ಡಿ.ಗೋವಿಂದದಾಸ್ ಅವರು ನಮ್ಮ ಆಧುನಿಕ ಕನ್ನಡ ಸಾಹಿತ್ಯದ ಮೊದಲ ದಲಿತ ಕವಿ ಹಾಗೂ ನಾಟಕಕಾರರು. ಅಪ್ಪಟ ಗಾಂಧಿವಾದಿಗಳಾಗಿದ್ದ ಗೋವಿಂದದಾಸ್ ಅವರಿಗೆ ದೇಶಿ ಸಂಸ್ಕೃತಿಯ ಬಗ್ಗೆ ತುಂಬು ಅಕ್ಕರೆಯಿತ್ತು. ಸ್ವತಃ ಕೋಲಾಟದ ಕಲಾವಿದರು, ಸೊಗಸಾದ ಹಾಡುಗಾರರು ಆಗಿದ್ದ ಇವರು ಜನಪದ ಕಲೆಗಳ ಮಹತ್ವದ ಬಗ್ಗೆ ಸ್ಪಷ್ಟ ಅರಿವಿದ್ದವರಾಗಿದ್ದರು. ಸ್ವಚ ಹಾಗೂ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಹೆಸರಾಗಿದ್ದ ಗೋವಿಂದದಾಸ್ ಅವರು, ಈ ಸಮಾಜದಲ್ಲಿರುವ ಅಸಮಾನತೆ, ಶೋಷಣೆಯ ವಿರುದ್ಧ ಎತ್ತುತ್ತಿದ್ದ ಧ್ವನಿಗಳು ಹಾಗೂ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ತಮಗಿದ್ದ ಕಾಳಜಿ ಮುಂತಾದವುಗಳನ್ನೆಲ್ಲ ತಮ್ಮ ಕಾವ್ಯದ ವಸ್ತುವನ್ನಾಗಿಸಿಕೊಂಡು ಅಭಿವ್ಯಕ್ತಿ ಮಾಧ್ಯಮವನ್ನಾಗಿಸಿಕೊಂಡಿರುವುದು ಒಂದು ವಿಶೇಷ ಎನಿಸುತ್ತದೆ. ಅಸ್ಪೃಶ್ಯ ಕುಟುಂಬದಲ್ಲಿ ಜನಿಸಿದ ಪ್ರತಿಭಾನ್ವಿತರಾದ ಗೋವಿಂದದಾಸ್ ಅವರಿಗೆ, ಆ ಕಾಲದಲ್ಲಿ ಯಾವುದೇ ಬಗೆಯ ಸಹಜವಾದ ಬೆಂಬಲ, ಪೋತ್ಸಾಹಗಳು ಇರಲಿಲ್ಲ. ಆದರ ನಿರಂತರವಾದ ತಮ್ಮ ಪರಿಶ್ರಮದಿಂದಲೆ ಬಹುಮುಖಿ ಕಾಳಜಿಯಿಂದ, ಸಾಧನೆಗೈಯುತ್ತ ಕನ್ನಡನಾಡು, ನುಡಿ, ಸಂಸ್ಕೃತಿ ಹಾಗೂ ಸಮಾಜ ಸುಧಾರಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿರುವುದು ತುಂಬ ಮಹತ್ವದ ಸಂಗತಿ ಆಗಿದೆ.

ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದಮ್ಮನಿಂಗಳ ಇವರ ಹುಟ್ಟೂರು. ಇದು ವಿಶ್ವವಿಖ್ಯಾತ ಶ್ರವಣಬೆಳಗೊಳಕ್ಕೆ ಸುಮಾರು ನಾಲ್ಕು ಮೈಲು ದೂರದಲ್ಲಿದೆ. ಸಾಂಸ್ಕೃತಿಕವಾಗಿ ತುಂಬ ವಿಶಿಷ್ಟವಾದ ದಮ್ಮನಿಂಗಳದಲ್ಲಿ ಜನಪದ ಕಲಾವಿದರ ಒಂದು ಪಡೆಯೇ ಇದೆ. ಇಂತಹ ಊರಿನ ಕೆಂಪಮ್ಮ-ದಾಸಪ್ಪ ದಂಪತಿಗಳ ಮಗನಾಗಿ ಗೋವಿಂದದಾಸರು ೧೯೧೦ರಲ್ಲಿ ಜನಿಸಿದರು. ಆ ಕಾಲಕ್ಕೆ ಕಿಕ್ಕೇರಿ, ಕೆ.ಆರ್ .ಪೇಟೆ, ಮೈಸೂರು ಮುಂತಾದ ಕಡೆಗಳಲ್ಲಿ ದಾಸಪ್ಪ ಅವರು ಚರ್ಮದ ವ್ಯಾಪಾರಿಯಾಗಿ ಹೆಸರಾಗಿದ್ದರು. ಇವರದು ದಾನ, ಧರ್ಮ, ನ್ಯಾಯ ನಿಷ್ಠೆಗೆ ಹೆಸರಾದ ಸಂಪ್ರದಾಯಸ್ಥ ಮನೆತನ. ತಮ್ಮ ಮಗ ಈ ವ್ಯಾಪಾರದ ಲೆಕ್ಕ ಇಟ್ಟುಕೊಳ್ಳುವಷ್ಟು ಕಲಿತುಕೊಂಡರೆ ಸಾಕು ಎಂಬ ತೃಪ್ತಿ ದಾಸಪ್ಪನರಿಗೆ. ಆದರೆ ಮಗನಿಗೆ ಓದುವ ಆಸಕ್ತಿ. ಹಾಗಾಗಿ ಗೋಗಿವಂದದಾಸರು ಶ್ರವಣಬೆಳಗೊಳಕ್ಕೆ ಕದ್ದು ಬಂದು ಶಾಲೆಗೆ ಸೇರಿದರು. ದುರಂತದ ಸಂಗತಿ ಎಂದರೆ; ಇಲ್ಲಿ ಓದುತ್ತಿರುವಾಗಲೇ ಊರಿಗೆ ಬೆಂಕಿರೋಗ ಬಂದ ಇವರ ತಾಯಿ-ತಂದೆಗಳಿಬ್ಬರು ಈ ರೋಗಕ್ಕೆ ತುತ್ತಾಗಿ ಒಂದೇ ದಿನ ತೀರಿಕೊಂಡದ್ದು. ಆಗ ಇವರ ತಾತ (ತಾಯಿಯ ತಂದೆ) ದೊಡ್ಡಚಿಕ್ಕಯ್ಯನವರು ತಮ್ಮ ಊರಾದ ಜಿನ್ನೇನಹಳ್ಳಿಗೆ (ಹಿರಿಸಾವೆ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು) ಕರೆತಂದು ಅಲ್ಲಿಯ ಪ್ರಾಥಮಿಕ ಶಾಲೆಗೆ ಸೇರಿಸಿದರು. ಇವರು ದೈವಭಕ್ತರು. ಪರೋಪಕಾರಕ್ಕೆ ಹೆಸರಾದವರು. ಮೊಮ್ಮಗನನ್ನು ಪ್ರತಿಸಂಜೆ ಕೂರಿಸಿಕೊಂಡು, ರಾಮಾಯಣ-ಮಹಾಭಾರತದ ಕತೆಗಳನ್ನು ಹೇಳುತ್ತಿದ್ದವು. ಬಾಲಕ ಗೋವಿಂದದಾಸ್ ಅವರ ಮನಸ್ಸಿನ ಮೇಲೆ ಈ ಎಲ್ಲ ಪ್ರಭಾವಗಳು ಬೀರುತ್ತಿದ್ದವು. ಇಂತಹ ಪರಿಸರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಗೋವಿಂದದಾಸರು, ಮಾಧ್ಯಮಿಕ ಶಿಕ್ಷಣಕ್ಕಾಗಿ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ತುಮಕೂರಿನಲ್ಲಿ ಬಡಮಕ್ಕಳಿಗಾಗಿ ತೆರೆದಿದ್ದ ನರಸಿಂಹರಾಜ ವಸತಿ ಶಾಲೆಯನ್ನು ಸೇರಿದರು. ಹರಿಕಥೆ ಮತ್ತು ಭಜನೆಯ ಹಾಡುಗಳನ್ನು ತುಂಬ ಸೊಗಸಾಗಿ ಹಾಡುತ್ತಿದ್ದ ದಾಸರು, ಇಲ್ಲಿನ ಗುರುವೃಂದದ ಪ್ರೀತಿಗೆ ಪಾತ್ರರಾಗುತ್ತಾರೆ. ಜೊತೆಗೆ ಗುರುಗಳು ಪಾಠ ಮಾಡುತ್ತಿದ್ದ ಕಾವ್ಯವನ್ನು ಆಸಕ್ತಿಯಿಂದ ಕೇಳಿ, ಅದನ್ನು ತುಂಬ ಸೊಗಸಾಗಿ ಹಾಡುತ್ತಿದ್ದರಂತೆ. ಆ ಕಾಲಕ್ಕೆ ಕವನ ಬಗೆಯುವ ಹವ್ಯಾಸವನ್ನಿಟ್ಟುಕೊಂಡಿದ್ದ ಗೋವಿಂದದಾಸರು, ತಾವು ಬರೆದ ಕವನಗಳನ್ನೆಲ್ಲ ಗೌಪ್ಯವಾಗಿಯೇ ಇಟ್ಟುಕೊಳ್ಳುತ್ತಿದ್ದರಂತೆ. ಒಂದು ಬಗೆಯ ಅಂತರ್ಮುಖಿ ವ್ಯಕ್ತಿತ್ವದ ಗೋವಿಂದದಾಸರಿಗೆ, ಶಾಲೆಯ ವಾತಾವನ ಎಷ್ಟೇ ಹಿತವಾಗಿದ್ದರೂ, ಬಾಲ್ಯದಲ್ಲಿಯೆ ತಾಯಿ-ತಂದೆಗಳಿಬ್ಬರನ್ನು ಕಳೆದುಕೊಂಡ ತಬ್ಬಲಿತನ ಇವರನ್ನು ಕಾಡುತ್ತದೆ. ಈ ವಯಸ್ಸಿಗೆ ಹಲವು ಬಗೆಯ ಕಷ್ಟಗಳನ್ನು ಅನುಭವಿಸಿದ ಗೋವಿಂದದಾಸರು ಅಸ್ಪೃಶ್ಯತೆಯ ಕಹಿ ಅನುಭವಗಳನ್ನೆಲ್ಲ ಮೂಖವೇದನೆಯಿಂದ ಅನುಭವಿಸುತ್ತಾರೆ.

