ಕಳೆದ ಶತಮಾನದ ಮಹಾನ್‌ ಸಂಗೀತ ವಿದ್ವಾಂಸರ ಅಗ್ರಪಂಕ್ತಿಯಲ್ಲಿ ವಿರಾಜಿಸುವ ಕೆಲವೇ ಹೆಸರುಗಳಲ್ಲಿ ಡಿ.ಸುಬ್ಬರಾಮಯ್ಯ ನವರೂ ಒಬ್ಬರು.

ತುಮಕೂರು ಜಿಲ್ಲೆಯ , ಕೊರಟಗೆರೆ ತಾಲ್ಲೂಕಿಗೆ ಸೇರಿದ ಪಟಗಾನಹಳ್ಳಿಯಲ್ಲಿ ೧೯೦೩ರಲ್ಲಿ ಸುಬ್ಬರಾಮಯ್ಯನವರು ಜನಿಸಿದರು. ತಂದೆ ದಾನಪ್ಪನವರು, ಆ ಕಾಲಕ್ಕೆ ಸುಪ್ರಸಿದ್ಧ ಪಿಟೀಲು ವಿದ್ವಾಂಸರಾಗಿದ್ದವರು. ಪ್ರಾಥಮಿಕ ಸಂಗೀತ ಶಿಕ್ಷಣವನ್ನು ತಂದೆಯವರಲ್ಲಿ ಪಡೆದು, ಮುಂದೆ ಬಹು ಸಮೀಪ ಬಂಧುಗಳಾಗಿದ್ದ ಶ್ರೀ ಪುಟ್ಟಣ್ಣನವರಲ್ಲಿ ಅಭ್ಯಾಸವನ್ನು ಮುಂದುವರೆಸಿ, ಹಲವಾರು ವರ್ಷಗಳ ನಿರಂತರ ಸಾಧನೆಯಿಂದ ಅದ್ಭುತವಾದ ಪಾಂಡಿತ್ಯವನ್ನು ಗಳಿಸಿದರು.

ನಿವೃತ್ತ ನ್ಯಾಯಾಧೀಶರೂ ಹಂಗಾಮಿ ರಾಜ್ಯಪಾಲರೂ ಆಗಿದ್ದ ಶ್ರೀನಿಟ್ಟೂರು ಶ್ರೀನಿವಾಸರಾಯರು ಸುಬ್ಬರಾಮಯ್ಯನವರ ಸಮವಯಸ್ಸಿನವರೂ, ಶಾಲೆಯಲ್ಲಿ ಸಹಪಾಠಿಗಳೂ ಆಗಿದ್ದು , ಹತ್ತಿರದ ಬಂಧುಗಳಾಗಿರುವುದರಿಂದ, ಈ ಎರಡು ಕುಟುಂಬಗಳ ನಡುವೆ ಸ್ನೇಹ, ಸೌಹಾರ್ದ, ಪ್ರೀತಿ, ವಿಶ್ವಾಸಗಳ ಹೊನಲು ಇಂದಿಗೂ ಹರಿದುಬಂದಿದೆ.

ಶ್ರೀ ದಾನಪ್ಪನವರು, ನಾಟಕ ಜಗತ್ತಿನಲ್ಲಿಯೇ ಅಜರಾಮರವಾದ ಕೀರ್ತಿಗಳಿಸಿರುವ ಗುಬ್ಬಿ ವೀರಣ್ಣನವರನ್ನು, ನಾಟಕ ಕ್ಷೇತ್ರಕ್ಕೆ ಪ್ರವೇಶ ಮಾಡಿಸಿದವರು. ‘ಗುಬ್ಬಿ’ ನಾಟಕ ಮಂದಿರದ ಹಿರಿಮೆ ಗರಿಮೆಗಳಿಗೆ ವೀರಣ್ಣನವರು ಆಧಾರ ಸ್ತಂಭವಾಗಿ “ಗುಬ್ಬಿ ವೀರಣ್ಣ”ನೆಂದೇ ಖ್ಯಾತಿ ಗಳಿಸಿದರು. ಮನೆತನದಲ್ಲಿ ಇಂತಹ ಕಲಾಭಿಮಾನ, ಸಂಗೀತದ ಸೌರಭ ತುಂಬಿದ್ದರಿಂದ, ಸುಬ್ಬರಾಮಯ್ಯನವರಿಗೆ, ಜನ್ಮತಃ ಸಂಗೀತ ಸಾಹಿತ್ಯಗಳು ಮೈಗೂಡಿ ಬಂದುದರಲ್ಲಿ ಆಶ್ಚರ್ಯವೇನಿಲ್ಲ. ಆ ಕಂಚಿನಂತಹ ಕಂಠಶ್ರೀ; ೪ ೧/೨ ಕಟ್ಟೆಯಲ್ಲಿ ಅನಾಯಾಸವಾಗಿ ತ್ರಿಸ್ಥಾಯಿಗಳಲ್ಲೂ ಸಂಚರಿಸುವ ತುಂಬು ಶಾರೀರದ ಸುಬ್ಬರಾಮಯ್ಯನವರ ಪ್ರಥಮ ಕಚೇರಿ ೧೯೧೬ರಲ್ಲಿ, ಶಿವಗಂಗಾ ಮಠದ ಶ್ರೀಗಳವರ ಸಾನ್ನಧ್ಯದಲ್ಲಿ ನಡೆಯಿತು. ಹದಿಮೂರು ವರ್ಷದ ಬಾಲಕನಾಗಿದ್ದಾಗಲೇ ಸಂಗೀತಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಸುಬ್ಬರಾಮಯ್ಯನವರ ಕೀರ್ತಿ, ನಾಡಿನ ಮೂಲೆ ಮೂಲೆಗೂ ವ್ಯಾಪಿಸಿ, ಹೊರನಾಡುಗಳಿಗೂ ಹರಡಿತು. ಧ್ವನಿವರ್ಧಕದ ಸೌಲಭ್ಯವಿನ್ನೂ ಕಾಲಿರಸದ ಕಾಲವದು! ದೊಡ್ಡ ಸಭಾಂಗಣದಲ್ಲೂ ಒಂದು ತುದಿಯಿಂದ ಮತ್ತೊಂದು ತುದಿಯವರೆಗೂ ಮೊಳಗುವ ಧ್ವನಿ ಶ್ರೀಮಂತಿಕೆಯಿದ್ದ ಸುಬ್ಬರಾಮಯ್ಯನವರು, ಅತ್ಯಂತ ಜನಪ್ರಿಯ ಗಾಯಕರಾಗಿ ಮೆರೆದದ್ದು ಸಹಜವೇ!

