“ಆಧುನಿಕ ಭಾರತೀಯ ಸಾಹಿತ್ಯದ ಒಂದು ಅಶ್ವತ್ಥ ವೃಕ್ಷ ” ಎಂಬ ಪ್ರಶಂಸೆಗೆ ಪಾತ್ರರಾದ ಡಿ.ವಿ.ಜಿ ಯವರು ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಆಡಳಿತ ಹಾಗೂ ರಾಜಕಾರಣ -ಈ ಎಲ್ಲ ಕ್ಷೇತ್ರಗಳಲ್ಲಿನ ತಮ್ಮ ಅನನ್ಯ ಪ್ರತಿಭೆ ಮತ್ತು ಪರಿಶ್ರಮಗಳ ಮೂಲಕ ಮುಖ್ಯವಾಗಿ ತಾವೇ ಕಟ್ಟಿ ಬೆಳೆಸಿದ ತಮ್ಮ ಗೋಖಲೆ ಸಾರ್ವಜನಿಕ ಸಂಸ್ಥೆ, `ಮಂಕುತಿಮ್ಮನ ಕಗ್ಗ’ `ಭಗವದ್ಗೀತಾ ತಾತ್ಪರ್ಯ’ ಹಾಗೂ `ಜ್ಞಾಪಕ ಚಿತ್ರಶಾಲೆ’ ಸಂಪುಟಗಳ ಮೂಲಕ ಕನ್ನಡವನ್ನು, ಕನ್ನಡಿಗನನ್ನು ಬೆಳೆಸಿದ್ದಾರೆ. ಡಿ ವಿ ಜಿ ಅವರ ವಿದ್ವತ್ತು ಹಾಗೂ ಚಿಂತನೆ ಕಂಡವರು ಅವರು ಒಬ್ಬ ಋಷಿ ಎಂದಿದ್ದಾರೆ. ಅವರ ಸಾಹಿತ್ಯ ಬಾಳಿಗೊಂದು ನಂಬಿಕೆಯನ್ನೂ, ಭರವಸೆಯನ್ನೂ ಕೊಟ್ಟಿದೆ. ಹಾ.ಮಾ.ನಾಯಕರು “ಡಿ ವಿ ಜಿ ಅವರದು ಸತ್ಯ ಶಿವ ಸೌಂದರ್ಯಗಳು ಸಮಹಿತವಾದ ಸಾಹಿತ್ಯ” ಎಂದಿದ್ದಾರೆ. ಬದುಕು ಬರಹಗಳೆರಡರ ನಡುವೆ ಸಮನ್ವಯ ಸಾಧಿಸಿದ, ಬರೆದಂತೆಯೇ ಬದುಕಿದ ಋಷಿಸದೃಶ ವ್ಯಕ್ತಿತ್ವ ಡಿ.ವಿ.ಜಿಯವರದು.

ಡಿ ವಿ ಜಿ ಅವರು ೧೮೮೭, ಮಾರ್ಚ್ ೧೭ ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ತಂದೆ ವೆಂಕಟರಮಣಯ್ಯ, ತಾಯಿ ಅಲಮೇಲಮ್ಮ. ಅವರ ಮುತ್ತಜ್ಜ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ವಲಸೆ ಬಂದವರು. ಶೇಕದಾರ ಕುಟುಂಬದ ಗುಂಡಪ್ಪನವರು ೧೮೯೮ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದರು. ಖಾಸಗಿಯಾಗಿ ಇಂಗ್ಲಿಷ್, ಸಂಸ್ಕೃತವನ್ನು ಅಭ್ಯಾಸ ಮಾಡಿದರು. ಮುಂದೆ ಸಂಬಂಧಿಕರೊಬ್ಬರ ಸಹಾಯದಿಂದ ಮೈಸೂರಿನ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಆದರೆ ೧೯೦೫ ರಲ್ಲಿ ಮೆಟ್ರಿಕ್ಯುಲೇಷನ್ ನಲ್ಲಿ ತೇರ್ಗಡೆಯಾಗಲಿಲ್ಲ. ಅಲ್ಲಿಗೆ ಶಾಲಾ ಶಿಕ್ಷಣವನ್ನು ನಿಲ್ಲಿಸಿದರು. ಪ್ರೌಢಶಾಲೆಯಲ್ಲಿ ಓದುವಾಗಲೇ ಗುಂಡಪ್ಪನವರಿಗೆ ಮದುವೆಯಾಯಿತು. ಹೆಂಡತಿ ಭಾಗೀರಥಮ್ಮ. ಮುಂದೆ ಮುಳಬಾಗಿಲಿನ ಒಂದು ಶಾಲೆಯಲ್ಲಿ ಬದಲಿ ಅಧ್ಯಾಪಕರಾಗಿ ಕೆಲ ಕಾಲ ಕೆಲಸ ಮಾಡಿದರು. ಅದೇ ಅವರ ವೃತ್ತಿ ಜೀವನದ ನಾಂದಿ. ಆದರೂ ಅಲ್ಲಿರಲಾಗಲಿಲ್ಲ. ವೃತ್ತಿ ಬಿಟ್ಟು ಮುಂದೆ ಕೋಲಾರದ ಚಿನ್ನದ ಗಣಿಯಲ್ಲಿ, ಸೋಡಾ ಫ್ಯಾಕ್ಟರಿಯಲ್ಲಿ, ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಕೆಲಸಕ್ಕಾಗಿ ಎಲ್ಲೆಂದರಲ್ಲಿ ಅಲೆದರು. ನಂತರ ಒಂದು ಜಟಕಾ ಗಾಡಿಗೆ ಬಣ್ಣ ಬಳಿಯುವ ಒಂದು ಸಣ್ಣ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲವು ದಿನದಲ್ಲಿ ಆ ಕಾರ್ಖಾನೆಯೂ ಮುಚ್ಚಿ ಹೋಯಿತು.

