ಗಜಾಸುರ

ಉಗ್ರ ತಪಸ್ಸವ ಮಾಡಿದನೋ ಗಜಾಸುರ
ಆನಿ ಮುಖದವನೋ                || ೧ ||

ಗಡ್ಡಿ ಗೆಣಸಿನ ಹಂಪಲ ಸಾಧಿಸಿ
ದುಡ್ಡಿನ ತೂಕದಗ್ನಿಯನು            || ೨ ||

ಬಂದು ಆತನ ಭಾವಕ ಒಲಿದನು
ಭೆಟ್ಟಿಯನಾದನು ಈಶ್ವರನು                  || ೩ ||

ಬೇಡಿದ್ದಾವರವನು ಕೊಡುವೆನಂದಾ
ಹೇಳಿದ ವಚನವನು                 || ೪ ||

ಅಂದ ಮಾತಿಗೆ ಅದ್ಭುತ ರಾಕ್ಷಸ
ಎಂಥ ವರವನ್ನು ಬೇಡಿದನು                   || ೫ ||

ಆಯುಷ್ಯ ಐಶ್ವರ್ಯ ಒಲ್ಲೆ
ಈಶ್ವರ ನಿನ್ನ ನುಂಗುವೆನು          || ೬ ||

ಕೊಟ್ಟ ವಚನ ತಪ್ಪುವನಲ್ಲೆಂದು
ಶೃತಿಯೇ ಸಾರುವದು ಈಶ್ವರನದು           || ೭ ||

ಭೂಮಿಯಾಕಾಶ ಏಕಾಗಿ ನಿಂತು
ನುಂಗುಂತ್ಹೇಳಿದ ಈಶ್ವರನು                  || ೮ ||

ಅದ್ಭುತ ರಾಕ್ಷಸ ತನ್ನ
ಶಕ್ತಿಲೆ ಎಳದಾಡಿದನು               || ೯ ||

ಹಲಿಕ್ಯಾಡದೆ ಕುಂತ ಮುಕ್ಕಣ್ಣ ಈಶ್ವರ
ಮುಂದೇನ್ಹೇಳಿದ ರಾಕ್ಷಸನು                   || ೧೧ ||

ಮೂರು ತಿಂಗಳ ಕೂಸಿನಂತೆ
ಮುಂದೆ ನಿಂದರಂತ್ಹೇಳಿದನು                 || ೧೧ ||

ಈಶ್ವರಗ ಎಂಥಾ ವ್ಯಾಳ್ಯವ ಬಂದಿತು
ಹಾಳಾಗುದು ಕೈಲಾಸವನು                   || ೧೨ ||

ಶಿಶುವಿನ ವೇಷ ತಾಳಿ ಈಶ್ವರ
ರಾಕ್ಷಸಗ ಇದರಾದನು               || ೧೩ ||

ಈಶ್ವರ ನೀ ಮೂರು ಲೋಕಕೆ
ಅಧಿಕಾರಿ ಆದವನು                  || ೧೪ ||

ಅಂದ ನುಂದಿದನು ಕುಂಭಸ್ಥಲಕ
ಹೋಗಿ ಕುಂತನು ಈಶ್ವರನು                  || ೧೫ ||

ಮುಂದ ಕೇಳರಿ ಮುಕ್ಕಣೀಶ್ವರ
ಮುಣಗಿದ ಕತೆಯನು ಹೇಳುವೆನು            || ೧೬ ||

ಬ್ರಹ್ಮ ದೇವನು ಹಮ್ಮನಾಡಿದನು
ಇನ್ನ್ಯಾಕಹ್ವಾದನು ಈಶ್ವರನು                 || ೧೭ ||

ಅವನಂತೆ ನನಗೆ ಐದು ಮುಖವು
ಆಳುವೆನು ಕೈಲಾಸವನು            || ೧೮ ||

ಪಾರ‍್ವತಿ ನನ್ನ ತೊಡಿ ಮ್ಯಾಗ ಕುಳಿತರೆ
ಈಶ್ವರನ ಸರಿಯಾಗುವೆನು                   || ೧೯ ||

ಬಸವಣ್ಣನ ಕರದ್ದೇಳಿದನು