ಸುಬ್ಬರಾಮಯ್ಯನವರ ಸ್ವತಃ, ಪಾಠದ ಸಮಯದಲ್ಲಿ, ಕೆಲವು ವೇಳೆ, ಹಿಂದಿನ ಸಂಗೀತಗಾರರನ್ನೂ, ಕಚೇರಿಗಳು ನಡೆಯುತ್ತಿದ್ದ ವಿಧಾನವನ್ನೂ, ಸಂಗೀತದ ಗುಣಮಟ್ಟಗಳನ್ನೂ ಶಿಷ್ಯರಿಗೆ ತಿಳಿಸುತ್ತಿದ್ದರು. ವೀಣೆ ಶೇಷಣ್ಣನವರಿಗೂ, ಮೈಸೂರು ವಾಸುದೇವಾಚಾರ್ಯರಿಗೂ, ಸುಬ್ಬರಾಮಯ್ಯನವರಲ್ಲಿ ವಿಶೇಷ ಪ್ರೀತಿ. ಎಷ್ಟೋ ವೇಳೆ ಹುಡುಗ ಸುಬ್ಬರಾಮಯ್ಯನನ್ನು ಹುರಿದುಂಬಿಸಿ, ಇಪ್ಪತ್ತು ಇಡ್ಲಿ ತಿಂದು, ಒಂದು ತಂಬಿಗೆ ಕಾಫಿ ಕುಡಿದು ನಂತರ ಹಾಡು ಎನ್ನುತ್ತಿದ್ದರಂತೆ. ಸುಬ್ಬರಾಮಯ್ಯನವರು ಇಪ್ಪತ್ತು ಇಡ್ಲಿ, ಒಂದು ತಂಬಿಗೆ ಕಾಫಿ ಸೇವನೆಯ  ನಂತರವೂ ಆಯಾಸವಿಲ್ಲದೆ ಹಾಡುವುದನ್ನು ಕೇಳಿ, ಎಲ್ಲರೊಡನೆಯೂ ಇದೊಂದು ಅದ್ಭುತ ಸಂಗತಿ, ಎಂದು ಮೆಚ್ಚುಗೆಯ ಮಾತನಾಡುತ್ತಿದ್ದರಂತೆ! ಹಿರಿಯರು ಕಿರಿಯರ ಬಗ್ಗೆ ತೋರಿಸುತ್ತಿದ್ದ ವಿಶ್ವಾಸ ಅಭಿಮಾನಗಳನ್ನು ಕುರಿತು ಹೇಳುವಾಗ, ಸುಬ್ಬರಾಮಯ್ಯನವರು ಬಹು ಭಾವುಕರಾಗುತ್ತಿದ್ದರು. ಆಗ ನಡೆಯುತ್ತಿದ್ದ ಕಚೇರಿಗಳು ಬಹುಪಾಲು, ಯಾರದಾದರೂ ಮನೆಯಲ್ಲಿ, ಆಹ್ವಾನಿತ ರಸಿಕ ಸಹೃದಯ ಶ್ರೋತೃಗಳ ಉಪಸ್ಥಿತಿಯಲ್ಲಿ. ಏಳೆಂಟು  ಘಂಟೆಗಳ ಕಾರ್ಯಕ್ರಮ ಸರ್ವೇ ಸಾಧಾರಣ. ಊಟೋಪಚಾರಾದಿಗಳನ್ನು ಮುಗಿಸಿ, ರಾತ್ರಿ ಹತ್ತು ಘಂಟೆ ಸುಮಾರಿಗೆ ಆರಂಭಿಸಿ, ಪ್ರಾತಃಕಾಲ ದೇವರಿಗೆ ಮಂಗಳಾರತಿ ಮಾಡಿ ಕಚೇರಿ ಮುಗಿಸುತ್ತಿದ್ದುದು! ಅಂತಹ ಘನವಾದ ಹಾಡಿಕೆಯಲ್ಲಿ ನುರಿತವರು ಸುಬ್ಬರಾಮಯ್ಯನವರು.

ಹೆಚ್‌.ಎಂ.ವಿ. ಸಂಸ್ಥೆಯು ಧ್ವನಿ ಮುದ್ರಣಗಳನ್ನು ಆರಂಭಿಸಿದ್ದ ಕಾಲ. ಆ ವೇಳೆಗೆ ವೀಣೆ ಶೇಷಣ್ಣನವರ ಹಾಗೂ ಬಿಡಾರಂ ಕೃಷ್ಣಪ್ಪನವರ ಸಂಗೀತದ ಧ್ವನಿಮುದ್ರಣಗಳು ಆಗಿತ್ತಾದರೂ, ಧ್ವನಿ ಮುದ್ರಣ ಸಂಸ್ಕರಣ ವ್ಯವಸ್ಥೆಗಳು ಆರಂಭದ ದೆಸೆಯಲ್ಲಿದ್ದ ಕಾರಣ ಅವು ಜನ ಸಾಮಾನ್ಯರನ್ನು ತಲುಪಲಿಲ್ಲ. ಅದೃಷ್ಟ ವಿಶೇಷದಿಂದ, ಧ್ವನಿ ಮುದ್ರಣ ವ್ಯವಸ್ಥೆ ಸುಧಾರಿಸಿದ್ದು, ಸುಬ್ಬರಾಮಯ್ಯನವರು ಹಾಡಿದ ಕೃತಿಗಳೂ ದೇವರ ನಾಮಗಳೂ ಸೇರಿದಂತೆ ಇಪ್ಪತ್ತು ರಚನೆಗಳು ಧ್ವನಿ ಮುದ್ರಣಗೊಂಡು ಬಿಡುಗಡೆಯಾದುವು. ತಮ್ಮ ೨೩ರ ವಯಸ್ಸಿನಲ್ಲಿ (೧೯೨೬ರಲ್ಲಿ) ತರುಣ ಕಲಾವಿದ ಕರ್ನಾಟಕದ ಪ್ರತಿ ಊರಿನ, ಮನೆ ಮನೆಯ, ಮನಮನಗಳನ್ನೂ ಆಕರ್ಷಿಸಿದ್ದು ಒಂದು ದಾಖಲೆಯೇ ಆಯಿತು. ಯಾರ ಬಾಯಲ್ಲಿಯೂ ಈ ಹಾಡುಗಳೇ! “ಮನುಜ ಶರೀರ ವಿದೇನು ಸುಖ” ವಿಶೇಷವಾಗಿ ಜನಾದರಣೆ ಪಡೆದ ಕೀರ್ತನೆಯಾಯಿತು. ಎಲ್ಲೆಡೆಯೂ ಈ ತರುಣ ಗಾಯಕನಿಗೆ ಮನ್ನಣೆ; ಕಾರ್ಯಕ್ರಮಗಳಿಗೆ ಆಹ್ವಾನ; ಸಂಗೀತ ರಸಿಕರ ಮನದಲ್ಲಿ ಭದ್ರವಾದ ಸ್ಥಾನ; ಕೀರ್ತಿ ಶಿಖರದಲ್ಲಿ ಉನ್ನತ ಪೀಠ ಇವರದಾಯಿತು.