ಡಿ.ವಿ.ಜಿ ಯವರಿಗೆ ಆಗ ವಯಸ್ಸು ಹದಿನೇಳು. ಅಷ್ಟು ಚಿಕ್ಕ ವಯಸ್ಸಿಗೇ ಅವರು ಇಂಗ್ಲೀಷ್ ನಲ್ಲಿ ನಿರರ್ಗಳ ವಾಗಿ ಮಾತನಾಡುತ್ತಿದ್ದರು, ಬರೆಯುತ್ತಿದ್ದರು.ಜೀವನ ನಿರ್ವಹಣೆಗಾಗಿ ಏನಾದರೂ ಮಾಡಬೇಕಿದ್ದ ಗುಂಡಪ್ಪನವರು “ಸೂರ್ಯೋದಯ ಪ್ರಕಾಶಿಕ” ಪತ್ರಿಕೆಯಲ್ಲಿ ಬಾತ್ಮೀದಾರರಾಗಿ ಸೇರಿಕೊಂಡರು. ಹೆಚ್ಚು ಕಾಲ ಈ ಪತ್ರಿಕೆ ನಡೆಯಲಿಲ್ಲ.ಈವನಿಂಗ್ ಮೈಲ್,ಮೈಸೂರು ಸ್ಟಾಂಡರ್ಡ್ ಮುಂತಾದ ಪತ್ರಿಕೆಗಳಿಗೆ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು. “ವೀರಕೇಸರಿ” ಯಲ್ಲಿ ಕಾರ್ಯ ನಿರ್ವಹಿಸಲು ಮದ್ರಾಸ್ ಗೆ ಹೋದಾಗ ಅಲ್ಲಿ “ಹಿಂದೂ” ಪತ್ರಿಕೆಗೆ ಬರೆದರು. ನಂತರ “ಮೈಸೂರು ಟೈಮ್ಸ್” ಇಂಗ್ಲಿಷ್ ಪತ್ರಿಕೆಯ ಸಹಾಯಕ ಸಂಪಾದಕರಾದರು. ನವರತ್ನ ಕೃಷ್ಣಸ್ವಾಮಿ ಎಂಬ ಸ್ನೇಹಿತರ ಜತೆ ಸೇರಿ ಕನ್ನಡದ ಮೊದಲ ದಿನಪತ್ರಿಕೆ “ಭಾರತಿ” ಯನ್ನು ಆರಂಭಿಸಿದಾಗ ಡಿ.ವಿ.ಜಿ ಯವರ ವಯಸ್ಸು ಕೇವಲ ಹದಿನೆಂಟು. ಮುಂದೆ ವೃತ್ತಪತ್ರಿಕೆಗಳಿಗೆ ಮಾರಕವಾದ ಕಾನೂನೊಂದನ್ನು ಸರ್ಕಾರ ಜಾರಿಗೆ ತಂದಾಗ ಅದನ್ನು ಪ್ರತಿಭಟಿಸಿ ಡಿ.ವಿ.ಜಿ ತಮ್ಮ ಭಾರತಿ ಪತ್ರಿಕೆಯನ್ನು ನಿಲ್ಲಿಸಿಬಿಟ್ಟರು.

ದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷ್ ನಲ್ಲಿ ಬರೆದ ಲೇಖನ ಡಿ ವಿ ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು “ದಿವಾನ್ ರಂಗಾಚಾರ್ಲು” ಎಂಬ ಪುಸ್ತಕವಾಗಿ ಪ್ರಕಟವಾಗುತ್ತಿದ್ದಂತೆ ಡಿ.ವಿ.ಜಿ ಯವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು.ಆಗ ಡಿ.ವಿ.ಜಿ ಯವರ ವಯಸ್ಸು ಕೇವಲ ಇಪ್ಪತ್ತೆರಡು. ಆಗ ಮುಖ್ಯ ಇಂಜಿನಿಯರ್ ಆಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರು ಈ ಪುಸ್ತಕ ಓದಿ ತುಂಬಾ ಮೆಚ್ಚಿಕೊಂಡರು. ನಂತರ ಲೇಖನ, ಪರಿಚಯದ ಜೊತೆ ಕಾವ್ಯ ಕೃಷಿ ಪ್ರಧಾನವಾಯಿತು. ಅನುವಾದ ಸಾಹಿತ್ಯದ ಮೂಲಕ ಡಿ ವಿ ಜಿ ಉತ್ತಮ ಹೆಸರು ಪಡೆದರು. ರಾಜಕೀಯ ವಿಶ್ಲೇಷಣೆ, ತತ್ತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಪ್ರಬಂಧ ಬರಹ, ಬೇರೆ ಬೇರೆ ಮಗ್ಗಲುಗಳಾದವು.

ಡಿ.ವಿ.ಜಿ “