ವಿದ್ಯಾರ್ಥಿ ದೆಸೆಯಿಂದಲೇ ಗಾಂಧೀಜಿಯವರ ಅಸ್ಪೃಶ್ಯತಾ ನಿವಾರಣ, ಸುಧಾರಣ ಕೆಲಸಗಳು, ಸ್ವದೇಶಿ ಆಂದೋಲನ, ಸ್ವಾತಂತ್ರ್ಯ ಚಳುವಳಿ ಮುಂತಾದ ವಿಚಾರಧಾರೆಗಳಿಂದ ತುಂಬ ಗಂಭೀರವಾಗಿ ಪ್ರಭಾವಿತರಾಗುವ ಗೋವಿಂದದಾಸ್ ಅವರು; ಈ ಸಾಂಪ್ರದಾಯಿಕ ಶಿಕ್ಷಣದ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡು ಅಲ್ಲಿ ಫೇಲಾಗುತ್ತಾರೆ. ಹಾಗಾಗಿ ತುಮಕೂರನ್ನು ಬಿಟ್ಟು ಚಿಕ್ಕಮಂಗಳೂರಿನ ನರಸಿಂಹರಾಜ ವಸತಿಶಾಲೆಯನ್ನು ಸೇರುತ್ತಾರೆ. ಈ ವ್ಯಾಸಂಗದ ಅವಧಿಯಿಂದಲೂ ಸಮಾಜ ಸುಧಾರಣೆ ಮತ್ತು ಬರಹದ ಗೀಳನ್ನು ಹಚ್ಚಿಕೊಂಡಿದ್ದ ಇವರು, ತಾವು ಬರೆದಿದ್ದ ಕವಿತೆಗಳನ್ನು ಅಲ್ಲಿಯೆ ಇದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರರಿಗೆ ತೋರಿಸಿ, ಅವರಿಂದ ಪ್ರೋತ್ಸಾಹ ಸಿಕ್ಕಿ ಇನ್ನಷ್ಟು ಉತ್ಸಾಹದಿಂದ ಬರೆಯುತ್ತಾರೆ. ಜೊತೆಗೆ ಆ ಕಾಲಕ್ಕಾಗಲೆ ಕನ್ನಡನಾಡು-ನುಡಿಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತ ಹೆಸರಾಗಿದ್ದ ಕವಿ ಬಿ.ಎಂ.ಶ್ರೀಕಂಠಯ್ಯ ಅವರನ್ನು ಭೇಟಿಯಾಗಿ ತಮ್ಮ ಕವನಗಳನ್ನು ತೋರಿಸಿ, ಅವರಿಂದಲೂ ಉಪಯುಕ್ತ ಸಲಹೆಗಳನ್ನು ಪಡೆದುಕೊಂಡು ಗಂಭೀರವಾಗಿ ಕಾವ್ಯಕೃಷಿಯಲ್ಲಿ ತೊಡಗುತ್ತಾರೆ. ೧೯೩೭ರಲ್ಲಿ ಪ್ರಕಟವಾಗಿರುವ ತಮ್ಮ ‘‘ಹರಿಜನಾಭ್ಯುದಯ’’ ಕವನ ಸಂಕಲನದ ವಿಜ್ಞಾಪನೆಯಲ್ಲಿ ಪ್ರೋತ್ಸಾಹಿಸಿದ ಈ ಲೇಖಕರನ್ನೆಲ್ಲ ಗೌರವದಿಂದ ನೆನೆಸಿಕೊಂಡಿದ್ದಾರೆ.

ಮಾಧ್ಯಮಿಕ ಶಿಕ್ಷಣವನ್ನು ಚಿಕ್ಕಮಗಳೂರಿನಲ್ಲಿ ಮುಗಿಸಿದ ನಂತರ ಆರ್ಥಿಕವಾಗಿ ತೊಂದರೆಯಲ್ಲಿದ್ದ ಗೋವಿಂದದಾಸರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ವಲ್ಪ ದಿನಗಳು ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಾರೆ. ಅಲ್ಲಿಯೂ ಕೂಡ ಅಸ್ಪೃಶ್ಯತೆಯ ಅಪಮಾನವನ್ನು ಅನುಭವಿಸಿ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ. ಆಗ ಮಾಸ್ತಿಯವರು ಸರ್ಕಾರಿ ಕೆಲಸದಲ್ಲಿಯೇ ಮುಂದುವರಿಯುವಂತೆ ಸಲಹೆ ನೀಡುತ್ತಾರೆ. ಆಗ ಗೋವಿಂದದಾಸರು ‘ನನಗೆ ಸರ್ಕಾರಿ ಕೆಲಸ ಬೇಡ. ನಾನು ಭಾಷೆ ಮತ್ತು ಸಮಾಜ ಸುಧಾರಣೆಯ ಕೆಲಸವನ್ನು ಮಾಡುತ್ತೇನೆ. ಇದಕ್ಕೆ ತಮ್ಮ ಸಹಾಯವಿರಲಿ’ ಎಂದು ತುಂಬ ವಿನಯದಿಂದಲೇ ತಿಳಿಸಿ, ಈ ಅಸ್ಪೃಶ್ಯತೆಯ ನಿವಾರಣೆಗಾಗಿ ಕೆಲಸ ಮಾಡಲೇಬೇಕು ಎಂಬ ನಿಶ್ಚಯದಿಂದ ತಮ್ಮ ತವರು ಜಿಲ್ಲೆಯಾದ ಹಾಸನಕ್ಕೆ ಬಂದು ಹರಿಜನ ಕೇರಿಗಳನ್ನು ಪ್ರವೇಶ ಮಾಡುತ್ತಾರೆ. ಈ ಜನಾಂಗದಲ್ಲಿದ್ದ ಅಜ್ಞಾನ, ಮೂಢನಂಬಿಕೆ, ಅಶುಚಿಯನ್ನು ಹೋಗಲಾಡಿಸಿ, ಸ್ವಭಿಮಾನದ ಬದುಕನ್ನು ನಡೆಸುವಂಥ ವಿಚಾರಗಳನ್ನು ನೀಡುತ್ತಾರೆ. ಮುಖ್ಯವಾಗಿ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಬೇಕು ಎಂಬ ಅರಿವನ್ನು ನೀಡುತ್ತ ತಮ್ಮ ಸಾತ್ವಿಕ ಮನೋಧರ್ಮದಿಂದಲೆ ಜಾಗೃತಿಯನ್ನುಂಟುಮಾಡಲು ಶ್ರಮಿಸುತ್ತಾರೆ. ಆಗ ಬರೆದ ‘ಹರಿಜನರಿಗೆ ಹಿತಬೋಧೆ’ ಎಂಬ ಪದ್ಯದಲ್ಲಿ

ಏಳಿ ಹರಿಜನರೆ ಯನ್ನವರೇ ||ಪ||
ಏಳಿರಿತಾಳದೆ | ಎಚ್ಚರಗೊಳ್ಳಿರಿ ||ಅ||
————————
ಸೇವಿಸದಿರಿಮದ್ಯಯಿ | ದೆಂದಿಗೂ
ಭಾವಿಸದಿರ ಸದ್ಯ |
ಸೇವಿಸಿದೊಡೆಹಾ | ಳೆಮ್ಮೆಯಬಾಳು |
‘ಹರಿಜನಾಭ್ಯುದಯ’ ಕವನ ಸಂಕಲನ)

ಎಂದು ತುಂಬು ಕಳಕಳಿಯಿಂದ ಜಾಗೃತಿಯನ್ನುಂಟು ಮಾಡಲು ಯತ್ನಿಸಿದ್ದಾರೆ.

ಸಮಾಜ ಸುಧಾರಣೆ ಮತ್ತು ಬರವಣಿಗೆಯಲ್ಲಿ ಆಸಕ್ತರಾಗಿದ್ದ ಗೋವಿಂದದಾಸರಿಗೆ, ಶಾಲೆ ಬಿಡುವುದು, ಮತ್ತೆ ಸೇರುವುದು ಇದು ಮಾಮೂಲಾಗಿರುತ್ತದೆ. ಹಾಗಾಗಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹರಿಜನ ಜಾಗೃತಿ ಮೂಡಿಸುತ್ತಲೆ, ಮತ್ತು ಓದಲೇ ಬೇಕೆನಿಸಿ ಹಾಸನದ ಸರ್ಕಾರಿ ಪ್ರೌಢಶಾಲೆಗೆ ಸೇರುತ್ತಾರೆ. ಇಲ್ಲಿ ಒಂದು ವರ್ಷ ಓದಿದ ನಂತರ ಬೆಂಗಳೂರಿನ ಕೊಲಿಜಿಯೆಟ್ ಹೈಸ್ಕೂಲನ್ನು (ಪ್ರೋರ್ವ್ ಹೈಸ್ಕೂಲೆಂದು ಕರೆಯುತ್ತಾರೆ.) ಸೇರಿ, ನರಸಿಂಹರಾಜ ಹಾಸ್ಟೆಲಿನ ನಿವಾಸಿಯಾಗುತ್ತಾರೆ. ಅಲ್ಲಿದ್ದಾಗ ಪ್ರಸಿದ್ದ ಸಮಾಜ ಸುಧಾರಕರಾದ ಆರ್.ಗೋಪಾಲಸ್ವಾಮಿ ಅಯ್ಯರ್ ಅವರ ದಟ್ಟ ಪ್ರಭಾವಕ್ಕೆ ಒಳಗಾಗುತ್ತಾರೆ. ಅಯ್ಯರ್ ಅವರು, ಬೆಂಗಳೂರಿಗೆ ಭೇಟೆ ನೀಡುತ್ತಿದ್ದ ಗಾಂಧೀಜಿ, ಮದನ್ ಮಾಳವೀಯ, ಸಿ.ಎಫ್ .ಆಂಡ್ರ್ಯೂಸ್, ಅನಿಬೆಸೆಂಟ್, ಅಲ್ಲಾಡಿ ಕೃಷ್ಣಸ್ವಾಮಿ ಮುಂತಾದವರುಗಳನ್ನು ಕರೆತಂದು ಉಪನ್ಯಾಸ ಕೊಡಿಸುತ್ತಿರುತ್ತಾರೆ. ಆ ಕಾಲಕ್ಕಾಗಲೆ ‘ಹರಿಜನ ತರುಣ ಕವಿ’ ಎಂದೆ ಹೆಸರಾಗಿದ್ದ ಗೋವಿಂದದಾಸ್ ಅವರು ಹರಿಜನ ಸಮಾಜದ ಏಳಿಗೆಗೆ ಸಹಾಯ ಮಾಡುತ್ತಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಕುರಿತಂತೆ ಪದ್ಯ ಬರೆದು ಅವರಿಗೆ ಗೌರವ ಸೂಚಿಸಿದ್ದರಂತೆ.

