ವೀಣೆ ಗೋಪಾಲರಾಯರ ಕುಟುಂಬದಲ್ಲಿ ೨೦-೧೦-೧೯೫೧ ರಂದು ಜನಿಸಿದ ಶಶಿಕಲಾ ಮೊದಲ ಸಂಗೀತ ಶಿಕ್ಷಣವನ್ನು ಬಿ. ವಿಶ್ವನಾಥ್, ಸಿ.ಪಿ. ರಂಗಸ್ವಾಮಿ ಅಯ್ಯಂಗಾರ್ ಅವರಲ್ಲಿ ಪಡೆದರು. ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಶಿಷ್ಯ ವೇತನ ಪಡೆಯುವಾಗ ಪಲ್ಲವಿ ಆರ್. ಚಂದ್ರಸಿಂಗ್‌ ಅವರಲ್ಲೂ ಮುಂದೆ ಎಂ. ರಾಜಗೋಪಾಲ ಅಯ್ಯರ್ ಅವರಲ್ಲೂ ಉನ್ನತಾಭ್ಯಾಸ ಪಡೆದರು. ವಿದ್ವತ್‌ ಪರೀಕ್ಷೆಯಲ್ಲಿ ಮೊದಲ ಸ್ಥಾನಗಳಿಸಿ ತೇರ್ಗಡೆಯಾದರು.

ಬೆಂಗಳೂರಿನ ಹಲವಾರು ಪ್ರತಿಷ್ಠಿತ ಸಭೆಗಳಲ್ಲೂ – ಉತ್ಸವ ಸಂದರ್ಭಗಳಲ್ಲೂ ಇವರ ಗಾಯನ ಕಛೇರಿಗಳು ನಡೆದಿವೆ. ಸಂಗೀತ ಸಮ್ಮೇಳನಗಳಲ್ಲಿ ಕ್ಲಿಷ್ಟವಾದ, ಅಪರೂಪವಾದ ಅಷ್ಟೋತ್ತರ ಶತತಾಳಗಳಲ್ಲಿ ಪಲ್ಲವಿ ನಿರೂಪಿಸಿರುವ ಪ್ರೌಢಿಮೆ ಹೊಂದಿರುತ್ತಾರೆ. ನಗರಸಭಾ ಬಾಲಕಿಯರ ಪ್ರೌಢಶಾಲೆಯಲ್ಲಿ ಸಂಗೀತ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಕಾಶವಾಣಿಯಿಂದಲೂ ಇವರ ಗಾಯನವು ಆಗಿಂದಾಗ್ಗೆ ಪ್ರಸಾರವಾಗುತ್ತಿರುತ್ತವೆ.

ವ್ಯಾಸರಾಜ ಮಠಾಧೀಶರಿಂದ ‘ಲಯಗಾನ ಪ್ರವೀಣೆ’, ‘ಗಾನ ಕೋಗಿಲೆ’, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ. ತ್ಯಾಗರಾಜರ ಆರಾಧನೆಗಳಲ್ಲಿ ತಪ್ಪದೇ ಭಾಗವಹಿಸುವ ಶ್ರೀಮತಿಯವರಿಗೆ ಅವರ ತಾಯಿಯವರ ನಿರಂತರ ಬೆಂಬಲವೇ ಸಮರ್ಥವಾದುದು.