ಡಿ.ವಿ. ಗುಂಡಪ್ಪನವರು “ಆಧುನಿಕ ಸರ್ವಜ್ಞ” ಎಂದು ಕರೆಸಿಕೊಂಡವರು. ಸರ್ವಜ್ಞ ವಚನಗಳನ್ನು ಬರೆದಂತೆ ಡಿ.ವಿ.ಜಿ ಯವರು “ಮಂಕುತಿಮ್ಮನ ಕಗ್ಗ”ವನ್ನು ಬರೆದದ್ದಕ್ಕೆ ಜನರು ಹಾಗೆ ಕರೆದಿರಬಹುದುದಾದರೂ ಇನ್ನೂ ಒಂದು ಅರ್ಥದಲ್ಲಿ ಆ ಮಾತನ್ನು ಒಪ್ಪಬಹುದು. ಪತ್ರಿಕೋದ್ಯಮ, ರಾಜಕಾರಣ, ಸಾಹಿತ್ಯ, ವೇದಾಂತ ಎಲ್ಲದರಲ್ಲೂ ಆಳವಾದ ಪರಿಶ್ರಮ ಇದ್ದ ವ್ಯಕ್ತಿ ಅವರು. ಆ ಕ್ಷೇತ್ರಗಳಲ್ಲಿ ಮೊದಲ ಪಂಕ್ತಿಗೆ ಸೇರುವ ಪುಸ್ತಕಗಳನ್ನು ಅವರು ರಚಿಸಿದರು. ಸಾರ್ವಜನಿಕ ಜೀವನಕ್ಕೆ ಸೇರಿದ ಎಲ್ಲ ಮುಖ್ಯ ವಲಯಗಳಲ್ಲಿಯೂ ದುಡಿದರು. ವಿಶಾಲವಾದ ಆಲದ ಮರದಂತೆ ಅವರ ವ್ಯಕ್ತಿತ್ವ. ಆಲದ ಮರ ನೂರಾರು ಬಿಳಲು ಬಿಟ್ಟು ಉನ್ನತವೂ ವಿಶಾಲವೂ ಆಗಿರುವಂತೆ ಅವರ ವ್ಯಕ್ತಿತ್ವ ಹಲವಾರು ಸತ್ವಗಳಿಂದ ಕೂಡಿ ಶ್ರೀಮಂತವಾದದ್ದು. ಮನಸ್ಸು, ಮಾತು, ಕೃತಿ ಮೂರರಿಂದಲೂ ಅವರು ನಾಡಿನ ಏಳಿಗೆಗೆ ಶ್ರಮಿಸಿದರು. ಅದಕ್ಕಾಗಿ ಸ್ವಂತ ಸುಖಗಳನ್ನೂ ಅಲಕ್ಷಿಸಿದರು. ಸಮಾಜದ ಉನ್ನತಿಗಾಗಿ ತಮ್ಮ ಬದುಕನ್ನೇ ತೇಯ್ದ ಈ ಶತಮಾನದ ಶ್ರೇಷ್ಠ ಕನ್ನಡಿಗರಲ್ಲಿ ಅವರು ಅಗ್ರಗಣ್ಯರು.

ಬಾಲ್ಯ

ಡಿ.ವಿ.ಜಿ. ಹುಟ್ಟಿದ್ದು ೧೮೮೪ ರಲ್ಲಿ, ಕೋಲಾರ ಜಿಲ್ಲೆಗೆ ಸೇರಿದ ಮುಳಬಾಗಿಲು ತಾಲ್ಲೂಕಿನಲ್ಲಿ. ವೇದಶಾಸ್ತ್ರ ಸಂಪನ್ನರಾದ ಹಿರಿಯರು ಇದ್ದ ಮನೆ ಅವರದು. ಅವರ ತಂದೆ ದೇವನಹಳ್ಳಿ ವೆಂಕಟರಮಣಯ್ಯ; ತಾಯಿ ಅಲಮೇಲಮ್ಮ.

ಡಿ.ವಿ.ಜಿ ಮುಳಬಾಗಿಲಿನ ಆಂಗ್ಲೋವರ್ನಾಕ್ಯುಲರ್ ಶಾಲೆಯಲ್ಲಿ ಲೋವರ್ ಸೆಕೆಂಡರಿವರೆಗೆ ಓದಿದರು. ಮುಂದಿನ ಓದಿಗೆ ಬೇರೆ ಊರಿಗೆ ಹೋಗಬೇಕಾಗಿತ್ತು.

ಡಿ.ವಿ.ಜಿ.ಯವರ ಅಜ್ಜಿಗೆ ಮೊಮ್ಮಗನನ್ನು ಬೇರೆ ಊರಿಗೆ ಕಳುಹಿಸುವುದು ಸುತಾರಾಂ ಇಷ್ಟವಿರಲಿಲ್ಲ. “ಕಣ್ಣ ಮುಂದಿನ ಮಗು ಕಣ್ಣ ಮುಂದೆಯೇ ಇರಬೇಕು, ನಾನು ಬದುಕಿರುವಷ್ಟು ದಿವಸ” ಎಂದು  ಆಕೆಯ ಹಠ, ಡಿ.ವಿ.ಜಿ. ಯವರ ತಂದೆ ಕೂಡ “ಓದು ಇಲ್ಲಗೇ ಸಾಕು, ಬೇಕಾದರೆ ಇಲ್ಲೇ ಇದ್ದು ಸಂಸ್ಕೃತ ಕಲಿಯಲಿ” ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಅಲ್ಲದೆ ಬೇರೆ ಊರಿಗೆ ಕಳುಹಿಸುವುದೆಂದರೆ ಹಣ ಬೇಕು. ಮನೆಯಲ್ಲಿ ಹಣದ ಅನುಕೂಲ ಇರಲಿಲ್ಲ. ಹೀಗಾಗಿ ಡಿ.ವಿ.ಜಿ. ಮುಳಬಾಗಿಲಿನಲ್ಲಿಯೇ ಉಳಿಯುವ ಪರಿಸ್ಥಿತಿ ಬಂದಿತ್ತು.

ಬಂಡಿ ರಸೂಲ್ ಖಾನ್

ಆಗ ಅವರ ಸಹಾಯಕ್ಕೆ ಒದಗಿದವನೆಂದರೆ ಬಂಡಿ ರಸೂಲ್ ಖಾನ್.

ರಸೂಲ್ ಖಾನ್ ವಿದ್ಯಾವಂತನಲ್ಲ. ಬಂಡಿ ಹೊಡೆದು ಜೀವನ ಮಾಡುತ್ತಿದ್ದ. ಬಡವ, ಆದರೂ ಬಹಳ ಪ್ರಾಮಾಣಿಕ, ಯೋಗ್ಯ. ಗುಂಡಪ್ಪನನ್ನು ಓದಿಸುವುದು ಸಾಧ್ಯವಿಲ್ಲವೆಂದು ಉಳಿದವರು ಅಭಿಪ್ರಾಯಪಟ್ಟಾಗ ಅವನು ಒಪ್ಪಲಿಲ್ಲ. “ಹುಡುಗ ಚುರುಕಾಗಿದ್ದಾನೆ; ಅವನು ಇಂಗ್ಲಿಷ್ ಕಲಿಯಲೇಬೇಕು” ಅಂತ ಹಠ ಹಿಡಿದುಬಿಟ್ಟ. “ನೀವೆಲ್ಲ ಏನಾದರೂ ಹೇಳಿ. ಆ ಹುಡುಗ ಓದಲೇಬೇಕು. ನನ್ನ ಕೈಲಾಗುವಷ್ಟು ನಾನು ಮಾಡಿಬಿಡುತ್ತೇನೆ. ಹೇಗೂ ನಾನು ಪ್ರತಿ ಶನಿವಾರ ಬಂಡಿ ಹೊಡೆದುಕೊಂಡು ರಾಬರ್ಟ್‌‌ಸನ್ ಪೇಟೆಗೆ ಹೋಗುತ್ತೇನೆ. ಅಲ್ಲಿಂದ ಬೌರಿಂಗ್‌ ಪೇಟೆಗೆ ನಾಲ್ಕು ಮೈಲಿ. ಈ ಹುಡುಗನನ್ನು ಗಾಡಿಯಲ್ಲಿ ಹಾಕಿಕೊಂಡು ಅಲ್ಲಿ ತನಕ ತಲುಪಿಸುತ್ತೇನೆ. ಬೆಂಗಳೂರಿನ ರೈಲು ಗಾಡಿಯಲ್ಲಿ ಕೂರಿಸಿ ಟಿಕೆಟ್‌ ಕೊಡಿಸಿ ಒಂದು ರೂಪಾಯಿ ಕೈ ಖರ್ಚಿಗೆ ಕೊಟ್ಟು ಬಿಡುತ್ತೇನೆ. ಮುಂದೆ ಅವನ ಹಣೆ ಬರಹ. ತಿರುಪೆ ಮಾಡಿ ಕೊಂಡಾದರೂ ಅಲ್ಲಿಯೇ ಓದಲಿ. ಆದರೆ ಅವನ ಓದು ಮಾತ್ರ ನಡೆಯಲೇಬೇಕು!”

ರಸೂಲ್‌ ಖಾನನ ಈ ತೀರ್ಮಾನ ಎಲ್ಲರನ್ನೂ ದಂಗುಬಡಿಸಿತು. ಆದರೂ ಅವನು ಹೇಳಿದಂತೆಯೇ ನಡೆಯಿತು. ಡಿ.ವಿ.ಜಿ. ಬೆಂಗಳೂರನ್ನು ಕಂದಡ್ಡು ಹೀಗೆ ರಸೂಲ್‌ ಖಾನನ ದಯದಿಂದ.

ಗುಮಾಸ್ತೆಉಪಾಧ್ಯಾಯ

ಆದರೆ ಕಾರಣಾಂತರದಿಂದ ಡಿ.ವಿ.ಜಿ. ಮೈಸೂರಿನಲ್ಲಿ ತಮ್ಮ ಓದು ಮುಂದುವರಿಸಿದರು; ಅಲ್ಲಿನ ಮಹಾರಾಜಾ ಕಾಲೇಜಿಗೆ ಸೇರಿಕೊಂಡಿದ್ದ ಹೈಸ್ಕೂಲು ವಿಭಾಗದಲ್ಲಿ ಮೆಟ್ರುಕ್ಯುಲೇಷನ್‌ವರೆಗೆ ಓದಿದರು. ಆದರೆ ಆ ಪರೀಕ್ಷೆಯಲ್ಲಿ ಫೇಲಾದರು!

ದುರದೃಷ್ಟದಿಂದ ಅಲ್ಲಿಗೇ ಅವರು ಓದು ನಿಲ್ಲಿಸ ಬೇಕಾಯಿತು. ಕೆ.ಜಿ.ಎಫ್‌.ನಲ್ಲಿ ಒಂದು ಸೋಡ ಫ್ಯಾಕ್ಟರಿಯಲ್ಲಿ ಡಿ.ವಿ.ಜಿ. ಗುಮಾಸ್ತೆಯಾಗಿ ಕೆಲಸಕ್ಕೆ ಸೇರಿದರು. ಒಂದು ವರ್ಷದ ನಂತರ ಬೆಂಗಳೂರಿಗೆ ಬಂದು ಪೇಂಟ್ ಫ್ಯಾಕ್ಟರಿಯೊಂದರಲ್ಲಿ ದುಡಿದರು. ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೆ ಮನೆ ಪಾಠ ಹೇಳಿ ಸ್ವಲ್ಪ ಹಣ ಸಂಪಾದಿಸುತ್ತಿದ್ದರು.

ಹದಿನೆಂಟರ ಪತ್ರಿಕೋದ್ಯಮಿ

ಡಿ.ವಿ.ಜಿ. ಗೆ ಆಗ ಹದಿನೇಳು ವರ್ಷ ವಯಸ್ಸು. ಅಷ್ಟು ಚಿಕ್ಕ ವಯಸ್ಸಿಗೇ ಅವರು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು, ಬರೆಯುತ್ತಿದ್ದರು. ಆಗಲೇ “ಈವೆನಿಂಗ್ ಮೇಲ್”, “ಮೈಸೂರು ಸ್ಟಾಂಡರ್ಡ್‌”, “ಸೂರ್ಯೋದಯ ಪ್ರಕಾಶಿಕೆ”- ಮೊದಲಾದ ಪತ್ರಿಕೆಗಳಿಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಲೇಖನಗಳನ್ನು ಬರೆಯಲು ಶುರು ಮಾಡಿದರು. ತಮ್ಮ ಹದಿನೆಂಟನೆ ವಯಸ್ಸಿಗೆ ನವರತ್ನ ಕೃಷ್ಣಸ್ವಾಮಿ ಎಂಬ ಸ್ನೇಹಿತರ ಜೊತೆಯಲ್ಲಿ ಕನ್ನಡದ ಮೊತ್ತ ಮೊದಲ ದಿನಪತ್ರಿಕೆ “ಭಾರತಿ”ಯನ್ನು ಅವರು ಆರಂಭಿಸಿದರು. ಆ ವಯಸ್ಸಿಗೆ ಇದು ಅಸಾಧಾರಣವಾದ ಸಾಹಸ ಎನ್ನಬೇಕು.