ಮೂಲತಃ ಅಂತರ್ಮುಖಿ ವ್ಯಕ್ತಿತ್ವದವರಾಗಿದ್ದ ಗೋವಿಂದದಾಸ್ ಅವರು, ತಾವು ವಾಸಿಸುತ್ತಿದ್ದ ನರಸಿಂಹರಾಜ ವಿದ್ಯಾಥಿರ ನಿಲಯದಿಂದ, ಬೆಳಿಗ್ಗೆ ಪ್ರತಿನಿತ್ಯವು ಕುಮಾರಪಾರ್ಕಿನ ಹಿಂದುಗಡೆಯ ಗುಡ್ಡಗಳನ್ನೆಲ್ಲ ಸುತ್ತಾಡುತ್ತ, ಈಗಿನ ರೈಲ್ವೆ ಸ್ಟೇಷನ್ ವರೆಗೂ, ವಾಯುವಿಹಾರಕ್ಕೆ ಹೋಗುತ್ತಿದ್ದರಂತೆ. ಒಂದು ದಿನ ರೈಲ್ವೆ ಸ್ಟೇಷನ್ ಹತ್ತಿರದಲ್ಲಿ ಉತ್ತರ ಭಾರತದ ಸಾಧುವೊಬ್ಬರು, ಇವರನ್ನು ನೋಡುತ್ತಾರೆ. ಈ ಯುವಕನಲ್ಲಿ ಏನೊ ಒಂದು ವಿಶಿಷ್ಟತೆ ಇದೆ ಎಂಬುದನ್ನು ಗುರುತಿಸಿ, ಪರಿಚಯಿಸಿಕೊಂಡು, ‘ಮಗು ಭರತಖಂಡದ ದೊಡ್ಡ ದೊಡ್ಡ ಸ್ಥಳಗಳನ್ನು ನನ್ನ ಸ್ವಂತ ಖಚಿರನಲ್ಲಿ ತೋರಿಸುತ್ತೇನೆ, ಬರುತ್ತೀಯಾ’ ಎಂದು ಕೇಳಿದರಂತೆ. ಆಗ, ಈ ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಜೀವನದ ಶಿಕ್ಷಣದ ಕಡೆ ಹೆಚ್ಚು ಒಲವಿದ್ದ ಗೋವಿಂದದಾಸ್ ಅವರು, ತುಂಬ ಸಂತೋಷದಿಂದ ಒಪ್ಪಿಕೊಂಡರಂತೆ. ಆ ಸಾಧುವಿನ ಜೊತೆಯಲ್ಲಿ ಹರಿದ್ವಾರ, ಗಯಾ, ಹೃಷಿಕೇಶ, ನಾಸಿಕ್, ಫಂಡರಾಪುರ, ಸೂರತ್, ದ್ವಾರಕೆ ಮುಂತಾದ ಸ್ಥಳಗಳನ್ನು ನೋಡುತ್ತಾರೆ. ಭಜನೆ ಮತ್ತು ಹರಿಕಥೆಯ ಹಾಡುಗಳನ್ನು ತುಂಬ ಸೊಗಸಾಗಿ ಹಾಡುತ್ತಿದ್ದ ಗೋವಿಂದದಾಸರನ್ನು, ಪ್ರವಾಸ ತಂಡದಲ್ಲಿದ್ದ ಸಾಧು ಹೆಂಗಸರು ಸೇರಿದ ಹಾಗೆ, ಅವರೆಲ್ಲರು ತುಂಬ ಪ್ರೀತಿಯಿಂದ, ನೋಡಿಕೊಂಡರಂತೆ. ಒಮ್ಮೆ ದೋಣಿಯಲ್ಲಿ ಸಾಗುತ್ತಿದ್ದಾಗ ಭಕ್ತಿಪೂರ್ವವಾಗಿ ಭಜನೆಗಳನ್ನು ಹಾಡುತ್ತಿದ್ದ ಗೋವಿಂದದಾಸರು ಸಮುದ್ರಕ್ಕೆ ಬಿದ್ದುಬಿಟ್ಟರಂತೆ. ಆಗ ಸಾಧು ತಂಡದಲ್ಲಿದ್ದ ಹೆಂಗಸರು ಇವರ ಜುಟ್ಟನ್ನು ಹಿಡಿದುಕೊಂಡು ಮೇಲೆತ್ತಿ ಇವರ ಪ್ರಾಣ ಉಳಿಸಿದರಂತೆ. ಈ ಎಲ್ಲ ಅನುಭವಗಳನ್ನು ಅಪ್ರಕಟಿತವಾಗಿರುವ ಅವರ ಆತ್ಮಕಥನದಲ್ಲಿ ದಾಖಲಿಸಿದ್ದಾರೆ. ಈ ಬಗೆಯ ಕೆಲ ಅನುಭವಗಳು, ೧೯೩೨ರಲ್ಲಿ ಪ್ರಕಟವಾಗಿರುವ ‘‘ಹರಿಜನಾಭೃದಯ’’ ಕವನ ಸಂಕಲನದ ಪದ್ಯದಲ್ಲಿಯೂ ಸೇರಿಕೊಂಡಿವೆ. ಇವರ ಅಪ್ರಕಟಿತ ಕೃತಿಗಳು : ‘‘ವಿಕ್ರಮ ವಿಜಯ’’ (ನಾಟಕ) ‘‘ನಡುನೀರಿನ ಹಡಗು’’ (ನಾಟಕ) ‘‘ಕಲಿಯುಗದ ಮನು’’(ನಾಟಕ) ಗೋವಿಂದದಾಸರ ಈ ಅಪ್ರಕಟಿತ ಕೃತಿಗಳೆಲ್ಲವು ಅವರ ಹಸ್ತಾಕ್ಷರದಲ್ಲಿವೆ. ೧೯೭೧ರಲ್ಲಿ ಸರ್ಕಾರವು ಗೋವಿಂದದಾಸರಿಗೆ ಅವರ ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಗುರುತಿಸಿ ರಾಜ್ಯಪ್ರಶಸ್ತಿಯನ್ನು ನೀಡಿದೆ. ಆ ಪತ್ರದಲ್ಲಿ ಈ ಬಗೆಗಿನ ಎಲ್ಲ ವಿವರಗಳು ಸಿಕ್ಕುತ್ತವೆ.

ಪ್ರವಾಸದಿಂದ ವಾಪಸ್ಸಾದ ನಂತರವೂ ಪ್ರೌಢಶಿಕ್ಷಣವನ್ನು ಮುಗಿಸಿದರಾದರೂ ಮುಂದೆ ಶಿಕ್ಷಣವನ್ನು ಮುಂದುವರಿಸಲಿಲ್ಲ. ಗೋಪಾಲಸ್ವಾಮಿ ಅಯ್ಯರ್, ಗಾಂಧೀಜಿ ಮುಂತಾದವರ ಪ್ರಭಾವಕ್ಕೆ ಒಳಗಾಗಿದ್ದ ಗೋವಿಂದದಾಸರು, ಬರಹ ಮತ್ತು ಸಮಾಜ ಸುಧಾರಣೆಯ ಕಡೆ ಗಮನಹರಿಸುತ್ತಾರೆ. ಹೀಗೆ ಇವರ ವಿಚಾರಧಾರೆಯನ್ನು ಜನಸಾಮಾನ್ಯರಿಗೆ ಮನತಾಕುವಂತೆ ತಿಳಿಸಲು ಅವರು ಆಯ್ಕೆ ಮಾಡಿಕೊಂಡ ಮಾಧ್ಯಮ ಎಂದರೆ, ಬರವಣಿಗೆ, ಬುದ್ಧ, ನಾಲ್ವಡಿ ಕೃಷ್ಣರಾಜ ಒಡೆಯರ್, ಅಯ್ಯರ್, ಗಾಂಧಿ, ಅಂಬೇಡ್ಕರ್ ಮುಂತಾದವರ ವಿಚಾರಧಾರೆಗಳನ್ನು ಆಧರಿಸಿ, ತಾವೇ ರಚಿಸಿದ ಕವನಗಳನ್ನು ಮನಮುಟ್ಟುವಂತೆ ಹಾಡುತ್ತ ಜನರನ್ನು ಜಾಗೃತಿಗೊಳಿಸಿದರು. ಮುಖ್ಯವಾಗಿ ದಲಿತರಲ್ಲಿದ್ದ ಅಜ್ಞಾನವನ್ನು ಹೋಗಲಾಡಿಸಿ, ಬದುಕಿನ ಆತ್ಮವಿಶ್ವಾಸವನ್ನು ಮೂಡಿಸುವಂಥ ಶಿಕ್ಷಣವನ್ನು ಅಗತ್ಯವಾಗಿ ಪಡೆದುಕೊಳ್ಳಬೇಕೆಂಬ ಅರಿವನ್ನು ಮೂಡಿಸಿದರು. ಸವರ್ಣೀಯರು ಹರಿಜನರನ್ನು ದೇವಸ್ಥಾನಗಳಿಗೆ ಸೇರಿಸದಿರುವುದನ್ನು ಖಂಡಿಸುತ್ತ, ಸರ್ಕಾರವೆ ದೇವಾಲಯಗಳನ್ನೆಲ್ಲ ವಹಿಸಿಕೊಂಡು, ಹರಿಜನರಿಗೆ ದೇವಾಲಯಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯ ತಂದರು. ವಿಶ್ವವಿಖ್ಯಾತ ಶ್ರಮಣಬೆಳಗೊಳದಲ್ಲಿ ಗೊಮ್ಮಟನನ್ನು ನೋಡಲು ಕೂಡ ಹರಿಜನರಿಗೆ ಪ್ರವೇಶ ಇರಲಿಲ್ಲ. ಇದನ್ನು ೧೯೩೪ರಲ್ಲಿಯೆ ಗೋವಿಂದದಾಸರು ಉಗ್ರವಾಗಿ ಖಂಡಿಸಿ ಪ್ರತಿಭಟಿಸಿ ದಲಿತರಿಗೆ ಪ್ರವೇಶ ದೊರಕಿಸಿಕೊಡುತ್ತಾರೆ. ಈ ಸಂದರ್ಭದಲ್ಲಿ

ನಾನೆಂಥ ಭಾಗ್ಯಹೀನನೊ ಹೇ ಗೊಮ್ಮಟೇಶ
ನೀನೆಂಥ ಪಕ್ಷಪಾತಿಯೊ ಹೇ ಭಕ್ತಿಕೋಶ (ಗೊಮ್ಮಟೇಶ)

ಎಂದು ತುಂಬ ನೋವಿನಿಂದ ವಿಷಾದ ವ್ಯಕ್ತಪಡಿಸುತ್ತಾರೆ. ಮೈಸೂರು ರಾಜ್ಯದ ಹರಿಜನ ಸೇವಾ ಸಂಘದ ಹಾಸನ ಜಿಲ್ಲಾ ಪ್ರಚಾರಕರಾಗಿ, ಮೈಸೂರು ರಾಜ್ಯದ ಆದಿಕರ್ನಾಟಕ ಅಭಿವೃದ್ದಿ ಸಂಘದ ಉಪಾಧ್ಯಕ್ಷರಾಗಿ ಕೆಲಸ ಮಾಡುವಾಗ ಕೂಡ ಈ ಬಗೆಯ ಹಲವಾರು ಸುಧಾರಣೆ ಕೆಲಸಗಳನ್ನು ಮಾಡಿದ್ದಾರೆ.

