ಜಗನ್ನಿಯಾಮಕನು ಜಗತ್ತಿನ ಲೀಲಾಜಾಲಗಳನ್ನಿರಿತು ಕಾಲಮಾನಗಳಿಗೆ ತಕ್ಕಂತೆ ಧರ್ಮ ಸಂಸ್ಥಾಪದನೆಗಾಗಿ ಆಗಾಗ ಅಲ್ಲಲ್ಲಿ ಅವತಾರವೆತ್ತಿ ದುಷ್ಟರನ್ನು ಶಿಷ್ಟರನ್ನಾಗಿಯೂ, ಪತಿತರನ್ನು ಪಾವನರನ್ನಾಗಿಯೂ ಮಾಡಿ ತನ್ನ ಕಾರ್ಯಕರ್ತವ್ಯಗಳನ್ನೀಡೇರಿಸಿಕೊಳ್ಳುವನಲ್ಲವೆ?

ಆಯ್ಯೋ ಪಾಪ! ಬಹು ಕಾಲದಿಂದಲೂ ಮತಬೇಧವೆಂಬ ಮಹಾವ್ರಣ ಜಾಡ್ಯಯಾತನೆಯಿಂದ ನರಳುತ್ತಾ, ಧರೆಯ ಬಾಳೇ ಸಾಕೆಂದು ಮರಣಕ್ಕಾಶಿಸುವ ಹರಿಜನರನ್ನು ದಯಾಮಯನೂ, ದೀನಬಂಧವೂ ಆದ ಆ ಹರಿಯು ನೆರವೀಯದೆ ಇನ್ನೆಷ್ಟು ದಿವಸ ಸುಮ್ಮನಿದ್ದಾನು!!

ಇಂದು ಇಡೀ ಭಾರತೇಯರ ಕಣ್ಣೆಲ್ಲವೂ ಹರಿಜನರನ್ನೇ ದಿಟ್ಟಿಸಿ ನೋಡ ಹತ್ತಿವೆ. ಇವರ ಮೇಲೆ ಕವಿದಿದ್ದ ಅಸ್ಪೃಶ್ಯತೆಯೆಂಬ ಕತ್ತಲು ಮಹಾತ್ಮ ಭಾಸ್ಕರನ ತೀವ್ರ ದೃಷ್ಟಿಯಿಂದ ನಿವಾರಿತವಾಗಲು, ಬಹುಕಾಲದಿಂದಲೂ ಶ್ರೇಷ್ಠ ಮಾನವ ಜನ್ಮವನ್ನೇ ಜಾತಿಕಟ್ಟಳೆಯೆಂಬ ಹಗ್ಗದಿಂದ ಬೀರಿ ಬಿಗಿದಿದ್ದ ಕುಣಿಕೆಗಳು ಈಗ ಲೀಗ ಸಡಿಲವಾಗಲಿವೆ. ಅಲ್ಲದೆ ಅವರೂ ಮಾನವಮಂಡಲದಲ್ಲಿ ಸಮಭಾಗಿಗಳೆಂದೂ ಭಾವಿಸಲಾಸ್ಪದವಾಗಿದೆ. ಇಷ್ಟೇ! ಅಸ್ಪೃಶ್ಯತೆಯ ಹುರುಳು? ಎಂಬುದನ್ನರಿತು ಇಂದು ಜನಪದವೇ ಪಶ್ಚಾತ್ತಾಪಪ್ರಾಯೋಪವೇಶ ಪ್ರಯತ್ನವನ್ನೂ ಪ್ರತಿಕ್ಷಣಗಳಲ್ಲಿಯೂ ಜರುಗಿಸುತ್ತಲಿರುವುದು.

