ಡೀಗೊ ಅರ್ಮಾಂಡೊ ಮರಡೋನ (ಜನನ: ೩೦ ಅಕ್ಟೋಬರ್ ೧೯೬೦) ಅರ್ಜೆಂಟೀನಾದ ಮಾಜಿ ಫುಟ್‌ಬಾಲ್ ಆಟಗಾರ. ಸದ್ಯ ಅರ್ಜೆಂಟೀನಾ ರಾಷ್ಟ್ರೀಯ ತಂಡದ ಕೋಚ್ ಆಗಿರುವ ಮರಡೋನ ವಿಶ್ವದ ಸರ್ವಶ್ರೇಷ್ಠ ಫುಟ್‌ಬಾಲ್ ಆಟಗಾರರಲ್ಲೊಬ್ಬರೆಂದು ಗುರುತಿಸಲ್ಪಡುತ್ತಾರೆ. ಫಿಫಾ (ಫುಟ್‌ಬಾಲ್‌ನ ವಿಶ್ವ ಆಡಳಿತ ಸಂಸ್ಥೆ) ಶತಮಾನದ ಆಟಗಾರ ಪ್ರಶಸ್ತಿಗಾಗಿ ನಡೆಸಿದ ಅಂತರಜಾಲ ಸಮೀಕ್ಷೆಯಲ್ಲಿ ಅವರು ಅತೀ ಹೆಚ್ಚು ಮತ ಪಡೆದಿದ್ದರು. ನಂತರ ಅವರು ಪ್ರಶಸ್ತಿಯನ್ನು ಪೀಲೆ ಜೊತೆಹಂಚಿಕೊಂಡರು.

ವೃತ್ತಿಪರರಾಗಿ ಅವರು ಅರ್ಜೆಂಟೀನೋಸ್ ಜೂನಿಯರ‍್ಸ್, ಬೋಕಾ ಜೂನಿಯರ‍್ಸ್, ಬಾರ್ಸಿಲೋನಾ, ನ್ಯೂವೆಲ್ಸ್ ಓಲ್ಡ್ ಬಾಯ್ಸ್ ಮತ್ತು ನೆಪೋಲಿ ಕ್ಲಬ್ ಪರ ವಿಶ್ವದಾಖಲೆ ಮೊತ್ತದ ಸಂಭಾವನೆ ಪಡೆದು ಆಡಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ೯೧ ಬಾರಿ ಅರ್ಜೆಂಟೀನಾವನ್ನು ಪ್ರತಿನಿಧಿಸಿರುವ ಮರಡೋನಾ, ೩೪ ಗೋಲು ಹೊಡೆದಿದ್ದಾರೆ. ಅವರು ನಾಲ್ಕು ಫಿಫಾ ವಿಶ್ವಕಪ್‌ಗಳಲ್ಲಿ ಆಡಿದ್ದಾರೆ. ೧೯೮೬ರಲ್ಲಿ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದಾಗ ಮರಡೋನ ತಂಡದ ನಾಯಕರಾಗಿದ್ದರು. ತಂಡ ಫೈನಲ್‌ನಲ್ಲಿ ಪಶ್ಚಿಮ ಜರ್ಮನಿಯನ್ನು ಸೋಲಿಸಿತ್ತು.

ಆ ವಿಶ್ವಕಪ್‌ನ ಶ್ರೇಷ್ಠ ಆಟಗಾರನೆನಿಸಿ ಮರಡೋನ ಬಂಗಾರದ ಚೆಂಡಿನ ಕೊಡುಗೆ ಪಡೆದಿದ್ದರು. ಅರ್ಜೆಂಟಿನಾ ೨-೧ರಿಂದ ಜಯಿಸಿದ್ದ ಆ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯ ಎರಡು ಕಾರಣಗಳಿಗಾಗಿ ಇತಿಹಾಸ ಪ್ರಸಿದ್ಧವಾಯಿತು. ಆ ಪಂದ್ಯದಲ್ಲಿ ಅರ್ಜೆಂಟೀನಾದ ಮೊದಲ ಗೋಲನ್ನು ಮರಡೋನ ಕೈಯಿಂದ ಹೊಡೆದಿದ್ದರು. ಆದರೆ, ರೆಫ್ರಿಗೆ ಅದು ತಿಳಿದಿರಲಿಲ್ಲ. ಹಾಗಾಗಿ ಮರಡೋನಾಗೆ ಯಾವುದೇ ಶಿಕ್ಷೆಯಾಗಲಿಲ್ಲ. ಆ ಗೋಲು ಹ್ಯಾಂಡ್ ಆಫ್ ಗಾಡ್ (ದೇವರ ಕೈ) ಗೋಲು ಎಂದೇ ಪ್ರಖ್ಯಾತವಾಯಿತು. ೨ನೇ ಗೋಲನ್ನು ಮರಡೋನ, ೬ ಇಂಗ್ಲೆಂಡ್ ಆಟಗಾರರನ್ನು ವಂಚಿಸಿ ೬೦ಮೀಟರ್ ದೂರದಿಂದ ಗಳಿಸಿದ್ದರು. ಇದನ್ನು ಶತಮಾನದ ಗೋಲು ಎಂದು ಪರಿಗಣಿಸಲಾಗಿದೆ.

