೨. ವ್ಯಕ್ತಿ ಚಿತ್ರಣಕ್ಕೆ ಸಂಬಂಧಿಸಿದ ಕವಿತೆಗಳು

ಮಾನವ ಚರಿತ್ರೆಯಲ್ಲಿ ಒಟ್ಟು ಮನುಷ್ಯ ಪರವಾಗಿ ಚಿಂತಿಸಿದವರು ಅಪರೂಪ. ಅಂತವರು ಯಾವತ್ತೂ ಕೂಡ ತಲೆಮಾರಿನಿಂದ ತಲೆಮಾರಿಗೆ ಪ್ರಭಾವ ಬೀರುತ್ತಲೇ ಇರುತ್ತಾರೆ. ಕ್ರೂರ ಜಾತಿಪದ್ಧತಿಯ ವ್ಯವಸ್ಥೆ ಇರುವ ಇಂಡಿಯಾದಲ್ಲಿ, ಇದು ಅವೈಜ್ಞಾನಿಕವಾದುದು ಎಮದು ವಿರೋಧಿಸಿ ಮನುಷ್ಯಪರವಾಗಿ ಚಿಂತಿಸಿದವರು ಕೆಲವರಾದರು ಇದ್ದಾರೆ. ಅವರುಗಳಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಗೋಪಾಲಸ್ವಾಮಿ ಅಯ್ಯರ್, ನರಸಿಂಹರಾಜ ಒಡೆಯರ್, ತಿರುವಾಂಕೂರು ಮಹಾರಾಜ, ಸರ್ ಮಿರ್ಜಾ ಸಾಹೇಬ್, ನಿರಂಜನರಾಜ ಅರಸ್ ಮುಂತಾದವರುಗಳು ಪ್ರಮುಖರಾಗಿದ್ದಾರೆ. ‘ಇಪ್ಪತ್ತನೆ ಶತಮಾನದ ಆದಿಯಲ್ಲಿ ಬಂದ ಕವಿ ಗೋವಿಂದದಾಸ್ ಅವರು, ಸಮಾಜ ಸುಧಾರಕರಾದವರ ಬಗ್ಗೆ ವ್ಯಕ್ತಿಚಿತ್ರಣದ ರೂಪದಲ್ಲಿ ಹಲವಾರು ಕವಿತೆಗಳನ್ನು ರಚಿಸಿದ್ದಾರೆ.

ಲೋಕದಲ್ಲಿ ಜೀವಿಪುದು ದುಃಖಮು
ದುಃಖಮೆಲ್ಲ ದುರಾಸೆಗೆ ಮೂಲಮು
ಬಿಟ್ಟರೆಲ್ಲ ದುರಾಸೆಗಳೆಲ್ಲವ
ಮೆಟ್ಟಲಿಯೆ ಮುಕ್ತಿಗೆ ಸಾಧನ (ಗೌತಮಬುದ್ಧ)

ಎಂದು ಬುದ್ಧನನ್ನು ನೆನೆಯುತ್ತಾರೆ.

ಅಂಬೇಡ್ಕರ್ ಅಂತ್ಯಜರ ಸಾರ್ವಭೌಮನು ನವಭಾರತ||ಪ||
ನಂಬಿಹೆವು ನಿಮ್ಮ ನಾವೆಲ್ಲ
ಬೆಂಬಿಡದೆ ಭೇದ ಹರಿಸೆಲ್ಲ (ಅಂತ್ಯಜ ಸಾರ್ವಭೌಮ ಅಂಬೇಡ್ಕರ್)
ಭೇದವಳಿಯುದದ ತಾಳೆದಲೆ ಮನನೊಂದು
ಬೌದ್ಧನೀನಾದೆಯೈ ದಾರಿದೋರದೆ ಕಡೆ
ದೈವಾಜ್ಞೆ ಭೇದವರಿಸಲು ನೀನವತರಿಸಿ
ಮಾಯದ ಮರಣಕೆ ನೀ ಗುರಿಯಾದೆ ಹ್ಞಾ||(ವೀರ ಅಂಬೇಡ್ಕರ್)

ದಲಿತರ ನಿಜದಾರಿದೀಪವಾದ ಅಂಬೇಡ್ಕರ್ ಅವರಿಂದ ಬಹಳ ದೊಡ್ಡ ಪ್ರೇರಣೆ ಪಡೆದಿದ್ದಾರೆ. ಅಂಬೇಡ್ಕರ್ ಅವರು ತೀರಿಕೊಂಡಾಗ ಕವಿ

ಕ್ರೂರ ವಿಧಿಯೆ ಕಣ್ಮರೆ ಮಾಡಿದೆ
ಧೀರ ಅಂಬೇಡ್ಕರ್ ಧರೆಯಿ (ವಿಧಿನಿಂದೆ)

ಎಂದು ದುಃಖಿಸುತ್ತಾರೆ.

ಗಾಂಧೀಜಿಯವರನ್ನು ಕುರಿತು :

ಸೆರೆಯಾಳಾದರು | ಮುವತ್ತೆರಡು ಸಲ
ಸ್ವರಾಜ್ಯ ಚಳುವಳಿ | ಗೋಸುಗುವೆ (ಜಗಮೊಂಡ)
ಎಂದು ಬರೆಯುತ್ತ ಗಾಂಧೀಜಿ ತೀರಿಕೊಂಡಾಗ
ಮಹಾತ್ಮ ಗಾಂಧಿ ಮರೆಯಾದೆಯ ನೀಂ
ಸ್ವರಾಜ್ಯಗಳಿಸೆಮಗೆ (ಮಹಾತ್ಮಗಾಂಧಿ ಮರೆಯಾದೆಯ ನೀನು)

ಎಂದು ವಿಷಾಧಿಸುತ್ತಾರೆ.

ವಿದ್ಯಾದಾನವ ಕರುಣಿಸಿಯೆಮ್ಮನು
ಬುದ್ದಿವಂತರ ತಾ ಮಾಡಲುದ್ದೇಶಿಸಿ
ಬದ್ದ ಕಂಕಣವನು ಧರಿಸುತನಿಂದ (ಮೈಸೂರ ಮಹಾರಾಜ ಮಹೋಪಕಾರ)

ದಲಿತರಿಗೆ ಶಿಕ್ಷಣವನ್ನು ನೀಡು ಸುಧಾರಣೆಗೆ ಕಾರಣರಾದ ಮೈಸೂರು ಮಹಾರಾಜರನ್ನು ಸ್ಮರಿಸುವುದು ಕವಿಯ ಒಳ್ಳೆಯ ಧೋರಣೆಯೆ ಆಗಿದೆ.

ದಲಿತ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಸುಧಾರಣೆ ಮಾಡಿದ ಗೋಪಾಲಸ್ವಾಮಿ ಅಯ್ಯರ್ ಅವರು ತೀರಿಕೊಂಡಾಗ

ಹರಿಜನ ಗುರುವರ ಹಾರಿದೆಯಾ ಹರಿಸಾದವ ನೀರ ಸಾರಿದೆಯಾ
ಮರೆಮಾಚುತೆ ಕಣ್ಮರೆಯಾದೆಯಾ ನೆರೆಶೋಕಗೈವ ಪರಿ ಮಾಡಿದೆಯಾ
(ಗೋಪಾಲಸ್ವಾಮಿಯವರ ನಿಧನ ಗೀತೆ)

ಎಂದು ತುಂಬು ಶೋಕದಿಂದ ಗೌರವಿಸುತ್ತಾರೆ.

೩. ವೈಚಾರಿಕತೆಗೆ ಸಂಬಂಧಿಸಿದ ಕವಿತೆಗಳು

ಗೋವಿಂದದಾಸ್ ಅವರ ಕಾವ್ಯದ ಮುಖ್ಯವಾದ ಈ ಭಾಗದಲ್ಲಿ ವೈಚಾರಿಕತೆಗೆ ಸಂಬಂಧಿಸಿದ ಹೆಚ್ಚು ಕವಿತೆಗಳಿವೆ. ಹರಿಜನರಿಗೆ ಶಿಕ್ಷಣ, ಅರಿವು, ಜಾಗೃತಿ, ದಿಟ್ಟತೆ, ಶುಚಿತ್ವ, ಅಗತ್ಯವಾಗಿ ಬೇಕು ಎಂಬುದನ್ನು ಹಲವಾರು ಕವಿತೆಗಳಲ್ಲಿ ತರುವುದು ಅವರ ಮನುಷ್ಯಪರ ಕಾಳಜಿಗೆ ಸಾಕ್ಷಿ ಆಗಿದೆ.

ಸೇಮಿಸದಿರಿಮದ್ಯಯಿ | ಎಂದಿಗೂ
ಸೇವಿಸಿದೊಡೆ ಹಾಳೆಮ್ಮೆಯ ಬಾಳು
ಬಿಡಿ ಭೇದಗಳೆಮ್ಮೊಳ್ | ಹರಿನಜರೆ (ಹರಿಜನರಿಗೆ ಹಿತಭೋದೆ)
ಸತ್ತ ಗೋಮಾಂಸವನು ಬುಜಿಸುತ
ಹತ್ತಿರಕೆ ಬಹ ಜನಗಳೆಲ್ಲರ
ಅತ್ತಲಾಗಿಯೆ ಹೋಗಿರೆನ್ನದೆ
ಹತ್ತಿರಕೆ ಸೇರಿಪರೆ ಉತ್ತಮರ್ (ಮತಭೇದದ ಮೂಲ)

ಇಲ್ಲಿ ಕವಿ ಗೋವಿಂದದಾಸ್ ಅವರು, ಅಸ್ಪೃಶ್ಯತೆ ಆಚರಣೆಗೆ ಸವರ್ಣೀಯರು ಕಾರಣರಾಗಿದ್ದಾರೆ ನಿಜ. ಆದರೆ ಇದೇನೆ ಕಾರಣ ಇದ್ದರೂ ಹರಿಜನರು ಶುಚಿತ್ವ, ಶಿಕ್ಷಣ, ಶಿಸ್ತು, ವಿವೇಕ, ನಿರ್ಭೀತಿ, ಸ್ವಾಭಿಮಾನದಿಂದ ಬದುಕನ್ನು ರೂಪಿಸಿಕೊಳ್ಳಲು ಕರೆ ಕೊಡುತ್ತಾರೆ.