ಸಂಗೀತವು ಸುಬ್ಬರಾಮಯ್ಯನವರ ಪಾಲಿಗೆ ಕೇವಲ ರಂಜಕ ಕಲೆಯಾಗಿರಲಿಲ್ಲ. ಬುದ್ಧಿಜೀವಿಯಾಗಿದ್ದು, ಅನೇಕ ಗ್ರಂಥಗಳನ್ನು ಅಧ್ಯಯನ ಮಾಡಿದ್ದರು. ಆಂಗ್ಲಭಾಷೆ, ಕನ್ನಡ ಹಾಗೂ ಸಂಸ್ಕೃತದಲ್ಲಿ ಪಾಂಡಿತ್ಯ ಪಡೆದಿದ್ದರು. ಬೆಂಗಳೂರಿನ ಸಂಸ್ಕೃತ ಶಾಲೆಯಲ್ಲಿ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಪೌರ್ವಾತ್ಯ, ಪಾಶ್ಚಿಮಾತ್ಯ ಸಂಗೀತ ಪದ್ಧತಿಗಳೆರಡನ್ನೂ ಅರಿತಿದ್ದವರು. ಸಂಗೀತ ತ್ರಿಮೂರ್ತಿಗಳ ಬಗ್ಗೆ, ಭಾರತೀಯ ಸಂಗೀತ ಗ್ರಂಥಸ್ಥ ವಿಷಯಗಳ ಬಗ್ಗೆ ಮಾತನಾಡುವಷ್ಟೇ ಪರಿಣತಿಯಿಂದ, ಪಾಶ್ಚಾತ್ಯ ಸಂಗೀತ ಪದ್ಧತಿ ಬಗ್ಗೆಯೂ ಮಾತನಾಡುವಷ್ಟು ಕುಶಲಿಗಳಾಗಿದ್ದರು. ಕರ್ನಾಟಕ ಗಾನಕಲಾ ಪರಿಷತ್ತಿನ ಒಂದು ಸಮ್ಮೇಳನದ ಬೆಳಗಿನ ವಿದ್ವತ್‌ ಗೋಷ್ಠಿಯಲ್ಲಿ ಅವರು, ಯೆಹೂದಿ ಮೆನುಹಿನ್‌ ಮತ್ತು ಸ್ಕಾಪೆನ್‌ ಹೋರ್ ಅವರುಗಳ ಅಭಿಪ್ರಾಯಗಳನ್ನು, ಮೂಲ ಕೃತಿಯ ಪಡಿಯಚ್ಚಿನಂತೆ ನಿರೂಪಿಸಿದುದು ಆ ಸಭೆಯಲ್ಲಿ ಅಂದು ಉಪಸ್ಥಿತರಾಗಿದ್ದವರೆಲ್ಲರನ್ನೂ ಅಚ್ಚರಿಗೊಳಿಸಿತು.

ಸಂಸ್ಕೃತ ಭಾಷಾಪಾಂಡಿತ್ಯ, ಆಳವಾಗಿ ವಿಚಾರ ಮಾಡುವ ಪ್ರವೃತ್ತಿ, ಸೃಜನ ಶೀಲತೆ, ಕಲಾತ್ಮಕತೆ ಹಾಗೂ ಕ್ರಿಯಾತ್ಮಕತೆಗಳೆಲ್ಲ ಒಟ್ಟು ಸೇರಿದ ವ್ಯಕ್ತಿತ್ವ ಅವರದು. ಒಳ್ಳೆಯ (ಮಾತುಗಾರರೂ) ವಾಗ್ಮಿಗಳೂ ಆಗಿದ್ದ ಇವರು ಎಂತಹ ಕ್ಲಿಷ್ಟವಾದ ವಿಷಯಗಳನ್ನು ಕುರಿತಾದರೂ ಲೀಲಾಜಾಲವಗಿ, ಇದಮಿತ್ಥಂ ಎಂದು ಹೇಳುವ ನಿಲುವನ್ನು ಸಾಧಿಸಿಕೊಂಡಿದ್ದರು. ಸಂಗೀತಕ್ಕೆ ಸಂಬಂಧಪಟ್ಟಂತೆ ಅವರಿಗೆ ತಿಳಿಯದ ವಿಷಯವೇ ಇರಲಿಲ್ಲವೆನ್ನಬಹುದು. ಕರ್ನಾಟಕದಲ್ಲಿ ಮಾತ್ರವಲ್ಲದೇ, ಹೊರನಾಡುಗಳಲ್ಲಿ ನಡೆಯುತ್ತಿದ್ದ ಸಮ್ಮೇಳನಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಲು ಆಹ್ವಾನಿತರಾಗುತ್ತಿದ್ದರು . ಬಹುಭಾಷಾ ಜ್ಞಾನವಿದ್ದವರಾದ್ದರಿಂದ, ಎಲ್ಲಿಯಾದರೂ, ಯಾವ ವಿಷಯವನ್ನಾದರೂ ನಿರರ್ಗಳವಾಗಿ ಮಂಡಿಸುತ್ತಿದ್ದರು. ಇತರ ಸಂಗೀತ ವಿದ್ವಾಂಸರುಗಳೂ, ತಾವು ಕೊಡಬೇಕಾಗಿದ್ದ ಸೋದಾಹರಣ, ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳಿಗೆ, ಬೇಕಾದ ಮಾಹಿತಿಯನ್ನು ಅರಿಯಲು, ಸುಬ್ಬರಾಮಯ್ಯನವರಲ್ಲಿಗೆ ಬರುತ್ತಿದ್ದರು. ಯಾವ ರೀತಿಯ ಬಿಂಕವಿಲ್ಲದೆ, ಇವರೂ ಸಹ ಬೇಕಾದ ವಿಚಾರಗಳನ್ನು ವಿವರವಾಗಿ ತಿಳಿಸಿ ಸಹಾಯ ಮಾಡುತ್ತಿದ್ದರು.

ಸಾಮಾನ್ಯವಾಗಿ ಮೊದಮೊದಲಿಗೆ, ಸುಬ್ಬರಾಮಯ್ಯನವರ ಕಚೇರಿಗಳಿಗೆ ವಿದ್ವಾನ್‌ ಟಿ. ಚೌಡಯ್ಯ, ವಿದ್ವಾನ್‌ ಎಲ್‌.ಎಸ್‌., ಶೇಷಗಿರಿರಾಯರು ವಯೊಲಿನ್‌ ಪಕ್ಕವಾದ್ಯ ನುಡಿಸುತ್ತಿದ್ದರು. ಪಂಡಿತರಾದಿಯಾಗಿ ಪಾಮರರೂ ಮೆಚ್ಚುವಂತಹ ಶೈಲಿಯ ಹಾಡುಗಾರಿಕೆಯ ಕ್ಲಿಷ್ಟವಾದುದನ್ನು ಸಾಧನೆಯಿಂದ ವಶಪಡಿಸಿಕೊಳ್ಳುವುದೆಂದು ಅವರಿಗೆ ಪ್ರಿಯವಾದ ಕಾರ್ಯ. ನಾಯಕಿ ಸುಬ್ಬರಾಮಯ್ಯ, ಬೇಗಡೆ ಸುಬ್ಬರಾಮಯ್ಯ ಎಂದು ಖ್ಯಾತಿ ಗಳಿಸಿದ್ದವರು.

