ಅಮ್ಮ, ಅಪ್ಪ ನಮ್ಮನ್ನು ಅಕ್ಕರೆಯಿಂದ ಬೆಳೆಸುತ್ತಾರೆ. ನಮ್ಮ ಆರೋಗ್ಯವನ್ನು ಕಾಪಾಡುತ್ತಾರೆ. ವಿದ್ಯೆ ಕಲಿಯುವಂತೆ ನಮ್ಮನ್ನು ಪ್ರೊತ್ಸಾಹಿಸುತ್ತಾರೆ. ನಮ್ಮ ಅಣ್ಣ, ಅಕ್ಕ, ತಾಯಿ-ತಂದೆಗಳಿಗೆ ಈ ಕೆಲಸದಲ್ಲಿ ಸಹಾಯ ಮಾಡುತ್ತ ನಮ್ಮ ರಕ್ಷಣೆಗೆ ನಿಲ್ಲುತ್ತಾರೆ. ಇವರೆಲ್ಲರಿಗೆ ಮುಖ್ಯವಾಗಿ ಬೇಕಾದದ್ದು ನಾವು ಒಳ್ಳೆಯ ಗುಣ ಕಲಿತು ಮುಂದಕ್ಕೆ ಬರುವುದು. ಒಳ್ಳೆಯ ಕೆಲಸ ಮಾಡಿದಾಗ ’ಭೇಷ್’ ಅನ್ನುತ್ತಾರೆ. ತಪ್ಪು ಮಾಡಿದಾಗ ಇದು ಸರಿಯಲ್ಲ ಎಂದು ಹೇಳಿ ಒಳ್ಳೆಯ ಮಾರ್ಗ ತೋರಿಸಿಕೊಡುತ್ತಾರೆ – ಇದು ನಮ್ಮ ಮನೆಯ ವಾತಾವರಣ.

ಇನ್ನಷ್ಟು ದಿನ ಕಳೆದ ಮೇಲೆ ನಾವು ಶಾಲೆಗೆ ಹೋಗುತ್ತೇವೆ. ಅಲ್ಲಿ ನಮ್ಮ ವಯಸ್ಸಿಗೆ ಸಮಾನರಾದ ಗೆಳೆಯರ ಜೊತೆಗೆ ಆಟ ಆಡುತ್ತ, ಪಾಠ ಕಲಿಯುತ್ತ ಕುಣಿದಾಡುತ್ತೇವೆ. ಏಟು, ನೋವು ತಡೆದುಕೊಳ್ಳುವ ಶಕ್ತಿ ತಾನಾಗಿಯೇ ಬರುತ್ತದೆ. ನಮ್ಮ ಉಪಾಧ್ಯಾಯರು ಪ್ರೀತಿಯಿಂದ ನಮ್ಮ ಜೊತೆ ಮಾತನಾಡುತ್ತಾರೆ. ನಮಗೆ ಕತೆ, ಪದ್ಯ ಹೇಳಿಕೊಟ್ಟು, ಚಿತ್ರ ತೋರಿಸುತ್ತಾರೆ. ಹೊಸ ಹೊಸ ವಿಷಯಗಳನ್ನು ತಿಳಿಸಿಕೊಡುತ್ತಾರೆ. ಅವರು ಹೇಳಿಕೊಟ್ಟಂತೆ ನಾವು ಕಲಿತು ಬುದ್ಧಿವಂತರಾಗಬೇಕೆಂಬ ಅಪೇಕ್ಷೆ ಅವರಿಗೆ. ಹಾಗೆ ಮಾಡದೆ ಹೋದಾಗ ಒಮ್ಮೊಮ್ಮೆ ದಂಡಿಸುತ್ತಾರೆ. ಆದರೆ ಅವರು ತೋರಿಸಿದ ಮಾರ್ಗದಂತೆ ನಡೆದಾಗ ಪ್ರೀತಿಯಿಂದ ಬೆನ್ನು ತಟ್ಟುತ್ತಾರೆ, ಇದು ವಿದ್ಯಾಲಯ.

ಮುಂದೆ ದೊಡ್ಡವರಾಗಿ, ವಿದ್ಯಾವಂತರಾಗಿ ಯಾವುದೋ ಒಂದು ಕೆಲಸ ಮಾಡುತ್ತ ಸ್ವತಂತ್ರ ಜೀವನ ನಡೆಸುವುದಕ್ಕೆ ನಾವು ಸಿದ್ಧರಾಗುತ್ತೇವೆ. ಬಾಲ್ಯದಲ್ಲಿ ಕಂಡು ಅನುಭವಿಸಿದ ಅನೇಕ ಸಂಗತಿಗಳನ್ನು ಈಗ ಅರ್ಥ ಮಾಡಿಕೊಳ್ಳಲು ಬಯಸುತ್ತೇವೆ. ಅಮ್ಮ, ಅಪ್ಪ, ಅಕ್ಕ, ಅಣ್ಣ ನಮಗಾಗಿ ಪಟ್ಟ ಅನುಭವಗಳನ್ನು ಕೃತಜ್ಞತೆಯಿಂದ ನೆನೆಯುತ್ತೇವೆ. ಅವರ ಬಗ್ಗೆ ಆದರ ಮೂಡುತ್ತದೆ, ಬಲಗೊಳ್ಳುತ್ತದೆ.

ಮನೆ, ಶಾಲೆ, ಕಾಲೇಜುಗಳಲ್ಲಿ ಪಡೆದ ಅನುಭವಗಳು ಮತ್ತು ಕಲಿತ ವಿಷಯಗಳಿಂದ ನಾವು ಪ್ರಭಾವಿತರಾಗುತ್ತೇವೆ. ಮಕ್ಕಳಿಗಾಗಿ ಉಪವಾಸ ಮಾಡುವ, ಚಳಿಯಲ್ಲಿ ನಡುಗುವ ತಂದೆತಾಯಿಯರ ವಿಷಯದಲ್ಲಿ ಗೌರವ, ಅನುಕಂಪ ಮೂಡುತ್ತದೆ.

ನಮ್ಮ ಮನೆ, ಮಕ್ಕಳನ್ನು ಬಿಟ್ಟು ಸುತ್ತಮುತ್ತಲೂ ನೋಡಿದಾಗ ವ್ಯಥೆ ಹೆಚ್ಚುತ್ತದೆ. ಬಡತನದಿಂದಲೋ ತಂದೆ ತಾಯಿಯನ್ನು ಕಳೆದುಕೊಂಡೋ ವಿದ್ಯಾಭ್ಯಾಸವನ್ನು ಮುಂದು ವರಿಸುವ ಭಾಗ್ಯ ಕಳೆದುಕೊಂಡವರನ್ನು ನೋಡಿದಾಗ ಅಯ್ಯೋ ಎನ್ನಿಸುತ್ತದೆ.

ನಾವು ಪ್ರಬುದ್ಧರಾದಂತೆ ನಮ್ಮ ಸಾಮಾಜಿಕ ದೃಷ್ಟಿ ವಿಶಾಲವಾಗುತ್ತದೆ. ತಾಯಿ, ತಂದೆ, ಬಂಧು-ಬಳಗ ಮಾತ್ರ ವಲ್ಲ; ಸುತ್ತಮುತ್ತಲಿನ ಜನ, ಇಡಿಯ ಮಾನವ ಕುಲವೇ ಒಂದು ವಿಶ್ವವ್ಯಾಪಿಯಾದ ಕುಟುಂಬ. ಒಬ್ಬರಿಂದ ಸಹಾಯ ಪಡೆದರೆ ಮತ್ತೊಬ್ಬರಿಗೆ ಸಹಾಯ ನೀಡಬೇಕು. ನಮ್ಮ ದುಡಿತ, ಸಂಪಾದನೆ ಒಬ್ಬರಿಗೆ ಮಾತ್ರ ಮೀಸಲಿಲ್ಲ. ಯಾಕೆಂದರೆ ಅಂಥ ಸಾಮರ್ಥ್ಯವನ್ನು ಪಡೆಯಲು ನಮಗೆ ಹಲವು ವ್ಯಕ್ತಿಗಳ ಪ್ರೀತಿ, ಸಹಾನುಭೂತಿ, ಪ್ರತ್ಯಕ್ಷ ನೆರವು ಕಾರಣವಾಗಿವೆ.

ಇದು ಸಮಾಜಧರ್ಮ. ಇದನ್ನು ಅರಿತು ಆಚರಿಸುವವರು ಅಸಾಮಾನ್ಯ ಪುರುಷರೆನಿಸಿಕೊಳ್ಳುತ್ತಾರೆ.

ಬಾಲ್ಯ

ಕನ್ನಡನಾಡಿನ ಇಂಥ ಮಹಾವ್ಯಕ್ತಿಗಳಲ್ಲಿ ಚನ್ನಬಸಪ್ಪ ಒಬ್ಬರು.

ಚನ್ನಬಸಪ್ಪನವರ ಪೂರ್ವಜರು ಬೆಳಗಾವಿ ಜಿಲ್ಲೆಯ ಗೋಕಾವಿಯವರು. ತಂದೆ ಬಸಲಿಂಗಪ್ಪ, ತಾಯಿ ತಿಪ್ಪವ್ವ; ವರ್ತಕ ಮನೆತನ. ಬಸಲಿಂಗಪ್ಪ ವ್ಯಾಪಾರದ ನಿಮಿತ್ತ ಧಾರವಾಡಕ್ಕೆ ಬಂದು ಒಂದು ಚಿಕ್ಕ ಅಂಗಡಿಯನ್ನು ತೆರೆದಿದ್ದರು. ಸುಖದ ದಿನಗಳು ಬಹುಕಾಲ ಉಳಿಯಲಿಲ್ಲ. ಬಸಲಿಂಗಪ್ಪ ಆಕಸ್ಮಿಕವಾಗಿ ತೀರಿಕೊಂಡರು.

ಆಗ ಚನ್ನಬಸಪ್ಪನಿಗೆ ಸುಮಾರು ಆರು ವರ್ಷ. ಮನೆಯಲ್ಲಿ ಮತ್ತೊಬ್ಬ ಹಿರಿಯರಿಲ್ಲ. ತಿಪ್ಪವ್ವ ಧೈರ್ಯಗೆಡದೆ ಮನೆತನದ ಹೊಣೆ ಹೊತ್ತುಕೊಂಡು ಚನ್ನಬಸಪ್ಪನ ವಿದ್ಯಾಭ್ಯಾಸಕ್ಕೆ ಅಣಿಮಾಡಿದಳು. ಸಾಲೀಮಠದ ಶಿವರುದ್ರಯ್ಯ ಆಗ ಶಾಲಾ ಮಾಸ್ತರರು. ಮಗನನ್ನು ಅವರ ಬಳಿಗೆ ಕರೆದೊಯ್ದು ಅವನಿಗೆ ಓದು ಹೇಳಿಕೊಡುವಂತೆ ಬೇಡಿಕೊಂಡಳು.

ಅಚ್ಚುಮೆಚ್ಚಿನ ಶಿಷ್ಯ

ಸುಮಾರು ೧೪೦ ವರ್ಷಗಳ ಹಿಂದಿನ ಮಾತು. (ಚನ್ನಬಸಪ್ಪನ ಜನ್ಮ ೧೮೩೩) ಅಂದಿನ ಕಾಲದಲ್ಲಿ ಅಯ್ಯನವರು ತಮ್ಮ ಮಠಗಳಲ್ಲಿ ಶಾಲೆಗಳನ್ನು ನಡೆಸುತ್ತಿದ್ದರು. ನೀತಿವಿಚಾರಗಳನ್ನೂ ಗಣಿತ ಪಾಠಗಳನ್ನೂ ಕಾವ್ಯಭಾಗ ಗಳನ್ನೂ ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತಿತ್ತು. ಕ್ರಮವಾದ ಶಾಲಾ ತರಗತಿಗಳು ಇರಲಿಲ್ಲ. ಬಾಯಿಲೆಕ್ಕ, ಗಣಿತ, ಕನ್ನಡ, ಮರಾಠಿ ಇವು ಪಾಠದ ವಿಷಯಗಳು. ವಿದ್ಯಾರ್ಥಿಯ ಬುದ್ಧಿಶಕ್ತಿಯನ್ನು ಆತನು ಬಾಯಿಲೆಕ್ಕದಲ್ಲಿ ತೋರುತ್ತಿದ್ದ ಜಾಣ್ಮೆಯಿಂದ ಗುರುತಿಸಲಾಗುತ್ತಿತ್ತು. ಮುಂದೆ ಗಣಿತ ವಿಷಯದಲ್ಲಿ ಹೆಚ್ಚಿನ ಪ್ರೌಢಿಮೆ ಪಡೆಯಲು ಅದು ಮುಖ್ಯವಾದ ಅಡಿಪಾಯ. ನಿತ್ಯವ್ಯವಹಾರಕ್ಕೆ ಸಂಬಂಧಿಸಿದ ಗಣಿತದ ಲೆಕ್ಕಗಳನ್ನು ಬರವಣಿಗೆಯ ಸಹಾಯವಿಲ್ಲದೆ ನೆನಪಿನ ಶಕ್ತಿಯಿಂದ ಬಿಡಿಸುವ ಈ ಪದ್ಧತಿಯು ಅಂದಿನ ಶಿಕ್ಷಣಕ್ರಮದ ಜೀವಾಳವಾಗಿತ್ತು.