ಸಮಾಜ ಸುಧಾರಕರೊಂದು ಕಡೆ, ಆಳರಸರಿನ್ನೊಂದು ಕಡೆ ಹರಿಜನೋದ್ಧಾರಕ್ಕೆ ಹಗಲಿರುಳೂ ಹಂಬಲಿಸಿ ದುಡಿಯುತ್ತಾ, ಸನಾತನಿಗಳ ಸಂಗಡ ಹೊಡೆದಾಡ ಹತ್ತಿರುವರು. ಈ ವಿಚಾರದಲ್ಲಿ ಬಹಳ ವರ್ಷಗಳಿಂದಲೂ ಘನ ಹೊಂದಿದ ನಮ್ಮ ಶ್ರೀಮನ್‌ಮಹಾರಾಜ ಮಾದರಿಯ ಸರ್ಕಾರವು ಮಾದರಿಯೆ! ಹೆಚ್ಚೇಕೆ ಮಹಾತ್ಮನೇ ಆ ಹರಿಜನರಿಗಾಗಿ ಪ್ರಾಣವನ್ನೇ ಪಣವಾಗಿಟ್ಟಿದ್ದಾನೆ. ಈ ಮಧ್ಯೆ ವಿಷಾದಕರವಾದ ಮತಾಂತರ ವಿಷಮ ಗಾಳಿಯೊಂದೆದ್ದು ಭಾರತೀಯ ನಿಚಪುತ್ರರ ಹೃದಯಕಂಪನಮಾಡಲಿದೆ. ಆದರೆ ಬಹುಕಾಲ ಬಲವಾಗಿ ಬೇರೂರಿದ್ದ ಬೂರುಗದ ಮರವೊಂದನ್ನು ಬುಡಸಹಿತ ಕಿತ್ತೊಗೆಯಲು ಬಹುಮಂದಿ ನೆರವೀಯಬೇಕಲ್ಲವೆ?

ಈ ಸುಸಮಯದಲ್ಲಿ ಹರಿಜನ ಗೋತ್ರದಲ್ಲಿಯೇ ಜನ್ಮಿಸಿದ ನಾನು ನಮ್ಮಗಿರುವ ಕಷ್ಟಪರಂಪರೆಗಳನ್ನು ಹಾಗೂ ನಾನು ಹರಿಜನ ಪ್ರಚಾರಕನಾಗಿರುವುದರಿಂದ ನನ್ನ ಪ್ರವಾಸದಿಂದಾದ ಅನುಭವಗಳನ್ನು ತಮ್ಮೆಲ್ಲರ ಸನ್ನಿಧಿಯಲ್ಲಿಟ್ಟು ತಮ್ಮೆಲ್ಲರ ಕ್ಷಮೆ ದಮೆ ಯಾಚಿಸಿ, ತನ್ಮೂಲಕ ದೇಶಸೇವೆ ಮತ್ತು ಭಾಷಾಸೇವೆ ಮಾಡಬೇಕೆಂದೂ, ಹರಿಜನೋ ದ್ಧಾರಕ್ಕೆ ಹೆಚ್ಚು ಅವಕಾಶ ಕಲ್ಪನೆ ಮಾಡಬೇಕೆಂದೂ ಯತ್ನಿಸಿ ಅಲ್ಪಜ್ಞತೆಯಿಂದ ಹರಿಜನಾಭ್ಯುದಯ ಎಂಬ ಈ ಪುಟ್ಟಗ್ರಂಥವನ್ನು ಬರೆದಿರುವೆನು. ಪಾಠಕ ಮಹಾಶಯರು ಇದರಲ್ಲಿ ಯಾವ ಭಾಷಾದೋಷಗಳಿದ್ದರೂ ಮನ್ನಿಸಿ ಪ್ರೋತ್ಸಾಹಿಸಬೇಕಾಗಿ ಅತ್ಯಂತ ವಿನಯದಿಂದ ಪ್ರಾರ್ಥಿಸುವೆನು.