ಎಂಥಾ ಸಂಸ್ಕೃತಿಯಿದು | ಏನು ಮಹಾಮನುಸ್ಮೃತಿ ||ಪ||
ಮಾನವರನೆ ಮಾನವರನು ಮಟ್ಟದಿಹ ಹೀನ ಧರ್ಮವನದು ನಿಧಾನದಿ ಯೋಚಿಸಿ
(ಮನುಸ್ಮೃತಿ ಮಟ್ಟು ಪಾಡು)

ಕುವೆಂಪು ಅವರ ಸಮಕಾಲೀನರಾದ ಗೋವಿಂದದಾಸ್ ಅವರು ಆ ಕಾಲಘಟ್ಟದಲ್ಲಿಯೆ ಕುವೆಂಪು ಅವರಂತೆಯೆ ಮನುಧರ್ಮಶಾಸ್ತ್ರದ ಮಾನವ ವಿರೋಧಿ ನೀತಿಯನ್ನು ತುಂಬ ಕಟುವಾಗಿಯೇ ಟೀಕಿಸಿದ್ದಾರೆ. ಆದರೆ ಗೋವಿಂದದಾಸ್ ಅವರ ಈ ಕವನಗಳು ಅಷ್ಟಾಗಿ ಬೆಳಕಿಗೆ ಬಾರದೆ ಹೋದದ್ದು ವ್ಯವಸ್ಥೆಯ ದುರಂತವೆ ಸರಿ. ಹೀಗೆ ತಮ್ಮ ಕಾವ್ಯದಲ್ಲಿ ಮಾನವ ವಿರೋಧಿ ನೀತಿಗಳನ್ನೆಲ್ಲ ಟೀಕಿಸುವ ಕವಿ ಅಂತಿಮವಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ‘ಮತಾಂತರವೊಂದೆ ಮಹಾಮಂತ್ರ’ ಎಂಬ ನಿಲುವನ್ನು ತಾಳುತ್ತಾರೆ.

೪. ನಿಸರ್ಗ, ಪರಿಸರಕ್ಕೆ ಸಂಬಂಧಿಸಿದ ಕವಿತೆಗಳು

ನವೋದಯ ಕಾವ್ಯದ ಪ್ರಧಾನ ಗುಣವಾದ ನಿಸರ್ಗಕ್ಕೆ ಸಂಬಂಧಿಸಿದಂತೆ ಹಲವಾರು ಕವಿತೆಗಳಿವೆ.

ನಿನ್ನಾರು ಯಚ್ಚರಿಸಿದವರು ಪೇಳೆಲೆರೋಳಿ
ಇನ್ನು ಜಗವೆಲ್ಲ ನಿದ್ರಿಸುವ ಸಮಯದಲಿಂದು
||ಪ||
ರೆಕ್ಕೆಯನು ಬಡಿಯುತ್ತೆ ಪುಕ್ಕವ ಒದರುತ್ತ
ಕೊಕ್ಕೂಕ್ಕೊಕೊಯೆಂದು ಕೂಗುತ್ತೆಚ್ಚರದಿಂದ (ಮುಂಗೋಳಿ)

ಬೇಂದ್ರೆ, ಕುವೆಂಪು ಮುಂತಾದ ಕವಿಗಳಿಗಿಂತ ಬೆಳಗನ್ನು; ದಲಿತ-ಶೂದ್ರ ಬದುಕಿನ ನೆಲೆಯಲ್ಲಿ ಕೋಳಿಯನ್ನು ಸಾಂಕೇತಿಕವಾಗಿ ತಂದಿರುವುದು ಆಧುನಿಕ ಕನ್ನಡ ಕಾವ್ಯದಲ್ಲಿಯೆ ಅತ್ಯಪರೂಪವಾಗಿದೆ. ಹಾಗೆಯೇ ಸೂರ್ಯೋದಯ, ಚಂದ್ರೋದಯ, ವಸಂತಕಾಲಗಳನ್ನು ಕುರಿತು ಕೂಡ ಕವಿತೆ ರಚಿಸಿದ್ದಾರೆ.

ಮತ್ಸಗಳಿರಬಲುಯಚ್ಚರದಿಂದಿರಿ
ಬೆಸ್ತನು ಬರುವನು ಪಿಡಿಯೆ
ಮಸ್ತಕ ಮರೆಸಿಕೊಂಡಿರೆ ನಿಮಗೀವಿಧ
ದುಸ್ತರ ಮುಂದೆಯೊದಗದು (ಬೀಸು ಬಲೆ)

ಮೀನು ಮರಿಗಳಿಗೆ ಎಚ್ಚರಿಕೆಯನ್ನು ನೀಡುವ ಕವಿತೆ ಬಹುಶಃ ಆಧುನಿಕ ಕನ್ನಡ ಕಾವ್ಯಕ್ಕೆ ಹೊಸತು ಎನಿಸುತ್ತದೆ.

೫. ಪ್ರಾದೇಶಿಕ ಹಾಗೂ ಕೌಟುಂಬಿಕ ಹಿನ್ನೆಲೆಗೆ ಸಂಬಂಧಿಸಿದ ಕವಿತೆಗಳು

ಹಾಸನ-ಮಂಡ್ಯ ಜಿಲ್ಲೆಗಳ ಗಡಿಭಾಗದಲ್ಲಿರುವ ದಮ್ಮನಿಂಗಳದ ಪರಿಸರವನ್ನು, ಅದರ ನೆಲದ ಸೊಗಡಿನ ಭಾಷೆಯಿಂದ, ಆ ಪರಿಸರವನ್ನು ಕವಿ ತುಂಬ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಗವಿರಂಗಪ್ಪನ ಜಾತ್ರೆಗೆ ಹೋಗಿ ನೋಡಿ ವರವ ಬಾಗಿ ಬೇಡಿ
ಕರುಣದಿಂದ ಕಾಯುವ ದೇವಗೆ ಹರಕೆ ಮಾಡಿ
ದೇವತೆ ಹರಕೆ ಮಾಡಿ
||ಪ|| (ಗವಿರಂಗಪ್ಪನ ಜಾತ್ರೆ)
ಪದವೀಧರರು ತುಂಬಿರುವ ನಮ್ಮೂರು
ಕವಿಭೂಷಣ ಗೋವಿಂದದಾಸರೂರು
ಪುಂಡರು ಷಂಡರು ಇಲ್ಲದ ಊರು
ಗಂಡು ಭೂಮಿಯಿಂದ ಭಲೆ ನಮ್ಮೂರು (ದಮ್ಮನಿಂಗಳ ಹಿರಿಮೆ)
ತಂಗಿನಾನೆಂದೆನೆ | ತುಗ್ಯಮ್ಮ ನಿನನ್ನ ನಾ ನೆಂದೆನೆ ||ಪ||
ಒಂದಿನ ನಾನೊಂದು ಮಾತಾಡಿಲ್ಲ ||ಪ|| (ತಂಗಿನಾನೆಂದೆನೆ)

ಇಲ್ಲಿ ಕವಿ ತಾವು ಹುಟ್ಟಿ ಬೆಳೆದ ಪರಿಸರವನ್ನು ಅರ್ಥಗರ್ಭಿತವಾಗಿ ಕಟ್ಟಿಕೊಟ್ಟಿರುವುದು ವಿಶೇಷ ಎನಿಸುತ್ತದೆ.

೬. ಸ್ವಾತಂತ್ರಕ್ಕೆ ಸಂಬಂಧಿಸಿದ ಕವಿತೆಗಳು

ನವೋದಯ ಕಾವ್ಯದ ಬಹುಮುಖ್ಯ ಪರಿಕಲ್ಪನೆಯಾಗಿರುವ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ, ಗಾಂಧೀಜಿಯ ವ್ಯಕ್ತಿತ್ವ ಕುರಿತಂತೆ ಹಲವಾರು ಕವಿತೆಗಳನ್ನು ಬರೆದಿದ್ದಾರೆ.

