೧. ಭಾರತೀಯನ ಬಲಬಾಹು

ತೃತೀಯ ಸಚಿವರಾಗಿದ್ದ ಶ್ರೀಮಾನ್ ಡಿಸೋಜರವರ ಅಧ್ಯಕ್ಷತೆಯಲ್ಲಿ ಹಾಸನದಲ್ಲಿ ನಡೆದ ಹರಿಜನ ಕಾನ್ ಫರೆನ್ ಸಿನಲ್ಲಿ ಪಠಿಸಿದೆ.

ರಾಗ-ಕಾಂಬೋದಿ-ಅದಿತಾಳ
(ಈ ಪರಿಯಸೊಬಗಾವದೇವರೊಳು ಕಾಣೆ ಎಂಬಂತೆ)

ಏಕೆಮ್ಮದೂಷಿಪಿರಿ | ಹಿಂದು ಬಾಂಧವರೆ          ||ಪ||
ಜೋಕೆಯಿಂದಲಿ ನೋಡಿ | ಮುಂದುವರಿದವರೆ ||ಅ||

ಹಿಂದುದೇಶದ ಲೋರ್ವ | ಹಿಂದುನೆಂಬುವ ನರನಿ||
ಗೊಂದಂಗನಾವಲವೆ | ಹಿಂದು ಬಾಂಧವರೆ||
ಹಿಂದುಳಿದಯಮ್ಮಗಳ | ಮುಂದುವರಿಸದ ಮೇಲೆ||
ಹಿಂದು ತಾನಂಗಹೀ | ನನು ಮಾಗದಿಹನೆ ||೧||

ಹಿಂದೆ ಮುಸಲ್ಮಾನ ಬಾಂ | ಧವರು ದೇಶದೊಳಿರ್ದ||
ಹಿಂದು ವಿಗ್ರಹಗಳನು | ಕೊಂಡೊಯ್ಯಲಂದು||
ಕುಂದದೆದೆಯಿಂದ ರಾ | ಮಾನುಜರು ದಿಳ್ಳಿಯಿಂ||
ತಂದಾಗ ತಡೆದವರ || ಬಿಡದೋಡಿಸಿದೆವು ||೨||

ಹಿಂದೆ ಮೈಸೂರಿನರ | ಮನೆ ಬೆಂದು ಪೋಪಾಗ||
ಹಿಂದು ಬಾಂಧವರೆಲ್ಲ | ಹಿಂದೆ ನಿಂದಿರಲು||
ಹಿಂದುಳಿದ ನಾವೆಲ್ಲ | ಮುಂದುಮುಂದಕೆ ಸಾಗಿ ||
ಬೆಂದು ಪೋಪರ ಮನೆಯ | ನಾವಾರಿಸಿದೆವು     ||೩||

ವಿದ್ಯೆ ಬುದ್ದಿಗಳನ್ನು | ನಿದ್ದೆಯೊಳಗರಿಯೆವೂ ||
ಬುದ್ದಿವಂತರು ವಿದ್ಯ | ಬುದ್ದಿಗಲಿಸೆಮಗೆ ||
ಕ್ಷುದ್ರಭಾವವ ಬಿಟ್ಟು | ಬುದ್ದಿವಂತರ ಮಾಡಿ ||
ಸದ್ಭಾವದಿಂದ ಸತ್ | ಪ್ರಜೆ ಮಾಡಿರೆಮ್ಮ ||೪||

ಬೇಸಾಯ ಗೈದು ನಿ | ಮ್ಮಯ ದಾಸರಾಗುತಲಿ ||
ಕಾಸಿಗೊಂದಿನ ನಿಮ್ಮ | ಸೇವೆ ಮಾಡುವೆನು ||
ಘಾಸಿಯನು ಪಡಿಸಿ ಕಂ | ಡರೆ ಯಮ್ಮ ನೀವುಗಳು ||
ಹೇಸಿಕೆಯ ಮನದಿಂದೆ | ಸಾರುವಿರಿ ಹಿಂದೆ ||೫||

ದಿಟ್ಟ ಮದಕರಿಯನ್ನು | ಕಟ್ಟಿಪಳಗಿಸಲದುವೆ |
ಪಟ್ಟಾಧಿನಾಥ ರಂ | ಬಾರಿ ಹೊರಲಹುದು ||
ಗಟ್ಟಿಮನದಿಂ ನೀವು || ಭ್ರಷ್ಟತೆಯ ತೋಳೆದೆಮ್ಮ ||
ಇಷ್ಟ ಪ್ರಜೆಗಳ ಮಾಡಿ | ಶ್ರೇಷ್ಠ ತಮರೆನಿಸಿ ||೬||

