿಸಿ ಸಾರ್ವಜನಿಕ ಕೆರೆ ಬಾವಿ ಕ್ಷೇತ್ರದೇವಸ್ತಾನ ಹೋಟೆಲು ಕ್ಷೌರದ ಮತ್ತು ಬಟ್ಟೆ ಮಡಿಮಾಡುವ ಶಾಪುಗಳಿಗೆ ತುರ್ತು ಕಾನೂನು ಮೂಲಕ ಸೇರಿಸುವಂತೆ ಏರ್ಪಡಿಸಬೇಕು. ಇನ್ನು ನನ್ನ ಭಾಷಣ ಮುಗಿಸುತ್ತೇನೆ.

ಕಾಂಡ್‌ನ್ : ಈಗ ಹರಿಜನಮುಖಂಡರು ಕಾಂಗ್ರೆಸ್ ಅನುಯಾಯಿಗಳಾದ ಶ್ರೀಭಗವಾನ್ ದಾಸರು ಕವಿಗೋವಿಂದದಾಸರವರ ಕವನ ಒಂದನ್ನು ಹಾಡುತ್ತಾರೆ.

ಏಕೆಮ್ಮ ದೂಷಿಸಿರಿ ಹಿಂದುಬಾಂಧವರೆ,
ಜೋಕೆಯಿಂದಲಿ ನೋಡಿ ಮುಂದುವರಿದವರೆ ||

(ಹಾರಹಾಕುವಿಕೆ) ಅಧ್ಯಕ್ಷಭಾಷಣ (ಜೈಕಾರ ಕರತಾಡನ್) ಸಭಾ ಸಹೋದರ ಸಹೋದರಿಯವರೆ ಈ ಪವಿತ್ರ ಕಾರ್ಯದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಲ್ಲಾ ವಿಚಾರಗಳನ್ನು ಈ ಹಿಂದೆ ಭಾಷಣ ಮಾಡಿದ, ಹಾಡಿದ ಮಿತ್ರರು ತಿಳಿಸಿದ್ದಾರೆ. ಮಹಾತ್ಮಗಾಂಧಿಯವರು ಹರಿಜನಸೇವೆ ಹರಿಸೇವೆಯೆಂದು ಹಾಡಿರುವುದನ್ನು ಪ್ರತಿಯೊಬ್ಬ ಭಾರತೀಯನು ಕಾರ್ಯರೂಪಕ್ಕೆ ತಂದರೆ ಹರಿಜನೋದ್ಧಾರಕ್ಕೆ ಅಷ್ಟೆ ಸಾಕು. ಆದರೆ ಒಂದು ಮುಖ್ಯವಾದಂಶವನ್ನು ವಿಷಾದದಿಂದ ಇಲ್ಲಿ ಹೇಳಬೇಕಾಗಿದೆ. ಇವರ ಉದ್ಧಾರಕ್ಕಾಗಿ ನಿಂತು ಸಂಭವಿಸಿದ ಕಷ್ಟಗಳನ್ನೆದುರಿಸಿ ಜಯಗಳಿಸಿ ಪರಲೋಕ ಸೇರಿದ ಮೇಲೆ ಹಿಂದೂಮಹಾಶಯರು ಅವರು ನಡೆಸಿಕೊಂಡು ಹೋದ ಹರಿಜನೋದ್ಧಾರ ಹಡಗನ್ನು ಸಮುದ್ರದ ತಡಿ ಸೇರಿಸದೆ ಅಷ್ಟಷ್ಟಕ್ಕೆ ನಿಲ್ಲಿಸಿ ಆ ಮಹಾತ್ಮರ ಮಹೋನ್ನತ ಧ್ಯೇಯಗಳನ್ನೆಲ್ಲ ಸಂಪೂರ್ಣ ಮರೆತು ಅಂತ್ಯ ಜೋದ್ಧಾರಂ ನರಕ್ ನಾಶನಂ ಸ್ವರ್ಗಸಾಧನಂ ಎಂಬ ತತ್ವವನ್ನು ಪಾಲಿಸತೊಡಗಿದರು. ಇಲ್ಲದಿದ್ದಲ್ಲಿ ಇವರ ಪುರೋಬಿವೃದ್ದಿಯು ೧೦೦೦ ವರ್ಷದಿಂದ ಇಷ್ಟ್ಠು ಅಧೋಗತಿಗಿಳಿಯತಿತ್ತೇನು. ಇಲ್ಲ. ಖಂಡಿತವಾಗಿಯೂ ಇಲ್ಲ. ಈಗ ಇವರಿಗಾಗಿ ಹಗಲಿರುಳು ಶರೀರವನ್ನೆ ಧಾರೆ ಎರೆಯುತ್ತಿರುವ ಹಠಯೋಗಿ ಮಹಾತ್ಮಗಾಂಧಿಯವರು ಅದೆ ಸಮುದ್ರದಲ್ಲಿ ಭಕ್ತ ರಾಮಾನುಜ ಮತ್ತು ಮಹಾತ್ಮ ಬಸವಣ್ಣನವರು ನಿಲ್ಲಿಸಿರುವ ಹರಿಜನೋದ್ಧಾರ ಹಡಗನ್ನೇರಿ ಅದನ್ನು ಸಂಪೂರ್ಣ ತಡಿಸೇರಿಸಬೇಕೆಂದು ಕಂಕಣತೊಟ್ಟು ಅದನ್ನೆ ಮುನ್ನಡೆಸುತ್ತಿದ್ದಾರೆ. ಮಹಾತ್ಮರೊಬ್ಬರೆ ಅದನ್ನು ತಡಿ ಸೇರಿಸಲು ಸಾಧ್ಯವಿಲ್ಲವೆಂಬುದನ್ನು ತಾವು ಮರೆಯಬಾರದು. ಆ ಭಾರವು ಪ್ರತಿಯೊಬ್ಬ ನಿಜವಾದ ಭಾರತೀಯನಿಗೆ ಸೇರಿದದೆಂಬುದನ್ನು ಕಂಡಿತ ಗಮನದಲ್ಲಿಟ್ಟುಕೊಳ್ಳಬೇಕೆಂದು ತಮ್ಮೆಲ್ಲರನ್ನು ಪ್ರಾರ್ಥಿಸಿ ನನ್ನ ಭಾಷಣವನ್ನು ನಿಲ್ಲಿಸುತ್ತೇನೆ.

ಅಭಿನಂದನೆ

ಭಗವಾನ್ ದಾಸ್ : ಅಂತ್ಯಜೋದ್ಧಾರವೆ ಜನ್ಮದುದ್ದೇಶವೆಂದು ಅರಿತು ಬಹುದೂರದಿಂದ ಬಂದು ಅಧ್ಯಕ್ಷತೆ ವಹಿಸಿ ಕಾರ್ಯ ನೆರವೇರಿಸಿದ್ದಕ್ಕಾಗಿ ಹರಿಜನರ ಪರವಾಗಿ ಹೃತ್ಪೂರ್ವಕ ವಂದನೆ. ಈ ಕಾರ್ಯದಲ್ಲಿ ಭಾಗಿಗಳಾದ ಸರ್ವ ಮಹನೀಯರಿಗೂ ಅಭಿನಂದನೆ.