ಪಡೆಯೆ ಸ್ವರಾಜ್ಯಕ್ಕೆ ಮಡಿದಿರುವ ಕಡುಗಲಿ ಭಗತ್ ಸುಭಾಷರಿಗೆ
ಒಡನೆಯೆ ಲಜಪತ್
, ಕಸ್ತೂರಿಬಾಯ್ ನಗುತಿಹರು ಸ್ವರ್ಗದಿ (ಸ್ವಾತಂತ್ರ್ಯದನನಪು)

ಜೊತೆಗೆ :

ಬಂದರು ಪೂರ್ಣ ಸ್ವಾತಂತ್ರ್ಯ ಭಾರತಕೆ
ಬಂದ ಭಾಗ್ಯವೇನು ಹರಿಜನಕೆ ಬಂದ ಭಾಗ್ಯವೇನು
? (ಬಂದರು ಪೂರ್ಣಸ್ವಾತಂತ್ರ್ಯ ಭಾಗ್ಯವೇನು)

ಸ್ವಾತಂತ್ರ್ಯ ಬಂದು ಸುಮಾರು ಅರ್ಧಶತಮಾನ ಕಳೆದರೂ ನಿಜವಾದ ಸ್ವಾತಂಥ್ರ್ಯ ಬಂದಿಲ್ಲ ಎಂದು ಚರ್ಚೆ ಆಗುತ್ತಿರುವ ಈ ದಿನಗಳಲ್ಲಿ ಗೋವಿಂದದಾಸ್ ಅವರ ಕವಿತೆ ಬಹಳ ಪ್ರಸ್ತುತವೆನಿಸುತ್ತದೆ. ಎಲ್ಲಿಗೆ ಬಂತು ಯಾರಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಎಂಬ ಡಾ. ಸಿದ್ಧಲಿಂಗಯ್ಯನವರ ಕವಿತೆಗೆ ಮುಂಚೆಯೆ ದಾಸ ಅವರು ಈ ಬಗೆಯ ಕವಿತೆಗಳನ್ನು ರಚಿಸಿರುವುದು ತುಂಬ ಮಹತ್ವದ್ದೆನಿಸುತ್ತದೆ.

೭. ಗೋವಿಂದದಾಸ್ ಅವರ ಕಾವ್ಯದ ಭಾಷೆ ಮತ್ತು ಶೈಲಿ

ಅಪಾರ ಪರಿಶ್ರಮದಿಂದ ಶಿಕ್ಷಣ ಪಡೆದ ಗೋವಿಂದದಾಸ್ ಅವರು, ತಮ್ಮ ಮೂಲಗುಣವಾದ ಕವಿ ಮನೋಧರ್ಮಕ್ಕೆ ತಕ್ಕಂತೆ; ಪ್ರಾಚೀನ ಸಂಸ್ಕೃತ ಕನ್ನಡ ಕಾವ್ಯದ ಗುಣಸ್ವಭಾವಗಳನ್ನು ತುಂಬು ಗಂಭೀರವಾಗಿ ಅಧ್ಯಯನ ಮಾಡಿದ್ದಾರೆ. ಹಾಗಾಗಿಯೇ ವಾರ್ಧಕ ಷಟ್ಪದಿಯಲ್ಲಿಯೂ ಕೆಲವು ಕವಿತೆಗಳನ್ನು ರಚಿಸಿರುವುದು ಆಧುನಿಕ ಕನ್ನಡ ಕಾವ್ಯದಲ್ಲಿಯೆ ಅಪರೂಪದ್ದಾಗಿದೆ. ಜೊತೆಗೆ; ರಾಗ, ಕಾಂಬೋದಿ, ಆದಿತಾಳ, ಪಲ್ಲವಿ, ಕಾಮವರ್ಧಿನಿ, ಭಾಮಿನಿಷಟ್ಪದಿ, ವಾರ್ಧಕ ಷಟ್ಪದಿ, ಕಂದ, ಝಂಪೆ, ಕಲ್ಯಾಣಿ ಪ್ರಾಸ ಮುಂತಾದ ಛಂದಸ್ಸಿನ ವಿವಿಧ ಪ್ರಕಾರದಲ್ಲಿ ಕಾವ್ಯ ಕೃಷಿ ಮಾಡಿರುವುದು, ಇವರ ಕಾವ್ಯ ವ್ಯಕ್ತಿತ್ವವನ್ನು ತಿಳಿಸುತ್ತದೆ. ಈ ಬಗೆಯ ಹೊಸ ಹೊಸ ಕಾವ್ಯ ಪ್ರಯೋಗವನ್ನು ನಡೆಸಿರುವ ಗೋವಿಂದದಾಸ್ ಅವರ ಕಾವ್ಯವನ್ನು ಗಂಭೀರವಾದ ಸಂಶೋಧನೆಗೆ ಒಳಪಡಿಸುವ ಅಗತ್ಯತೆ ಇದೆ.

ಹಿಂದೂ ದೇಶದಮೊರ್ವ | ಹಿಂದುವೆಂಬುವ ನಂಬಿ
ನೊಂದಂಗನಾವಲವೆ | ಹಿಂದೂಭಾಂದವರೆ (ಭಾರತೀಯನ ಬಲಬಾಹು)

ಇಲ್ಲಿ ಪ್ರಾಸದ ಜೊತೆಗೆ, ಕಾವ್ಯದ ಲಯವೆ ಹೊಸತೆನಿಸುತ್ತದೆ. ಗೋವಿಂದದಾಸ್ ಅವರ ಕಾವ್ಯದ ಒಂದು ಗುಣವೆಂದರೆ; ಅವರು ಯಾವುದೇ ವಸ್ತುವನ್ನು ಕವಿತೆಗೆ ತೆಗೆದುಕೊಳ್ಳಲಿ ನಿರರ್ಗಗಳವಾಗಿ ಸೊಗಸಾಗಿ ಕವಿತೆಯನ್ನಾಗಿಸುವುದು ಇವರ ಹುಟ್ಟುಗುಣವಾಗಿದೆ. ಹಾಗಾಗಿಯೆ ಇವರ ಕೆಲವು ಕವಿತೆಗಳು ಜನಪದ ಗೀತೆಗಳು ಗುಣಗಳನ್ನೊಳಗೊಂಡು ಅವರ ಊರಿನ ಕಲಾವಿದರ ಬಾಯಲ್ಲಿ ಇಂದಿಗೂ ನಲಿದಾಡುತ್ತಿವೆ. ಉದಾಹರಣೆ, ತಂಗಿನಾನೆಂದೆನ, ಗವಿರಂಗಪ್ಪನ ಜಾತ್ರೆ, ರಾಮೋತ್ಸವ ಹಾಗೂ ಶ್ರವಣಬೆಳಗೊಳದ ಸುತ್ತಮುತ್ತಲಿನ ಪರಿಸರದ ಭಾಷೆಯ ಗುಣಸ್ವಭಾವಗಳನ್ನು ದಾಸರು ಅಭಿವ್ಯಕ್ತಿಸುವ ರೀತಿಯು ತುಂಬ ವಿಶೀಷ್ಟವಾಗಿದೆ.

ಒಟ್ಟಾರೆ ಗೋವಿಂದದಾಸ್ ಅವರ ಸಮಗ್ರ ಕಾವ್ಯವನ್ನು ವಸ್ತು, ವಿಷಯ, ಭಾಷೆ-ಶೈಲಿ-ಛಂದಸ್ಸು, ವಿಚಾರ, ಈ ಯಾವ ದೃಷ್ಟಿಯಿಂದ ನೋಡಿದರೂ ಕೂಡ, ಇವರ ಕಾವ್ಯ ಆಧುನಿಕ ಕನ್ನಡ ಕಾವ್ಯದ ಮೊದಲ ತಲೆಮಾರಿನ ಶ್ರೇಷ್ಠ ಕವಿ ಆಗಿರುವುದು ಗಮನಾರ್ಹ ಸಂಗತಿಯೆ ಆಗಿದೆ.

* * *

ಡಿ. ಗೋವಿಂದದಾಸ್ ಅವರ ಆತ್ಮಕಥನ ಅಪೂರ್ಣವಾಗಿದೆ. ಆಧುನಿಕ ಕನ್ನಡ ಸಾಹಿತ್ಯದ ಮೊದಲ ತಲೆಮಾರಿನ ಹಿರಿಯ ದಲಿತ ಲೇಖಕರಾದ ಗೋವಿಂದದಾಸ್ ಅವರ ಈ ಆತ್ಮಕಥನ ಕನ್ನಡದ ಮೊಟ್ಟಮೊದಲ ದಲಿತ ಆತ್ಮಕಥನವೂ ಆಗಿದೆ. ಆಪ್ತಮಿತ್ರರಾದ ಆದಿನಾರಾಯಣಯ್ಯನವರ ಒತ್ತಾಯಕ್ಕೆ ಮಣಿದು ದಿನಾಂಕ ೧-೧-೧೯೪೦ರಲ್ಲಿ ಪ್ರಾರಂಭಿಸಿ ೧೯೪೪ಕ್ಕೆ ಬರೆದು ಮುಗಿಸಿದನೆಂದು ಹೇಳಿಕೊಂಡಿದ್ದಾರೆ. ಈ ಕಥನದಲ್ಲಿ; ಆತ್ಮಕಥನಕಾರರ ಬಾಲ್ಯ, ಹೋರಾಟದ ಶಿಕ್ಷಣ, ಶೋಷಣೆ, ಪ್ರವಾಸದ ಅನುಭವಗಳು ಮತ್ತು ನೊಂದವರ ಪರವಾದ ಸಾಮಾಜಿಕ ಸೇವೆಗಳ ಕೆಲಸಗಳು ಮುಖ್ಯವಾದವುಗಳಾಗಿವೆ.