ಆ ದಿನಗಳಲ್ಲಿ ರಾಮಕೃಷ್ಣ ಪರಮಹಂಸರ ಶಿಷ್ಯರಲ್ಲಿ ಒಬ್ಬರಾದ ಅಭೇದಾನಂದರು ಅಮೆರಿಕೆಯಿಂದ ಬೆಂಗಳೂರಿಗೆ ಬರಲಿದ್ದರು. ಅದರ ಫಲವಾಗಿ ಬೆಂಗಳೂರಿನಲ್ಲಿ ತುಂಬ ಉತ್ಸಾಹ, ಸಡಗರ ತುಂಬಿತ್ತು. ವಿವೇಕಾನಂದರ ಆದರ್ಶ, ಅಭೇದಾನಂದರ ದೀಕ್ಷೆ, ವೇದಾಂತದ ಮಹತ್ವಗಳನ್ನು ಕುರಿತು ಡಿ.ವಿ.ಜಿ.ಅಭೇದಾನಂದರನ್ನು ಸ್ವಾಗತಿಸುವ ಒಂದು ಪದ್ಯ ಬರೆದರು. ಅದನ್ನು ತೋರಿಸಲು ಆಗ ಇಂಗ್ಲಿಷ್ ಸಾಹಿತ್ಯದಲ್ಲಿ ಪರಿಣತರು ಎನ್ನಿಸಿಕೊಂಡಿದ್ದ ರಾಮಚಂದ್ರರಾಯರು ಮತ್ತು ಕೃಷ್ಣಸ್ವಾಮಿ ಅಯ್ಯರ್‌ರನ್ನು ಕಂಡರು. ಕೃಷ್ಣಸ್ವಾಮಿ ಅಯ್ಯರರು ಸಾಹಿತ್ಯ ವೇದಾಂತಗಳಲ್ಲಿ ಮಹಾ ವಿದ್ವಾಂಸರು. ಈ ಪರಿಚಯ ಮುಂದೆ ಡಿ.ವಿ.ಜಿ.ಗೆ ಒಂದು ವರವಾಗಿ ಪರಿಣಮಿಸಿತು. ಅಯ್ಯರರು, ವಿರೂಪಾಕ್ಷ ಶಾಸ್ತ್ರಿಗಳು ಮತ್ತು ಮುಂದೆ ಎನ್. ನರಸಿಂಹಮೂರ್ತಿಗಳು – ಈ ಮೂರು ಜನರೂ ಸಾಹಿತ್ಯ, ವೇದಾಂತ, ರಾಜ್ಯಶಾಸ್ತ್ರಗಳಲ್ಲಿ ಡಿ.ವಿ.ಜಿ. ಅಪಾರವಾದ ತಿಳುವಳಿಕೆ ಸಂಪಾದಿಸಲು ಕಾರಣರಾದರು. ನರಸಿಂಹಮೂರ್ತಿಗಳನ್ನಂತೂ ಡಿ.ವಿ.ಜಿ.ತಮ್ಮ ಆತ್ಮಗುರುಗಳೆಂದೇ ಭಾವಿಸಿದರು.

ಆ ಹೊತ್ತಿಗೆ ಮೈಸೂರಿನಲ್ಲಿ ವೃತ್ತಪತ್ರಿಕೆಗಳ ಮೇಲೆ ನಿರ್ಬಂಧ ಹೇರುವ ಒಂದು ಕಾನೂನು ಜಾರಿಗೆ ಬಂದಿತು. ಅದು ವೃತ್ತಪತ್ರಿಕೆಗಳಿಗೆ ಮಾರಕವಾದ ಕಾನೂನು. ಅದನ್ನು  ಪ್ರತಿಭಟಿಸಿ ಡಿ.ವಿ.ಜಿ.ತಮ್ಮ “ಭಾರತಿ” ಪತ್ರಿಕೆಯನ್ನು ನಿಲ್ಲಿಸಿಬಿಟ್ಟರು. ಮುಂದೆ ರಾಮಸ್ವಾಮಿ ಅಯ್ಯಂಗಾರ್ಯರೆಂಬುವರು ಆರಂಭಿಸಿದ “ಮೈಸೂರು ಟೈಮ್ಸ್‌” ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದರು.

ಆತ್ಮಗೌರವ

ಒಂದು ಸಲ ಆ ಪತ್ರಿಕೆಯಲ್ಲಿ ಸೆಂಟ್ರಲ್ ಕಾಲೇಜಿನ ಹಾಸ್ಟೆಲಿನ ಅಡಿಗೆಯ ಅವ್ಯವಹಾರದ ಬಗ್ಗೆ ಒಂದು ಪತ್ರ ಪ್ರಕಟವಾಯಿತು. ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಟೆಯ್ಟ್‌ ಸಾಹೇಬರು ಅದನ್ನು ಕಂಡು ಕಿಡಿಕಿಡಿಯಾದರು. ಅವರ ಪ್ರಚೋದನೆಯಂತೆ ಅಡಿಗೆಯವನು ಪತ್ರಿಕೆಯ ಸಂಪಾದಕನಾದ ರಾಮಸ್ವಾಮಿ ಅಯ್ಯಂಗಾರ್ಯರ ಮೇಲೆ ಕೋರ್ಟಿನಲ್ಲಿ ಮಾನನಷ್ಟದ ದಾವೆ ಹೂಡಿದ. ಡಿ.ವಿ.ಜಿ. ತಮ್ಮ ಲಾಯರು ಮಿತ್ರರ ಹಿತ ಸಲಹೆ ಕೇಳಿ ಅನಂತರ ಆ ಪತ್ರವನ್ನು ಪ್ರಕಟಿಸಿದ್ದರು. ರಾಮಸ್ವಾಮಿ ಅಯ್ಯಂಗಾರ್ಯರಿಗೆ ಅಡಿಗೆಯವನ ದಾವೆಯಿಂದ ತೊಂದರೆಯಾಗುವುದು ಸಾಧ್ಯವಿರಲಿಲ್ಲ. ಆದರೂ ಯಾರ ಮಾತು ಕೇಳಿಯೋ ಅಯ್ಯಂಗಾರ್ಯರು ಯಾರಿಗೂ ತಿಳಿಸದೆ ಕೋರ್ಟಿನಲ್ಲಿ ಕಷಮಾಪತ್ರ ಸಲ್ಲಿಸಿ ಅಡಿಗೆಯವನು ತನ್ನ ದಾವೆಯನ್ನು ವಾಪಸ್ಸು ತೆಗೆದುಕೊಳ್ಳುವಂತೆ ಮಾಡಿಬಿಟ್ಟರು. ಇಷ್ಟಾದ ಮೇಲೆ ಆ ಪತ್ರಿಕೆಯ ಕೆಲಸದಲ್ಲಿ ಮುಂದುವರಿಯುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಡಿ.ವಿ.ಜಿ. ಬಂದರು.ಕೂಡಲೆ ತಮ್ಮ ಕೆಲಸಕ್ಕೆ ರಾಜಿನಾಮೆ ಕೊಟ್ಟುಬಿಟ್ಟರು. “ಕೆಲಸ ಕಳೆದುಕೊಂಡೆಯಲ್ಲ ಈಗ ಏನು ಮಾಡುತ್ತೀಯೆ? ಎಂದು ಸ್ನೇಹಿತರು ಕೇಳಿದ್ದಕ್ಕೆ ದೇಶೋ ವಿಶಾಲಃ ಪ್ರಭವೋsಪ್ಯನಂತಾಃ(ದೇಶ ವಿಶಾಲವಾಗಿದೆ; ದೊರೆಗಳೂ ಅನೇಕರಿದ್ದಾರೆ) ಎಂದು ಬಿಟ್ಟರಂತೆ. ಆ ಚಿಕ್ಕ ವಯಸ್ಸಿನಲ್ಲಿಯೇ ಅವರು ಧೈರ್ಯ, ಪ್ರಮಾಣಿಕತೆ, ಆತ್ಮ ಗೌರವಗಳ ಸಾಕಾರಮೂರ್ತಿಯಾಗಿದ್ದರು.

ಕರ್ನಾಟಕ

ಡಿ.ವಿ.ಜಿ.ಯವರಿಗೆ ಆಗ ಇಪ್ಪತ್ತೆರಡು ವರ್ಷ ವಯಸ್ಸು ಇರಬಹುದು. ಹಿಂದೆ ಮೈಸೂರಿನ ದಿವಾನರಾಗಿದ್ದು ಅದನ್ನು ಅಭಿವೃದ್ಧಿಗೆ ತಂದ ರಂಗಾಚಾರ್ಲು ಅವರನ್ನು ಕುರಿತು ಒಂದು ಪುಸ್ತಕ ಬರೆದರು. ಅದರ ಒಂದೆರಡು ಭಾಗ ಮದರಾಸಿನ “ಇಂಡಿಯನ್ ರೆವ್ಯು” ಪತ್ರಿಕೆಯಲ್ಲಿ ಪ್ರಕಟವಾಯಿತು. ಅದನ್ನು ಓದಿ ಆಗ ಚೀಫ್ ಇಂಜಿನಿಯರರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರು ಕೂಡಲೆ ಡಿ.ವಿ.ಜಿ.ಯವರಿಗೆ ಸಂಪಾದಕರ ಮೂಲಕ ಒಂದು ಪತ್ರ ಬರೆದು ತಮ್ಮ ಮೆಚ್ಚಿಕೆಯನ್ನು ಸೂಚಿಸಿದರು. ಮುಂದೆ ಸಂಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಡಿ.ವಿ.ಜಿ.ಸಹಕರಿಸಬೇಕೆಂದೂ ಅವರು ಸೂಚಿಸಿದ್ದರು. ಮೈಸೂರಿನ ದಿವಾನರಾಗಿದ್ದ ಆನಂದರಾವ್ ಅವರು ಈ ಪುಸ್ತಕ ಪ್ರಕಟವಾದ ಕೂಡಲೆ ನೂರು ಪ್ರತಿಗಳನ್ನು ಕೊಂಡುಕೊಂಡು ಅವುಗಳನ್ನು ತಮ್ಮ ಸ್ನೇಹಿತರಿಗೆಲ್ಲ ಹಂಚಿದರು. ಆ ಪುಸ್ತಕಕ್ಕೆ ಎಲ್ಲ ಕಡೆಯಿಂದ ಮೆಚ್ಚಿಕೆ ಬಂತು. ಇಪ್ಪತ್ತೆರಡು ವರ್ಷದ ಹುಡುಗ ಆಗಲೇ ಸಂಸ್ಥಾನದ ಮೇಧಾವಿಗಳೆಲ್ಲ ಓದಿ ತಲೆ ಬಾಗುವಂಥ ಪುಸ್ತಕ ಬರೆದುಬಿಟ್ಟಿದ್ದ!

"ದೇಶೋ ವಿಶಾಲಃ ಪ್ರಭವೋsಪ್ಯನಂತಾಃ"

ಒಂದೆರಡು ವರ್ಷದ ತರುವಾಯ ಡಿ.ವಿ.ಜಿ. ತಾವೇ ಒಂದು ಪತ್ರಿಕೆಯನ್ನು ಆರಂಭಿಸಲು ಯೋಚಿಸಿದರು. ಅದು ವಾರಕ್ಕೆ ಎರಡು ಸಲ ಪ್ರಕಟವಾಗುವ “ಕರ್ನಾಟಕ” ಎಂಬ ಹೆಸರಿನ ಇಂಗ್ಲಿಷ್ ಪತ್ರಿಕೆ. ಪತ್ರಿಕೆ ಹೊರಡಿಸುವುದಕ್ಕೆ ಸರ್ಕಾರ ಅನುಮತಿ ಪಡೆಯಬೇಕಾಗಿತ್ತು. ಆದ್ದರಿಂದ ಡಿ.ವಿ.ಜಿ.ಆಗ ದಿವಾನರಾಗಿದ್ದ ವಿಶ್ವೇಶ್ವರಯ್ಯನವರನ್ನು ಕಂಡರು. ಅವರು ವಿಶ್ವೇಶ್ವರಯ್ಯನವರನ್ನು ಭೇಟಿಯಾದದ್ದು ಅದೇ ಮೊದಲು. ಡಿ.ವಿ.ಜಿ. ಎನ್ನುವವರು ಇನ್ನೂ ಇಷ್ಟು ಚಿಕ್ಕ ವಯಸ್ಸಿನ ವ್ಯಕ್ತಿ ಎಂದು ವಿಶ್ವೆಶ್ವರಯ್ಯನವರಿಗೆ ಬಹುಶಃ ಗೊತ್ತಿರಲಿಲ್ಲವೇನೋ. ಅವರು ಕೇಳಿದರು:

“ನಿಮ್ಮ ವಯಸ್ಸೇನು ಕೇಳಬಹುದೇ”

ಡಿ.ವಿ.ಜಿ.: ಇಪ್ಪತ್ತನಾಲ್ಕು-ಇಪ್ಪತ್ತೈದು ಇರಬಹುದು.

ವಿಶ್ವೇಶ್ವರಯ್ಯ: ನೀವು ಪತ್ರಿಕೆ ಹೊರಡಿಸಲು ಅನುಮತಿ ಕೇಳುತ್ತಿದ್ದೀರಿ ಅಲ್ಲವೇ?

ಡಿ.ವಿ.ಜಿ.: ಹೌದು.

ವಿಶ್ವೇಶ್ವರಯ್ಯ: (ನಗುತ್ತ) ಅಂದರೆ ನಿಮ್ಮ ಎರಡರಷ್ಟು ವಯಸ್ಸಾಗಿರುವ ಅಧಿಕಾರಿಗಳ ಆಡಳಿತದ ಮೇಲೆ ಆಕ್ಷೇಪಣೆ ಹೂಡುತ್ತೀರಿ ಅಲ್ಲವೇ?

