ವಚನ :
ಇಂತು ಗಿರಿಜಾದೇವಿಯು ಭಜನಿಯನ್ನು ಮಾಡಲಾಗಿ, ಅಲ್ಲಮನು ಮನ ಒಲಿದು ಬಂದು ಸಿರಸ್ಸಿನ ಮೇಲೆ ಹಸ್ತವನ್ನು ಇರಿಸಿ, ತಥಾಸ್ಥುಯಂದು ನಿನ್ನನ್ನೇ ಲಗ್ನವಾಗುತ್ತೇನೆಂದು ಹೇಳಿ ಅಂತರ್ಧಾನವಾದನು. ಇತ್ತ ಗಿರಿರಾಯನು ಸುತಳ ಸನ್ನಿಧಿಗೆ ಬಂದು ಅನ್ನುವದೇನಂದರೆ –
ಪದ :
ಮನಿಗೆ ನಡಿಯ ಪಾರ್ವತಿ ನೀನಾ ನನ್ನ
ಮನಸಿನಂತಾಹರೆ ಬರುವೆ ನಾ || ೪೨ ||
ನಿನ್ನ ಮನೋರಥಾ ಅದು ಏನಾ ಬಹು
ಮನ್ನಿಸಿ ಶಿವನಿಗೆ ಕೊಡು ನನ್ನಾ || ೪೩ ||
ಭಾಷೆ ಕೊಟ್ಟ ಹೆಣ್ಣ ಬಿಡುದಿಲ್ಲ
ಶಿಸುಪಾಲ ರುಕ್ಮಿಣಿ ಬಿಡಲಿಲ್ಲ || ೪೪ ||
ಗೆದ್ದೊಯ್ದನಾಕಿಯ ಹರಿ ತಾನು ನಾನು
ಗೆದ್ದವರಿಗೆ ಮಾಲಿ ಹಾಕುವೆನು || ೪೫||
ನಿನ್ನ ದಾವ ಪುರುಷ ಗೆದಿಯುವನು
ಮಹಾದೇವನು ನಿಶ್ಚಯ ತಿಳಿ ನೀನು || ೪೬ ||
ಗೆದೆಯನು ನಿನ್ನ ನಂತಾದ್ರೀಶ
ನಿನಗದರ ಚಿಂತಿಯಾತಕೋ ಶೈಲೇಶಾ || ೪೭ ||
ವಚನ :
ಇಂತು ಗಿರಿರಾಯನ ಮಗ ಮಾತಿಗೆ ಒಪ್ಪಿ ಮಗಳನ್ನು ಮಂದಿರಕ್ಕೆ ಕರೆದುಕೊಂಡು ಬಂದು ಲಗ್ನ ಮಂಟಪವನ್ನು ಸಿಂಗರಿಸಿ ದೇಶ ದೇಶದ ರಾಜರಿಗೆ ಪತ್ರ ಬರೆದನು –
ಪದ :
ಬರಿದಾನೊ ಪತ್ರವ ಗಿರಿರಾಯ ವತ್ತರದಿ
ಕರಿಸ್ಯಾನೊ ಛತ್ರಪತಿ ಅರಸರನ || ೪೮ ||
ಗಿರಿಜಾತಾ ಬಂದನು ಹರಿಸುತ ಬಂದನು
ಗಿರಿಜಾತಾ ಲಗ್ನ ಮಂಟಪಕ್ಕ || ೪೯ ||
ಶ್ರೀಧರ ಬಂದನು ಬುಧರ ಬಂದನು
ಶ್ರೀಕರ ಪಾರ್ವತಿ ಮಂಟಪಕೆ || ೫೦ ||
ಸುರಮುನಿ ಬಂದನು ನರಪತಿ ಬಂದನು
ಗಿರಿಜಾತೆ ಲಗ್ನ ಮಂಟಪಕೆ || ೫೧ ||
ಅಜ ಹರಿ ಬಂದರು ರವಿ ಚಂದ್ರರು ಬಂದರು