ನಾನಾ ಕಾರಣಗಳಿಗಾಗಿ ಮರಡೋನರನ್ನು ಕ್ರೀಡಾ ಜಗತ್ತಿನ ಅತ್ಯಂತ ವಿವಾದಾತ್ಮಕ ಹಾಗೂ ಸುದ್ದಿ ಮೌಲ್ಯದ ವ್ಯಕ್ತಿ ಎಂದು ಗುರುತಿಸಲಾಗುತ್ತದೆ. ೧೯೯೧ರಲ್ಲಿ ಇಟಲಿಯಲ್ಲಿ ಆಡುತ್ತಿದ್ದಾಗ ಕೊಕೇನ್ ಸೇವಿಸಿದ್ದು ಸಾಬೀತಾದ ಕಾರಣ ಫುಟ್‌ಬಾಲ್‌ನಿಂದ ೧೫ ತಿಂಗಳು ನಿಷೇಧ ಶಿಕ್ಷೆ ಹೇರಲಾಗಿತ್ತು. ಅಮೆರಿಕದಲ್ಲಿ ನಡೆದ ೧೯೯೪ರ ವಿಶ್ವಕಪ್ ಸಂದರ್ಭದಲ್ಲಿ ಎಫಿಡ್ರಿನ್ ಸೇವಿಸಿ ಸಿಕ್ಕಿಬಿದ್ದ ಕಾರಣ ಮನೆಗೆ ಕಳಿಸಲಾಗಿತ್ತು.

೧೯೯೭ರಲ್ಲಿ ತಮ್ಮ ೩೭ನೇ ಹುಟ್ಟುಹಬ್ಬದ ದಿನ ನಿವೃತ್ತರಾದ ಮರಡೋನ, ಆ ನಂತರದ ದಿನಗಳಲ್ಲಿ ಅನಾರೋಗ್ಯ ಮತ್ತು ಬೊಜ್ಜಿನಿಂದ ಬಳಲಿದರು. ಕೊಕೇನ್ ಸೇವನೆಯಿಂದ ಅವರ ಆರೋಗ್ಯ ಹದಗೆಟ್ಟಿತ್ತು. ೨೦೦೫ರಲ್ಲಿ ಅವರು ಬೊಜ್ಜು ನಿಯಂತ್ರಿಸಲು ಉದರ ಶಸ್ತ್ರಚಿಕಿತ್ಸೆಗೆ ಒಳಗಾದರು. ಕೊಕೇನ್ ವ್ಯಸನದಿಂದಲೂ ಹೊರಬಂದ ಅವರು ಅರ್ಜೆಂಟೀನಾದಲ್ಲಿ ಟಿವಿ ನಿರೂಪಕನಾಗಿಯೂ ಹೆಸರು ಮಾಡಿದರು.

ಬಾಯಿ ಬಡುಕ ಪ್ರವೃತ್ತಿಯಿಂದ ಮರಡೋನ ಯಾವಾಗಲೂ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಿರುತ್ತಾರೆ. ಅವರಿಗೆ ಕೋಚ್ ಆಗಿ ಯಾವುದೇ ಪೂರ್ವಾನುಭವ ಇಲ್ಲದಿದ್ದರೂ, ೨೦೦೮ರಲ್ಲಿ ಅರ್ಜೆಂಟೀನಾ ಫುಟ್‌ಬಾಲ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡರು. ಆದರೂ, ೨೦೧೦ರ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಅರ್ಜೆಂಟೀನಾ ಪರದಾಟ ನಡೆಸಬೇಕಾಯಿತು. ಬೊಲಿವಿಯ, ಬ್ರೆಜಿಲ್ ಹಾಗೂ ಪರಗ್ವೆ ವಿರುದ್ಧ ಹೀನಾಯವಾಗಿ ಸೋತು ತಂಡ ೪೦ ವರ್ಷಗಳಲ್ಲಿ ಮೊದಲ ಬಾರಿ ವಿಶ್ವಕಪ್ ಅರ್ಹತೆಯಿಂದ ವಂಚಿತವಾಗುವ ಅಪಾಯಕ್ಕೆ ಸಿಲುಕಿತ್ತು. ಕೊನೆಗೂ ದಕ್ಷಿಣ ಅಮೆರಿಕದ ಅರ್ಹತಾ ಟೂರ್ನಿಯಲ್ಲಿ ೪ನೇ ತಂಡವಾಗಿ ಅರ್ಹತೆ ಸಂಪಾದಿಸಿತು. ಆ ಬಳಿಕ ಟೀಕಾಕಾರರನ್ನು ಉಗ್ರವಾಗಿ ತರಾಟೆಗೆ ತೆಗೆದುಕೊಂಡ ಮರಡೋನ, ಅಶ್ಲೀಲ ಮಾತಿನಿಂದ ಪತ್ರಕರ್ತರನ್ನು ನಿಂದಿಸಿ ವಿವಾದಕ್ಕೆ ಸಿಲುಕಿದರು. ಇದಕ್ಕಾಗಿ ಫಿಫಾ ಅವರಿಗೆ ಫುಟ್‌ಬಾಲ್ ಚಟುವಟಿಕೆಗಳಿಂದ ಎರಡು ತಿಂಗಳ ನಿಷೇಧ ವಿಧಿಸಿತು.