ಬಾಲ್ಯದಲ್ಲಿಯೆ ತಂದೆ ತಾಯಿಗಳನ್ನು ಕಳೆದುಕೊಂಡ ಗೋವಿಂದದಾಸ್ ಅವರು ಕದ್ದುಹೋಗಿ ಶಾಲೆ ಸೇರುತ್ತಾರೆ. ನಂತರ ತುಮಕೂರಿಗೆ ಓದಲು ಹೋಗುವುದಕ್ಕಾಗಿ ಗುಬ್ಬಿಯವರೆಗೂ ಕಾಲನಡಿಗೆಯಲ್ಲಿಯೆ ನಡೆದುಕೊಂಡು ಹೋಗುವುದು. ಮೊದಲ ಸಲ ರೈಲಿನಲ್ಲಿ ಪ್ರಯಾಣ ಮಾಡುವಾಗ, ಕೆಳಜಾತಿಯವನಾದ ಕಾರಳ ಕೆಲಗಡೆಯೆ ಕುಳಿತುಕೊಳ್ಳಬೇಕೆಂದು ನಂಬಿಕೆ, ಮೇಲುಜಾತಿಯ ಮೇಷ್ಟ್ರಬ್ಬರ ಕ್ರೂರ ವರ್ತನೆಯಿಂದ ಬೇಸತ್ತು ಹೋಗುವುದು, ವರ್ಗಾವಣೆ ಪತ್ರ ತೆಗೆದುಕೊಳ್ಳಲು ಹಣ ನೀಡಿ, ಅವರಿಗೆ ಕೈ ಕಾಲು, ಇಡೀ ದೇಹವನ್ನು ಭೂಮಿಗೆ ಅರ್ಪಿಸಿ ನಮಸ್ಕರಿಸುವುದು, ಮುಂತಾದ ಬಾಲ್ಯದ ಅನುಭವಗಳನ್ನು ಲೇಖಕರು ಮುಕ್ತವಾಗಿ ಅನಾವರಣಗೊಳಿಸುವುದು ವಿಶೇಷ ಎನಿಸುತ್ತದೆ.

ತುಮಕೂರಿನಲ್ಲಿ ಓದಿ ಅಲ್ಲಿ ಗಣಿತದಲ್ಲಿ ಫೇಲ್ ಆದಾಗ ಚಿಕ್ಕಮಗಳೂರಿಗೆ ಬಂದು ನರಸಿಂಹರಾಜ ವಸತಿಶಾಲೆಯಲ್ಲಿ ಓದುತ್ತಿದ್ದರು. ಆಗ ಜೀವನದ ನಿರ್ವಹಣೆಗಾಗಿ ಮೇಷ್ಟ್ರು ಕೆಲಸ ಮಾಡಬೇಕಾಗಿ ಬರುತ್ತದೆ. ‘ಒಂದು ವರ್ಷ ಸರಿಯಂತ ಬೆಳಗಿನಲ್ಲಿ ಕಾಸೆ ಪೇಟ ಧರಿಸಿಕೊಂಡು ಉಪಾಧ್ಯಾಯರಾಗುವುದು, ಮಧ್ಯಾಹ್ನ ಉಡುಗೆಯುಟ್ಟು ತಲೆಗೆ ತೋಪಿ ಹಾಕಿ ವಿದ್ಯಾರ್ಥಿ ಆಗುವುದು’’ ಎಂಬ ಅವರ ಅನುಭವದ ಮಾತುಗಳು ವಿಶೇಷವಾಗಿವೆ. ನಂತರ ‘ಬೆಂಗಳೂರಿನ ಕೊಲಿಜಿಯಟ್ ಪ್ರೌಢಶಾಲೆಗೆ ಸೇರಿಕೊಂಡು, ನರಸಿಂಹರಾಜ ಹಾಸ್ಟೆಲ್ ನ ನಿವಾಸಿಯಾದರು. ಇಲ್ಲಿ ಆರ್.ಗೋಪಾಲಸ್ವಾಮಿ ಅಯ್ಯರ್ ಅವರು ವಿದ್ಯಾಥಿರ ವಲಯಕ್ಕೆ ಮಹಾತ್ಮಗಾಂಧಿ, ಸಿ.ಎಫ್.ಆಂಡ್ರ್ಯೂಸ್, ನಾಲ್ವಡಿ ಕೃಷ್ಣರಾಜ ಒಡೆಯರ್, ಅನಿಬೆಸೆಂಟ್, ಮಾಳವೀಯ ಮುಂತಾದವರನ್ನು ಕರೆಸಿ ವಿಶೇಷ ಉಪನ್ಯಾಸ ನೀಡಿಸುತ್ತಿದ್ದರು. ಇವರೆಲ್ಲರ ದಟ್ಟ ಪ್ರಭಾವಕ್ಕೆ ಒಳಗಾದ ಗೋವಿಂದದಾಸ್ ಅವರಿಗೆ, ಈ ಕಾಲಘಟ್ಟ ಇವರ ಜೀವನದ ಧಿಕ್ಕನ್ನೆ ಬದಲಿಸುತ್ತದೆ.

ಮೂಲತಃ ಏಕಾಂತವನ್ನು ಇಷ್ಟಪಡುತ್ತಿದ್ದ ಗೋವಿಂದದಾಸ್ ಅವರು ಏಕಾಂತವಾಗಿ ಕುಮಾರ ಪಾರ್ಕಿನ ದಟ್ಟ ಮರಗಿಡಗಳ ಸುತ್ತ ವಾಯುವಿಹಾರಕ್ಕೆ ಹೋಗುತ್ತಿದ್ದರಂತೆ. ಆಗ ಉತ್ತರ ಭಾರತದ ಸಾಧು ಸಂತನೊಬ್ಬನ ಕಣ್ಣಿಗೆ ಬಿದ್ದು; ಇವರಲ್ಲಿದ್ದ ವಿಶೇಷತೆಯನ್ನು ಗಮನಿಸಿದ ಆ ಸಾಧು ‘ಮಗು ನನ್ನ ಸ್ವಂತ ಖರ್ಚಿನಲ್ಲಿ ಉತ್ತರ ಭಾರತ ಪ್ರವಾಸ ಮಾಡಿಸುತ್ತೇನೆ ಬಾ’ ಎಂದು ಆಹ್ವಾನಿಸುತ್ತಾನೆ. ಆಗ ಫಂಡರಾಪುರ, ಗಯಾ, ಕೊಲ್ಕತ್ತಾ, ದೆಹಲಿ, ಮುಂಬಯಿ, ಹರಿದ್ವಾರ, ಹೃಷಿಕೇಶ, ಡೆಹರಾಡೂನ್, ಕಾಶಿ, ವಾರನಾಶಿ, ತಿರುಪತಿ ಮುಂತಾದ ಸ್ಥಳಗಳನ್ನು ಪ್ರವಾಸ ಮಾಡುತ್ತಾರೆ. ಇದು ಗೋವಿಂದದಾಸ್ ಅವರಿಗೆ ಬಹುಮುಖ್ಯ ಕಾಲಘಟ್ಟವಾಗಿದ್ದು ಆ ಬಹುಮುಖ್ಯ ಒಳ್ಳೆಯ ನೆನಪುಗಳನ್ನೆಲ್ಲ ಈ ಆತ್ಮಕಥನದಲ್ಲಿ ಕಟ್ಟಿಕೊಟ್ಟಿದ್ದಾರೆ. ಒಬ್ಬ ಅಸ್ಪಶ್ಯ ಕುಟುಂಬದ ಹಿನ್ನೆಲೆಯಿಂದ ದಾಸ್ ಅವರ ಪ್ರವಾಸದ ಈ ಅನುಭವಗಳು ತುಂಬ ಕುತೂಹಲದವುಗಳಾಗಿವೆ. ‘‘ಉತ್ತರ ಭಾರತದಲ್ಲಿ ಅಂದು ಜಾತಿ ಕಟ್ಟು ಬಲು ಬಿಗಿಯಾಗಿದ್ದರೂ ಸಾಧು ಜಾತಿಯವನಾದ ನನಗೆ ಯಾವ ಕಟ್ಟುಗಳು ಇರಲಿಲ್ಲ’’ ಎಂಬ ಅವರ ಅನುಭವದ ಮಾತುಗಳು ವಿಶೇಷ ಚಿಂತನೆಗೆ ಪ್ರೇರೇಪಿಸುತ್ತವೆ. ಪ್ರವಾಸದ ಸಂದರ್ಭದಲ್ಲಿ ಹಡಗಿನಲ್ಲಿ ಪ್ರವಾಸ ಮಾಡುವ ಅನುಭವವನ್ನು ಗೋವಿಂದದಾಸ್ ಅವರು ‘‘ಸಮುದ್ರಯಾನವಾದರೂ ಅದೊಂದು ಅನಂದದ ಹಬ್ಬ. ಸೊಗಸಾದ ಬೆಳದಿಂಗಳು. ಎಷ್ಟು ದೂರ ನೋಡಿದರೂ ಅಚ್ಚನೆಯ ನೀರೆ. ಆ ಸಾಧು ಗುಂಪಿನಲ್ಲಿ ಅದರಲ್ಲೂ ನಾನು ಹಾಡುವ ಕೀರ್ತನೆಗಳನ್ನು ಕೇಳಿ ಸಾಧುಗಳೆಲ್ಲರು ನನ್ನನ್ನು ಮೇಲ್ಭಾಗದಲ್ಲಿ ಕೂಡಿಸಿದರು. ನಾನು ಆನಂದದವಾಗಿ ಕೀರ್ತನೆಗಳನ್ನು ಹಾಡುತ್ತ ಸಮುದ್ರಯಾನದ ಭಯವನ್ನು ಮರೆತೆನು. ಆ ಸಾಧುಗಳಿಗೂ ಮರೆಸಿದನು. ನಿದ್ರೆ ಹತ್ತಿಸಲಿಲ್ಲ. ನನ್ನ ಜೀವಮಾನದಲ್ಲಿನ ಸಂತೋಷದ ಕಾಲದಲ್ಲಿ ಅದೂ ಒಂದು’’ ಎಂಬ ಅವರ ಅನುಭವದ ಮಾತುಗಳು, ದಲಿತ ಆತ್ಮಕಥನಗಳು ಕೇವಲ ಗೋಳನ್ನು ಮಾತ್ರ ಹೇಳುವುದಿಲ್ಲ. ಜೀವನದ ವಿವಿಧ ಮಗ್ಗಲುಗಳನ್ನು ಹೇಳುತ್ತವೆ. ಎಂಬುದಕ್ಕೆ ಗೋವಿಂದದಾಸ್ ಅವರ ಆಧುನಿಕ ಕನ್ನಡ ಸಾಹಿತ್ಯದ ಮೊಟ್ಟಮೊದಲ ದಲಿತ ಆತ್ಮಕಥನವಾದ ಈ ಕೃತಿ ಪ್ರಚುರಪಡಿಸುತ್ತದೆ.