ರಾಜ ಪಾರ್ವತಿ ಲಗ್ನ ಮಂಟಪಕ || ೫೨ ||
ವಚನ :
ಇಂತು ನೆರೆದ ಸಭೆಯಲ್ಲಿ ಎನ್ನ ಪಂಥವ ನಡಿಸೌ ಗಿರಿಜೆಯೆನಲ್ಕೆ, ಪಾರ್ವತಿಯು ಪಟ್ಟೆ ಪೀತಾಂಬರವನ್ನುಟ್ಟು, ತಲಿಯಮೇಲೆ ಕಿರೀಟವನ್ನಿಟ್ಟು, ತೊಡಿಯ ಮೇಲೆ ಬಟ್ಟಿನಷ್ಟು ಕೂಸನಿಟ್ಟು, ಒಂದ ಕೈಲೆ ಈ ಕಂದನನ್ನು ಆರು ನೆಗುವುವರೋ ಅವರನ್ನೇ ಲಗ್ನವಾಗುವೆನು ಎಂದಳಾ ಮಾದೇವಿ –
ಪದ :
ನೆರಿದ ರಾಜಗಳು ಪರಿ ಪರಿಯಲಿ ಬಂದು
ಕಂದನ ಮುಖ ನೋಡುವರು ಹಿಂದಕ ಸರಿಯೂರು || ೫೩ ||
ಪಟ್ಟದ ರಾಜರು ಅಷ್ಟ ದಿಕ್ಪಾಲಕರು
ದಿಟ್ಟ ಕಂದನ ನೋಡಿ ಆನಂದ ಪಡೆಯುವರು || ೫೪ ||
ಹರಿ ತಾನು ಬಂದಾನು ವರ ಕಂದನಡಿಗೆ
ಒಂದು ಕೈಲೆ ಕಂದನ ನೆಗವುವು || ೫೫ ||
ಎತ್ತಲಿಲ್ಲ ಅಂದಾನೊ ಕೈ ಕತ್ತಿಯ ಹಿರಿದನು
ಕತ್ತರಿಸಿ ಕೂಸಿನ ಕೆಡವುವೆನು || ೫೬ ||
ಕಿತ್ತು ಎತ್ತ್ಯಾನು ಕೈ ಕತ್ತಿಯ ಮೇಲಕೆ
ಎತ್ತಿದ ಕೈ ನಿಂತಿತು ಮ್ಯಾಗ || ೫೭ ||
ವಚನ :
ಆವಾಗ್ಯೆ, ಶ್ರೀಹರಿ ಪರಮಾತ್ಮನು ಜ್ಞಾನದೃಷ್ಟಿಯಿಂದ ನೋಡಿ ಈ ಕಂದನು ಕಂದನಲ್ಲ. ಕಂದುಗೊರಳನೆಂದು ಶಿವನ ಭಜನೆಯನ್ನು ಮಾಡಿದೆನೊ ಆ ಗೋವಿಂದನೋ –
ಭಜನೆ :
ಈಶ ಮಹೇಶನೆ ವಾಸುಭೂಷಣನೆ
ಪೋಷಿಸು ನಮ್ಮನು ಗಡ ಬಾಲಕನು
ಅಂಬಿಯ ತೊಡಿಯಲಿ ಇಂಬವ ಕೊಟ್ಟವನು
ಸಾಂಬ ಸದಾಶಿವ ಬಾಲಕನು
ಶೂಲಧರನ ತವ ಜಾಲವನರಿಯದೆ
ಬಾಲ ರಕ್ಷಿಪುದು ಬಾಲಕನು
ವಚನ :
ಇಂತು ಶ್ರೀಹರಿ ನಿಂತು ಭಜಿಸಲ್ಕೆ ಸ್ತೋತ್ರಕ್ಕೆ ಮೆಚ್ಚಿ ಕಂತು ಹರನು ಬಂದನೋ –
ಪದ :
ಬಂದನೊ ಶಿವರಾಯ ಮಂದಿರಕೆ