ಸಾಧುವಿನೊಟ್ಟಿಗೆ ಉತ್ತರ ಭಾರತದ ಪ್ರವಾಸ ಗೋವಿಂದದಾಸರ ಬದುಕಿನ ಒಂದು ಪ್ರಮುಖ ಘಟ್ಟ. ಇದು ಅವರ ಬದುಕಿನ ದಿಕ್ಕನ್ನೆ ಬದಲಿಸಿತು. ಈ ಪ್ರಭಾವದಿಂದ ಗೋವಿಂದದಾಸರು ಅಸ್ಪೃಶ್ಯ ಅನಾಥ ಮಕ್ಕಳಿಗಾಗಿ ಅನಾಥಶ್ರಮವನ್ನು ತೆರೆಯಬೇಕೆಂದು ತೀರ್ಮಾನಿಸುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ತಾಯಿ ತಂದೆಯನ್ನು ಒಂದು ದಿನ ಕಳೆದುಕೊಂಡ ಗೋವಿಂದದಾಸರಿಗೆ ತಬ್ಬಲಿತನದ ನೋವು, ಅನಾಥಪ್ರಜ್ಞೆ, ತೀವ್ರವಾಗಿ ಕಾಡುತ್ತಿತ್ತು ಅನ್ನಿಸುತ್ತದೆ. ಹಾಗಾಗಿ, ಹಾಸನ ಜಿಲ್ಲೆಯ, ಹೊಳೇನರಸಿಪುರ ತಾಲ್ಲೂಕಿನ ಹಳೇಕೋಟೆ ಸಮೀಪದ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ಆಶ್ರಮಕ್ಕಾಗಿ ಸರ್ಕಾರದಿಂದ ಸುಮಾರು ನಾಲ್ಕು ಎಕರೆ ಭೂಮಿಯನ್ನು ಮಂಜೂರಿ ಮಾಡಿಸಿಕೊಳ್ಳುತ್ತಾರೆ. ಈ ಜಾಗ ಬೆಟ್ಟದ ತಪ್ಪಲಿನಲ್ಲಿ ಝಳಝಳ ಹರಿಯುವ ಹಳ್ಳದ ದಂಡೆಯಲ್ಲಿದೆ. ಒಬ್ಬಿಬ್ಬರು ಅಲ್ಲಿ ಹೋಗಲು ಭಯ ಹುಟ್ಟಿಸುವಷ್ಟು ದಟ್ಟ ಕಾಡಿರುವ ನಿರ್ಜನ ಪ್ರದೇಶ. ಹಲವು ಬಗೆಯ ಪ್ರಾಣಿ ಪಕ್ಷಿಗಳ ವಾಸಸ್ಥಾನವಾದ ಈ ನಿರ್ಮಲ ಪ್ರದೇಶ; ಧ್ಯಾನ, ತಪಸ್ಸು, ಚಿಂತನೆ ಹಾಗೂ ಕಾವ್ಯಸೃಷ್ಟಿಗೆ ಹೇಳಿ ಮಾಡಿಸಿದ ಜಾಗ. ಮೂಲತಃ ಕವಿಹೃದಯದ ಗೋವಿಂದದಾಸ್ ಅವರಿಗೆ ಬಲು ಇಷ್ಟವಾದ ಸ್ಥಳ ಇದಾಗಿತ್ತು. ಇಲ್ಲಿ ಮಕ್ಕಳಿಗೆ ಬೇಕಾಗುವ ಆಹಾರ, ತರಕಾರಿ, ಹಣ್ಣು-ಹಂಪಲುಗಳನ್ನು ಬೆಳೆಯಲು ಜಾಗವನ್ನು ಹದ ಮಾಡಿ ಸಸಿಗಳನ್ನು ನೆಡಿಸಿದ್ದರಂತೆ. ಮುಂದಿನ ವರ್ಷ ಕರೆತರಲಿರುವ ಮಕ್ಕಳಿಗಾಗಿ ಆಶ್ರಮವನ್ನು ಹುಲ್ಲು ಜೋಪಡಿಗಳಿಂದ ತಮ್ಮದೇ ಆದ ದೃಷ್ಟಿಕೋನದಲ್ಲಿ ತುಂಬ ಅಂದವಾಗಿ ಕಟ್ಟಿಸಿದ್ದರಂತೆ. ಈ ನಿರ್ಜನ ಪ್ರದೇಶದಲ್ಲಿ ಒಂದು ವರ್ಷ ಅವರ ಪತ್ನಿಯವರೊಡನೆ ಕಳೆದಿದ್ದರು. ಇವರ ದಿನಚರಿಯೆ ವಿಶಿಷ್ಟವಾಗಿದೆ. ದಿನಕ್ಕೆ ಎರಡು ಊಟ ಮಾತ್ರ. ಬೆಳಿಗ್ಗೆ ಎದ್ದು ತೊರೆಯ ಸ್ನಾನ. ಬೆಟ್ಟ ಹತ್ತಿ ಅದರ ತುದಿಯಲ್ಲಿ ಕುಳಿತು ಧ್ಯಾನ ಮತ್ತು ತಪಸ್ಸು. ನಂತರ ಆಶ್ರಮವನ್ನು ಹದಗೊಳಿಸುವ ಕೆಲಸ. ಹನ್ನೊಂದು ಘಂಟೆಗೆ ಊಟ. ನಂತರ ಹಳ್ಳದಂಡೆಯ ನಿರ್ಜನ ಪ್ರದೇಶದ ಆಶ್ರಮದಲ್ಲಿ ಕುಳಿತು ಓದು, ಬರಹ, ಚಿಂತನೆ, ಸಂಜೆ ಮತ್ತೆ ತೊರೆಯ ಸ್ನಾನ, ಧ್ಯಾನ, ಭಜನೆ. ಈ ನಡುವೆ ಬಿಡುವು ಮಾಡಿಕೊಂಡು ಜನರ ಕೆಲಸ. ಹೀಗೆ ಈ ಆಶ್ರಮವನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು, ಸಮಾಜಸೇವೆ ಮತ್ತು ಬರಹವನ್ನು ಬದುಕಿನ ಉಸಿರಾಗಿಸಿಕೊಂಡು, ಆರೋಗ್ಯಕರ ಸಮಾಜದ ಬಹುದೊಡ್ಡ ಕನಸನ್ನೊತ್ತು ಶ್ರಮಿಸುತ್ತಿದ್ದರು. ಇವರ ಸಮಾಜ ಸೇವೆಯನ್ನು ಗುರುತಿಸಿ ಆಗಿನ ಸರ್ಕಾರ ಗೋವಿಂದದಾಸ್ ಅವರನ್ನು ‘ಡಿಪ್ರೆಸ್ಡ್ ಕಮಿಟಿ’ಯ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಈ ಕಮಿಟಿಯ ಮೀಟಿಂಗ್ ಗಾಗಿ, ಇವರ ಪತ್ನಿಯನ್ನು ಪಕ್ಕದ ಕಾರ್ಲೆ ಗ್ರಾಮದ ನೆಂಟರ ಮನೆಯಲ್ಲಿ ಬಿಟ್ಟು ಬೆಂಗಳೂರಿಗೆ ಹೋಗಿದ್ದರು. ಸಮಾಜ ಸುಧಾರಣೆಗಾಗಿ ಶ್ರಮಿಸುತ್ತಿದ್ದ ಇವರ ಕೆಲಸಗಳನ್ನು ಸಹಿಸದ ಕ್ರೂರ ಜಾತಿ ಕ್ರಿಮಿಗಳು, ಹೊಂಚು ಹಾಕಿ, ಇವರಿಲ್ಲದ ಈ ಸಮಯದಲ್ಲಿ ಆಶ್ರಮದ ಗುಡಿಸಲುಗಳಿಗೆಲ್ಲ ಬೆಂಕಿ ಹಾಕಿ ಭಸ್ಮಮಾಡಿದವು. ಅಲ್ಲಿ ತಲೆ ಎತ್ತುತ್ತಿದ್ದ ಹೂವು, ಗಿಡ, ಮರಬಳ್ಳಿ, ಫಸಲುಗಳನ್ನೆಲ್ಲ ನಾಶಮಾಡಿದರು. ಕಾರ್ಲೆಯಲ್ಲಿದ್ದ ಇವರ ಅಭಿಮಾನಿಗಳು ಹಾಸನಕ್ಕೆ ಬಂದು, ಬೆಂಗಳೂರಿನಿಂದ ರೈಲಿನಲ್ಲಿ ಬರುತ್ತಿದ್ದ ಗೋವಿಂದದಾಸ್ ಅವರಿಗೆ ಈ ದುರಂತದ ಸುದ್ದಿಯನ್ನು ಮುಟ್ಟಿಸಿದರು. ಈ ಕ್ರೂರ ಸುದ್ದಿಯನ್ನು ಕೇಳಿದ ದಾಸರು ಅತೀವ ದುಃಖಕ್ಕೆ ಈಡಾಗುತ್ತಾರೆ. ಅವರ ಮಾತಿನಲ್ಲಿಯೆ ಹೇಳುವುದಾದರೆ ‘‘ಈ ಸುದ್ದಿಯನ್ನು ಕೇಳಿ ಒಂದೇ ಸಾರಿ ಇದ್ದಕ್ಕಿದ್ದ ಹಾಗೆಯೆ ಸಾವಿರ ಸಿಡಿಲು ಬಡಿದಂತಾಯಿತು. ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದುಬಿಟ್ಟೆನು. ಒಂದು ಘಂಟೆಯಾದ ನಂತರ ಚೇತರಿಸಿಕೊಂಡು ವಿಚಾರವನ್ನು ಕೇಳಿ ಆದುದಾಯಿತೆಂದು ಹೊರಟಿದ್ದೆ. ಆದರೆ ಅನೇಕರು ಪುನಃ ಅಲ್ಲಿಗೆ ಹೋಗಬೇಡವೆಂದು ತಡೆದರು. ನಂತರ ಅದೇ ವ್ಯಥೆಯಲ್ಲಿ ಮೂರು ತಿಂಗಳು ಹಾಸಿಗೆಯನ್ನು ಹಿಡಿದೆನು.’’ (ಇವರ ಆತ್ಮಕಥನದಿಂದ ಈ ಮಾತುಗಳನ್ನು ಆಯ್ದುಕೊಳ್ಳಲಾಗಿದೆ) ಎಂಬ ಅವರ ಮಾತುಗಳು, ಅಸ್ಪೃಶ್ಯ ಅನಾಥಮಕ್ಕಳ ಏಳಿಗೆ ಮತ್ತು ಗಹನವಾದ ಕಾವ್ಯಸೃಷ್ಟಿಯ ಕನಸನ್ನೊತ್ತು ನಿರ್ಮಾಣ ಮಾಡುತ್ತಿದ್ದ ಅವರ ಆಸೆ ಛಿದ್ರಗೊಂಡಾಗ, ಅವರ ಮುಗ್ಧ ಮನಸ್ಸಿಗಾದ ತೀವ್ರ ನೋವನ್ನು ವ್ಯಕ್ತಪಡಿಸುತ್ತವೆ.