ಅಯ್ಯನವರು ಪಾಠಗಳನ್ನು ನೆನಪಿನ ಆಧಾರದಿಂದಲೇ ಹೇಳಿಕೊಡುತ್ತಿದ್ದರು. ವಿದ್ಯಾರ್ಥಿಗಳು ಕಂಠಪಾಠದಿಂದ ಕಲಿಯುತ್ತಿದ್ದರು. ಪಠ್ಯಪುಸ್ತಕಗಳು ಇರಲಿಲ್ಲ. ಕಾಗದ, ಲೆಕ್ಕಣಿಕೆಗಳನ್ನು ವಿದ್ಯಾರ್ಥಿಗಳು ಕಂಡಿರಲಿಲ್ಲ. ಮರಳಿನ ಮೇಲೆ ಬರೆದು ಅಕ್ಷರಾಭ್ಯಾಸ ಮಾಡುತ್ತಿದ್ದರಂತೆ ಅಂದಿನ ಕಾಲದ ವಿದ್ಯಾರ್ಥಿಗಳು. ಜೈಮಿನಿ ಭಾರತ, ಬಸವ ಪುರಾಣ, ರಾಜಶೇಖರ ವಿಳಾಸ ಮೊದಲಾದ ಕಾವ್ಯಗಳ ಭಾಗಗಳನ್ನು ಕೇವಲ ಕಂಠ ಪಾಠದಿಂದ ಅವರು ಅಭ್ಯಸಿಸುತ್ತಿದ್ದರು.

ಚನ್ನಬಸಪ್ಪ ಶಿವರುದ್ರಯ್ಯನವರ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ. ಹಾಗಾಗಲು ಮುಖ್ಯ ಕಾರಣವೆಂದರೆ, ಲೆಕ್ಕದಲ್ಲಿ ಮತ್ತು ಕಾವ್ಯ ವಾಚನದಲ್ಲಿ ಆತನದು ಯಾವಾಗಲೂ ಮೊದಲ ಸ್ಥಾನ. ಒಮ್ಮೆ ಹೇಳಿದ ಪಾಠವನ್ನು ಆತನಿಗೆ ಮತ್ತೊಮ್ಮೆ ಹೇಳಿಕೊಡುವ ಅಗತ್ಯವಿರಲಿಲ್ಲ. ಸ್ಪಷ್ಟವಾದ ಶಬ್ದೋಚ್ಚಾರ, ಕಂಚಿನಂಥ ಕಂಠತ್ರಾಣ ಅವನದು. ಆತನು ಪದ್ಯ ಹೇಳತೊಡಗಿದರೆ ಶಾಲೆಯ ವಿದ್ಯಾರ್ಥಿಗಳು ಮಾತ್ರವಲ್ಲ, ದಾರಿಯಲ್ಲಿ ಹೋಗುತ್ತಿದ್ದ ಜನರು ಸಹ ಬೆರಗಾಗಿ ಕೇಳುತ್ತ ನಿಲ್ಲುತ್ತಿದ್ದರು. ಬಾಯಿ ಲೆಕ್ಕದಲ್ಲಿ ಆತನು ಒಮ್ಮೊಮ್ಮೆ ಹಿರಿಯ ವಿದ್ಯಾರ್ಥಿಗಳನ್ನೂ ಹಿಂದೆ ಹಾಕುತ್ತಿದ್ದ.

ಇದೆಂತಹ ತುಂಟ!

ಚನ್ನಬಸಪ್ಪ ತುಂಟ ಹುಡುಗನೆಂಬ ಅಪಖ್ಯಾತಿ ಪಡೆದಿದ್ದ. ಎಳೆತನದಲ್ಲಿ ಇದು ಸ್ವಾಭಾವಿಕ ಗುಣವೆನಿಸಿದರೂ ಚನ್ನಬಸಪ್ಪನಲ್ಲಿ ಅದು ಮಿತಿಗೆಟ್ಟಿದೆ ಎಂದು ಓಣಿಯ ಹಿರಿಯರು ಕೂಡ ಆಡಿಕೊಳ್ಳುತ್ತಿದ್ದರು. ಇದರ ಫಲವನ್ನು ಅನುಭವಿಸುವವಳು ತಿಪ್ಪವ್ವ. ಅವನ ಕೀಟಲೆಯ ಕಥೆಗಳನ್ನು ದಿನಾಲು ಕೇಳಿಕೇಳಿ ಅವಳಿಗೆ ಬೇಸರವಾಗಿತ್ತು. ಮಗನಿಗೆ ಸಾಕಷ್ಟು ಬುದ್ಧಿಯ ಮಾತು ಹೇಳಿದಳು. ಏನೂ ಪ್ರಯೋಜನವಾಗಲಿಲ್ಲ. ತಾಯಿಯ ಎದುರು ತನ್ನ ತಪ್ಪು ಒಪ್ಪಿಕೊಂಡು ‘ಇನ್ನೊಮ್ಮೆ ಇಲ್ಲ’ ಎಂಬ ಭರವಸೆ ಕೊಡುತ್ತಿದ್ದರೂ ಮರುಕ್ಷಣದಲ್ಲಿ ಅದನ್ನು ಮರೆತು ಮೊದಲಿನ ಹಾದಿಯನ್ನು ಆತ ಹಿಡಿಯುತ್ತಿದ್ದ.

ಒಂದು ದಿನ ತಾಯಿ ಶಿವರುದ್ರಯ್ಯನವರ ಬಳಿ ದೂರು ಒಯ್ದಳು. ಅವರಿಗೆ ಚನ್ನಬಸಪ್ಪನ ‘ಹುಲಿ’ಯ ಸ್ವಭಾವ ಅಪರಿಚಿತವಲ್ಲ. ಆತನನ್ನು ಹಲವು ಸಲ ದಂಡಿಸಿಯೂ ಆಗಿತ್ತು.

ಇಂಗ್ಲಿಷ್ ಕಲಿ

ಈ ಬಾರಿ ತಿಪ್ಪವ್ವ ಬಂದಾಗ ಅವರು ಚನ್ನಬಸಪ್ಪನನ್ನು ಮುಂದೆ ಕರೆದರು. ಏಟು ತಿನ್ನುವ ಮತ್ತೊಂದು ಪ್ರಸಂಗಕ್ಕೆ ಸಿದ್ಧನಾಗಿ ಚನ್ನಬಸಪ್ಪ ಅಯ್ಯನವರ ಬಳಿಗೆ ಹೋದ. ಅವರ ಧ್ವನಿಯಲ್ಲಿ ಅನುಕಂಪನ ತುಂಬಿತ್ತು. ತಾಯಿಯ ಕಣ್ತುಂಬ ನೀರು….. “ಚನ್ನಬಸೂ….. ನಿಮ್ಮ ಅವ್ವ ಬಂದಾಳ ನೋಡು. ಮಕ್ಕಳು ದೊಡ್ಡವರಾದಂತೆ ತಾಯಿಗೆ ಸಂತೋಷವಾಗುತ್ತದೆ. ಆದರೆ ನಿನ್ನ ವಿಷಯದಲ್ಲಿ ಮಾತ್ರ ಅದು ವಿರುದ್ಧ. ಆಕೆಯ ದುಃಖ ಕಡಿಮೆಯಾಗುವ ಬದಲು ದಿನದಿನಕ್ಕೆ ಹೆಚ್ಚಾಗುತ್ತ ನಡೆದಿದೆ. ಇಂದು ಮುಂಜಾನೆ ಯಾರನ್ನೋ ಹೊಡೆದು ಬಂದೆಯಂತೆ. ಆ ಹುಡುಗನ ತಾಯಿ ತಿಪ್ಪವ್ವನ ಹತ್ತಿರ ಬಂದು ದೂರು ಹೇಳಿದಳು. ನಿಮ್ಮವ್ವ ತಲೆ ತಗ್ಗಿಸಿದಳು. ಮಗ ಹೀಗಾದನಲ್ಲಾ ಎಂದು ಆಕೆಯ ಅಳು. ನೀನೇನು ಸಣ್ಣವನಲ್ಲ. ನೀನು ಕಲಿತು ಮುಂದೆ ಬರಬೇಕೆಂಬ ಹಂಬಲದಿಂದ ಅವಳು ತನ್ನ ಕಷ್ಟವನ್ನು ನುಂಗಿಕೊಂಡು ನಿನ್ನನ್ನು ಜೋಪಾನ ಮಾಡುತ್ತಿದ್ದಾಳೆಂಬುದನ್ನು ಮರೆಯಬೇಡ. ತಾಯಿಯ ಮನಸ್ಸು ನೋಯಿಸಿದರೆ ನಿನಗೆ ಎಂದಿಗೂ ಒಳಿತಾಗುವುದಿಲ್ಲ, ನೆನಪಿಡು ….. ಇನ್ನೊಮ್ಮೆ ಹೀಗೆ ಮಾಡಬೇಡ.”

ಚನ್ನಬಸಪ್ಪನಿಗೆ ಅಳು ಬಂದಿತ್ತು. ಅಯ್ಯನವರನ್ನೊಮ್ಮೆ, ತಾಯಿಯನ್ನೊಮ್ಮೆ ನೋಡಿದ. “ಹೂಂನ್ರೀ” ಎಂದು, ಕೆಳಗೆ ಮುಖಮಾಡಿದ.

ಚನ್ನಬಸಪ್ಪನ ಕಣ್ಣಲ್ಲಿ ನೀರು ಕಂಡದ್ದು ಅದೇ ಮೊದಲು.

ತಿಪ್ಪವ್ವನನ್ನು ಮನೆಗೆ ಕಳಿಸಿ ಚನ್ನಬಸಪ್ಪನನ್ನು ಮತ್ತೊಮ್ಮೆ ಕರೆದು ಶಿವರುದ್ರಯ್ಯನವರು ಹೇಳಿದರು:

“ಚನ್ನಬಸೂ, ನೀನು ಉಳಿದ ಹುಡುಗರಂತೆ ಮಠದಲ್ಲಿಯ ಓದು ಮುಗಿದಬಳಿಕ ಅಷ್ಟಕ್ಕೇ ನಿಲ್ಲಿಸಬಾರದು. ಹೇಗಾದರೂ ಪ್ರಯತ್ನಿಸಿ ಮುಂದೆ ಇಂಗ್ಲಿಷ್ ಕಲಿ. ನೀನು ಬಲು ಬುದ್ಧಿವಂತ. ಅದರ ಲಾಭ ಪಡೆದುಕೋ. ಇಂಗ್ಲಿಷ್ ಕಲಿತರೆ ದೊಡ್ಡ ಹುದ್ದೆ  ಸಿಕ್ಕುತ್ತದೆ. ನಿನ್ನ ತಂದೆ ಬಸಲಿಂಗಪ್ಪನ ಹೆಸರಿಗೆ ಕೀರ್ತಿ ಬರುತ್ತದೆ. ನಿನ್ನ ತಾಯಿಯ ಹೊಟ್ಟೆ ಶಾಂತವಾಗುತ್ತದೆ….”

ಚನ್ನ ಬಸಪ್ಪನ ಮುಗ್ಧ ಮನಸ್ಸು ಕರಗಿತು, ಇತರರನ್ನು ಕಂಡು ತಾನು ಮಾಡುತ್ತಿದ್ದ ಕುಚೇಷ್ಟೆ ತಾಯಿಯನ್ನು ಮುಳ್ಳಿನಂತೆ ಚುಚ್ಚುತ್ತದೆ ಎಂಬ ಅರಿವಾಯಿತು. ಅಲ್ಲದೆ ಪರರ ಮಕ್ಕಳನ್ನು ನೋಯಿಸಿ ತಾನು ಹುಡುಗಾಟ ಆಡುವುದು ಅಪರಾಧ ಎಂದು ಮನದಟ್ಟಾಯಿತು. ಅಂದಿನಿಂದ ಅವನ ಸ್ವಭಾವದಲ್ಲಿ ಮಹತ್ವದ ಬದಲಾವಣೆ ಉಂಟಾಯಿತು.

ಕಲಿಯುವುದು ಹೇಗೆ?

ಶಿವರುದ್ರಯ್ಯನವರು ಹೇಳಿದ ತನ್ನ ಮುಂದಿನ ವಿದ್ಯಾಭ್ಯಾಸದ ವಿಚಾರವು ಚನ್ನಬಸಪ್ಪನಲ್ಲಿ ಹೊಸ ಆಸೆಯನ್ನು ಮೂಡಿಸಿತು. ಇಲ್ಲಿಯ ಓದು ಮುಗಿದ ಬಳಿಕ ಇಂಗ್ಲಿಷ್ ಕಲಿಯಬೇಕೆಂಬ ಲವಲವಿಕೆ ಹುಟ್ಟಿತು. ಆಗ ಧಾರವಾಡದಲ್ಲಿ ಅದಕ್ಕೆ ಅವಕಾಶವಿರಲಿಲ್ಲ. ಬಾಸೆಲ್ ಮಿಶನ್ ಶಾಲೆ ಆರಂಭವಾಗಿದ್ದರೂ ಅದು ಕ್ರೈಸ್ತಶಾಲೆ ಎಂಬ ಕಾರಣದಿಂದ ತಮ್ಮ ಮಕ್ಕಳನ್ನು ಕಳಿಸಲು ಸಾಮಾನ್ಯವಾಗಿ ಜನರು ಮುಂದೆ ಬರುತ್ತಿರಲಿಲ್ಲ. ಆ ಕಾರಣದಿಂದ ಇಂಗ್ಲಿಷ್ ಶಿಕ್ಷಣಕ್ಕಾಗಿ ಅಂದು ಪುಣೆಯವರೆಗೆ ಹೋಗಬೇಕಾಗಿತ್ತು. ಅದು ಶ್ರೀಮಂತ ವರ್ಗದವರಿಗೆ ಮಾತ್ರ ಸಾಧ್ಯ.