ಸುಮಾರು ೧೯೬೩-೬೪ರ ರಾಮೋತ್ಸವದ ಸಂದರ್ಭದಲ್ಲಿ ಸಿಟಿ ಇನ್ಸ್ಟಿಟ್ಯೂಟ್‌ ಆವರಣದಲ್ಲಿ ನಡೆದ ರಾಮನವಮಿ ಸಂಗೀತ ಕಾರ್ಯಕ್ರಮಗಳಲ್ಲಿ, ಒಂದು ದಿನ ಸುಬ್ಬರಾಮಯ್ಯನವರು, ವಿದ್ವಾನ್‌ ಎಂ. ಚಂದ್ರಶೇಖರನ್‌ ಅವರ ಪಿಟೀಲು ಪಕ್ಕವಾದ್ಯದೊಡನೆ ಹಾಡಿದ್ರು. ಅಂದು ಅವರು ಹಾಡಿದ ಮನೋರಂಜನಿ ರಾಗದ ವಿಸ್ತಾರವಾದ ಆಲಾಪನೆ, ‘ಅಟುಕಾರಾದನಿ’ಕೃತಿ ಹಾಗೂ ಸ್ವರ ಪ್ರಸ್ತಾರ, ಇನ್ನೂ ಕಿವಿಯಲ್ಲಿ ತುಂಬಿ ನಿಂತಿದೆ. ಅಂತಹ ಪ್ರೌಢಿಮೆ!

ಯಶಸ್ವಿಯಾಗಿ ಧ್ವನಿಮುದ್ರಿತ ಕಂಠಶ್ರೀಯನ್ನು ಜನರಿಗೆ ಮುಟ್ಟಿಸಿದ ಪ್ರಥಮ ವಿದ್ವಾಂಸರಾಗಿದ್ದ ಹಿರಿಯರಲ್ಲಿ ಇವರು ಪ್ರಪ್ರಥಮವಾಗಿ ‘ಸಂಗೀತ ಶಾಲೆ’ಯನ್ನು ಆರಂಭಿಸಿದ ಕೀರ್ತಿಗೂ ಭಾಜನರಾದವರು. ಅದುವರೆಗೆ ‘ಗುರುಕುಲ’ ಪದ್ಧತಿ ಅಥವಾ ಗುರುಗಳು ಮನೆಗಳಿಗೆ ಹೋಗಿ ಸಂಗೀತ ಪಾಠ ಹೇಳುವುದೇ ರೂಢಿಯಲ್ಲಿತ್ತು. ೧೯೩೧ರಲ್ಲಿ “ಕರ್ನಾಟಕ ಕಾಲೇಜ್‌ ಆಫ್‌ ಮ್ಯೂಸಿಕ್‌” ಸ್ಥಾಪಿಸಿ, ಸುಬ್ಬರಾಮಯ್ಯನವರು, ಸರ್ಕಾರದ ಮನ್ನಣೆಯನ್ನೂ ಪಡೆದ ಪ್ರಥಮ ಸಂಸ್ಥೆಯ ಸ್ಥಾಪನಾಚಾರ್ಯರಾಗಿ, ಒಂದು ನೂತನ ಶಿಕ್ಷಣ ವ್ಯವಸ್ಥೆಗೆ ನಾಂದಿ ಹಾಕಿದರು. ಸುಪ್ರಸಿದ್ಧ ವಿದ್ವಾಂಸರುಗಳಾದ ಪಾರ್ವತಿ ಮಹದೇವನ್‌, ವಲ್ಲಭಂ ಕಲ್ಯಾಣಸುಂದರಂ, ಪ್ರೊ. ವಿ. ರಾಮರತ್ನಂ, ಎಂ.ಆರ್. ದೊರೆಸ್ವಾಮಿ, ರತ್ನಗಿರಿ ಸುಬ್ಬಾಶಾಸ್ತ್ರಿ ಮುಂತಾದವರೆಲ್ಲರೂ ಸುಬ್ಬರಾಮಯ್ಯನವರಿಂದ ಮಾರ್ಗದರ್ಶನ ಪಡೆದವರೇ! ಹಾಡುಗಾರಿಕೆಯಲ್ಲಿ, ಉತ್ತಮ ಧ್ವನಿ ಸಂಪತ್ತುಳ್ಳವರಿಗೆ ಮಾತ್ರವೇ ಅವರು ಶಿಕ್ಷಣ ನೀಡುತ್ತಿದ್ದುದು. ಬಿರ್ಕಾಗಳ ವ್ಯಾಮೋಹ, ದೀಕ್ಷಿತರ ಕೃತಿಗಳತ್ತ ವಿಶೇಷ ಒಲುಮೆ, ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಮುಂತಾದವು ಅವರ ವೈಯುಕ್ತಿಕತೆಗೆ ಮೆರುಗು ನೀಡುವಂತಹುವು. ಪರಮ ಸಂಪೂಜ್ಯ ಜಗದ್ಗುರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರಿಗೆ ಬೋಧಿಸಿದ್ದ ಶ್ರೀ. ಎಂ. ಲಕ್ಷ್ಮೀನರಸಿಂಹಶಾಸ್ತ್ರಿಗಳಲ್ಲಿ ಸಂಸ್ಕೃತಾಭ್ಯಾಸ ಮಾಡಿದ್ದ ಸುಬ್ಬರಾಮಯ್ಯನವರಿಗೆ, ಸಹಜವಾಗಿಯೇ ವೇದಾಂತ ವಿಚಾರಗಳಲ್ಲಿ ಅಪಾರ ಆಸಕ್ತಿ ಇತ್ತು. ಸೂತ್ರ ಭಾಷ್ಯ; ಗೀತಾಭಾಷ್ಯಗಳನ್ನೆಲ್ಲಾ ಸ್ವತಃ ಅಧ್ಯಯನ ಮಾಡಿದ್ದರು.