ಒಂದ ಕೈಲೆ ಕೂಸಿನ ನೆಗವುದಕ || ೫೮ ||
ಗಿರಿಸುತೆ ಪಾರ್ವತಿ ಹರುಷದಿ ನಾಚುತ
ಬಂದು ಪಾದದ ಮೇಲೆ ಬೀಳುದಕ || ೫೯ ||
ಹರುಷದಿ ಶಂಕರ ಕರವ ಪಿಡಿದಾನೊ
ಸರ್ವರು ಸೋಬಾನ ಪಾಡುದಕ || ೬೦ ||
ಬ್ರಹ್ಮನು ಬಂದಿನು ಅಕ್ಷತಿ ಮಂತ್ರಕ
ಮಂಗಲ ತಾಳಿ ಕಟ್ಟುದಕ || ೬೧ ||
ಚಂದದಿ ಚಪ್ಪಾಳೆಗೊಂಡಾರೊ
ಅಕ್ಷತಿ ಕಾರ್ಯವ ಮುಗಿಸಿದರು || ೬೨ ||
ಬಂಧು ಬಾಂಧವರೆಲ್ಲ ನೆರೆದ ಸಂದಣಿಯಲ್ಲಿ
ಸಾಂಬನ ಮೇಲೆ ಸೋಬಾನ ಪಾಡಿದರೊ || ೬೩ ||
ಮಂಗಳಗೌರಿಗೆ ಮಂಗಳವಾಯಿತು
ಪರಶಿವನೊಳು ಲಗ್ನ ಮುಗಿಯಿತು || ೬೪ ||
ನೆರೆದ ಜನರೆಲ್ಲ ಸಾಂಬನ ಮೇಲೆ
ಮಂಗಳಾರತಿಯನ್ನು ಎತ್ತಿದರು || ೬೫ ||
ಧಾರುಣಿ ಮೇಲೆ ಮೆರೆವುದು ಮಣಕಟ್ಟಿ
ಸಾಂಬನ ಮದುವಿಗೆ ಕವಿಕಟ್ಟಿ || ೬೬ ||
* * *
ಚಿಲ್ಲಾಟ
ಭೂಮಿಯೊಳಗ ಒಂದು ನೇಮವಾದ ಮಾತು
ಎಲ್ಲ ಜನರು ಕೇಳಿರಿ ಕೂತು || ೧ ||
ಕೈಲಾಸ ಬಿಟ್ಟು ಶಿವ ಬಂದಾನು
ಭಕ್ತರ ಭಾವಾ ನೋಡುದಕ || ೨ ||
ಬಾವಾನಾಗಿ ಶಿವ ಭಿಕ್ಷಕ ಬಂದನು
ಮೃತ್ಯುಲೋಕ ಎಂಬುದರೊಳಗ || ೩ ||
ಹರ ಹರ ನಿಮ್ಮ ಗುರುವಿನ ಧರ್ಮ
ಭಿಕ್ಷ ನೀಡಪ್ಪ ತಂಗಿ ಎನಗ || ೪ ||
ಬಾಲ ಮಕ್ಕಳೆರಡು ಬಾಗಿಲ ತೋಳು ಹಿಡಿದು
ಮೂಳ ಬಾವಾ ಹೋಗ ಮುಂದಕ || ೫ ||
ಮುಂದಿನ ಬಾಗಿಲಕ ಹೋಗಿ ನಿಂತಾನು
ಹುಲಿಯ ಚರ್ಮ ಅವನ ಬಗಲಾಗ || ೬ ||
ಹರ ಹರ ನಿಮ್ಮ ಗುರುವಿನ ಧರ್ಮ
ಭಿಕ್ಷ ನೀಡವ್ವ ತಂಗಿ ಎನಗ || ೭ ||
ಕೈಯಾಗ ರೊಟ್ಟಿ ತೊಡಿಮ್ಯಾಗ ಕೂಸು
ಮುಂದಕ ಹೋಗು ಬಾವಯ್ಯನವರ || ೮ ||
ಇಷ್ಟು ಕೇಳಿ ಶಿವ ಹೊಂಟು ನಿಂತಾನು