ರಾಷ್ಟ್ರಗೀತೆ (ಸಭಾಮುಕ್ತಾಯ)

ಸವರ್ಣ ಹಿಂದೂ ಮಹನೀಯರೆ ಸಭಾಮಂಟಪದಲ್ಲಿ ನಮ್ಮ ಹರಿಜನಬಾಂಧವರು ಸಹಪಂಕ್ತಿ ಭೋಜನವನ್ನು ಏರ್ಪಡಿಸಿದ್ದಾರೆ. ಸರ್ವರೂ ದಯಮಾಡಿಸಬೇಕಾಗಿ ಪ್ರಾರ್ಥನೆ.ಸುಂದರ್ ರಾಮ್ ಸುರೇಶ್ : ಬಹಳ ಸಂತೋಷ ನಡೆಯಿರಿ ಹೋಗೋಣ.

೧೩ ಹಾಡು : ಇದೀಗ ಹರಿಜನ ನಿಜಸೇವೆ ||ಪ||
ಇದೀಗ ವರತೆರ ಹರಿಸೇವೆ ||ಅ||

ಮದುರುದ ಮಾತುಗಳಾಡುತೆ ಬಾಯಲಿ
ಹೃದಯದಿ ಬೆದುಕುದು ಬೇಯುತೆ ಭೇದದಿ
ಮುದದಿ ಸಹೋದರನಂದದಿ ನಟಿಸುತೆ
ಕ್ಷುದ ಭೇದವ ಪೊಂದೆಯೀ ಸೇವೆಯೆ ||೧||

ಮನದೊಳಗೊಂದೆ ಮಾತಿನೊಳೊಂದೆ |
ಹರಿಜನ ಸೇವಾಕಾರ್ಯದೊಳೊಂದೆ |
ಯೆಂಬಭಿಮಾನದ ಕಾರ್ಯದೊಳೆಂದೆ
ಹರಿಜನಭೇದವು ಅಳಿವುದು ಮುಂದೆ

೩ನೇ ಅಂಕ ಮುಕ್ತಾಯ

 

೪ನೆ ಅಂಕ ಪ್ರಾರಂಭ
(ಭಗವಾನ್ ದಾಸ್‌ನ ವಿವಾಹ)

ಧಾರಾಮುಹೂರ್ತಾರಾಂಭ

ಭಗವಾನ್ ದಾಸರು ಧಾರಾಮುಹೂರ್ತಕ್ಕೆ ಬರುವುದು ಕಾಂಗ್ರೆಸ್ ಪ್ರೆಸಿಡೆಂಟರು ಸುರೇಶ್, ತಾರಾಜಿ, ರಾಧಾಬಾಯ್ ಇವರು ಧಾರಾ ಮುಹೂರ್ತ ಮಾಡುವುದು.

ಮುತ್ತೈದೆ ಶೋಭಾನೆ

೧೪ ಹಾಡು : ಮಂಗಳ ಮದುಮಗಳೀಗೆ ಮಂಗಳ ಮಧುಮಗಳಿಗೆ
ಮಂಗಳವಾಗಲೀ ಸಭಿಗೆಲ್ಲ ||ಶೋ||

ಹಿತದಿಂದ ಬಾಳಾಲಿ ಸುತರನ್ನು ಪಡೆಯಲಿ
ಮತಿವಂತರಾಗಿ ಬದುಕಲಿ || ಶೋ||

ಗೆಲುವಿನಿಂದ ಬಾಳಲಿ ಬಲುದಿನ ಬದುಕಲಿ
ಬೈಲಾಗಲಿ ಬಂದ ಕಷ್ಟವೆಲ್ಲ ||ಕ||

ಬೈಲಾಗಲಿ ಬಮದ ಕಷ್ಟನಿಷ್ಠೂರವೆಲ್ಲ
ಘನಭಾಗ್ಯ ಪಡೆದು ಬದುಕಲಿ ||ಕ||

ಮಂಗಳ ಮಾಧವನೀಗೆ ಮಂಗಳ ಭೂಧವಗೆ
ಮಂಗಳವೀ ದೇಶ ಹಿತೈಷಿಗಳಿಗೆ ||ಕ||

ಮಂಗಳ ನಮ್ಮ ದೇಶ ಹಿತೈಷಿ ಸಜ್ಜನಕೆಲ್ಲ |
ಮಂಗಳವಾಗಲೀ ಜಗಕೆಲ್ಲ ||ಕ||

ವಿವಾಹ ಮುಕ್ತಾಯ

ಹರಿಜನಸಭೆ : (ಕಾಂಗ್ರೆಸ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ)

ಮಾನ್ಯ ಅಧ್ಯಕ್ಷರೆ, ಸಭಿಕರೆ, ನೂತನ ದಂಪತಿಗಳೇ ಹರಿಜನ ಕೇರಿಯಲ್ಲಿ ಸವರ್ಣೀಗಳು ವಿವಾಹ ನಡೆಸುವುದು ಭಾರತ ಚರಿತ್ರೆಯಲ್ಲೆಲ್ಲೂ ಎಂದೂ ಆಗದ ಒಂದು ಕಾರ್ಯ. ಹರಿಜನೋದ್ಧಾರಕೆ ಹಿಂದಿನಿಂದಲೂ ಅನೇಕ ಮಹನೀಯರು ಪ್ರಭಲಯತ್ನ ನಡೆಸಿದರು ಫಲವೇನು ಆಗಿಲ್ಲ. ಈಗ ಮಹಾತ್ಮಗಾಂಧಿ ಇದಕ್ಕಾಗಿ ನಿಂತು ಸತತ ದುಡಿಯುತ್ತಿದ್ದಾರೆ. ಇಂದು ಫಲಕಾರಿಯಾಗುತ್ತೆಂದು ಪೂರ್ಣಭರವಸೆ ಎಲ್ಲರಿಗೂ ಮೂಡಿದ ನಾಗರೀಕತೆ, ವಿದ್ಯೆಗಳೆರಡೂ ಜನತೆಯಲ್ಲಿ ಹೆಚ್ಚಿದಂತೆಲ್ಲಾ ಕೋಮುವಾರು ಭಾವನೆ ಅಳಿಸಿ ದೇಶಾಭಿಮಾನ ಉಂಟಾಗಿ ಒಗ್ಗಟ್ಟು ಹೆಚ್ಚಾಗುತ್ತದೆ. ಭಾರತಾದ್ಯಂತ ಹರಿಜನೋದ್ಧಾರ ಕಾರ್ಯ ಭರದಿಂದ ಸಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾಗುವುದರೊಳಗಾಗಿ ಇವರಿಗೆ ಸಮಾಜ ಸಮಾನತೆಯಾಗಿಸುವ ಸಲುವಾಗಿ ಹರಿಜನ ಗೃಹಪ್ರವೇಶ, ಸಹಪಂಕ್ತಿ ಭೋಜನ ಅಲ್ಲಲ್ಲಿ ನಡೆಯುತ್ತಿವೆ. ಸಾರ್ವಜನಿಕ ಕೆರೆಬಾವಿ, ದೇವಾಲಯ, ಕ್ಷೌರ, ಬಟ್ಟೆ ಅಮಗಡಿಗಳಿಗೆಲ್ಲಾ ನಮ್ಮ ಕಾಂಗ್ರೆಸ್ ಸಂಸ್ಥೆಯವರು ಪ್ರಯತ್ನಿಸುತ್ತಿದ್ದಾರೆ. ಶೀಘ್ರದಲ್ಲಿ ಅದು ಕಾರ್ಯಾರಂಭಕ್ಕೆ ಬರುವುದು. ಇನ್ನ ವಧುವರರಿಗೆ ಆಶೀರ್ವದಿಸಿ ಭಾಷಣ ಮುಗಿಸುತ್ತೇನೆ.