“ತತ್ತ್ವಾಲೋಕ” ವೆಂಬ ಆಧ್ಯಾತ್ಮಿಕ ವಿಚಾರ ಪತ್ರಿಕೆಗೆ ಲೇಖನಗಳನ್ನು  ಬರೆದು ಕೊಡುತ್ತಿದ್ದರು. ಅಪರೂಪದ ವಿಷಯಗಳಲ್ಲಿ ಅವರಿಗಿದ್ದ ಜ್ಞಾನ ಪಾಂಡಿತ್ಯ ಅಪಾರ! ‘ಪಂಡರೀಕ ವಿಠಲ’ನ ಬಗ್ಗೆ ಆಳವಾಗಿ ಸಂಶೋಧನೆ ನಡೆಸಿ ಮಾಹಿತಿ ಸಂಗ್ರಹಿಸಿ ಗ್ರಂಥ ರಚನೆ ಮಾಡಿರುವ ಮಹಾ ಮಹೋಪಾಧ್ಯಾಯ ಡಾ.ರಾ. ಸತ್ಯನಾರಾಯಣರವರು ಬಹು ಗೌರವದಿಂದ, “ನಾನು ಪಂಡರೀಕ ವಿಠಲನ ಬಗ್ಗೆ ವಿಚಾರ ಸಂಗ್ರಹಿಸುವುದಕ್ಕೆ ಅದೆಷ್ಟು ಕೆಲಸ ಮಾಡಬೇಕಾಯಿತು.” ಆಮೇಲೆ ನೋಡಿದಾಗ, ೨೦ ವರ್ಷಗಳ ಹಿಂದೆಯೇ, ಡಿ. ಸುಬ್ಬರಾಮಯ್ಯನವರು ‘ಗಾಯನ ಗಂಗಾ’ ಪತ್ರಿಕೆಯಲ್ಲಿ ಆ ವಿಚಾರದ ಬಗ್ಗೆ ಲೇಖನ ಬರೆದಿದ್ದು ಅಚ್ಚಾಗಿತ್ತು! ಸುಬ್ಬರಾಯಯ್ಯನವರಿಗಿದ್ದ ಸಂಶೋಧನಾತ್ಮಕ ಪ್ರವೃತ್ತಿ ಜ್ಞಾನದಾಹ ನಮ್ಮನ್ನು ತುಂಬಾ ಹತ್ತಿರವಾಗಿಸಿತ್ತು ಎಂದಿದ್ದಾರೆ. ಡಾ.ರಾ. ಸತ್ಯನಾರಾಯಣರವರ ಧರ್ಮಪತ್ನಿ ಶ್ರೀಮತಿ ಗೌರಮ್ಮನವರೂ ಸುಬ್ಬರಾಮಯ್ಯನವರ ಶಿಷ್ಯರೇ!

ಮೈಸೂರು ಸಂಸ್ಥಾನದ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಸನ್ನಿಧಾನದಲ್ಲಿ ಒಮ್ಮೆ ಸುಬ್ಬರಾಮಯ್ಯನವರು ಸಂಗೀತ ಕಚೇರಿ ಮಾಡಿದರು. ಅರಸರು ಸುಬ್ಬರಾಮಯ್ಯನವರ ಕೀರ್ತಿಯನ್ನು ಕೇಳಿ ಸ್ವಯಿಚ್ಛೆಯಿಂದ ಅರಮನೆಗೆ ಬರಮಾಡಿಕೊಂಡಿದ್ದರು. ರಾಜ ಸನ್ನಿಧಾನದಲ್ಲಿ ನಡೆದುಕೊಳ್ಳಬೇಕಾದ ರೀತಿ ರಿವಾಜುಗಳು ಬಗ್ಗೆ ಮಿತ್ರರು, ಹಿತೈಷಿಗಳು ಅವರಿಗೆ ತಿಳುವಳಿಕೆ ನೀಡಿದ್ದರು. ಅದ್ಭುತವಾದ ಸಂಗೀತ ಕಾರ್ಯಕ್ರಮ ಕೇಳಿ ಹರ್ಷದಿಂದ ಶ್ರೀಮನ್ಮಹಾರಾಜರು, ೨೫ ಬೆಳ್ಳಿನಾಣ್ಯಗಳನ್ನು ಉಡುಗೊರೆಯಾಗಿ ನೀಡಿದರು. ಅದನ್ನು ಪಂಚೆಯಲ್ಲಿ ಕಟ್ಟಿ ತಂದು ಆರು ತಿಂಗಳು ಜೀವನ ಮಾಡಿದ್ದರೆಂದರೆ, ಸುಬ್ಬರಾಮಯ್ಯನವರ ಸರಳ ಸ್ವಭಾವವನ್ನು ಇನ್ನು ಹೆಚ್ಚಿಗೆ ವರ್ಣಿಸಬೇಕೇ? ನಿತ್ಯ ತೃಪ್ತರವರು. ಮಹಾ ಸ್ವಾಭಿಮಾನಿ. ಎಂತಹ ಸಂದರ್ಭದಲ್ಲೂ ಯಾರಿಗೂ ಬಗ್ಗುತ್ತಿರಲಿಲ್ಲ. ಸ್ವಂತ ಪ್ರಯೋಜನಕ್ಕಾಗಿ ಎಂದೂ, ಯಾರನ್ನೂ ಆಶ್ರಯಿಸಿದವರಲ್ಲ. ವೀಣೆ ಶೇಷಣ್ಣನವರು, ತಮಗೆ ಮಹಾರಾಜರು ಕೊಟ್ಟಿದ್ದ ಜರತಾರಿ ಪಂಚೆಯನ್ನು ಆಶೀರ್ವದಿಸಿ ಸುಬ್ಬರಾಮಯ್ಯನವರಿಗೆ ಕೊಟ್ಟಿದ್ದರಂತೆ. ಹಿರಿಯರಲ್ಲಿ, ಗುರುಜನರಲ್ಲಿ ಅಷ್ಟೇ ವಿನಮ್ರತೆ.

“ಅಭ್ಯಾಸಾನುಸಾರಿಣೀ ವಿದ್ಯಾ” ಎನ್ನುವ ಆರ್ಯ ವಾಕ್ಯವಿದೆ. ಇದನ್ನು ಅಕ್ಷರಶಃ ಪಾಲಿಸಿದವರು ಸುಬ್ಬರಾಮಯ್ಯನವರು. ಶಿಷ್ಯರಲ್ಲಿ ಅಪರಿಮಿತ ವಾತ್ಸಲ್ಯ. ಪಾಠ ಹೇಳುವಾಗ ಬಹು ನಿಷ್ಠುರ ವ್ಯಕ್ತಿ. “ಸಂಗೀತವೆಂಬುದು ತಪಸ್ಸು, ಬೇರೆ ವಿದ್ಯೆಗಳಿಗೂ ಸಂಗೀತಕ್ಕೂ ಬಹಳ ವ್ಯತ್ಯಾಸವಿದೆ. ವೇದಿಕೆಯಲ್ಲಿ ನಿತ್ಯ ಪರೀಕ್ಷೆಯೇ. ಆದ್ದರಿಂದ ವಿನಯ, ಭಯ, ಶ್ರದ್ಧೆ ಅಗತ್ಯವಾಗಿ ಇರಬೇಕು. ಇದೇ ಸಂಗೀತ ವಿದ್ವಾಂಸರಲ್ಲಿ, ಶಿಕ್ಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಇರಬೇಕಾದ ಗುಣ” ಎಂದು ಹೇಳುತ್ತಿದ್ದರು. ಹೇಳಿದಂತೆ ನಡೆಯುತ್ತಿದ್ದರು.