ಅವಮಾನವರೆಮ್ಮ | ಕಾಯುವಾಲೋಚನೆಯ ||
ನಾವಕಾಲದೊಳು ಯೋ | ಚಿಸುತಲಿರುತಿಹರೋ ||
ಅವ ಭಾರತ ಪುತ್ರ | ರೆಮ್ಮನಾದರಿಸುವರೊ
ಅವರ ಹರಿಗೋವಿಂದ | ಸತತ ರಕ್ಷಿಸಲಿ ||೭||

 

೨. ಭಾರತಾಂಬೆಯ ರಥೋತ್ಸವ

ರಾಗ-ಪೂರ್ವಿಕಲ್ಯಾಣಿ ತಾಳ-ಮಿಶ್ರ ಛಾಪು
(ಹೇಗೆ ಮುಕ್ತ ನಾಗಬೇಕಣ್ಣ)

ಭಾರತಾಂಬೆಯ | ತೇರು ನಿಂದಿಹುದು
ಹರಿಯದಲೆ ಮುಂದಕೆ        ||ಪ||

ಹರಿಯದಲೆ | ಮುಂದರಿಯದಲೆ ಜನ |
ದೊರೆಯದಲೆ ಬಲ | ಮಾಗಿ ಎಳೆಯಲ್ |
ಹೂರ್ಜಿ ಹಗ್ಗವೆ | ಸಾಲದೆಲೆ ಬಲು |
ಕೊರತೆಗೀಡಾ | ಗಿರುವುದರಿಯಲು     ||ಅ||

ಶ್ರೇಷ್ಠ ಅರ್ಚಕ | ಕಷ್ಟಪಡುತಿಹನು |
ಜನಗಳನು ಕರೆದೊ | ಗ್ಗಟ್ಟು ಮಾಡಲು |
ನಡುವ ಕಟ್ಟಿಹನು |
ಎಷ್ಟು ಕರೆದರು | ಬಾರದಲೆ ಸಂ |
ತುಷ್ಟಿಯಿಂ ನೋ | ಡುತ್ತಾ ನೋಟವ |
ದಿಟ್ಟತನವನು | ತೋರದಲೆ ಕೈ|
ಗಟ್ಟಿ ನಿಂದಿಹ | ರೆಲ್ಲ ಸುಮ್ಮನೆ       ||೧||

ಗಾಲಿ ನಿಂದಿದೆ | ಜರುಗದಲೆ ಮುಂದೆ |
ರಥದ ಬಲದ ಭಾಗದ |
ಕೀಲು ಸಡಿಲುತೆ | ಮೊಳೆಯು ಬಾಗಿಹುದು |
ಬಲುಮೆಯಿಂದಲಿ | ಎಳೆದರಾರಥ |
ಕಳಚಿ ಬೀಳುವು | ದಿಳೆಗೆ ದೊಪ್ಪನೆ |
ಒಳಗೆ ಕುಳಿತಿಹ | ಭಾರತಿಯು ನೆಲ |
ಕುರುಳಿ ಕಾಲನ | ನಿಲಯಕಿಳಿವಳು      ||೨||

ಮಾರನಿಂದಿಹ ಹರಿಜನಂಗಳನು |
ಕರೆತರುವೆವೆಂದರೆ |
ಕರೆಯಲಾಗದು | ಎಂಬುವರು ಜನರು |
ಹರಿಜನಂಗಳು | ಬಾರದಿರ್ದೊಡೆ |
ಹರಿವುದೇ ರಥ | ಸಾಲದೆಲೆ ಬಲ |
ಪರಮ ಪೂತಳು | ಭಾರತೇಯಳ |
ಕೊರತೆನೀಗುವು | ದೆಂತು ತ್ವರಿತದಿ     ||೩||

ಭಾರತಾಂಬೆಯು | ನೋಡಿದೆಲ್ಲವನು |
ಹರಿಜನಗಳನ್ನೂ |
ಕರೆದು ತೇರನ್ನು ಹರಿಸಿರೆನ್ನುವಳು |
ಭಾರತೀಯೋ | ಪಾಸಕರು ಕರೆ|
ತರುವೆಂದರೆ | ಬಲುಜನಂಗಳು |
ತೇರನೆಳೆಯದೆ | ಹರಿಜನರು ಬರೆ
ಸಾರುವೆವು ನಿಜ | ನಿಲಯಕೆಂಬರು      ||೪||