ಅಧ್ಯಕ್ಷ ಭಾಷಣ

ಸಭಿಕರೆ, ವಧುವರರೆ ೭೫೦೦ ಮೈಲು ದೂರದಿಂದ ಬಂದು ಈ ಪವಿತ್ರ ಭಾರತವನ್ನು ಗೆದ್ದು ೩೫೦ ವರ್ಷಗಳಿಂದ ನಮ್ಮ ದೇಶದ ಆಯಿತೈಶ್ವರ್ಯವನ್ನೆಲ್ಲಾ ಸೂರೆ ಮಾಡಿ ನಮ್ಮನ್ನು ಬಡತನಕ್ಕೀಡುಮಾಡಿ ಗುಲಾಮರನ್ನಾಗಿ ಮಾಡಿರುವ ಪರಕೀಯರನ್ನು ಹೊರದೂಡಿ ಭಾರತೀಯರನ್ನ ಪರದೇಶದವರಂತೆ ಸ್ವಾತಂತ್ರ್ಯರು ಸರಿಸಮಾನರೆನಿಸುವುದೊಂದು. ಯುಗಾಂತರದಿಂದಲು ಅನೇಕ ಮಹನೀಯರ ಶ್ರಮಿಸಿದರು ಸರಿಯಾಗದೆ ಸಮಾಜದಲ್ಲಿ ಸಮಾನತೆ ಸಿಕ್ಕದೆ ಜಾತಿ ಭೇದದ ಯಾತನೆಯಿಂದ ನರಳುತ್ತಿರುವ ನನ್ನ ಹರಿಜನ ಸಹೋದರರಿಗೆ ಜಾತಿಭೇದ ನಿರ್ಮೂಲ ಮಾಡಿ ಭಾರತೀಯರಂತೆ ಎಲ್ಲದರಲ್ಲೂ ಸರಿಸಮಾನತೆ ಹೊಂದುವಂತೆ ಮಾಡಬೇಕೆಂಬುವುದು ಮತ್ತೊಂದು. ಇವೆರಡಕ್ಕಾಗಿ ಮಹಾತ್ಮಗಾಂಧಿಯವರು ಅವತಾರವೆತ್ತಿರುವುದು. ಇನ್ನು ಶೀಘ್ರದಲ್ಲಿಯೇ ಭಾರತ ಮಾತೆಯ ಶೃಂಕಲೆಯು ಸಡಿಲವಾಗಿ ಹೇಗೆ ಸ್ವಾತಂತ್ರಳಾಗುತ್ತಾಳೊ ಹಾಗೆಯೆ ಹರಿಜನರು ಸ್ವಾತಂತ್ರ್ಯರಾಗುತ್ತಾರೆಂದು ಈ ವೇದಿಕೆಯಿಂದ ಭರವಸೆ ನೀಡುತ್ತೇನೆ. ಇಲ್ಲದಿದ್ದಲ್ಲಿ ಕೋಮುವಾರು ವಿಷಗಾಳಿ ಭಾರತಾದ್ಯಂತ ಆವರಿಸಿ ಶೀಘ್ರದಲೆಗಳಿಸಲಿರುವ ಸ್ವರಾಜ್ಯವನ್ನು ಶೀಘ್ರದಲ್ಲೆ ಪುನಃ ಪರಕೀಯರಿಗೊಪ್ಪಿಸಿ ಕೈಮುಗಿದು ಮತ್ತೆ ಗುಲಾಮತನವೇ ನಮ್ಮ ಬಾಳುವೆಯೆಂದು ಕುಳಿತುಕೊಳ್ಳಬೆಕಾಗುತ್ತದೆ. ಹರಿಜನರು ಸಹ ತಾವು ಕೀಳೆಂಬ ಭಾವವನ್ನಳಿಸಿ ನಾವು ಭಾರತೀಯರು ಭಾರತೀಯನಿಗಿರುವ ಮೂಲಭೂತ ಹಕ್ಕು ನಮಗೂ ಇದೆ. ಸಮಾಜದಲ್ಲಿ ನಮಗೂ ಸರಿಸಮಾನತೆ ಬೇಕು ಎಂಬುದನ್ನು ದೃಢನಂಬಿಕೆ ಮೂಡಬೇಕು. ಮಹಾತ್ಮನ ಆಸೆಗಳೆರಡು ಈಡೇರಲೆಂದು ಭಗವಂತನನ್ನು ಪ್ರಾರ್ಥಿಸಿ ದಂಪತಿಗಳಿಗೆ ಆಶೀರ್ವದಿಸಿ ಭಾಷಣ ನಿಲ್ಲಿಸುತ್ತೇನೆ.