‘ನೀವೇ ತಾಯಿ-ತಂದೆಯ ಹಾಗೆ ಹರಕೆ ನೀಡಿರಿ.’

ಒಂದೆರಡು ಬಾರಿ ತಾಯಿಯ ಬಳಿ ಆ ಮಾತು ತೆಗೆದು, “ಪುಣೆಗೆ ಹೋಗಿ ಇಂಗ್ಲಿಷ್ ಓದಿದರೆ ದೊಡ್ಡ ಕೆಲಸ ಸಿಕ್ಕುತ್ತದಂತೆ” ಎಂದ ಚನ್ನಬಸಪ್ಪ. ತನ್ನ ಜಾಣ್ಮೆಯ ಬಗ್ಗೆ ಶಿವರುದ್ರಯ್ಯನವರು ಆಡಿದ ಮಾತು ಹೇಳಿದ, “ಹೌದಪ್ಪಾ, ಆದರೆ ಅದೆಲ್ಲಾ ಹಣ ಇರುವವರ ಕೆಲಸ” ಅಂದಳು ಆಕೆ.

ಪುಣೆಗೆ

ಕೊನೆಗೆ ಆ ದಿನ ಬಂತು. ಚನ್ನಬಸಪ್ಪ ಸಂಜೆ ಶಿವ ರುದ್ರಯ್ಯನವರ ಮನೆಗೆ ಹೋಗಿ ಪಾದಮುಟ್ಟಿ ನಮಸ್ಕಾರ ಮಾಡಿ ತನ್ನ ನಿರ್ಧಾರವನ್ನು ತಿಳಿಸಿದ. ತಾನು ಅಂದೇ ರಾತ್ರಿ ಪುಣೆಗೆ ಹೊರಡಲು ನಿಶ್ಚಯಿಸಿರುವುದಾಗಿಯೂ ತಾಯಿ ಒಪ್ಪುವುದಿಲ್ಲವಾದ ಕಾರಣ ಆಕೆಗೆ ಹೇಳದೆ ಹೋಗು ವುದಾಗಿಯೂ ಹೇಳಿದ. “ಅಯ್ಯನವರೆ, ಅವ್ವನಿಗೆ ನೀವು ನಾಳೆ ಸಮಾಧಾನ ಮಾಡಿರಿ. ಅವಳನ್ನು ನಾನಿಲ್ಲದಾಗ ನೀವೇ ನೋಡಿಕೊಳ್ಳಿರಿ. ಆಕೆಯ ಹರಕೆ ಈಗ ನನಗೆ ಸಿಕ್ಕಿಲ್ಲ. ನೀವೇ ತಾಯಿ ತಂದೆಯ ಹರಕೆ ನೀಡಿರಿ. ನಾನು ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಆಶೀರ್ವದಿಸಿರಿ” ಎಂದು ಮತ್ತೊಮ್ಮೆ ಅವರ ಕಾಲುಮುಟ್ಟಿ ನಮಸ್ಕಾರ ಮಾಡಿ ಹೊರಟ.

ಆಗಿನ್ನೂ ರೈಲು, ಬಸ್ಸು ಇರಲಿಲ್ಲ. ಪ್ರಯಾಣ ಎಂದರೆ ಭಯ, ಶ್ರಮದ ಕೆಲಸ. ಚನ್ನಬಸಪ್ಪನ ಕಿಸೆಯಲ್ಲಿ ಖರ್ಚಿಗೆಂದು ಮೂರು ರೂಪಾಯಿ ಹತ್ತಾಣೆ (ಅರವತ್ತೆರಡು ಪೈಸೆ) ಮಾತ್ರ ಇತ್ತು. ಮಧ್ಯದ ದಾರಿಯಲ್ಲಿ ಗೋಕಾವಿಗೆ ಹೋಗಿ ಬಳಗದವರನ್ನು ಭೆಟ್ಟಿಯಾದ. ಅವರಿಂದ ಏನಾದರೂ ಸಹಾಯ ದೊರೆಯಬಹುದೆಂಬ ನಿರೀಕ್ಷೆಯಿಂದ ತನ್ನ ಪ್ರಯಾಣದ ಉದ್ದೇಶವನ್ನು ವಿವರಿಸಿದ. ಈ ವಯಸ್ಸಿನ ಏನೂ ಅರಿಯದ ಹುಡುಗ ಇನ್ನೂರು ಮೈಲಿ ದೂರದ ಆ ಪೇಶ್ವೆಗಳ ಪಟ್ಟಣಕ್ಕೆ ಹೋಗುವುದು, ಅಲ್ಲಿ ನೆಲೆಸಿ ಶಾಲೆ ಕಲಿಯುವುದು ಅವರಿಗೆ ‘ಹುಚ್ಚುತನ’ವಾಗಿ ತೋರಿತು. ಅವರಿಂದ ನೆರವು ಹೋಗಲಿ, ಉತ್ತೇಜನದ ಮಾತೂ ಬರಲಿಲ್ಲ. ಬದಲಾಗಿ, ಧಾರವಾಡಕ್ಕೆ ಹಿಂದಿರುಗಿ ಯಾವುದಾದರೊಂದು ಕೆಲಸ ಹಿಡಿದು ತಾಯಿಯ ಹೊಟ್ಟೆಗೆ ಹಾಕುವಂತೆ ಅವರು ಉಪದೇಶಿಸಿದರು. ಅವನ ತಂದೆಯ ಬಾಲ್ಯದ ಗೆಳೆಯನೊಬ್ಬ ಮಾತ್ರ ಅವರನ ಧೈರ್ಯವನ್ನೂ ಸಾಹಸವನ್ನೂ ನೋಡಿ ಸಂತೋಷಪಟ್ಟು ಐವತ್ತು ರೂಪಾಯಿಗಳನ್ನು ಕೊಟ್ಟು ಅವನಿಗೆ ಸಹಾಯ ಮಾಡಿದ.

ಹೀಗೆ ಯಾರಯಾರ ಸಹಾಯವನ್ನೋ ಪಡೆಯುತ್ತ ಚನ್ನಬಸಪ್ಪ ಪುಣೆ ಪಟ್ಟಣ ತಲುಪಿದ. ಅಲ್ಲಿ ಇಂಗ್ಲಿಷ್ ಶಾಲೆ ಯನ್ನು ಗೊತ್ತು ಹಚ್ಚಿ, ಕಟ್ಟೆಯ ಮೇಲೆ ಹೋಗಿ ಕುಳಿತ. ಮೈಮೇಲೆ ಒಂದು ಅಂಗಿ, ತಲೆಯಮೇಲೆ ಬಿಳಿಯ ಪಟಕ (ರುಮಾಲು), ಉಟ್ಟುಕೊಂಡಿದ್ದ ವಲ್ಲಿ (ಧೋತರ), ಹಾಸಿಗೆಗೆ ಒಂದು ಕಂಬಳಿ – ಇವು ಚನ್ನಬಸಪ್ಪನ ಸಾಮಾನು. ಪರಸ್ಥಳದ ಹುಡುಗ, ವಿಶ್ರಾಂತಿಗಾಗಿ ಕುಳಿತಿರಬಹುದೆಂದು ಕೆಲಹೊತ್ತು ಯಾರೂ ಅವರನನ್ನು ಗಮನಿಸಲಿಲ್ಲ.

ಆಶ್ರಯ ದೊರೆಯಿತು

ಚನ್ನಬಸಪ್ಪನೇ ಎದ್ದು ಹೆಡ್‌ಮಾಸ್ತರರ ಬಳಿಗೆ ಹೋಗಿ, ನಮಸ್ಕರಿಸಿ ತಾನು ಬಂದ ಉದ್ದೇಶವನ್ನು ಹೇಳಿದ. ಧಾರವಾಡದ ಶಾಲೆಯಲ್ಲಿ ಮರಾಠಿಯನ್ನು ಕಲಿತಿದ್ದರಿಂದ ಅವನಿಗೆ ಭಾಷೆಯ ಆತಂಕವಿರಲಿಲ್ಲ. ಅವನ ದಿಟ್ಟತನವನ್ನೂ ಇಂಗ್ಲಿಷ್ ಕಲಿಯುವ ಹಂಬಲವನ್ನೂ ಕಂಡು ಅವರು ಬೆರಗಾದರು. ಆತನ ವಿದ್ಯಾಭ್ಯಾಸದ ಮಟ್ಟವನ್ನು ಅರಿತು ಕೊಳ್ಳಲು ಕೆಲವು ಪ್ರಶ್ನೆಗಳನ್ನು ಅವರು ಕೇಳಿದರು. ಸಮರ್ಪಕ ರೀತಿಯಲ್ಲಿ ಆತ ಉತ್ತರಿಸಿದಾಗ ಅವನನ್ನು ವರ್ಗಕ್ಕೆ ಕಳಿಸಿದರು.

ಹೈಸ್ಕೂಲಿನಲ್ಲಿ ಪ್ರವೇಶ ಪಡೆಯುವುದು ಇಷ್ಟೊಂದು ಸುಲಭವೇ ಎಂದು ಈ ಕಾಲದಲ್ಲಿ ನಮಗೆ ಆಶ್ಚರ್ಯ ವಾಗಬಹುದು. ಆದರೆ ಆಗ ನಮ್ಮ ದೇಶಕ್ಕೆ ಇಂಗ್ಲಿಷ್ ಶಿಕ್ಷಣವು ಹೊಸದು. ಮುಖ್ಯ ಪಟ್ಟಣಗಳಲ್ಲಿ ಇಂಗ್ಲಿಷ್ ಶಾಲೆಗಳು ಆಗತಾನೆ ಒಂದೊಂದಾಗಿ ಪ್ರಾರಂಭವಾಗುತ್ತಲಿದ್ದವು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ. ಉದಾರ ಮನೋಭಾವದ ಅಧ್ಯಾಪಕ ವರ್ಗ. ಅಂದಿನ ವಿದ್ಯಾರ್ಥಿಗಳು ಸುದೈವಿ ಗಳಾಗಿದ್ದರು.

ಶಾಲೆಗೆ ಪ್ರವೇಶ ದೊರೆತ ಬಳಿಕ ಇನ್ನು ಅನ್ನ ವಸತಿಯ ಪ್ರಶ್ನೆ. ಚನ್ನಬಸಪ್ಪನಿಗೆ ಅದು ಸಮಸ್ಯೆ ಎನಿಸಲಿಲ್ಲ. ಅನ್ನ ನೀಡುವುದು, ವಿದ್ಯೆ ಕಲಿಸುವುದು-ನಮ್ಮ ದೇಶದಲ್ಲಿ ಹಿಂದಿ ನಿಂದಲೂ ಪವಿತ್ರದಾನವೆಂದು ಕರೆಯಲ್ಪಟ್ಟಿದೆ. ಬಡ ವಿದ್ಯಾರ್ಥಿಗಳಿಗೆ ಅನ್ನ, ವಸತಿ ಕೊಟ್ಟು ವಿದ್ಯಾದಾನಕ್ಕೆ ನೆರವಾಗುವುದು ಜನರೆಲ್ಲರ ಕರ್ತವ್ಯವೆನಿಸಿದೆ. ಆದುದರಿಂದ ಚನ್ನಬಸಪ್ಪನಿಗೆ ಒಂದು ಆಶ್ರಯ ದೊರೆಯಿತು.

ಆತನ ಪ್ರತಿಭೆಯನ್ನು ಗುರುತಿಸಲು ಅಧ್ಯಾಪಕರಿಗೆ ಬಹುಕಾಲ ಹಿಡಿಯಲಿಲ್ಲ. ನಡತೆಯಲ್ಲಿ ಕೂಡ ಬಹಳ ವಿನಯಶಾಲಿ. ಪರಕೀಯರ ಮತ್ತು ಅಧ್ಯಾಪಕರ ಔದಾರ್ಯ ದಲ್ಲಿ ದಿನ ಕಳೆಯಬೇಕಾಗಿದೆ ಎಂಬ ಭಾವನೆ ಆತನಲ್ಲಿ ನೆಲೆಯೂರಿತ್ತು. ಅದರ ಪರಿಣಾಮವಾಗಿ ಅವನು ಯಾವಾಗಲೂ ಚಟುವಟಿಕೆಯಲ್ಲಿ, ಒಂದಿಲ್ಲೊಂದು ಕೆಲಸದಲ್ಲಿ ತೊಡಗಿರುತ್ತಿದ್ದ.

