೬. ಚಿಗುರು ಮರ

ರಾಗ –  ಬೇಹಾಗ್  – ಆದಿತಾಳ
(ಗೋಪವಿದೂಲೋಲ ನಿರಾಕುಲ)

ಚಿಗುರುತಿಹುದು ಮರವು | ಈ ತರುವು            ||ಪ||

ಬೇಸಾಯಗೈದು ನೀ | ರೆರೆಯದೆ ಬಹುದಿನ |
ಆ ಸತ್ತಿದ್ದ ಮರವೂ | ಒಣತರುವು    ||ಅ||

ಸುಳಿದಾಡುತಲಿದೆ | ಧೈರ್ಯಗುಣಂಗಳು |
ತಿಳಿಯುತಲಿದೆ ದೇಶಾ | ಡಳಿತವಂ      ||೧||

ನಿಲಿಸುತಿಹುದು ಗೋ | ವಧೆಕೋಣಂಗಳ |
ಸಲಿಸುತಿಹುದು ಪೂಜೆ | ಸಾತ್ವಿಕದಿ    ||೨||

ಫಲಫಲಗೊಳ್ಳುವ | ಎಳೆತಳಿರುಗಳಿಂ |
ನೆಲೆಗೊಳ್ಳುತಿದೆ ಕಾಂತಿ | ಬಲುಭ್ರಾಂತಿ            ||೩||

ಕಡಿಮೆ ಮಾಡಿರುವುದು | ಕುಡಿತವ ಕುಡಿವುದ |
ದುಡುಕುವುದದನುಬಿಡೆ | ಕುಡಿವುದಂ ||೪||

ವಿದ್ಯಾಭ್ಯಾಸಕೆ ಮನ | ಗೊಡುತಿರುವುದು |
ಬುದ್ದಿಗಲಿಸುತಿಹುದು | ಬಾಲರಿಗೆ     ||೫||

ಚೊಕ್ಕಟ ಶೀಲತೆ | ನೆಲೆಗೊಳ್ಳಿಸುತಿದೆ |
ಮಿಕ್ಕವರನು ನೋಡಿ | ಮನಮಾಡಿ    ||೬||

ನಡೆಸುತಿಹುದು ಹರಿ | ಕಥೆಭಜನಂಗಳ |
ಕೆಡುಕೆನ್ನುವುದು ಮಕೃತ | ಗೋಮಾಂಸಂ        ||೭||

 

೭. ಭರತೂರಿನ ಬಿರುಗಾಳಿ

ರಾಗ – ಬೇಹಾಗ್ – ಆದಿತಾಳ
(ರಾಜಾಧಿರಾಜನೆ ಸೋಜಿಗವನು)

ಬಿರುಗಾಳಿ ಬೀಸುತಿದೆ | ಭರತೂರಿಂದಲಿ | ಭೋರೆಂಬುವಘನ        ||ಪ||

ಆರು ಖಂಡಗಳ | ಗಾರುಗೊಳ್ಳಿಸುತೆ | ಸೇರುತೆ ಧರೆಗಾ | ಕಾಶಕ್ಕು||
ಮೀರಿದ ರಭಸದೊ | ಳೆಚ್ಚರಗೈದಿತು | ಭಾರತೂರು ಜನ | ರೆಲ್ಲರನು        ||೧||

ಮರಗಿಡಗಳನ | ಲ್ಲಾಡಿಸಿ ಬಲುಘನ | ಮರಗಳನ್ನೆ ಧರೆ | ಗುರುಳಿಸಿತು||
ತರಗೆಲೆಗಳತಾ | ತೊಡೆಯುತೆನೆಲದೊಳು | ಪಿರಿದು ಮಾಡಿತದುಭರತೂರ ||೨||