ಮೃತ್ಯಲೋಕ ಎಂಬುದು ಸಾಕು || ೯ ||
ಕೇಳ ಪಾರ್ವತಿ ನಿನಗ ಹೇಳತೇನಿ
ಬಾವಾನಾಗಿ ಹೋಗಿದ್ದೆ ಭಿಕ್ಷಕ್ಕ || ೧೦ ||
ಧರ್ಮ ಎಂಬುದು ನಿಲ್ಲಾಕ ಜಗವಿಲ್ಲ
ತಪಸ್ಸು ಮಾಡೇತಿ ಮುಳ್ಳು ಮನೆಯ ಮೇಲ || ೧೧ ||
ಕರ್ಮ ಎಂಬುದು ನೀರಿನ ಪ್ರಕಾರ
ಹರದಾಡತೈತಿ ಭೂಮಿಯ ಮ್ಯಾಲ || ೧೨ ||
ಕೇಳ ಸಾಂಬಾ ನಿನಗ ಹೇಳತೇನಿ
ಕಂಚಿ ಎಂಬ ಪಟ್ಟಣದೊಳಗೆ || ೧೩ ||
ಶಿರಿಯಾಳಶೆಟ್ಟಿ ಮಡದಿ ಇರುವಳು
ದಾನ ಮಾಡತಾಳ ಬಲ್ಲಾಂಗ || ೧೪ ||
ಬೇಡಿದ ದಾನ ನೀಡತೇನಂತ
ಕಾಳಿ ಹಿಡಸತಾಳ ನಾಡ ಮೇಲಾ || ೧೫ ||
ಬಿರದಿನ ಕಾಳಿ ಶಬ್ದವ ಕೇಳಿ
ಹೋಗಿ ಮುಟ್ಟ್ಯಾವ ಕೈಲಾಸಕ್ಕ || ೧೬ ||
ಕೇಳ ಪಾರ್ವತಿ ನಿನಗ ಹೇಳತೇನಿ
ಹೋಗಿ ಬರುವೆ ಕಂಚಿ ಪಟ್ಟಣಕ || ೧೭ ||
ಮುಪ್ಪಾನ ಮುದಿ ಜಂಗಮನಾಗಿ
ಹೋದಾನು ಕಂಚಿ ಪಟ್ಟಣಕ || ೧೮ ||
ಹರ ಹರ ನಿಮ್ಮ ಗುರುವಿನ ಧರ್ಮ
ಭಿಕ್ಷ ನೀಡವ್ವ ತಂಗಿ ನಮಗ || ೧೯ ||
ಹರ ಹರ ಶಬ್ದವು ತರುಣಿಯು ಕೇಳಿ
ಕಾಳ ತಂದಾಳು ಮುತ್ತಲ ತುಂಬ || ೨೦ ||
ಕಾಳ ನೋಡಿ ಮಾರಿ ಹೋಳ ಮಾಡತಾನ
ಕಾಳಿನಯ್ಯ ಅಲ್ಲವ್ವ ಇವನು || ೨೧ ||
ಮುತ್ತಲ ತುಂಬ ಹೊನ್ನು ತುಗೊಂಡು ಬಂದು
ಹಿಡಿಯಿರಿ ಸ್ವಾಮಿ ನಿಮ್ಮ ಜೋಳಿಗಿನ || ೨೨ ||
ಹೊನ್ನು ಹಣ್ಣ ವಯ್ಯಲಾಕವ್ವ ತಂಗಿ
ಮಕ್ಕಳು ಮರಿ ಇಲ್ಲವ್ವ ಎನಗ || ೨೩ ||
ಆನಿಯ ಕೊಡತೇನಿ ಒಂಟಿಯ ಕೊಡತೇನಿ
ಹತಗೊಂಡು ಅಡ್ಡಾಡು ನಾಡಮ್ಯಾಲ || ೨೪ ||
ಇಂಥ ದೌಲತ್ತು ಯಾರಿಗೆ ಬೇಕವ್ವ
ಊರ ಹೊರಗಿ ಇರುವ ಪರದೇಶಿಗೆ || ೨೫ ||