ತಾಯಿಯೂ ಬಂದಳು

ನಿತ್ಯಕ್ರಮವು ಹೀಗೆ ಒಂದು ವ್ಯವಸ್ಥಿತ ದಾರಿಯಲ್ಲಿ ನಡೆಯತೊಡಗಿದ ಸಮಯದಲ್ಲಿ ಆತನಿಗೆ ಮಧ್ಯೆಮಧ್ಯೆ ತಾಯಿಯ ನೆನಪು ಆಗುತ್ತಿತ್ತು. ತನ್ನ ಕ್ಷೇಮ-ಸಮಾಚರದ ನಿರೀಕ್ಷೆಯಲ್ಲಿ ತಾಯಿ ಅದೆಷ್ಟು ಕೊರಗುತ್ತಿದ್ದಾಳೋ! ತಾನು ಒಳ್ಳೆಯ ರೀತಿಯಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದೇನೆ ಎಂಬ ಸಂಗತಿ ಅವಳಿಗೆಷ್ಟು ಹರ್ಷವನ್ನು ತಂದೀತು! ತಾಯಿಯನ್ನು ನೋಡುವ ಹಂಬಲ ಹೆಚ್ಚಿತು. ಅವಳನ್ನು ಕರೆಯಿಸಿ ಕೊಳ್ಳಬೇಕೆಂಬ ತನ್ನ ಅಪೇಕ್ಷೆಯನ್ನು ಅಲ್ಲಿಯ ಹಿರಿಯರಿಗೆ ತಿಳಿಸಿದ. ಒಪ್ಪಿ, ಸಹಾಯ ಮಾಡುವುದಾಗಿ ಅವರು ಭರವಸೆ ನೀಡಿದ ಮೇಲೆ ತಿಪ್ಪವ್ವನನ್ನು ಪುಣೆಗೆ ಬರಮಾಡಿಕೊಂಡು ಹುರುಪಿನಿಂದ ಅಭ್ಯಾಸ ಪ್ರಾರಂಭಿಸಿದ.

ಎಂಜನಿಯರಿಂಗ್ ಕಾಲೇಜು

ಹೈಸ್ಕೂಲು ಪರೀಕ್ಷೆಯಲ್ಲಿ ನಿರೀಕ್ಷೆಯಂತೆ ಚನ್ನಬಸಪ್ಪ ಉತ್ತಮ ವರ್ಗದಲ್ಲಿ ಉತ್ತೀರ್ಣನಾದ. ಇಂಥ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕಾಗಿ ಅಲ್ಲಿ ಆಗತಾನೆ ಎಂಜನಿಯರಿಂಗ್ ಕಾಲೇಜು ಸ್ಥಾಪಿತವಾಗಿತ್ತು; ಆತನಿಗೆ ಸುಲಭವಾಗಿ ಪ್ರವೇಶ ದೊರೆಯಿತು. ಹತ್ತು ರೂಪಾಯಿಗಳ ಮಾಸಿಕ ವಿದ್ಯಾರ್ಥಿವೇತನ ಪಡೆದು ಅಭ್ಯಾಸವನ್ನು ಮುಂದುವರಿಸಿದ.

ಕಾಲೇಜಿನಲ್ಲಿ ಪ್ರಧ್ಯಾಪಕರಾಗಿದ್ದ ಛತ್ರೆ ಎಂಬ ಪ್ರಸಿದ್ಧ ಗಣಿತಶಾಸ್ತ್ರಜ್ಞರು ಚನ್ನಬಸಪ್ಪನ ಬುದ್ಧಿಶಕ್ತಿಯನ್ನೂ ಉದ್ಯೋಗ ಶೀಲತೆಯನ್ನೂ ಬಹುವಾಗಿ ಮೆಚ್ಚಿಕೊಂಡರು. ಪುಣೆಯ ವಾಸ್ತವ್ಯದಲ್ಲಿ ಚನ್ನಬಸಪ್ಪನಿಗೆ ಅವರು ಅನೇಕ ಬಗೆಯಾಗಿ ಸಹಾಯ ಮಾಡಿದರು.

ಮನಸ್ಸು ಬೆಳೆಯಿತು

ಪಾಶ್ಚಾತ್ಯ ಶಿಕ್ಷಣದ ಪರಿಣಾಮವಾಗಿ ನಮ್ಮ ದೇಶದಲ್ಲಿ ಹೊಸ ವಿಚಾರಗಳು ಮೂಡಲಾರಂಭಿಸಿದ್ದವು. ವಿದೇಶೀ ಪಾದ್ರಿಗಳ ಮತಪ್ರಸಾರಕ ಪ್ರವಚನಗಳು, ಅವರು ಆರಂಭಿಸಿದ್ದ ವಿದ್ಯಾಸಂಸ್ಥೆಗಳು, ದೀನದಲಿತರಿಗೆ ಸಹಾಯ ನೀಡುವ ಅವರ ಸಾಮಾಜಿಕ ಕಾರ್ಯಕ್ರಮಗಳು ನಮ್ಮ ಸುಶಿಕ್ಷಿತ ಯುವಜನರ ಜಾಗೃತಿಗೆ ಕಾರಣವಾದವು. ದೇಶ, ಧರ್ಮ, ಭಾಷೆಗಳ ಬಗ್ಗೆ ಜನತೆಯಲ್ಲಿ ಸ್ವಾಭಿಮಾನವು ಜಾಗೃತವಾದ ಲಕ್ಷಣಗಳು ಕಂಡು ಬರುತ್ತಿದ್ದವು. ಇಂಥ ಚಟುವಟಿಕೆಗಳಿಗೆ ಪುಣೆಯು ಆಗ ಕೇಂದ್ರವೆನಿಸಿತ್ತು. ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಪ್ರಚಾರವು ಇನ್ನೊಂದು ಆಂದೋಲನಕ್ಕೆ ಮೂಲವಾಯಿತು. ಸಭೆಗಳು, ಉಪನ್ಯಾಸ-ಪ್ರವಚನಗಳು ನಿತ್ಯದ ಕಾರ್ಯ ಕ್ರಮಗಳಾಗಿ ವಿದ್ಯಾರ್ಥಿಗಳ ಕುತೂಹಲ ಕೆರಳಿಸುತ್ತಿದ್ದವು.

ಇಂಥ ಸಮಾಜಿಕ ಆಂದೋಲನಗಳನ್ನು ಪ್ರತ್ಯಕ್ಷವಾಗಿ ಅವಲೋಕಿಸುವ ಅವಕಾಶ ಚನ್ನಬಸಪ್ಪನಿಗೆ ಪುಣೆಯಲ್ಲಿದ್ದಾಗ ದೊರೆಯಿತು. ವ್ಯಾಸಂಗದ ಮಧ್ಯೆ ಬಿಡುವು ಮಾಡಿಕೊಂಡು ಇಂಥ ಸಭೆಗಳಲ್ಲಿ ಪ್ರೇಕ್ಷಕನಾಗಿ ಆತ ಭಾಗವಹಿಸುತ್ತಿದ್ದ; ಯಾವ ವಿಷಯದ ಬಗ್ಗೆಯೇ ಇರಲಿ ಸಾರ್ವಜನಿಕ ಭಾಷಣ, ಚರ್ಚೆಗಳನ್ನು ಆಸಕ್ತಿಯಿಂದ ಕೇಳುತ್ತಿದ್ದ. ಹೊಸ ವಿಚಾರಗಳಿಗೆ ಆತನದು ಯಾವಾಗಲೂ ತೆರೆದ ಮನಸ್ಸು. ವ್ಯಕ್ತಿ, ಸಮಾಜ, ಧರ್ಮ, ದೇವರು-ಇವುಗಳ ವಿಷಯವಾಗಿ ಹಿಂದೆ ಇದ್ದ ಆತನ ವಿಚಾರಗಳಲ್ಲಿ ತೀವ್ರ ಬದಲಾವಣೆ ಉಚಿಟಾಯಿತು.

‘ನಮ್ಮ ಭಾಷೆಯ ಮೂಲಕವೇ ನಮ್ಮ ಬೆಳವಣಿಗೆ ಸಾಧ್ಯ.’

ಉದ್ಯೋಗ

ಎಂಜನಿಯರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಚನ್ನಬಸಪ್ಪ ಕೆಲಕಾಲ ತನ್ನ ಕಾಲೇಜಿನಲ್ಲಿ ಅಧ್ಯಾಪಕನಾಗಿ ಕೆಲಸ ಮಾಡಿದ. ಈ ಸಮಯದಲ್ಲಿ ಇಂಗ್ಲೆಂಡಿನ ’ಕೂಪರ್ಸ್ ಹಿಲ್’ ಎಂಬ ಎಂಜನಿಯರಿಂಗ್ ಕಾಲೇಜಿಗೆ ಭಾರತದ ಐವರು ಮೇಲ್ದರ್ಜೆಯ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕಾಗಿ ಕಳಿಸಬೇಕೆಂಬ ಒಂದು ಯೋಜನೆಯನ್ನು ನಮ್ಮ ದೇಶದ ಹಿರಿಯ ಮುಂದಾಳುವಾಗಿದ್ದ ದಾದಾಭಾಯಿ ನವರೋಜಿ ಅವರು ಸಿದ್ಧಗೊಳಿಸಿದ್ದರು. ಆ ಐವರ ಪಟ್ಟಿಯಲ್ಲಿ ಚನ್ನಬಸಪ್ಪನ ಹೆಸರೂ ಒಂದಾಗಿತ್ತು. ಕಾರಣಾಂತರದಿಂದ ಅವರ ಯೋಜನೆ ಕೈಗೂಡಲಿಲ್ಲವಾದುದರಿಂದ ಚನ್ನಬಸಪ್ಪನ ವಿದೇಶ ಸಂಚಾರದ ಯೋಜನೆ ಅಲ್ಲಿಗೆ ನಿಂತಿತು.

ಚನ್ನಬಸಪ್ಪನವರಿಗೆ ಆಗ ೨೧-೨೨ ವಯಸ್ಸು. ಅವರಿಗೆ ಎಂಜನಿಯರಿಂಗ್ ಕಾಲೇಜಿನಲ್ಲಿ ದೊರೆತ ಕೆಲಸ ಕೆಲವು ತಿಂಗಳು ಮಾತ್ರ. ಅನಂತರ ಮುಂದೇನು ಎಂಬ ಪ್ರಶ್ನೆ. ಇನ್ನಷ್ಟು ತಡೆದಿದ್ದರೆ ಬೇರೆ ಕಡೆಗೆ ನೌಕರಿ ದೊರೆಯುವುದು ಅಸಂಭವವಾಗಿರಲಿಲ್ಲ ಅವರಿಗೆ. ಆದರೆ ಗಳಿಕೆ, ಸಂಸಾರ ನಿರ್ವಹಣೆ-ಅಷ್ಟು ಮಾತ್ರ ಅವರ ಜೀವಿತದ ಹಂಬಲ ವಾಗಿರಲಿಲ್ಲ. ಸಮಾಜದ ಬಾಂಧವರನ್ನು ಮುನ್ನಡೆಸುವ ಆಕಾಂಕ್ಷೆ ಅವರದು. ತಾಯ್ನಾಡು ತಮ್ಮನ್ನು ಕರೆಯುತ್ತಿದೆ ಎನ್ನಿಸಿತು. ೧೮೫೫ ರಲ್ಲಿ ಧಾರವಾಡಕ್ಕೆ ಹಿಂದಿರುಗಿದರು.

ಕೆಲವು ತಿಂಗಳು ಅವರು ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿದರು. ೧೮೫೬ರಲ್ಲಿ ವಿದ್ಯಾ ಇಲಾಖೆಯನ್ನು ಸೇರಿ, ಹೊಸದಾಗಿ ಆರಂಭವಾದ ನಾರ್ಮಲ್ ಸ್ಕೂಲಿನ ಮುಖ್ಯಾಧ್ಯಾಪಕ ಹುದ್ದೆಯನ್ನು ವಹಿಸಿಕೊಂಡರು.

ಧಾರವಾಡದಲ್ಲಿ ಮರಾಠಿಯ ಪ್ರಭುತ್ವ

ವಿದ್ಯಾ ಇಲಾಖೆಯಲ್ಲಿ ಚನ್ನಬಸಪ್ಪನವರು ಸಾಧಿಸಿದ ಕಾರ್ಯವನ್ನು ಅರಿತುಕೊಳ್ಳಬೇಕಾದರೆ ಈ ಭಾಗದ ಅಂದಿನ ಸಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿಗಳನ್ನು ಪರಿಚಯ ಮಾಡಿಕೊಳ್ಳಬೇಕು.

ಬ್ರಿಟಿಷರ ವಶಕ್ಕೆ ಬರುವ ಮೊದಲು ಧಾರವಾಡ, ಬೆಳಗಾವಿ, ಕಾರವಾರ, ಬಿಜಾಪುರ ಜಿಲ್ಲೆಗಳನ್ನೊಳಗೊಂಡ ಕರ್ನಾಟಕದ ಈ ಭಾಗವು ಮಹಾರಾಷ್ಟ್ರೀಯ ಪೇಶ್ವೆಗಳ ರಾಜ್ಯವಾಗಿತ್ತು. ಈ ಪ್ರದೇಶವೆಲ್ಲ ಅಂದು ’ದಕ್ಷಿಣ ಮಹಾರಾಷ್ಟ್ರ’ವೆಂದು ಕರೆ ಯಲ್ಪಡುತ್ತಿತ್ತು. ಜನತೆಯ ಭಾಷೆ ಕನ್ನಡವಾಗಿದ್ದರೂ ಅರಸರ ಭಾಷೆಯಾಗಿದ್ದ ಮರಾಠರಿಗೆ ಆಡಳಿತದಲ್ಲಿ ಪ್ರಾಧಾನ್ಯ. ಆದುದರಿಂದ ಶಿಕ್ಷಣ ಭಾಷೆಯೂ ಅದೇ. ವ್ಯವಹಾರ ಭಾಷೆಯನ್ನಾಗಿ ಶಿಷ್ಟ ಜನರು ಅದನ್ನೇ ಬಳಸುತ್ತಿದ್ದರು.