ಇವರ ಪ್ರವಾಸದಲ್ಲಿ ತಾಜ್ ಮಹಲಿನ ಒಳಕ್ಕೆ ಹೋಗುವಾಗ ವಿದೇಶಿ ಬಂದೂಕುಧಾರಿ ಕಾವಲುಗಾರನೊಬ್ಬ ಇವರನ್ನು ತಡೆಯುತ್ತಾನೆ. ‘‘I will shoote you begger’’ \ರುಕನೆ ನಿನ್ನನ್ನು ನಾನು ಬಂದೂಕಿನಿಂದ ಸುಡುತ್ತೇನೆಂದು ಕೈಲಿನ ಬಂದೂಕನ್ನು ಎದೆಗೆ ಗುರಿ ಮಾಡಿದನು. ನನ್ನಾಟವು ಮುಗಿಯಿತೆಂದು ನಡುಗುತ್ತ ನಿಂತುಬಿಟ್ಟೆನು. who are you? ನೀನು ಯಾರೆಂದನು. ಉಸಿರಿಲ್ಲದ ಧ್ವನಿಯಿಂದ I am a Mysoreian ಎಂದೆನು. O! You came from such a long Distance’’ ಓಹೋ ನೀನು ಬಹಳ ದೂರದಿಂದ ಬಂದಿರುವೆಯೆಂದನು. yes ಎಂದೆನು. ‘Come in I wish show you Everything’ ಬಾ. ನಾನು ನಿನಗೆ ಎಲ್ಲವನ್ನು ತೋರಿಸುವೆನೆಂದು ಕರೆದನು. ಆಗ ಸಂತೋಷದಿಂದ ಒಳಕ್ಕ ಹೋಗಿ ನೋಡಿದೆನು’’ ಎಂಬ ಅವರ ಪ್ರವಾಸದ ಸಾಚಾ ಅನುಭವಗಳು; ಆತ್ಮಕಥನಗಲ ಮುಖೇನವೆ ದಲಿತ ಸಾಹಿತ್ಯಕ್ಕೆ ಮಹಾನ್ ಕೊಡುಗೆ ಆಗಿರುವ ಮರಾಠಿ ಆತ್ಮಕಥನಗಳು ಬರುವ ಕಾಲಘಟ್ಟದ ಮುಂಚೆಯೆ ಕನ್ನಡದ ಹಿರಿಯ ದಲಿತ ಲೇಖಕನೊಬ್ಬನಿಂದ ಈ ಬಗೆಯ ಅನುಭವಗಳು ದಾಖಲಾಗಿರುವುದು ಬಹಳ ಮುಖ್ಯ ಸಂಗತಿ ಎನಿಸುತ್ತದೆ. ಇವರು ಕಾಶಿಯಾತ್ರೆಯಲ್ಲಿದ್ದಾಗ ಅಲ್ಲಿ ಅಸ್ಪೃಶ್ಯತೆ ಹೇಗಿದೆ ಎಂಬುದನ್ನು ಅಲ್ಲಿ ಎದುರಾದ ಘಟನೆಯನ್ನು ಹೀಗೆ ಹೇಳುತ್ತಾರೆ. ‘‘ಹರಿಶ್ಚಂದ್ರಘಾಟ್ ಬಳಿ ಸುಮಾರು ಹತ್ತು ಗಜ ಉದ್ದ ಐದು ಗಜ ಅಗಲಕ್ಕೆ ಹತ್ತು ಅಡಿ ಎತ್ತರದಲ್ಲಿ ನಾಲ್ಕು ಜನ ಕುಳಿತಿದ್ದರು. ಮೇಲಕ್ಕೆ ಹೋಗಿ ನೋಡಿದೆ. ಅಲ್ಲಿ ಒಂದು ಬಿಳಿ ಕೆಂಪು ನಾಮವಿಟ್ಟು, ಹೂವಿಟ್ಟು, ಕಾಯಿ ಹೊಡೆದು ಪೂಜಿಸುತ್ತಿದ್ದರು. ಅಲ್ಲಿದ್ದ ನಾಲ್ಕು ಜನಗಳನ್ನು ಕಿರಿಯ ಪ್ರಾಯರೆಂದು ಇಲ್ಲೇಕಿರುವಿರಿ ಇಲ್ಲಿ ಜನಗಳೇಕೆ ಹೀಗೆ ಪೂಜಿಸುತ್ತಾರೆಂದು ವಿಚಾರಿಸಿದೆನು. ‘‘ಹಮದೇಡ್ ಐ, ನಾವು ಹೊಲೆಯರು. ಈ ಪೂಜೆ ಮಾಡುವ ಬಳಿಯಲ್ಲಿ ಹರಿಶ್ಚಂದ್ರನು ಸ್ಮಶಾನ ಕಾಯುತ್ತಿದ್ದನಂತೆ. ಈಗ ನಾವು ಕಾಯುವೆವು’’ ಎಂದರಂತೆ. ಗೋವಿಂದದಾಸ್ ಅವರು ತಮ್ಮ ಯಾತ್ರಾ ಪ್ರವಾಸದಲ್ಲೂ ಕಂಡುಬಂದ ಈ ಕ್ರೂರ ಜಾತೀಯತೆಯನ್ನು ಬಯಲಿಗೆಳೆದಿರುವುದು ಅವರ ಸಾಮಾಜಿಕ ಕಾಳಜಿಯನ್ನು ಸೂಚಿಸುತ್ತದೆ.

ಆತ್ಮಕಥನದ ಕೊನೆಯ ಭಾಗದಲ್ಲಿ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಮಾವಿನಕೆರೆಯ ರಂಗನಾಥಸ್ವಾಮಿಯ ಬೆಟ್ಟದ ತಪ್ಪಲಿನಲ್ಲಿ ಅನಾಥ ಮಕ್ಕಳಿಗಾಗಿ ತೆರೆದ ಆಶ್ರಮದ ಜಾಗ ನಿಜಕ್ಕೂ ಅವರ ಕಾವ್ಯ ಸೃಷ್ಟಿಗೆ ತಕ್ಕುದಾದ ಜಾಗವೆ ಅಘಿದೆ. ಅಲ್ಲಿ ಗುಡಿಸಿಲಿನ ಆಶ್ರಮ ಮಾಡುತ್ತ ಮುಂದಿನ ವರ್ಷ ಮಕ್ಕಳನ್ನು ಕರೆತರಲು ಎಲ್ಲ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಅವರೆ ಒಂದು ಕವಿತೆಯಲ್ಲಿ ಕ್ರೂರ ಜಾತೀಯತೆಯನ್ನು ವಿಷಮುಳ್ಳಿಗೆ ಹೋಲಿಸಿರುವಂತೆ, ಇದನ್ನು ಸಹಿಸದ ಸವರ್ಣೀಯರು; ಗೋವಿಂದದಾಸ್ ಅವರು ಸೆಂಟ್ರಲ್ ಡೆಪ್ರೆಸ್ಡ್ ಕ್ಲಾಸ್ ಮೀಟಿಂಗ್ ಗಾಗಿ ಬೆಂಗಳೂರಿಗೆ ಹೋಗಿರುತ್ತಾರೆ. ಆಗ ಈ ದಂಪತಿಗಳು ಆಶ್ರಮದಲ್ಲಿದ್ದಾರೆಂದು ಭಾವಿಸಿ ಅವರು ಸುಟ್ಟುಹೋಗಲಿ ಎಂದು ಬೆಂಕಿ ಹಾಕಿ ಗುಡಿಸಲನ್ನು ಸುಡುತ್ತಾರೆ. ಆದರೆ ಅದೃಷ್ಟವಶಾತ್ ದಾಸ್ ಅವರು ತಮ್ಮ ಪತ್ನಿಯನ್ನು ಪಕ್ಕದ ಕಾರ್ಲೆ ಗ್ರಾಮದ ನೆಂಟರ ಮನೆಯಲ್ಲಿ ಬಿಟ್ಟುಹೋಗಿರುತ್ತಾರೆ. ಕನಿಷ್ಠ ಮಾನವೀಯತೆಯ ಬಗ್ಗೆ ಗೌರವವಿರುವವರೆಲ್ಲ ತಲೆ ತಗ್ಗಿಸುವಂಥ ಕ್ರೂರ ಘಟನೆ ಇದಾಗಿದೆ.