ಭಗವಾನ್ ದಾಸರ ಭಾಷಣ

ಮಾನ್ಯ ಅಧ್ಯಕ್ಷರೆ ಸಹೋದರ ಸಹೋದರಿಯರೆ ಉಕ್ಕಿ ಬರುವ ಹೆಚ್ಚು ಸಂತೋಷದಿಂದ ಭಾಷಣ ಮಾಡಲು ಮಾತುಗಳೆ ಹೊರಡವು. ಇದು ವಿವಾಹದಿಂದಲ್ಲ. ಈ ನನ್ನ ವಿವಾಹಕ್ಕೆ ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗರಾದಿಯಾಗಿ ದಯಮಾಡಿಸಿದಿರಲ್ಲಾ ಎಂದು. ಇದಕ್ಕೆ ಭಾರತದಲ್ಲಿ ನಾನೇ ಭಾಗ್ಯಶಾಲಿ. ನಾನು ಈ ಮತದಲ್ಲೆ ಜನ್ಮತಾಳಿ ನಮಗಿರುವ ಮತಭೇದದ ಮಹಾಯಾತನೆಯನ್ನು ಸ್ವತಃ ಅನುಭವಿಸಿ ಸಹಿಸಲಾರದೆ ಅನ್ಯಮತಾವಲಂಭಿಯಾಗಬೇಕೆಂದು ಆಗಲೇ ತೀರ್ಮಾನಿಸಿದ್ದ ನನಗೆ ಈ ದಿನದ ಕಾರ್ಯ ನೋಡಿದರೆ ನನಗೆ ನಾಚಿಗೆಯಾಗುತ್ತೆ. ಪೂಜ್ಯ ಎ.ಸಿ.ರಾಮಚಂದ್ರರಾವ್ ಅತ್ರಿಯವರ ಹಿತೋಕ್ತೀಯಿಂದ ಖಾದಿದಾರಿ ಕಾಂಗ್ರೆಸ್ ಸಂಸ್ಥೆಗೆ ಸೆರಿ ಕೆಲ್ಸಕಾರ್ಯಗಳನ್ನು ನಡೆಸಿಕೊಂಡು ಬಂದೆನು. ಆದರೂ ಇನ್ನು ಜಾತಿ ಕಳಂಕದ ಕಲ್ಮಶವು ಒಳಗೊಳಗೆ ಇದ್ದೇ ಇತ್ತು. ಇದು ಸದ್ಯದಲ್ಲೇ ನಿರ್ಮೂಲವಾಗಿ ಸಮಾಜ ಸಮಾನತೆಯೊದಗುತ್ತೆಂಬ ಆಶಾಕಿರಣ ಒಂದು ನನಗೆ ಮೂಡುತ್ತಿದೆ.

ಮಹನೀಯರೆ ತಾವೆಲ್ಲರೂ ನನ್ನನ್ನು ತನ್ನೊಬ್ಬ ಕುಮಾರನೊಬ್ಬನಂತೆ ಭಾವಿಸಿ ಈ ದಿನದ ಕಾರ್ಯನೆರವೇರಿಸಿ ನಮ್ಮನ್ನು ಆಶೀರ್ವದಿಸಿದ್ದಕ್ಕಾಗಿ ತಮ್ಮೆಲ್ಲರಿಗೂ ನಾನು ಚಿರ ಋಣಿ. ತಮ್ಮೆಲ್ಲರನ್ನು ಭಗವಂತನು ಕಾಪಾಡಲೆಂದು ಪ್ರಾರ್ಥಿಸುತ್ತೇನೆ.

ವಿವಾಹ ಮುಕ್ತಾಯ

ಮಹನೀಯರ ಮದುವೆ ಮಂಟಪದಲ್ಲೇ ಹರಿಜನ ಸಹಪಂಕ್ತಿ ಭೋಜನವೇರ್ಪಡಿಸಿದೆ. ಸರ್ವರು ದಯಮಾಡಿಸಬೇಕಾಗಿ ಪ್ರಾರ್ಥನೆ.

ಹಾಡು :             ಇದೀಗ ಹರಿಜನ ನಿಜಸೇವೆ
– – – – – – – – – – – –
– – – – – – – – – – –
– – – – – – – – – – –
ಹರಿಜನಭೇದವು ಅಳಿವುದು ಮುಂದೆ

(ನಡುಬೇಸಿಗೆ ಮಧ್ಯಾಹ್ನದ ಬಿಸಿಲು ಒಬ್ಬ ತೋಪಿನಲ್ಲಿ ಕುಳಿತಿದ್ದಾನೆ.

ರಾಜೇಗೌಡ : ಬನ್ನಿ ಸ್ವಾಮಿ. ಎಲ್ಲಿಂದಲೊ ಬಿಸಿನಲ್ಲೆ ಬಲುದೂರದಿಂದ ನಡೆದೆ ಬಂದಿರೋ ಹಾಗೆ ಕಾಣುತ್ತೆ. ಮುಖದಲ್ಲಿ ಬೆವರು ಹರಿಯುತ್ತಿದೆ. ಬನ್ನಿ ದಯಮಾಡಿಸಿ. ಇತ್ತ ಕುಳಿತುಕೊಳ್ಳಿ. ಹಿಪ್ಪೆ ಮರದ ನೆರಳು ಬಹಳ ತಂಪಾಗಿದೆ. ಸ್ವಲ್ಪ ಸುಧಾರಿಸಿಕೊಂಡು ಅನಂತರ ಹೋಗಬಹುದಲ್ಲಾ. ನಮ್ಮ ತೋಟ ಇಲ್ಲಿಗೆ ಬಹಳ ದೂರ. ಇಲ್ಲದಿದ್ದರೆ ಎಳನೀರು ತರಿಸಿಕೊಡುತ್ತಿದ್ದೆ. ಎಲ್ಲಿಂದ ಬಂದಿರಿ. ಎಲ್ಲಿಗೆ ಹೋಗಬೇಕು.

ಆನಂದಾಸ್ : ನಾನು ಮೈಸೂರಿನಿಂದ ಬಂದು ಮಂದಗೆರೆಯಲ್ಲಿಳಿದು ಅಲ್ಲಿಂದ ನಡೆದೆ ಬಂದೆನು. ಈಗ ಧರ್ಮಪುರಿಗೆ ಹೋಗಬೇಕು. ನಡುಬೇಸಿಗೆಯ ಬಿಸಿಲು ಬೇರೆ. ಹಾಳು ಬಸ್ಸುಗಾಡಿಗಳ ಸಂಚಾರವಿಲ್ಲ. ಕಾಲುನಡಿಗೆಯಲ್ಲೆ ಹೋಗಬೇಕು.

ರಾಜೇಗೌಡ : ಓಹೊ, ಧರ್ಮಪುರ. ಇನ್ನು ೫ ಮೈಲಿದೆ ಸ್ವಾಮಿ. ಇರಲಿ, ಸುಧಾರಿಸಿಕೊಳ್ಳಿ ಸ್ವಲ್ಪ ತಂಪಾಗಿ ಗಾಳಿ ಬೀಸಿಕೊಳ್ಳಲಿ. ಮೈಸೂರಿಗೆ ಏನು ಕೆಲ್ಸಕ್ಕಾಗಿ ಹೋಗಿದ್ದಿರಿ ಸ್ವಾಮಿ. ತಾವು ಯಾವುದೊ ಕೆಲ್ಸದ ಮೇಲೆ ಇರೋ ಹಾಗೆ ಕಾಣ್ಸುತ್ತೆ.

ಆನಂದಾಸ್ : ನಾನು ಮೈಸೂರಿನಲ್ಲಿ ಬಿ.ಎ. ಓದುತ್ತಿದ್ದೇನೆ.