ಏನ ಬೇಡತೀದಿ ಬೇಡ ಜಂಗಮ
ಬೇಡಿದ್ದ ಕೊಡತೇನಿ ನಾ ನಿನಗ || ೨೬ ||
ಬೇಡಿದ ದಾನ ನೀಡತೇನಿ ಅಂತಾ
ಬಂದು ಮುಟ್ಟು ಎನ್ನ ಪಾದವನಾ || ೨೭ ||
ಏಕೋಭಾವದಿಂದ ಚಾಂಗುಣಿ ಹೋಗಿ
ಹಿಡಿದಾಳು ಸ್ವಾಮಿಯ ಪಾದವನಾ || ೨೮ ||
ನಿನ್ನ ಮಗನ ಚಿಲ್ಲಾಳನ ಕೊಯ್ದು
ಅಡಗಿ ಮಾಡಿ ಉಣಿಸವ್ವ ಎನಗ || ೨೯ ||
ಕುತ್ತಿಗಿ ಶಿರಾ ಬಿಗಿ ಹಿಡಿಕೊಂಡು
ಹೋಗಿ ನಿಂತಾಳು ಬಾಗಿಲದಾಗ || ೩೦ ||
ಬಾರೋ ಬಾರೋ ಮಗನೆ ಚೆಲ್ಲಾಳ
ನೀನು ಮನಿಗೆ ಬರಬೇಕು || ೩೧ ||
ಪಾಟಿಯ ಗಂಟು ಕೂಸು ಬರುವದು ಕಂಡು
ಹಿರಿ ಹಿರಿ ಹಿಗ್ಗ್ಯಾಳು ಮನದಾಗ || ೩೨ ||
ಕುತನಿಯ ಜರಾ ಗೊಂಡೆದ ಟೊಪ್ಪಿಗೆ
ಹ್ಯಾಂಗ ಒಪ್ಪ್ಯಾವು ನಮ ಚಂದ್ರಾಮಗ || ೩೩ ||
ಯಾರೇನಂದರವ್ವ ಯಾರೇನ ಬೈದಾರವ್ವ
ಯಾಕವ್ವ ನಿನಗ ಕಣ್ಣೀರ || ೩೪ ||
ಐನ್ಯಾರು ಬಂದಾರು ಅಡಗಿ ಮಾಡಕ ಇಟ್ಟೇನಿ
ಹೊಗಿಯ ಸೋಂಕಿ ಬಂದಾವ ನೀರ || ೩೫ ||
ಹೊಗಿಯ ಸೋಂಕಿದ ನೀರಲ್ಲವ್ವ ತಾಯಿ
ದುಃಖದ ಕಣ್ಣೀರು ಅಂದಾನು || ೩೬ ||
ಹೊಸದೊಂದು ಈಳಿಗಿ ಮಸದೊಂದು ಇಟ್ಟೀದಿ
ಚಮತ್ಕಾರ ಹೇಳವಲ್ಲೆಪ್ಪ ಎನಗ || ೩೭ ||
ಸ್ವಾಮಿ ಜೊಳಿಗ್ಯಾಗ ನೇಮದ ಕಾಯಿಪಲ್ಲೆ
ಹಚ್ಚಿ ಪಲ್ಲ್ಯವ ಮಾಡುದಕ || ೩೮ ||
ಮಲಿಯ ಉಣ್ಣುತ ಮಲಗಿದ ಕಂದಗ
ಮಾಯದ ನಿದ್ರೆ ಗವಿದಿತು ಆಗ || ೩೯ ||
ಸಣ್ಣ ಈಳಿಗಿ ಸರಿಸ್ಯಾಳ ಚಾಂಗು
ಕಂದನ ಶಿರವನು ಕೊಯ್ಯುದಕ || ೪೦ ||
ಶಿರಾ ಒಯ್ದು ನೆಲವಿನ ಮ್ಯಾಲ ಇಟ್ಟಳು
ದೇಹ ಹೆಚ್ಚ್ಯಾಳು ಬಹು ಸಣ್ಣಾಗಿ || ೪೧ ||
ಅಡಗಿ ಮಾಡಿ ಏನ್ಯಾರ್ನ ಕುಡಿಯುತಾಳ