ಕರಸಬಕು ಇಲ್ಲಿಗೆ ಪಾರ್ವತಿಯನು            || ೨೦ ||

ಏ ತಾಯಿ ಈ ಶಿವನ ಸದರಿಗೆ
ಬ್ರಹ್ಮ ಅಧಿಕಾರಿಯಾಗುವನು                  || ೨೧ ||

ಆ ದೇವಿಗೆ ಅವನಾಳಿನಂತೆ
ನಿನ್ನ ಕರಿತಾರೆಂಬುವನು             || ೨೨ ||

ಬಸವಣ್ಣ ಇನ್ನಿರುವದಿಲ್ಲ
ಕಡಿಸ ಅಗ್ನಿಕುಂಡ ಹಾರುವೆನು                || ೨೩ ||

ಇನ್ನೊಬ್ಬಗ ಈ ದೇಹ ತೋರಿದರ
ಎಲ್ಲಿರುವದು ಪತಿವೃತನವು          || ೨೪ ||

ಅಂದ ಮಾತಿಗೆ ಬುದ್ಧಿಯ ಹೇಳಿ
ಇದ್ದಲ್ಲಿ ಹುಡುಕುವೆ ಈಶ್ವರನನು               || ೨೫ ||

ಈಶ್ವರನ ನುಂಗಿದ ರಾಕ್ಷಸನ
ಅಗಸಿಗೆ ಬಂದ ಬಸವೇಶ್ವರನು                || ೨೬ ||

ಮುಂದ ಬಾಗಿಲ ಕಾಯುವಂಥಾ
ಮೃದಂಗಸುರ ದೈತ್ಯನು            || ೨೭ ||

ಬಂದ ಮಾಡಿ ಬಸವಣ್ಣನ ತರುಬಿ
ಬಿಡದ್ಹಾಂಗ ಮಾಡಿದ ಮಾರ್ಗವನು           || ೨೮ ||

ಯುದ್ಧ ಮಾಡಿ ಎನ್ನ್ಹೊಡಿದು
ಗೆದ್ದು ಹೋಗು ಆಡಿದ ಶಬ್ದವನು               || ೨೯ ||

ಗುದ್ದಿ ಪಾದದೊಳು ಮೆಟ್ಟಿದನು
ಮತ್ತೇನು ಹೇಳಿದನು ರಾಕ್ಷಸನು              || ೩೦||

ಬಸವಣ್ಣ ಪಾವನವಾಗಲು ಈ
ಶರೀರ ನಿನ್ನಲ್ಲಿ ಎಂಬುವನು                   || ೩೧ ||

ತೆಲಿಯ ಪಡಗವ ಚರ್ಮವ ಮುಚ್ಚಿದೆ
ಎಲಬಿನ ಗಟಿ ಮಾಡಿದನು           || ೩೨ ||

ನರಾ ಹಗ್ಗ ಮಾಡಿ ಬಿಗಿದು ಮದ್ದಲಿ
ಕೊರಳಿಗ್ಹಾಕಿ ಬಸವೇಶ್ವರನು                  || ೩೩ ||

ಹೋಗಿ ಗಜಾಸುರನ ಮುಂದೆ ನಿಂತು
ಮದ್ದಳೆ ಬಾರಿಸಿ ಹಾಡಿದನು                   || ೩೪ ||

ಮಸ್ತಕದೊಳಗ ಇದ್ದ ಈಶ್ವರನು
ಮದ್ದಲಿ ನಾದನು ಕೇಳುವನು                  || ೩೫ ||

ಜಿಗಿದು ಮ್ಯಾಲಕ ಹಾರಿದನು
ಎರಡು ಹೋಳು ಆದ ರಾಕ್ಷಸನು              || ೩೬ ||

ಈಶ್ವರ ಪಾವನವಾಗಲಿ ಈ
ಶರೀರ ನಿನ್ನಲ್ಲಿ ಎಂಬುವನು                   || ೩೭ ||

ಆನಿ ಚರ್ಮ ಆವಾಗ ಹೊತ್ತನು
ಬಂದ ಕಂಡ ಕೈಲಾಸವನು          || ೩೮ ||

ಹಮ್ಮಿಲೆ ಆಡಿದ ಬ್ರಹ್ಮದೇವರು