ರಾಜೇಗೌಡ : ಬಹಳ ಸಂತೋಷ, ಬಹಳ ಸಂತೋಷ ಸ್ವಾಮಿ. ಈ ಕಾಲದಲ್ಲಿ ಓದಬೇಕು ಸ್ವಾಮಿ. ನಮ್ಮೋರು ಓದದೆಯಿರೊದಿಂದ್ಲೆ ಬ್ರಾಹ್ಮಣ ಆಳ್ವಿಕೆಯಾಗಿ ನಮ್ನೆಲ್ಲ ತುಳ್ಕೊಂಡಿರೋದು. ಈಗೀಗ ಹೊಲೆಮಾದಿಗರೆಲ್ಲ ಬಿ.ಎ. ಯ.ಮ್ಮೆನ್ನೆಲ್ಲ ಓದಿಬಿಟ್ರು ಸ್ವಾಮಿ. ತಾವು ಧರ್ಮಪುರಿಯಲ್ಲಿ ಯಾರ ಮಕ್ಕಳೊ ಕಾಣೆ. ದೊಡ್ಡಮನೆ ಬೋಜೆ ಗೌಡ್ರ ಮನೆಯಂಗೆ ಕಾಣ್ತದೆ. ಅವರು ನಿಮಗೇನಾಗಬೇಕೊ ಕಾಣೆ.

ಆನಂದಾಸ್ : ಅವರೆ ಬೇರೆ ನಾವೆ ಬೇರೆ.

ರಾಜೇಗೌಡ : ಹಾಗಾದ್ರೆ ನಿಮ್ಮ ತಂದೆಯವರ ನಾಮಾಂಕಿತ.

ಆನಂದಾಸ್ : ಅವರು ನಿಮಗೆ ಗೊತ್ತಿಲ್ಲ. ಅವರು ಹೆಸರು ರಾಮಯ್ಯ ಅಂತ.

ರಾಜೇಗೌಡ : ರಾಮಪ್ಪ. ಬಹಳ ಸಂತೋಷ. ಯಾವ ರಾಮಪ್ರೋಧರ್ಮಪುರಿಯಲ್ಲಿ ಯಲ್ಲರು ಗೊತ್ತು. ಚಿಕ್ಕಂದಿನಲ್ಲಿ ಅಲ್ಲಿಯೆ ಬೆಳೆದೋನು ನಾನು. ನಮ್ಮ ತಾಯಿ ತೌರೂರು ಧರ್ಮಪುರಿಯೆ. ನಿಮ್ಗೆ ಗೊತ್ತಿಲ್ಲ. ಚಿಕ್ಕಂದಿನಿಂದ ಮೈಸೂರಿನಲ್ಲೆ ಓದಕ್ಕೊಂಡು ಇದ್ದೋರು ಅನ್ಸುತ್ತೆ ಅದ್ಕೆ ನೀವು ನನ್ಗೆ ಗೊತ್ತಿಲ್ಲ. ನಿಮ್ದು ಯಾವ ಮತ ಸ್ವಾಮಿ. ನೋಡಿದ್ರೆ ಲಿಂಗಾಯ್ತು ಮತದೋರಂತೆ ಕಾಣ್ತೆರಿ.

ಆನಂದಾಸ್ : ನಾವು ಹರಿಜನ ಮತದೋರು.

ರಾಜೇಗೌಡ : ಹಾಗಂದ್ರೆ ಗೊತ್ತಾಗಲಿಲ್ಲವಲ್ಲಾ ಸ್ವಾಮಿ.

ಆನಂದಾಸ್ : ಆದಿ ಕರ್ನಾಟಕರೆಂದರೆ ಗೊತ್ತೋ

ರಾಜೇಗೌಡ : (ದೂರ ಸರಿದು ಕುಳಿತುಕೊಂಡು, ಕೋಪದಿಂದ ಏನು ಓಹೋ ನೀನು ಪಕ್ಕದಲ್ಲೆ ಬಂದು ಕುಳಿತುಕೊಂಡೆ. ಓದಿದ ಮಾತ್ರಕ್ಕೆ ಮೇಲ್ಜಾತಿ ಕೀಳ್ಜಾತಿ ಅಂತ ದೇವ್ರು ಯಾಕೆ ಮಾಡಿದ್ದಾನೆ. ಯೆಲ್ಲಾ ಒಂದೆ ಏನು. ಹಣೆ ಉಬ್ಬು ಮೇಲು ಅಂತ ಯಾಕಾಯ್ತು ಓದಿದ್ದೀನಿ ಅಂತೀಯಲ್ಲಾ. ಯಿದೆಯೇನ ನೀನು ಓದಿರೋದು. ನೀನು ನಮ್ಮ ಉತ್ತಮ ಕುಲದೋರ್ನ ಕಂಡ್ರೆ ಎಷ್ಟು ಭಯ, ಎಷ್ಟು ಅಂಜಿಕೆ, ಮರ್ಯಾದೆ ಇರಬೇಕು.

ಆನಂದಾಸ್ : ನೀನೆ ನನ್ನನ್ನು ಬಾ ಕುಳಿತುಕೊ ಅಂತ ದಾರಿಯಲ್ಲಿ ಹೋಗುತ್ತ ಇದ್ದವನನ್ನು ಕರೆದೆ.

ರಾಜೇಗೌಡ : ಏನೊ, ನೀನು ತಾನು ಅಂತಾ ಮಾತಾಡ್ತಿ.

ಆನಂದಾಸ್ : ನೀನು ಮಾತಾಡ್ದ ಹಾಗೆ ನಾನು ಮಾತಾಡುತ್ತೇನೆ. ಯಾರು ನನಗೆ ಮರ್ಯಾದೆ ಕೊಡುತ್ತಾರೊ. ಅವರಿಗೆ ನಾನು ಮರ್ಯಾದೆ ಕೊಡುತ್ತೇನೆ. ನಾನು ನಿನ್ನಂತೆ ಮನುಷ್ಯನಲ್ಲವೆ.