ಬ್ರಿಟಿಷರು ಆಡಳಿತ ಸೂತ್ರ ವಹಿಸಿಕೊಂಡ ಬಳಿಕ ಗುಜರಾತಿ, ಮರಾಠಿ ಮತ್ತು ಕನ್ನಡ ಭಾಷಾ ಪ್ರದೇಶಗಳನ್ನೊಳ ಗೊಂಡು ಮುಂಬಯಿ ಪ್ರಾಂತವು ಆಡಳಿತದ ಘಟಕವಾಯಿತು. ಆದರೆ ಇಲ್ಲಿಯ ಭಾಷೆ ಕನ್ನಡ ಎಂಬುದನ್ನು ಕಂಡುಹಿಡಿಯಲು ಸರ್ಕಾರಕ್ಕೆ ಹಲವು ವರ್ಷ ಬೇಕಾದವು.

ಧಾರವಾಡದಂಥ ಕರ್ನಾಟಕದ ಮುಖ್ಯ ಸ್ಥಳದಲ್ಲಿ ಮರಾಠಿ ಶಾಲೆ ಸ್ಥಾಪನೆಯಾದವು. ‘ಇದು ತಪ್ಪು; ಇಲ್ಲಿಯ ಜನರ ಭಾಷೆ ಕನ್ನಡ. ಅವರ ಮಾತೃಭಾಷೆಯಲ್ಲಿ ಶಿಕ್ಷಣ ನಡೆಯಬೇಕಾದದ್ದು ಉಚಿತ’ ಎಂದು ಸರ್ಕಾರಕ್ಕೆ ವರದಿಮಾಡಿ, ತಾನೇ ಒಂದು ಕನ್ನಡ ಶಾಲೆಯನ್ನು ಆರಂಭಿಸಿದ ಶ್ರೇಯಸ್ಸು ಧಾರವಾಡ ವಿಭಾಗದ ಅಸಿಸ್ಟೆಂಟ್ ಕಲೆಕ್ಟರನಾಗಿದ್ದ (೧೮೩೧) ವಾಲ್ಟರ್ ಎಲಿಯಟ್‌ನಿಗೆ ಸಲ್ಲಬೇಕು.

ನಾಲ್ಕು ವರ್ಷಗಳನಂತರ ಸರ್ಕಾರವು ‘ಸದರ್ನ್ ಮರಾಠಾ’ ಪ್ರದೇಶದ ಭಾಷೆ ಕನ್ನಡವೆಂದೂ ಆದುದರಿಂದ ಅಲ್ಲಿಯ ಆಡಳಿತ ಮತ್ತು ಶಿಕ್ಷಣವು ಆ ಭಾಷೆಯ ಮೂಲಕ ನಡೆಯಬೇಕೆಂದೂ ತೀರ್ಮಾನಿಸಿತು. ಇದು ಕಾರ್ಯರೂಪದಲ್ಲಿ ಬರುವುದು ಹೇಗೆ? ಹಿಂದೆ ಇದ್ದ ಶಾಲೆಗಳು, ಅಲ್ಲಿಯ ಉಪಾಧ್ಯಾಯರು ಪರಿವರ್ತನೆಗೊಳ್ಳುವುದು ಸಾಧ್ಯವೇ? ಅವರು ಕನ್ನಡ ಕಲಿಯಬೇಕೆಂದು ಸರ್ಕಾರದ ಆಜ್ಞೆಯಾದಾಗಲೂ, ಅಜ್ಜ ನೆಟ್ಟ ಆಲದ ನೆರಳಿನಲ್ಲಿ ಕಾಲ ಕಳೆಯುತ್ತಿದ್ದ ಉಪಾಧ್ಯಾಯರು ಅದನ್ನು ಲಕ್ಷಿಸಲಿಲ್ಲ. ‘ಪಠ್ಯಪುಸ್ತಕಗಳ ಅಭಾವ’ ಎಂಬ ಕಾರಣ ದಿಂದ ಹಿಂದಿನ ಧೋರಣೆಯನ್ನೇ ಮತ್ತೆ ಕೆಲಕಾಲ ಅನುಸರಿಸಬೇಕಾಯಿತು.

ಈ ಮಧ್ಯೆ ದೇಶದಲ್ಲಿ ಏಕರೂಪವಾದ ಶಿಕ್ಷಣ ಪದ್ಧತಿಯು ಕಾರ್ಯಗತವಾಯಿತು. ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣದ ಹಂತಗಳು ಏರ್ಪಟ್ಟವು. ಮುಂಬಯಿ ವಿಶ್ವವಿದ್ಯಾಲ ಯವು ಜನ್ಮ ತಾಳಿತು (೧೮೫೭). ಪಠ್ಯಪುಸ್ತಕಗಳ ರಚನೆ, ಹೊಸ ಶಿಕ್ಷಕರ ನೇಮಕ-ತರಬೇತಿ, ಪಾಠಕ್ರಮ, ವರ್ಷ ಪರೀಕ್ಷೆಗಳು–ಇವುಗಳ ಮೂಲಕ ವಿದ್ಯಾಭ್ಯಾಸವು ಕ್ರಮ ಬದ್ಧವಾಯಿತು.

ಶಿಕ್ಷಕರ ಶಿಕ್ಷಕರು

ಮೇಲ್ಕಂಡ ಶಿಕ್ಷಕರ ತರಬೇತಿ ಯೋಜನೆಗೆ ಅನುಗುಣವಾಗಿ ಆರಂಭವಾದ ನಾರ್ಮಲ್ ಸ್ಕೂಲಿಗೆ ಚನ್ನಬಸಪ್ಪನವರು ಮುಖ್ಯಾಧ್ಯಾಪಕರು. ವಿದ್ಯಾರ್ಥಿಗಳ ಅಭಾವ ಅವರನ್ನು ಎದುರಿಸಿದ ಮೊದಲ ಸಮಸ್ಯೆ. ಈ ಕಾರಣಕ್ಕಾಗಿ ಶಾಲೆಯನ್ನು ಬೆಳಗಾವಿಗೆ ಸ್ಥಳಾಂತರಿಸ ಬೇಕಾಯಿತು.

ಸರ್ಕಾರದ ಸಿಬ್ಬಂದಿಯವರು ಇಲ್ಲಿಯ ದೇಶಭಾಷೆಯಾದ ಕನ್ನಡವನ್ನು ಕಲಿಯಬೇಕೆಂಬ ಹೊಸ ಆಜ್ಞೆಯ ಪ್ರಕಾರ ಮರಾಠಿ ಶಿಕ್ಷಕರೂ ಕನ್ನಡ ಕಲಿಯಬೇಕಾಯಿತು. ಮರಾಠಿಯ ಸ್ಥಾನ ಕೆಳಗಿಳಿದು ತಾವು ಕನ್ನಡ ಕಲಿಯಬೇಕಾಯಿತಲ್ಲ ಎಂಬ ಅಸಮಾಧಾನ, ‘ದಕ್ಷಿಣ ಮಹಾರಾಷ್ಟ್ರ’ ಎಂಬ ಹೆಸರು ಕೆಲ ವರ್ಷಗಳ ಬಳಿಕ ಅಳಿಸಿಹೋಗಬಹುದೆಂಬ ಭಯ ಬೇರೆ, ಆ ಸ್ವಭಾಷಾ ಅಭಿಮಾನಿಗಳಿಗೆ. ಚನ್ನಬಸಪ್ಪನವರು ಚಾಣಾಕ್ಷತನ ದಿಂದ ಈ ಸಮಸ್ಯೆಯನ್ನು ಎದುರಿಸಿದರು.

ತಮ್ಮ ಪ್ರತಿಯೊಬ್ಬ ವಿದ್ಯಾರ್ಥಿಯೊಂದಿಗೆ ಅವರು ಆತ್ಮೀಯ ಸಂಪರ್ಕ ಬೆಳೆಸಿಕೊಂಡರು. ಆತನ ಒಲವು, ಯೋಗ್ಯತೆಗಳನ್ನು ಅಳೆದು ಆತನು ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಕೊಳ್ಳುವಂತೆ ಮಾಡಿದರು. ಹೊಸ ಕಾಲದ ಅವಶ್ಯಕತೆಗಳನ್ನು ವಿವರಿಸಿ, ಪುಣೆ, ಮುಂಬಯಿ ನಗರಗಳಲ್ಲಿ ನಡೆದ ಹೊಸ ಸಾಮಾಜಿಕ ಚಟುವಟಿಕೆಗಳ ಪರಿಚಯ ಮಾಡಿಕೊಟ್ಟರು. ಮಹಾರಾಷ್ಟ್ರೀಯರ ಉದ್ಯೋಗಶೀಲತೆಯನ್ನು ಮೆಚ್ಚಿ, ಮರಾಠೀ ವಿದ್ಯಾರ್ಥಿಗಳ ಮನಸ್ಸು ಗೆದ್ದುಕೊಂಡರು.

ನಮ್ಮ ಭಾಷೆಯ ಮೂಲಕವೇ-

ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನದ ದೀಪ ಹತ್ತಿಸಲು ಅವರು ಕೈಗೊಂಡ ಪ್ರಥಮ ಹೆಜ್ಜೆಯೆಂದರೆ, ಕನ್ನಡ ಭಾಷೆಯ ಅಭ್ಯಾಸಕ್ಕೆ ಉತ್ತೇಜನ ನೀಡಿದ್ದು. ಕನ್ನಡ ಭಾಷೆಯು ನಮ್ಮ ಅಮೂಲ್ಯವಾದ ಸೊತ್ತು. ಅದನ್ನು ಕಡೆಗಣಿಸಿ ನಾವು ಬಾಳಲಾರೆವು. ನಮ್ಮ ಜನತೆಯ ಗುಣ-ಸ್ವಭಾವಗಳು, ನಮ್ಮ ಹಿರಿಯರ ಶಕ್ತಿ-ಸಾಧನೆಗಳು ಈ ಭಾಷೆಯಲ್ಲಿ ವ್ಯಕ್ತವಾಗಿದೆ. ಪ್ರಾಚೀನ ಕಾವ್ಯಗಳ ಅಭ್ಯಾಸದಿಂದ ಆ ಪರಂಪರೆಯನ್ನು ಅರಿತುಕೊಂಡು ಉತ್ಸಾಹಶಾಲಿಗಳಾಗಬೇಕು. ‘ನಮ್ಮ ಭಾಷೆಯ ಮೂಲಕವೇ ನಮ್ಮ ಬೆಳವಣಿಗೆ ಸಾಧ್ಯ’ ಎಂಬ ಧ್ಯೇಯ ವಾಕ್ಯವನ್ನು ಚನ್ನಬಸಪ್ಪನವರು ರೂಪಿಸಿದರು. ತಮ್ಮ ಶಾಲೆಗೆ ಬಂದ ಶಿಕ್ಷಕರಿಗೆ ಇದೇ ಮಾತನ್ನು ಹೇಳುತ್ತಿದ್ದರು. ಇದು ನವಕರ್ನಾಟಕದ ಮೂಲಮಂತ್ರ ಎಂಬುದನ್ನು ನಾವು ಗಮನಿಸಬೇಕು.

ಕನ್ನಡ ಗ್ರಂಥರಚನೆಗೆ ಅವರು ನೀಡಿದ ಪ್ರೋತ್ಸಾಹವು ಚನ್ನಬಸಪ್ಪನವರ ಎರಡನೆಯ ಮಹತ್ವದ ಕಾರ್ಯ. ಹಳೆಗನ್ನಡ ಕಾವ್ಯಗಳಲ್ಲಿ ಪರಿಶ್ರಮವುಳ್ಳ ಗಂಗಾಧರ ಮಡಿವಾಳೇಶ್ವರ ತುರಮರಿಯವರು, ಕೆಲಕಾಲದ ನಂತರ ಈ ಸ್ಕೂಲಿಗೆ ಕನ್ನಡ ಪಂಡಿತರಾಗಿ ಬಂದರು. ಕನ್ನಡ ಭಾಷೆಯ ಅಭ್ಯಾಸಕ್ಕೆ ಆವಶ್ಯಕವಾದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವುದು ಪಂಡಿತರ ಕರ್ತವ್ಯವೆಂದೂ ತಾವು ಈ ವಿಷಯದಲ್ಲಿ ಸರ್ವ ಸಹಾಯ ನೀಡುವುದಾಗಿಯೂ ಚನ್ನಬಸಪ್ಪನವರು ಅವರಿಗೆ ಭರವಸೆ ಕೊಟ್ಟರು. ‘ಕನ್ನಡ ಕವಿತಾ ಪದ್ಧತಿ’, ‘ಕವಿತಾ ಸಂಗ್ರಹ’ ಎಂಬ ಕಾವ್ಯ ಸಂಗ್ರಹಗಳನ್ನು ಗಂಗಾಧರಯ್ಯನವರು ಸಿದ್ಧಪಡಿಸಿದರು. ಅಲ್ಲದೆ ಬಾಣಕವಿಯ ಸಂಸ್ಕೃತ ಕಾದಂಬರಿಯನ್ನು ಗದ್ಯದಲ್ಲಿ ಭಾಷಾಂತರಿಸಿದರು. ಹಳೆಗನ್ನಡ ಕಾವ್ಯಾಭ್ಯಾಸಿಗಳಿಗೆ ಅನುಕೂಲವಾಗುವಂತೆ ’ಕರ್ನಾಟಕ ಶಬ್ದಮಂಜರಿ’ ಎಂಬ ಶಬ್ದಕೋಶವನ್ನೂ ರಚಿಸಿದರು.