ಡಿ.ವಿ.ಜಿ.: ಆಕ್ಷೇಪಣೆಯಲ್ಲ, ಸಹಾಯ.

ವಿಶ್ವೇಶ್ವರಯ್ಯ: ಹೇಗೆ ಸಹಾಯ ಮಾಡುತ್ತೀರಿ?

ಡಿ.ವಿ.ಜಿ.: ಗುಣ ದೋಷ ವಿಮರ್ಶೆಯಿಂದ. ಗುಣವನ್ನು ತಿಳಿಸಿದರೆ ತಮ್ಮ ಸರ್ಕಾರಕ್ಕೆ ಜನರ ಬೆಂಬಲ ದೊರೆಯಬಹುದು. ದೋಷ ತಿಳಿಸಿದರೆ ನೀವು ತಿದ್ದಿ ಸರಿಪಡಿಸುತ್ತೀರಿ.

ವಿಶ್ವೇಶ್ವರಯ್ಯನವರು ಸಂತೋಷದಿಂದ ಗಟ್ಟಿಯಾಗಿ ನಕ್ಕರು. “ನಿಮ್ಮಂಥ ದೃಷ್ಟಿ ಇರುವವರಿಗೆ ಅನುಮತಿ ಕೊಡುವುದರಲ್ಲಿ ತಪ್ಪೇನೂ ಇಲ್ಲ” ಎಂದು ಹೇಳಿ ವಿಶ್ವಾಸದ ಮಾತಾಡಿ ಕಳಿಸಿದರು.

ಡಿ.ವಿ.ಜಿ. ಅನುಮತಿಗಾಗಿ ಸರ್ಕಾರಕ್ಕೆ ಒಂದು ಅರ್ಜಿ ಸಲ್ಲಿಸಿದರು. ಬೆಂಗಳೂರಿನ ಡೆಪ್ಯೂಟಿ ಕಮೀಷನರ್ ಸರ್ಕಾರಕ್ಕೆ ಹೀಗೆ ರಿಪೋರ್ಟ್ ಬರೆದರು; “ಈತ ಇನ್ನೂ ಹುಡುಗ. ಟೋಪಿ ಹಾಕಿಕೊಂಡಿದ್ದಾನೆ. ಪತ್ರಿಕೆ ನಡೆಸುವ ಜವಾಬ್ದಾರಿಯನ್ನು ಹೊರುವುದು ಈ ಹುಡುಗನಿಗೆ ಸಾಧ್ಯವಾಗುವುದಿಲ್ಲ.” ಆದರೆ ಈ ರಿಪೋರ್ಟಿನಿಂದ ತೊಂದರೆಯಾಗಲಿಲ್ಲ. ಡಿ.ವಿ.ಜಿ.ಯವರಿಗೆ ಆ ಸಾಮರ್ಥ್ಯ ಇತ್ತೋ ಇಲ್ಲವೋ ಎನ್ನುವುದು ಸ್ವತಃ ದಿವಾನರಿಗೆ ಗೊತ್ತಿತ್ತು. “ಕರ್ನಾಟಕ” ಪ್ರಿಕೆ ಹೇಗೆ ಆರಂಭವಾಯಿತು.

ಪತ್ರಿಕೆ ಬಹು ಬೇಗನೆ ಪ್ರಸಿದ್ಧವಾಯಿತು. ತುಂಬ ನಿಷ್ಪಕ್ಷಪಾತ ದೃಷ್ಟಿಯ ಪತ್ರಿಕೆ ಎಂದು ಹೆಸರಾಯಿತು. ದಿವಾನರಾಗಿದ್ದ ವಿಶ್ವೇಶ್ವರಯ್ಯನವರಿಂದ ಹಿಡಿದು ಸಾಮಾನ್ಯ ಅಧಿಕಾರಿಗಳವರೆಗೆ ಯಾರ ದಾಕ್ಷಿಣ್ಯವೂ ಅದಕ್ಕೆ ಇರಲಿಲ್ಲ. ಪತ್ರಿಕೆ ಒಳ್ಳೆಯದನ್ನು ಮೆಚ್ಚಿ ಜನರಿಗೆ ತಿಳಿಸುತ್ತಿತ್ತು, ಹಾಗೆಯೇ ಸರ್ಕಾರದ ತಪ್ಪನ್ನು ನಿರ್ಭೀತವಾಗಿ ಖಂಡಿಸುತ್ತಿತ್ತು.

ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಿದ್ದಾಗ ಪ್ರತಿಯೊಂದು ಸಂಸ್ಥಾನದಲ್ಲೂ ಒಬ್ಬ ರೆಸಿಡೆಂಟ್ ಇರುತ್ತಿದ್ದ. ಒಮ್ಮೆ ಮೈಸೂರಿಗೆ ಸರ್ ಹೆನ್ರಿಕಾಬ್‌ ಎಂಬ ಇಂಗ್ಲಿಷ್‌ರವನು ರೆಸಿಡೆಂಟನಾಗಿ ಬಂದ. ನಮ್ಮ ದೇಶ ಸ್ವಾತಂತ್ಯ್ರದ ಸಲುವಾಗಿ ಹೋರಾಟ ನಡೆಸುತ್ತಿದ್ದ ಕಾಲ ಅದು. ಈ ಸ್ವಾತಂತ್ಯ್ರ ಚಳುವಳಿಗೆ ಬೆಂಬಲವಾಗಿ “ನ್ಯೂ ಇಂಡಿಯಾ”, “ಬಾಂಬೆ ಕ್ರಾನಿಕಲ್” ಮೊದಲಾದ ಪತ್ರಿಕೆಗಳು ಪ್ರಕಟವಾಗುತ್ತಿದ್ದವು. ಈ ಪತ್ರಿಕೆಗಳ ಪ್ರತಿಗಳು ಬೆಂಗಳೂರಿನಲ್ಲಿದ್ದ ಪಬ್ಲಿಕ್ ಲೈಬ್ರತಿಯ ವಾಚನಾಲಯಕ್ಕೂ ಬರುತ್ತಿದ್ದವು.

ಒಂದು ದಿನ ಕಾಬ್ ಸಾಹೇಬ ಆಕಸ್ಮಾತ್ ಪಬ್ಲಿಕ್ ಲೈಬ್ರರಿಗೆ ಭೇಟಿ ಕೊಟ್ಟ. ಅಲ್ಲಿ “ನ್ಯೂ ಇಂಡಿಯಾ” ಮತ್ತು “ಬಾಂಬೆ ಕ್ರಾನಿಕಲ್‌” ಪತ್ರಿಕೆಗಳು ಇದ್ದುದು ಅವನ ಕಣ್ಣಿಗೆ ಬಿತ್ತು. ಬ್ರಿಟಿಷರ ಅನ್ಯಾಯ ಕೃತ್ಯಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತಿದ್ದ ಆ ಪತ್ರಿಕೆಗಳನ್ನು ಕಂಡು ಬ್ರಿಟಿಷ್‌ ಪ್ರತಿನಿಧಿಯಾದ ಸಾಹೇಬನ ಕೋಪ ನೆತ್ತಿಗೇರಿತ್ತು. ಅವನು ಕೂಡಲೇ ಅಲ್ಲಿಯ ಮುಖ್ಯಸ್ಥರಿಗೆ ಛೀಮಾರಿ ಹಾಕಿದ. “ಇವೆಲ್ಲ ಪತ್ರಿಕೆಗಳೇ? ವಿಷದ ಕಂತೆಗಳು. ಇಂಥವನ್ನೆಲ್ಲ ತರಿಸಿ ಜನರಿಗೆ ಓದಲು ಕೊಡುತ್ತಿದ್ದೀರಲ್ಲ. ಮೊದಲು ಇವನ್ನೆಲ್ಲ ಹರಿದು ಹೊರಕ್ಕೆ ಎಸೆಯಿರಿ” ಎಂದು ರೇಗಾಡಿ ಹೊರಟು ಹೋದ.

ಎಂದಿನಂತೆ ಡಿ.ವಿ.ಜಿ.ಆ ದಿನವೂ ಸಂಜೆ ಲೈಬ್ರರಿಗೆ ಬಂದರು. ಸಾಹೇಬ ನಡೆಸಿದ್ದ ಅವಾಂತರ ತಿಳಿದು ಡಿ.ವಿ.ಜಿ.ಕಿಡಿಕಿಡಿಯಾದರು. ಪಬ್ಲಿಕ್‌ ಲೈಬ್ರರಿ ಸರ್ಕಾರಕ್ಕೆ ಸೇರಿದ ಸಂಸ್ಥೆ. ಅದರ ಉಪಯೋಗ ಬೆಂಗಳೂರಿನ ಜನರಿಗೆ ಸೇರಿದ್ದು. ಇಬ್ಬರಿಗೂ ಯೋಗ್ಯವಾಗಿ ಕಂಡ ವಿಚಾರದಲ್ಲಿ ತಲೆ ಹಾಕಲು ಈ ರೆಸಿಡೆಂಟ ಯಾರು?- ಎನ್ನಿಸಿ ರೇಗಿತು.

ಮಾರನೆಯ ದಿನವೇ ಡಿ.ವಿ.ಜಿ. ಕರ್ಣಾಟಕಪತ್ರಿಕೆಯಲ್ಲಿ ಈ ಪ್ರಸಂಗ ಕುರಿತು ಒಂದು ಲೇಖನ ಪ್ರಕಟಿಸಿದರು. ರೆಸಿಡೆಂಟನ ನಡವಳಿಕೆಯನ್ನು ತೀಕ್ಷಣವಾಗಿ ಖಂಡಿಸಿದರು. ಕಾಬ್ ಸಾಹೇಬನಿಗೆ ಅದನ್ನು ಓದಿ ಕಣ್ಣು ಕೆಂಪಗಾಯಿತು. “ಕರ್ಣಾಟಕ” ಪತ್ರಿಕೆಯ ಸಂಪಾದಕರನ್ನು ಶಿಕ್ಷಿಸಬೇಕೆಂದು ಸೂಚಿಸಿ ಸರ್ಕಾರಕ್ಕೆ ಬರೆದ. ಆಗ ದಿವಾನರಾಗಿದ್ದವರು ವಿಶ್ವೇಶ್ವರಯ್ಯನವರು. ಅವರು ಡಿ.ವಿ.ಜಿ.ಯವರಿಗೆ ಸಾಹೇಬನ ಕಾಗದ ತಲುಪಿಸಿ ಸಾಹೇಬನಿಗೆ ತಾವೇ ಸಮರ್ಪಕ ಉತ್ತರ ಕಳಿಸಿಕೊಟ್ಟರು.

ರಾಜಕೀಯ ಕ್ಷೇತ್ರ

ಈ ದಿವನಸಗಳಲ್ಲಿಯೇ ಡಿ.ವಿ.ಜಿ.ಯವರು “ಬೆಕ್ಕೋಜಿ”, “ಇಂದ್ರವಜ್ರ” ಮೊದಲಾದ ಮಕ್ಕಳ ಪುಸ್ತಕಗಳನ್ನು ಬರೆದರು. ನಮ್ಮ ದೇಶದ ಮಹಾ ವ್ಯಕ್ತಿಗಳಲ್ಲಿ ಒಬ್ಬರಾಗಿ, ಗಾಂಧೀಜಿಯವರಿಗೆ ರಾಜಕೀಯ ಗುರುಗಳು ಎನ್ನಿಸಿಕೊಂಡಿದ್ದ ಗೋಪಾಲಕೃಷ್ಣ ಗೋಖಲೆಯವರನ್ನು ಕುರಿತು ಒಂದು ಗ್ರಂಥ ರಚಿಸಿದರು. ಅಲ್ಲದೆ “ಭಾರತದ ದೇಶೀಯ ಸಂಸ್ಥಾನಗಳ ಸಂಸ್ಥೆಗಳು” ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷ್‌ನಲ್ಲಿ ಹತ್ತಾರು ಲೇಖನಗಳನ್ನು ಬರೆದರು. ಇಲ್ಲಿಂದ ಮುಂದೆ ಅವರು ಉದ್ದಕ್ಕೂ ಪುಸ್ತಕಗಳನ್ನು ಇಂಗ್ಲಿಷ್‌ನಲ್ಲಿ ಬರೆದರು. ಹಾಗೆ ಬರೆದ ಬರಹಗಳು ಸುಮಾರು ಮೂವತ್ತು ಇವೆ. ಅವರು ಸಾಹಿತ್ಯದಲ್ಲಿ ಎಷ್ಟು ದುಡಿದರೋ ಅದಕ್ಕೆ ಅನೇಕಪಟ್ಟು ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ದುಡಿದರು. ಅವರಿಗೆ ಮೂವತ್ತು ವರ್ಷ ತುಂಬುವ ಮುಂಚೆಯೇ ಅವರ ಹೆಸರು ಎಲ್ಲ ಕಡೆ ಹರಡಿತ್ತು.