ಈಶ್ವರನ ಗದ್ದಿಗೆ ಮೇಲಿದ್ದನು                  || ೩೯ ||

ಹಲ್ಲು ಕಡಿದು ಅವನ ಶಿರಾ ಹಿಡಿದು
ಚಲ್ಲುಗುರಿನಿಂದ ಚಿವಟಿ ಒಗೆದನು             || ೪೦ ||

ತೆಲಿಯ ಒಡೆದು ಮೂರು ಭಾಗಮಾಡಿ
ಒಂದು ಹೋಳು ಸಮುದ್ರಕ ಒಗೆದನು                  || ೪೧ ||

ಈರ್ಷದಿಂದ ಒಗಿದನು ಸಮುದ್ರಕ್ಕ
ಉಕ್ಕಿ ಆತು ಒಡಬಾಗ್ನಿಯನು                 || ೪೨ ||

ಒಂದು ಪಾಲು ಧರಣಿಗೆ ಒಗೆದನು
ಶಿಡಿಲಾಗಿ ನದುಗಿತು ಧರಣಿಯನು            || ೪೩ ||

ಒಂದು ಪಾಲು ಕೈಯಲ್ಲಿ ಹಿಡಿದನು
ಬ್ರಹ್ಮಕಪಾಲ ಎಂದೀಶ್ವರನು                  || ೪೪ ||

ಸಾಧುಗಳೆಲ್ಲ ಸೂರಟಿಯ ಗೋಪಾಳ
ಬುಟ್ಟಿಯ ಮಾಡಿದ ಈಶ್ವರನು                 || ೪೫ ||

ಭಿಕ್ಷುಕರ ಕೈಯಲ್ಲಿರುವದು ಈಶ್ವರ
ಕೊಟ್ಟಂಥ ಪಾತ್ರೆಯನು              || ೪೬ ||

ಮಹಶರಣ ಮಡಿವಾಳ ಗುರುವಿನ
ಮಾತು ಕೇಳಿ ಹಾಡುವೆ ನಾನು               || ೪೭ ||

* * *

 

ಮಾರ್ಕಂಡೇಯ

ಮೃಕಂಡಮುನಿ ಸಾವಿರ ವರ್ಷದಿನ
ತಪಾದಿಂದ ಕುಳಿತದ್ದು ಖರೆ
ಅಸ್ತು ಅಡಗಿ ಅವನ ಸುತ್ತ ವೃಕ್ಷವು

ಹುತ್ತ ಮೇಲೆ ಬೆಳದದ್ದು ಖರೆ                  || ೧ ||
ದೇಹದನ್ನ ಕೂದಲಾ ಬೇರು ಬಿಟ್ಟು
ಭೂಮಿಗಿಳಿದದ್ದು ಖರೆ
ತಿಳಿದು ಈಶ್ವರ ಇಳಿದು ಬಂದನೋ

ಧರಣಿಯೊಳಗ ಮುಳಗಿದ್ದು ಖರೆ               || ೨ ||
ಕಮಂಡಲದನ ಉದಕ ಒಗಿದರೆ

ಮುನಿಯು ಎದ್ದು ಬಂದದ್ದು ಖರೆ
ಮೃಕಂಡು ನಿನ್ನ ಮನದಿಚ್ಛೆಯ
ಇದ್ದದು ಬೇಡಂದದ್ದು ಖರೆ           || ೩||

ಈಶ್ವರನಂಬುದು ಏನು ತಿಳಿಯಲಿ
ಕೂನ ತೋರಿಸೆಂದದ್ದು ಖರೆ
ಗಂಗಾ ಪಾರ್ವತಾ ನಂದಿಕೇಶ್ವರ
ಬೃಂಗಿ ಸಹಿತವಿದ್ದದ್ದು ಖರೆ           || ೪ ||

ಷಣ್ಮುಖ ಗಪತಿ ಎಡಬಲ ಅವನ
ತೊಡಿಯ ಮೇಲೆ ಕುಳಿತದ್ದು ಖರೆ
ಗಜಾಸುರನ ತೆಲಿಯ ಸೀಳಿದಾಗ
ಆನಿ ಚರ್ಮ ಹೊದ್ದದು ಖರೆ                   || ೫ ||

ಕೃಷ್ಣನ ನೇತ್ರ ಪುಷ್ಪವೆಂದು
ಪಾದದ ಮೇಲೆ ಧರಿಸಿದ್ದು ಖರೆ
ಕರ್ಣ ಕುಂಡಲ ಹೆಡಿ ನೆರಳ ಮಾಡಿದಾಗ
ಮಹಾಶೇಷ ಆಭರಣ ಖರೆ           || ೬ ||