ಚನ್ನಬಸಪ್ಪನವರಿಂದ ಕನ್ನಡದ ಅಭಿಮಾನವನ್ನು ಬೆಳಗಿಸಿಕೊಂಡು ಆ ಕಾಲದಲ್ಲಿ ಗ್ರಂಥರಚನೆ ಮಾಡಿದವರು ಚುರಮರಿ ಶೇಷಗಿರಿರಾಯರು. ಇವರು ಎಂಜನಿಯರ್ ಆಗಿದ್ದರು. ಸಂಗೀತ, ನಾಟಕಗಳಲ್ಲಿ ವಿಶೇಷವಾದ ಆಸಕ್ತಿ. ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ನಾಟಕವನ್ನು ಅವರು ಭಾಷಾಂತರಿಸಿ, ‘ಬಡವರ ವಿದ್ಯೆಗಾಗಿ ತನು-ಮನ-ಧನದಿಂದ ಸಾಹಸಂ ಪಡುತಿಹ ಧೀರ ಚನ್ನಬಸವೇಶನ ದಿವ್ಯಪಾದ ಭೂಷಣಕ್ಕೆ, ಕಡು ಗುರು ಭಕ್ತಿಯಿಂದ’ ಆ ಕೃತಿಯನ್ನು ಚನ್ನಬಸಪ್ಪನವರಿಗೆ ಅರ್ಪಿಸಿದ್ದಾರೆ. ಅಂದಿನ ಪ್ರಸಿದ್ಧ ಗ್ರಂಥಕರ್ತರಾದ ವೆಂಕಟರಂಗೋ ಕಟ್ಟಿ ಅವರಿಗೆ ಹಲವು ರೀತಿಯಲ್ಲಿ ಚನ್ನಬಸಪ್ಪನವರು ಸಹಾಯ ಮಾಡಿದರು. ಮಿಶನರಿ ಜೆಗ್ಲರ್ ಅವರ ನಿಘಂಟು ರಚನೆಯಲ್ಲಿ ಚನ್ನಬಸಪ್ಪನವರು ಆಸಕ್ತಿ ವಹಿಸಿದ್ದರು.

ಕಾಲೇಜಿನ ಪ್ರಿನ್ಸಿಪಾಲರು

೧೮೬೪ ರಲ್ಲಿ ದಕ್ಷಿಣ ಭಾಗಕ್ಕೆ ವಿಲಿಯಂ ಅಲೆನ್ ರಸೆಲ್ ಎಂಬುವನು ಶಿಕ್ಷಣ ಇಲಾಖೆಯ ಮುಖ್ಯಾಧಿಕಾರಿಯಾದನು. ತಾನು ಬಂದ ಹೊಸದರಲ್ಲಿ ಸರ್ಕಾರಕ್ಕೆ ಕಳಿಸಿದ ವರದಿಯನ್ನು ಕನ್ನಡಿಗರ ಪರಭಾಷಾ (ಮರಾಠಿ) ವ್ಯಾಮೋಹವನ್ನೂ ಮಾತೃಭಾಷಾ ಶಿಕ್ಷಣದ ವಿಷಯವಾಗಿ ಅವರಲ್ಲಿ ಮನೆಮಾಡಿಕೊಂಡಿದ್ದ ಅಸಡ್ಡೆಯನ್ನೂ ಆತನು ಕಟುವಾಗಿ ವಿವರಿಸಿದ್ದಾನೆ. ಕನ್ನಡದ ಸ್ಥಾನವನ್ನು ಸುಭದ್ರಗೊಳಿಸಲು ಆತನು ಸುಮಾರು ಇಪ್ಪತ್ತು ವರ್ಷ ಶ್ರಮಿಸಿದ. ಅದೇ ಸಮಯದಲ್ಲಿ ನಾರ್ಮಲ್ ಸ್ಕೂಲ್ ‘ಕನ್ನಡ ಶಿಕ್ಷಕರ ಟ್ರೈನಿಂಗ್ ಕಾಲೇಜು’ ಆಗಿ ಪರಿವರ್ತಿತ ವಾಯಿತು. ಚನ್ನಬಸಪ್ಪನವರು ಆ ಕಾಲೇಜಿನ ಪ್ರಥಮ ಪ್ರಿನ್ಸಿಪಾಲ್.

ಧಾರವಾಡದಲ್ಲಿ ಕನ್ನಡವು ನೆಲೆಯೂರಲು, ಅದನ್ನು ಕೇಂದ್ರವನ್ನಾಗಿ ಬೆಳೆಸಲು ಈ ಕಾಲೇಜು ಮುಖ್ಯ ಕಾರಣ. ಹಿಂದಿನ ಏಳೆಂಟು ವರ್ಷ ಶಿಕ್ಷಣ ಇಲಾಖೆಯಲ್ಲಿ ಕನ್ನಡದ ಅಭಿಮಾನಿ ಮತ್ತು ಶಿಸ್ತುಗಾರ ಎಂದು ಪರಿಚಿತರಾದ ಚನ್ನಬಸಪ್ಪನವರು ರಸೆಲ್ ಅವರ ಯೋಜನೆಗಳನ್ನು ಕಾರ್ಯ ಗತಗೊಳಿಸುವಲ್ಲಿ ವಿಶೇಷ ಆಸಕ್ತಿ ವಹಿಸಿದರು. ಶಿಕ್ಷಣ ಕ್ಷೇತ್ರಕ್ಕೆ ಮೀಸಲಾದ ‘ಮಠಪತ್ರಿಕೆ’ ಎಂಬ ಹೆಸರಿನ ಪತ್ರಿಕೆಯನ್ನು ಆರಂಭಿಸಿ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ಲೇಖನ ಕಲೆಯನ್ನು ಪ್ರೋತ್ಸಾಹಿಸಿದರು.

ಡೆಪ್ಯುಟಿ ಇನ್ಸ್ ಪೆಕ್ಟರ್

ಮರುವರ್ಷ ಅವರು ಡೆಪ್ಯುಟಿ ಎಜ್ಯುಕೇಷನಲ್ ಇನ್ಸ್‌ಪೆಕ್ಟರ್ ಹುದ್ದೆಯನ್ನು ವಹಿಸಿಕೊಂಡರು. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ೧೫ ವರ್ಷ ಕೆಲಸ ಮಾಡಿದರು.

ಮೊದಲು ಅವರು ಆಡಳಿತದಲ್ಲಿ ಕನ್ನಡವನ್ನು ಬಳಕೆಗೆ ತರುವ ನಿರ್ಧಾರ ಕೈಗೊಂಡರು. ಈ ಕಾಲದಲ್ಲಿ ಉಳಿದ ಇಲಾಖೆಗಳ ಪತ್ರವ್ಯವಹಾರ ವರದಿಗಳಂತೆ ಶಾಲೆಗಳ ಪತ್ರ ವ್ಯವಹಾರವೂ ವರದಿಗಳೂ ಮರಾಠಿ ಭಾಷೆಯಲ್ಲಿ ನಡೆಯುತ್ತಿದ್ದವು. ಇದನ್ನು ಕುರಿತು ರಸೆಲ್ ಹೇಳಿದ್ದಾನೆ, ‘ಈ ಉಪಾಧ್ಯಾಯರು ಕನ್ನಡಕ್ಕಿಂತ ಮರಾಠಿಯನ್ನೇ ಹೆಚ್ಚಾಗಿ ಬಳಸುತ್ತಾರೆ. ಎರಡೂ ಭಾಷೆಗಳನ್ನು ಕಲಿಯುವ ವ್ಯಾಮೋಹವುಳ್ಳ ಇವರಿಗೆ ಯಾವ ಭಾಷೆಯೂ ಚೆನ್ನಾಗಿ ಬರುವುದಿಲ್ಲ’ ಎಂದು. ಚನ್ನಬಸಪ್ಪನವರು ಈ ಕ್ರಮವನ್ನು ಬದಲು ಮಾಡಿದರು. ವರದಿಗಳು ಕನ್ನಡ ಭಾಷೆಯಲ್ಲಿ ಬರೆಯಲ್ಪಡಬೇಕು; ಶುದ್ಧ ಭಾಷೆ, ಸುಂದರ ಹಸ್ತಾಕ್ಷರವುಳ್ಳ ವರದಿಗೆ ಅವರ ವೈಯಕ್ತಿಕ ಪ್ರೋತ್ಸಾಹ. ಹಿಂದೆ ನಾರ್ಮಲ್ ಸ್ಕೂಲ್ ಮತ್ತು ಟ್ರೈನಿಂಗ್ ಕಾಲೇಜಿನಲ್ಲಿ ಅವರ ಶಿಷ್ಯ ರಾಗಿದ್ದವರು ಇಂದು ಹಳ್ಳಿ-ಪಳ್ಳಿಗಳಲ್ಲಿ ಪ್ರಾಥಮಿಕ ಶಾಲೆಗಳ ಉಪಾಧ್ಯಾಯರು. ಆದರೆ ಚನ್ನಬಸಪ್ಪನವರು ಹಿಂದಿನ ‘ಡೆಪ್ಯುಟಿ’ಗಳಂತೆ ಸಾಹೇಬರಾಗಿ ಶಾಲೆಗಳನ್ನು ಸಂದರ್ಶಿಸಲಿಲ್ಲ. ಉಪಾಧ್ಯಾಯರ ಸುಖ-ದುಃಖಗಳನ್ನು ಸಹಾನುಭೂತಿಯಿಂದ ಕೇಳಿಕೊಳ್ಳುತ್ತಿದ್ದರು. ತೊಂದರೆಗಳಿದ್ದರೆ ಅವುಗಳ ನಿವಾರಣೆಗಾಗಿ ಕೂಡಲೆ ಕ್ರಮಕೈಗೊಳ್ಳುತ್ತ ಉಪಾಧ್ಯಾಯರ ಗೌರವಕ್ಕೆ ಪಾತ್ರರಾದರು.

ಶಾಲೆಗಳಲ್ಲಿ ಮಕ್ಕಳ ಜೊತೆಗೆ ಉಪಾಧ್ಯಾಯರು ನಡೆದುಕೊಳ್ಳುತ್ತಿದ್ದ ರೀತಿಯನ್ನು ಅವರು ಸೂಕ್ಷ್ಮವಾಗಿ ಅವಲೋಕಿ ಸುತ್ತಿದ್ದರು. ಮಕ್ಕಳ ಮನಸ್ಸು ಹೂವಿನ ಮೊಗ್ಗು; ಅದು ಸ್ವಾಭಾವಿಕವಾಗಿ ಅರಳುವಂತೆ ಪರಿಸರವನ್ನು ಸೃಷ್ಟಿಸಬೇಕು ಎಂದು ಶಿಕ್ಷಕರಿಗೆ ಹೇಳುತ್ತಿದ್ದರು.

ಪರಭಾಷೆಯ ವ್ಯಾಮೋಹ ಬೇಡ

ಕರ್ತವ್ಯನಿರತ ಶಿಕ್ಷಕರಿಗೆ ಚನ್ನಬಸಪ್ಪನವರಲ್ಲಿ ಆದರ, ಅಪಾರ ಅಭಿಮಾನ. ಅವರ ಮಾತು ಒಮ್ಮೊಮ್ಮೆ ಕಟುವಾಗಿ ಅನಿಸಿದರೂ ಅದರ ಹಿಂದಿನ ಉದ್ದೇಶ ನೋವು ಮಾಡು ವಂಥದಲ್ಲ. ಮೈಗಳ್ಳ ಉಪಾಧ್ಯಾಯರು ಅವರಿಗೆ ಅಂಜುತ್ತಿದ್ದುದು ಸ್ವಾಭಾವಿಕ. ಹಿಂದಿನಿಂದಲೂ ಮರಾಠಿ ಭಾಷೆ ಯಲ್ಲಿ ಅಂಕಿ-ಮಗ್ಗಿಗಳನ್ನು ಹೇಳಿಕೊಡುತ್ತಿದ್ದ ಉಪಾಧ್ಯಾಯರು ಚನ್ನಬಸಪ್ಪನವರ ದಂಡನೆಗೆ ಗುರಿಯಾಗುತ್ತಿದ್ದರು. “ಕನ್ನಡ ಭಾಷೆಯಲ್ಲಿ ಅಂಕಿ-ಮಗ್ಗಿಗಳಿವೆ. ನೀವು ಅವನ್ನು ಚೆನ್ನಾಗಿ ಕಲಿಸಬಲ್ಲಿರಿ. ಆದರೂ ರೂಢಿಯನ್ನು ಬದಲು ಮಾಡಲಾಗದಂಥ ಮನಸ್ಸಿನ ಆಲಸ್ಯತನದಿಂದ ಎಂಥ ಅನ್ಯಾಯ ಮಾಡುತ್ತಿದ್ದೀರಿ ಎಂಬುದರ ಪರಿವೆ ನಿಮಗೆ ಇದೆಯೇ?” ಎಂದು ಕಠಿಣವಾಗಿ ಆಡುತ್ತಿದ್ದರು. ಸಂಭಾಷಣೆಯಲ್ಲಿ, ಉಪನ್ಯಾಸದಲ್ಲಿ ಅನಗತ್ಯವಾದ ಕಡೆಗಳಲ್ಲಿ ಮರಾಠಿಯ ಉಪಯೋಗವನ್ನು ಅವರು ಕಡ್ಡಾಯವಾಗಿ ತಡೆಯುತ್ತಿದ್ದರು.