ವಿಶ್ವೇಶ್ವರಯ್ಯನವರು ಆಗ ದಿವಾನರಾಗಿದ್ದರಷ್ಟೆ. ಅವರು ತಮ್ಮ ಜೊತೆಗೆ ಟೀ ತೆಗೆದುಕೊಳ್ಳಬೇಕೆಂಬ ನೆಪದಲ್ಲಿ ಡಿ.ವಿ.ಜಿ.ಯವರಿಗೆ ಆಗಾಗ ಹೇಳಿಕಳಿಸುತ್ತಿದ್ದರು. ಅವರ ಜೊತೆ ಸಂಸ್ಥಾನದ ಆರ್ಥಿಕ, ರಾಜಕೀಯ ವಿಷಯಗಳನ್ನು ಚರ್ಚಿಸುತ್ತಿದ್ದರು; ಅವರ ಸಲಹೆ ಪಡೆಯುತ್ತಿದ್ದರು. ವಿಶ್ವೇಶ್ವರಯ್ಯನವರು ಅಸಾಧಾರಣ ಮೇಧಾಮಿಗಳು. ಅಂಥವರು ತಮಗಿಂತ ತುಂಬ ಚಿಕ್ಕವರಾದ ಡಿ.ವಿ.ಜಿ.ಯವರ ಅಭಿಪ್ರಾಯಗಳನ್ನು ತಿಳಿಯಲು ಇಷ್ಟಪಡುತ್ತಿದ್ದರು. ತಿರುವಾಂಕೂರಿನಲ್ಲಿ ನಡೆದ “ಸ್ಟೇಟ್ಸ್‌ ಪೀಪಲ್ಸ್‌ ಕಾನ್‌ಫರೆನ್ಸ್‌”ಗೆ ವಿಶ್ವೇಶ್ವರಯ್ಯನವರನ್ನು ಅಧ್ಯಕ್ಷರಾಗಲು ಕೇಳಿದಾಗ ಅವರು, “ಡಿ.ವಿ.ಜಿ. ಕಾರ್ಯದರ್ಶಿಯಾಗಲು ಒಪ್ಪಿದರೆ ಮಾತ್ರ ನಾನು ಅಧ್ಯಕ್ಷನಾಗಲು ಒಪ್ಪುತ್ತೇನೆ” ಎಂದರು. ಮುಂದೆ ಹಾಗೇ ಆಯಿತು. ಡಿ.ವಿ.ಜಿ.ಯವರ ವಿಚಾರಶಕ್ತಿ, ದೂರದೃಷ್ಟಿಗಳ ಬಗ್ಗೆ ವಿಶ್ವೇಶ್ವರಯ್ಯನವರಿಗೆ ಅಷ್ಟೊಂದು ನಂಬಿಕೆ ಇತ್ತು.

ವಿನಾ ದೈನ್ಯೇನ ಜೀವನಂ

ಈ ದಿವಸಗಳಲ್ಲಿ ಡಿ.ವಿ.ಜಿ.ಆರ್ಥಿಕವಾಗಿ ತುಂಬಾ ತೊಂದರೆಯಲ್ಲಿದ್ದರು. ಇದು ಆಶ್ವರ್ಯವೆನ್ನಿಸುವ ವಿಚಾರ. ಏಕೆಂದರೆ ಅವರು ಓಡಾಡುತ್ತಿದ್ದುದೆಲ್ಲ ದಿವಾನರು, ದೊಡ್ಡ ದೊಡ್ಡ ಸರ್ಕಾರಿ ಅಧಿಕಾರಿಗಳ ಜೊತೆಯಲ್ಲಿ ಡಿ.ವಿ.ಜಿ. ಬಗ್ಗೆ ಬಹಳ ಗೌರವವಿದ್ದ ಆ ಅಧಿಕಾರಿಗಳೆಲ್ಲ ಅವರಿಗಾಗಿ ಏನು ಕೆಲಸ ಮಾಡಿಕೊಡಲೂ ಸಿದ್ಧರಿದ್ದರು. ಆದರೆ ಯಾರಿಂದ ಏನನ್ನು ಪಡೆಯುವುದೂ ಡಿ.ವಿ.ಜಿ.ಯವರಿಗೆ ಬೇಕಾಗಿರಲಿಲ್ಲ. “ವಿನಾ ದೈನ್ಯೇನ ಜೀವನಂ” (ದೀನನಾಗಿ ಬಾಳಬಾರದು) ಎನ್ನುದು ಅವರ ಜೀವನದ ಮಂತ್ರವಾಗಿತ್ತು. ಸದಾ ಅವರದು ಕೊಟ್ಟ ಕೈ; ಪಡೆದ ಕೈ ಅಲ್ಲ. ಸಂಸ್ಥಾನದ ಹಿರಿಯ ಅಧಿಕಾರಿಗಳ ನಡುವೆ ಇದ್ದೂ ಅವರು ತಮ್ಮ ಬಡತನವನ್ನು ರಕ್ಷಿಸಿಕೊಂಡು ಬಂದರ. ಆ ಸಂಬಂಧವಾಗಿ ಒಂದೆರಡು ನಿದರ್ಶನ ಹೇಳಿದರೆ ಸಾಕು.

ಹಿಂದೆ ದಸರಾ ಉತ್ಸವದ ಸಂದರ್ಭದಲ್ಲಿ ಮೈಸೂರು ಸರ್ಕಾರ ಪತ್ರಕರ್ತರನ್ನೂ, ಸುದ್ಧಿಗಾರರನ್ನೂ ವಿಶೇಷವಾಗಿ ಆಹ್ವಾನಿಸುತ್ತಿತ್ತು. ಒಮ್ಮೆ ಡಿ.ವಿ.ಜಿ. ಆಹ್ವಾನಿತರಾಗಿ ದಸರಾ ಉತ್ಸವಕ್ಕೆ ಹೋದರು. ಬೆಂಗಳೂರಿಗೆ ಬಂದ ಕೂಡಲೇ ಅವರಿಗೆ ದಿವಾನರ ಆಫೀಸಿನಿಂದ ಸ್ವಲ್ಪ ಹಣ (ಸುಮಾರು ೨೫೦ ರೂಪಾಯಿ) ಕಳಿಸಿಕೊಡಲಾಯಿತು. ಡಿ.ವಿ.ಜಿ.ಗೆ ಅದನ್ನು ಕಂಡು ಆಶ್ವರ್ಯವಾಯಿತು. ಹಣ ಕಳಿಸಿರುವ ಕಾರಣ ಏನಿರಬಹುದು? ತಾವೇ ದಿವಾನರಾಗಿದ್ದ ವಿಶ್ವೇಶ್ವರಯ್ಯನವರ ಬಳಿಗೆ ಹೋದರು.

ಡಿ.ವಿ.ಜಿ.: ಹಿಂದೆ ಬಹುಶಃ ಪತ್ರಿಕೆಗಳವರನ್ನು ಮೆಚ್ಚಿಸಲು ಹೀಗೆ ಹಣ ಕೊಡುವ ಏರ್ಪಾಡು ಮಾಡಿರಬೇಕು. ಇದರಿಂದ ಪತ್ರಿಕೆಗಳು ಸರ್ಕಾರದ ಕೆಲಸಗಳನ್ನು ಪ್ರಶಂಸಿಸಲಿ ಎಂಬ ಉದ್ದೇಶವಿರಬಹುದು. ನನಗಂತೂ ಈ ಹಣ ಬೇಡ.

ವಿಶ್ವೇಶ್ವರಯ್ಯ: ನೀವೂ ದಸರಾ ಉತ್ಸವ ನೋಡಿ ಆ ಬಗ್ಗೆ ಬರೆಯಲು ಮೈಸೂರಿಗೆ ಹೋಗಿ  ಬರುತ್ತೀರಿ ಅಲ್ಲವೇ?

ಡಿ.ವಿ.ಜಿ.: ಹೌದು.

ವಿಶ್ವೇಶ್ವರಯ್ಯ: ಆ ಸಂಬಂಧವಾಗಿ ನಿಮಗೆ ಹಣ ಖರ್ಚಾಗುತ್ತದೆ. ಇದು ಸರ್ಕಾರದ ಉತ್ಸವವಾದ್ದರಿಂದ ಆ ಖರ್ಚನ್ನು ಸರ್ಕಾರ ಕೊಡುತ್ತದೆ. ಇದರಲ್ಲಿ ತಪ್ಪೇನು? ತೆಗೆದುಕೊಳ್ಳಬಹುದಲ್ಲ.

ಡಿ.ವಿ.ಜಿ.: ನನಗೆ ಇದು ಸರಿಯೆಂದು ಕಾಣುವುದಿಲ್ಲ. ಪತ್ರಿಕೆಯ ಕೆಲಸಕ್ಕಾಗಿ ಒಬ್ಬ ಪತ್ರಕರ್ತ ಬೇರೆ ಊರಿಗೆ ಹೋದರೆ ಆ ಸಂಬಂಧದ ಖರ್ಚನ್ನು ಪತ್ರಿಕೆಯ ಕಚೇರಿ ಕೊಡುತ್ತದೆ. ಅಥವಾ ಅದನ್ನು ಅವನು ತಾನೇ ಹಾಕಿಕೊಳ್ಳಬೇಕು. ಸರ್ಕಾರವನ್ನು ಇದಕ್ಕೆ ಆಶ್ರಯಿಸಬಾರದು.

ವಿಶ್ವೇಶ್ವರಯ್ಯ: ನಿಮಗೆ ಕೊಟ್ಟಿರುವುದು ಏನಿದ್ದರೂ ತೀರ ಸ್ವಲ್ಪ ಹಣ. ಇಂಗ್ಲಿಷ್ ಪತ್ರಿಕೆಗಳವರಿಗೆ ಸರ್ಕಾರ ಸಾವಿರ, ಎರಡು ಸಾವಿರ ಕೊಡುತ್ತದೆ. ಅವರೆಲ್ಲ ಸುಮ್ಮನೆ ತೆಗೆದುಕೊಂಡಿದ್ದಾರಲ್ಲ.

ಡಿ.ವಿ.ಜಿ.: ಬೇರೆಯವರ ವಿಷಯ ನನಗೆ ಏಕೆ? ನನಗೆ ಸರಿ ಅಂತ ತೋಚಿದ್ದನ್ನು ಮಾಡಬೇಕಾದ್ದು ನನ್ನ ಧರ್ಮ. ಈ ಹಣ ನನಗೆ ಬೇಡ.

ಡಿ.ವಿ.ಜಿ.ಯವರ ನಿಸ್ಪೃಹತೆ ಕಂಡು ವಿಶ್ವೇಶ್ವರಯ್ಯನವರಿಗೂ ತುಂಬ ಮೆಚ್ಚಿಕೆ ಉಂಟಾಗಿರಬೇಕು. ಅವರು ತಮ್ಮ ಕಾರ್ಯದರ್ಶಿಯನ್ನು ಕರೆದು, “ಈತನ ರೀತಿ ಬೇರೆ. ಇವರನ್ನು ನಾವು ನಿರ್ಬಂಧಪಡಿಸುವಂತೆ ಇಲ್ಲ. ಆ ಹಣ ಹಿಂದಕ್ಕೆ ತೆಗೆದುಕೊಳ್ಳಿ” ಎಂದರಂತೆ.

ಚೆಕ್ಗಳು ಹಾಗೆಯೇ ಉಳಿದವು

ವಿಶ್ವೇಶ್ವರಯ್ಯನವರು ತಾವು ಬೇರೆಯವರಿಂದ ಪಡೆದ ಸಹಾಯಕ್ಕೆ ಪ್ರತಿಯಾಗಿ ಅವರಿಗೆ ಯೋಗ್ಯ ಸಂಭಾವನೆ ಕೊಡುವ ಪದ್ಧತಿ ಇಟ್ಟುಕೊಂಡಿದ್ದರು. ಒಮ್ಮೆ ಡಿ.ವಿ.ಜಿ.ಯವರಿಗೆ ಅವರು ಮಾಡಿಕೊಟ್ಟ ಯಾವುದೋ ಕೆಲಸಕ್ಕಾಗಿ ಹೀಗೆ ಹಣ ಕೊಡಲು ಬಂದರು.

ಡಿ.ವಿ.ಜಿ.: ಛೆ….ಛೆ! ನನಗೆ ಯಾಕೆ ಸಂಭಾವನೆ?

ವಿಶ್ವೇಶ್ವರಯ್ಯ: ನೀವು ಮಾಡಿಕೊಟ್ಟ ಕೆಲಸಕ್ಕಾಗಿ.

ಡಿ.ವಿ.ಜಿ.: ನಾನು ಅದಕ್ಕೆಲ್ಲ ಹಣ ತೆಗೆದು ಕೊಳ್ಳಲಾರೆ.

ವಿಶ್ವೇಶ್ವರಯ್ಯ: ಇಲ್ಲಿ ನೋಡಿ, ಈ ಕೆಲಸಕ್ಕಾಗಿ ನೀವು ಶ್ರಮ ಪಟ್ಟಿದ್ದೀರಿ. ನಿಮ್ಮ ಬೆಲೆಯುಳ್ಳ ಸಮಯ ವೆಚ್ಚ ಮಾಡಿದ್ದೀರಿ. ನಿಮ್ಮ ಸಹಾಯದಿಂದ ನಾನು ಈ ಕೆಲಸ ಪೂರೈಸಲು ಸಾಧ್ಯವಾಯಿತು. ಬೇರೆಯವರಿಗೆ ಮಾಡಿ ಕೊಟ್ಟ ಕೆಲಸಕ್ಕೆ ನಾನು ಸಂಭಾವನೆ ಪಡೆಯುತ್ತೇನೆ. ಹಾಗೆಯೇ ನಿಮ್ಮ ಕೆಲಸಕ್ಕೆ ನಾನು ಸಂಭಾವನೆ ಸಲ್ಲಿಸಬೇಕು.

