ಕರ್ನಾಟಕ ಹಿರಿಯ ತಲೆಮಾರಿನ ತಬಲಾ ವಾದಕರಾದ ಶ್ರೀ ಡಿ. ಸೀನಪ್ಪನವರು ಉಸ್ತಾದ್‌ ಬರ್ಕ ತುಲ್ಲಾಖಾನ್‌ ಹಾಗೂ ಉಸ್ತಾದ್‌. ಫೈಯಾಜ್‌ ಖಾನರ ಶಿಷ್ಯರು. ಕರ್ನಾಟಕ ಸಂಗೀತದ ಭದ್ರ ಕೋಟೆಯಾಗಿರುವ ಮೈಸೂರಿನಲ್ಲಿ ಹಿಂದೂಸ್ಥಾನಿ ಸಂಗೀತ ಕಲಿತು ಅದಕ್ಕೆ ಭದ್ರ ಬುನಾದಿ ಹಾಕಿದವರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೃಪೆಗೆ ಪಾತ್ರರಾದವರು. ದೇಶದ ಮಹಾನ್‌ ಸಂಗೀತಗಾರರಿಗೆ ಸಮರ್ಥವಾಗಿ ತಬಲಾ ಸಾಥ್‌ ನೀಡಿದವರು. ದೇಶದ ಸಂಗೀತ ಕ್ಷೇತ್ರದ ಮಹಾನ್‌ ವ್ಯಕ್ತಿಗಳ ಬಳಿ ಸಾಧನೆ ಮಾಡಿ ತಮ್ಮ ಕಲೆಯನ್ನು ಪರಿಪಕ್ವಗೊಳಿಸಿಕೊಂಡಿರುವ ಕಲಾವಿದ ಡಿ. ಸೀನಪ್ಪ. ಇವರ ತಬಲಾ ವಾದನದಲ್ಲಿನ ತಯಾರಿ ತಮ್ಮ ಆರನೇ ವಯಸ್ಸಿನಿಂದಲೇ ಆರಂಭ. ತಂದೆ ದಾಸಪ್ಪ ಇವರ ಮೊದಲ ಗುರು. ಬಾಲಕನ ಪ್ರತಿಭೆಯನ್ನು ಗುರುತಿಸಿ, ನಾಲ್ವಡಿ ಕೃಷ್ಣರಾಜ ಒಡೆಯರು ಪ್ರಸಿದ್ಧ ತಬಲ ಹಾಗೂ ಸಿತಾರ್ ಪಟು ಬರಖತುಲ್ಲಾಖಾನ್‌ರ ಬಳಿ ಶಿಷ್ಯನನ್ನಾಗಿ ಸೇರಿಸಿದರು. ಅವರ ನಿಧನದ ನಂತರ ಬರೋಡೆದ ಉಸ್ತಾದ್‌  ಫಯಾಜ್‌ಖಾನ್‌ರಲ್ಲಿ ಮುಂದುವರಿಸಿ, ಮೈಸೂರಿಗೆ ವಾಪಸಾದರು.

ಹೀಗೆ ಘಟಾನುಘಟಿಗಳ ಬಳಿ ಶಿಷ್ಯ ವೃತ್ತಿ ಕೈಗೊಂಡ ಸೀನಪ್ಪ ಪಂಡಿತ ಓಂಕಾರನಾಥ ಠಾಕೂರ್, ಮಂಜೀಖಾನ್‌, ವಿಷ್ಣು ದಿಗಂಬರ ಪಲೂಸ್ಕರ್, ಅಲ್ಲಾದಿಯಾಖಾನ್‌, ವಿಲಾಯತ್‌ ಹುಸೇನರಂತಹ ಮಹಾನ್‌ ಗಾಯಕರ ಬೈಠಕ್‌ಗಳಿಗೆ ತಬಲ ನುಡಿಸಿ ಮೆಚ್ಚುಗೆ ಗಳಿಸಿದರು. ಕರ್ನಾಟಕದ ಕಲಾವಿದರಾದ ಭೀಮಸೇನ್‌ ಜೋಶಿ, ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನ್ಸೂರರ ಗಾಯನಗಳನ್ನೂ ಇವರ ತಬಲ ವಾದನ ಕಳೆ ಕಟ್ಟಿಸಿದೆ.

ವಿಖ್ಯಾತರಾದ ಅಲ್ಲಾರಖಾ, ಕಿಶನ್‌ ಮಹಾರಾಜ್‌, ಶಾಂತ ಪ್ರಸಾದ್‌ ಮೊದಲಾದವರಿಗೆ ಸರಿಸಮಾನ ಪ್ರತಿಭಾಶಾಲಿ ಕನ್ನಡ ಕಲಾವಿದೆ. ಸೀನಪ್ಪನವರ ವಾದನ ಮಾಧುರ್ಯ, ನಯ ಮತ್ತು ಖಚಿತ ಪ್ರಮಾಣಗಳಿಂದ ಕೂಡಿದ್ದು, ಅವರ ಕಲೆಯ ಪರಿಪಕ್ವತೆ ಮತ್ತು ನೈಪುಣ್ಯತೆಯ ಕುರುಹು.

ದೇಶದ ಮಹಾನ್‌ ತಬಲಾ ವಾದಕ ಶ್ರೀ ಡಿ. ಸೀನಪ್ಪ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೬೮-೬೯ ಪ್ರಶಸ್ತಿ ನೀಡಿ ಗೌರವಿಸಿದೆ.