ನನ್ನೀ ಅಲ್ಪಸೇವೆಗೆ ಆಶೀರ್ವದಿಸಿ ಪ್ರೋತ್ಸಾಹವಿತ್ತ ಶ್ರೀಮಾನ್‌ರುಗಳಾದ, ಮಾಸ್ತಿ ವೆಂಕಟೇಶಯ್ಯಂಗಾರ, ಬಿ.ಎ., ಗೌ|ಜಾ|ಸೆಕ್ರೆಟೆರಿ ಬಿ.ಎಂ.ಶ್ರೀಕಂಠಯ್ಯ, ಎಂ.ಎಂ.,ಬಿ.ಎಲ್., ಬೆಂಗಳೂರು ಸೆ| ಕಾ| ಪ್ರೋ| ಜಿ.ವೀರರಾಘವಾಚಾರ್ ಎಂ.ಎ., ಗೌ|| ಹೈಸ್ಕೂಲ್ ಹೆಡ್ಮಾಸ್ಟರ್. ಚಿಕ್ಕಬಳ್ಳಾಪುರ ಯಂ ರಾಜಾರಾವ್ ಎಂ.ಎ.,(ಆನರ‍್ಸ್) ಗೌ|| ಹೈಸ್ಕೂಲ್ ಹೆಡ್ಮಾಸ್ಟರ್ ಮಿಡಲ್‌ಸ್ಕೂಲ್, ಶ್ರವಣಬೆಳ್ಗೊಳ ಇನ್ನೂ ಇತರ ಮಹಾನೀಯರುಗಳಿಗೂ, ತರೀಕೆರೆ ಮತ್ತು ಚನ್ನರಾಯಪಟ್ಟಣದ ಕರ್ಣಾಟಕ ಸಂಘದವರಿಗೂ, ಹಾಸನದ ಹರಿಜನ ಸೇವಾಸಂಘದ ವರಿಗೂ, ಅಮೂಲಾಗ್ರವಾಗಿ ಓದಿ ಸರಿಪಡಿಸಿ ಈ ಸಣ್ಣಪುಸ್ತಕವನ್ನು ತಿದ್ದಿಕೊಟ್ಟ ಶ್ರೀಮಾನ್ ಕೋಲಶಾಂತಪ್ಪ (ಬಿ.ಎ., ಸ್ತ್ರೀ, ನಾಟಕಗಳ ಗ್ರಂಥಕರ್ತರು) ದಾವಣಗೆರೆ, ಅಘಲಯಂ ನರಸಿಂಹಾಚಾರ(ಕನ್ನಡ ಪಂಡಿತ, ಹೈಸ್ಕೂಲ್ ಹಾಸನ) ಮತ್ತು ಭಿ.ಭೀಮರಾಜು, (ಕರ್ಣಾಟಕಾಂಧ್ರ ಕವಿ, ಹರಿಕಥಾ ವಿದ್ವಾನ್) ರವರಿಗೂ ನನ್ನ ಹೃತ್ಪೂರ್ವಕವಾದ ವಂದನೆಗಳನ್ನರ್ಪಿಸುತ್ತೇನೆ.

ಹಾಸನ ಜಿಲ್ಲೆಯ ಹರಿಜನ ಸೇವಕಸಂಘದ ಸೆಕ್ರೆಟೆರಿಯವರಾದ ಶ್ರೀಮಾನ್ ಎ.ಜಿ.ರಾಮಚಂದ್ರರಾವ್ ಬಿ.ಎ.ಎಲ್.ಎಲ್.ಬಿ., ಅಡ್ವೋಕೇಟ್ ರವರು ಮತ್ತು ಇವರ ಸಹೋದರರಾದ ಎಸ್.ಜಿ.ಅತ್ರಿಯವರು ಪ್ರೀತಿಪೂರ್ವಕವಾಗಿ ಈ ಗ್ರಂಥಪೋಷಕರಾಗಿ ನಿಂತು ಸ್ವಂತ ನ್ಯಾಷನಲ್ ಮುದ್ರಣಾಲಯದಲ್ಲಿ ಮುದ್ರಿಸಿ ಕೊಟ್ಟದ್ದು ಚಿರಸ್ಮರಣೀಯ ಉಪಕೃತಿಯು. ಇವರಿಗೆ ನನ್ನ ಕೃತಜ್ಞತಾ ಪೂರ್ವಕವಾದ ಅನಂತ ವಂದನೆಗಳನ್ನು ಅರ್ಪಿಸುತ್ತೇನಲ್ಲದೆ, ಚಿರಋಣಿಯಾಗಿರುವೆನು.

ಇತಿ ದೇಶದಾಸರ ದಾಸ,
ಹರಿಜನ ತರುಣ ಕವಿ
ಡಿ.ಗೋವಿಂದದಾಸ್
ಹರಿಜನಪ್ರಚಾರಕ ಮತ್ತು ಡಿಕ್ಟ್ರಿಕ್ಟುಬೋರ್ಡುಮೆಂಬರು
ತಾ.೧.೧.೧೯೩೭
ದಮ್ಮನಿಂಗಳ