ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು ಹೊಸಯುಕ್ತಿ ಹಳೆತತ್ವ ದೊಡಗೂಡೆ ಧರ್ಮಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆಜಸವು ಜನಜೀವನಕೆ ಮಂಕುತಿಮ್ಮ.ಈ ಕವನದ ಕರ್ತೃ ಡಿ.ವಿ. ಗುಂಡಪ್ಪನವರು ಪತ್ರಿಕೋದ್ಯಮಿ, ಸಾಹಿತಿ ಹಾಗೂ ರಾಜ್ಯ ಶಾಸ್ತ್ರಜ್ಞ ಅವರೊಂದು ಜ್ಞಾನ ನಿದಿ. ಡಿ.ವಿ. ಗುಂಡಪ್ಪನವರು ಜನಿಸಿದ್ದು ೧೮೮೮ ರಲ್ಲಿ. ಇವರು ಡಿ.ವಿ.ಜಿ ಎಂಬ ಸಂಕ್ಷಿಪ್ತ ನಾಮದಿಂದಲೇ ಪ್ರಸಿದ್ದರಾಗಿದ್ದರು. ಇವರು ಜನಿಸಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಸ್ವಪ್ರಯತ್ನದಿಂದ ಸಂಸ್ಕೃತ, ಕನ್ನಡ, ಇಂಗ್ಲಿಷ್‌ಭಾಷೆಗಳಲ್ಲಿ ಅಸಾಧಾರಣ ಪಾಂಡಿತ್ಯ ಪಡೆದರು ತೆಲುಗು ತಮಿಳುಭಾಷಾ ಜ್ಞಾನವನ್ನೂ ಬೆಳೆಸಿಕೊಂಡರು.

ಪತ್ರಿಕಾಕ್ಷೇತ್ರದಿಂದ ತಮ್ಮ ಜೀವನವನ್ನಾರಂಬಿಸಿದ ಇವರು ೧೯೦೭ ರಲ್ಲಿ ಸ್ವತಹ ಭಾರತಿ ಎಂಬ ದಿನ ಪತ್ರಿಕೆಯನ್ನು ಸ್ಥಾಪಿಸಿದರು. ಇವರು ವಿವಿಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ನಂತರ ಕರ್ನಾಟಕ ಎಂಬ ಇಂಗ್ಲಿಷಿನ ವಾರಾರ್ಧ ಪತ್ರಿಕೆಯನ್ನು ಸ್ಥಾಪಿಸಿದರು.

ಕನ್ನಡ ನಾಡಿನ ಪತ್ರಿಕೋದ್ಯಮ ರಂಗದಲ್ಲಿ ಡಿ.ವಿ.ಜಿ ಯವರ ಸಾಧನೆ ಸ್ಥಾನಗಳೆರಡೂ ದೊಡ್ಡವು ೧೯೨೮ ರಲ್ಲಿ ಬಾಗಲ ಕೋಟೆಯಲ್ಲಿ ಸಮಾವೇಶಗೊಂಡ ಕರ್ನಾಟಕ ವೃತ್ತ ಪತ್ರಕರ್ತರ ಪ್ರಥಮ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಡಿ.ವಿ.ಜಿ ಅವರು ಕವನ, ಸಾಹಿತ್ಯವಿಮರ್ಶೆ, ಜೀವನ ಚರಿತ್ರೆ ಮುಂತಾಗಿ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ನಡೆಸಿ ಉತ್ತಮ ಫಲವನ್ನು ಕೈಗೊಂಡಿದ್ದಾರೆ. ವಸಂತಕುಸುಮಾಂಜಲಿ, ನಿವೇದನ, ಅನ್ತಃಪುರಗೀತೆ, ಇವು ಅವರ ಕವಿತಾಶಕ್ತಿಗೆ, ನಿದರ್ಶನಗಳಾಗಿವೆ. ವಿಶ್ವವಿಖ್ಯಾತ ಉಮರ್‌ಖಯಾಮ್‌ನ ರುಬಾಮತ್ ನ ಭಾಷಾಂತರ ಉಮರನ ವಸಗೆ, ಮಂಕುತಿಮ್ಮನ ಕಗ್ಗ, ಇವು ಅವರ ಜೀವನ ದರ್ಶನ ತತ್ವಗಳನ್ನು ಮಾರ್ಮಿಕವಾಗಿ ನಿರೂಪಿಸಿರುವ ಕಾವ್ಯ. ಈ ಸಂಕಲನದ ಒಂದೊಂದು ಪದ್ಯವೂ ಒಂದೊಂದು ಮುಕ್ತಕ.

ಬದುಕು ಜಟಕಾ ಬಂಡಿ, ವಿದಿಯದರ ಸಾಹೇಬ,

ಕುದುರೆ ನೀನ್, ಅವನು ಪೇಳ್ವಂತೆ ಪಯಣಿಗರು

ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು

ಪದಕುಸಿಯೆ ನೆಲವಿಹುದು-ಮಂಕುತಿಮ್ಮ.

ಇಂಥ ಪದ್ಯಗಳು ಡಿ.ವಿ.ಜಿ ಯವರ ಆಳವಾದ ಚಿಂತನೆಗೆ ನಿದರ್ಶನ. ಗುಂಡಪ್ಪನವರು ಚಿರಕಾಲ ಉಳಿಯುವಂಥ ಗ್ರಂಥಗಳನ್ನು ಕನ್ನಡಕ್ಕೆ ನೀಡಿದ್ದಾರೆ. ರಂಗಾಚಾರ್ಯ, ಗೋಪಾಲ ಕೃಷ್ಣ ಗೋಕಲೆ, ವಿದ್ಯಾರಣ್ಯರು ಮತ್ತು ಅವರ ಸಮಕಾಲೀನರು, ಜ್ಞಾಪಕಚಿತ್ರಶಾಲೆ, ಶಾಸ್ತ್ರಗ್ರಂಥಗಳು, ಶ್ರೀಮದ್ಬಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮ ಯೋಗ ಎಂಬ ಉಪನ್ಯಾಸ ಗ್ರಂಥಕ್ಕೆ ೧೯೬೭ ರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಬಿಸಿತು. ದೇವರು ಕಾವ್ಯ ಸ್ವಾರಸ್ಯ, ಇವು ಇವರ ಕೊನೆಯ ಕಾಲದ ಕೃತಿಗಳು.

೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ೧೮ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ಡಿ.ವಿ.ಜಿ ಯವರ ಬಹುಮುಖ ಸೇವೆಗಾಗಿ ಮೈಸೂರು ವಿಶ್ವವಿದ್ಯಾಲಯ ೧೯೬೧ ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಡಿ.ವಿ.ಜಿ ಯವರ ವಿಶ್ವ ಭ್ರಾತೃತ್ವದಲ್ಲಿ ನಂಬುಕೆಯುಳ್ಳವರು ಉತ್ತಮ ಜೀವನವೇ ನಾವು ದೇವರಿಗೆ ಸಲ್ಲಿಸಬಹುದಾದ ಉತ್ಕೃಷ್ಠ ಪೂಜೆ ಎಂಬುದು ನನ್ನ ನಂಬಿಕೆ ಎಂದಿದ್ದಾರೆ.