ಡಿ.ವಿ.ಜಿ.: ಎಲ್ಲಾದರೂ ಉಂಟೆ! ನಿಮ್ಮಿಂದ ಒಂದು ಕೆಲಸ ಮಾಡೆಂದು ಹೇಳಿಸಿಕೊಳ್ಳುವುದೇ ನನಗೆ ಒಂದು ಪುಣ್ಯಾವಕಾಶ. ನಿಮ್ಮಂಥ ದೊಡ್ಡವರಿಗೆ ನಾನು ನನ್ನ ಕೈಲಾದ ಕೆಲಸ ಮಾಡಿಕೊಟ್ಟೆ ಎನ್ನುವುದೇ ಒಂದು ದೊಡ್ಡ ಹೆಮ್ಮೆ. ನಾನು ಇದಕ್ಕೆಲ್ಲ ಹಣ ತೆಗೆದಕೊಳ್ಳಲಾರೆ.

ವಿಶ್ವೇಶ್ವರಯ್ಯ :ನಿಮ್ಮ ಮಾತನ್ನು ಒಪ್ಪುವುದು ಸಾಧ್ಯವೇ ಇಲ್ಲ. ಇದನ್ನು ತೆಗೆದುಕೊಳ್ಳದಿದ್ದರೆ ನಾನು ಇನ್ನು ಮುಂದೆ ನಿಮಗೆ ಕೆಲಸವನ್ನೇ ಹೇಳುವುದಿಲ್ಲ.

ಡಿ.ವಿ.ಜಿ.: ಅದು ನ್ಯಾಯವೋ?

ವಿಶ್ವೇಶ್ವರಯ್ಯ: ನೀವು ಮಾತ್ರ ಮೊಂಡಾಟ ಮಾಡಬಹುದೋ? ಎಷ್ಟೆಷ್ಟು ಜನ ಅನುಕೂಲಸ್ಥರು ಸಹ ತೆಗೆದು ಕೊಂಡಿದ್ದಾರೆ. ನೀವು ಏಕೆ ತೆಗೆದುಕೊಳ್ಳಬಾರದು?

ಡಿ.ವಿ.ಜಿ.: ಸರಿ ಬಿಡಿ. ಹಾಗೆಯೇ ಮಾಡುತ್ತೇನೆ.

ಸಂಭಾವನೆ ಒಪ್ಪಿಕೊಳ್ಳದಿದ್ದರೆ ಮುಂದೆ ತಮಗೆ ಕೆಲಸ ಹೇಳುವುದಿಲ್ಲ ಎಂಬ ಕಾರಣಕ್ಕಾಗಿ ಡಿ.ವಿ.ಜಿ. ವಿಶ್ವೇಶ್ವರಯ್ಯನವರಿಂದ ಚೆಕ್ ತೆಗೆದುಕೊಳ್ಳುತಿದ್ದರು. ಆದರೆ ಆ ಚೆಕ್ಕುಗಳನ್ನು ಬ್ಯಾಂಕಿಗೆ ಕಳಿಸುತ್ತಿರಲಿಲ್ಲ.

ಪದವಿಪ್ರತಿಷ್ಠೆಗಳು ಬೇಡ

ಒಮ್ಮೆ ಪಂಜಾಬಿನ “ಹೆರಾಲ್ಡ್‌ ಟ್ರಿಬ್ಯೂನ್” ಎಂಬ ಪತ್ರಿಕೆಗೆ ಒಬ್ಬ ಸಮರ್ಥ ಸಂಪಾದಕರು ಬೇಕಾಯಿತು. ಆ ಪತ್ರಿಕೆಯ ವ್ಯವಸ್ಥಾಪಕರು ಸಂಪಾದಕರ ಸ್ಥಾನಕ್ಕೆ ತುಂಬ ಸಮರ್ಥರೂ ದಕ್ಷರೂ ಆದ ವ್ಯಕ್ತಿಯ ಹೆಸರನ್ನು ಸೂಚಿಸುವಂತೆ ದಿವಾನ್ ವಿಶ್ವೇಶ್ವರಯ್ಯನವರನ್ನು ಕೇಳಿದ್ದರು. ವಿಶ್ವೇಶ್ವರಯ್ಯನವರ ಮನಸ್ಸಿಗೆ ತಕ್ಷಣ ಹೊಳೆದ ವ್ಯಕ್ತಿ ಎಂದರೆ ಡಿ.ವಿ.ಜಿ.ಅವರು. ವ್ಯವಸ್ಥಾಪಕರಿಗೆ ಡಿ.ವಿ.ಜಿ.ಯವರ ಹೆಸರನ್ನು ಸೂಚಿಸಿದರು. ಆ ಹೊತ್ತಿಗೆ ಡಿ.ವಿ.ಜಿ.ಎಷ್ಟು ಶ್ರೇಷ್ಠ ಪತ್ರಕರ್ತರೆನ್ನುವುದೂ ಎಂಥ ಮೇಧಾವಿಗಳು ಮತ್ತು ನಿಸ್ಪೃಹರು ಎನ್ನುವುದೂ ಎಲ್ಲರಿಗೂ ಸಾಕಷ್ಟು ತಿಳಿದಿತ್ತು. ಆ ಪತ್ರಿಕೆ ಸಹ ದೇಶದಲ್ಲೆಲ್ಲ ಹೆಸರಾದ ಪತ್ರಿಕೆ. ಅದರ ಸಂಪಾದಕರಾದರೆ ಬೇಕಾದಷ್ಟು ಹಣ, ಪ್ರಸಿದ್ಧಿ, ಭಾರಿ ಅಧಿಕಾರಿಗಳ ಸ್ನೇಹ-ಎಲ್ಲವೂ ಸಿಗುವುದು ಸಾಧ್ಯವಿತ್ತು. ಎಂಥ ದೊಡ್ಡವರೂ ಪಡೆಯಲು ಹಂಬಲಿಸುವ ಕೆಲಸ ಅದು. ಆದರೆ ಡಿ.ವಿ.ಜಿ.ಮಾತ್ರ ಸಂಪಾದಕರಾಗಲು ನಿರಾಕರಿಸಿಬಿಟ್ಟರು. “ನಾನು ಹೇಗೋ ಜೀವನ ನಡೆಸಿಕೊಳ್ಳುತ್ತೇನೆ. ಬೀದಿಯಲ್ಲಿ ಬಿದ್ದು ಒದ್ದಾಡಿ ತೊಂಡು ತೊಂಡಾಗಿ ಬೆಳೆದ ಈ ಜೀವಕ್ಕೆ ಅಂಥ ದೊಡ್ಡ ಪದವಿ, ಪ್ರತಿಷ್ಠೆಗಳೆಲ್ಲ ಒಗ್ಗುವುದಿಲ್ಲ” ಅಂದು ಬಿಟ್ಟರಂತೆ!

ಇದು ಡಿ.ವಿ.ಜಿ. ಸ್ವಾತಂತ್ಯ್ರವನ್ನು ಎಷ್ಟು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಸಾಕ್ಷಿ. ಯಾರ ದಾಕ್ಷಿಣ್ಯಕ್ಕೂ ಅವರು ಒಳಗಾಗಲಿಲ್ಲ. ಹೀಗೆ ಸ್ವತಂತ್ರವಾಗಿ ಇದ್ದುದರಿಂದಲೇ ಎಂಥ ಅಧಿಕಾರಿಗಳಿರಲಿ, ಕಡೆಗೆ ದಿವಾನರೇ ಆಗಿರಲಿ, ಅವರ ಆಡಳಿತದ ಗುಣದೋಷಗಳನ್ನು ವಿಮರ್ಶಿಸಿ ಪತ್ರಿಕೆಯಲ್ಲಿ ಬರೆಯುವುದು ಅವರಿಗೆ ಸಾಧ್ಯವಾಯಿತು.

ಇದೇ ಶ್ರೇಷ್ಠ

ಒಂದು ಸಲ ಅವರ ಹತ್ತಿರದ ನೆಂಟನೊಬ್ಬರು ತಮ್ಮ ಮೇಲಿನ ಅಧಿಕಾರಿಗೆ ಹೇಳಿ ತಮಗೆ ಬಡ್ತಿ ಕೊಡಿಸಬೇಕು ಎಂದು ಡಿ.ವಿ.ಜಿ.ಯವರನ್ನು ಕೇಳಿಕೊಂಡರು. ಡಿ.ವಿ.ಜಿ.ಗೆ ಇದು ಸಾಧುವಾಗಿ ಕಾಣಲಿಲ್ಲ. ಶಿಫಾರಸ್ಸು ಮಾಡಿ ಒಬ್ಬರನ್ನು ಮೇಲೇರಿಸಿದರೆ ಆ ಜಾಗಕ್ಕೆ ನ್ಯಾಯವಾಗಿ ಬರಬೇಕಾಗಿದ್ದ ಬೇರೆಯವರಿಗೆ ಅನ್ಯಾಯವಾಗುತ್ತದೆ ಅಲ್ಲದೆ ಇಂಥ ಲೌಕಿಕ ವಿಯಗಳಿಗಾಗಿ ಮತ್ತೊಬ್ಬರನ್ನು ಕೇಳುವುದು ಸಹ ಆತ್ಮಗೌರವದ ನಡವಳಿಕೆಯಲ್ಲ ಎಂದು ಅವರ ಅಭಿಪ್ರಾಯ. ಆದ್ದರಿಂದ ಡಿ.ವಿ.ಜಿ.ನೆಂಟರನ್ನು ಶಿಫಾರಸ್ಸು ಮಾಡಲಿಲ್ಲ. ತಮಗೆ ಸಹಾಯ ಮಾಡಲಿಲ್ಲವೆಂದು ಆ ಬಂಧುಗಳು ಭೇಸರಪಟ್ಟುಕೊಂಡದ್ದು ಗುಂಡಪ್ಪನವರಿಗೆ ತಿಳಿಯಿತು. ಆಗ ಅವರು ತಮ್ಮ ಸ್ವಂತ ನಡವಳಿಕೆಗೆ ಆದರ್ಶವಾಗಿ ಇಟ್ಟುಕೊಂಡಿದ್ದ ಒಂದು ಶ್ಲೋಕವನ್ನು ಆ ಬಂಧುವಿಗೆ ಬರೆದು ಕಳಿಸಿದರು.

“ಅಕೃತ್ವಾ ಪರಸಂತಾಪಂ
ಅಗತ್ವಾ ಖಲ ನಮ್ರತಾಮ್
ಅನುತ್ಸೃಜ್ಯ ಸತಾಂ ವರ್ತ್ಮ
ಯತ್‌ ಸ್ವಲ್ಪಮಪಿ ತದ್‌ಬಹು”

ಇತರರಿಗೆ ದುಃಖ ಉಂಟುಮಾಡದೆ, ಪ್ರಬಲರಾದ ದುಷ್ಟ ಜನಗಳಿಗೆ ತಲೆತಗ್ಗಿಸಿದೆ, ಸಜ್ಜನರಿಗೆ ಸಹಜವಾದ ನಡತೆಯನ್ನು ಬಿಡದೆ ಏನನ್ನು ಸಂಪಾದಿಸುತ್ತೇವೋ ಅದೇ ಶ್ರೇಷ್ಠ. ಅದು ಎಷ್ಟೇ ಸ್ವಲ್ಪವಾಗಿದ್ದರೂ ಗೌರವಕ್ಕೆ ಅರ್ಹ.

ಆರ್ಥಿಕ ಸ್ಥಿತಿ

ಹಣ, ಅಧಿಕಾರ, ಪ್ರಭಾವ, ಇವುಗಳಿಗೆ ಹೀಗೆ ದೂರದಿಂದಲೇ ಕೈಮುಗಿದ ಡಿ.ವಿ.ಜಿ. ಶ್ರೀಮಂತರೇನೂ ಆಗಿರಲಿಲ್ಲ. ಹಾಗೆ ನೋಡಿದರೆ ಅವರು ಆರ್ಥಿಕವಾಗಿ ತುಂಬ ಕಷ್ಟದಲ್ಲಿಯೇ ಇದ್ದರು. ಆದರೆ ಅವರು ತಮ್ಮ ಕಷ್ಟವನ್ನು ತೀರ ಆಪ್ತರ ಹತ್ತಿರ ಸಹ ಎಂದೂ ಹೇಳಿ ಕೊಂಡವರಲ್ಲ. ತಮ್ಮ ತೊಂದರೆಗಳನ್ನು ಅನ್ಯರ ಕಿವಿಗೆ ಹಾಕದೆ ಸದಾ ನಗುನಗುತ್ತ ಇರುತ್ತಿದ್ದರು. ಅವರನ್ನು ನೋಡಿದವರಿಗಾಗಲಿ, ಮಾತನಾಡಿಸಿದವರಿಗಾಗಲಿ, ಸುತ್ತ ಮುತ್ತ ಓಡಾಡುತ್ತಿದ್ದ ಸ್ನೇಹಿತರಿಗಾಗಲಿ ಅವರಿಗೆ ಆರ್ಥಿಕ ಅಡಚಣೆಗಳು ಇತ್ತೆಂದು ತಿಳಿಯುವುದೇ ಸಾಧ್ಯವಿರಲಿಲ್ಲ. ಅವರ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದ ಎಸ್.ಆರ್. ರಾಮಸ್ವಾಮಿಯವರು ಈ ಸಂಬಂಧದಲ್ಲಿ ಬರೆದಿರುವ ಒಂದು ಘಟನೆಯನ್ನು ಇಲ್ಲಿ ಸ್ಮರಿಸಬಹುದು.