ಗೋವಿಂದದಾಸ್ ಅವರು ಒಂದರ್ಥದಲ್ಲಿ ಬೆಂಕಿಯಲ್ಲಿ ಅರಳಿದ ಹೂವಿನ ಕವಿ. ನವೋದಯದ ಕಾಲಘಟ್ಟದ ಮೊದಲ ತಲೆಮಾರಿನಲ್ಲಿಯೆ ಕಾವ್ಯ ಬರೆಯಲು ಪ್ರಾರಂಭಿಸಿದವರು. ಆದರೆ ಕಾವ್ಯ ಬರೆಯುವುದಷ್ಟೇ ಇವರ ಕೆಲಸವಾಗಿರಲಿಲ್ಲ. ಬಡತನದ ಬೇಗೆಯಲ್ಲಿ ನೋಯುತ್ತಲೆ, ಜಾತೀಯತೆಯ ಕ್ರೌರ್ಯದ ವಿರುದ್ಧ ಸೆಣಸುತ್ತಾರೆ. ಅತಂತ್ರ, ಅಭದ್ರತೆಯ ನಡುವೆಯೂ ವಿಚಿತ್ರವಾದ ಸ್ವಾಭಿಮಾನ, ಹಠದಿಂದ ಶಿಕ್ಷಣ ಪಡೆದು, ಧ್ವನಿಯೆ ಇಲ್ಲದವರ ಧ್ವನಿಯಾಗಲು ಸೋಲು ಗೆಲುವುಗಳ ನಡುವೆಯೂ ಶ್ರಮಿಸುತ್ತಾರೆ. ಮಾಸ್ತಿ, ಬಿ.ಎಂ.ಶ್ರೀ ಅವರಂಥ ಹಿರಿಯ ಕವಿಗಳ ಸಮಕಾಲೀನರಾಗಿದ್ದ ಗೋವಿಂದದಾಸರು, ಇವರಿಂದ ಸಣ್ಣಪುಟ್ಟ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಈ ಕಾಲದಲ್ಲಿ ಮಾಧ್ಯಮಗಳೆ ಕಡಿಮೆ ಇದ್ದರೂ ಈ ಜಾತೀಯತೆಯ ಕ್ರೌರ್ಯ ಬೇರೆ. ಈ ಎಲ್ಲ ಅಸಹಾಯಕತೆಯ ನಡುವೆಯೂ ಬರಹದ ಗೀಳನ್ನಚ್ಚಿಕೊಂಡಿದ್ದ ದಾಸರು ಕವನ ಸಂಕಲನವನ್ನು ಹೊರತರಲು, ತಾವು ಬರೆದ ಕವನಗಳ ಬಗ್ಗೆ ಚರ್ಚಿಸಲು, ದಾವಣಗೆರೆಯಲ್ಲಿದ್ದ ಪ್ರಖ್ಯಾತ ಸಾಹಿತಿಗಳಾದ ಹಾಸನದ ರಾಜರಾವ್ ಹತ್ತಿರಕ್ಕೆ ನಡೆದುಕೊಂಡೆ ಹೋಗುತ್ತಾರೆ. ಇವರ ಅಸಹಾಯಕ ಪ್ರತಿಭಾವಂತ ತರುಣ ಕವಿಯನ್ನು ನೋಡಿ ರಾಜರಾವ್ ಅವರು ಸಹಾಯ ಮಾಡುತ್ತಾರೆ. ಆ ಕಾಲಕ್ಕೆ ಕರ್ನಾಟಕಾಂಧ್ರ ಕವಿಗಳೆಂದು ಹೆಸರಾಗಿದ್ದ ಹರಿಕಥಾ ವಿದ್ವಾಂಸರಾದ ಬಿ.ಭೀಮರಾಜು ಅವರಿಂದ, ೧೯೩೭ರಲ್ಲಿ ಹಾಸನದ ಹರಿಜನ ಸೇವಕ ಸಂಘದವರು ಪ್ರಕಟಿಸಿರುವ, ತಮ್ಮ ‘‘ಹರಿಜನಾಭ್ಯುದಯ’’ ಕವನ ಸಂಕಲನಕ್ಕೆ ಮುನ್ನುಡಿ ಬರೆಸಿದ್ದಾರೆ. ತಮ್ಮ ಎಲ್ಲ ಅಭದ್ರತೆ, ಅಸಹಾಯಕತೆಗಳ ನಡುವೆ ಕೂಡ, ಬರವಣಿಗೆಯ ಗೀಳಿನಿಂದ ಈ ಬಗೆಯ ಪ್ರಯತ್ನ ಮಾಡಿರುವುದು ಗಮನಾರ್ಹ ಸಂಗತಿ ಎನಿಸುತ್ತದೆ.

ಹಾಸನದ ರಾಜರಾವ್ ಅವರು ಗೋವಿಂದದಾಸ್ ಅವರಿ ‘‘ಹರಿಜನಾಭ್ಯುದಯ’’ ಕವನ ಸಂಕಲನಕ್ಕೆ ಮೆಚ್ಚಿಗೆ ಬರೆಯುತ್ತ : ‘‘The language of the poems is simple and homely. The matter of the poems makes a direct appeal to the hearts of the audience any one. mr.Das has a sweet of the Adikarnataka Community any one. Mr.Das has a sweet of the Adikarnataka Community and with due encouragement and cultivation of his powers he is sure to become a popular writer in kannada. He deserves every Encouragemnt of the hands of the kannada Loving public’’ ಎಂದು ಮನಮೆಚ್ಚಿ ಪ್ರೋತ್ಸಾಹಿಸಿದ್ದಾರೆ. ಈ ಕೃತಿಗೆ ಮುನ್ನುಡಿ ಬರೆದಿರುವ ಬಿ. ಭೀಮರಾಜು ಅವರು ‘‘ಶ್ರೀ ಡಿ.ಗೋವಿಂದದಾಸರು ಈ ಕೃತಿಯನ್ನು ರಚಿಸಿ ಹರಿಜನರಿಗೆ ಮಾತ್ರವಲ್ಲ. ಇಡೀ ಮಾನವ ಪ್ರಪಂಚಕ್ಕೇನೆ ಅದರಲ್ಲೂ ಕರ್ನಾಟಕ ಜನರಿಗೆ ಮಹದುಪಕಾರ ಮಾಡಿರುವರು’’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೋವಿಂದದಾಸ್ ಅವರ ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಸರ್ಕಾರ ೧೯೪೨ರಲ್ಲಿ ಮೈಸೂರು ಪ್ರಜಾಪ್ರತಿನಿಧಿ ಸಭಾದ ಸದಸ್ಯರನ್ನಾಗಿ(ಎಂ.ಆರ್ .ಎ.) ನೇಮಕ ಮಾಡಿತು. ನಂತರ ೧೯೪೮ರಲ್ಲಿ ಮೈಸೂರು ರಾಜ್ಯದ ರಾಜ್ಯಾಂಗ ಸಭಾದ (ಎಂ.ಸಿ.ಎ) ಹಾಸನ ಜಿಲ್ಲಾ ಪ್ರತಿನಿಧಿಯಾಗಿ, ೧೯೫೨ರಲ್ಲಿ ಬೇಲೂರು ತಾಲೂಕಿನ ವಿಧಾನಸಭಾ ಸದಸ್ಯರಾಗಿ ಕೆಲಸ ಮಾಡಿದರು. ಜೊತೆಗೆ ಹಾಸನ ನಿಲ್ಲಾ ಬೋಡ್  ಸದಸ್ಯರಾಗಿ, ಚನ್ನರಾಯಪಟ್ಟಣದ ಅಭಿವೃದ್ದಿ ಮಂಡಳಿಯ ಸದಸ್ಯರಾಗಿ, ಸೆಂಟ್ರಲ್ ಡಿಪ್ರೆಸ್ಡ್ ಕ್ಲಾಸ್ ಕಮಿಟಿಯ ಸದಸ್ಯರಾಗಿ ಕೂಡ ಸೇವೆ ಮಾಡಿದ್ದಾರೆ. ೧೯೩೪ರಲ್ಲಿ ಕುವೆಂಪು ಅವರು ಅಧ್ಯಕ್ಷರಾಗಿದ್ದ ಮೈಸೂರು ಸ್ಟೇಟ್ ಕನ್ನಡ ಟೆಕ್ಸ್ಟ್ ಬುಕ್ ಕಮಿಟಿಯ ಸದಸ್ಯರಾಗಿ, ೧೯೫೫ರಲ್ಲಿ ಮೈಸೂರು ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ೧೯೫೭ರಲ್ಲಿ ಕಲ್ಕತ್ತಾದಲ್ಲಿ ನಡೆದ ವಯಸ್ಕರ ಶಿಕ್ಷಣ ಸಮಿತಿಯ ರಾಷ್ಟ್ರೀಯ ವಿಚಾರಗೋಷ್ಟಿಯಲ್ಲಿ ಮೈಸೂರು ರಾಜ್ಯದ ಡೆಲಿಗೇಟಾಗಿ ಭಾಗವಹಿಸಿದ್ದಾರೆ.