ಗೋವಿಂದದಾಸ್ ಅವರು ಬಾಲ್ಯದಿಂದಿಡಿದು ಕಡುಬಡತನದಿಂದ ಶಿಕ್ಷಣ ಪಡೆದದ್ದು ಹೆಜ್ಜೆ ಹೆಜ್ಜೆಗೂ ಅನುಭವಿಸಿದ ಅಪಮಾನ, ಆದರೆ ಛಲದಿಂದ ಏನಾದರೂ ಸಾಧಿಸುವ ಮನಸ್ಸು ಈ ಎಲ್ಲವೂಗಳನ್ನು ತುಂಬ ವಿಶಿಷ್ಟವಾಗಿ ಬಿಚ್ಚಿಟ್ಟಿದ್ದಾರೆ. ಆದರೆ ಅವರ ಮರಣದಿಂದ ಇದು ಅಪೂರ್ಣಗೊಂಡಿರುವುದು ವಿಷಾದನೀಯ ಸಂಗತಿ ಆಗಿದೆ. ಆದರೂ, ಸರಳ ಭಾಷೆಯಲ್ಲಿ ಅನೇಕ ಕುತೂಹಲಕರ ಘಟನೆಗಳನ್ನು ಹೃದಯತಟ್ಟುವಂತೆ ಕಟ್ಟಿಕೊಟ್ಟಿರುವುದು ಮಹತ್ವದ್ದೆನಿಸುತ್ತದೆ. ಇಂತಹ ಅಪರೂಪದ ಈ ಆತ್ಮಕಥನ ಇದುವರೆಗೂ ಪ್ರಕಟಣೆ ಆಗದಿರುವುದು ವಿಷಾದನೀಯ. ಆದರೂ ಈಗಲಾದರೂ ಪ್ರಕಟಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಹಿರಿಯ ಲೇಖಕರಾದ ಗೋವಿಂದದಾಸ್ ಅವರ ಈ ಆತ್ಮಕಥನ ಆಧುನಿಕ ಕನ್ನಡ ಸಾಹಿತ್ಯದ ಮೊಟ್ಟ ಮೊದಲ ಆತ್ಮಕಥನವಾಗಿದ್ದು, ಅಗತ್ಯವಾಗಿ ಈ ಬಗ್ಗೆ ಅಧ್ಯಯನ ನಡೆಯುವ ಅವಶ್ಯಕತೆ ಇದೆ ಅನ್ನಿಸುತ್ತದೆ.

ನಡುನೀರ ಹಡಗು (ನಾಟಕ)

ಸುಮಾರು ೧೯೫೨ರಲ್ಲಿಯೆ ರಚನೆಯಾಗಿರುವ ಈ ನಾಟಕ ಆರು ಅಂಕಗಳನ್ನೊಳ ಗೊಂಡಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಗುಣಗಾನದಿಂದ ಪ್ರಾರಂಭವಾಗುವ ನಾಟಕ, ಹರಿಜನರ ತ್ಯಾಗ ಮತ್ತು ದೇಶಸೇವೆ ತುಂಬ ಪ್ರಾಮಾಣಿಕವಾದುದು ಎಂಬುದನ್ನು ಸೂಚಿಸುವ ಮುಖಾಂತರ ಮುಕ್ತಾಯವಾಗುತ್ತದೆ.

ಗೋವಿಂದದಾಸ್ ಅವರು ಈ ನಾಟಕದಲ್ಲಿ ಗಾಂಧೀಜಿ ಮತ್ತು ಕಾಂಗ್ರೆಸ್ ನವರು ಹರಿಜನ ಸಮುದಾಯದ ಸುಧಾರಣೆಗೆ ಕೈಗೊಂಡಿರುವ ಕಾರ್ಯಕ್ರಮಗಳನ್ನು ಆದರ್ಶವಾಗಿಟ್ಟುಕೊಂಡು; ಗ್ರಾಮೀಣ ಸಮಾಜದಲ್ಲಿ ಇವರು ಜಾತೀಯತೆಯನ್ನು ಸಡಿಲಗೊಳಿಸಲು ಪ್ರಯತ್ನಿಸುತ್ತಾರೆ. ಹರಿಜನರು ನಿಜವಾದ ದೇಶಪ್ರೇಮಿಗಳು, ಸಂಸ್ಕೃತಿವಂತರು, ಶ್ರಮಿಕರು, ಮುಗ್ಧರು, ಅನ್ನದಾಸರು. ಅವರನ್ನು ಪ್ರಾಣಿಗಳಂತೆ ಕಾಣುವುದು ತಪ್ಪು. ಸ್ವತಃ ಗಾಂಧೀಜಿಯವರೆ ಇದನ್ನು ವಿರೋಧಿಸುತ್ತಾರೆ. ಹಾಗಾಗಿ ಕಾಂಗ್ರೆಸ್ ನವರು ಧೋರಣೆ ಕೂಡ ಇದೆ ಆಗಿದೆ. ಸಂವಿಧಾನದ ಪ್ರಕಾರ ಅಸ್ಪೃಶ್ಯತೆ ಆಚರಿಸುವುದು ತಪ್ಪು ಎಂಬುದನ್ನು ಅಸ್ತ್ರವಾಗಿ ಬಳಸಿಕೊಂಡು ಹರಿಜನರನ್ನು ಸರ್ಕಾರಿ ದೇವಾಲಯಕ್ಕೆ ತಡೆದರೆ ಅದು ತಪ್ಪಾಗುತ್ತದೆ. ಜೈಲು ಶಿಕ್ಷೆಯಾಗುತ್ತದೆ ಎಂಬುದನ್ನು ಕಾಂಗ್ರೆಸ್ ಮುಖಂಡರ ಮುಖಾಂತರ ಹೇಳಿಸುತ್ತಾರೆ. ಸವರ್ಣೀಯ ಅರ್ಚಕನಿಗೆ ಹರಿಜನರನ್ನು ದೇವಸ್ಥಾನಕ್ಕೆ ಸೇರಿಸದೆ ಹೋದರೆ ಇದು ಕಾಂಗ್ರೆಸ್ ಮತ್ತು ಸರ್ಕಾರದ ವಿರುದ್ಧದ ಧೋರಣೆ ಆಗುತ್ತದೆ ಎಂಬ ತಿಳಿವನ್ನು ಹೇಲಿಸುತ್ತಾರೆ. ಆಗ ಅಚರಕ ಒಲ್ಲದ ಮನಸ್ಸಿನಲ್ಲಿ ಹಿರಜನರು ದೇವಾಲಯಕ್ಕೆ ಬಂದರೆ, ಬೇರೆ ಜಾತಿಯವರು ಬರುವುದಿಲ್ಲವಲ್ಲಾ ಎಂಬ ತಂತ್ರ ಮುಂದಿಟ್ಟು ಕುತಂತ್ರ ಮಾಡುತ್ತಾನೆ. ಇದನ್ನು ನಾಟಕಕಾರರು ಸೂಕ್ಷ್ಮವಾಗಿ ತರುತ್ತಾರೆ.

ಹರಿಜನ ವಿದ್ಯಾವಂತ ತರುಣ ಭಗವಾನದಾಸ್ ಅವರ ಮದುವೆಗೆ ಮೇಲುವರ್ಗದ ಹಿರಿಯ ಕಾಂಗ್ರೆಸ್ ಮುಖಂಡರೆಲ್ಲರೂ ಭಾಗಿಯಾಗುತ್ತಾರೆ. ಅಲ್ಲಿ ಮುಖ್ಯವಾಗಿ ಸಹಪಂಕ್ತಿ ಭೋಜನವನ್ನು ಏರ್ಪಡಿಸುವ ಮುಖೇನು ಜಾತಿ ಭೇದದ ಸಡಿಲತೆಯನ್ನು ನಾಟಕಕಾರರು ತರುವುದು ಒಳ್ಳೆಯ ಆಶಯದಿಂದ ಕೂಡಿದ್ದಾಗಿದೆ. ಕಾಂಗ್ರೆಸ್ ಮುಖಂಡರ ಅಧ್ಯಕ್ಷತೆಯಲ್ಲಿ ನಡೆದ ಈ ವಿವಾಹದಲ್ಲಿ : ‘‘ಸಭಿಕರೆ ನೂತನ ದಂಪತಿಗಳೆ ಹರಿಜನ ಕೇರಿಯಲ್ಲಿ ಸವರ್ಣೀಯರು ವಿವಾಹ ನಡೆಸುವುದು ಭಾರತ ಚರಿತ್ರೆಯಲ್ಲೆಲ್ಲೂ ಎಂದೂ ಆಗದ ಒಂದು ಕಾರ್ಯ. ಹರಿಜನೋದ್ಧಾರಕೆ ಹಿಂದಿನಿಂದಲೂ ಅನೇಕ ಮಹನೀಯರು ಪ್ರಬಲ ಯತ್ನ ನಡೆಸಿದರು ಫಲವೇನೂ ಆಗಿಲ್ಲ. ಈಗ ಮಹಾತ್ಮಾಗಾಂಧಿ ಇದಕ್ಕಾಗಿ ನಿಂತು ಸತತ ದುಡಿಯುತ್ತಿದ್ದಾರೆ. ಇಂದು ಫಲಕಾರಿಯಾಗುತ್ತದೆಯೆಂದು ಪೂರ್ಣ ಭರವಸೆ ಎಲ್ಲರಿಗೂ ಮೂಡಿದೆ. ನಾಗರಿಕತೆ, ವಿದ್ಯೆಗಳೆರಡೂ ಜನತೆಯಲ್ಲಿ ಹೆಚ್ಚಿದಂತೆಲ್ಲಾ ಕೋಮುವಾರು ಭಾವನೆ ಅಳಿಸಿ ದೇಶಾಭಿಮಾನ ಉಂಟಾಗಿ ಒಗ್ಗಟ್ಟು ಹೆಚ್ಚಾಗುತ್ತೆ. ಭಾರತಾದ್ಯಂತ ಹರಿಜನೋದ್ಧಾರ ಕಾರ್ಯ ಭರದಿಂದ ಸಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾಗುವುದರೊಳಗಾಗಿ ಇವರಿಗೆ ಸಮಾಜ ಸಮಾನತೆಯೊದಗಿಸುವ ಸಲುವಾಗಿ ಹರಿಜನ ಗೃಹಪ್ರವೇಶ ಸಹಪಂಕ್ತಿ ಭೋಜನ ಅಲ್ಲಲ್ಲಿ ನಡೆಯುತ್ತಿವೆ. ಸಾರ್ವಜನಿಕ ಕೆರೆ, ಬಾವಿ, ದೇವಾಲಯ, ಬಟ್ಟೆ ಅಂಗಡಿಗಳಿಗೆಲ್ಲ ನಮ್ಮ ಕಾಂಗ್ರೆಸ್ ಸಂಸ್ಥೆಯವರು ಪ್ರಯತ್ನಿಸುತ್ತಿದ್ದಾರೆ. ತೀವ್ರದಲ್ಲಿ ಅದು ಕಾರ್ಯಾರಂಭಕ್ಕೆ ಬರುವುದು. ಇನ್ನು ವಧು-ವರರಿಗೆ ಆಶೀರ್ವದಿಸಿ ಭಾಷಣ ಮುಗಿಸುತ್ತೇನೆ’’ ಎಂಬ ಕಾಂಗ್ರೆಸ್ ಅಧ್ಯಕ್ಷರ ಭಾಷಣ ಜಾತೀಯತೆಯು ಕ್ರಮೇಣವಾಗಿ ಅಗತ್ಯವಾಗಿ ಹೋಗಬೇಕಾಗಿದೆ ಎಂಬ ಸುಧಾರಣೆಯ ಆಶಯವನ್ನು ತರುವುದು ಆರೋಗ್ಯಕರವಾಗಿದೆ.