ಈ ಜೀವಕ್ಕೆ ದೊಡ್ಡ ಪದವಿ- ಪ್ರತಿಷ್ಠೆಗಳು ಒಗ್ಗುವುದಿಲ್ಲ

ಒಮ್ಮೆ ಅವರ ಬಂಧುಗಳೊಬ್ಬರ ಮನೆಯಲ್ಲಿ ಯಾವುದೋ ಹಬ್ಬ. ಕುಟುಂಬಕ್ಕೆಲ್ಲ ಆಹ್ವಾನವಿತ್ತು. ಡಿ.ವಿ.ಜಿ.ಯವರ ಪತ್ನಿ ತಾವು ಹೋಗದೆ ಮಕ್ಕಳನ್ನು ಕಳಿಸಿದರು. ಆರತಿ-ಅಕ್ಷತೆಯ ಹೊತ್ತಾದರೂ ಹೆಂಡತಿ ಮನೆಯಲ್ಲೇ ಇದ್ದುದನ್ನು ಗಮನಿಸಿ ಡಿ.ವಿ.ಜಿ. ಕೇಳಿದರು; “ಅರಿಶಿನ ಕುಂಕುಮಕ್ಕೆ ನೀನು ಹೋಗುವುದಿಲ್ಲವೆ? ಹೊತ್ತಾಯಿತಲ್ಲ?”

ಆಕೆ: ನಾನು ಹೋಗುವುದಿಲ್ಲ.

ಡಿ.ವಿ.ಜಿ.: ಯಾಕೆ?

ಆಕೆ: ಮಕ್ಕಳನ್ನು ಕಳಿಸಿದ್ದೇನೆ.

ಡಿ.ವಿ.ಜಿ.: ಆದರೇನು? ಆ ಜನರೆಲ್ಲ ನಮಗೆ ಬೇಕಾದವರಲ್ಲವೆ? ಎಲ್ಲರನ್ನೂ ಕರೆದಿದ್ದಾರಲ್ಲ? ನೀನೂ ಅವರೆಲ್ಲರ ಜೊತೆ ನಾಲ್ಕು ಘಳಿಗೆ ಸಂತೋಷವಾಗಿ ಇದ್ದು ಬರಬಹುದಲ್ಲ.

ಆಕೆ: ಎಲ್ಲರೂ ಹೋದರೆ ಮನೆಯನ್ನು ನೋಡುವವರಾರು?

ಡಿ.ವಿ.ಜಿ.: ನಾನು ಮನೆಯಲ್ಲಿರುತ್ತೇನೆ. ನೀನು ಹೋಗಿ ಬಾ.

ಆಕೆ: ನಾನು ಹೋಗುವುದಿಲ್ಲ.

ಆಕೆ ಹೋಗದಿರಲು ಕಾರಣವೇನು ಎಂದು ಡಿ.ವಿ.ಜಿ.ಮತ್ತೆ ಮತ್ತೆ ಕೇಳಿದರು. ಆಕೆ ಒಂದಲ್ಲ ಒಂದು ಸಬೂಬು ಹೇಳುತ್ತಲೇ ಬಂದರು. ನಿಜವಾದ ಕಾರಣ ಹೇಳಲೇ ಬೇಕೆಂದು ಗುಂಡಪ್ಪನವರು ಆಗ್ರಹ ಮಾಡಿ ಕೇಳಿದಾಗ ಆಕೆಯ ಮುಖ ಬಾಡಿತು. ಗಂಟಲು ಗದ್ಗದವಾಯಿತು. ಬಹಳ ಕಷ್ಟದಿಂದ ವಾಸ್ತವಸ್ಥಿತಿಯನ್ನು ಹೇಳಿದರು; “ನಾನು ಹೇಳಬಾರದೆಂದು ಮಾಡಿಕೊಂಡಿದ್ದೆ. ನೀವು ನನ್ನ ಬಾಯಿ ಬಿಡಿಸುತ್ತಿದ್ದೀರಿ. ನನ್ನ ಹತ್ತಿರ ಇರುವುದು ಇದೊಂದೇ ಸೀರೆ. ಇದೂ ಒಂದೆರಡು ಕಡೆ ಹರಿದಿದೆ. ನಾನು ಈ ಬಟ್ಟೆಯಲ್ಲಿ ಹೊರಗೆ ಕಾಣಿಸಿಕೊಂಡರೆ ಜನ ನಿಮ್ಮನ್ನು ಕುರಿತು ಆಡಿಕೊಳ್ಳುವುದಿಲ್ಲವೇ? ಬಂಧುಗಳ ಮನೆಗೆ ಹೋಗಿ ಬರುವುದು ಹೇಗೆ ಕರ್ತವ್ಯವೋ ನಿಮ್ಮ ಮರ್ಯಾದೆಗೆ ಊನ ಬರಂದತೆ ನೋಡಿಕೊಳ್ಳುವುದೂ ಹಾಗೆ ನನಗೆ ಕರ್ತವ್ಯವೇ ಅಲ್ಲವೆ? ಹೊಸ ಸೀರೆಯನ್ನು ಕೊಂಡುಕೊಡಿರೆಂದು ನಾನು ಕೇಳುತ್ತಿಲ್ಲ. ಈ ಸಂದರ್ಭದಲ್ಲಿ ಯುಕ್ತವೆಂದು ನನಗೆ ತೋರಿದಂತೆ ನಾನು ನಡೆಯುತ್ತೇನೆ. ಅದಕ್ಕೆ ನೀವು ಅಡ್ಡಿ ಮಾಡಕೂಡದು ಎಂದಷ್ಟೇ ನನ್ನ ಬೇಡಿಕೆ”.

ಮೇಲಿನ ಪ್ರಸಂಗ ಡಿ.ವಿ.ಜಿ.ಯವರ ಆರ್ಥಿಕ ಕಷ್ಟಗಳೂ ಯಾವ ರೀತಿಯವಾಗಿದ್ದವು ಎನ್ನುವುದನ್ನು ತಿಳಿಸುವುದರ ಜೊತೆಗೆ ತಪಸ್ಸಿಗೆ ಸಮನಾದ ಅವರ ಜೀವನದಲ್ಲಿ ಪತ್ನಿಯ ಪಾಲು ಎಷ್ಟು ದೊಡ್ಡದು ಎನ್ನುವುದನ್ನೂ ಸೂಚಿಸುತ್ತದೆ.

ವಿಶ್ವೇಶ್ವರಯ್ಯನವರು ದಿವಾನರಾಗಿ ನಿವೃತ್ತರಾದ ಮೇಲೆ ನಡೆದ ಘಟನೆ ಇದು. ಒಮ್ಮೆ ಇದ್ದಕ್ಕಿದ್ದಂತೆ ಅವರು ಡಿ.ವಿ.ಜಿ.ಯವರ ಮನೆಗೆ ಬಂದರು. ಅವರ ಬರುವಿಕೆ ಅನಿರೀಕ್ಷಿತವಾಗಿತ್ತು. ಡಿ.ವಿ.ಜಿ.ಯವರಿಗೆ ಆಶ್ಚರ್ಯ, ಸಂತೋಷ. ಜೊತೆಗೆ ಅಂಥ ಹಿರಿಯರನ್ನು ತಕ್ಕ ರೀತಿಯಲ್ಲಿ ನಡೆಸಿಕೊಳ್ಳಲು ಬೇಕಾದ ಅನುಕೂಲ ಇಲ್ಲವಲ್ಲ ಎಂದು ಸಂಕೋಚ. ಇದ್ದ ಒಂದು ಮುರುಕಲು ಕುರ್ಚಿಯಲ್ಲೇ ಅವರನ್ನು ಕೂರಿಸಬೇಕಾಯಿತು.

ಇದಾದ ಸ್ವಲ್ಪ ದಿನಗಳ ನಂತರ ಇನ್ನೂ ಒಮ್ಮೆ ವಿಶ್ವೇಶ್ವರಯ್ಯನವರು ಡಿ.ವಿ.ಜಿ.ಯವರಲ್ಲಿಗೆ ಬಂದು ಹೋದರು. ಕೆಲವು ದಿನಗಳ ಅನಂತರ ಡಿ.ವಿ.ಜಿ.ಯವರೊಡನೆ ಮಾತನಾಡುತ್ತ ವಿಶ್ವೇಶ್ವರಯ್ಯನವರು ಹೇಳಿದರು “ನಾನು ಇನ್ನೊಮ್ಮೆ ನಿಮ್ಮ ಮನೆಗೆ ಬರಬೇಕು”.

ಡಿ.ವಿ.ಜಿ.: ತಾವು ಅನ್ಯಥಾ ಭಾವಿಸದಿದ್ದರೆ ಒಂದು ಮಾತು ವಿಜ್ಞಾಪಿಸಿಕೊಳ್ಳುತೇನೆ.

ವಿಶ್ವೇಶ್ವರಯ್ಯ: ಹೇಳಿ, ಹೇಳಿ. ಯಾಕೆ ಇಷ್ಟು ಸಂಕೋಚ?

ಡಿ.ವಿ.ಜಿ.: ತಾವು ನಮ್ಮ ಮನೆ ತನಕ ಬರುವ ಶ್ರಮ ತೆಗೆದುಕೊಳ್ಳುವುದೇಕೆ? ಯಾವಾಗ ಹೇಳಿ ಕಳಿಸಿದರೂ ನಾನೇ ಬಂದು ತಮ್ಮನ್ನು ಕಾಣುತ್ತೇನೆ.

ವಿಶ್ವೇಶ್ವರಯ್ಯ:  (ಹಾಸ್ಯವಾಗಿ) ಏನು ಜನವಪ್ಪಾ ನೀವು ! ಮನೆಗೆ ಬರುತ್ತೇನೆಂದರೆ ಯಾರಾದರೂ ಬೇಡ ಎನ್ನುತ್ತಾರೆಯೇ?

ಡಿ.ವಿ.ಜಿ.: ಕೊಂಚ ವಿಚಾರ ಮಾಡೋಣವಾಗಬೇಕು. ತಾವು ನಮ್ಮ ಮನೆಗೆ ಬರುವುದು ನನ್ನ ಒಂದು ಪುಣ್ಯ ಎಂದೇ  ನನ್ನ ಎಣಿಕೆ. ಏಕೆಂದರೆ ತಾವು ಪರಿಶುದ್ಧರು. ತಾವು ಕಾಲಿಟ್ಟ ಸ್ಥಳ ಪವಿತ್ರವಾಗುತ್ತದೆ; ಅಲ್ಲಿ ಭಾಗ್ಯ ನೆಲೆಸುತ್ತದೆ. ಆದರೆ ತಾವು ಬಂದಾಗ ಆದರಿಸಲು ನನ್ನ ಮನೆಯಲ್ಲಿ ತಕ್ಕ ವ್ಯವಸ್ಥೆ ಇಲ್ಲ. ಮುರುಕಲು ಕುರ್ಚಿ, ಮೇಲು ಇವನ್ನೆಲ್ಲ ಕಂಡು ತಮಗೆ ನೋವಾಗುತ್ತದೆ.

ವಿಶ್ವೇಶ್ವರಯ್ಯ: ಅದರಲ್ಲಿ ನಿಮ್ಮ ತಪ್ಪೇನು?

ಡಿ.ವಿ.ಜಿ.: ಒಂದು ರೀತಿ ನನ್ನ ತಪ್ಪೇ ಅಲ್ಲವೇ? ನನ್ನ ಕಷ್ಟ ದೂರವಾಗಲೆಂದು ತಾವು ಒಳ್ಳೆಯ ಸಂಬಳ ಬರುವ ನಾಲ್ಕಾರು ಕೆಲಸಗಳಲ್ಲಿ ನನ್ನನ್ನು ನಿಲ್ಲಿಸಲು ಯೋಚಿಸಿದಿರಿ. ನಾನೋ ಅವನ್ನೆಲ್ಲ ಒಪ್ಪಿಕೊಳ್ಳದೆ ಹೋದೆ. ಅದೆಲ್ಲ ನೆನಪಿಗೆ ಬಂದು ತಾವು ವ್ಯಥೆಪಡುವುದಾಗುತ್ತದೆ. ಆದ್ದರಿಂದ ಹೀಗೆ ಹೇಳಿದೆ. ಅನ್ಯಥಾ ಭಾವಿಸಬಾರದು.

ಹೀಗೆ ಕಷ್ಟದಲ್ಲೇ ಉದ್ದಕ್ಕೂ ಬಾಳಿದರೂ ಡಿ.ವಿ.ಜಿ. ಎಂದೂ ಹಣವನ್ನು ದೊಡ್ಡದನ್ನಾಗಿ ಎಣಿಸಲಿಲ್ಲ. ಮುಂದೆ ಕರ್ನಾಟಕದ ಜನತೆ ಡಿ.ವಿ.ಜಿ. ನಾಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ಸನ್ಮಾನ ಮಾಡಿ ಒಂದು ಲಕ್ಷ ರೂಪಾಯಿಗಳ ಗೌರವನಿಧಿಯನ್ನು ಅವರಿಗೆ ಅರ್ಪಿಸಿತು. ಆದರೆ ಅದನ್ನಾಗಲೀ ಕೇಂದ್ರ ಸಾಹಿತ್ಯ ಅಕಾಡೆಮಿ ಅವರಿಗಿತ್ತ ಐದು ಸಹಸ್ರ ರೂಪಾಯಿಗಳ ಬಹುಮಾನದ ಹಣವನ್ನಾಗಲೀ ಅವರ ಕೈಯಲ್ಲಿ ಕೂಡ ಮುಟ್ಟಲಿಲ್ಲ. ಬಂದ ಗಳಿಗೆಯಲ್ಲೇ ಅವನ್ನೆಲ್ಲ ಸಾರ್ವಜನಿಕ ಕಾರ್ಯಗಳಿಗಾಗಿ ಅಲ್ಲೇ ದಾನ ಮಾಡಿಬಿಟ್ಟರು! ದಾನಿಗಳ ಬಡತನಕ್ಕಿಂತ ಅಮೂಲ್ಯವಾದದ್ದು ಯಾವುದಿದೆ ಜಗತ್ತಿನಲ್ಲಿ?

