ಹಿಂದೂಸ್ಥಾನಿ ಸಂಗೀತದ ಘನ ವಿದ್ವಾಂಸರಾಗಿರುವ ಗ್ವಾಲಿಯರ್ ಘರಾಣೆಯ ಪಂ. ಡಿ.ಬಿ. ಹರೀಂದ್ರ ಅವರು ದಿನಾಂಕ ೯-೬-೧೯೨೪ ರಂದು ಹರಿಹರದಲ್ಲಿ ಜನಿಸಿದರು. ಅವರ ತಂದೆ ಹೆಸರಾಂತ ಸಾಹಿತಿಗಳೂ, ಕನ್ನಡ-ಇಂಗ್ಲೀಷ್‌ ನಿಘಂಟಿನ ಕರ್ತೃ ಹಾಗೂ ಆಯುರ್ವೇದ ಪಂಡಿತರಾಗಿದ್ದ ದ.ಕೃ. ಭಾರದ್ವಾಜರು. ಅವರು ಬಿ.ಎಸ್‌.ಸಿ., ಬಿ.ಟಿ. ಪದವೀಧರರು ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲೂ ಸಹ ಬಿ.ಮ್ಯೂಜಿಕ್‌ ಪದವೀಧರರು. ವಿಜ್ಞಾನ ಶಾಸ್ತ್ರದ ಅಧ್ಯಾಪಕರಾಗಿ ವೃತ್ತಿಯಲ್ಲಿದ್ದು ಈಗ ನಿವೃತ್ತರಾಗಿದ್ದಾರೆ.

ಬಾಲ್ಯದಲ್ಲೇ ಸಂಗೀತದ ಒಲವನ್ನು ಮೈಗೂಡಿಸಿಗೊಂಡ ಹರೀಂದ್ರ ಅವರಿಗೆ ಉತ್ತೇಜನ ನೀಡಿ ಪ್ರೋತ್ಸಾಹಿಸಿದವರು ಪಂ. ತಾರಾನಾಥರು, ಹಾವೇರಿಯ ಶಂಕರ ಸದಾಶಿವ ಜೋಶಿ ಪಂ. ಶಂಕರ ದೀಕ್ಷಿತ ಜಂತಲಿ, ಪಂ. ನಾರಾಯಣ ರಾವ್‌ ಹಾಗೂ ಪಂ. ರಾಮರಾವ್‌ ವಿ. ನಾಯಕ್‌ ಅವರಿಂದ ಉತ್ತಮ ಮಾರ್ಗದರ್ಶನ.

ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಇವರ ಗಾಯನ ಕಾರ್ಯಕ್ರಮಗಳು ಪ್ರಸಾರವಾಗಿದೆ. ೧೯೬೩ ರಿಂದ ಅನೇಕ ಶಿಷ್ಯರನ್ನು ತಯಾರಿಸುತ್ತಿದ್ದಾರೆ.

ಎರಡೂ ಪದ್ಧತಿಯ ರಾಗ ಹಾಗೂ ತಾಳ-ಲಯಗಳ ಕುರಿತಾಗಿ ಸಂಗೀತ ಸಮ್ಮೇಳನಗಳಲ್ಲಿ ಸಂಶೋಧನಾತ್ಮಕ ಪ್ರಾತ್ಯಕ್ಷಿಕ ಭಾಷಣಗಳನ್ನು ಮಾಡಿದ್ದಾರೆ. ‘ಹಿಂದೂಸ್ಥಾನೀ ಸಂಗೀತದಲ್ಲಿ ಕನ್ನಡದ ಪಾತ್ರ-ನಾಳೆ’ ಎಂಬ ಪ್ರಬಂಧವನ್ನು ೧೯೮೫ರ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಂಡಿಸಿದ್ದಾರೆ. ಅಲ್ಲದೆ ಹಿಂದೂಸ್ಥಾನಿ ಸಂಗೀತ ಕುರಿತ ಕಿರು ಹೊತ್ತಿಗೆಯನ್ನು ಪ್ರಕಟಿಸಿದ್ದಾರೆ.

ಅಖಿಲ ಭಾರತೀಯ ಗಂಧರ್ವ ಮಹಾ ವಿದ್ಯಾಲಯದ (ಮುಂಬಯಿ) ಹಾಗೂ ಕರ್ನಾಟಕ ರಾಜ್ಯ ಸರಕಾರ ನಡೆಸುವ ಸಂಗೀತ ಪರೀಕ್ಷೆಗಳ ಪರೀಕ್ಷಕರಾಗಿ ಮತ್ತು ಕರ್ನಾಟಕ ಗಾನಕಲಾ ಪರಿಷತ್ತಿನ ತಜ್ಞರ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಹಿಂದಿ ಮತ್ತು ಕನ್ನಡ ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಇತ್ತೀಚೆಗೆ ಅವರು ೮೭ ರಾಗಗಳಲ್ಲಿ ೧೦೧ ತರಾನಾ ಬಂದೀಶ ರಚನೆ ಮಾಡಿ ‘ತರಾನಾ ತರಂಗ’ ಎಂಬ ಸಂಗೀತ ಶೋಧನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ೧೯೭೩ರಲ್ಲಿ ಸ್ಥಾಪಿತವಾದ “ಹಿಂದೂಸ್ಥಾನಿ ಸಂಗೀತ ಕಲಾಕಾರ ಮಂಡಳಿ” ಇವರು ಬೆಳೆಸಿದ ಶಿಶು. ಅನೇಕ ಸಂಘ ಸಂಸ್ಥೆಗಳು ಇವರ ಪಾಂಡಿತ್ಯವನ್ನು ಗುರುತಿಸಿ ಗೌರವಿಸಿ ಸನ್ಮಾಸಿವೆ. ಹಿಂದೂಸ್ಥಾನಿ ಸಂಗೀತ ಕಲಾಕಾರ ಮಂಡಳಿ ಇವರಿಗೆ ‘ನಾದಶ್ರೀ’ ಎಂಬ ಬಿರುದು ನೀಡಿ ಗೌರವಿಸಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೩-೯೪ರಲ್ಲಿ ‘ಕರ್ನಾಟಕ ಕಲಾ ತಿಲಕ’ ಎಂಬ ಬಿರುದು ನೀಡಿ ಪುರಸ್ಕರಿಸಿದೆ.