ಸರಳ, ಸ್ವಚ ಹಾಗೂ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಹೆಸರಾದ ಇವರು ತಮ್ಮ ಈ ಅಧಿಕಾರವನ್ನು ಎಂದೂ ಸ್ವಾರ್ಥಕ್ಕೆ ಬಳಸಿಕೊಳ್ಳಲಿಲ್ಲ. ವಾಸ್ತವವಾಗಿ ಆರ್ಥಿಕವಾಗಿ ತುಂಬ ತೊಂದರೆಯಲ್ಲಿಯೆ ಇರುತ್ತಿದ್ದ ದಾಸರು. ಸ್ವಂತ ಬದುಕಿನ ಕಡೆಗೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ. ಬದಲಾಗಿ ತಮ್ಮ ಮೂಲ ಮನೋಧರ್ಮವಾದ ಸಮಾಜ ಸುಧಾರಣೆಯ ನೆಲೆಯಲ್ಲಿಯೆ, ಸಾಮಾನ್ಯರ, ಸಾರ್ವಜನಿಕರ ಹಿತಕ್ಕಾಗಿ ಶ್ರಮಿಸುತ್ತಿದ್ದರು. ಮನುಷ್ಯತ್ವದ ಬಗ್ಗೆ ಗಾಢ ಪ್ರೀತಿಯನ್ನಿಟ್ಟುಕೊಂಡಿದ್ದ ದಾಸರಿಗೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು ಅವರ ವ್ಯಕ್ತಿತ್ವದ ಮುಖ್ಯ ಗುಣವಾಗಿತ್ತು. ಗೋವಿಂದದಾಸರನ್ನು ಗುರು ಎಂದು ತುಂಬು ಅಭಿಮಾನದಿಂದ ಸ್ಮರಿಸಿಕೊಳ್ಳುವ, ಸುಮಾರು ತೊಂಭತ್ತು ವರ್ಷ ವಯಸ್ಸಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ ಆದ ದಮ್ಮನಿಂಗಳದ ಡಿ.ಆರ್ .ಮಂಜೇಗೌಡರು ‘‘ನೋಡಿ ಗೋವಿಂದದಾಸ್ರು ಕವಿಗಳು. ಇಂಗ್ಲೀಷನರ್ಮೇಲೆ ‘ಪರದೇಶಿ ಪರಂಗಿಯರು’ ಅಂತ ಪದ್ಯ ಬರ್ದು ಪೋಲಿಸ್ನರು ಅವುರ್ನ ಹುಡ್ಕಾಡಿದ್ರು. ಗಾಂಧೀಜಿಯವರ್ನ ನೇರವಾಗಿ ನೋಡಿ ಅವ್ರ ಸೇವೆ ಮಾಡ್ದ ಪುಣ್ಯಾತ್ಮ. ಗಾಂಧೀಜಿಯವರು ಕಂಗೇರಿ, ನಂದಿ ಬೆಟ್ಟದ ಕಾರ್ಯಕ್ರಮಕ್ಕೆ ಬಂದಿದ್ರು. ಹೊಳೆ ಹಾಯುವಾಗ ಗಾಂಧೀಜೇರ್ನ ಕೈಯಿಡ್ಕಂಡು ಹಾಯ್ಸಿದ್ರಂತೆ. ಆಗ ಗಾಂಧೀಜಿ ಇವ್ರ ಹೆಗ್ಲ ಮೇಲೆ ಕೈ ಹಾಕಿದ್ರಂತೆ. ಅವ್ರ ಕೈ ಹೂವ್ನಂಗಿದ್ವು ಅಂತ ಹೇಳರು. ಗಾಂಧೀಜಿನ ನಾವು ನೇರವಾಗಿ ನೋಡ್ದವ್ರಲ್ಲ. ಪೋಟೊದಲಿ, ಪೇಪರ್ನಲಿ ನೋಡಿದಿವಿ. ಆದ್ರೆ ಗಾಂಧೀಜೀನ ಮುಟ್ಟಿ ಬಂದ ನಮ್ಮ ಗೋವಿಂದದಾಸುರ್ನ ಮುಟ್ಟಿದ ಪುಣ್ಯ ನಮ್ಗಿದೆ. ಬಹಳ ದೊಡ್ಡ ಮನ್ಸ. ಎಂ.ಎಲ್ .ಎ. ಆಗಿದ್ದಾಗ, ಜಾತಿಭೇದ ಅನ್ನದೆ ಸಹಾಯ ಮಾಡಿದ್ದಾರೆ. ಬಹಳ ಶಿಸ್ತು, ಶುಚಿ. ಸ್ನಾನ, ಪ್ರಾರ್ಥನೆ ಮಾಡ್ದೆ ಒಂದ್ಲೋಟ ನೀರ್ನು ಕುಡಿತಿರ್ನಿಲ್ಲ. ಅವ್ರಿಂದ ನಾನು ಬಹಳ ಕಲಿತಗ್ಗಂಡೆ. ಅವ್ರ ಬದ್ಕು ನಂಗೆ ಆದರ್ಶ’’ ಎಂದು ಹೃದಯ ಬಿಚ್ಚಿ ನೆನೆಯುತ್ತಾರೆ. ಜಾತಿಕ್ರಿಮಿಯ ವಿಧಾನ ವಿಷ(Slow poison) ತುಂಬಿರುವ ಈ ಸಮಾಜದಲ್ಲಿ ನಿಜಕ್ಕೂ ಮನುಷ್ಯತ್ವದ ಬಗ್ಗೆ ಗೌರವವಿರುವ ಡಿ.ಆರ್ .ಮಂಜೇಗೌಡರಂತಹ ಹಿರಿಯ ಜೀವಿಗಳು ಇದ್ದಾವಲ್ಲ, ಎಂಬುದು ಸಮಾಧಾನದ ಸಂಗತಿ ಆಗಿದೆ. ಇಂತಹ ವ್ಯಕ್ತಿತ್ವಗಳು ಬದುಕುವ ಆಸೆಯನ್ನು ಚಿಗುರಿಸುತ್ತವೆ ಎಂಬುದು ಗಮನಾರ್ಹ ಸಂಗತಿ ಆಗಿದೆ.

ಗ್ರಾಮ ಸಮಾಜದೊಟ್ಟಿಗೆ ಗಾಢ ಸಂಬಂಧವನ್ನಿಟ್ಟುಕೊಂಡಿದ್ದ ಗೋವಿಂದದಾಸರು ತಾವು ಹುಟ್ಟಿದ ಊರಿನಲ್ಲಿ ಸುಮಾರು ೧೯೩೬ರಲ್ಲಿಯೆ ರಾಮೋತ್ಸವ ಎಂಬ ಸಾಂಸ್ಕೃತಿಕ ಉತ್ಸವವನ್ನು ಪ್ರಾರಂಭಿಸಿದರು. ಇದು ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ನಡೆಯುತ್ತದೆ. ೧೯೮೭ರವರೆಗೂ ಬದುಕಿದ್ದ ದಾಸರು, ಅವರು ಬದುಕಿದ್ದಾಗ ತುಂಬು ಲವಲವಿಕೆಯಿಂದ ಪಾಲ್ಗೊಂಡು ನಡೆಸುತ್ತಿದ್ದರು. ದಲಿತರು ತಮ್ಮಲ್ಲಿದ್ದ ಜಡತ್ವ, ಕೊಳಕುತನದಿಂದಲೆ, ಸವರ್ಣೀಯರಿಂದ ತಿರಸ್ಕೃತರಾಗುತ್ತಿದ್ದುದನ್ನು ಆತ್ಮಸ್ಥೈರ್ಯವನ್ನು ರೂಢಿಸಿಕೊಂಡು, ಬದುಕಿನಲ್ಲಿ ಜೀವಂತಿಕೆಯನ್ನು ತುಂಬುವ ಪ್ರಮುಖ ಉದ್ದೇಶದಿಂದಲೆ ಇದನ್ನು ಪ್ರಾರಂಭಿಸುತ್ತಾರೆ. ಈ ಉತ್ಸವದಲ್ಲಿ ತುಂಬ ವಿಶಿಷ್ಟವಾದ, ರೋಚಕವಾದ, ಜನಪದ ಪ್ರದರ್ಶಗಳು ನಡೆಯುತ್ತವೆ. ಕೋಲಾಟ, ಹುಲಿವೇಷ, ಕುಣಿತ, ವಾದ್ಯಮೇಳ, ಹಾಸ್ಯ, ನೃತ್ಯ ಇದರಲ್ಲಿ ಪ್ರಮುಖವಾದವುಗಳು. ಜೊತೆಗೆ ಗೋವಿಂದದಾಸರು ರಚಿಸಿರುವ ಹಾಡುಗಳನ್ನು ಊರಿನ ಜನರು ಇಂದಿಗೂ ತುಂಬ ಶ್ರದ್ಧೆಯಿಂದ ಹಾಡುತ್ತಾರೆ. ಈ ಉತ್ಸವ ಆ ಊರಿನ ದಲಿತರಿಗೆ ಒಂದು ಸಾಂಸ್ಕೃತಿಕ ಅಂತಸ್ತು ಮತ್ತು ಘನತೆಯನ್ನು ತಂದುಕೊಟ್ಟಿದೆ. ದಲಿತರು ಸಾಂಸ್ಕೃತಿಕವಾದ ಭದ್ರ ನೆಲೆಯಲ್ಲಿ ಬದುಕನ್ನು ರೂಪಿಸಿ ಕೊಳ್ಳಬೇಕೆಂಬ ಗೋವಿಂದದಾಸರ ಹಂಬಲ ಈಡೇರುತ್ತಿರುವುದು ತುಂಬ ಮಹತ್ವದ ಸಂಗತಿ ಆಗಿದೆ.