ಸಾಹಿತ್ಯ ಸಮ್ಮೇಳನಾಧ್ಯಕ್ಷರುಪತ್ರಕರ್ತರ ಸಮ್ಮೇಳನಾಧ್ಯಕ್ಷರು

೧೯೩೨ರ ಹೊತ್ತಿಗೆ ಡಿ.ವಿ.ಜಿ.ಸಾಹಿತ್ಯ ಕ್ಷೇತ್ರದಲ್ಲಿಯೂ ವಿಶೇಷವಾದ ಕೆಲಸವನ್ನು ಮಾಡಿದ್ದರು. ಅವರು ಆಗಲೇ “ದಿವಾನ್ ರಂಗಾಚಾರ್ಲು”, “ಗೋಪಾಲ ಕೃಷ್ಣ ಗೋಖಲೆ”, “ಉಮರನ ಒಸಗೆ”, “ವಸಂತ ಕುಸುಮಾಂಜಲಿ”, “ನಿವೇದನ” ಮೊದಲಾದ ಕೃತಿಗಳನ್ನು ರಚಿಸಿ ಹಿರಿಯ ಬರಹಗಾರರೆಂದರೆ ಖ್ಯಾತರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲಿ ಸಹ ಅವರು ಶ್ರಮಿಸಿದ್ದರು. ಅದನ್ನೆಲ್ಲ ನೆನೆದು ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಆ ವರ್ಷದ ಸಾಹಿತ್ಯ ಸಮ್ಮೇಳಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಆ ಸಮ್ಮೇಳನ ಮಡಿಕೇರಿಯಲ್ಲಿ ನಡೆಯಿತು.

ಡಿ.ವಿ.ಜಿ.ಯವರು ಈ ಹಿಂದೆ ಹೇಳಿದ ಪತ್ರಿಕೆಗಳಲ್ಲಿ ದುಡಿದದ್ದೇ ಅಲ್ಲದೆ “ಇಂಡಿಯನ್ ರೆವ್ಯೂ ಆಫ್ ರೆವ್ಯೂಸ್‌” ಎಂಬ ಪತ್ರಿಕೆಯನ್ನು ಹೊರಡಿಸಿದರು. ಸ್ವಲ್ಪ ಕಾಲದ ನಂತರ “ಕರ್ನಾಟಕ ಜನಜೀವನ ಮತ್ತು ಅರ್ಥಸಾಧಕ ಪತ್ರಿಕೆ”ಯನ್ನು ಆರಂಭಿಸಿದರು. ಪತ್ರಿಕಾ ಕ್ಷೇತ್ರದಲ್ಲಿ ಅವರು  ಸಾಧಿಸಿದ ಮಹತ್ ಕಾರ್ಯಗಳ ಬಗ್ಗೆ ನಾಡಿಗೆ ಅಪಾರ ಗೌರವವಿತ್ತು. ಆದ್ದರಿಂದ ೧೯೨೮ ರಲ್ಲಿ ಬಾಗಲಕೋಟೆಯಲ್ಲಿ ನಡೆದ ಪತ್ರಕರ್ತರ ಮೊತ್ತ ಮೊದಲ ಸಮ್ಮೇಳನಕ್ಕೆ ಡಿ.ವಿ.ಜಿ.ಯವರನ್ನು ಅಧ್ಯಕ್ಷರನ್ನಾಗಿ ಮಾಡಿ ಗೌರವಿಸಲಾಯಿತು. ಅಲ್ಲಿ ಅವರು ಮಾಡಿದ ವಿಚಾರಪೂರ್ಣವಾದ ಭಾಷಣ ಮುಂದೆ “ವೃತ್ತಪತ್ರಿಕೆ” ಎಂಬ ಪುಸ್ತಕರೂಪದಲ್ಲಿ ಪ್ರಕಟವಾಗಿದೆ.

ಡಿ.ವಿ.ಜಿ. ನಾಲ್ಕು ವರ್ಷಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು. ಈಗಲೂ ಪರಿಷತ್ತು ನಡೆಸುತ್ತಿರುವ ಗಮಕ ಕಲಾ ತರಗತಿಗಳು, ವಸಂತ ಸಾಹಿತ್ಯೋತ್ಸವ, ಕನ್ನಡ ಗ್ರಂಥಗಳ ‌ರದರ್ಶನ- ಇವನ್ನೆಲ್ಲ ಆರಂಭಿಸಿದವರು ಅವರೇ. ಕನ್ನಡ ಶಿಕ್ಷಕರ ಒಂದು ತರಬೇತಿ ಶಿಬಿರವನ್ನೂ ಅವರು ನಡೆಸಿದರು.

ಡಿ.ವಿ.ಜಿ. ಕನ್ನಡದಲ್ಲಿ ಬರೆದ ಕೃತಿಗಳ ಸಂಖ್ಯೆ ಸುಮಾರು ಐವತ್ತಾರು. ಕಾವ್ಯ, ವಿಮರ್ಶೆ, ಜೀವನ ಚರಿತ್ರೆ, ರಾಜ್ಯಶಾಸ್ತ್ರ, ಸ್ಮೃತಿಚಿತ್ರ, ಧರ್ಮಜಿಜ್ಞಾಸೆ, ಅನುವಾದ, ಮಕ್ಕಳ ಸಾಹಿತ್ಯ- ಹೀಗೆ ಹಲವಾರು ದಿಕ್ಕುಗಳಲ್ಲಿ ಅವರ ಬರಹ ಹದಿರಿದೆ. ಇಂಗ್ಲಿಷ್‌ನಲ್ಲಿ ಅವರು ಬರೆದ ಕೃತಿಗಳು ಸುಮಾರು ಮೂವತ್ತು. ಅವುಗಳಲ್ಲಿ ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಬರಹಗಳೇ ಹೆಚ್ಚು.

“ಮಂಕುತಿಮ್ಮನ ಕಗ್ಗ” ಡಿ.ವಿ.ಜಿ.ಯವರ ಕನ್ನಡ ಸಾಹಿತ್ಯಕ್ಕೆ ಕೊಟ್ಟ ಅತ್ಯುತ್ತಮ ಕೃತಿ. ಉತ್ತಮ ಸಾಹಿತಿ ಮತ್ತು ಹಿರಿಯ ವೇದಾಂತಿ ಎರಡೂ ಆದವರು ಮಾತ್ರ ಬರೆಯಬಹುದಾದ ಕೃತಿ. ಅದನ್ನು ಬರೆದು ಡಿ.ವಿ.ಜಿ.”ಆಧುನಿಕ ಸರ್ವಜ್ಞ” ಎಂದು ಕರೆಸಿಕೊಂಡರು. ದೈವ, ಮನುಷ್ಯ, ಪ್ರಕೃತಿ, ಬಾಳ್ವೆ, ಭೋಗ, ಯೋಗ, ಕರ್ಮ, ಸುಖ, ದುಃಖ, ಕ್ಷಮೆ, ತಾಳ್ಮೆ- ಇಂಥ ಹಲವಾರು ಸಂಗತಿ ಕುರಿತ ನೂರಾರು ವಿಚಾರಗಳು ಅದರಲ್ಲಿ ಸುಂದರವಾಗಿ ನಿರೂಪಿತವಾಗಿದೆ.

ಡಿ.ವಿ.ಜಿ.ಅನೇಕ ಉತ್ತಮ ಕವನಗಳನ್ನು ಬರೆದಿದ್ದಾರೆ. ಅವು “ನಿವೇದನೆ” ಮತ್ತು “ವಸಂತ ಕುಸುಮಾಂಜಲಿ” ಎಂಬ ಎರಡು ಪುಸ್ತಕಗಳಾಗಿ ಪ್ರಕಟವಾಗಿದೆ. “ಅಂತಃಪುರ ಗೀತೆ” ಎಂಬ ಪುಸ್ತಕದಲ್ಲಿ ಬೇಲೂರಿನ ಶಿಲಾಬಾಲಿಕೆಯರನ್ನು ವರ್ಣಿಸಿ ಬರೆದ ಹಾಡುಗಳಿವೆ. ಡಿ.ವಿ.ಜಿ.ಆ ಹಾಡುಗಳ ಭಾವಗಳಿಗೆ ತಕ್ಕ ರಾಗಗಳನ್ನು ಹೊಂದಿಸಿ ಅವನ್ನು ಬರೆದಿದ್ದಾರೆ. ರಾಮಾಯಣ, ಭಾಗವತಗಳನ್ನು ಓದುವವರಿಗೆ ನಡುವೆ ಉಂಟಾಗಬಹುದಾದ ಸಂದೇಹಗಳಿಗೆ ಪರಿಹಾರ ರೂಪವಾಗಿ “ಶ್ರೀರಾಮ ಪರೀಕ್ಷಣಂ” ಮತ್ತು ಶ್ರೀ ಕೃಷ್ಣ ಪರೀಕ್ಷಣಂ” ಕೃತಿಗಳು ಅವರಿಂದ ರಚನೆಯಾಗಿವೆ. “ಜೀವನ ಸೌಂದರ್ಯ ಮತ್ತು ಸಾಹಿತ್ಯ” ಹಾಗೂ “ಸಾಹಿತ್ಯ ಶಕ್ತಿ”- ಇವು ಅವರು ಬರೆದ ಸಾಹಿತ್ಯ ಮೀಮಾಂಸೆಯ ಗ್ರಂಥಗಳು.

“ಸಂಸ್ಕೃತಿ” ಒಂದು ಚಿಕ್ಕ ಗದ್ಯಕೃತಿ. ಸಂಸ್ಕೃತಿ ಎಂದರೆ ಏನು? ಅದನ್ನು ಬಲ್ಲವನು ಹೇಗೆ ನಡೆದುಕೊಳ್ಳುತ್ತಾನೆ? ಸತ್ಯ, ಧರ್ಮ ಮೊದಲಾದ ಮಾತುಗಳ ನಿಜವಾದ ಅರ್ಥ ಏನು?- ಎಂಬುದನ್ನು ತುಂಬ ಸೊಗಸಾಗಿ ಈ ಪುಸ್ತಕದಲ್ಲಿ ಹೇಳಿದ್ದಾರೆ.

ಡಿ.ವಿ.ಜಿ.ಯವರು ಭಗವದ್ಗೀತೆಯನ್ನು ಕುರಿತು ಮಾಡಿದ ಉಪನ್ಯಾಸಗಳನ್ನೆಲ್ಲ ಒಂದು ಪುಸ್ತಕವಾಗಿ ತರಲಾಗಿದೆ. ಅದರ ಹೆಸರು “ಶ್ರೀಮದ್‌ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮಯೋಗ”. ಜೀವನ ಧರ್ಮದ ಒಂದು ರೀತಿಯಾಗಿ ಭಗವದ್ಗೀತೆಯನ್ನು ಅರ್ಥ ಮಾಡುವ ದೃಷ್ಟಿ ಅದರಲ್ಲಿದೆ. ಆ ಮಹಾಗ್ರಂಥಕ್ಕೆ “ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕೊಟ್ಟು ಐದು ಸಹಸ್ರ ರೂಪಾಯಿಗಳ ಬಹುಮಾನ” ಸಲ್ಲಿಸಿತು.

“ಜ್ಞಾಪನ ಚಿತ್ರಶಾಲೆ” ಡಿ.ವಿ.ಜಿ.ನಮ್ಮ ನಾಡಿಗೆ ಕೊಟ್ಟ ಒಂದು ಅಪೂರ್ವ ಕೊಡುಗೆ. ಇವು ಒಟ್ಟು ಎಂಟು ಸಂಪುಟಗಳಾಗಿವೆ. ತಮ್ಮ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಆಗಿ ಹೋದ, ತಾವು ಕಂಡು ಕೇಳಿದ ಅನೇಕ ವ್ಯಕ್ತಿಗಳನ್ನು, ಸಂಗತಿಗಳನ್ನು ಡಿ.ವಿ.ಜಿ. ಇಲ್ಲಿ ತಂದಿದ್ದಾರೆ. ಮೈಸೂರಿನ ಅನೇಕ ದಿವಾನರು, ಕಲೋಪಾಸಕರು, ಸಾಹಿತ್ಯೋಪಾಸಕರು, ಶ್ರೇಷ್ಠ ಸಾರ್ವಜನಿಕರು, ಹೃದಯ ಸಂಪನ್ನರು ಈ ಸಂಪುಟಗಳಲ್ಲಿ ಚಿತ್ರಿತರಾಗಿದ್ದಾರೆ.

