ಕಲೆ ಮತ್ತು ಸಂಸ್ಕೃತಿಗಳ ಹಿನ್ನೆಲೆಯಿರುವ ಕುಟುಂಬದಿಂದ ಬಂದವರು ಡಾ. ಡಿ. ಸರ್ವೋತ್ತಮ ಕಾಮತ್. ತಂದೆ ದಾಸಪ್ಪ ಕಾಮತರು ಯಕ್ಷಗಾನ ಮೇಳದಲ್ಲಿ ಭಾಗವತರಾಗಿದ್ದರು. ತಾಯಿ ಸಂಜೀವಿನಿ ಕಾಮತ್ ಸಂಗೀತಾಸಕ್ತರಾದರೆ, ಸಹೋದರರು ನೃತ್ಯ ಮತ್ತು ತಬಲಾ ವಾದನದಲ್ಲಿ ಪರಿಣಿತರಾಗಿದ್ದರು.

ಅಣ್ಣ ಜನಾರ್ಧನ್ ಕಾಮತ್ ಅವರಲ್ಲಿ ನೃತ್ಯ ಶಿಕ್ಷಣ ಆರಂಭಿಸಿದ್ದ ಸರ್ವೋತ್ತಮರು ನಂತರ ಸುಪ್ರಸಿದ್ದ ಗುರುದಂಪತಿಗಳಾದ ಪ್ರೊ. ಯು.ಎಸ್. ಕೃಷ್ಣರಾವ್ ಮತ್ತು ಯು.ಕೆ. ಚಂದ್ರಭಾಗಾದೇವಿ ಅವರುಗಳಲ್ಲಿ ನಟುವಾಂಗದಲ್ಲೂ ವಿಶೇಷ ತರಬೇತಿ ಪಡೆದರು. ಜೊತೆಗೆ ಪದ್ಮಭೂಷಣ ಡಾ.ಕೆ. ವೆಂಕಟಲಕ್ಷ್ಮಮ್ಮ. ಪದ್ಮಭೂಷಣ ಶ್ರೀಮತಿ ಕಲಾನಿಧಿ ನಾರಾಯಣ್ ಮತ್ತು ಡಾ. ಕನಕರೆಲೆ ಅವರಲ್ಲಿ ಅಭಿನಯದಲ್ಲಿ ತರಬೇತಿ ಪಡದರು. ಅಲ್ಲದೆ ಡಾ. ಮಾಯಾರಾವ್ ಅವರಲ್ಲಿ ನೃತ್ಯ ಸಂಯೋಜನೆಯಲ್ಲಿ ವಿಶೇಷ ಮಾರ್ಗದರ್ಶನ ಪಡೆದರು.

ನೃತ್ಯದಲ್ಲಿ ವಿದ್ವತ್ ಪದವಿ, ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ’ಕನ್ನಡ ಸಾಹಿತ್ಯದಲ್ಲಿ ನೃತ್ಯಕಲೆ’ ಎಂಬ ವಿಷಯದ ಸಂಶೋಧನೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ. ಪದವಿ ಪಡೆದು ತಮ್ಮ ಪ್ರತಿಭೆಯನ್ನು ಪಕ್ವಗೊಳಿಸಿಕೊಂಡವರು ಸರ್ವೋತ್ತಮ ಕಾಮತ್, ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ಪ್ರದರ್ಶನ ಕಲಾ ವಿಭಾಗದಲ್ಲಿ ನೃತ್ಯ ವಿಭಾಗದ ಪ್ರಾಧ್ಯಾಪಕರಾಗಿರುವ ಕಾಮತ್ ಅವರು, ವಿಶ್ವವಿದ್ಯಾಲಯ ಪ್ರಸಾರಾಂಗ ಮತ್ತು ಮುದ್ರಣಾಲಯ ಹಾಗೂ ಗಾಂಧಿ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ಕಾಮತರ ಸೇವೆ ಮುಂದುವರಿಯುತ್ತಿದೆ.

ಒಳ್ಳೆಯ ಲೇಖಕರೂ ಆಗಿರುವ ಕಾಮತ್, ’ನೃತ್ಯಕಲೆ ಮತ್ತು ಶಿಕ್ಷಣ’, ’ನೃತ್ಯ ಶಾಸ್ತ್ರ ಪರಿಚಯ’, ’ಕನ್ನಡ ಸಾಹಿತ್ಯದ್ಲಲಿ ನೃತ್ಯಕಲೆ’, ’ನೃತ್ಯ ಮತ್ತು ಶಿಕ್ಷಣ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾಲಯದ ಫೈನ್ ಆರ್ಟ್ಸ್ ಕಾಲೇಜು, ಬೆಂಗಳೂರಿನ ನಾಟ್ಯ ಇನ್ಸಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯಾಗ್ರಫಿ, ಹೈದ್ರಾಬಾದ್ ವಿಶ್ವವಿದ್ಯಾಲಯ, ತಿರುಪತಿ ಮ್ಯೂಸಿಕ್ ಅಂಡ್ ಡಾನ್ಸ್ ಕಾಲೇಜ್ ಮುಂತಾದ ಶೈಕ್ಷಣಿಕ ಸಂಸ್ಥೆಗಳ ಅಧ್ಯಯನ ಮಂಡಳಿಯ ಸದಸ್ಯರಾಗಿ ಶ್ರೀಯುತರು ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರಿಗೆ ೨೦೦೬-೦೭ನೇ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.