ಸೂರ್ಯ ಚಂದ್ರ ಅಗ್ನಿ ಮೂರು ಮಂದಿ
ತ್ರಿನೇತ್ರವಾದದ್ದು ಖರೆ
ಉರಿಯ ನುಂಗಿ ಬ್ರಹ್ಮಾಂಡ ನುಂಗಿದ
ಕಪ್ಪಗೊರಳ ಶಂಕರನು ಖರೆ                  || ೭ ||

ಬ್ರಹ್ಮನ ತೆಲಿ ತ್ರಿಶೂಲ ಪಿಡಿದು ಅವ
ನಿಜರೂಪ ತೋರಿದ್ದು ಖರೆ
ಮೃಕಂಡು ಮುನಿ ಮತ್ತೇನು ಕೇಳತಾನ
ಪುತ್ರನಜಕೊಡು ಅಂದದ್ದು ಖರೆ               || ೮ ||

ಶಾಣೆ ನಿಪುಣ ಗುಣದವನ ಕೊಡುವೆನು
ಹದಿನಾಲ್ಕು ವರ್ಷ ಆಯುಷ್ಯ ಖರೆ
ಜ್ಞಾನ ಇಲ್ಲದ ಮಗ ಹುಟ್ಟಿದರ
ಸಾವಿರ ವರುಷ ಇರುವೂದು ಖರೆ             || ೯ ||

ಜ್ಞಾನ ಇಲ್ಲದವನೇನು ಮಾಡಲಿ
ಶ್ಯಾಣೆನ ಕೊಡು ಅಂದದ್ದು ಖರೆ
ಕೊಟ್ಟನು ವಚನ ಹೊರಟನು ಈಶ್ವರ
ನಿಷ್ಠಧರನು ಹುಟ್ಟಿದ್ದು ಖರೆ           || ೧೦ ||

ನಿತ್ಯಕ ಲಿಂಗ ಪೂಜಿ ನಡಸಿದ
ಹನ್ನೆರಡು ವರುಷ ಮುಗಿದದ್ದು ಖರೆ
ಇನ್ನೆರಡು ವರುಷಕ ಮರಣ ಇರುವುದು
ಹೆತ್ತವರಿಗೆ ಚಿಂತಿಯು ಖರೆ          || ೧೧ ||

ದಿನಾ ಹ್ವಾದಂಗ ಮನ ತಡೆಯದು
ಪ್ರತಾಪದಿ ಅಳುವೂದು ಖರೆ
ದುಶ್ಚಿನ್ ನೀವು ದುಃಖ ಮಾಡುವ
ಕಾರಣವೇನು ಕೇಳಿದ್ದು ಖರೆ                   || ೧೨ ||

ಹದಿನಾಲ್ಕು ವರುಷ ಆಯುಷ್ಯ ನಿನಗೆ
ನಾಳೆ ಮರಣ ಇರುವೂದು ಖರೆ
ತಪಾಮಾಡಿ ನಿನ್ನ ಪಡೆದ ವ್ಯಾಳ್ಯಕ
ಈಶ್ವರನು ಹೇಳಿದ್ದು ಖರೆ            || ೧೩ ||

ಇದು ಏನು ಈಶ್ವರನು ಇರುವನೋ
ಶೋಕ ಯಾಕ ಅಂದದ್ದು ಖರೆ
ಆತ್ಮಕ ವೈರಾಗ್ಯ ತಾಳಿದಾಕ್ಷಣ
ಲಿಂಗ ಪೂಜೆಗೆ ಹೊರಟದ್ದು ಖರೆ              || ೧೪ ||

ಕಾಲ ಮೃತ್ಯುವಿನ ವಧಾ ಮಾಡುವ
ಕಾಡ್ಣಿ ಹಗ್ಗ ಒಯ್ದದ್ದು ಖರೆ
ಲಿಂಗಪೂಝೆ ನಿರ್ಮಳ ಮುಗಿಸಿ
ಅವ ಮತ್ತೆ ಸ್ತೋತ್ರ ಮಾಡಿದ್ದು ಖರೆ           || ೧೫ ||