ಊರೊಳಿರ್ದಕಶ | ಕಡ್ಡಿಗಳೆಲ್ಲವ | ಸೂರೆಗೈದುಕಡೆ | ಗೀಡಾಡಿ ||
ನಾರುತಿರ್ದದು | ವಾರ್ಯಯುವೆಲ್ಲವನು | ಏರಿಸಿಬಿಟ್ಟಿತು | ನಭಕೀಗ         ||೩||

ಏಳದೆ ಮೇಲಕೆ | ಬಹುದಿನದಿಂದಲು | ತಾಳುತೆ ಹೊಗೆಯನು ತಡೆದಿರ್ದ||
ಕೀಳಗ್ನಿಯ ನೀ | ಬಿರುಗಾಳಿಯಬಂ | ದೇಶಿಸಿಜ್ವಾಲೆಯ | ಕಾಣಿಸಿತು            ||೪||

ಊರನಡುವೆ ಬಹು | ದಿನದಿಂದಿರ್ದ | ಭಾರಿಬಂಡೆಯೊಂ | ದಿಳೆಗೆಡವಿ||
ಆರು ಅರಿಯದಿಹ | ತೋರಮಾಣಿಕವ | ತೋರಿಸಿಕೊಟ್ಟಿತು | ಜಗಕೆಲ್ಲ ||೫||

 

೮. ಅನಾಮಧೇಯ (ಸಾರಸಾಕ್ಷಿಯಾರೆ ಪೇಳಿರಿ)

ಏನೆಂದಿವನ | ಕರೆವುದರಿಯೆನು          ||ಪ||
ಹೀನಜನರ | ಹಿತಬಾಂಧವನ            ||ಅ||

ರಾಜನೆಂದು | ಕರೆಯಲಿವಗೆ | ರಾಜದಂಡ | ಕರದೊಳಿಲ್ಲ ||
ಸಾಜ ಋಷಿಯೆಂ | ದರುಹಲು ಸ್ವ | ರಾಜ್ಯಗೋಜಿ | ಗಿಳಿದಿರುವನು            ||೧||

ಯುದ್ಧವೀರ | ನೆನ್ನಲಿವನು | ಬದ್ಧ ಶಾಂತಿ | ಯುತನು ಸತತ ||
ಶುದ್ಧ ಹೇಡಿ | ಯೆಂದು ಪೇಳೆ | ಗುದ್ಯಾಡುವನು | ಆಳರಸರೋಳ್            ||೨||

ಮೆರೆವ ಸಂಪದ | ಗಾರನೆನಲು | ಹೊರೆವನುದರ | ಮಾರಿದಾರ ||
\ರುಕನೆಂದು | ಪೇಳೆ ವರುಷ | ಕಾರುಲಕ್ಷವ | ದುಡಿಯುತಿರ್ದ         ||೩||

ಹೆಚ್ಚು ಜಾಣ | ವಂತನೆನಲು | ಇಚಿಪನತಿ | ನಿರಶನಾವ್ರತ ||
ಹುಚ್ಚನೆಂದು | ಕರೆವೆನೆಂದರೆ | ಮೆಚ್ಚಿಸಿಹ | ವಿಚಾರಪರರ |         |೪||

ಕದ್ದು ಜೀವಿಪ | ಕಳ್ಳನೆನಲು | ಸತ್ಯಶೋಧಕ | ನೆಂದು ಮೆರೆವ ||
ಮದ್ದುಮಾಯ | ಗಾರನೆನಲು | ಸಾಧಿಸಿದನು | ಕಾರ್ಯಧೈರ್ಯದಿ             ||೫||

 

೯. ದ್ವಿತೀಯ ಚಕ್ರಗೋಷ್ಠಿ (ಲಾವಣಿ)

ಲಂಡನ್ ನಗರದಿ | ಸಭೆ ಸೇರಿತು | ಇಂಗ್ಲೆಂಡ್ ರಾಜ್ಯಾ | ಧ್ಯಕ್ಷತೆಯೋಳ್||
ಹಿಂದೂ ದೇಶವ | ಹಿಂದಕೆ ಕೊಡಲು ಗಾಂಧಿಮಹಾತ್ಮನ | ಎದರಿನೊಳು       ||೧||