ಡಿ.ವಿ.ಜಿ. ಸಾರ್ವಜನಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಕೂಡ ಅಸಾಮಾನ್ಯವಾದದ್ದು. ಮಿರ್ಜಾ ಸರ್ಕಾರದಲ್ಲಿ ಅವರು ಅನೇಕ ದೊಡ್ಡ ಸಮಿತಿಗಳ ಸದಸ್ಯರಾಗಿದ್ದರು. ಮೈಸೂರು ಸಂಸ್ಥಾನದ ಶಾಸನ ಪರಿಷತ್ತಿನ ಸದಸ್ಯರಾಗಿ ಹದಿನಾಲ್ಕು ವರ್ಷಗಳ ಕಾಲ ದುಡಿದರು. ಹದಿನಾರು ವರ್ಷಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿದ್ದರು. ವಿಶ್ವವಿದ್ಯಾನಿಲಯದ ಕೌನ್ಸಿಲಿನಲ್ಲಿ ಆರು ವರ್ಷ ಕೆಲಸ ಮಾಡಿದರು. ಬೆಂಗಳೂರು ಪುರಸಭೆಯ ಸದಸ್ಯರಾಗಿ ಈ ನಗರವನ್ನು ಮುಂದೆ ತರಲು ಶ್ರಮಿಸಿದರು. ಇಂಗ್ಲಿಷ್-ಕನ್ನಡ ನಿಘಂಟಿನ ಸಂಪಾದಕ ಮಂಡಳಿಯ ಸದಸ್ಯರಾಗಿದ್ದರು. ಮಹಾಭಾರತ ಮತ್ತು ರಾಮಾಯಣ ಪ್ರಕಟನ ಸಮಿತಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದರು.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ

ಇವುಗಳಿಗೆಲ್ಲ ಶಿಖರ ಪ್ರಾಯವಾದ ಅವರ ಇನ್ನೊಂದು ಹಿರಿಯ ಸಾಧನೆ ಎಂದರೆ “ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ”ಯ ಸ್ಥಾಪನೆ. ಡಿ.ವಿ.ಜಿ.ಇದನ್ನು ಸ್ಥಾಪಿಸಿದ್ದೇ ಅಲ್ಲದೆ ತಮಗೆ ಪ್ರಾಪ್ತವಾದ ಎಲ್ಲ ಗೌರವನಿಧಿ ಬಹುಮಾನಗಳ ಧನವನ್ನೂ ಈ ಸಾರ್ವಜನಿಕ ಸಂಸ್ಥೆಗೆ ಧಾರೆಯೆರೆದರು. ಈ ಸಂಸ್ಥೆ ಇಂದಿಗೂ ಸಾಹಿತ್ಯದ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಸತತವಾಗಿ ನಡೆಸುತ್ತಿದೆ. “ಪಬ್ಲಿಕ್ ಅಫೇರ್ಸ್‌” ಎಂಬ ಇಂಗ್ಲಿಷ್ ಮಾಸಪತ್ರಿಕೆಯೂ ಈ ಸಂಸ್ಥೆಯಿಂದ ಹೊರಬರುತ್ತಿದೆ.

ಜೀವನವೇ ಮಹಾ ಕೃತಿ

ಡಿ.ವಿ.ಜಿ.ಯವರ ಉದಾತ್ತವಾದ ಜೀವನವೇ ಅವರು ಬರೆದ ಎಲ್ಲ ಕೃತಿಗಳನ್ನೂ ಮೀರಿಸುವ ಒಂದು ಮಹಾ ಕೃತಿ. ಕೇವಲ ಒಬ್ಬ ಪ್ರಜೆ ಮಾತ್ರ ಆಗಿದ್ದರೂ ಅವರು ತಮ್ಮ ನಾಡಿನ ಎಲ್ಲ ಹಿರಿಯ ಅಧಿಕಾರಿಗಳ ಗೌರವಕ್ಕೆ ಅರ್ಹರಾಗಿದ್ದರು. ಹಣ, ಅಧಿಕಾರ, ಸನ್ಮಾನ ಯಾವುದಕ್ಕೂ ಅವರು ಗೋಗರೆಯಲಿಲ್ಲ. ಆದರೆ ಅವೆಲ್ಲ ತಾವಾಗಿ ಅವರ ಬಳಿ ಬಂದವು. ಈ ಒಂದೆರಡು ಚಿಕ್ಕ ಸಂಗತಿಗಳಿಂದ ಅದು ಇನ್ನಷ್ಟು ಸ್ಪಷ್ಟವಾಗಬಹುದು.

ಸರ್ ಮಿರ್ಜಾ ಇಸ್ಮಾಯಿಲ್ ವಿಶ್ವೇಶ್ವರಯ್ಯನವರ ಅನಂತರ ಬಂದ ಸಮರ್ಥ ದಿವಾನರು. ದಿವಾನರಾಗುವ ಮುಂಚೆ ಅವರು ಮಹಾರಾಜರ ಹುಜೂರ್ ಸೆಕ್ರೆಟರಿ ಯಾಗಿದ್ದರು. ಆಗ ಹೊರಬರುತ್ತಿದ್ದ “ಕರ್ಣಾಟಕ” ಪತ್ರಿಕೆಯನ್ನು ಅವರು ತಪ್ಪದೆ ಓದುತ್ತಿದ್ದರು. ಡಿ.ವಿ.ಜಿ.ಯವರ ಸೊಗಸಾದ ಇಂಗ್ಲಿಷ್ ಶೈಲಿ,ತೂಕವಾದ ಅಭಿಪ್ರಾಯ, ಅವುಗಳನ್ನು ಹೇಳುವುದರಲ್ಲಿ ತೋರುತ್ತಿದ್ದ ನಿರ್ಭೀತಿ-ಎಲ್ಲ ಮಿರ್ಜಾರವರ ಮನಸ್ಸನ್ನು ಸೆಳೆದವು. ಡಿ.ವಿ.ಜಿ.ಯವರ ಪರಿಚಯ ಮಾಡಿಕೊಳ್ಳಬೇಕೆಂಬ ಆಸೆ ಅವರಿಗೆ ಉಂಟಾಯಿತು. ಆಗ ದೀವಾನರಾಗಿದ್ದ ವಿಶ್ವೇಶ್ವರಯ್ಯನವರಲ್ಲಿ ಅವರು ತಮ್ಮ ಅಪೇಕ್ಷೆ ತಿಳಿಸಿದರು. ವಿಶ್ವೇಶ್ವರಯ್ಯನವರು ಡಿ.ವಿ.ಜಿ.ಯವರಿಗೆ ಮಿರ್ಜಾರವರನ್ನು ಕಾಣುವಂತೆ ತಿಳಿಸಿದಾಗ ಡಿ.ವಿ.ಜಿ. ಅದರಲ್ಲಿ ಆಸಕ್ತಿ ತೋರಿಸಲಿಲ್ಲ. “ನಾನೊಬ್ಬ ಪತ್ರಕರ್ತ. ಅಂಥವರ ಬಳಿ ನನಗೇನು ಕೆಲಸ?” ಎಂದು ಬಿಟ್ಟರು.

ಮಿರ್ಜಾರವರು ಅಲ್ಲಿಗೇ ಬಿಡಲಿಲ್ಲ. ತಮ್ಮ ಉಪಾಧ್ಯಾಯರಾಗಿದ್ದ ಬೆಳ್ಳಾವೆ ವೆಂಕಟನಾರಾಯಣಪ್ಪನವರಿಗೆ ಆಪ್ತರೆಂದು ಮಿರ್ಜಾರಿಗೆ ಗೊತ್ತಿತ್ತು. ಅವರ ಮೂಲಕ ಡಿ.ವಿ.ಜಿ.ಅವರ ಪರಿಚಯ ಮಾಡಿಕೊಂಡರು. ಕೆಲವೇ ದಿನಗಳಲ್ಲಿ ಅವರು ಸ್ನೇಹಿತರಾದರು.

ಈ ಸ್ನೇಹ ಸುಮಾರು ನಲವತ್ತೈದು ವರ್ಷಕಾಲ ಮುಂದುವರೆಯಿತು. ಮಿರ್ಜಾ ದಿವಾನರಾಗಿದ್ದ ದಿನಗಳಲ್ಲಿ ಮಧ್ಯೆ ಒಂದೆರಡು ಸಲ ವಿರಸವುಂಟಾದರೂ ಮತ್ತೆ ಅದು ಪರಿಹಾರವಾಗಿ ಆ ಸ್ನೇಹ ಕಡೆವರೆಗೆ ಇತ್ತು. ಡಿ.ವಿ.ಜಿ. ಒಮ್ಮೆ ಕಾಯಿಲೆ ಮಲಗಿದ್ದಾಗ ಪ್ರತಿದಿನ ಬೆಳಗ್ಗೆ ಅವರನ್ನು ನೋಡಲು ಮೊದಲು ಬರುತ್ತಿದ್ದವರು ದಿವಾನ್ ಮಿರ್ಜಾರವರು!

ಈಚೆಗೆ ಸರ್ಕಾರ ಡಿ.ವಿ.ಜಿ.ಯವರಿಗೆ ತಿಂಗಳಿಗೆ ಐನೂರು ರೂಪಾಯಿಗಳ ಗೌರವ ಮಾಸಾಶನ ಕೊಡುವ ತೀರ್ಮಾನ ಮಾಡಿತು. ಆದರೆ ಡಿ.ವಿ.ಜಿ.ಅದನ್ನು ಒಂದೇ ಮಾತಿನಲ್ಲಿ ನಿರಾಕರಿಸಿಬಿಟ್ಟರು. ಹಣ, ಅಧಿಕಾರ, ಪ್ರಭಾವಗಳ ನಡುವೆ ಇದ್ದೂ ಅವುಗಳಿಗೆ ಅಂಟದೆ ಪವಿತ್ರರಾಗಿ ಬಾಳಿದವರು.

ದೇವರ ಅನುಗ್ರಹವಿದ್ದರೆ

ಸುಪ್ರಸಿದ್ಧ ನಾಟಕಕಾರ ಕೈಲಾಸಂ ಡಿ.ವಿ.ಜಿ. ಅವರ‍ನ್ನು “ಗಾಡ್ ವಿಲ್ಲಿಂಗ್” ಎಂದು ಕರೆಯುತ್ತಿದ್ದರು. ಇದನ್ನು ಕೇಳಿ ಪ್ರಸಿದ್ಧ ಸಾಹಿತಿ ಜೆ.ಪಿ. ರಾಜರತ್ನಂ ಕೇಳಿಯೇ ಬಿಟ್ಟರು:

“ಅದೇನು ಸರ್, “ಗಾಡ್ ವಿಲ್ಲಿಂಗ್” ಅಂತೀರಲ್ಲ; ಅದು ಯಾಕೆ?” ಕೈಲಾಸಂ ನಗುತ್ತ ಹೇಳಿದರು: “ಅಲ್ವೋ ಮಗು, ನೀನು ನಿಘಂಟು ನೋಡೋದೇ ಇಲ್ವೇ? ಹೋಗಿ ನೋಡು”.

ರಾಜರತ್ನಂ ಮನೆಗೆ ಬಂದು ಇಂಗ್ಲಿಷ್ ನಿಘಂಟು ತೆರೆದರು. ಡಿ.ವಿ.ಜಿ.ಎಂದರೆ “ಗಾಡ್‌ ವಿಲ್ಲಿಂಗ್” (ದೇವರ ಅನುಗ್ರಹವಿದ್ದರೆ” ಅಂತ ಇತ್ತು. ಡಿ.ವಿ.ಜಿ.ಯವರ ಬದುಕು, ಬರೆಹ, ಸಾರ್ವಜನಿಕ ಚಟುವಟಿಕೆ-ಎಲ್ಲ ಎಷ್ಟು ಪವಿತ್ರವಾದವು, ಧರ್ಮಬದ್ಧವಾದವು ಎನ್ನುವುದನ್ನು ಯೋಚಿಸಿದಾಗ ಕೈಲಾಸಂ ಮಾತು ತುಂಬ ಅರ್ಥವತ್ತಾದದ್ದು ಎನ್ನಿಸುತ್ತದೆ.

ಡಿ.ವಿ.ಜಿ. ೧೯೭೫ರ ಅಕ್ಟೋಬರ್ ೭ ರಂದು ಕಣ್ಮರೆಯಾದರು. ಇದ್ದಷ್ಟು ದಿನ ಅವರು ತಾವಿದ್ದ ಸಮಾಜದ ಸಲುವಾಗಿ ಅಹರ್ನಿಶಿ ದುಡಿದರು. ಕಷ್ಟ ಬಂದಾಗ ಪ್ರವಾಹದ ನಡುವಿನ ಬಂಡೆಯಂತೆ ದೃಢವಾಗಿ ನಿಂತರು. ಯಾರಿಂದಲೂ ಏನೂ ತೆಗೆದುಕೊಳ್ಳದೆ ಎಲ್ಲರಿಗೂ ಅಮೂಲ್ಯವಾದದ್ದನ್ನು ಕೊಟ್ಟು ನಡೆದರು. ಅವರು ಕಣ್ಮರೆಯಾದರೂ ಅವರ ಪವಿತ್ರ ವ್ಯಕ್ತಿತ್ವ ಮನೆಯಂಗಳದ ಮಲ್ಲಿಗೆಯಂತೆ ಎಲ್ಲ ಕನ್ನಡಿಗರ ನೆನಪಿನಲ್ಲಿ ತನ್ನ ಕಂಪು ಚೆಲ್ಲುತ್ತಿದೆ. ಅವರ “ಮಂಕುತಿಮ್ಮನ ಕಗ್ಗ”ದ ಈ ಪದ್ಯಕ್ಕೆ ಅವರೇ ನಿದರ್ಶನವಾಗಿ ಬಾಳಿದರು ಎನ್ನಿಸುತ್ತದೆ.

“ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯಲಿ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ.”