ತನಗ ಈಶ್ವರಗ ವ್ಯಾಪಿಸಿಕೊಂಡು
ಕಾಡ್ಣಿ ಹಗ್ಗ ಕಟ್ಟಿದ್ದು ಖರೆ
ದೇವರಿಗೆ ದೇವರೆ ಎನ್ನನು
ಕಾಪಾಡಬೇಕೆಂದದ್ದು ಖರೆ           || ೧೬ ||

ನಿಯಮಕ ಸರಿ ಯಮನ ಹುಕುಮು ಇರುವುದು
ದೂತರಾಗ ಬಂದದ್ದು ಖರೆ
ಬಾ ಎಂದು ಇವನ ಹಿಡಿದು ಜಗ್ಗಿದರ
ಬರುವುದಿಲ್ಲ ಅಂದದ್ದು ಖರೆ          || ೧೭ ||

ತಿರುಗಿ ಹೋಗಿ ಹೀಂಗಾದ ಚರಿತ್ರ
ಬಂದು ಯಮಗ ಹೇಳಿದ್ದು ಖರೆ
ಬಿಡು ಬ್ಯಾಡರಿ ಅವನ ಹೊಡೆಯಿರಿ ಎಂದು
ನೂರು ಮಂದಿ ಕಳುಹಿದದ್ದು ಖರೆ              || ೧೮ ||

ಅಜ್ಞಕ ಸರಿ ಅವರು ಹೊರಟು ಬಂದರು
ಸುತ್ತಲೂ ಉರಿಯಾದದ್ದು ಖರೆ
ಅಂಜಿದ ಅವರು ನಮ್ಮಿಂದಾಗದು
ಬಂದು ಯಮಗ ಹೇಳಿದ್ದು ಖರೆ                || ೧೯ ||

ಕೋಪದಿಂದ ಯಮ ಕ್ವಾಣನ್ನೇರಿ
ಒಳ್ಳೇದೆಂದು ಹೊರಟದ್ದು ಖರೆ
ಮುನ್ನೂರಾ ಅರವತ್ತು ರೋಗ ಕೈಯೊಳು
ಧಾರುಣಾಗಿ ಬಂದದ್ದು ಖರೆ          || ೨೦ ||

ಸಿಟ್ಟಿನಿಂದ ಕುಂತವನ ಕೊರಳಿಗೆ
ಪಾಶದ ಹಗ್ಗ ಒಗದದ್ದು ಖರೆ
ಶಕ್ತಿಲಿಂದ ಕುಂತವನ ಜಗ್ಗಿದರ
ಹತೀ ಜಲ್ಮವಾದದ್ದು ಖರೆ            || ೨೧ ||

ಸಂತಾಪ ಸಂಕಟ ತಡಿಯಲಾರದೆ
ಶಂಕರನೇ ಎಂದದ್ದು ಖರೆ
ಕೋಟಿ ಸಿಡಿಲು ಧರಣಿಗೆ ಬಿದ್ದ್ಹಾಂಗ
ಈಶ್ವರನು ಎದ್ದುದು ಖರೆ             || ೨೨||

ವಿರಸದಿಂದ ಯಮನ ಹೊಟ್ಟಿ ಹರಿಯುವಾಂಗ
ತ್ರಿಶೂಲದಿಂದ ಹೊಡೆದದ್ದು ಖರೆ
ಬಿದ್ದನು ಧರಣಿಗೆ ಎದ್ದನು ಸೈರಿಸಿ
ಕೈ ಮುಗಿದು ನಿಂತದ್ದು ಖರೆ                   || ೨೩ ||

ಇಂಧ ಶರಣರಿನ್ನ ಮುಟ್ಟಬ್ಯಾಡಯೆಂದು
ಯಮಗ ಶಿವನು ಹೇಳಿದ್ದು ಖರೆ
ಚಿರಂಜೀವಿಯಾಗೆಂದು ವರವ ಕೊಟ್ಟನೋ
ಧರಣಿ ಮೇಲೆ ಇರುವದು ಖರೆ                 || ೨೪ ||

* * *

 