ಹನ್ನೊಂದು ಲಕ್ಷ | ಪೌಂಡುಗಳನು | ಖರ್ಚಿಟ್ಟಿದ್ದರು | ಸಮ್ಮೇಳನಕೆ ||
ಹಿಂದೆಂದು ನೆರೆಯದ | ಸಭೆಯಾನಗರದಿ | ಸಂದಣಿಸಿತು | ಸಂತಸಮನಕೆ        ||೨||

ಎರವಾಡದಸೆರೆ | ಯಿಂದ ಹೊರಟಿತು | ಹುರಿದುಂಬಿದ | ಮುದಿಹುಲಿಯೊಂದು
ಜರಿಯುವಪರಿ | ಬೆಕ್ಕಿನಮರಿಮೇಕೆ | ನೆರವೀಗವ | ತಾಕರಕೊಂಡು ||೩||

ಅರಿದಿದ ಕರೆಯದೆ | ಬೊಂಬಾಯಿಂದ | ತೆರಳಿದ ಅಂಬೇ | ಡ್ಕರು ಸಭೆಗೆ ||
ಬರುವ ಸ್ವರಾಜ್ಯಕ್ಕೆ | ನೆರವೀಯದೆ ಹುಳಿ | ಹಿಂಡಲು ಖಂಡುಗ | ಹಾಲಾಗೆ ||೪||

ಹಿಂದೂರಾಜರು | ಪ್ರತಿನಿಧಿಗಳ ಬಲು | ಸಂದಣಿಸೇರಿತು | ಸಭೆಗಲ್ಲಿ ||
ಹಿಂದೂದೇಶವ | ಹೊಂದುವೆವೆಂದಾ | ನಂದವ ಪಡುತಲಿ | ಮನದಲ್ಲಿ        ||೫||

ಸೇರಿತು ಸಭೆಯು | ಸಾರಿದಧೊರೆಯು | ಷುರುವಾಯಿತು | ಚರ್ಚೆಗೆ ಮೊದಲು||
ನೆರೆದುಃಖವು ತಲೆದೋ | ರಿತುಭಾರತಿ | ನೆರೆಸಂತೋಷ | ತಾಬದಲು            ||೬||

ಕಷ್ಟದಿ ಗೆಲಿದಿಹ | ರಾಜ್ಯವಿತ್ತರೊ | ಗಟ್ಟಿನಿಂದ ಪಾ | ಲಿಪ ನಿಮಗೆ ||
ದಿಟ್ಟತೆಯಿಹುದೇ | ನೆಂದು ಬ್ರಿಟೀಷರ್ | ಕೇಳ್ದರೆಲ್ಲ ದೇ | ಶೀಯರಿಗೆ        ||೭||

ಕೊಡಿ ಹೌದೆನ್ನುತೆ | ಸಡಗರದಿಂದಲಿ | ಒಡನೆಯೆ ಕೇಳ್ದರು | ಹಿಂದುಗಳು ||
ತಡಬಿಡಕೊಡಿಕೊಡಿ | ರೊಗ್ಗಟ್ಟಿಂದಲಿ | ಹಿಡಿತದೊಳಾಳ್ವೆವು | ರಾಜ್ಯವನಾವ್         ||೮||

ಎದ್ದು ಮೇಲಕಂ | ಬೇಡ್ಕರು ಪೇಳಿದ | ಸದ್ದನಾಲಿಸುತ | ಬ್ರಿಟಿಷರಿಗೆ ||
ಸುದ್ದಿಯಬಿಡಿ ಸ್ವ | ರಾಜ್ಯವಿತ್ತರೆ | ಭೇದ ಬಹಳ ಹಿಂದುಗಳೊಳಗೆ            ||೯||