ರಾಜೇಗೌಡ : ನಾನು ಮಾತಾಡಿದ್ರೆ ನೀನು ಮಾತಾಡ್ಬೇಕೊ. ಕೀಳು ಜಾತಿಯವ್ನು ನೀನು. ಇಂತಾ ಜಾತ್ಯೋನ ಅಂತ ಗೊತ್ತಿಲ್ಲದೆ, ಸ್ವಾಮಿ, ಸ್ವಾಮಿ, ಬುದ್ದಿ ಅಂತ ಅಂದ್ಬಿಟ್ಟೆನಲ್ಲಾ. ನಿಮ್ಮ ವಂಶ ಹಾಳಾಗಿ ಹೋಗೊದಿವ್ವೆ. ಆ ಪಾಪ ನಿನ್ಗೆ ಹೊರ್ತು ನನ್ಗೇನಲ್ಲ. ಗೌಡ್ರು ಇಲ್ಲಿ ಕುಳಿತಿದ್ದಾನೆ. ನಾನು ಇಂತಾ ಜಾತ್ಯೋನು ಅಂತ, ನನ್ನ್ನನು ಸ್ವಾಮಿ ಅಂತಾರೆ. ಬನ್ನಿ ಕುಳಿತುಕೊ ಅಂತಾರೆ. ನನ್ನನ್ನು ಸ್ವಾಮಿ ಅಂತ ಗೊತ್ತಿಲ್ದೆ ಯಾಕಂದ್ರು ಪಾಪ ಹೊರುಸುತ್ತೀರಿ ಅಮತ ಬೇಗ ಕಾಲಿನಲ್ಲಿರುವ ಯಕ್ಕಡಾವನ್ನು ದೂರಬಿಟ್ಟು ಶರಾಯಿ ಮೇಲ್ಕೆ ಮುದುರಿಕೊಂಡು ಕೈ ಮುಕ್ಕೊಂಡು ನಿಂತ್ಗೊಳ್ದೆ ಜೊತೆ ಬಂದು ಪಕ್ಕದಲೆ ಕುಳಿತುಕೊಂಡೆಲ್ಲಾ. ಇದು ಧರ್ಮವೊ? ನ್ಯಾಯವೊ. ನೀನೆ ಯೋಚನೆ ಮಾಡು. ನಿನ್ನದು ತಪ್ಪು. ನಮ್ಮನೇಲಿ ಜೀತ ಮಾಡ್ತಿದ್ದೋರ ಮಕ್ಕಳೆಲ್ಲ ನಿಮ್ಮಂಗೆ ಓದಿ, ನಮ್ಮ ಬಾಯ್ಲೆಲ್ಲ ಬುದ್ದಿ, ಸ್ವಾಮಿ ಅನ್ನಿಸಿಕೊಳ್ಳುವತ್ಗೆ ಮಳೆಬೆಳೆ ಆಗ್ದೆ, ಬರ ಬಂತು. ಇದೆಲ್ಲ ನಿಮ್ಮಿಂದರೆ. ಹೀಂಗಾದ್ರೆ ಆಯ್ತು. ಈ ಲೋಕದ ಗತಿ.

ಆನಂದಾಸ್ : ಆಗಲಿ. ನೀನೆಂದಾರ ಅಂದುಕೊ. ನಿನ್ನ ಸಂಗಡ ಹೆಚ್ಚು ಮಾತಾಡಿದರೆ ಪ್ರಯೋಜನವಿಲ್ಲ. ನಿನಗೆ ಈಗಿನ ಪ್ರಪಂಚ ಗೊತ್ತಿಲ್ಲ.

೧೫ ಹಾಡು : ಜಾತಿಗೆಟ್ಟರೆಮಗುಂಟುಂಟಾಗ ಸುಖ ||ಪ||
ನೀಗುವುದತಿ ಮತಭೇದ ದುಃಖ ||ಅ||

ಪಂಚಮರೆಂದರ ಪಾವನಮಿಲ್ಲ ಆದಿಕರ್ನಾಟಕ ಸಲ್ಲ |
ಹರಿಜನರೆಂದರು ಹರಿಯವೆ ಇಲ್ಲ ಏನೆಂದರು ಸುಖಮಿವಿಲ್ಲವಲ್ಲ |
ಹೊಲೆಯರು ಮಾದಿಗರೆಂಬುವ ಸೊಲ್ಲು ಅಳಿಯದು ಸಾವಿರ ಶತಮಾನ||
ತಿಳಿದಿದಪರಮಮತಕಿಳಿಯದಿರ್ದೊಡೆಯಿಳೆ ಬಾಳು ಚಿರಹೊಳೆಬಾಳು
ಅಧಿಕಮೋದಿ ಅಧಿಕಾರಿಯಾದರೇ ಮುಡದಿ ಬಾಳಲೆವಗನುವಿಲ್ಲ|
ಸಿಂಧು ಗುಣಾಢ್ಯ ಧನಾಢ್ಯ ಸುಶೀಲನಾಗಿದ್ದರೂ ನಾಯಿಯ ಕುಲಮೇಡು|

ಮಾತು : ಹರಿಜನ ಗೋತ್ರದಲ್ಲಿ ನಿಜವಾಗಿಯೂ ಹುಟ್ಟುಬಾರದು. ಹುಟ್ಟಬಾರದು ಹುಟ್ಟಿದರು ಖಂಡಿತಾ ವಿದ್ಯಾವಂತನಾಗದೆ ಮೂಕು ಪ್ರಾಣಿಗಳಂತಿರಬೇಕು. ಹರಿಜನರಿಗಿರುವ ಕಷ್ಟಸಮಾನಗಳು ಹರಿಜನರಿಗೆ ಗೊತ್ತಿಲ್ಲದೆ ಮತ್ಯಾರಿಗೂ ಗೊತ್ತಾಗುವುದಿಲ್ಲ. ಸ್ವರಾಜ್ಯವು ನಮಗೆ ಬೇಡ, ಸ್ವಾತಂತ್ರವೂ ನಮಗೆ ಬೇಡ. ಭಾರತ ಭೂಮಿಯ ಭಾದ್ಯತೆಯು ನಮಗೆ ಬೇಡ. ಛೆ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಹಿಂದೂ ರೀತಿ ನೀತಿಗಳಿಗೆ ಧಿಕ್ಕಾರವಿರಲಿ. ಅನ್ಯ ಮತಾವಲಂಭಿಯಾದರೆ ಬೇಗ ಅಳಿಸಿ ಹೋಗುವುದೆ ಪರಂತು ಸಾವಿರ ಶತಮಾನವಾದರೂ ಇಂತಾಕಷ್ಟಾಸಮಾನದ ಬಾಳಿನಲ್ಲೆ ಬಾಳಬೇಕು.

ಸಿದ್ದಮ್ಮ : ಮನೆಯಲ್ಲಿ ತೇಯ್ದುಕೊಂಡು ಕುಡಿಯುತ್ತೇನೆಂದರು ಒಂದು ಕಾಸಿಲ್ಲ. ಒಂದು ಕಾಳು ಇಲ್ಲ. ಮೂರು ದಿನದಿಂದ ಮಕ್ಕಳೆಲ್ಲಾ ಹಸಿದು ಸಂಕಟದಿಂದ ಸಾಯುತ್ತಿವೆ. ಯಜಮಾನರು, ತಾನು ಒಂದು ದಿನವು ಬಿಡುವಿಲ್ಲದಂತೆ ಬೆಳಗಿನಿಂದ ಸಂಜೆಯವರೆಗೂ ದುಡಿದರೂ ಹಾಗೂ ಹೊಟ್ಟೆಬಟ್ಟಿಗೆ ಸಾಲದು. ನಾನು ಲಗ್ನವಾಗಿ ಈ ಮನೆಗೆ ಬಂದಾಗಿನಿಂದ ಹೊಟ್ಟೇನೆ ಕಟ್ಟಿ ಕಟ್ಟಿ ಸಾಕಾಯ್ತು ಇದ್ದಷ್ಟು ಹೊಲ ತೋಟನ್ನೆಲ್ಲ ಮದುವೆ ಸಾಲಕ್ಕಾಗಿ ಒಂದೊರ್ಷದಲ್ಲೆ ಗೌಡರು ವಹಿಸಿಕೊಂಡರು ಎಳೆ ಮಗು ಬೇರೆ ತುಂಬಾ ಕಾಯಿಲೆ ಸಾಯುತ್ತಾ ಬಿದ್ದಿದೆ.