ಸುಮಾರು ಐದು ಅಡಿ ಎಂಟು ಅಂಗುಲ ಎತ್ತರ; ಗೌರವರ್ಣ; ಹಣೆಯಲ್ಲಿ ಗಂಧ; ಚಿಕ್ಕ ವಯಸ್ಸಿನಲ್ಲಿ ಜರಿಪೇಟ (ನಂತರ ಇದನ್ನು ವರ್ಜಿಸಿದ್ದರು); ಕ್ಲೋಸ್‌ ಕಾಲರ್ ಕೋಟು-ಕಚ್ಚೆ ಪಂಚೆ; ನೋಡಿದ ತಕ್ಷಣ ಗೌರವ ಮೂಡಿಸುವ ವ್ಯಕ್ತಿತ್ವ. ಇಂತಹ ಸುಬ್ಬರಾಮಯ್ಯನವರ ಶಿಷ್ಯರಾದ ನಮಗೆ ಅವರಲ್ಲಿ ಗುರುಭಕ್ತಿ, ಭಯ ಹೆಚ್ಚಾಗಿದ್ದುದೇನು ಅಚ್ಚರಿ? ಪಾಠಕ್ಕೆ ಹೋಗುವಾಗ ನಮಗೆ (ನಾನು, ನನ್ನ ತಂಗಿ ವಸುಂಧರ) ತೀರಾ ಚಿಕ್ಕ ವಯಸ್ಸು, ಹನ್ನೆರಡು, ಹದಿಮೂರು ವಯಸ್ಸಿದ್ದಿರಬೇಕು. ನಾವು ಪಾಠ ಆರಂಭಿಸಿದ ಮರುವರ್ಷ, ಅವರ ತಂದೆ ವಿದ್ವಾನ್‌ ದಾಸಪ್ಪನವರಿಗೆ ಸಹಸ್ರ ಚಂದ್ರ ದರ್ಶನ ಶಾಂತಿ ನಡೆಯಿತು. ನಂತರ ಕೆಲವು ತಿಂಗಳಲ್ಲಿ ನಮ್ಮ ಗುರುಗಳಿಗೆ ಷಷ್ಟ್ಯಬ್ದಿ (೧೯೬೩) ಪೂರ್ತಿಯಾಯಿತು. ನಮ್ಮ ಗುರುಗಳ ತಂದೆಯವರೂ, ಒಮ್ಮೊಮ್ಮೆ ಪಾಠ ನಡೆಯುವಾಗ ಅಲ್ಲಿ ಉಪಸ್ಥಿತರಿರುತ್ತಿದ್ದರು. ಅಪರೂಪವಾಗಿ ಪಾಠಕ್ಕೆ ಸಂಬಂಧಿಸಿದಂತೆ ಸಲಹೆ ನೀಡುತ್ತಿದ್ದರು. ನಮ್ಮ ಗುರುಗಳು ಅಂತಹ ಎತ್ತರದ ವ್ಯಕ್ತಿಯಾಗಿದ್ದುದು, ಅವರು ತಮ್ಮ ತಂದೆಯವರ ಬಗ್ಗೆ ತಳೆದಿದ್ದ ಪೂಜ್ಯ ಭಾವನೆಯಿಂದಲೇ ಎಂದು ನಮಗೆ ಅನಿಸುತ್ತಿತ್ತು. ಶಿಷ್ಯರನ್ನು ದಂಡಿಸಲು ಅವರು ಅನುಸರಿಸುತ್ತಿದ್ದ ಮಾರ್ಗವೂ ವಿಶಿಷ್ಟವೇ! ಒಂದು ದಿನವೂ ಒಂದು ಅಪಶಬ್ದವೂ ಅವರ ಮಾತುಗಳಲ್ಲಿ ಬರುತ್ತಿರಲಿಲ್ಲ. ಇನ್ನು ಕೈ ಎತ್ತುವ ಪ್ರಶ್ನೆಯೇ ಇಲ್ಲ. ಆದರೂ ಶಿಷ್ಯರೆಲ್ಲ ಬಹುವಾಗಿ ಅವರನ್ನು ಭೀತಿಯಿಂದಲೇ ನೋಡುತ್ತಿದ್ದುದು! ಬಯ್ಯಲು ಅವರು ಬಳಸುತ್ತಿದ್ದ ಮಾತುಗಳೆಲ್ಲ ತರಕಾರಿ ಹೆಸರುಗಳೇ! ಸೋರೇಕಾಯಿ, ಹಾಗಲಕಾಯಿ, ಕುಂಬಳಕಾಯಿ, ಇತ್ಯಾದಿ. ಈಗ ನೆನೆಸಿಕೊಂಡರೆ ನಗುವಂತಾಗುತ್ತದೆ. ಆದರೆ, ಆಗ! ಆ ಬಯ್ಗಳವನ್ನೂ ಅವರ ಬಾಯಿಂದ ಬರಸಬಾರದೆಂದು ಛಲದಿಂದ, ಇಂದಿನ ಪಾಠವನ್ನು ನಾಳೆ, ಪುಸ್ತಕ ನೋಡಿಕೊಳ್ಳದೇ ಒಪ್ಪಿಸಿ, ಮುಂದುವರೆದು ಗೆದ್ದೆವೆಂದು ನಮಗೆ ಇಂದಿಗೂ ತೃಪ್ತಿ. ನಾವಿಬ್ಬರೂ ನಮ್ಮ ಗುರುಗಳಿಗೆ ಅಚ್ಚು ಮೆಚ್ಚಿನ ಶಿಷ್ಯರಾಗಿದ್ದೆವೆಂಬುದು ಬಹು ಹೆಮ್ಮೆ ಮೂಡಿಸುವ ಸಂಗತಿ.

ಪಾಠಕ್ರಮವೂ ಸ್ವಲ್ಪ ಕಠಿಣವೇ. ಒಂದು ಕೃತಿಯ ಸಂಗತಿಗಳೆಲ್ಲವನ್ನೂ ಅವರು ಪಾಠ ಮಾಡುತ್ತಿರಲಿಲ್ಲ. “ಸಂಗತಿ” ಎಂದರೇನು. ಅದರ ಔಚಿತ್ಯವೇನು? ಇತ್ಯಾದಿ ವಿವರಗಳನ್ನು ತಿಳಿಸಿ, ಒಂದೆರಡು ಸಂಗತಿಗಳನ್ನು ಮಾತ್ರ ಹೇಳಿಕೊಟ್ಟು, ಮಿಕ್ಕವನ್ನು ನಾವೇ ಯೋಚಿಸಿ ಮಾಡುವಂತೆ ಪ್ರಚೋದಿಸುತ್ತಿದ್ದರು. ಇದರಿಂದ ಮನೋಧರ್ಮದ ವಿಕಾಸಕ್ಕೆ ಎಂತಹ ಮಟ್ಟದಲ್ಲಿ ಅವಕಾಶವಾಯಿತೆಂಬುದು, ಅನುಭವಕ್ಕೆ ಸೇರಿದ ಸಂಗತಿಯಾಗಿದೆ. ಗುರುಗಳು ಬಾಯಿಯಲ್ಲಿ ಹಾಡಿ ತೋರಿಸುವುದು, ನಾವು ಬರೆದುಕೊಳ್ಳುವುದು! ಅಷ್ಟು ವರ್ಷಗಳು ಪಾಠ ನಡೆದರೂ, ನಮ್ಮ ಪುಸ್ತಕಗಳಲ್ಲಿ ಅವರ ಕೈ ಬರಹದ ಒಂದಕ್ಷರವೂ ಇಲ್ಲ. ಸಂಗೀತ ಕಿವಿಗೆ ಬೀಳುತ್ತಿದ್ದ ಹಾಗೆಯೇ, ಸ್ವರ ಪಡಿಸುವ ಚುರುಕುತನ ಇದರಿಂದ ಬೆಳೆಯಿತು. ಇದೇನು ಕಡಿಮೆ ಲಾಭವೇ? ಈ ರೀತಿ ಪಾಠಕ್ರಮ ಇತ್ತೀಚೆಗೆ ಇಲ್ಲವೆಂಬುದೇ, ಆ ಪಾಠ ಕ್ರಮದಲ್ಲಿನ ಲಾಭದ ಅರಿವಿರುವವರ ಕೊರಗು.