ಹರಿಜನ ಯುವ ತರುಣರಾದ ಭಗವಾನ್ ದಾಸ್ ಅವರು, ಶ್ರದ್ಧೆಯ ಅಧ್ಯಯನದಿಂದ ಮೈಸೂರು ಮಹಾರಾಜರ ಗಮನ ಸೆಳೆದು ಮುಂದಿನ ಅಧ್ಯಯನಕ್ಕಾಗಿ ವಿಶೇಷ ಶಿಷ್ಯವೇತನವನ್ನು ಪಡೆದುಕೊಳ್ಳುತ್ತಾರೆ. ಊರಿನಲ್ಲಿ ರಾಮೋತ್ಸವ ಎಂಬ ಸಾಂಸ್ಕೃತಿಕ ಹಬ್ಬವನ್ನು ನಡೆಸುವ ಮುಖೇನ ಜನಾಂಗವನ್ನು ಸಂಘಟಿಸಿ, ಸ್ವಚತೆ ಹಾಗೂ ಶಿಕ್ಷಣದ ಮಹತ್ವವನ್ನು ತಿಳಿಸಿ ಜಾಗೃತಿಯನ್ನು ಮೂಡಿಸುವುದು, ಮೆರವಣಿಗೆ ಸವರ್ಣೀಯರ ಕೇರಿ ಪ್ರವೇಶಿಸಿದಾಗ ಅವರು ತಡೆದಾಗ ಪೋಲಿಸ್ ನವರಿಗೆ ದೂರು ನೀಡಿ, ಅವರನ್ನು ಕರೆಸಿ, ಸವರ್ಣೀಯರಿಗೆ ಸರ್ಕಾರದ ಕಾನೂನಿನ ಮುಖಾಂತರ ಅರಿವು ಮೂಡಿಸುವುದು, ಊರಿನಲ್ಲಿ ಪರಸ್ಪರ ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು, ಪ್ರಯತ್ನಿಸುವುದು, ಚರಿತ್ರೆಯನ್ನು ಗಾಢವಾಗಿ ಓದಿಕೊಂಡು ರಾಮಾನುಜಚಾರ್ಯರ ಕಾಲದಿಂದಿಡಿದು, ಮೈಸೂರು ಅರಸರ ಕಾಲದವರೆಗೂ ದೇಶಸೇವೆ ಮತ್ತು ದೇಶಾಭಿಮಾನವನ್ನು ನಮ್ಮ ಜನಾಂಗ ಹೇಗೆ ಮೆರೆದಿದ್ದಾರೆ ಎಂಬುದನ್ನು ತಿಳಿ ಹೇಳುವುದು, ಒಟ್ಟಾರೆ ಜನಾಂಗದ ಸುಧಾರಣೆಗಾಗಿ ಪ್ರಯತ್ನಿಸುತ್ತ ನಾಯಕತ್ವವನ್ನು ಬೆಳೆಸಿಕೊಳ್ಳುವ ಆಶಯವನ್ನು ನಾಟಕಕಾರರು ತಂದಿರುವುದು ಅರ್ಥಪೂರ್ಣವಾಗಿದೆ.

ಯುವನಾಯಕರಾದ ಭಗವಾನ್ ದಾಸ್ ಅವರು ತಮ್ಮ ವಿವಾಹದ ಸಂದರ್ಭದಲ್ಲಿ : ‘‘ನನ್ನ ವಿವಾಯಕ್ಕೆ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಾದಿಯಾಗಿ ದಯಮಾಡಿಸಿದಿರಲ್ಲಾ ಇದಕ್ಕೆ ಭಾರತದಲ್ಲಿ ನಾನೇ ಭಾಗ್ಯಶಾಲಿ. ನಾನು ಈ ಮತದಲ್ಲೆ ಜನ್ಮತಾಳಿ ನಮಗಿರುವ ಮತಭೇದದ ಮಹಾಯಾತನೆಯನ್ನು ಸ್ವತಃ ಅನುಭವಿಸಿ ಸಹಿಸಲಾರದೆ ಅನ್ಯಮತಾವಲಂಬಿಯಾಗಬೇಕೆಂದು ಆಗಲೇ ತೀರ್ಮಾನಿಸಿದ್ದ ನನಗೆ ಈ ದಿನದ ಕಾರ್ಯ ನೋಡಿದರೆ ನನಗೆ ನಾಚಿಕೆಯಾಗುತ್ತದೆ. ಪೂಜ್ಯ ಎ.ಸಿ.ರಾಮಚಂದ್ರರಾವ್ ಅತ್ರಿಯವರ ಹಿತೋಕ್ತಿಯಿಂದ ಕಾಂಗ್ರೆಸ್ ಸಂಸ್ಥೆಗೆ ಸೇರಿ ಕೆಲ್ಸ ಕಾರ್ಯಗಳನ್ನು ನಡೆಸಿಕೊಂಡು ಬಂದೆನು. ಆದರೂ ಇನ್ನು ಜಾತಿ ಕಳಂಕದ ಕಲ್ಮಶವು ಒಳಗೊಳಗೆ ಇದ್ದೇ ಇತ್ತು. ಇದು ಸದ್ಯದಲ್ಲೇ ನಿರ್ಮೂಲವಾಗಿ ಸಮಾಜ ಸಮಾನತೆಯೊದಗುತ್ತದೆಂಬ ಆಶಾಕಿರಣ ಒಂದು ನನಗೆ ಮೂಡುತ್ತಿದೆ’’ ಎಂದು ತಾಲುವ ನಿಲುವು ಪಕ್ಕಾ ಗಾಂಧಿವಾದಿಯಾಗಿದ್ದ ಗೋವಿಂದದಾಸ್ ಅವರು, ವ್ಯವಸ್ಥೆಯಲ್ಲಿ ಇರುವ ಮಿತಿಯೊಳಗೆ ಸುಧಾರಣೆಯನ್ನು ತರಲು ಸಾಧ್ಯವಿದೆ ಎಂಬ ಆಶಯವನ್ನು ತರುವುದು ಆ ಕಾಲಘಟ್ಟದ ಸಾಮಾಜಿಕ ಧೋರಣೆಯನ್ನು ಸ್ಪಷ್ಟಪಡಿಸುತ್ತದೆ.