ತಾಯಿ ಕರುಳು

ನಾಗರ ಪಂಚಮಿ ಬಂತಂತ
ಮಗನ ಮುಂದ ತಾಯಿಯ ಮಾತ           || ೧ ||

ತಂಗಿಯ ಕರಕೊಂಡು ಬಾ ಹೋಗಂತ
ನನ್ನ ಜೀವದಾಗ ಇಲ ಸನಮಂತ             || ೨ ||

ತಂಗೀ ಕರ‍್ಯಾಕ ಹೋಗಬೇಕಂತ
ಸಿಂಗಾರಮಾಡಿ ನಿಲ್ಲಿಸಿದ ಎತ್ತ                || ೩ ||

ರೊಟ್ಟು ಬುತ್ತಿ ನೀ ಕಟ್ಟಿತಾರ ಎವ್ವ
ಹೋಗತೇನಿ ಆದಿತ ಹೊತ್ತ                   || ೪ ||

ದಾರಿಯೊಳಗ ನೀರಿಲ್ಲ ಅಗ್ಗರ
ಬರುವಾಗ ತಂಗಿ ಜ್ವಾಕಿ ಅಂತ                || ೫ ||

ತಂಗಿ ಬಾಗಿಲದಾಗ ಹೋಗಿ ನಿಂತ
ಅಣ್ಣನೆಂದು ಹಿಡಿದಳು ಗುರ್ತ                  || ೬ ||

ಬೀಗ ಕರಿತಾನು ಬರ್ರೆಂತ
ಒಳಗೆ ಕಟ್ಟಿ ನಿಲ್ಲಿಸಿದ ಎತ್ತ           || ೭ ||

ಅಣ್ಣ ಗಂಡಗ ಉಣ್ಣಂತ
ಸಣ್ಣ ಶಾವಿಗೆ ನಿಡ್ಯಾಳು ಬಸ್ತ                  || ೮ ||

ಮರುದಿನ ಮುಂಜಾನೆ ಮಾತನಾಡಿದರು
ಯಾಕ ಬಂದಿ ಬೀಗs ನೀನು                   || ೯ ||

ನಾಗರ ಪಂಚಮಿ ನಾಡಿಗೆ ದೊಡ್ಡದು
ಕರಿಯಕ ಬಂದೇನಿ ತಂಗಿಯನು              || ೧೦ ||

ಕಳಸ್ತೇನಿ ಅಂತ ಕೊಟ್ಟಾನು ವಚನ
ತನ್ನ ಮಡದಿಗೆ ಹೋಗಿ ಹೇಳ್ಯಾನ             || ೧೧ ||

ತಯ್ಯಾರಾಗಿ ನಿನ್ನ ತವರ ಊರಿಗೆ
ಇಟಗೊಂಡೆ ಹೋಗ ನಿನ್ನ ದಾಗೀನ           || ೧೨ ||

ಶೀರಿ ಕುಬಸ ಭಲೆ ಜರತಾರ
ಭಾರಿ ವಸ್ತ್ರ ಇಟ್ಟಳು ತಾನ           || ೧೩ ||

ರತ್ನ ಮೂಗಿನ ಮುತಿನ ಬುಗುಡಿ
ರತ್ನ ಕೆಚ್ಚಿದ ವಾಲಿಯನ             || ೧೪ ||

ಗಂಡನ ಮನಿ ಅಂಬಲಿ ಬಿಟ್ಟು
ನಡಿಯೋ ಎಣ್ಣ ಹೋಗುನು ತುರ್ತ           || ೧೫ ||

ನಡುದಾರಿ ಆರ‍್ಯಾಣಕ ಹೋಗಿ
ಹೊರಳಿ ನೋಡಿದ ತಂಗಿಯ ಮಾರಿ          || ೧೬ ||

ತಂಗಿ ಮೈ ಮ್ಯಾಗಿನ ಬಂಗಾರ ನೋಡಿ
ದಿಂಗ ಬಡದ ನಿಂತಾನಾಗ          || ೧೭ ||

ಏರಿ ಹತ್ತಿ ನೋಡಿದನಾಗ
ಯಾರು ಇಲ್ಲ ಆರ‍್ಯಾಣದಾಗ                  || ೧೮ ||

ಹಲ್ಲು ತಿಂದು ಇವ ಕೊಲ್ಲಬೇಕಂದ
ಹಿರಿದ ಚೂರಿಯ ಕೈಯಾಗ          || ೧೯ ||

ಯಾಕೋ ಎಣ್ಣ ನನ ವ್ಯರ್ಥಕೊಲ್ಲಬ್ಯಾಡಾ
ಉಚ್ಚಿತಗೊಳ್ಳೊ ನನ ಬಂಗಾರ ಬಳಿ                   || ೨೦ ||