ಸನ್ಮಾನ್ಯರುಗಳಾದ ದೇವುಡು ನರಸಿಂಹ ಶಾಸ್ತ್ರಿ, ಸಿ.ಕೆ. ವೆಂಕಟರಾಮಯ್ಯ, ಅ.ನ.ಕೃ,ಪಿ. ಕೋದಂಡರಾವ್‌ ಮುಂತಾದ ಸಾಹಿತಿಗಳು ನಮ್ಮ ಗುರುಗಳ ಪರಮ ಮಿತ್ರರು. ಅ.ನ.ಕೃ ಅವರು ೪೫ ವರ್ಷಗಳಿಗೂ ಹಿಂದೆ “ಕರ್ನಾಟಕ ಕಲಾವಿದರು” ಗ್ರಂಥ ರಚಿಸಿದ್ದು, ಆ ಪುಸ್ತಕದಲ್ಲಿ ಸುಬ್ಬರಾಮಯ್ಯನವರ ವಿಷಯವೂ ಇದೆ. ವಿದ್ವಾಂಸರಾದ ಪಲ್ಲವಿ ಎಸ್‌. ಚಂದ್ರಪ್ಪ, ಚಂದ್ರಸಿಂಗ್‌, ಎಲ್‌. ರಾಜಾರಾಯರು, ಎಲ್‌.ಎಸ್‌. ನಾರಾಯಣಸ್ವಾಮಿ ಭಾಗವತರು ಸುಬ್ಬರಾಮಯ್ಯನವರ ಆಪ್ತರಲ್ಲಿ ಕೆಲವರು. ಸಂಗೀತದ ಬೆಳವಣಿಗೆಯಲ್ಲಿ ಅವರಿಗಿದ್ದ ಕಳಕಳಿ, ಶಿಷ್ಯರಲ್ಲಿದ್ದ ವಾತ್ಸಲ್ಯ, ಸಮಕಾಲೀನ ವಿದ್ವಾಂಸರ ಬಗೆಗಿದ್ದ ಸಹೃದಯತೆ ಅನನ್ಯವಾದುದು. ಹಣಕ್ಕಾಗಿ ಅವರು ಎಂದೂ ಪಾಠ ಹೇಳುತ್ತಿರಲಿಲ್ಲ. ಶ್ರೀ ತ್ಯಾಗರಾಜರ ಆರಾಧನೆಯನ್ನು ಬಹು ಆಸ್ಥೆಯಿಂದ ವರ್ಷಂಪ್ರತಿ ನಡೆಸುತ್ತಿದ್ದರು. ಈ ಸಂದರ್ಭಗಳಲ್ಲಿ ಅನೇಕಾನೇಕ ಪ್ರಮುಖ ವಿದ್ವಾಂಸರು ಸೇರುತ್ತಿದ್ದರು. ಅವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೂ ಹಾಡಲು ಅವಕಾಶ ನೀಡುತ್ತಿದ್ದರು. ಎಲ್ಲಿ ಯಾವ ವಿದ್ವತ್‌ ಗೋಷ್ಠಿಗಳು, ಸಮ್ಮೇಳನಗಳು ನಡೆದರೂ, ಸುಬ್ಬರಾಮಯ್ಯನವರು ಆಹ್ವಾನಿತರಾಗುತ್ತಿದ್ದರು. ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅನೇಕ ಕಿರಿಯ ವಿದ್ವಾಂಸರು ಬರೆದ ಸಂಗೀತ ಪುಸ್ತಕಗಳಿಗೆ ಮುನ್ನುಡಿ ಬರೆದು, ಬೆನ್ನು ತಟ್ಟಿ ಉತ್ತೇಜಿಸುತ್ತಿದ್ದರು.

ಮೈಸೂರಿನಲ್ಲಿ ಪ್ರಸನ್ನ ಸೀತಾರಾಮ ಮಂದಿರದಲ್ಲಿ ನಡೆದ ಸಂಗೀತ ಸಮ್ಮೇಳನಾಧ್ಯಕ್ಷರಾಗಿ ಗಾನಕಲಾ ಸಿಂಧು ಆದ ಸುಬ್ಬರಾಮಯ್ಯ  ನವರನ್ನು ದ್ವಾರಕಾ ಪೀಠವು ಗಾನಕಲಾ ಕುಶಲ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನಾದ ಸುಧಾ ನಿಧಿ ಎಂದು ಗೌರವಿಸಿ ೧೯೮೮ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಹೈದರಾಬಾದಿನ ಸರ್ಕಾರಿ ಕಲಾ ಮತ್ತು ಸಂಗೀತ ಮಹಾವಿದ್ಯಾಲಯದ ಗೌರವ ಇವರಿಗೆ ಸಂದಿತ್ತು.

ಶ್ರೀಮತಿ ಶೇಷಮ್ಮನವರು ಸುಬ್ಬರಾಮಯ್ಯನವರ ಸಹಧರ್ಮಿಣಿ. ಇವರಿಗೆ ಮೂವರು ಪುತ್ರರು, ನಾಲ್ವರು ಪುತ್ರಿಯರು. ಭೈರವಿ ಕೆಂಪೇಗೌಡರು ಸುಬ್ಬರಾಮಯ್ಯನವರ ಮಿತ್ರರಲ್ಲಿ ಒಬ್ಬರು. ಒಮ್ಮೆ ಆಕಸ್ಮಿಕವಾಗಿ ಕೆಂಪೇಗೌಡರು ಸುಬ್ಬರಾಮಯ್ಯನವರ ಮನೆಗೆ ಆಗಮಿಸಿದರು. ಪತಿಯ ಗೈರುಹಾಜರಿಯಲ್ಲಿ ಶೇಷಮ್ಮನವರು ಅತಿಥಿಗೆ ಊಟೋಪಚಾರಗಳನ್ನು ಮಾಡಿಸಿದರು. ಹಾಗೇ ವಿಶ್ರಮಿಸಿಕೊಳ್ಳುತ್ತಿದ್ದ ಕೆಂಪೇಗೌಡರು, ಹೊರಗೆ ‘ಹರೋಹರ’ ಎಂದು ಕೂಗುತ್ತ ಕಾವಡಿ ಹೋಗುತ್ತಿದ್ದ ಗುಂಪನ್ನು ನೋಡಿ ತಕ್ಷಣವೇ ಬೀದಿಗೆ ಹೋದವರು, ಹಾಗೆಯೇ ಹೊರಟೇ ಹೋದರು. ಕೆಲವು ನಿಮಿಷಗಳಲ್ಲೇ ಮನೆಗೆ ಮರಳಿದ ಸುಬ್ಬರಾಮಯ್ಯನವರು ತಮ್ಮ ಮಿತ್ರನನ್ನು ನೋಡಲಾಗದಿದ್ದುದಕ್ಕೆ ಮರುಗಿದರು. ಕೆಂಪೇಗೌಡರನ್ನು ಮತ್ತೆ ಯಾರೂ ಕಾಣಲಿಲ್ಲ. ಎಂತೆಂತಹ ಅಪರೂಪದ ವಿದ್ವಾಂಸರೂ ಸುಬ್ಬರಾಮಯ್ಯನವರಲ್ಲಿ ವಿಶೇಷವಾದ ಗೌರವ, ಪ್ರೀತಿ ಹೊಂದಿದ್ದರು.