ಪ್ರತಿಯೊಬ್ಬನೂ ತನ್ನ ಭಾಷೆಯನ್ನು ಮೊದಲು ಚೆನ್ನಾಗಿ ಕಲಿಯಬೇಕು, ತನ್ನ ಭಾಷೆ ಕಲಿಯದಿದ್ದರೆ ಮನಸ್ಸು ಬೆಳೆಯುವುದು ಕಷ್ಟ ಎಂದು ಚನ್ನಬಸಪ್ಪನವರ ಖಚಿತವಾದ ಅಭಿಪ್ರಾಯ.

ಜನತೆಯ ಹಿತಕ್ಕಾಗಿ

ಊರೂರಿಗೆ ಹೋದಾಗ ಚನ್ನಬಸಪ್ಪನವರು ಸಮಾಜಿಕ ಪ್ರಮುಖರನ್ನು ಭೇಟಿಯಾಗಿ ಶಿಕ್ಷಣ ಪ್ರಚಾರದಲ್ಲಿ ಆಸಕ್ತಿ ವಹಿಸುವಂತೆ ಅವರ ಮನವೊಲಿಸುತ್ತಿದ್ದರು. ಮಕ್ಕಳ ಓದು ಸರಿಯಾದ ರೀತಿಯಲ್ಲಿ ನಡೆಯುತ್ತಿದೆಯೇ, ಉಪಾಧ್ಯಾಯರ ನಡವಳಿಕೆಯ ಬಗ್ಗೆ ತೃಪ್ತಿ ಇದೆಯೇ-ಎಂಬುದಾಗಿ ಅವರನ್ನು ಪ್ರಶ್ನಿಸುತ್ತಿದ್ದರು. ಅಲ್ಲಲ್ಲಿಯ ವಾಪಾರಸ್ಥರನ್ನು ಕಂಡು, ಲೆಕ್ಕಪತ್ರ ಗಳನ್ನು ಕನ್ನಡ ಭಾಷೆಯಲ್ಲಿ ಬರೆಯುವುದು ಕನ್ನಡಿಗರ ಕರ್ತವ್ಯ ಎಂದು ಹೇಳಿ ಅವರ ಮನಸ್ಸನ್ನು ಪರಿವರ್ತಿಸುತ್ತಿದ್ದರು. ಯಾವ ಕಾರಣಕ್ಕಾಗಿಯೇ ಆಗಲಿ, ಮಕ್ಕಳ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುವುದನ್ನು ಕೇಳಿದಾಗ ಚನ್ನಬಸಪ್ಪನವರಿಗೆ ತುಂಬಾ ವೇದನೆ. ಅಂಥ ಪಾಲಕರನ್ನು ಭೇಟಿಯಾಗಿ ಮಕ್ಕಳ ಭವಿಷ್ಯವನ್ನು ಹಾಳು ಮಾಡದಂತೆ ವಿನಂತಿಸಿಕೊಳ್ಳುತ್ತಿದ್ದರು. ತಮ್ಮ ಉದಾಹರಣೆಗಳನ್ನು ಕೊಟ್ಟು, “ನಿಮ್ಮ ಮಗ ಮನೆತನಕ್ಕೆ ಕೀರ್ತಿ ತರುತ್ತಾನೆ ಎಂಬ ವಿಶ್ವಾಸದಿಂದ ಅವನನ್ನು ಶಾಲೆಗೆ ಕಳಿಸಿರಿ. ಇಂದಿನ ನಿಮ್ಮ ಸಾಂಸಾರಿಕ ಅಡಚಣೆಗಳಿಗೆ ಭಯಪಟ್ಟು ಆತನ ಭವಿಷ್ಯವನ್ನು ಕತ್ತಲೆಯಲ್ಲಿ ನೂಕಬೇಡಿರಿ” ಎನ್ನುತ್ತಿದ್ದರು. ಅವಶ್ಯಕ ಸಂದರ್ಭಗಳಲ್ಲಿ ಅಂಥ ತಾಯಿ- ತಂದೆಗಳಿಗೆ ಹಣದ ಸಹಾಯ ನೀಡಲು ಅವರು ಮುಂದಾಗುತ್ತಿದ್ದರು.

‘ನಿಮ್ಮ ಸಾಂಸಾರಿಕ ಅಡಚಣೆಗಳಿಗೆ ಭಯಪಟ್ಟು ಹುಡುಗನ ಭವಿಷ್ಯವನ್ನು ಕತ್ತಲೆಯಲ್ಲಿ ನೂಕಬೇಡಿರಿ.’

ಕೇವಲ ಶಿಕ್ಷಣ ಇಲಾಖೆಯ ಒಬ್ಬ ಅಧಿಕಾರಿಯಾಗಿ ಉಳಿಯದೆ ಚನ್ನಬಸಪ್ಪನವರು ಜನತೆಯ ಹಿತಾಸಕ್ತರಾಗಿ ಕೆಲಸ ಮಾಡಿದರು. ಅವರು ಡೆಪ್ಯುಟಿ ಎಜ್ಯುಕೇಷನಲ್ ಇನ್ಸ್‌ಪೆಕ್ಟರ್ ಹುದ್ದೆ ಸ್ವೀಕರಿಸುವ ಮೊದಲು ಧಾರವಾಡ ಜಿಲ್ಲೆಯಲ್ಲಿ ೪೮ ಕನ್ನಡ ಶಾಲೆಗಳೂ ೪೧೬೪ ವಿದ್ಯಾರ್ಥಿಗಳೂ ಇದ್ದರು. ಅವರ ಅಧಿಕಾರಾವಧಿಯ ಕೊನೆಯಲ್ಲಿ ಶಾಲೆಗಳ ಸಂಖ್ಯೆ ೩೪೧, ವಿದ್ಯಾರ್ಥಿಗಳು ೨೯೭೧೧. ಅವರ ಸಾಧನೆಯನ್ನು ಅಳೆಯಲು ಬೇರಾವ ನಿದರ್ಶನವೂ ಬೇಕಿಲ್ಲ.

ಬದಲಾಗುವ ಸಮಾಜದಲ್ಲಿ

ಮತ-ಪಂಥಗಳ ವಿಚಾರದಲ್ಲಿ ಚನ್ನಬಸಪ್ಪನವರು ಕಟ್ಟುನಿಟ್ಟಾದ ಅಭಿಪ್ರಾಯವುಳ್ಳವರು. ಹೊಸ ಕಾಲಕ್ಕೆ ಅನುಗುಣವಾಗಿ ಅವುಗಳಲ್ಲಿ ಮಾರ್ಪಾಡು ಆಗುವುದು ಅಗತ್ಯ. ಸಮಾಜದ ಸಂಘಟನೆ ಮತ್ತು ಬಲವರ್ಧನೆಯು ಈ ಮತ-ಪಂಥಗಳ ಉದ್ದೇಶವಾಗಿರಬಹುದು. ಆದರೆ ಸಮಾಜದ ಸ್ವರೂಪದಲ್ಲಿಯೇ ತೀವ್ರತರದ ಬದಲಾವಣೆ ಗಳಾಗುತ್ತಿರುವ ಸಮಯದಲ್ಲಿ ಹಿಂದಿನ ಮೌಲ್ಯಗಳೇ ಉಳಿಯುವುದೆಂತು? ಸಮಾಜದ ಮುಂದಾಳುಗಳು ಸಾಮಾನ್ಯವಾಗಿ ಮಠಾಧೀಶರು. ಅವರು ಸಮಾಜದ ನಿಜವಾದ ಪ್ರಗತಿಗಾಗಿ ಶ್ರಮಿಸಬೇಕು ಎನ್ನುತ್ತಿದ್ದರು ಚನ್ನ ಬಸಪ್ಪನವರು. ಮತಾಚಾರ್ಯರು ಮಹಾವ್ಯಕ್ತಿಗಳು, ನಿಜ. ಆದರೆ ಅವರ ಸಿದ್ಧಾಂತಗಳು ದೇಶ, ಕಾಲ, ಸಮಾಜಿಕ ಪರಿಸ್ಥಿತಿಗಳನ್ನು ಆಧರಿಸಿವೆ. ಇಂದಿನ ಸಮಾಜದ ಪ್ರಗತಿಗೆ ಪೂರಕವಾದ ವಿಚಾರಗಳನ್ನು ಮಾತ್ರ ನಾವು ಸ್ವೀಕರಿಸಬೇಕು ಎಂಬುದು ಅವರ ನಿಲುವು. ತಮ್ಮ ವಿಚಾರ ಗಳನ್ನು ಅವರು ಮುಚ್ಚುಮರೆಯಿಲ್ಲದೆ ಚರ್ಚಿಸುತ್ತಿದ್ದರು. ಸನಾತನಿಗಳ ಟೀಕೆಗೆ ಅವರು ಒಮ್ಮೊಮ್ಮೆ ಗುರಿಯಾದದ್ದುಂಟು. ಆದರೆ ನವೀನ ವಿಚಾರಗಳಲ್ಲಿ ಶ್ರದ್ಧೆ, ನಮ್ಮ ಸಮಾಜದ ಬಗ್ಗೆ ಇದ್ದ ಅಪಾರ ಕಳಕಳಿ ಮತ್ತು ನೈತಿಕ ಧೈರ್ಯ-ಇವು ಚನ್ನಬಸಪ್ಪನವರನ್ನು ಗೌರವದ ಸ್ಥಾನದಲ್ಲಿ ಇರಿಸಿದ್ದವು.

ಅವರದು ಎತ್ತರವಾದ ಮೈಕಟ್ಟು. ನಸುಗೆಂಪು ಬಣ್ಣ. ಅಸಾಧಾರಣ ಮಾತುಗಾರಿಕೆ. ವೇಷ-ಭೂಷಣ ಅತ್ಯಂತ ಸರಳ.

ಉನ್ನತ ಅಧಿಕಾರ ಪಡೆದ ಚನ್ನಬಸಪ್ಪನವರು ತಮ್ಮ ಅನುಯಾಯಿ ಆಗಬೇಕೆಂದು ಮಠಾಧೀಶರ ಅಪೇಕ್ಷೆ. ಆದರೆ ಅವರು ಸ್ಪಷ್ಟವಾದಿ; ಯಾರ ಹಂಗಿಗೂ ಪಕ್ಕಾಗದವರು.

ಒಮ್ಮೆ-

ಅವರು ಬೆಳಗಾವಿಯಲ್ಲಿದ್ದಾಗ ಒಮ್ಮೆ ಒಂದು ಮಠದ ಆಶ್ರಯದಲ್ಲಿ ಒಂದು ಸಮಾರಂಭ ನಡೆಯಿತು. ಚನ್ನಬಸಪ್ಪ ನವರು ಸಮಾರಾಧನೆಗೆ ಹೋಗಲಿಲ್ಲ. ಅಂದು ನಡೆದ ಮಹಾಸಭೆಯಲ್ಲಿ ಸಮಾಜೋನ್ನತಿಯ ವಿಧಾನಗಳ್ನು ಕುರಿತು ಮುಖಂಡರು ಭಾಷಣ ಮಾಡಿದರು. ಚನ್ನಬಸಪ್ಪನವರ ಸರದಿ ಬಂತು. ಅವರು ಹೇಳಿದರು: “ಸಾವಿರಾರು ಜನ ಸೇರಿ ಪ್ರಸಾದ ಸ್ವೀಕರಿಸಿ ಕಾಲ ಕಳೆದೆವು. ಧರ್ಮದ ಹೆಸರಿನಲ್ಲಿ ಜಯಜಯಕಾರ ಮಾಡಿದೆವು. ಆದರೆ ನಿಜವಾಗಿ ಸಮಾಜದ ಹಿತವನ್ನು ನಾವು ಸಾಧಿಸಿದ್ದೇವೆಯೇ? ಈ ದುಂದು ಖರ್ಚಿನ ನೂರರಲ್ಲಿ ಒಂದು ಪಾಲನ್ನಾದರೂ ನಮ್ಮ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಹಾಸ್ವಾಮಿಗಳು ಅನುಗ್ರಹಿಸಿದ್ದರೆ ದೇಶದ ಕಲ್ಯಾಣವಾಗುತ್ತಿತ್ತು. ಭಾವೀ ಜನಾಂಗವು ಅವರನ್ನು ಬಹುಕಾಲ ನೆನೆಯುವಂತಾಗುತ್ತಿತ್ತು….” ಅಷ್ಟಕ್ಕೇ ನಿಲ್ಲದೆ, ಬೆಳಗಾವಿಯಲ್ಲಿ ಸಮಾಜದ ಬಡ ವಿದ್ಯಾಥಿಗಳಿಗಾಗಿ ಒಂದು ನಿಲಯವನ್ನು ಸ್ಥಾಪಿಸಿ ವಿದ್ಯಾದಾನ ಮಾಡಬೇಕೆಂಬ ಒಂದು ಯೋಜನೆಯನ್ನು ಸಭೆಯಲ್ಲಿ ಅವರು ಮಂಡಿಸಿದರು. ಸ್ವಾಮಿಗಳು ಅದಕ್ಕೆ ಒಪ್ಪಿ ತಮ್ಮ ಆರ್ಥಿದ ನೆರವನ್ನು ನೀಡಿದರು. ಚನ್ನಬಸಪ್ಪನವರ ಸತತ ಪ್ರಯತ್ನದಿಂದ ವಿದ್ಯಾರ್ಥಿಗೃಹವು ಜನ್ಮ ತಾಳಿತು. ಕೆಲವು ಸಂದರ್ಭಗಳಲ್ಲಿ ಆ ಸಂಸ್ಥೆಯ ವೆಚ್ಚವನ್ನು ತಾವೇ ವಹಿಸ ಬೇಕಾಯಿತು. ಸ್ವಾಮಿಗಳ ಆಶ್ರಯ ಇರುವವರೆಗೆ ಮಾತ್ರ ಅದು ನಡೆಯಿತು.

