ಕರ್ನಾಟಕ ಸಂಗೀತ ಹಾಗೂ ಅದರ ವ್ಯಾಪ್ತಿಯ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಕೆಲವೇ ಪ್ರಾಜ್ಞರಲ್ಲಿ ಶ್ರೀ ಡಿ. ಸುಬ್ಬರಾಮಯ್ಯನವರು ಒಬ್ಬರು. ಸಂಗೀತ ಸಾಗರದ ತಳ ಶೋಧಿಸಿ ಅದರ ಹಿರಿಮೆಯನ್ನು ಅರಿತಿದ್ದ ಇವರು ವೈಜ್ಞಾನಿಕ ಮನೋಭಾವದ ಅಪರೂಪದ ವ್ಯಕ್ತಿ.

ತುಮಕೂರು ಜಿಲ್ಲೆಯ ಪಾತಗೋನ ಹಳ್ಳಿಯಲ್ಲಿ ೧೯೦೪ರಲ್ಲಿ ಜನನ. ತಂದೆ ದಾನಪ್ಪ ಹಾಗೂ ಚಿಕ್ಕಪ್ಪ ಪುಟ್ಟಣ್ಣನವರು ಜನಪ್ರಿಯ ಪಿಟೀಲು ವಾದಕರು. ಸುಬ್ಬರಾಮ್ಯಯ ತಮ್ಮ ಏಳನೇ ವಯಸ್ಸಿನಿಂದಲೇ ಪುಟ್ಟಣ್ಣನವರಲ್ಲಿ ಸಂಗೀತಾಭ್ಯಾಸ ಮಾಡಿ ತಮ್ಮ ೧೩ನೇ ವಯಸ್ಸಿನಿಂದಲೇ ಕಛೇರಿ ಮಾಡುವ ಮಟ್ಟಿಗೆ ತಯಾರಾದರು.

ಸಂಗೀತದೊಡನೆಯೇ ಸಂಸ್ಕೃತ ಮತ್ತು ಆಂಗ್ಲಭಾಷೆಗಳಲ್ಲಿ ಶಿಕ್ಷಣ ಪಡೆದರು. ಮೊಟ್ಟಮೊದಲ ಸಂಗೀತ ಶಾಲೆಯನ್ನು ಸ್ಥಾಪಿಸಿದವರೆಂಬ ಹೆಗ್ಗಳಿಕೆಗೂ ಎಚ್‌.ಎಂ.ವಿ. ಕಂಪನಿಯ ವತಿಯಿಂದ ಪ್ರಪ್ರಥಮ ಯಶಸ್ವಿ ಗ್ರಾಮೋಫೋನ್‌ ಧ್ವನಿಮುದ್ರಣ ಕಂಡ ಕಲಾವಿದರೆಂಬ ಯಶಸ್ಸಿಗೂ ಭಾಜನರಾದರು. ತಮ್ಮ ಕೊನೆಯ ದಿನಗಳವರೆಗೂ ಶ್ರೀಯುತರು ತಮ್ಮ ವ್ಯಾಸಂಗವನ್ನು ಮುಂದುವರಿಸಿಕೊಂಡು ಬಂದರು. ಇವರಲ್ಲಿದ್ದ ಅಪಾರ ಸಂಗೀತ ಜ್ಞಾನವನ್ನು ಗಮನಿಸಿ ಮಹಾರಾಜ ಕೃಷ್ಣರಾಜ ಒಡೆಯರ ಆಪ್ತರು ತಕ್ಕ ಪ್ರೋತ್ಸಾಹವನ್ನು ಒದಗಿಸಿದರು. ೧೯೩೯ ರಿಂದ ೧೯೪೦ ರವರೆಗೆ ಮೈಸೂರು ಅರಮನೆಯಲ್ಲಿ ಹಲವಾರು ಬಾರಿ ಕಛೇರಿ ನಡೆಸಿದ್ದುಂಟು.

ಭಾರತೀಯ ಹಾಗೂ ಪಾಶ್ಚಾತ್ಯ ತತ್ವಶಾಸ್ತ್ರಗಳಲ್ಲಿ ಆಳವಾದ ಅಧ್ಯಯನ ನಡೆಸಿದ್ದ ಶ್ರೀಯುತರು ೧೯೬೦ರಲ್ಲಿ ಮೈಸೂರಿನಲ್ಲಿ ಜರುಗಿದ ಮೂರನೆಯ ಮೈಸೂರು ರಾಜ್ಯದ ಸಂಗೀತ ಸಮ್ಮೇಳನಾಧ್ಯಕ್ಷರಾಗಿ ‘ಗಾನ ಕಲಾ ಸಿಂಧು’ ಬಿರುದನ್ನು ಪಡೆದರು. ‘ಗಾನ ಕಲಾಕುಶಲ’ ಎಂಬ ಬಿರುದನ್ನು ಹೊಂದಿದ್ದ ಶ್ರೀಯುತರು ತಮ್ಮ ಕೊನೆಯ ದಿನಗಳವರೆಗೂ ತಾವು ೧೯೩೧ ರಲ್ಲಿಯೇ ಸಂಸ್ಥಾಪಿಸಿದ್ದ ‘ಕರ್ನಾಟಕ ಸಂಗೀತ ಮಹಾ ವಿದ್ಯಾಲಯ’ದಲ್ಲಿ ಅನೇಕಾನೇಕ ಸಂಗೀತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ವೀಯುತ್ತಿದ್ದರು. ಅವರ ಇಹಲೋಕ ವ್ಯಾಪಾರ ೧೬-೦೮-೧೯೮೬ರಲ್ಲಿ ಅಂತ್ಯವಾಯಿತು.