೧೯೭೧ರಲ್ಲಿ ಆಗಿನ ಸರ್ಕಾರ ಗೋವಿಂದದಾಸ್ ಅವರ ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಪ್ರಶಸ್ತಿಯು ಬಂದ ವಿಚಾರವನ್ನು ಗೋವಿಂದದಾಸರಿಗೆ ತಿಳಿಸಿದಾಗ, ಅದನ್ನು ತೆಗೆದುಕೊಳ್ಳಲು ನಿರಾಸಕ್ತರಾಗಿದ್ದರಂತೆ. ಆದರೆ ಅವರ ಹಿತೈಷಿಗಳ ಒತ್ತಾಯದಿಂದ ಹೋಗಿ ಪ್ರಶಸ್ತಿಯನ್ನು ತಂದರು. ಆಗ ‘‘ಈ ಪ್ರಶಸ್ತಿ ತಗಂಡು ನಾನೇನು ಮಾಡ್ಲಿ. ಈ ಬರಗಾಲದಲ್ಲಿ ಸ್ವಲ್ಪ ಹಣವನ್ನಾದ್ರು ಕೊಟ್ಟಿದ್ರೆ ಮಕ್ಕಳನ್ನಾದ್ರು ಸಾಕಗಾಕ್ತಿತ್ತು’‘ ಎಂದರಂಥೆ. ಎಂ.ಎಲ್ .ಎ. ಆಗಿದ್ದಾಗ ಕೂಡ ಸ್ವಂತಕ್ಕೆ ಏನೂ ಮಾಡಿಕೊಳ್ಳದ ಅವರು, ಸಮಾಜ ಸುಧಾರಣೆಯ ಕೆಲಸದಲ್ಲಿಯೆ ಆತ್ಮಸಂತೋಷವನ್ನು ಕಾಣುತ್ತಿದ್ದರು. ಹಾಗಾಗಿ ಅವರ ಬದುಕು ಅಭದ್ರತೆಯಲ್ಲಿಯೆ ಸವೆದು ಹೋಯಿತು. ಅದೇನೆ ಇರಲಿ. ಶ್ರೇಣಿಕೃತ ಜಾತಿವ್ಯವಸ್ಥೆಯ ಈ ಸಮಾಜದಲ್ಲಿ, ಯಾವ ಬಗೆಯ ಸಹಜ ಪ್ರೋತ್ಸಾಹವೂ ದೊರಕಿದಿದ್ದ ಆ ಕಾಲದಲ್ಲಿಯೆ; ನಮ್ಮ ಸ್ವಂತ ಆಸಕ್ತಿ, ಪರಿಶ್ರಮದಿಂದಲೆ ಶಿಕ್ಷಣ ಪಡೆದು ಮೇಲೆರಲು ಯತ್ನಿಸುತ್ತ, ತಮ್ಮ ಸಾತ್ವಿಕ ಚಿಂತನೆಗಳ ಮೂಲಕವೆ ಗೋವಿಂದದಾಸರು ತುಂಬ ಪ್ರಾಮಾಣಿಕವಾಗಿ ಮಾಡಿರುವ ಸಮಾಜ ಸೇವೆ ಮತ್ತು ಅವರು ಸೃಷ್ಟಿಸಿರುವ ಸಾಹಿತ್ಯಿಕ ಕೆಲಸಗಳು, ಇಂದಿನ ನಮ್ಮ ಯುವಪೀಳಿಗೆಗೆ ಪ್ರೇರಣೆಯಾಗಬಲ್ಲವುಗಳಾಗಿವೆ.

ಗೋವಿಂದದಾಸ್ ಅವರು ಮೂಲತಃ ಕವಿ. ಒಟ್ಟು ಸುಮಾರು ನೂರಕ್ಕೂ ಹೆಚ್ಚು ಕವಿತೆಗಳನ್ನು ಬರೆದಿದ್ದಾರೆ. ಸುಮಾರು ೧೯೨೦ರ ದಶಕದಿಂದಲೆ ಕವಿತೆಗಳನ್ನು ಬರೆಯಲು ಪ್ರಾರಂಭಿಸಿರುವ ಗೋವಿಂದದಾಸ್ ಅವರಿಗೆ, ಯಾವ ಬಗೆಯ ಪ್ರೋತ್ಸಾಹವು ದೊರೆಯದೆ ಹೋದದ್ದು ವಿಷಾದದ ಸಂಗತಿ ಆಗಿದೆ. ಹುಟ್ಟಿನಿಂದ ಅಸ್ಪೃಶ್ಯ ಜನಾಂಗಕ್ಕೆ ಸೇರಿದ ಇವರು ಅಕ್ಷರ ಕಲಿತು ಬರಹಕ್ಕೆ ತಮ್ಮನ್ನು ತೊಡಗಿಸಿಕೊಂಡದ್ದೇ ಒಂದು ದೊಡ್ಡ ಹೋರಾಟ. ಹಾಗಾಗಿ ಇವರು ಬರೆದ ಬಹುಪಾಲು ಸಾಹಿತ್ಯವು ಪ್ರಕಟಣೆಯೆ ಆಗಿಲ್ಲ. ಸಮಾಧಾನದ ಸಂಗತಿ ಎಂದರೆ; ಗೋವಿಂದದಾಸ್ ಅವರು ಹರಿಜನರ ಸುಧಾರಣೆಗಾಗಿ ಜಿಲ್ಲೆಯಾದ್ಯಂತ ಸಂಚರಿಸುವಾಗ, ಇವರೆ ಬರೆದ ಕವಿತೆಗಳನ್ನು ವಾಸಿಸುವ ಮುಖಾಂತರ ಜನರನ್ನು ಆಕರ್ಷಣೆ ಮಾಡುತ್ತಿದ್ದರು. ಇವರ ಕಾವ್ಯವನ್ನು ಜನಜಾಗೃತಿಯ ಮಾಧ್ಯಮವನ್ನಾಗಿ ಬಳಸಿಕೊಂಡದ್ದು ಒಂದು ವಿಶೇಷ. ಅಮಾನವೀಯವಾದ ಜಾತೀಯತೆಯ ವಿರುದ್ಧ ಜನರಿಗೆ ಅರಿವು ಮೂಡಿಸುವುದೆ ಇವರ ಕಾವ್ಯದ ಬಹುಮುಖ್ಯ ಧೋರಣೆ ಆಗಿದೆ.

ಹಾಸನ ಜಿಲ್ಲಾ ಹರಿಜನ ಸೇವಕ ಸಂಘವು ಗೋವಿಂದದಾಸ್ ಅವರ ಕೆಲವು ಪದ್ಯಗಳನ್ನು ೧೯೩೭ರಲ್ಲಿ ‘‘ಹರಿಜನಾಭ್ಯುದಯ’’ ಎಂಬ ಹೆಸರಿನಲ್ಲಿ ಪ್ರಕಟಿಸಿದೆ. ಇದನ್ನು ಬಿಟ್ಟರೆ ಉಳಿದಂತೆ ಸುಮಾರು ಎಪ್ಪತ್ತಾರು ಪದ್ಯಗಳು ಬೆಳಕು ಕಾಣದೆ ಅವರ ಕೈಬರಹದಲ್ಲಿಯೆ ಉಳಿದವೆ. ಇವರ ಸಮಗ್ರ ಕಾವ್ಯವನ್ನು ಈ ಕೆಳಕಂಡ ಪರಿಕಲ್ಪನೆಯಲ್ಲಿ ವಿಂಗಡಿಸಿಕೊಂಡು ಅಧ್ಯಯನ ಮಾಡಬಹುದಾಗಿದೆ.

೧. ಜಾತೀಯತೆ, ಅಸ್ಪೃಶ್ಯತೆಗೆ ಸಂಬಂಧಿಸಿದ ಕವಿತೆಗಳು.

೨. ವ್ಯಕ್ತಿ ಚಿತ್ರಣಕ್ಕೆ ಸಂಬಂಧಿಸಿದ ಕವಿತೆಗಳು.

೩. ವೈಚಾರಿಕತೆಗೆ ಸಂಬಂಧಿಸಿದ ಕವಿತೆಗಳು.

೪. ನಿಸರ್ಗ, ಪರಿಸರಕ್ಕೆ ಸಂಬಂಧಿಸಿದ ಕವಿತೆಗಳು.

೫. ಪ್ರಾದೇಶಿಕ ಹಾಗೂ ಕೌಟುಂಬಿಕ ಹಿನ್ನೆಲೆಗೆ ಸಂಬಂಧಿಸಿದ ಕವಿತೆಗಳು.

೬. ಸ್ವಾತಂತ್ರಕ್ಕೆ ಸಂಬಂಧಿಸಿದ ಕವಿತೆಗಳು.

೭. ಭಾಷೆ-ಶೈಲಿಗೆ ಸಂಬಂಧಿಸಿದ ಕವಿತೆಗಳು.

೧. ಜಾತಿ-ಅಸ್ಪೃಶ್ಯತೆಗೆ ಸಂಬಂಧಿಸಿದ ಕವಿತೆಗಳು

ಮನುಷ್ಯನನ್ನು ಜಾತಿ ಕಾರಣದಿಂದ ಇಷ್ಟು ನಿಕೃಷ್ಟವಾಗಿ ಕಾಣುವ ಮತ್ತೊಂದು ದೇಶ ಜಗತ್ತಿನಲ್ಲಿಲ್ಲ. ಸ್ವಲ್ಪ ಕಾಮಾನ್ ಸೆನ್ಸ್ ಇದ್ದರೂ ಸಾಕು. ಈ ದೇಶದ ಜಾತಿ ವ್ಯವಸ್ಥೆ ಅಷ್ಟೊಂದು ಕಸಿವಿಸಿಯನ್ನುಂಟು ಮಾಡುತ್ತದೆ. ಎಂತೆಂಥ ಅಸಾಧಾರಣ ಚೇತನಗಳು ಇದರ ವಿರುದ್ಧ ಹೋರಾಡಿದರೂ ಕೂಡ ಹೆಬ್ಬಂಡೆಯಂತಿರುವ ಈ ವಿಷಮಂತು ಹೊಸ ಹೊಸ ಅವತಾರಗಳಲ್ಲಿ ನೆಲೆಯಾಗಿರುವುದು ಕಡುದುಃಖದ ಸಂಗತಿ ಆಗಿದೆ.