ಏಳು ದಿವಸಗ | ಳಿಂದ ಹಗಲಿರುಳು |
ಮಳೆಛಳಿಯ ಬಿಸಿಲೊಳು |
ಗೋಳುಗುಡುವಳು | ತಾಳದೆಲೆ ದೇವಿ |
ಮೇಳವಿಸುವವ | ರಿಲ್ಲವೆನ್ನುತೆ |
ಜೋಲುಮೋರೆಯ | ಹಾಕಿಕೊಂಡು |
ಕಾಲುಕೈಗುಡಿ | ಗೂರಿಕೊಂಡೀ |
ಹಾಳುಜನ್ಮವೆ | ಬೇಡವೆಂಬಳು         ||೫||

ನೇರಮಾಡುತೆ | ಗಾಲಿ ಕೀಳುಮೊಳೆ |
ಸರಿಪಡಿಸಿ ಸೇರಿಹ |
ಪುರುಷರನು ಕರೆ | ದೊಂದು ಗೂಡಿಸುತ |
ದೂರನಿಂದಿಹ | ಹರಿಜನರ ಕರೆ |
ತಂದು ಕೇರನು | ಹಿಡಿದೆಳೆಸಿದರೆ |
ತ್ವರಿತದಿಂದಲಿ | ಸೇರುವು ಸ್ವ |
ಸ್ಥಾನಕಿನ್ನುರು | ಕೊರತೆಯಿಲ್ಲದೆ     ||೬||

 

೩. ಜಗಮೊಂಡ

ರಾಗ-ಕಾಮವರ್ಧಿನಿ-ಆದಿತಾಳ

ಕಲಿಯುಗದೊಳು | ಸೊಗಮನೆ | ಜನಿಸಿಹ ನಿವನೊಬ್ಬ |
ಬಲುಜಗಮೊಂಡ | ಹಠದುದ್ದಂಡ | ಕಡುಭಂಡರಗಂಡ   ||ಪ||

ಸೆರೆಯಾಳಾದರು | ಮುವತ್ತೆರಡು ಸಲ |
ಸ್ವರಾಜ್ಯ ಚಳುವಳಿ | ಗೋಸುಗವೆ ||
ಹೆರೆದೆಗೆಯದೆ ಕ | ಷ್ಟಗಳನು ಸಹಿಸುತೆ |
ತೊರೆಯದೆ ಹಠವನು ಸಂಧಿಸಿದ        ||೧||

ಮತ ಭೇದಗಳನು | ತೊಡೆಯಲು ತಾನತಿ |
ಹಿತವಾಕ್ಕುಗಳನೆ | ಬೋಧಿಸುತ |
ಪ್ರೀತಿಪರಸ್ಪರ | ಬೀಜನ ಬಿತ್ತುತೆ |
ಖ್ಯಾತಿಯಾಂತ ಹಠ | ದಿಂದ ಮಹಾತ್ಮ           ||೨||

ಬಿಟ್ಟನುಯಿಪ್ಪ | ತ್ತೊಂದಿನ ಅನ್ನವ |
ಗಟ್ಟಿಗೆ ಹಿಂದೂ | ಮುಸಲರೊಳು |
ಪಟ್ಟನು ಕಷ್ಟವ | ಬಹುಬಗೆಯಿಂದಲಿ |
ಇಟ್ಟಕಾಲ ಹಿಂ | ದೆಗೆಯದಲೆ           ||೩||

ಚಕ್ರಗೋಷ್ಠಿಗಿವ | ತೆರಳದೆ ಹಠದಿಂದ |
ವಕ್ರಗೋಷ್ಠಿಯದ | ಮಾಡಿದನು ||
ಸ್ಪಷ್ಟವಾಗದೆಯೆ | ರಾಜ್ಯ ಸುಧಾರಣೆ |
ಭ್ರಷ್ಟರಾಗಿ ಬರು | ವಂತೆ ಗೈದ         ||೪||

ಅಸ್ಪೃಶ್ಯತೆ ಹೊರ | ಹೊರಡಿಸದಿಹುದತಿ |
ನಿಷ್ಫಲ ಧ್ವಜದೇ | ರಿಕೆಗೆಂದು ||
ಸ್ಪೃಶ್ಯದ ಬೀಜವ | ಬತ್ತಿದಹಠದಿಂ |
ನಿಸ್ಪೃಹದಿಂದೀ | ಜಗಕೆಲ್ಲ ||೫||