ಏಳರಿ ಸ್ವಾಮಿ ನಿಮ್ಮ ಜಳಕಕ್ಕ || ೪೨ ||
ಜಳಕ ಮಾಡಿ ಗದ್ಗೀಗಿ ಮ್ಯಾಲ ಕುಂತು
ಜಂಗಮ ನುಡಿತಾನು ಬಲ್ಲಾಂಗ || ೪೩ ||
ಯಾಕೋ ಚಾಂಗುಣಿ ನಿನ್ನ ಮನಸು
ಬಹಳ ಚಂಚಲಾಗಿರಬಹುದು || ೪೪ ||
ಶಿರಾ ನೋಡಿ ದಿನಗಳೀ ಬೇಕಂತ
ಒಯ್ದ ಇಟ್ಟೀದಿ ನೆಲವಿನ ಮ್ಯಾಗ || ೪೫ ||
ಶಿರಾ ಜಜ್ಜಿ ಚಟ್ಟನಿ ಮಾಡಿದರೆ
ನಾನು ಉಂಡು ಹೋಗುವೆನೀಗ || ೪೬ ||
ಶಿರಾ ಜಜ್ಜಿ ಚಟ್ಟನಿ ಮಾಡಿ
ನಾಲ್ಕೆಡಿಯ ಮ್ಯಾಗ ಇಟ್ಟಳು ಆಗ || ೪೭ ||
ಒಂದೆಡಿ ನನಗಾತು ಒಂದೆಡಿ ನಿನಗಾತು
ಒಂದೆಡಿ ನಿನ ಗಂಡನಿಗೆ || ೪೮ ||
ತುಂಬಿದ ಮನಿಯಾಗ ಎಡಿ ಉಳಿಬಾರದವ್ವ
ಕರಿಯಬೇಕು ನಿನ್ನ ಮಗನ್ನ || ೪೯ ||
ಇದ್ದೊಬ್ಬ ಮಗನ ಕೊಯ್ದು ಅಡಗಿ ಮಾಡಿ ಇಟ್ಟೇನಿ
ಇನ್ನೆಲ್ಲಿ ತರಲವ್ವ ಮಗನ್ನ || ೫೦ ||
ಮಕ್ಕಳಿಲ್ಲದ ಮನಿಯಾಗ ತಾಯಿ
ನಂದು ಬಿನ್ನಾಯ ಆಗೂದಿಲ್ಲ || ೫೧ ||
ಇಷ್ಟು ಹೇಳಿ ಶಿವಾ ಹೊಂಟು ನಿಂತಾನು
ಚಾಂಗುಣಿ ಬಂದಾಳು ಬಾಗಿಲಕ || ೫೨ ||
ಒಳ್ಳ ಮ್ಯಾಲಿನ ಒನಕೆಯ ತಗೊಂಡು ಮೂರೇಟು ಹೊಡಿತೇನಿ
ಸತ್ತ ಬಳಿಕ ಎಳಿತೇನಿ ದನದ ಕಾಲಾಗ || ೫೩ ||
ನಾಗಬೆತ್ತ ಕೊಡತೇನಿ ಕೂಗಿ ನಿನ್ನ ಮಗನ್ನ ಕರಿ
ಓಡಿ ಬರುವ ಚಿಲ್ಲಾಳಾಗ || ೫೪ ||
ನಾಗಬೆತ್ತ ತೋರಿ ಕೂಗಿ ಮಗನ್ನ ಕರಿತಾಳ
ಓಡಿ ಬಂದ ಮಗ ಚೆಲ್ಲಾಳ || ೫೫ ||
ಕುದೂ ಗಡಿಗ್ಯಾನ ಕೂಸು ಕುಣಕೊಂತ ಓಡಿ ಬಂದು
ಸರಿಯಾಗಿ ಕುಂತಾನ ಪಂತ್ಯಾಗ || ೫೬ ||
ಧರಿಯೊಳು ದ್ಯಾಮಪುರ ವರ ಚಿಲ್ಲಾಳನ
ಸರಸದಿ ಪೇಳುವೆ ಕತೆಯನ್ನ || ೫೭ ||
Leave A Comment