ನಿಮಗಾದರೆ ಮತ | ಭೇದಗಳಿಲ್ಲ | ನಮ್ಮೊಳಗಿದು | ಬಲುಬಿಗಿಕಟ್ಟು||
ಗಮ್ಮನೆ ರಾಜ್ಯವ | ನಾಳರು ನಮ್ಮೊಳು | ಒಗ್ಗಟ್ಟಿಗೆ ಬಲು | ಮುಗ್ಗಟ್ಟು   ||೧೦||

ಎಂದು ಭೇದಮರೆ | ತೈಕ್ಯದಿಂದಲಿ | ಬಂದು ಸ್ವರಾಜ್ಯವ | ಕೇಳುವಿರೋ||
ಅಂದೀವೆವು ಹೊರ | ಡಿರಿ ಹಿಂದಕೆ ನೀ | ವೆಂದು ಬ್ರಿಟೀಷರು | ಪೇಳಿದರು      ||೧೧||

ದೇಶೀಯರು ಅತಿ | ಆಶಾಭಂಗದಿ | ಮೋಸವಾಯ್ತು | ಹರಿಜನನಿಂದ||
ಲೇಸುಮಾತನಿವ | ನಾಡಿದನೆಂದು | ಯೋಚಿಸುತೆದ್ದರು | ಸಭೆಯಿಂದ          ||೧೨||

ಬೆತ್ತಲಿದ್ದ ಹಿಂದೂ | ಚಂದಿರನಿಗೆ | ಮುತ್ತಿತು ಮೋಡವು ಮೈಮ್ಯಾಗೆ||
ಎತ್ತತೋಡಿದರು | ಕತ್ತಲೆ ಕವಿದಿತು| ಕಣ್ಣೀರು ಸುರಿದವು | ಎದೆಮ್ಯಾಗೆ       ||೧೩||

ಎದ್ದುಸಿದ್ದ ಶಾಂತ | ತ್ವದಿ ಪೇಳಿದ | ಗದ್ದುಗೇಶ ಸ | ನ್ನಿಧಿಯಾಗೆ||
ಹೆದರೆನು ಬೆದರೆನು | ಲೇಸಾಯಿತು ಬಿಡಿ | ಹೊರಟೆನ್ನುಯಿರಿ | ಎಚ್ಚರದಾಗೆ             ||೧೪||

ಹರಿಯಿತು ಸಭೆಯು | ತೆರಳಿದರೆಲ್ಲ | ಹೊರಟನಂಬೇ | ಡ್ಕರುಮುಂದೆ||
ಏರಿದಜಹಜನು | ಸೇರಿದ ಬೊಂಬಾಯ್ | ಸೇರಿಸಿದನು | ಹರಿಜನತಂದು       ||೧೫||

ನಿಲ್ಲಿಸುತೆಲ್ಲರ | ಬಂದರ್ ಬಳಿ | ಕೈಲೊಂದುಕಪ್ಪ | ನೆಯಬಾವುಟದಿಂ||
ಸಲ್ಲಿಸುತಪ್ಪಣೆ | ಯಲ್ಲವನಲ್ಲಿ | ನಿಲಿಸಿದರಸ್ತೆಯ | ಪಾರ್ಶ್ವಗಳೊಳ್     ||೧೬||

ಬಂದು ಸಂದಿತು | ಗಾಂಧೀಜಹಜು | ನಿಂದಿತು ಬೊಂಬಾ | ಯ್ ಬಂದರೋಳ್||
ಗಾಂಧಿಪುರವನು | ಕುರಿತು ಹೊರಟನು | ಕಂದಿಕುಂದಿದ | ಮನಸಿನೊಳು        ||೧೭||