ವೈಯಕ್ತಿಕ ಬದುಕು:
ಮರಡೋನ ತಂದೆ ಡೀಗೊ ಮರಡೋನ ಸೀನಿಯರ್ ಮತ್ತು ತಾಯಿ ದಲ್ಮಾ ಸಾಲ್ವಡೋರ್ ಫ್ರಾಂಕೊ.

ಮರಡೋನ ೧೯೮೯ ನವೆಂಬರ್ ೭ರಂದು ತಮ್ಮ ದೀರ್ಘ ಕಾಲದ ಗೆಳತಿ ಕ್ಲಾಡಿಯಾ ವಿಲ್ಲಾಫೇನ್‌ರನ್ನು ವರಿಸಿದರು. ಮದುವೆಗೆ ಮುನ್ನವೇ ಅವರಿಗೆ ಇಬ್ಬರು ಹೆಣ್ಣು ಮಕ್ಕಳು (ದಲ್ಮಾ ನೆರಿಯ ಮತ್ತು ಜಿಯಾನ್ನಿನ ದಿನೊರಾ) ಜನಿಸಿದ್ದರು. ತಾನು ಯಾವಾಗಲೂ ಪತ್ನಿ ಕ್ಲಾಡಿಯಾಗೆ ನಿಷ್ಠನಾಗಿರುತ್ತಿರಲಿಲ್ಲ ಎಂದು ಮರಡೋನ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ.

೨೦೦೪ರಲ್ಲಿ ಮರಡೋನ ಮತ್ತು ವಿಲ್ಲಾಫೇನ್ ವಿಚ್ಚೇದನ ಪಡೆದರು. ಅವರಿಬ್ಬರಿಗೆ ಅದೇ ಸೂಕ್ತ ದಾರಿ ಎಂದು ಮಗಳು ದಲ್ಮಾ ಬಲವಂತ ಮಾಡಿದ್ದಳು. ಆನಂತರವೂ ಅವರಿಬ್ಬರು ಸ್ನೇಹಿತರಾಗಿಯೇ ಉಳಿದಿದದ್ದಾರೆ.

ವಿಚ್ಚೇದನ ಪ್ರಕ್ರಿಯೆ ಸಂದರ್ಭದಲ್ಲಿ ಮರಡೋನ ತಾವು ಡೀಗೋ ಸಿನಾಗ್ರ ಎಂಬ ಹುಡುಗನಿಗೂ ತಂದೆಯಾಗಿರುವುದನ್ನು ಒಪ್ಪಿಕೊಂಡರು. ೧೯೯೩ರಲ್ಲೇ ಇಟಲಿಯ ನ್ಯಾಯಾಲಯವೊಂದು ಇದೇ ತೀರ್ಪು ನೀಡಿತ್ತು. ಆದರೆ, ಆಗ ಮರಡೋನ ಒಪ್ಪಿಕೊಂಡಿರಲಿಲ್ಲ. ಕೊನೆಗೂ ೨೦೦೩ರಲ್ಲಿ ಅವರು ನೇಪಲ್ಸ್ ಪರ ಆಡುತ್ತಿದ್ದ ಸಂದರ್ಭದಲ್ಲಿ ತಮ್ಮ ಮಗನನ್ನು ಭೇಟಿ ಮಾಡಿದರು.

ವಿಚ್ಚೇದನದ ಬಳಿಕ ಕ್ಲಾಡಿಯ ರಂಗಭೂಮಿ ಕಡೆ ವಾಲಿದ್ದಾರೆ. ದೊಡ್ಡ ಮಗಳು ದಲ್ಮಾ ನಟಿಯಾಗುವ ಯತ್ನದಲ್ಲಿದ್ದಾಳೆ. ೨ನೇ ಮಗಳು ಜಿಯನ್ನಿನಾ ಅಥ್ಲೆಟಿಕೊ ಮ್ಯಾಡ್ರಿಡ್ ಕ್ಲಬ್ ಆಟಗಾರ ಸೆರ್ಜಿಯೊ ಅಗ್ಯುರೊರನ್ನು ವಿವಾಹವಾಗಿದ್ದಾಳೆ. ಮರಡೋನ ಮಗ ಸಿನಾಗ್ರ ಇಟಲಿಯಲ್ಲಿ ಫುಟ್‌ಬಾಲ್ ಆಟಗಾರ.