ಬೈರ : ಯೋಚಿಸ ಬೇಡ ಎಲ್ಲೂ ನಮ್ಮವರ ಬಾಳೆ ಬಡತನದ ಮತ್ತು ಭೇದಬಾಳು. ನಿನ್ನೆ ಡಾಕ್ಟರು ಹೇಳಿದಂತೆ ಹಾಲುಕೊಂಡುಕೊಂಡು ಬಂದು ಔಷಧವನ್ನು ಹಾಲಿನಲ್ಲಿ ಬೆರಸಿ ಮಗುವಿಗೆ ಕುಡಿಸು. ನಾನು ಈಗ ಹೋಗಿ ಗೌಡರ ಮನೆಗೆ ಜೀತಕ್ಕೆ ಹೋಗುತ್ತೇನೆ. ಸಂಜೆ ದಿನಸಿ ತೆಗೆದುಕೊಂಡುಬರುತ್ತೇನೆ. ನೀನು ಬೇಗ ಹೋಗಿ ಮಾರುವವರ ಹತ್ತಿರ ಹಾಲು ತೆಗೆದುಕೊಂಡು ಬಾ.

ರಾಜೈಯ್ಯಂಗಾರ್ : ವೊ ಭೈರ ನಿನ್ನೆ ಯಾತಕ್ಕೊ ಜೀತಕ್ಕೆ ಬರಲಿಲ್ಲ. ಸಾಲಕೊಟ್ಟೀರೋನು ನಿಮ್ಮಪ್ಪನ ಮನೆದೇನು ಹಣ ಬಡ್ಡಿ ಬೇಗ ತಂದುಕೊಡು ನೀನೇನು ಜೀತಕ್ಕೆ ಬರಬೇಡ. ನಿಮ್ಮವರೆಲ್ಲ ಓದಿದಾರೆಂದೊ, ನೀನು ಓದು ಹೋಗು.

ಭೈರ : ನಿನ್ನೆ ಜೀತಕ್ಕೆ ಬರಲಿಲ್ಲ ಮನೆಯಲ್ಲಿ ಮಗುವಿಗೆ ತುಂಬಾ ಕಾಯಿಲೆ. ಮೊನ್ನೆಯಿಂದ ಮನೆಯಲ್ಲಿ ಒಲೆಯನ್ನೆ ಹೊತ್ತಿಸಿಲ್ಲ. ಮಕ್ಕಳೆಲ್ಲಾ ಹಸುವಿನಿಂದ ಸಾಯುತ್ತಿವೆ ಏನಾದರೂ ಕೊಡಿ.

ರಾಜೈಯ್ಯಂಗಾರ್ : ಈಗ ನಡಿ ತೋಟ ಅಗಿ ಸಂಜೆ ಮನೆಗೆ ಹೋಗುವಾಗ ಈಸಿಕಂಡು ಹೋಗು.

(ತೋಟವನ್ನು ಅಗೆಯುತ್ತ)

೧೬ ಹಾಡು : ಬೆಳಗಿನಿಂದ ನಾವ್ ಸಂಜೆಯವರೆಗೂ |
ಹೊಲ ಗದ್ದೆ ಗೌಡದ ತೋಟದಿ ದಿನವೂ |
ಬಲುಬೆವರನು ನಾವ್ ಸುರಿಸುತೆ ಗೆಯ್ದರು
ಬಳಲುತೆ ಹಸುವಿಂ ಸಂಕಟಪಡುವೆನ್ ||೧||

ಹೊಲಗದ್ದೆ ಗೌಡನ ಸಾಲಕೆ ಸೇರಿಸಿ
ಬೆಳೆದು ದವನ ಮನೆ ಕಣಜವ ತುಂಬುತೆ
ಕೆಲಸ ಜೀತದಿಂ ಹೊಟ್ಟೆಯ ಹೊರೆಯುತೆ
ಹೊಲ ಮನೆಯಿಲ್ಲದೆ ತಿರುಕನೊಲು ||೨||

ಮಾತು : ನಮ್ಮವರಿಗೆ ಹೊಲ ತೋಟ ಗದ್ದೆ ರೇಷ್ಮೆಯಿರಲಿ. ಬೇರೆಯವರು ಹೇಗಾದರೂ ಮಾಡಿ ಉಪಾಯದಿಂದ ಚೆನ್ನಾಗಿ ಕುಡಿಸಿ ಉಣ್ಣಿಸಿ ತಿನ್ನಿಸಿ ಮಗನ ಮದುವೆ ಮಾಡೆಂದು ಬೋಧಿಸಿ ಪತ್ರ ಬರೆಸಿ ಸಾಲಕೊಟ್ಟು ಹಿತ ತೋರುವನಂತೆ ನಟಿಸಿ ಕೇವಲ ಒಂದೆರಡು ಸಾಲಕೊಟ್ಟು ವರ್ಷದಲ್ಲೆ ನಮ್ಮ ಆಸ್ತಿಪಾಸ್ತಿಗಳನ್ನೆಲ್ಲ ಕಸಿದುಕೊಂಡು ನಮ್ಮವರನ್ನು ಈ ರೀತಿ ಬಡತನಕ್ಕೀಡು ಮಾಡಿ ನರಳಬೇಕಾಗಿದೆ. ಭಾರತದ ಯಾವ ಊರಿನಲ್ಲೆ ಆಗಲಿ ನಮ್ಮವರ ಆಸ್ತಿಪಾಸ್ತಿಗಳೆಲ್ಲ ಬೇರೆಯವರಿಗೆ ಸೇರಿ ಹೋಗಿವೆ. ಅದಕ್ಕಾಗಿ ನಾನೇಕೆ ವ್ಯಥೆಪಡಲಿ. ನಮ್ಮವರ ಬಾಳೆ ಭೇದ ಮತ್ತು ಬಡತನದ ಬಾಳು.

ಕಾವಾಲೆ : ಹಾಲು ಬೇಕೆ ಹಾಲು

ಸಿದ್ದಮ್ಮ : ಪಾವು ಹಾಲು ಯಾಗವ್ವ ಹಾಲು. ಹಸುವಿನ ಹಾಲೊ ಯಮ್ಮೆದೊ ಮಗುವಿಗೆ ಔಷಧಿಗೆ ಬೇಕು.