ಗೋವಿಂದದಾಸ್ ಅವರು ಹರಿಜನರು ಮೂಲತಃ ತ್ಯಾಗಿಗಳು, ಧೈತ್ಯವಂತರು, ಶ್ರಮಿಕರು ಎಂದು ನಾಟಕದಲ್ಲಿ ಎರಡು ಘಟನೆಗಳನ್ನು ತರುತ್ತಾರೆ. ಒಂದು : ರಾಮಾನುಜಚಾರ್ಯರು ಡೆಲ್ಲಿಯಿಂದ ಚೆಲುವರಾಯಸ್ವಾಮಿಯ ವಿಗ್ರಹವನ್ನು ಮೇಲುಕೋಟೆಗೆ ತರುತ್ತಿದ್ದಾಗ ಇದನ್ನರಿತು ಮುಸ್ಲಿಂರು ತಡೆ ಮಾಡುತ್ತಾರೆ. ಆಗ ಹರಿಜನರು ಅವರನ್ನು ಅಟ್ಟಿ ವಿಗ್ರಹವನ್ನು ಮೇಲುಕೋಟೆಗೆ ತಂದು ಸ್ಥಾಪಿಸಲು ಕಾರಣರಾಗಿದ್ದಾರೆ. ಹಾಗಾಗಿ ವರ್ಷಕ್ಕೊಮ್ಮೆ ನಡೆಯುವ ಬೇಲೂರು ಮತ್ತು ಮೇಲುಕೋಟೆ ದೇವಸ್ಥಾನಗಳಿಗೆ ಮುಕ್ತ ಅವಕಾಶ ದೊರಕಿಸಿಕೊಟ್ಟಿದ್ದೇನೆ ಎಂದು ಹೇಳುವ ದೃಶ್ಯ ಎರಡು : ಐದನೆ ಅಂಕದಲ್ಲಿ ಮೈಸೂರು ಹಿಂದಿನ ಅರಮನೆಗೆ ಬೆಂಕಿ ಬಿದ್ದು ಬೇಯುತ್ತಿರುವಾಗ ಬೇರೆಯವರೆಲ್ಲ ಬಂದು ದೂರ ನಿಂತುಕೊಂಡು ಬಾಯಲ್ಲಿ ಮಾತ್ರ ಬೆಂಕಿ ಅರಿಸಿದರೆ ವಿನಾಃ ಯಾರು ಮುನ್ನುಗ್ಗಲಿಲ್ಲ. ಅಲ್ಲಿನ ಆದಿಕರ್ನಾಟಕಪುರಕ್ಕೆ ವಿಚಾರ ತಿಳಿದ ಕೂಡಲೆ ಚೆನ್ನಾಗಿ ಕುಡಿದು ಹುರಿದುಂಬಿದ್ದ ಅವರೆಲ್ಲರೂ ಧೈರ್ಯದಿಂದ ಮುನ್ನುಗ್ಗಿ ಅಯ್ಯೊ ನಮ್ಮ ಸ್ವಾಮಿ ನಮ್ಮ ದೊಡ್ಡ ಬುದ್ಯೋರು ನಮ್ಮರಮನೆ ಬೆಂದು ಹೋಗುತ್ತಲ್ಲ ಎಂಬ ಅಭಿಮಾನದಿಂದ ಪ್ರಾಣದ ಆಸೆ ತೊರೆದು ಬೆಂಕಿ ಆಸಿ ಅರಮನೆಯಲ್ಲಿದ್ದ ಐಶ್ವರ್ಯವನ್ನೆಲ್ಲ ಉಳಿಸಿಕೊಟ್ಟರು. ಇದಕ್ಕಾಗಿ ಇಡೀ ಭಾರತೀಯ ಮೈಸೂರು ರಾಜಮನೆತನದವರು ಸೂರ್ಯಚಂದ್ರಾಣೆಯಾಗಿ ನಮಗೆ ಚಿರ ಋಣಿಯಾಗಿರಬೇಕು’’ ಎಂಬ ಜಾಗೃತ ಯುವ ಭಗವಾನ್ ದಾಸ್ ಪಾತ್ರದ ಮೂಲಕ ನಾಟಕಕಾರರು ಧ್ವನಿಸುವ ಅರ್ಥ ಇದಿಯಲ್ಲಾ! ಇದು ನಿಜಕ್ಕೂ ದಲಿತರನ್ನು ನೆಲದ ಪ್ರೇಮ, ದೇಶಪ್ರೇಮ, ಮನುಷ್ಯಪ್ರೇಮ ಇಂಡಿಯಾದ ಯಾವುದೇ ಜನಾಂಗಕ್ಕೆ ಇಲ್ಲ ಎಂಬುದು ಗಮನಾರ್ಹ ಸಂಗತಿ ಆಗಿದೆ.

ಮಾನವತೆಯ ಸ್ಥಾಪನೆಯಾಗಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮುಂತಾದವರುಗಳು ನೊಂದವರ ಪರವಾಗಿ ಶ್ರಮಿಸಿದ್ದಾರೆ. ಈ ಕೆಲಸ ಒಂದರ್ಥದಲ್ಲಿ ‘ನಡುನೀರಿನ ಹಡಗಿನಂತಿದೆ’ ಇದನ್ನು ಮುಂದೆ ಎಳೆಯುವವರು ಯಾರು? ಎಂಬ ಧ್ವನ್ಯಾರ್ಥದಲ್ಲಿ ಈ ನಾಟಕಕ್ಕೆ ‘ನಡು ನೀರ ಹಡಗು’ ಎಂದು ಹೆಸರಿಟ್ಟಿರುವುದು ಮನೋಧರ್ಮಕ್ಕನುಗುಣವಾಗಿ ಅನಾವರಣಗೊಂಡಿರುವುದು ವಿಶೇಷ ಎನಿಸುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಮೊದಲ ತಲೆಮಾರಿನ ಕವಿಗಳಾದ ಡಿ. ಗೋವಿಂದದಾಸ್ ಅವರು ಸ್ವಾತಂತ್ರಪೂರ್ವದಲ್ಲಿಯೆ ಕಾವ್ಯ, ನಾಟಕ ರಚಿಸುವಂಥ ಕೆಲಸ ಮಾಡಿರುವುದು ಗಮನಾರ್ಹ ಕೆಲಸವೆ ಆಗಿದೆ.

ಕಲಿಯುಗದ ಮನು – ಡಾ. ಅಂಬೇಡ್ಕರ್ (ಜೀವನ ಚರಿತ್ರೆ)

ಗೋವಿಂದದಾಸ್ ಅವರು ಮಹಾನ್ ಮಾನವತಾವಾದಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಇದು ಕೂಡ ಅವರ ಜೀವನದ ಕೊನೆಯ ಘಟ್ಟದಲ್ಲಿ ಬರೆಯಲು ಪ್ರಾರಂಭಿಸಿದ್ದು ಎನಿಸುತ್ತದೆ. ಅಂಬೇಡ್ಕರ್ ಅವರನ್ನು ಕಲಿಯುಗದ ಮನು ಎಂದು ಕರೆದಿರುವುದು ವಿಶಿಷ್ಟವಾಗಿದೆ. ಈ ಅಪೂರ್ವ ಪುಸ್ತಕ ಅಂಬೇಡ್ಕರ್ ಅವರ ಬಾಲ್ಯ, ಶಿಕ್ಷಣ, ಹೋರಾಟ, ಸಂಘಟನೆ, ಸಾಧನೆ ಮುಂತಾದವುಗಳನ್ನು ಪರಿಚಯಿಸುತ್ತದೆ. ಮುಖ್ಯವಾಗಿ ಅಂಬೇಡ್ಕರ್ ಅವರ ವಿದ್ವತ್ತಿನ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸುವುದು ಪ್ರೇರಣೆಯ ರೀತಿ ಇದೆ. ಕೊನೆಗೆ ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಅಪ್ಪಿಕೊಂಡ ಬಗ್ಗೆ ವಿಶೇಷವಾಗಿ ಒತ್ತು ಕೊಟ್ಟಿರುವ ಜೀವನ ಚರಿತ್ರೆಕಾರರು ಅಂಬೇಡ್ಕರ್ ಅವರ ಚಿಂತನೆಗಳು ಕೇವಲ ದಲಿತರಿಗೆ ಮಾತ್ರವಲ್ಲ. ಜಗತ್ತಿನಲ್ಲಿ ಮಾನವೀಯತೆಯನ್ನು ಪ್ರೀತಿಸುವವರಿಗೆಲ್ಲ ಅಂಬೇಡ್ಕರ್ ಅವರ ಚಿಂತನೆಗಳು ಮಾರ್ಗದರ್ಶಿಯಾಗುತ್ತವೆ ಎಂಬುದನ್ನು ಈ ಜೀವನಚರಿತ್ರೆ ಒತ್ತಿ ಹೇಳುವುದು ಲೇಖಕರ ಪ್ರಧಾನ ಆಶಯವಾಗಿದೆ.

ಡಿ.ಗೋವಿಂದದಾಸ್ ಅವರು ಕನ್ನಡ ನವೋದಯ ಸಾಹಿತ್ಯ ಕಾಲಘಟ್ಟದಲ್ಲಿಯೆ; ಸಾಹಿತ್ಯದ ವಿಭಿನ್ನ ಪ್ರಕಾರಗಳಾದ, ಕಾವ್ಯ, ನಾಟಕ, ಆತ್ಮಕಥನ, ಜೀವನಚರಿತ್ರೆ ಮುಂತಾದ ಕ್ಷೇತ್ರಗಳಲ್ಲಿ ಕೃಷಿ ಮಾಡಿದ್ದಾರೆ. ಕಡು ನಷ್ಟದಿಂದ ಅಕ್ಷರಕೋಶ ಪ್ರವೇಶಿಸಿದ ಗೋವಿಂದದಾಸ್ ಅವರು, ಸ್ವಾತಂತ್ರ್ಯಪೂರ್ವದಲ್ಲಿಯೆ ದಟ್ಟ ಸಾಮಾಜಿಕ ಕಳಕಳಿಯಿಂದ, ಸಾಮಾಜಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ತುಂಬು ಪರಿಶ್ರಮದಿಂದ ದುಡಿದಿರುವುದು ಕುತೂಹಲಕರವಾಗಿದೆ. ಆಧುನಿಕ ಕನ್ನಡ ಸಾಹಿತ್ಯದ ಮೊದಲ ತಲೆಮಾರಿನ ದಲಿತ ಕವಿ, ನಾಟಕಕಾರರಾದ ಡಿ.ಗೋವಿಂದದಾಸ್ ಅವರ ಸಮಗ್ರಸಾಹಿತ್ಯವನ್ನು ಇಂದು ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೂಕ್ಷ್ಮವಾದ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಒಳಪಡಿಸುವ ಅಗತ್ಯತೆ ಇದೆ.

ಡಾ.ಎಂ.ಎಸ್.ಶೇಖರ್