ಅಭಿಮಾನಿಗಳ ಆರಾಧನೆ:
೨೦೦೩ರಲ್ಲಿ ಅವರ ೪೩ನೇ ಹುಟ್ಟುಹಬ್ಬದ ದಿನ ಅರ್ಜೆಂಟೀನಾ ಅಭಿಮಾನಿಗಳು ರೊಸಾರಿಯೋದಲ್ಲಿ ಮರಡೋನ ಹೆಸರಲ್ಲಿ ಚರ್ಚ್ ಆರಂಭಿಸಿದರು. ಅಂದಿನಿಂದ ಮರಡೋನ ಶಕೆಯ ೪೩ನೇ ವರ್ಷ ಆರಂಭ ಎಂದು ಸಾರಲಾಯಿತು.

ರಾಜಕೀಯ ದೃಷ್ಟಿಕೋನ:
೯೦ರ ದಶಕದಲ್ಲಿ ಬಲ ಪಂಥೀಯರನ್ನುಬೆಂಬಲಿಸುತ್ತಿದ್ದ ಮರಡೋನ ಇತ್ತೀಚಿನ ವರ್ಷಗಳಲ್ಲಿ ಎಡ ಪಂಥೀಯರ ಸಿದ್ಧಾಂತಗಳ ಬಗ್ಗೆ ಅನುಕಂಪ ಬೆಳೆಸಿಕೊಂಡಿದ್ದಾರೆ. ಕ್ಯೂಬಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಫಿಡೆಲ್ ಕ್ಯಾಸ್ಟ್ರೋ ಸ್ನೇಹ ಬೆಳೆಸಿದ್ದರು. ವೆನಿಜುವೆಲ ಅಧ್ಯಕ್ಷ ಹೂಗೊ ಚೆವೆಜ್ ಬಗ್ಗೆಯೂ ಮರಡೋನಾಗೆ ಪ್ರೀತಿ. ಅವರು ತಮ್ಮ ಮೈಮೇಲೆ ಕ್ಯಾಸ್ಟ್ರೊ ಮತ್ತು ಚೆವೆಜ್‌ರ ಹಚ್ಚೆ ಹಾಕಿಸಿಕೊಂಡಿದ್ದಾರೆ. ಮರಡೋನ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್‌ರ ಕಟು ವಿರೋಧಿಯೂ ಹೌದು. ಅವರನ್ನು ಮಾನವ ಕಸದತೊಟ್ಟಿ ಎಂದು ಮರಡೋನ ಜರಿದಿದ್ದರು.

ಹಣಕಾಸು:
ಮರಡೋನ ಇಟಲಿ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ೩೭ ದಶಲಕ್ಷ ಯುರೊ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ೨೦೦೯ರ ಮಾರ್ಚ್‌ನಲ್ಲಿ ಪ್ರಕಟಿಸಿದ್ದರು. ಅದರಲ್ಲಿ೨೩.೫ ದಶಲಕ್ಷ ಯುರೋ ಅವರ ಮೂಲ ಬಾಕಿ ಮೇಲಿನ ಬಡ್ಡಿಯಾಗಿತ್ತು. ಮರಡೋನ ಇಲ್ಲಿಯವರೆಗೆ ೪೨,೦೦೦ ಯುರೋ, ಎರಡು ದುಬಾರಿ ಕೈಗಡಿಯಾರ, ಒಂದು ಜೊತೆ ಕಿವಿಯೋಲೆ ಮಾತ್ರ ನೀಡಿದ್ದಾರೆ ಎಂದು ಇಟಲಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತಕ್ಕೂ ಬಂದಿದ್ದರು:

ಮರಡೋನ ೨೦೦೯ರ ಆರಂಭದಲ್ಲಿ ಭಾರತಕ್ಕೂ ಬಂದಿದ್ದರು. ಕೋಲ್ಕತ್ತದಲ್ಲಿ ಫುಟ್‌ಬಾಲ್ ಅಕಾಡೆಮಿಯೊಂದರ ಉದ್ಘಾಟನೆಗೆ ಆಗಮಿಸಿದ್ದ ಮರಡೋನರನ್ನು ಸ್ವಾಗತಿಸಲು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಒಂದು ಲಕ್ಷ ಜನ ನೆರೆದಿದ್ದರು.