ಮೈಸೂರು ಆಸ್ಥಾನ ಸಂಗೀತಗಾರ ಗೌರವಕ್ಕೆ ಪಾತ್ರರಾಗಿ ಕರ್ನಾಟಕ ಸಂಗೀತದ ಜೊತೆಗೆ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ತಬಲ ವಾದನದಲ್ಲಿ ಹೆಸರು ಮಾಡಿರುವ ಶ್ರೀ ಡಿ. ಶೇಷಪ್ಪನವರು ಕನ್ನಡ ನಾಡು ಕಂಡ ಅಪರೂಪದ ಕಲಾವಿದರು.

ಶ್ರೀ ಡಿ. ಶೇಷಪ್ಪನವರು ಆಸ್ಥಾನ ವಿದ್ವಾನ್‌ ಖಂಡೆ ದಾಸಪ್ಪನವರ ದ್ವಿತೀಯ ಪುತ್ರರಾಗಿ ಮೈಸೂರಿನಲ್ಲಿ ಜನಿಸಿದರು. ತಂದೆಯಿಂದ ತಬಲ, ಮೃದಂಗ ವಾದನಗಳನ್ನು ಕಲಿತು ಕರ್ನಾಟಕ, ಹಿಂದೂಸ್ಥಾನಿ ಸಂಗೀತ ಕಛೇರಿಗಳಿಗೆ ನುಡಿಸಲಾರಂಭಿಸಿದರು. ಭೈರವಿ ಕೆಂಪೇಗೌಡ, ಉಸ್ತಾದ್‌ ಬರಕತುಲ್ಲಾಖಾನ್‌, ಫಯಾಜ್‌ಖಾನ್‌, ವಿಲಾಯುತ್‌ಹುಸೇನ್‌ಖಾನ್‌ ಮುಂತಾದ ಜ್ಯೇಷ್ಠ ವಿದ್ವಾಂಸರಿಗೆ ತಬಲ ಸಾಥಿ ನೀಡಿ ಮೆಚ್ಚುಗೆ ಪಡೆದಿದ್ದಾರೆ. ಕರ್ನಾಟಕದ ಅನೇಕ ಭಾಗಗಳಲ್ಲದೆ ತಮಿಳುನಾಡಿನಲ್ಲೂ ಕಛೇರಿ ಮಾಡಿದ್ದಾರೆ. ಬ್ರಿಟಿಷ್‌ ಚಕ್ರವರ್ತಿ ಆರನೆಯ ಜಾರ್ಜ್‌‌ರವರ ಪಟ್ಟಾಭಿಷೇಕ ಮಹೋತ್ಸವದಲ್ಲಿ ನಡೆದ ಕಛೇರಿಯಲ್ಲೂ ಭಾಗವಹಿಸಿದ್ದಾರೆ. ೧೯೧೯ ರಿಂದ ೧೯೫೭ ರವರೆಗೆ ಮೈಸೂರು ಅರಮನೆಯಲ್ಲಿ ಆಸ್ಥಾನ ವಿದ್ವಾಂಸರಾಗಿದ್ದರು. ಕರ್ನಾಟಕ ಗಾನ ಕಲಾ ಪರಿಷತ್ತು, ಬೆಂಗಳೂರು ಗಾಯನ ಸಮಾಜ ಮುಂತಾದ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.