ತಂಗಿ ಬಿದ್ದು ಬೋರ‍್ಯಾಡುತ
ಅಣ್ಣ ಕೇಳವಲ್ಲ ನಿಕಾಲಸ್ತ             || ೨೧ ||

ಮುಂದಕ ನುಗಿಸ್ಯಾನು ಚಂಡಾಳಿ
ತಲಿಯಮ್ಯಾಲ ಹೊಡೆದಾನು ಹುರುಳಿ                  || ೨೨ ||

ಎದಿಯ ಮ್ಯಾಲ ಕುಂತು ಕುತ್ತಗಿ ಕೋದು
ಕೊಂದು ಹಾಕ್ಯಾನು ಹೊಟ್ಟಿಯ ಶೀಳಿ                   || ೨೩ ||

ಭಗವಂತಗಾದೀತ ಅರುವಾ
ಆ ನೀಚಗ ಹಾಕಿದ ಮರುವಾ                 || ೨೪ ||

ತಿರುಗಿ ತಿರುಗಿ ಅಲ್ಲಿಗೆ ಬರುವ
ಹೆಣ ನೋಡಿ ಕಣ್ಣೀರ ತರುವ                  || ೨೫ ||

ಬ್ಯಾಟಿ ಆಡುತ ಬಂದ ಸರದಾರ
ಆಡವ್ಯಾಗ ನೋಡತಾನ ಆಕಾರ              || ೨೬ ||

ಇದೇನಂತ ವಿಚಾರ ಮಾಡುತ
ಆ ಹೆಂಗಸಿನ ಕೊಂದವರ‍್ಯಾರ                || ೨೭ ||

ತಪ್ಪಿಸಿ ಹೇಳ್ಯಾನು ಚದುರ
ತಂಗಿ ಕೊಂದತಿ ಹುಲಿ ಮುರಿದು ಕರೆ                   || ೨೮ ||

ಹುಲಿಯ ಗಾಯ ಅಲ್ಲ ಕುತ್ತಗೆ ಕೋದದ್ದು
ಮಾತಿನೊಳಗ ಸಿಕ್ಕನು ಪೂರ                || ೨೯ ||

ಕಟ್ಟಿ ಬಡಿಸಿದನು ಸರದಾರ
ಬಡತನದೊಳಗ ಮಾಡ್ಯಾನು ಜೋರ                  || ೩೦ ||

ಬ್ಯಾನಿ ಸಂಗಟ ತಾಳಲಾರದೆ
ಕಬೂಲು ಆದನು ಆವಾಗ ಚದುರ             || ೩೧ ||

ಸುದ್ದಿ ಬಿಟ್ಟರು ತಾಯಿಗೆ ಲಗುಮಾಡಿ
ತಾಯಿ ಬಂದಳು ಅಲ್ಲಿಗೆ ಓಡಿ                 || ೩೨ ||

ಗಂಡ ಬಮದ ಎದಿ ಬಡಕೊಂತ
ಸರದಾರ ಕಣ್ಣೀರ ಉದರಿಸುತ                || ೩೩ ||

ಹುಕುಮ್ ಆಯಿತು ಸರದಾರಂದು
ಹಾಕುತೇವಿ ಗಲ್ಲಿಗೆ ಇಂದು           || ೩೪ ||

ತಾಯಿ ಕರಸಿ ಸಾಹೇಬ ಹೇಳತಾನ
ಮಾರಿ ನೋಡ ನಿನ್ನ ಮಗಂದ                || ೩೫ ||

ತಾಯಿ ತನ್ನ ಮನದಾಗ ತಿಳಿಕೊಂಡು
ಸತ್ತ ಮಗಳು ಬರುವುದಿಲ್ಲೆಂದು                || ೩೬ ||

ಆಕಿ ಕಾಲಾಗ ಇವ ಸಾವುತಾನ
ಎಲ್ಲಿ ಇರಲಿ ಇಬ್ಬರ ಕೊಂದು                  || ೩೭ ||

ತಾಯಿಲಿಂದ ಮಗ ಪಾರಾದ
ನವಲಗುಂದ ಸುತ್ತ ಜಾಹೀರ                  || ೩೮ ||