ಸಮಾಜ ಸೇವೆ

ಶಿಕ್ಷಣ ಕ್ಷೇತ್ರವು ಚನ್ನಬಸಪ್ಪನವರ ಸೇವಾ ರಂಗ; ಸಮಾಜ ಸೇವೆಯ ಅವರ ಜೀವನ ಧರ್ಮ. ನಮ್ಮ ಸಮಾಜವು ಸಮಗ್ರ ಭಾರತದ ಒಂದು ಅಂಗವಾಗಿದ್ದು, ದೇಶದ ಅಭ್ಯುದಯವು ಅದರ ಗುರಿಯಾಗಿರಬೇಕು. ವಿವಿಧ ಜಾತಿಮತಗಳು ಪರಸ್ಪರ ವಿರೋಧಕ್ಕೆ ಎಡೆಗೊಡದೆ ಒಂದು ಮನೆಯ ಮಕ್ಕಳಂತೆ ಬೆಳೆದು ದೇಶವನ್ನು ಬಲಪಡಿಸುವುದು ಅಗತ್ಯ. ನಾವು ವಿವಿಧ ಮತ-ಪಂಥಗಳನ್ನು ಅನುಸರಿಸುತ್ತಿರುವ, ಕನ್ನಡ ಭಾಷೆಯ ಒಕ್ಕಟ್ಟಿನಲ್ಲಿ ಬೆಳೆಯುತ್ತಿರುವ, ಕನ್ನಡ ಕುಲದವರು. ಆ ಭಾಷೆಯಿಂದ ಚೈತನ್ಯ ಪಡೆದು, ಇಲ್ಲಿಯ ನೆಲ-ನೀರಿನಿಂದ ಪೋಷಿತವಾದ ಎಲ್ಲ ಜಾತಿ-ಮತಗಳೂ ಈ ನವ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎಂಬುದು ಚನ್ನಬಸಪ್ಪನವರ ಸಂದೇಶ. ತಮ್ಮ ಜೀವನದಲ್ಲಿ ಅವರು ಇದನ್ನು ಸಾಧಿಸಿದರು.

ಇಂಥ ವಿಶಾಲ ಮನೋಭಾವವು ಕನ್ನಡ ಸಾಹಿತ್ಯ, ಕಲೆ, ಧರ್ಮ ಮೊದಲಾದ ವಿಷಯಗಳಲ್ಲಿ ಅವರಿಗೆ ಒಲವು ಮೂಡಿಸಿತ್ತು. ಅವರು ಕನ್ನಡದಲ್ಲಿ ಪುಸ್ತಕ ರಚಿಸಿದರು. ಗ್ರಂಥ ರಚನೆಯ ಮಹತ್ವವನ್ನು ಸುಶಿಕ್ಷಿತರಲ್ಲಿ ಬಿಂಬಿಸಲು ಮಾತ್ರ ಅವರು ಲೆಕ್ಕಣಿಕೆ ಹಿಡಿದರು. ಅವರು ಬರೆದ ಗಣಿತ ಪುಸ್ತಕಗಳು ಅನೇಕ ವರ್ಷ ಪಠ್ಯ ಪುಸ್ತಕಗಳಾಗಿದ್ದವು. ‘ನಗದವರನ್ನು ನಗಿಸುವ ಕಥೆ’, ‘ಮ್ಯಾಕ್ ಬೆತ್’ ಎಂಬ ಪುಸ್ತಕಗಳನ್ನು ಅವರು ಬರೆದಿದ್ದಾರೆ. ಆದರೆ ಅವರು ತಾವು ಬರೆದದ್ದಕ್ಕಿಂತ ಇತರರಿಂದ ಬರೆಸಿದ್ದೇ ಹೆಚ್ಚು. ಶಿಕ್ಷಕರನ್ನು ಮಾತ್ರವಲ್ಲ, ಬೇರೆ ಇಲಾಖೆಯ ಸುಶಿಕ್ಷಿತ ತರುಣರನ್ನು ಪ್ರೋತ್ಸಾಹಿಸಿ ಕನ್ನಡ ಪುಸ್ತಕಗಳನ್ನು ಅವರಿಂದ ಬರೆಸಿ ಕನ್ನಡ ಸಾಹಿತ್ಯವನ್ನು ಅಭಿವೃದ್ಧಿ ಪಡಿಸಿದರು.

ಆತ್ಮವಂಚನೆ ಬೇಡ

ಚನ್ನಬಸಪ್ಪನವರಿಗೆ ಮುಖಸ್ತುತಿ ಸೇರುತ್ತಿರಲಿಲ್ಲ. ಅವರ ಸ್ವಭಾವ ಪರಿಚಯದ ಒಂದು ನಿದರ್ಶನವನ್ನು ಇಲ್ಲಿ ಉಲ್ಲೇಖಿಸಬಹುದು.

ಕನ್ನಡದ ಅಭಿಮಾನಿಯಾದ ಈ ಹೊಸ ‘ಡೆಪ್ಯುಟಿ’ ತಮ್ಮ ಶಾಲೆಗೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಅಲ್ಲಿಯ ಶಿಕ್ಷಕರೊಬ್ಬರು ಇವರ ಗುಣವರ್ಣನೆಯ ಪದ್ಯ ರಚಿಸಿದ್ದರು. ತಮ್ಮ ಕವಿತೆಗೆ ‘ಸಾಹೇಬ’ರಿಂದ ಮೆಚ್ಚುಗೆ ಪಡೆದು ತಾವೂ ಒಬ್ಬ ಕವಿ ಎನಿಸಿಕೊಳ್ಳುವ ಹಂಬಲ ಅವರಿಗೆ. ಆ ಕವಿತೆಯ ಬಗ್ಗೆ ಚನ್ನಬಸಪ್ಪನವರು ಹೀಗೆ ಅಭಿಪ್ರಾಯ ಕೊಟ್ಟರು: “ಮಾಸ್ತರರೇ, ನಿಮ್ಮ ಪ್ರಯತ್ನ ಸ್ತುತ್ಯ. ಆದರೆ ತೊಂಡೇಕಾಯಿಗಿಂತ ದಪ್ಪಾದ ನನ್ನ ಮೂಗನ್ನು ಸಂಪಿಗೆಯ ತೆನೆಯೆಂದು ವರ್ಣಿಸಿದ್ದೀರಿ. ಮುಖಸ್ತುತಿಯಿಂದ ಆತ್ಮವಂಚನೆ ಮಾಡಿಕೊಳ್ಳಬಾರದು. ಕಣ್ಣಿಗೆ ಕಾಣಿಸದ ವಿಷಯಗಳಲ್ಲಿ ಸುಳ್ಳು ಹೇಳಿದರೆ ಕವಿಗಳು ಪಾರಾಗಬಹುದು. ಆದರೆ ಇಂದ್ರ, ಚಂದ್ರ ಎಂದು ನಮ್ಮನ್ನು ಹೊಗಳಿ ಕೊಂಡಾಡಿದರೆ ನಿಮ್ಮ ಕವಿತಾ ಸಾಮರ್ಥ್ಯದ ದುರುಪಯೋಗವಾಗುತ್ತದೆ. ಇಂಥ ಕವಿತೆ ಬರೆಯುವುದಕ್ಕಿಂತ, ಮನೆಗೆ ಹೋಗಿ ಒಂದು ಪಾವು ಜೋಳ ಬೀಸಲು ಸಹಾಯ ಮಾಡಿದರೆ ನಿಮ್ಮ ಹೆಂಡತಿ ಸಂತೋಷಪಟ್ಟಾಳು!”

ಚನ್ನಬಸಪ್ಪನವರು ‘ಡೆಪ್ಯುಟಿ’ ಅಧಿಕಾರದಲ್ಲಿದ್ದಾಗಲೇ ತಮ್ಮ ೪೭ನೆಯ ವಯಸ್ಸಿನಲ್ಲಿ ತೀರಿಕೊಂಡರು. ಅದು ಏಪ್ರಿಲ್ ೧, ೧೮೮೧ರ ದಿನ.

ಇಚಿದೂ ಮಾರ್ಗದರ್ಶಕರು

ಚನ್ನಬಸಪ್ಪನವರು ನೆಟ್ಟ ಸಸಿ ಇಂದು ಹೆಮ್ಮರ ವಾಗಿದೆ. ಹಣ್ಣು-ಕಾಯಿಗಳಿಂದ ತುಂಬಿಕೊಂಡಿದೆ. ಶಿಕ್ಷಣ ಪ್ರಚಾರವು ಸಮಾಜಸೇವೆಯ ಹೆದ್ದಾರಿ ಎಂಬುದನ್ನು ಮನಗಂಡ ಚನ್ನಬಸಪ್ಪನವರ ಸ್ನೇಹಿತರೂ ಶಿಷ್ಯರೂ ಆ ಪರಂಪರೆಯನ್ನು ಭವ್ಯವಾದ ರೀತಿಯಲ್ಲಿ ಬೆಳೆಸಿಕೊಂಡು ಬಂದಿದ್ದಾರೆ. ಕರ್ನಾಟಕದ ಉತ್ತರ ಭಾಗದಲ್ಲಿ ಬೆಳೆದು ನಿಂತ ಹಲವಾರು ಶಿಕ್ಷಣ ಸಂಸ್ಥೆಗಳು ಇದಕ್ಕೆ ನಿದರ್ಶನ.

ಚನ್ನಬಸಪ್ಪನವರಂತಹ ಕನ್ನಡದ ಅಭಿಮಾನಿಗಳ ದಿಟ್ಟ ಪ್ರಯತ್ನಗಳಿಲ್ಲದಿದ್ದರೆ ಇಂದಿನ ನಮ್ಮ ಕರ್ನಾಟಕವು ತನ್ನ ಉತ್ತರ ದಿಕ್ಕಿನ ಬಹುಭಾಗವನ್ನು ಕಳೆದುಕೊಳ್ಳುತ್ತಿತ್ತು. ಕನ್ನಡ ಭಾಷೆ ಪರಕೀಯ ಶಕ್ತಿಗಳ ಮಧ್ಯೆ ತೊಳಲಾಡುತ್ತಿದ್ದಾಗ ಅದಕ್ಕೆ ಸಂಜೀವಿನಿಯನ್ನು ಕೊಟ್ಟವರು ಈ ಹಿರಿಯರು. ಕನ್ನಡಿಗರ ಆತ್ಮಶಕ್ತಿಗೆ ಅವರು ಚೈತನ್ಯದಾಯಕರು.

ಕರ್ನಾಟಕ ಒಂದು ರಾಜ್ಯವಾಗಿ, ಅಲ್ಲಿನ ಜನ ಒಂದು ಆಡಳಿತದಲ್ಲಿ ಈಗ ಬಂದಿದ್ದಾರೆ. ಕನ್ನಡಿಗರ ಪ್ರಗತಿಗೆ ಇದು ಒಂದು ಸಾಧನ ಮಾತ್ರ. ಈ ಸಾಧನದ ಮೂಲಕ ನಾವು ಮುಂದೆ ಸಾಗಬೇಕು. ಕನ್ನಡ ಜನತೆಯಲ್ಲಿ ಆತ್ಮಶ್ರೀ ಬೆಳಗದೆ ಯಾವ ಸಾಧನದಿಂದಲೂ ಪ್ರಯೋಜನವಿಲ್ಲ. ತಮ್ಮ ಬದುಕು ಮತ್ತು ಆದರ್ಶಗಳಿಂದ ಚನ್ನಬಸಪ್ಪನವರು ನಮಗೆ ನಿತ್ಯನೂತನ ಮಾರ್ಗದರ್ಶಕರಾಗಿದ್ದಾರೆ.