ತೀರಾ ಕಡುಕಷ್ಟದಲ್ಲಿಯೇ ಅಕ್ಷರ ಕಲಿತು; ಕ್ರೂರ ಅಸ್ಪೃಶ್ಯತೆಯ ಅಪಮಾನ ಅನುಭವಿಸುತ್ತಲೆ; ಜಾತೀಯತೆ, ಅಸ್ಪೃಶ್ಯತೆಗೆ ಸಂಬಂಧಿಸಿದಂತೆ ಹಲವಾರು ಕವಿತೆಗಳನ್ನು ರಚಿಸಿದ್ದಾರೆ. ‘ಹರಿಜನಾಭ್ಯುದಯ’ ಕವನ ಸಂಕಲನದಲ್ಲಿ : ‘ಭಾರತಾಂಬೆಯ ರಥೋತ್ಸವೆ ‘ಭ್ರಾತೃಭೇದ’ ಎಂಬ ಕವಿತೆಗಳು ಇವೆ. ಅಪ್ರಕಟಿತ ಕವನಗಳಲ್ಲಿ ‘ವಿಷ ಮುಳ್ಳು’, ‘ನಾನೆಂಥ ಭಾಗ್ಯಹೀನನೊ ಗೊಮ್ಮಟೇಶ’, ‘ಭಾರತಾಂಬೆಯ ವಂಚನೆ’, ‘ಇಲ್ಲೇ ಅಲ್ಲ ಇಲ್ಲು’, ‘ಹರಿಜನರೂ ಭಾರತೀಯರೂ’, ‘ದಲಿತ ದೌರ್ಭಾಗ್ಯ’, ‘ಹರಿಜನ ನೆರವು’, ‘ಹರಿಜನರ ಧೀರ ಪ್ರಾರ್ಥನೆ’, ‘ಹರಿಜನರು ಹರಿಯ ಮಕ್ಕಳೆ’, ‘ಊಳಿಗದ ಬಾಳು’, ‘ಅಂತ್ಯಜೀಳ್ಗೆ ಮಂತ್ರ’, ‘ಹರಿಜನರಿಗೆ ದರ್ಶನ’, ‘ಮತದಭಿವೃದ್ದಿ’, ‘ಹರಿಜನರೊಳು ಜನ್ಮ ತಳೆಯಬಾರದು’, ‘ಹರಿಜನ ದೌಜರನ್ಯ ಜ್ವಾಲೆ’, ‘ಅತ್ತ ಪೋಗಿರತ್ತ ಪೋಗಿ’, ‘ಭಾರತೀಯರೆ ತೊರೆವಿರಾ’, ಈ ಎಲ್ಲ ಕವಿತೆಗಳು, ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರೂರ ಜಾತೀಯತೆಯಿಂದ, ಅಸ್ಪೃಶ್ಯ ಜನಾಂಗದ ಬದುಕು ಎಷ್ಟು ನರಕವಾಗಿದೆ ಎಂಬುದನ್ನು ತುಂಬ ನೋವಿನಿಂದ ನೆಲೆ ಕಟ್ಟಿಕೊಡುತ್ತವೆ.

ದೂರನಿಂದಿಹ ಹರಿಜನಂಗಳನು
ಕರೆತರುವೆವೆಂದರೆ
ಕರೆಯಲಾಗದು/ಎಂಬುವರು ಜನರು (ಭಾರತಾಂಬೆಯ ರಥೋತ್ಸವ)

ರಥ ಅಲುಗಾಡದಿದ್ದಾಗ, ಅದನ್ನು ದೈಹಿಕವಾಗಿ ಸಮರ್ಥರಿರುವ ಹರಿಜನಗಳುಲ ಎಳೆದರೆ ಸಾಧ್ಯವಾಗುತ್ತದೆ. ಆದರೆ ಅವರನ್ನು ಕರೆಯಲಾಗದ ಮೌಢ್ಯ ಅಡ್ಡಿಯಾಗಿರುವುದನ್ನು ಕವಿ ಅನಾವರಣ ಮಾಡಿದ್ದಾರೆ.

ಮತಭೇದ ನಿಮಗೆ | ಅತಿಬಾಧೆಯೆಮಗೆ
ಹಿತವನು ಬಯಸದಿ | ಗತಿಗೆಡುತ್ತೀರಿ (ಬ್ರಾತೃಭೇದ)
ಎಂಬ ಕವಿಯ ನೋವು ಮನ ಕಲಕುವಂತಿದೆ.
ವಂಚಕೀ ನಿನೆಮ್ಮ ನೀ ಪರಿ
ವಂಚಿಸಿದ ಪಾಪ ಫಲಕೆ
ಹೊಂಚು ಕಾಯ್ದು ಹೊರಗಿನವರು
ಮಿಂಚಿನಂತೆ ಸಂಚುಗೈಯ್ದರು (ಭಾರತಾಂಬೆಯ ವಂಚನೆ)

ಇಲ್ಲಿ ಕವಿ ಭಾರತಾಂಬೆ ನೀನು ವಂಚಕಿಯಾಗಿ ಹರಿಜನರಿಗೆ ಹಿಂಸೆ ಕೊಟ್ಟು ನಿನ್ನ ಪಾಪದ ಅನ್ಯರು ಭಾರತವನ್ನು ಸಂಚಿನಿಂದ ಆಳಿದರು ಎಂಬ ಸಾತ್ವಿಕ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.

ಸಾಸಿರ ಶತಮಾನಗಳು ಕಳೆದರಾದರು ಅಸ್ಪೃಶ್ಯತೆ ಚಿತೆ
ಏಸುಮುಸಲೀಂ ಬೌದ್ಧಮತ ನೀವಾರಿಸೊಂದಬಾರ (ದಲಿತ ದೌರ್ಭಾಗ್ಯ)

ಇಂಡಿಯಾದಲ್ಲಿ ಎಂದೂ ಅಳಿಯದ ಅಸ್ಪೃಶ್ಯತೆಯ ಕ್ರೂರತೆಯನ್ನು ತಮ್ಮ ಪ್ರಬುದ್ಧತೆಯಿಂದ ಅರ್ಥೈಸಿರುವುದು ಮಹತ್ವದ್ದೆನಿಸುತ್ತದೆ.

ಕುಲಿಹೀನ ಶ್ತಾನನಂದ
ದಲಿ ಮುದ್ದುನಾಡೆ ಚೆಂದ
ಸುತರಲ್ಲವೇನು ನಾವು
ಮತಿವಂತರಾಗಿ ನೀವು (ಹರಿಜನರ ಧೀರ ಪ್ರಾರ್ಥನೆ)

ಇಲ್ಲಿ ಕವಿಯು ಅಸ್ಪೃಶ್ಯತೆಯನ್ನು ಆಚರಿಸುವ ಜನರಿಗೆ ಬುದ್ದಿ, ವಿವೇಕವೆ ಇಲ್ಲದಿರುವುದು ವಿಷಾದವನ್ನು ಧ್ವನಿಸುತ್ತಾರೆ.

ಹರಿಜನರೊಳು ಜನ್ಮ ತಳೆಯಲೆಬಾರದು
ತಳೆದರು ವಿದ್ಯೆ ಕಲಿಯಲೆಬಾರದು
ವಿದ್ಯೆ ಕಲಿಯೆ ಬುದ್ದಿ ಕಣ್ಣೊಂದು ತೆರೆವುದು
ವಿದ್ಯೆ ಕಲಿಯದಿರೆ ಗೋವಂದದಿ ಇರವನು
ಮಾನಾಪಮಾನ ಮಾನವಗರಿವಾವುದು
ಜ್ಞಾನವಿಲ್ಲದ ಗೋವಿಗೆ ಸರಿಸಮರು
ಅಂತ್ಯಜನರು ಗೋವು ಸರಿಸಮನೆಂದ
ಅಂತಿಹ ಭಾರತೀಯರಯ್ಯಯ್ಯೋ
ವಿದ್ಯಾಸಾಗರ ಅಂಬೇಡ್ಕರರು ಹೋರಾಡಿ
ಕಣ್ಮರೆಯಾದ ಹೇ ಭಗವಾನ್

ಇಲ್ಲಿ ಕವಿ; ಹರಿಜನರು ಅಕ್ಷರ ಕಲಿಯುವ ಮುಂಚೆ ಜಾತಿವಾದಿಗಳು ಬಿಂಬಿಸಿದ ಪ್ರಕಾರ ನಾವು ಹೀಗೆ ಬದುಕಬೇಕು. ಇದು ನಮ್ಮ ಧರ್ಮ ಎಂಬುದಕ್ಕೆ ಬಲಿಯಾಗಿದ್ದರು. ಶಿಕ್ಷಣ ಪಡೆದ ನಂತರ ಈ ಶೋಷಣೆ ಅರ್ಥವಾಗತೊಡಗಿದೆ. ಅದರೇನು ಮಾಡುವುದು. ಎಷ್ಟೋ ಮಾನವತಾವಾದಿಗಳು ಇದರ ವಿರುದ್ಧ ಹೋರಾಡಿದರೂ ಅಳಿದಿಲ್ಲ. ಹರಿಜನರ ಬದುಕು ರೌರವ ನರಕವಾಗಿದೆ. ಅಕ್ಷರದ ಅರಿವಿನಿಂದ ಈ ಎಲ್ಲವುಗಳು ಅರ್ಥವಾಗತೊಡಗಿವೆ. ಎಂದು ತುಂಬ ನೋವಿನಿಂದ ಹರಿಜನರಾಗಿ ಜನ್ಮ ತಳೆಯಲೆಬಾರದು ಎಂಬ ನಿಲುವು ಕರುಳು ಚುರುಕೆನ್ನುವಂತಿದೆ. ಈ ಅರ್ಥದಲ್ಲಿಯೆ ನಮ್ಮ ತುಂಬು ಒಳನೋಟದ ಪ್ರಖ್ಯಾತ ಲೇಖಕರಾದ ದೇವನೂರ ಮಹಾದೇವ ಅವರು ‘ಈ ಓದೊ ಛಾನ್ಸೆ ಬರಬಾರ್ದಿತ್ತು’ ಎಂಬ ಮಾತನ್ನು ಹೇಳಿದ್ದು. ದಲಿತ ವರ್ಗದಿಂದ ಹುಟ್ಟಿ ಬಂದ ಈ ಬಗೆಯ ಸೂಕ್ಷ್ಮ ಮನಸ್ಸಿನ ಧೋರಣೆಗಳ ವಿಷಾದವು, ಮಾನವೀಯತೆಯ ಕರುಳೆ ಇಲ್ಲದ ವೈದಿಕ ಹಿನ್ನೆಲೆಯ ಕ್ರೂರ ಮನಸ್ಸುಗಳನ್ನು ತಟ್ಟದಿರುವುದು ಮಹಾನ್ ದುರಂತಗಳಲ್ಲಿ ಒಂದಾಗಿದೆ.