ಖಾದಿಪ್ರಚಾರ | ಸ್ವದೇಶದಿ ನೆಲಸೆ |
ಅದರದಿಂದಲಿ | ಬೋಧಿಸುತ ||
ಖಾದಿವಸ್ತ್ರಗಳ | ಧರಿಸುವಂತೆ ಬಲು |
ಸಾಧಿಸಿಯಳೆದನು | ಜನಮನವ         ||೬||

ಪರದೇಶಿಯ ವ | ಸ್ತುಗಳನೆಲ್ಲವ |
ಜರಿದು ಬಹಿಷ್ಕಾ | ರವ ಮಾಡಿ |
ನಿರುತ ಸ್ವದೇಶ | ದ ವಸ್ತುವ ಬಳಸಿರಿ |
ಮರೆಯದಿರೆಂದಿವ | ಬೋಧಿಸಿದ       ||೭||

ಹರಿಜನಕೋಸುಗ | ನಿರಶನ ವ್ರತವಾ |
ಚರಿಸಿದಯಿಪ್ಪ | ತ್ತೊಂದು ದಿನ ||
ಗೋಚರ ಮಾಡಿದ | ಭಾರತ ಭೂಮಿಗೆ |
ಹರಿಜನರೂ ಹಿಂ | ದುಗಳೆಂದೇ         ||೮||

ಸೆರೆಯೊಳು ಹರಿಜನ ಸೇವೆಗೆ ಭಾರತ |
ಸರಕಾರವು ತಾ | ನೊಪ್ಪದಿರಲ್ |
ತೊರೆಯಲಶನವಂ | ಹಠ ಹಿಡಿದನು ವರ |
ಹರಣವನ್ನು ನೀ | ಗುವತನಕ           ||೯||

 

೪. ಮಹಾರಾಜ ಗೀತೆ (ಕೋಲಾಟದ್ದು)

ಬೆಂಗಳೂರು ಶ್ರಸೀ ನರಸಿಂಹರಾಜ ಹಾಸ್ಟಲಿನಲ್ಲಿ ಶ್ರೀಮದ್ದುವರಾಜರವರ ಸನ್ನಿಧಿಯಲ್ಲಿ ಕೋಲಾಟದ ಮೂಲಕ ಅಭಿನಯಿಸಿದೆ.

ಶರಣೆನ್ನಿ ಮಹರಾಜಗೆ | ಮೈಸೂರು
ಕೃಷ್ಣರಾಜ ಒಡೆಯರಿಗೆ      ||ಪ||

ಶರಣೆನ್ನಿ ನೀವೆಲ್ಲ | ಜಯವೆನ್ನಿ ಜನರೆಲ್ಲ |
ಮೈಸೂರನಾಳ್ವ ಮಹ | ರಾಜ ಬಹದ್ದೂರಗೆ ||ಅ||
ಜಿ.ಸಿ.ಎಸ್ .ಐ.ಬಿ.ಇ. | ಬಿರುದನ್ನು ಪಡೆಯುತೆ |
ಲೇಸಿಂದರಾಜ್ಯವಾ || ಳುವ ದಿಟ್ಟರಾಜಗೆ        ||೧||