ನೆರೆದಹರಿಜನ | ಕರಿಯಬಾವುಟ | ತೆರೆದರು ಗಾಂಧಿ | ಮುಂದುಗಡೆ||
ಅರಿದಪುರಜನ | ವೀಯಪಮಾನವ | ಮೊರೆಯಿತು ಗಾಂ | ಧಿಯಹಿಂದುಗಡೆ   ||೧೮||

ತಡೆದುಗಾಂಧಿಯದ | ಬಿಡಿಜಗಳೆನುತೆ | ಹೊಡೆದಾಟವನು | ಬಿಡುತೆಮ್ಮೊಳ್||
ತೊಡೆದುಭೇದವ | ಇಡುತೆಪ್ರೇಮವ | ಹೊಡೆದಾಡಿರಿ | ಬಿಗಿ ಒಗ್ಗಟ್ಟೋಳ್             ||೧೯||

ಇದನೋಡುತೆ ಬೆದ | ಬೆಂದಿತುಗಾಂಧಿ | ಹೃದಯವುಬಲು | ಬಲುತಲ್ಲಣಿಸಿ||
ಎದುವರಗೇಳೆಗ್ಗೆ | ಹರಿಜನಬಾರರೊ | ಅದುವರೆಗೀವುದು | ರಾಜ್ಯಹುಸಿ     ||೨೦||

ಮನಮಾಡಿದಹರಿ | ಜನರೋದ್ಧಾರಕೆ | ಮನದಿಚೆಂತೆಬಲು | ಘನವಾಯ್ತು||
ತನುವನಾದರೊ | ಪ್ಪಿಸುವೆನೆನ್ನುತೆ | ನೆನೆದಂದಿವನಿಗೆ | ಮನಸಾಯ್ತು         ||೨೧||

 

೧೦. ಹರಿಜನರಿಗೆ ಹಿತಬೋಧೆ (ಕಾಯವು ಸ್ಥಿರವಲ್ಲ ಈನರನ)

ಏಳಿರಿಹರಿಜನರೆ | ಯನ್ನವರೇ           ||ಪ||
ಏಳಿರಿತಾಳದೆ | ಎಚ್ಚರಗೊಳಿರಿ |        |ಅ||

ಶುಚಿಗೆಡಮಾಡಿರಿನೀ | ವೀಗಾದರ |
ಶುಚಿಯನು ತೊಡೆದುಬಿಡಿ |
ಪಶುವಂತಿರುವುದು | ಹಸನೇಂನಿಮಗೆ             ||೧||

ಸೇವಿಸದಿರಿಮದ್ಯಯಿ | ದೆಂದಿಗೂ |
ಭಾವಿಸದಿರಿಸದ್ಯ |
ಸೇವಿಸಿದೊಡೆಹಾ | ಳೆಮ್ಮಯಬಾಳು ||೨||

ತ್ಯಜಿಸಿರಿಗೋಮಾಂಸ | ಅಂತ್ಯಜರೆ |
ಭಜಿಸಿರಿ ಶ್ರೀಹರಿಯ
ಭುಜಿಸಿರಿಹಿರಿಯರು | ಭುಜಿಪಾಹಾರ ||೩||

ವಿದ್ಯಕೆ ಮನಗೊಡಿರೈ | ಮಕ್ಕಳನು |
ಬುದ್ದಿಯುತರಮಾಡಿ |
ಮುಗ್ಧರಿವರು ಯೆಂಬು | ವುದನಿಲಿಸಿದೈ         ||೪||

ಬಿಡಿಭೇದಗಳೆಮ್ಮೋಳ್ | ಹರಿಜನರೆ |
ಸುಡಿಪೂರ್ವಾಚಾರ |
ನಡೆಯಿರಿಹಿರಿಯರು ನಡೆವಾಪಥದಿ    ||೫||

ಹರಿಜನರೇಳಿಗೆಗೆ | ಹಗಲಿರುಳು |
ಉರುತರಕೊರತೆಯೊಳು |
ವರಭಾರತಿಯರು | ಕೊರಗುತಲಿಹರು             ||೬||