ಕಾವಾಲೆ (ಹಾಲು ಮಾರುವವಳು) : ಅಚ್ಚ ಹಸುವಿನ ಹಾಲು. ಅಪ್ಪಟ ಹಾಲು. ನೀರು ಕೈಲಿ ಮುಟ್ಟಿಲ್ಲ. ತೆಗೆದುಕೊಳ್ಳಮ್ಮ. ಪಾವು ಒಂದಾಣೆ.

ಸಿದ್ದಮ್ಮ : ಒಂದು ಪಾವು ಕೊಡಿ. ತಕ್ಕೊಳ್ಳಿ ದುಡ್ಡು

ಕಾವಾಲೆಗಿತ್ತಿ : (ದುಡ್ಡ ಈಸಿಕೊಂಡು, ಹಾಲುಪಾವಿನಲ್ಲಿ ಹಿಡಿದುಕೊಂಡು) ನೀನು ಯಾರ ಮನೆಯವಳು. ಯಾವ ಜಾತಿ ನಿನ್ನದು.

ಸಿದ್ದಮ್ಮ : ನಾನು ಹೊರಕೇರಿ ಬೋರಯ್ಯನ ಸೊಸೆ.

ಕಾವಾಲೆ : ಯಾವ! ಆ ಕಡೆಯಿದೆಯಲ್ಲಾ. ಆ ಕೇರಿ ತೆಂಕ ದಿಕ್ಕಿನಲ್ಲಿ ಆ ಹುಲ್ಲು ಮನೆಗಳು ಅಲ್ಲಿತಾನೆ.

ಸಿದ್ದಮ್ಮ : ಹೌದು. ಆ ಕೇರಿ ತಾನೆ. ನನ್ನ ಮಗುವಿಗೆ ಸಕತ್ ಕಾಯಿಲೆ. ಔಷಧಿಗೆ ಹಾಲು ಬೇಕು. ಕೊಡಿ ತಾಯಿ. ಡಾಕ್ಟ್ರು ಹೇಳಿದ್ಯಾರೆ ಮಗು ಬಹಳ ಸುಸ್ತಾಗಿದೆ.

ಕಾವಾಲೆ : ಏನೇ ಹಾಲು ಕೇಳಲು ಬಂದಿದ್ದೀ ನಮ್ಮ ಹತ್ತಿರ. ಈಗ ಚೆನ್ನಾಯಿತು ಹೀನಾ ಜಾತಿ ಮುಂಡೆ. ಮಗು ಸಾಯುತ್ತಂತೆ ನಾವು ಹಾಲು ಕೊಡಬೇಕೊ, ಸಾಯೊ ವೇಳೆ ಅದಕೆ ನಮ್ಮ ಮನೆ ಹಸುಯಮ್ಮಗಳ ರಕ್ತಕರೆದು ಸಾಯ್ಲಿ ಅಂತಾ ಬಂದಿದ್ದೀರೊ ಆಗಲಿ ಊರಿಗೆ ನಡಿ. ಅಲ್ಲಿ ಹೇಳಿ ನಿನ್ನನ್ನು ಊರಿನ ಕರೆಕಲ್ಲಿಗೆ ಕಟ್ಟಿಸಿ, ಚೆನ್ನಾಗಿ ಹೊಡೆಸಿ ದಂಡ ತೆಗೆದುಕೊಳ್ಳುತ್ತೇನೆ. ಎಲಾ ಮುಂಡೆ ನಿಮ್ಮೋರೆಲ್ಲಾ ಹಿಂಗಾಗ್ರಿಂದ ಅಲ್ವೆ ಈ ಲೋಕ ಹೀಗಾಗಿರೋದು. ಮಳೆ ಬೆಳೆ ಇಲ್ಲದೆ.

೧೭ ಹಾಡು : ಹರಿಜನಬಾಳು ಭೇದದ ಗೋಳು ಇರಬಾರದು ಧರೆಯೊಳ್ ನಾವ್ |                             ಒಂದೆ ಭಾರತ ಬಂಧುಗಳೆಂದರೆ ಹರಿಯುವು ಭೇದಮಿದು ಯುಗಯುಗ|
ಬಡತನವೇನಿರೆ ಕಷ್ಟದಿ ಸಹಿಪೆವು. ಸಹಿಸೆವು ಬೇಗೆಯಿಂದ ದಿನ ದಿನ
ಉಡುಗಿಸಿಪ್ಪನಮ್ಮೆದೆಯೀಂ ಬೇಧವ ಹೊಡೆದೋಡಿಸುವರು ಆರಿಲವೆ.

ಮಾತು : ಲೋಕದಲ್ಲಿ ಯಾವ ಜಾತಿಗೆ ಸೇರಿರಲಿ. ಮಕ್ಕಳೆಂದರೆಲ್ಲ ಒಂದೆ. ಕಾಯಿಲೆಯಿಂದ ಸಾಯುತ್ತಿರುವ ನನ್ನ ಹಸುಗೂಸಿಗೆ ಹಾಲು ಬೇಕೆಂದು ಕೇಳಲು, ಕಾವಾಲೆಗಿತ್ತಿಯು ನನ್ನ ಜಾತಿಯನ್ನು ಕೇಳಿದ ತಕ್ಷಣವೆ ನನ್ನನ್ನು ಬೈಯ್ದು ಹೀಯಾಳಿಸಿ ಹಾಲು ನನಗೆ ಕೊಟ್ಟರೆ ಅವರ ಹಸು ಯಮ್ಮೆಗಳು ಹಾಲಿಗೆ ಬದಲು ರಕ್ತ ಕರೆಯುತ್ತವೆಂದು ಸಂಜೆ ಕರೆಕಲ್ಲಿಗೆ ಕಟ್ಟಿಸಿ ಹೊಡೆಸಿ ದಂಡ ತೆಗೆದುಕೊಳ್ಳುತ್ತೇನೆಂದು ಹೇಳಿ ಹೊರಟುಹೋದಳಲ್ಲ. ಛೆ ಇದೆಂತಾ ನಿರ್ಧಯ. ಹಿಂದು ಪವಿತ್ರ ಧರ್ಮ. ರೀತಿ ನೀತಿ ಸಂಸ್ಕೃತಿಗಳು ಇದ್ರು ತಾನೆ. ಸಾಯಲು ಮಲಗಿರುವ ಶಿಶುವಿಗೆ ಜಾತಿ ಭೇದ ದೆಸೆಯಿಂದ ಹಾಲು ಕೊಡದೆ ಬೈಯ್ದು ಕಳುಹಿಸಿದ ಹಿಂದು ಧರ್ಮ!!!

೪ನೇ ಅಂಕ ಮುಕ್ತಾಯ