ಚಾಮರಾಜೇಂದ್ರರು | ದೂರದಲ್ಲಿ ಜನಿಸುತೆ |
ಭೂಮಿಯ ಪ್ರೇಮದಿಂ | ಪಾಲಿಪಭೂಪಂಗೆ      ||೨||

ರಾಜಾಧಿರಾಜ ನಾ | ಲ್ಮಡಿ ಕೃಷ್ಣರಾಜಗೆ |
ಸಾಚಮಾರ್ಗದಿ ರಾಚ್ಯ | ವಾಳ್ವ ಸತ್ಯೇಂದ್ರಗೆ    ||೩||

ಮೆರೆಯುವ ಮೈಸೂರು | ಪುರದೊಳು ತಾನಿಂದು |
ವರಚಾಮುಂಡಾಂಬಿಕೆ | ಯೊರದಿಂದ ಬಾಳ್ವಗೆ ||೪||

ಆನೆಯ ಮೇಲೆ ಅಂಬಾ | ರಿ ಹಾಕಿಸಿಕೊಂಡು |
ಸೇನೆಯನಡುವೆ | ಬರುವ ಭೂಮೀಂದ್ರಗೆ         ||೫||

ಹತ್ತು ಬೆರಳಿಗ್ಹತ್ತು | ರತುನದುಂಗುರಗಳ |
ನಿಟ್ಟುಕೈಮುಗಿಯುತ | ಬಹ ಪ್ರಜಪ್ರಮಿಗೆ      ||೬||

ಎಂಟು ಜಿಲ್ಲೆಗಳನ್ನು | ತಂಟೆಯಿಲ್ಲದ ಪರಿ |
ತುಂಟರ ನಡುಗಿಸಾ | ಳುವ ಧರ್ಮಪಾಲಗೆ       ||೭||

ಮೊರೆಯುತ್ತೆ ಪರಿವ ಕಾ | ವೇರ ಮಾತೃವಿಗೈದೆ
ಹಿರಿದಣೆಕಟ್ಟು ಕ | ಟ್ಟಿಸಿದೆನ್ನದಾತಗೆ ||೮||

ಪರಿಪರಿಯಲಿ ಯಮ್ಮ | ವರಕೃಷ್ಣರಾಜರ |
ನರಹಿರಿ ಗೋವಿಂದ | ಪೊರೆಯಲಿ ನಿರುತವು      ||೯||

 

೫. ದೇಶಭಕ್ತನ ಧೀರತ್ವ (ಕೋಲಾಟದ್ದು)

ಇದನ್ನು ಅನೇಕ ಸ್ಕೌಟ್ವೀಕ್‌ಗಳಲ್ಲಿಯೂ, ಹರಿಜನ ಸಮ್ಮೇಳನಗಳಲ್ಲಿಯೂ ಕೋಲಾಟದಲ್ಲಿ ಅಭಿನಯಿಸಿದೆ.

ಹುಟ್ಟಿದರೆ ಹುಟ್ಟಬೇಕು | ನಮ್ಮ
ದಿಟ್ಟ ಗಾಂಧಿಯಂತ | ಗಟ್ಟಿಗರೀಲೋಕದಲಿ    ||ಪ||

ಭಾರತಾಂಬೆಗೆ ತಾನು | ಧೀರಮಗನೆಂದೆನಿಸಿ |
ಆರು ಖಂಡದೊಳೆಲ್ಲ | ಪೆಸರಾಂತ ಧೀರನಿವ    ||೧||

ಎರವಾಡ ಜೈಲೊಳಗೆ | ಒರಗಿ ಕುಳಿತುಕೊಂಡು |
ಥರಥರನೆ ನಡುಗಿಸಿದ | ಪರದೇಶದವರನ್ನು     ||೨||

ಬ್ಯಾರಿಸ್ಟರಾಗಿ ಹತ್ತಾ | ರುಲಕ್ಷವ ದುಡಿದು |
ಭಾರಿ ಧೊರೆಗಳಿಗಿಂತ | ಮೀರಿಬಾಳುತಲಿರ್ವ     ||೩||

ಕೈಲೊಂದು ಲಟ್ಟ ತಲೆ | ಯೊಳಗೆ ಬತ್ತಿಯಜಾಟ್ಟು |
ಕಾಲಿಗಿಟ್ಟವನಿವನು | ಮರದೆರಡು ಮೆಟ್ಟುಗಳ             ||೪||

ಪರದೇಶಿ ವಸ್ತ್ರಗಳ | ಉಸಿರುತ್ತೆ ಬೆಂಕಿಯೊಳು |
ವರಖಾದಿವಸ್ತುಗಳ | ಹರಿಸಿದ ಸ್ವರಾಜ್ಯಾದಿ    ||೫||

ತನುಮನಧನಂಗಳನು | ವಿನಿಯೋಗಿಸುತ್ತ ನಿಶ |
ಪಣವಾಗೀರಾಜ್ಯಕ್ಕೆ | ಪ್ರಾಣವಿಟ್ಟಿಹನಿವನು    ||೬||

ಕಲಿಯುಗದೊಳಿವ ಜನಿಸಿ | ಛಲಗಾರನೆಂದೆನಿಸಿ |
ಇಳೆಯಾರು ಖಂಡಗಳ | ತಳಮಳವಗುಟ್ಟಿಸಿದ ||೭||

ಈಸಾಯಿಗಳಿಗೇಸು | ಮುಸಲರಿಗೆ ಮಹಮದನು |
ಹಿಂದುಮತಕೆಲ್ಲ ಯಿವ | ನಂದ ಗೋವಿಂದಹರಿ            ||೮||

ಚಿರಕಾಲ ಬಾಳುವ | ಸ್ವರಾಜ್ಯವನು ಪಡೆಯುವ |
ವರವಹರಿ ಗೋವಿಂದ | ಕರುಣಿಸಲೀಧೀರಗೆ      ||೯||