ಅತಿಯಾದ ಓದುವಿಕೆಯಿಂದಲೋ ಏನೋ, ಮೊದಲು ಇರುಳು ಗುರುಡು ಆರಂಭವಾಗಿ ಕ್ರಮೇಣ ಸುಬ್ಬರಾಮಯ್ಯನವರ ದೃಷ್ಟಿ ನಷ್ಟವಾಯಿತು. ಶಸ್ತ್ರಚಿಕಿತ್ಸೆಯಿಂದಲೂ ಏನೂ ಪ್ರಯೋಜನವಾಗಲಿಲ್ಲ. ಅಂತಹ ಸಂದರ್ಭದಲ್ಲೂ, ದುಡ್ಡು ಕೊಟ್ಟು, ತಮಗೆ ಬೇಕಾದ ಪುಸ್ತಕಗಳನ್ನು ತರಿಸಿ ತಮ್ಮ ಕಿವಿಗೆ ಬೀಳುವಂತೆ ಅನ್ಯರಿಂದ ಓದಿಸಿ ಕೇಳುತ್ತಿದ್ದರು. ನಂತರ ಇತರ ವಿದ್ವಾಂಸರೊಡನೆ ಕುಳಿತು ಚರ್ಚಿಸುತ್ತಿದ್ದರು. ಅಂತಹ ಹಿಂಗದ ಜ್ಞಾನದಾಹ!

ಕರ್ನಾಟಕದಲ್ಲಿ, ಕರ್ನಾಟಕದ ವಿದ್ವಾಂಶರಿಗೇ ಮನ್ನಣೆ ದೊರಕುತ್ತಿರಲಿಲ್ಲವಾಗಿ, ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ, ಸುಬ್ಬರಾಮಯ್ಯನವರು ತಮ್ಮಂತೆಯೇ ಚಿಂತನ ಪರರಾಗಿದ್ದ ಚಿಂತಲಪಲ್ಲಿ ರಾಮಚಂದ್ರರಾವ್‌, ಎಲ್‌.ಎಸ್‌, ನಾರಾಯಣ ಸ್ವಾಮಿ ಭಾಗವತರು, ಆನೂರ್ ಶ್ಯಾಮಣ್ಣ, ಪಿ. ಭುವನೇಶ್ವರಯ್ಯ, ಎಲ್‌.ಎಸ್‌. ರಾಜಾರಾವ್‌, ವಿದುಷಿ ಆರ್. ತಂಗಮ್ಮ, ಕುಲಿತ್ತಲೈ ಕೃಷ್ಣಸ್ವಾಮಿ ರಾವ್‌, ಅರುಣಾಚಲಪ್ಪ ಮುಂತಾದವರೊಡನೆ ಸೇರಿ “ಮೈಸೂರು ಸಂಗೀತ ಸಭಾ” ಎಂಬ ಸಂಸ್ಥೆಯನ್ನು ಆರಂಭಿಸಿ, ಪ್ರತಿ ತಿಂಗಳು ಶಂಕರಯ್ಯ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.

ಶಾಸ್ತ್ರೀಯ ಸಂಗೀತದ ಲಕ್ಷ್ಯ-ಲಕ್ಷಣಗಳೆರಡರಲ್ಲೂ ಸವ್ಯಸಾಚಿಯಂತೆ ನಿಷ್ಣಾತರಾಗಿದ್ದ ಸುಬ್ಬರಾಮಯ್ಯನವರು ೧೯೮೬ರ ಆಗಸ್ಟ್‌ ೧೬ರಂದು ಇಹದ ವ್ಯಾಪಾರವನ್ನು ತ್ಯಜಿಸಿದರು.

‘ನೀನೊಂಧು ಸಂಗೀತ ಶಾಲೆಯನ್ನು ಸ್ಥಾಪಿಸು’ ಎಂದು ನಮ್ಮ ಗುರುಗಳು ನನಗೆ ಹೇಳುತ್ತಲೇ ಇದ್ದರು. ‘ರಾಗಶ್ರೀ ಕಾಲೇಜ್‌ ಆಫ್‌ ಮ್ಯೂಸಿಕ್‌’ ಅವರ ಆದೇಶಪಾಲನೆಯ ಕ್ರಿಯೆಯೇ ಆಗಿದ್ದರೂ, ಅವರು ಜೀವಿಸಿರುವಾಗಲೇ ಆಗಿದ್ದರೆ, ಅವರಿಂದಲೇ ಉದ್ಘಾಟನೆ ಮಾಡಿಸಿ ಆಶೀರ್ವಾದ ಪಡೆಯಬಹುದಿತ್ತು. ಅದು ಸಾಧ್ಯವಾಗಲಿಲ್ಲ ಎಂಬ ಕೊರಗು ಕಾಡುತ್ತಿತ್ತು. ೧೯೯೩ರಲ್ಲಿ ‘ಶ್ರೀ ಡಿ. ಸುಬ್ಬರಾಮಯ್ಯ ಫೈನ್‌ ಆರ್ಟ್ಸ್ ಟ್ರಸ್ಟ್‌’ ಪ್ರಾರಂಭವಗಿ ಕಾರ್ಯನಿರತವಾದ ಮೇಲೆ, ಈ ಕೊರಗು ಕರಗುತ್ತಿದೆ.

ಶ್ರೀ ಸುಬ್ಬರಾಮಯ್ಯನವರ ಶಿಷ್ಯರು ದೇಶದ ಎಲ್ಲೆಡೆಯೂ ವ್ಯಾಪಿಸಿರುವುದರೊಡನೆ, ವಿದೇಶಗಳಲ್ಲಿಯೂ ಕಾರ್ಯತತ್ವರರಾಗಿರುವರೆಂಬುದು ಹೆಮ್ಮೆಯ ವಿಷಯ.